ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ

ಮಹಿಳೆಯರು, ಇಬ್ಬರು ಮಕ್ಕಳನ್ನು ಎಳೆದೊಯ್ಯುವ ಸೈನಿಕರ ಗುಂಪೊಂದು, 22 ಸುತ್ತು ಗುಂಡು ಹಾರಿಸಿ ಕೊಲೆ ಮಾಡುತ್ತದೆ. ಆದರೆ, “ಈ ಘಟನೆ ನಮ್ಮ ದೇಶದಲ್ಲಿ ನಡೆದಿದ್ದಲ್ಲ,” ಎಂದಿರುವ ಕೆಮರೂನ್ ಸರ್ಕಾರದ ಮುಖವಾಡವನ್ನು ‘ಬಿಬಿಸಿ’ಯ ತನಿಖಾ ತಂಡದ ವರದಿಯು ಬಹಿರಂಗಪಡಿಸಿದೆ

ಮಹಿಳೆಯರು ಹಾಗೂ ಇಬ್ಬರು ಮಕ್ಕಳನ್ನು ಎಳೆದೊಯ್ಯುವ ಸೈನಿಕರ ಗುಂಪೊಂದು, ಅವರ ಕಣ್ಣಿಗೆ ಬಟ್ಟೆ ಕಟ್ಟಿ ನೆಲಕ್ಕೆ ಬಲವಂತವಾಗಿ ತಳ್ಳುತ್ತದೆ. ಬಳಿಕ 22 ಸುತ್ತು ಗುಂಡು ಹಾರಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿರುವ ಘಟನೆ ನಡೆದಿದ್ದು ಕೆಮರೂನ್‌ನಲ್ಲಿ ಎಂದು ಕೆಲವರು ವಾದಿಸಿದರೆ, ಮತ್ತೆ ಕೆಲವರು ಮಾಲಿಯಲ್ಲಿ ಎಂದಿದ್ದಾರೆ. ಆದರೆ, “ನಮ್ಮ ದೇಶದಲ್ಲಿ ಇಂತಹ ಘಟನೆ ನಡೆದಿಲ್ಲ. ಇದೊಂದು ಸುಳ್ಳು ಸುದ್ದಿಯಾಗಿದೆ,” ಎಂದು ಕೆಮರೂನ್‌ ದೇಶದ ಸರ್ಕಾರ ಸ್ಪಷ್ಟನೆ ನೀಡಿತ್ತು. ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದ್ದ ಈ ವಿಡಿಯೋ ಬೆನ್ನು ಹತ್ತಿದ ‘ಬಿಬಿಸಿ ನ್ಯೂಸ್’ ತನಿಖಾ ತಂಡ, ಸ್ಯಾಟ್‌ಲೈಟ್ ಚಿತ್ರಣದ ಮೂಲಕ ಇಡೀ ಘಟನೆಯನ್ನು ಬಿಚ್ಚಿಟ್ಟಿದೆ.

ಜುಲೈ ತಿಂಗಳಲ್ಲಿ ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, “ಈ ಘಟನೆ ನಮ್ಮ ದೇಶದಲ್ಲಿ ನಡೆದಿದ್ದಲ್ಲ,” ಎಂದಿದ್ದ ಕೆಮರೂನ್‌ ಸರ್ಕಾರ, “ನಮ್ಮ ಸೈನಿಕರು ಆ ರೀತಿಯ ರೈಫಲ್ ಬಳಸುವುದಿಲ್ಲ, ಅವರು ಸಂಪೂರ್ಣ ಯುದ್ಧದ ಉಡುಪು ಧರಿಸಿಲ್ಲ. ಹೀಗಾಗಿ, ಇದು ನಮ್ಮ ದೇಶದ ವಿಡಿಯೋ ಅಲ್ಲ. ಇದೊಂದು ಸುಳ್ಳು ಸುದ್ದಿ,” ಎಂದು ಸ್ಪಷ್ಟನೆ ನೀಡಿತ್ತು. ಆದರೆ, ವಿಡಿಯೋದಲ್ಲಿ ಗಮನಿಸುವಂತೆ ಮೊದಲ 40 ಸೆಕೆಂಡ್‌ಗಳಲ್ಲಿ ಪರ್ವತ ಶ್ರೇಣಿಯೊಂದು ಕಾಣಿಸುತ್ತದೆ. ಇದನ್ನು ಆಳವಾಗಿ ಅಧ್ಯಯನ ಮಾಡಿದಾಗ, ಕೆಮರೂನ್‌ ಸರ್ಕಾರ ತಪ್ಪು ಮಾಹಿತಿಯನ್ನು ನೀಡಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ ಎಂಬುದನ್ನು ಬಿಬಿಸಿ ಸುದ್ದಿಸಂಸ್ಥೆ ತಿಳಿಸಿದೆ.

ಕೆಮರೋನಿಯನ್ ಮೂಲಗಳು ನೀಡಿದ ಮಾಹಿತಿಯಂತೆ ಬಿಬಿಸಿ ನ್ಯೂಸ್, ಗೂಗಲ್ ಅರ್ಥ್ ಸಹಾಯದಿಂದ ಹತ್ಯೆ ಸ್ಥಳವನ್ನು ಪತ್ತೆಹಚ್ಚಿದೆ. ಈ ಪ್ರದೇಶ ನೈಜೀರಿಯಾ ಗಡಿಗೆ ಸಮೀಪವಿರುವ ಕೆಮರೂನ್‌ ಉತ್ತರ ಭಾಗದಲ್ಲಿರುವ ಝೆಲೆವೆಟ್ ಎಂಬ ಪಟ್ಟಣವಾಗಿದೆ ಎಂಬುದನ್ನು ಬಿಬಿಸಿ ಸಂಸ್ಥೆ ತಿಳಿಸಿದೆ.

ಇದು ಕೆಮರೂನ್‌ ಸೈನಿಕರು ಜಿಹಾದಿಗಳ ಗುಂಪಾದ ಬೊಕೊ ಹರಾಮ್ ವಿರುದ್ಧ ಹೋರಾಡುವ ಪ್ರದೇಶವಾಗಿದೆ ಎಂಬುದು ಬಿಬಿಸಿ ವರದಿಯಲ್ಲಿನ ಅಂಶ.

ಮಹಿಳೆಯರನ್ನು ಕರೆದೊಯ್ಯುವ ವಿಡಿಯೋದಲ್ಲಿ ಕಂಡಂತೆ ಕೆಲವೊಂದು ಕಟ್ಟಡಗಳು, ಮರಗಳ ವಿವರಗಳನ್ನು ಉಪಗ್ರಹ ಚಿತ್ರಣದಲ್ಲೂ ಪತ್ತೆಹಚ್ಚುವಲ್ಲಿ ನಾವು ಯಶಸ್ವಿಯಾದೆವು ಎಂದು ಹೇಳಿರುವ ಬಿಬಿಸಿ ತನಿಖಾ ತಂಡ, ಎಲ್ಲ ಸಾಕ್ಷ್ಯಾಧಾರಗಳನ್ನು ಒಟ್ಟಿಗೆ ಇಟ್ಟು ಗಮನಿಸಿದಾಗ ಈ ಭಯಾನಕ ಘಟನೆ ನಡೆದಿದ್ದು, ನೈಜೀರಿಯಾ ಗಡಿಗೆ ಸಮೀಪದ ಕೆಮರೂನ್‌ ಉತ್ತರ ಭಾಗದಲ್ಲಿ ಎಂಬುದು ಸ್ಪಷ್ಟವಾಗುತ್ತಿದೆ ಎಂಬುದನ್ನು ವಿಡಿಯೋ ಮೂಲಕ ವಿವರಿಸುವ ಯತ್ನ ಮಾಡಿದೆ.

ಘಟನೆ ನಡೆದಿದ್ದು ಯಾವಾಗ?

ವಿಡಿಯೋದಲ್ಲಿ ಪಕ್ಕದಲ್ಲಿ ಕಟ್ಟಡವೊಂದು ಇರುವುದು ಪತ್ತೆಯಾದರೆ, ಸ್ಯಾಟ್‌ಲೈಟ್ ವಿಡಿಯೋದಲ್ಲಿ ಗೋಡೆ ಗೋಚರಿಸಿದೆ. 2014ರ ನವೆಂಬರ್‌ವರೆಗೆ ಈ ಕಟ್ಟಡ ಪೂರ್ಣಗೊಂಡಿರಲಿಲ್ಲ. ಹೀಗಾಗಿ, ಮಹಿಳೆಯರ ಹತ್ಯೆ ನಡೆದಿದ್ದು 2014ರ ನಂತರ ಇರಬಹುದು ಎಂದು ಬಿಬಿಸಿ ತಂಡ ಅಂದಾಜಿಸಿದೆ.

ಇನ್ನು, ಘಟನೆ ನಡೆದಾಗ ಇದ್ದ ಕಟ್ಟಡದ ದೃಶ್ಯ 2016ರ ಫೆಬ್ರವರಿಯ ಸ್ಯಾಟ್‌ಲೈಟ್ ಇಮೇಜಿನಲ್ಲಿ ಪತ್ತೆಯಾಗಿಲ್ಲ. ಹೀಗಾಗಿ, ಕಟ್ಟಡವನ್ನು 2016ರ ವೇಳೆಗೆ ಕೆಡವಿರಬಹುದು. ಅಲ್ಲದೆ, ವೈರಲ್ ಆಗಿರುವ ವಿಡಿಯೋದ ಘಟನೆ 2016ರ ಫೆಬ್ರವರಿ ಮೊದಲೇ ನಡೆದಿದೆ ಎಂಬುದನ್ನು ಬಿಬಿಸಿ ತಂಡ ವಿವರಿಸಿದೆ.

ವಿಡಿಯೋದಲ್ಲಿ ಗಮನಿಸುವಂತೆ ಒಣಹವೆ ಹಾಗೂ ಬೇಸಿಗೆಯ ವಾತಾವರಣ ಗೋಚರಿಸುತ್ತದೆ. ಹೀಗಾಗಿ, ಶುಷ್ಕ ಋುತುವಿನಲ್ಲಿ ಅಂದರೆ, ಜನವರಿ ಮತ್ತು ಏಪ್ರಿಲ್ ನಡುವೆ ಈ ಹತ್ಯೆ ನಡೆದಿರಬಹುದು ಎಂದಿರುವ ಸುದ್ದಿಸಂಸ್ಥೆ, ಘಟನೆ 2015ರಲ್ಲಿ ನಡೆದಿರಬಹುದು ಎಂದು ಅಂದಾಜಿಸಿದೆ. ಇನ್ನು, ವಿಡಿಯೋದಲ್ಲಿ ಗಮನಿಸುವಂತೆ ಸೈನಿಕನ ನೆರಳು, ಸೂರ್ಯನ ಬೆಳಕಿನ ಕೋನ ಅಧ್ಯಯನ ನಡೆಸಿರುವ ಬಿಬಿಸಿ ತನಿಖಾ ತಂಡ, ಘಟನೆಯು ಮಾರ್ಚ್ 20ರಿಂದ ಏಪ್ರಿಲ್ 5ರ (2015) ನಡುವೆ ಸಂಭವಿಸಿರಬಹುದು ಎಂಬುದನ್ನು ವಿವರಿಸಿದೆ.

ಮಹಿಳೆಯರನ್ನು ಹತ್ಯೆಗೈದವರು ಯಾರು?

ವಿಡಿಯೋದಲ್ಲಿ ತೋರಿಸಿರುವ ಸೈನಿಕರು ಯಾರು? ಇವರು ಕೆಮರೂನ್ ಮಿಲಿಟರಿಗೆ ಸೇರಿದವರೇ ಇಲ್ಲವೇ ಎಂಬುದರ ಕುರಿತಂತೆ ಇನ್ನಷ್ಟು ಆಳವಾಗಿ ತನಿಖೆ ನಡೆಸಿರುವ ಬಿಬಿಸಿಗೆ, ಮತ್ತಷ್ಟು ಅಶ್ಚರ್ಯಕರವಾದ ಮಾಹಿತಿಗಳು ಲಭ್ಯವಾಗಿದೆ. ಕೆಮರೂನ್ ಸರ್ಕಾರ ಕಳೆದ ಜುಲೈನಲ್ಲಿ, “ವಿಡಿಯೋದಲ್ಲಿರುವ ಘಟನೆ ನಮ್ಮ ದೇಶದಲ್ಲಿ ನಡೆದಿರುವುದಲ್ಲ. ನಮ್ಮ ಸೈನಿಕರು ವಿಡಿಯೋದಲ್ಲಿರುವಂತೆ ಯಾವುದೇ ಗನ್ ಬಳಸುವುದಿಲ್ಲ. ಅವರು ಯುದ್ಧದ ಉಡುಪಿನಲ್ಲೂ ಇಲ್ಲ. ಭಾರೀ ಹೆಲ್ಮೆಟ್, ಬುಲೆಟ್‌ಪ್ರೂಫ್ ಉಡುಗೆಗಳು ಮತ್ತು ರೇಂಜರ್ಸ್ ಬೂಟುಗಳನ್ನು ಧರಿಸಿಲ್ಲವಲ್ಲ?” ಎಂದು ಪ್ರಶ್ನಿಸಿತ್ತು.

ಆದರೆ, ಘಟನೆಯಲ್ಲಿ ಬಳಕೆ ಆಗಿರುವುದು ಸರ್ಬಿಯಾ ನಿರ್ಮಿತ ಜಸ್ತವಾ ಎಂ 21 ಬಂದೂಕು ಆಗಿದ್ದು, ಸಬ್ ಸಹರಾ ಆಫ್ರಿಕಾದಲ್ಲಿ ಅಪರೂಪವಾಗಿರುವ ಈ ಬಂದೂಕನ್ನು ಕೆಮರೂನ್ ಸೈನ್ಯದ ಕೆಲವೊಂದು ವಿಭಾಗದಲ್ಲಿ ಈಗಲೂ ಬಳಸಲಾಗುತ್ತಿದೆ ಎಂಬುದನ್ನು ಬಿಬಿಸಿ ತನಿಖಾ ವರದಿಯಲ್ಲಿ ಕಂಡುಕೊಂಡಿದೆ.

ಅಷ್ಟೇ ಅಲ್ಲದೆ, ಸೈನಿಕರು ಸಾಮಾನ್ಯವಾಗಿ ಔಟ್‌ಪೋಸ್ಟ್‌ಗಿಂತ ಜಾಸ್ತಿ ದೂರದಲ್ಲಿದ್ದಾಗ ಮತ್ತು ಗಸ್ತಿನಲ್ಲಿದ್ದಾಗ ಮುನ್ನೆಚ್ಚರಿಕೆ ಕ್ರಮಗಳನ್ನು ಬಳಸುತ್ತಾರೆ; ಸರ್ಕಾರ ಪ್ರಶ್ನಿಸಿದಂಥ ಉಡುಗೆ ಧರಿಸುತ್ತಾರೆ. ಆದರೆ, ವಿಡಿಯೋದಲ್ಲಿ ತೋರಿಸಿರುವಂತೆ ಸೈನಿಕರು, ಔಟ್‌ಪೋಸ್ಟ್‌ಗಿಂತ ಕೆಲವೇ ಮೀಟರ್ ದೂರದಲ್ಲಿದ್ದರಿಂದ ಈ ರೀತಿಯಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಹಾಗೂ ಉಡುಗೆ ಧರಿಸಿಲ್ಲ ಎಂಬುದನ್ನು ಬಿಬಿಸಿ ಗೂಗಲ್ ಅರ್ಥ್ ಮ್ಯಾಪ್ ಸಹಾಯದಿಂದ ವರದಿ ಸ್ಪಷ್ಟಪಡಿಸಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಆಗಸ್ಟ್‌ನಲ್ಲಿ ದಿಢೀರನೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಕೆಮರೂನ್ ಸರ್ಕಾರ, ಮಿಲಿಟರಿಯ 7 ಮಂದಿಯನ್ನು ಬಂಧಿಸಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಘೋಷಿಸಿತ್ತು.

ಮಹಿಳೆಯರನ್ನು ಎಳೆದೊಯ್ಯುವ ಸೈನಿಕರ ಪೈಕಿ ಓರ್ವನನ್ನು ಗುರುತಿಸುವಲ್ಲಿ ಬಿಬಿಸಿ ತನಿಖಾ ತಂಡ ಯಶಸ್ವಿಯಾಗಿದೆ. ಘಟನೆಯ ವಿಡಿಯೋ ಮಾಡಿದ ವ್ಯಕ್ತಿ ‘ಟಕೋಟ್ಚೋ’ ಎಂದು ಪರಿಚಿಯಿಸಿಕೊಂಡಿದ್ದ.

ಟಕೋಟ್ಚೋ ಹೆಸರನ್ನು ಫೇಸ್ ಬುಕ್ ಸಹಾಯದಿಂದ ಹುಡುಗಿದಾಗ ಸಿರಿಯರಿಕ್ ಬಿಟಲಾ ಎಂಬ ಹೆಸರಿನ ಫೇಸ್ ಬುಕ್ ಪ್ರೊಫೈಲ್ ಪೇಜ್ ತೆರೆದುಕೊಳ್ಳುತ್ತದೆ. ಸರ್ಕಾರ ಇದೀಗ ಬಂಧಿಸಿರುವ 7 ಯೋಧರ ಪೈಕಿ, ಸಿರಿಯರಿಕ್ ಬಿಟಲಾ ಕೂಡ ಒಬ್ಬರಾಗಿದ್ದಾರೆ ಎಂದು ಬಿಬಿಸಿ ತನ್ನ ತನಿಖಾ ವರದಿಯಲ್ಲಿ ವಿವರಿಸಿದೆ.

ಬಿಬಿಸಿ ತನಿಖಾ ತಂಡವು ಕೆಮರೂನ್ ಮಾಜಿ ಸೈನಿಕರೊಬ್ಬರನ್ನು ಮಾತನಾಡಿಸಿದಾಗ, ಅವರು ಕೂಡ ಫೋಟೋದಲ್ಲಿರುವ ವ್ಯಕ್ತಿ ಸಿರಿಯರಿಕ್ ಹಿಟಾಲಾ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಮಹಿಳೆಯರು ಹಾಗೂ ಮಕ್ಕಳನ್ನು ಹತ್ಯೆಗೈಯಲು ಬಳಸಿದ ಮತ್ತೊಂದು ಗನ್ ಜಾಸ್ಟಾ ಎಂ21 ಆಗಿದೆ. ಇದು ಕೋಬ್ರಾ ಎಂದು ಗುರುತಿಸಲಾಗಿರುವ ವ್ಯಕ್ತಿಯ ಕೈಯಲ್ಲಿದೆ. ಹಾಗಾದರೆ ಯಾರು ಈ ಕೋಬ್ರಾ?

ಮಹಿಳೆಯರು ಹಾಗೂ ಮಕ್ಕಳ ಮೇಲೆ ನಿರಂತರವಾಗಿ ಗುಂಡು ಹಾರಿಸುತ್ತಿರುವ ವ್ಯಕ್ತಿಯ ಹೆಸರು ಲ್ಯಾನ್ಸ್ ಕಾರ್ಪೋರಲ್ ತ್ಸಾಂಗ್. ಆತನ ಅಡ್ಡ ಹೆಸರು ಕೋಬ್ರಾ. ವಿಡಿಯೋದಲ್ಲಿ ತೋರಿಸುವಂತೆ, ಆತ ಗುಂಡು ಹಾರಿಸುತ್ತಲೇ ಇದ್ದಾಗ ಸಹೋದ್ಯೋಗಿಗಳು, “ತ್ಸಾಂಗ ಬಿಟ್ಟುಬಿಡು. ಅವರು ಸಾವನಪ್ಪಿದ್ದಾರೆ,” ಎಂದು ಜೋರಾಗಿ ಕೂಗಿಕೊಳ್ಳುತ್ತಾರೆ. “ಸಾಕು ತ್ಸಾಂಗ, ಬಂದುಬಿಡು,” ಎಂದು ಮತ್ತೆ ಮತ್ತೆ ಕರೆಯುತ್ತಾರೆ. ಕೋಬ್ರಾ ಎಂಬುದು ಆತನ ಅಡ್ಡಹೆಸರಾಗಿದ್ದು, ಸರ್ಕಾರ ಬಂಧಿಸಿ, ತನಿಖೆಗೆ ಒಳಪಡಿಸಿರುವ 7 ಮಂದಿ ಪೈಕಿ ಈತನ ಹೆಸರು ಕೂಡ ಇದೆ.

ಘಟನೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಯುವಕರ ಬಗ್ಗೆ ನ್ಯಾಯೋಚಿತ ವಿಚಾರಣೆ ನಡೆಸುವುದಾಗಿ ಸರ್ಕಾರ ಈಗಾಗಲೇ ಸ್ಪಷ್ಟನೆಯನ್ನು ಕೂಡ ನೀಡಿದೆ. ಆದರೆ, ಝೆಲೆವಟ್‌ನಲ್ಲಿ ಹತ್ಯೆಗೊಳಗಾದ ಇಬ್ಬರು ಮಹಿಳೆಯರು ಹಾಗೂ ಮಕ್ಕಳ ಬಗ್ಗೆ ಯಾವುದೇ ರೀತಿಯ ತನಿಖೆ ನಡೆದಿಲ್ಲ ಎಂಬುದು ವಿಪರ್ಯಾಸವೇ ಸರಿ. ಒಟ್ಟಾರೆ, ಇಡೀ ವಿಡಿಯೋವನ್ನು ಆಧುನಿಕ ತಂತ್ರಜ್ಞಾನದ ಸಹಾಯದಿಂದ ಬಿಬಿಸಿ ಸುದ್ದಿವಾಹಿನಿ ವಸ್ತುನಿಷ್ಠವಾಗಿ ಪರಾಮರ್ಶೆ ಮಾಡಿದ್ದು, ವಿಡಿಯೋ ಫ್ರೂಫ್ ಸಮೇತ ಸತ್ಯಾಸತ್ಯೆಯನ್ನು ಜನರ ಮುಂದಿಟ್ಟಿದೆ.

ಚಿತ್ರ: ಕೆಮರೂನ್ ಮಾಹಿತಿ ಮತ್ತು ಸಂವಹನ ಸಚಿವ ಇಸ್ಸಾ ಥಿರೊಮ

ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
‘ಚರಂಡಿಗೆ ಬಿದ್ದ ಕೊಡಗು ಜಿಲ್ಲಾಧಿಕಾರಿ’ ಎಂಬ ಶೀರ್ಷಿಕೆಯಡಿ ವೈರಲ್ ಆದ ವಿಡಿಯೋ ನಿಜವೇ?
Editor’s Pick More