ವಾಟಾಳ್ ಸಂದರ್ಶನ | ‘ರಾಜಕಾರಣಿಗಳ ಲೂಟಿ ಮುಂದೆ ಸಂಘಟನೆಗಳ ತಪ್ಪು ಸಣ್ಣದು’

ನೆಲ, ಜಲ, ನಾಡು, ನುಡಿ ವಿಚಾರವಾಗಿ ನಾಲ್ಕು ದಶಕಗಳಿಂದ ಹೋರಾಟ ಮಾಡಿಕೊಂಡು ಬರುತ್ತಿರುವ ವಾಟಾಳ್‌ ನಾಗರಾಜ್‌ ವಿನೂತನ ಹೋರಾಟಗಳಿಗೆ ಖ್ಯಾತಿ. ವಿನೂತನ ಚಳವಳಿಗಳ ರಾಜಗುರು ಎನಿಸಿಕೊಂಡ ವಾಟಾಳರ ಈವರೆಗಿನ ಹೋರಾಟದ ಚಿತ್ರಾವಳಿ ಹಾಗೂ ಸಂದರ್ಶನ ಇಲ್ಲಿದೆ

ಸಿಕ್ಸರ್ ವಾಟಾಳ್… ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಎದುರಾಗಿದ್ದ ವಿರೋಧಗಳನ್ನು ಖಂಡಿಸಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆಸಿದ ಪ್ರತಿಭಟನೆ.
ಪ್ರೇಮಿಗಳಿಗೆ ಜೈ… ಪ್ರೇಮಿಗಳ ದಿನ ಆಚರಣೆಗೆ ಬೆಂಬಲ ಸೂಚಿಸಿ ಕಬ್ಬನ್‌ ಪಾಕ್‌Fನಲ್ಲಿ ಆಡು-ಮೇಕೆಗೆ ವಿವಾಹ ಮಾಡಿಸಿದ್ದು.
ವಾಟಾಳ್‌ ಬಣ್ಣದಾಟ… ಬೆಂಗಳೂರಿನ ಎಸ್‌ಬಿಎಂ ವೃತ್ತದ ಬಳಿ ಮೈಮೇಲೆ ಬಣ್ಣ ಸುರಿದುಕೊಂಡು ಹೋಳಿ ಆಚರಣೆ.
ರೂಪಾಯ್ಗೆ ಅಕ್ಕಿ ರೊಟ್ಟಿ… ಆಹಾರ ಪದಾರ್ಥಗಳ ಬೆಲೆ ಏರಿಕೆ ಖಂಡಿಸಿ ಎಸ್‌ಬಿಎಂ ವೃತ್ತದಲ್ಲಿ ಸಾರ್ವಜನಿಕರಿಗೆಕಡಿಮೆ ಬೆಲೆಯಲ್ಲಿ ರೊಟ್ಟಿ ಚಟ್ನಿ ಮಾರಾಟ.
ಹೊಡಿ ತಮಟೆ… ಮೇಕೆದಾಟು ಜಲಾಶಯಕ್ಕೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸಿ ವಾದ್ಯ ಹೋರಾಟ.
ಭೂಮಿಯೇ ಹಾಸಿಗೆ… ಸಾರಿಗೆ ಮುಷ್ಕರ ಬೆಂಬಲಿಸಿ ಮೆಜೆಸ್ಟಿಕ್‌ನಲ್ಲಿ ನಡುರಸ್ತೆಯಲ್ಲೇ ಹಾಸಿಗೆ ಹಾಸಿ ಕಾರ್ಯಕರ್ತರೊಂದಿಗೆ ಹೋರಾಟ.
ಬೆಂಗಳೂರು ಉಳಿಸಿ ಸ್ವಾಮಿ... ಡ್ರಮ್ ಭಾರಿಸುವ ಮೂಲಕ ಬೆಂಗಳೂರು ಉಳಿಸಿ ಚಳವಳಿ.
ಯೋಗಾಯೋಗ… ಬೆಂಗಳೂರಿನ ಖಾಸಗಿ ಹೋಟೆಲೊಂದರ ಆವರಣದಲ್ಲಿ ಯೋಗದ ವಿಭಿನ್ನ ಭಂಗಿಗಳನ್ನು ಪ್ರದರ್ಶಿಸುವ ಮೂಲಕ ವಿಶ್ವ ಯೋಗ ದಿನಕ್ಕೆ ಬೆಂಬಲ.
ಕುರಿ, ಕೋಳಿ, ಪ್ರಾಣಿ ಹೋರಾಟ… ಹೈನುಗಾರಿಕೆಗೆ ಸರ್ಕಾರ ಸೂಕ್ತ ಪ್ರೋತ್ಸಾಹ ನೀಡಬೇಕೆಂದು ಒತ್ತಾಯಿಸಿ ಹಸು, ಮೇಕೆ, ಕುರಿ, ಕತ್ತೆಗಳೊಂದಿಗೆ ಬೆಂಗಳೂರಿನ ಎಸ್‌ಬಿಎಂ ವೃತ್ತದಲ್ಲಿ ಹೋರಾಟ.
ಟಾಯ್ಲೆಟ್ ಬೇಕು… ಬೆಂಗಳೂರಿನಲ್ಲಿ ಶೌಚಾಲಯಗಳ ಕೊರತೆಯಿಂದ ನಾಗರಿಕರಿಗೆ ಎದುರಾಗಿದ್ದ ಸಮಸ್ಯೆಯನ್ನು ಬಿಂಬಿಸಲು ಕಮೋಡ್‌ಗಳೊಂದಿಗೆ ಹೋರಾಟ.
ಹೊಡಿ ಸೈಕಲ್ ಸವಾರಿ… ಹೋರಾಟವೊಂದರಲ್ಲಿ ಭಾಗವಹಿಸುವ ಸಲುವಾಗಿ ತಮ್ಮ ನಿವಾಸದಿಂದ ಸೈಕಲ್ ಸವಾರಿ ಹೊರಟ ವಾಟಾಳ್.
ಹೊತ್ಕೊಂಡ್ ನಡೀರಿ… ಸಂಶೋಧಕ ಎಂ ಎಂ ಕಲಬುರಗಿ ಅವರ ಹತ್ಯೆ ಖಂಡಿಸಿ ಚಾಮರಾಜನಗರದಲ್ಲಿ ಹೋರಾಟ.
ಬೈಕ್ ಸವಾರಿ... ಬೆಂಗಳೂರಿನಲ್ಲಿ ಪಾರ್ಕಿಂಗ್ ಶುಲ್ಕವನ್ನು ಏರಿಸಿದ ಬಿಬಿಎಂಪಿ ವಿರುದ್ಧ ವಾಹನಗಳೊಂದಿಗೆ ಹೋರಾಟ.
ಬುರ್ಖಾ ಚಳವಳಿ… ಕೆಲ ವರ್ಷಗಳ ಹಿಂದೆ ರಾಜ್ಯದಲ್ಲಿ ನಡೆದಿದ್ದ ಸರಣಿ ಅತ್ಯಾಚಾರಗಳನ್ನು ಖಂಡಿಸಿ, ಮಹಿಳೆಯರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಬುರ್ಖಾ ಚಳವಳಿ.
ವಾಟಾಳ್ ವ್ಯಾಲೆಂಟೇನ್ಸ್ ಡೇ… ಪ್ರೇಮಿಗಳ ದಿನಾಚರಣೆಗೆ ಕೆಲ ಸಂಘಟನೆಗಳು ಅಡ್ಡಿಪಡಿಸಿದರೆ ವಾಟಾಳ್ ಹೂಗುಚ್ಛ ನೀಡುವ ಮೂಲಕ ಪ್ರೇಮಿಗಳ ಬೆಂಬಲಕ್ಕೆ ನಿಂತಿದ್ದರು.
ತಗೊಳ್ಳಿ ಮೂಲಂಗಿ… ರಾಶಿ ಮೂಲಂಗಿಯನ್ನು ತಳ್ಳುಬಂಡಿಯಲ್ಲಿ ತಂದು ಎಸ್‌ಬಿಎಂ ವೃತ್ತದ ಬಳಿ ಉಚಿತವಾಗಿ ಹಂಚುವ ಮೂಲಕ ಬೆಲೆ ಏರಿಕೆ ವಿರುದ್ಧ ಹೋರಾಟ.
ಕಾಸಿಗೊಂದು ತೆಂಗು… ತೆಂಗು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದಾಗ ತೆಂಗಿನಕಾಯಿಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ಹಂಚುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ.
ನೋಟು ಬಂದ್…! ನೋಟು ಅಪನಗದೀಕರಣ ಮಾಡಿದ್ದರಿಂದ ನಾಗರಿಕರಿಗೆ ಎದುರಾದ ಸಮಸ್ಯೆಯನ್ನು ಖಂಡಿಸಿ ನೋಟು ಪ್ರದರ್ಶಿಸಿ ಹೋರಾಟ .
ಅಧಿವೇಶನ ಖಾಲಿ ಪಾತ್ರೆ… ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚಿಸಲು ಚಳಿಗಾಲದ ಅಧಿವೇಶನ ಕರೆಯುವಂತೆ ಒತ್ತಾಯಿಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪಾತ್ರೆಗಳೊಂದಿಗೆ ಪ್ರತಿಭಟನೆ.
ಕ್ರಿಸ್ಮಸ್ ನಾದ… ನಾದಸ್ವರ ತಂಡದೊಂದಿಗೆ ವಿನೂತನವಾಗಿ ಕ್ರಿಸ್ಮಸ್ ಆಚರಣೆ.
ಖಾಲಿ ಬಿಂದಿಗೆ… ಕುಡಿಯುವ ನೀರಿನ ಅಲಭ್ಯತೆ ವಿರೋಧಿಸಿ ಬಿಬಿಎಂಪಿ ಕಚೇರಿ ಬಳಿ ಖಾಲಿ ಕೊಡಗಳೊಂದಿಗೆ ಹೋರಾಟ.
ಕಪ್ಪು ಬಟ್ಟೆ ಹೋರಾಟ… ಮಾಧ್ಯಮಗಳ ನಿಯಂತ್ರಣಕ್ಕೆ ಸಮಿತಿ ರಚಿಸುವ ಸರ್ಕಾರದ ಪ್ರಸ್ತಾವವನ್ನು ವಿರೋಧಿಸಿ ಕಪ್ಪು ಬಟ್ಟೆ ಧರಿಸಿ ವಿಧಾನಸೌಧಕ್ಕೆ ಮುತ್ತಿಗೆ.
ಕತ್ತೆ ಸನ್ಮಾನ… ವಿಧಾನಸೌಧ ವಜ್ರಮಹೋತ್ಸವ ಅದ್ಧೂರಿ ಆಚರಣೆಗೆ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ ಎಂದು ಆರೋಪಿಸಿ ಕತ್ತೆಗಳಿಗೆ ಸನ್ಮಾನ.
ನಾಟಕ ಅಲ್ಲ ಪ್ರಚಾರ... ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಪೌರಾಣಿಕ ವೇಷ ಹಾಕಿಸಿ ಪ್ರಚಾರ.
ಹೊಡಿ ಸವಾರಿ... ಕಬ್ಬನ್ ಪಾರ್ಕ್‌ನಲ್ಲಿ ಆರಂಭಿಸಿದ್ದ ಎಲೆಕ್ಟ್ರಿಕ್ ವಾಹನ ವ್ಯವಸ್ಥೆಗೆ ಚಾಲನೆ ನೀಡಿದ ವಾಟಾಳ್ ವಾಹನ ಚಲಾಯಿಸಿದರು.
ಬಟ್ಟೆ ಮಾತಿಗೆ ಪೆಟ್ಟು... ಮಹಿಳೆಯರ ಉಡುಪುಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಮಹೇಶ್ ಶರ್ಮಾ ವಿರುದ್ಧ ಪ್ರತಿಭಟನೆ.
ನಮಗೂ ಕೊಡಿ ವೋಟಿನ ಪವರ್... ಸದ್ಯದ ಚುನಾವಣೆ ವ್ಯವಸ್ಥೆ ಸುಧಾರಣೆಗೊಳಿಸಬೇಕು ಇಲ್ಲವೇ ಕುರಿ, ಕೋಳಿ, ಹಸುಗಳಿಗೆ ಮತದಾನದ ಹಕ್ಕು ನೀಡಬೇಕು ಎಂದು ಚುನಾವಣಾ ಆಯೋಗದೆದುರು ಚಳವಳಿ.
ಜಟಕಾ ಸವಾರಿ... ಪೆಟ್ರೋಲ್ ದರ ಏರಿಕೆ ಖಂಡಿಸಿ ಜಟಕಾ ಬಂಡಿ ಮೇಲೇರಿ ಬೆಂಗಳೂರಿನಲ್ಲಿ ಸವಾರಿ.
ಸಂಕ್ರಾಂತಿ ಬಂತು ರತ್ತೋ ರತ್ತೋ... ಕಡಲೇಕಾಯಿ, ಕಬ್ಬು, ಗೆಣಸನ್ನು ಮೆಜೆಸ್ಟಿಕ್‌ನಲ್ಲಿ ಉಚಿತವಾಗಿ ಸಾರ್ವಜನಿಕರಿಗೆ ವಿತರಿಸಿ ಸಂಕ್ರಾಂತಿ ಆಚರಣೆ.
ಕತ್ತೆಗೆ ಮದುವೆ… ಪ್ರೇಮಿಗಳ ದಿನದಂದು ಯಾವುದೇ ಜೋಡಿ ಕೈಗೆ ಸಿಕ್ಕರೆ ಸ್ಥಳದಲ್ಲೇ ಮದುವೆ ಮಾಡಿಸುವುದಾಗಿ ಸಂಘಟನೆಯೊಂದು ಬೆದರಿಕೆ ಹಾಕಿದ್ದನ್ನು ಸವಾಲಾಗಿ ಸ್ವೀಕರಿಸಿದ ವಾಟಾಳ್, ಕಬ್ಬನ್ ಪಾರ್ಕನಲ್ಲಿ ಎರಡು ಕತ್ತೆಗಳ ಮದುವೆ ಮಾಡಿಸಿ ಪ್ರತಿರೋಧ ವ್ಯಕ್ತಪಡಿಸಿದ್ದರು.
ಆಶ್ಲೀಲತೆ ಶವಯಾತ್ರೆ… ಮೂವರು ಸಚಿವರು ವಿಧಾನಮಂಡಲ ಕಲಾಪ ನಡೆಯುತ್ತಿದ್ದ ಹೊತ್ತಲ್ಲೇ ಅಶ್ಲೀಲ ಚಿತ್ರ ವೀಕ್ಸಿಸಿದ್ದರು. ಇದರಿಂದ ಸದನದ ಘನತೆಗೆ ಚ್ಯುತಿಯಾಗಿದೆ ಎಂದು ಆರೋಪಿಸಿ ಸದನದ ಪಾವಿತ್ರ್ಯತೆಯ ಅಣಕು ಶವಯಾತ್ರೆ .
ಟಿಪ್ಪುಗೆ ಜೈ... ವಿದೇಶಿಯರಿಗೆ ಶುಭ ಕೋರುವ ಮೂಲಕ ಟಿಪ್ಪು ಜಯಂತಿಯ ಆಚರಣೆಗೆ ಬೆಂಬಲ.
ಕೋಣ ಸವಾರಿ… ಪೆಟ್ರೋಲ್ ಬೆಲೆ ಇಳಿಕೆಗೆ ಒತ್ತಾಯಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಕೋಣದ ಮೇಲೆ ಮೆರವಣಿಗೆ ಹೊರಟ ವಾಟಾಳ್.
ಮಡೆ ಮಡೆ ಬೇಡ ಬೇಡ… ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿದ್ದ ಮಡೆಸ್ನಾನವನ್ನು ವಿರೋಧಿಸಿ ಬೆಂಗಳೂರಿನ ಜೆ ಸಿ ರಸ್ತೆಯಲ್ಲಿ ಬಾಳೆಲೆಗಳನ್ನು ಹರಡಿ ಉರುಳು ಸೇವೆ.
ಸೈಕಲ್ ಹೊಡಿ… ಪೆಟ್ರೋಲ್ ಬೆಲೆ ಇಳಿಸುವಂತೆ ಒತ್ತಾಯಿಸಿ ಸೈಕಲ್ ಸವಾರಿ ಹೊರಟ ವಾಟಾಳ್.
ಎಮ್ಮೆ ನಿನಗೆ ಸಾಟಿ ಇಲ್ಲ… ಕನ್ನಡ ಸಂಘಟನೆಗಳ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗಂಗಾವತಿಯಲ್ಲಿ ನಡೆಯುತ್ತಿದ್ದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಮ್ಮೆಯ ಮೇಲೆ ಕುಳಿತು ಬಂದ ವಾಟಾಳ್.
ಬೂಟಿನೇಟಿನ ಚಿತ್ರ... ಮೂವತ್ತು ವರ್ಷಗಳ ಹಿಂದೆ ಪ್ರತಿಭಟನೆ ಮಾಡುತ್ತಿದ್ದ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಬೂಟಿನಿಂದ ಹೊಡೆದ ದಿನವನ್ನೇ ಹುಟ್ಟುಹಬ್ಬವನ್ನಾಗಿ ಆಚರಿಸಿಕೊಳ್ಳುವ ವಾಟಾಳ್ ನಾಗರಾಜ್ಗೆ ಅಭಿಮಾನಿಯೊಬ್ಬರು ನೀಡಿದ್ದ ವ್ಯಂಗ್ಯ ಚಿತ್ರದ ಉಡುಗೊರೆ.
ಗ್ಯಾಸ್ ಬೆಲೆ ಇಳಿಸಿ… ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಒಂಟೆಗಳ ಮೇಲೆ ಗ್ಯಾಸ್ ಸಿಲಿಂಡರ್ ಗಳನ್ನು ಸಾಗಿಸಿ ಮೆಜೆಸ್ಟಿಕ್‌ನಲ್ಲಿ ಪ್ರತಿಭಟನೆ.
ಆನೆ ಮೆರವಣಿಗೆ... ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತಕ್ಕೆ ಆನೆ ಮೇಲೆ ಮೆರವಣಿಗೆ ಬಂದ ವಾಟಾಳ್, ಈ ಮೂಲಕ ವಿಶಿಷ್ಟವಾಗಿ ಬಸವೇಶ್ವರ ಜಯಂತಿ ಆಚರಿಸಿದರು.
ಉಪ್ಪಿನ ಹೋರಾಟ... ಬೆಲೆ ಏರಿಕೆ ಖಂಡಿಸಿ ಕೈಗೊಂಡ ಉಪ್ಪಿನ ಸತ್ಯಾಗ್ರಹದಲ್ಲಿ ಜನರಿಗೆ ಉಚಿತವಾಗಿ ಉಪ್ಪು ಹಂಚುತ್ತಿರುವ  ವಾಟಾಳ್‌.
ಕರೆಂಟ್ ಕೊಡಿ… ಲೋಡ್ ಶೆಡ್ಡಿಂಗ್‌ನಿಂದ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆ ವಿರೋಧಿಸಿ ಸೀಮೆಎಣ್ಣೆ ದೀಪ ಹಿಡಿದು ಪ್ರತಿಭಟನೆ.
ನಾಯಿಗಳಂತೆ ಕಚ್ಚಾಡಬೇಡಿ... ವಿಧಾನ ಮಂಡಲದ ಅಧಿವೇಶನದಲ್ಲಿ ಸದಸ್ಯರು, ಸಚಿವರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುವುದನ್ನು ಖಂಡಿಸಿ ವಿಧಾನಸೌದೆದುರು ಶ್ವಾನಗಳೊಂದಿಗೆ ಪ್ರತಿಭಟನೆ.
ಕಳಸಾ ಬಂಡೂರಿಗಾಗಿ… ಕಳಸಾ ಬಂಡೂರಿ ನಾಲಾ ಯೋಜನೆಯ ವಿವಾದದ ಶೀಘ್ರ ಇತ್ಯರ್ಥಕ್ಕೆ ಒತ್ತಾಯಿಸಿ ವಿಧಾನಸೌಧದ ಬಳಿ ಖಾಲಿ ಕೊಡಗಳ ಮೂಲಕ ಪ್ರತಿಭಟನೆ.
ರೊಟ್ಟಿ ಬೇಕಾ ರೊಟ್ಟಿ... ಆಹಾರ ಪದಾರ್ಥಗಳು ದಿನೇದಿನೇ ಗಗನಮುಖಿಯಾಗುತ್ತಿರುವುದನ್ನು ವಿರೋಧಿಸಿ ಸಾರ್ವಜನಿಕರೊಂದಿಗೆ ರೊಟ್ಟಿ ಊಟ.
ಎತ್ತಿನ ಗಾಡಿ ಮೇಲೆ ಸವಾರಿ... ತೈಲ ಬೆಲೆ ಏರಿಕೆ ವಿರೋಧಿಸಿ ಎತ್ತಿನ ಬಂಡಿಯಲ್ಲಿ ಬೆಂಗಳೂರಿನಲ್ಲಿ ಮೆರವಣಿಗೆ.
ಗ್ಯಾಸ್ ಬೆಲೆ ಇಳಿಸಿ... ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ.
ತಗೊಳ್ಳಿ ಹೂ... ಬೆಂಗಳೂರಿಗೆ ಭೇಟಿ ನೀಡಿದ್ದ ವಿದೇಶಿ ಮಹಿಳೆಯೊಬ್ಬರಿಗೆ ಹೂಗುಚ್ಛ ನೀಡಿ ಪ್ರೇಮಿಗಳ ದಿನಕ್ಕೆ ಬೆಂಬಲ ಸೂಚಿಸಿದರು.
ಬೇಡ ಬೇಡ ಹೆಲ್ಮೆಟ್... ಹಿಂಬದಿ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ್ದನ್ನು ವಿರೋಧಿಸಿ ಕತ್ತೆಗಳಿಗೆ ಹೆಲ್ಮೆಟ್ ತೊಡಿಸಿ ಪ್ರತಿಭಟನೆ.
ಕೈ ಮುಗಿತೀನಿ ಸ್ವಾಮಿ... ರೈತರಿಗೆ ಸಾಲ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ವಿಧಾನಸೌಧದ ಎದುರು ಕುರಿ, ಮೇಕೆಗಳೊಂದಿಗೆ ಪ್ರತಿಭಟನೆ.
ನಾನೇ ಮೇಯರ್… ಬಿಬಿಎಂಪಿಯನ್ನು ೩ ಭಾಗಗಳನ್ನಾಗಿಸುವ ಸರ್ಕಾರದ ಪ್ರಸ್ತಾವನೆಯನ್ನು ವಿರೋಧಿಸಿ, ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಮೇಯರ್ ಗೌನ್ ಧರಿಸಿ ಪ್ರತಿಭಟನೆ.
ಬೈಕ್ ರ್ಯಾಲಿಗೆ ಟಿವಿಎಸ್ ರೈಡ್… ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ನಡೆದಿದ್ದ ಬಾಂಬ್ ದಾಳಿಯನ್ನು ವಿರೋಧಿಸಿ ನಡೆದ ಬೈಕ್ ರ್ಯಾಲಿಯಲ್ಲಿ ಟಿವಿಎಸ್  ಸವಾರಿ.
ಹೆಂಗೆ ಸ್ವಾಮಿ ನಮ್ ಹೋರಾಟ… ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕದ ಸಮಸ್ಯೆ ಆಲಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಕಪ್ಪು ಬಟ್ಟೆ ಧರಿಸಿ ಸುವರ್ಣ ಸೌಧದೆದುರು ಪ್ರತಿಭಟನೆ.
ಬೇಕೇ ಬೇಕು ಶೌಚಾಲಯ… ಬೆಂಗಳೂರಿನಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸುವಂತೆ ಒತ್ತಾಯಿಸಿ ಕಮೋಡ್ ಗಳೊಂದಿಗೆ ಮೆಜೆಸ್ಟಿಕ್ ನಲ್ಲಿ ಹೋರಾಟ.
ಆಯೋಗ, ಖಾಲಿ ಮಡಕೆ... ಚುನಾವಣಾ ಅಕ್ರಮಗಳನ್ನು ಖಂಡಿಸಿ ಆಯೋಗದ ಎದುರು ಮಣ್ಣಿನ ಮಡಿಕೆಗಳನ್ನು ಪ್ರದರ್ಶಿಸಿ ಹೋರಾಟ.
ಪೊರಕೆ ಸೇವೆ… ಎಟಿಎಂ ಕೇಂದ್ರದಲ್ಲಿ ಮಹಿಳೆ ಮೇಲೆ ನಡೆದಿದ್ದ ಗಂಭೀರ ಹಲ್ಲೆ ಖಂಡಿಸಿ, ಪೊರಕೆ ಹಿಡಿದು ಪ್ರತಿಭಟನೆ.
ಪೆಟ್ರೋಲ್ ಬೇಡ, ತಳ್ಳು ಗಾಡಿ... ತೈಲ ಬೆಲೆ ಏರಿಕೆಯಿಂದಾಗಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ವಿರೋಧಿಸಿ ವಾಹನಗಳನ್ನು ಹಗ್ಗ ಕಟ್ಟಿ ಎಳೆದು ಪ್ರತಿಭಟನೆ.
ಗೋರಕ್ಷಣೆ… ಹೈನುಗಾರಿಕೆಗೆ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿ ರಾಸುಗಳೊಂದಿಗೆ ಪ್ರತಿಭಟನೆ.
ಹಾಸಿಗೆ, ದಿಂಬು ಧರಣಿ... ವಿಧಾನಸೌಧದೆದುರು ಪ್ರತಿಭಟನೆ ನಡೆಸಲು ಹಾಸಿಗೆ, ದಿಂಬು, ಗ್ಯಾಸ್‌ಲೈಟ್ ಹೊತ್ತು ಸಾಗಿದ ವಾಟಾಳ್.
ನಟ್ಟು ಬೋಲ್ಟು ಬಿತ್ತುವಿರಾ?... ಕೃಷಿ ಜಮೀನನ್ನು ಕೈಗಾರಿಕೆಗಳಿಗೆ ನೀಡುತ್ತಿರುವ ಸರ್ಕಾರಗಳ ನಡೆಯನ್ನು ವಿರೋಧಿಸಿ ನಟ್ ಬೋಲ್ಟ್ ಪ್ರದರ್ಶಿಸಿ ಆಕ್ರೋಶ.
ತಲೆ ಮೇಲೆ ಬೆಂಕಿ…  ಲೋಡ್ ಶೆಡ್ಡಿಂಗ್ ಆಗುತ್ತಿದ್ದುದ್ದನ್ನು ವಿರೋಧಿಸಿ ಬೆಂಗಳೂರಿನ ಕೆಪಿಟಿಸಿಎಲ್ ಕಚೇರಿ ಎದುರು ‘ಬೆಂಕಿ’ ಚಳವಳಿ.
ಪೇದೆ ವಾಟಾಳ್… ಪೊಲೀಸ್ ಸಿಬ್ಬಂದಿ ಸರ್ಕಾರದ ವಿರುದ್ಧ ಹೋರಾಟಕ್ಕಿಳಿದ ಸಂದರ್ಭ ಪೊಲೀಸ್ ವೇಷ ಧರಿಸಿ ಹೋರಾಟಗಾರರಿಗೆ ಬೆಂಬಲ ಸೂಚಿಸಿದ ವಾಟಾಳ್.

ಸದಾ ಬಿಳಿ ಉಡುಪು, ತಲೆ ಮೇಲೊಂದು ಕಪ್ಪು ಟೋಪಿ, ಮುಖವನ್ನಾವರಿಸಿದ ಕರಿ ಕನ್ನಡಕ, ಹರಳು ಹುರಿದಂತೆ ಮಾತು...ಈ ವಿಶೇಷಣಗಳನ್ನು ಹೇಳಿದರೆ ಸಾಕು, ಅದು ವಾಟಾಳ್ ನಾಗರಾಜ್ ಎನ್ನುವುದು ಯಾರಿಗೂ ಅರ್ಥವಾಗುತ್ತದೆ. ಐದೂವರೆ ದಶಕದ ನಿರಂತರ ಕನ್ನಡಪರ ಹೋರಾಟ, ಅದನ್ನೇ ನಿಚ್ಚಣಿಕೆ ಮಾಡಿಕೊಂಡು ರಾಜಕೀಯ ಪ್ರವೇಶಿಸಿ, ತಮ್ಮದೇ ಪಕ್ಷ ಕಟ್ಟಿ, ಶಾಸಕರಾಗಿದ್ದು ಈ ಎಲ್ಲದರ ಬಗ್ಗೆ ಭಿನ್ನ ವ್ಯಾಖ್ಯಾನಗಳಿರಬಹುದು. ಆದರೆ, ವೇಷಭೂಷಣ, ನಡೆ ನುಡಿ ಹೇಗೆ ಭಿನ್ನವೋ ಹಾಗೆಯೇ ವೈವಿಧ್ಯಮಯ, ಚಿತ್ರಾಕರ್ಷಕ ಪ್ರತಿಭಟನೆಗಳನ್ನು ರೂಪಿಸುವ ವಿಷಯದಲ್ಲೂ ವಾಟಾಳ್‌ಗೆ ವಾಟಾಳರೇ ಸಾಟಿ.

ಎಮ್ಮೆ ಮೇಲೆ ಸವಾರಿ, ಕತ್ತೆಗಳಿಗೆ ಮದುವೆ, ದನಕರುಗಳೊಂದಿಗೆ ಧರಣಿ, ಕಪ್ಪು ಬಟ್ಟೆ ಧರಿಸಿ ಹೋರಾಟ, ಬುರ್ಖಾ ಹಾಕಿ ಬೀದಿಗಿಳಿಯುವುದು, ಖಾಲಿ ಕೊಡಗಳನ್ನು ಹೊತ್ತು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದು, ನಡುರಸ್ತೆಯಲ್ಲೇ ಹಾಸಿಗೆ, ದಿಂಬು ಹಾಸಿ, ಮಲಗಿ ಘೋಷಣೆ ಕೂಗುವುದು ಮುಂತಾದವುಗಳೆಲ್ಲ ಈಗ ಸರ್ವೇಸಾಮಾನ್ಯ. ಆದರೆ, ಸಂದರ್ಭದ ಗಂಭೀರತೆಗೆ ತಕ್ಕಂತೆ ಹೋರಾಟಗಳನ್ನು ಸೃಷ್ಟಿಸಿ, ಸರ್ಕಾರ ಮತ್ತು ಸಂಬಂಧಪಟ್ಟವರ ಗಮನ ಸೆಳೆಯುವ ವಿಷಯದಲ್ಲಿ ಈಗಿನ ಎಲ್ಲ ಕನ್ನಡಪರ ಸಂಘಟನೆಗಳಿಗೆ ವಾಟಾಳರೇ ರಾಜಗುರು ಎನ್ನಲಡ್ಡಿಯಿಲ್ಲ.

ಕನ್ನಡ ನಾಡು, ನುಡಿ, ನೆಲ, ಜಲದ ವಿಷಯದಲ್ಲಿ ವಾಟಾಳ್ ರೂಪಿಸಿದ ವಿಭಿನ್ನ ಹೋರಾಟಗಳ ಆಕರ್ಷಕ ಚಿತ್ರಗಳ ಗುಚ್ಛವನ್ನು ‘ದಿ ಸ್ಟೇಟ್’ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ವಿಶೇಷವಾಗಿ ಸಂಕಲಿಸಿದೆ. ತಮ್ಮ ಹೋರಾಟ ಆರಂಭವಾಗಿದ್ದು ಹೇಗೆ, ವಿಭಿನ್ನ ಹೋರಾಟಗಳಿಗೆ ಕಾರಣವೇನು, ಕಪ್ಪು ಟೋಪಿ, ಕನ್ನಡಕದ ಹಿಂದಿರುವ ಸತ್ಯಗಳೇನು, ಮರಳಿ ಯತ್ನವ ಮಾಡಿದರೂ ಶಾಸನಸಭೆಗೆ ಪ್ರವೇಶಿಸಲು ಆಗದಿರುವುದಕ್ಕೆ ಕಾರಣಗಳೇನು ಎನ್ನುವ ಕುರಿತಂತೆ ವಾಟಾಳ್ ಮನಬಿಚ್ಚಿ ಮಾತನಾಡಿದ್ದಾರೆ. ಕನ್ನಡಪರ ಸಂಘಟನೆಗಳ ಹೋರಾಟಗಳು ದಾರಿ ತಪ್ಪುತ್ತಿವೆ ಎಂಬ ಆರೋಪವನ್ನು ನಿರಾಕರಿಸದೆ, ರಾಜಕಾರಣಿಗಳ ಭ್ರಷ್ಟಾಚಾರ, ಲೂಟಿಯ ಮುಂದೆ ಕೆಲ ಕನ್ನಡಪರ ಸಂಘಟನೆಗಳು ತೆರೆಮರೆಯಲ್ಲಿ ನಡೆಸುತ್ತಿವೆ ಎನ್ನಲಾದ ದಂಧೆ ದೊಡ್ಡದೇನಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಜನ ಬೆಂಬಲ: ನನ್ನ ಹೋರಾಟ ಆರಂಭವಾಗಿದ್ದು ೧೯೬೨ರಲ್ಲಿ. ಕರ್ನಾಟಕದಲ್ಲಿ, ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿದ್ದ ಪರಭಾಷಿಕರ ಪ್ರಾಬಲ್ಯದ ವಿರುದ್ಧ ನನ್ನ ಹೋರಾಟ ಅದಾಗಿತ್ತು. ಕನ್ನಡ ಚಿತ್ರ ಪ್ರದರ್ಶಿಸದ ಚಿತ್ರಮಂದಿರಗಳನ್ನು ಧ್ವಂಸಗೊಳಿಸಿದ್ದೆವು. ಹೋರಾಟಕ್ಕೆ ಜನರಿಂದಲೂ ಬೆಂಬಲ ಸಿಕ್ಕಿತ್ತು.

ಬೂಟಿನೇಟು, ಹುಟ್ಟುಹಬ್ಬ: ಅಲಂಕಾರ್ ಚಿತ್ರಮಂದಿರದ ಮೇಲೆ ದಾಳಿ ಮಾಡಿ ದಾಂಧಲೆ ಮಾಡಿದ್ದೆ. ನನ್ನನ್ನು ಬಂಧಿಸಿದ್ದ ಪೊಲೀಸ್ ಅಧಿಕಾರಿ ಲೂಯಿಸ್ ಬೂಟಿನಿಂದ ಹಲ್ಲೆ ಮಾಡಿದ್ದರು. ನನಗೆ ಬೂಟಿನೇಟು ಬಿದ್ದ ದಿನವನ್ನೇ ನಾನು ನನ್ನ ಹುಟ್ಟುಹಬ್ಬವನ್ನಾಗಿ ಆಚರಿಸಿಕೊಳ್ಳುತ್ತಿದ್ದೇನೆ. ಪೊಲೀಸ್ ಅಧಿಕಾರಿ ಲೂಯಿಸ್ ಕೃತ್ಯವನ್ನು ಗೋಪಾಲಗೌಡರು ವಿಧಾನಸಭೆಯಲ್ಲಿ ಖಂಡಿಸಿದ್ದರು. ಹಲ್ಲೆ ಬಗ್ಗೆ ಮುಖ್ಯಮಂತ್ರಿ ನಿಜಲಿಂಗಪ್ಪ ಅವರೇ ಬೇಸರ ವ್ಯಕ್ತಪಡಿಸಿದ್ದರು. ಪೊಲೀಸ್ ಅಧಿಕಾರಿ ಲೂಯಿಸ್‌ರನ್ನು ರಾಜ್ಯ ಸೇವೆಯಿಂದ ಮುಕ್ತಿಗೊಳಿಸಿದ್ದರು. ಅಂದಿನ ಸರ್ಕಾರಗಳು ಕನ್ನಡದ ಹೋರಾಟವನ್ನು, ಹೋರಾಟಗಾರರನ್ನು ಗೌರವದಿಂದ ಕಾಣುತ್ತಿದ್ದವು.

ಸೀರೆ ತೊಟ್ಟು ತಪ್ಪಿಸಿಕೊಂಡಿದ್ದೇನೆ: ಹೋರಾಟಗಳಿಂದ ಹಲವು ಸಮಸ್ಯೆಗಳನ್ನು ಎದುರಿಸಿದ್ದೇನೆ. ಪೊಲೀಸರ ಕಣ್ತಪ್ಪಿಸಿ ಓಡಾಡಿದ್ದೇನೆ, ತೋಪುಗಳಲ್ಲಿ ಬಚ್ಚಿಟ್ಟುಕೊಂಡಿದ್ದೇನೆ. ಬುರ್ಖಾ ಧರಿಸಿ ಓಡಾಡಿದ್ದೇನೆ, ಸೀರೆ ಉಟ್ಟು ತಪ್ಪಿಸಿಕೊಂಡಿದ್ದೇನೆ.

ನಾನೇ ಶಕ್ತಿ, ನಾನೇ ಪ್ರೇರಣೆ: ಮಹಾರಾಷ್ಟ್ರದಲ್ಲಿ ಭಾಷೆ ವಿಚಾರದಲ್ಲೇ ಹೋರಾಟ ನಡೆಸುತ್ತಿದ್ದ ಬಾಳಾ ಠಾಕ್ರೆ ಅವರಿಂದ ನನ್ನ ಹೋರಾಟಕ್ಕೆ ಪ್ರೇರಣೆ ಏನೂ ಸಿಕ್ಕಿಲ್ಲ. ಠಾಕ್ರೆಗಿಂತ ಮೊದಲಿನಿಂದಲೂ ನಾನು ಹೋರಾಟ ಮಾಡುತ್ತಿದ್ದೇನೆ. ಠಾಕ್ರೆ ಹೋರಾಟದ ರೀತಿಯೇ ಬೇರೆ, ನನ್ನ ಸಿದ್ಧಾಂತಗಳೇ ಬೇರೆ. ನನ್ನ ಹೋರಾಟಕ್ಕೆ ನಾನೇ ಶಕ್ತಿ, ನಾನೇ ಪ್ರೇರಣೆ, ನಾನೇ ಪೋಷಣೆ.

ಈಗ ಗೆಲ್ಲೋದು ಕಷ್ಟ: ಇಂದಿನ ಚುನಾವಣೆ ವ್ಯವಸ್ಥೆ ಜಾತಿ ಮತ್ತು ಹಣದ ಮೇಲೆ ನಿಂತಿದೆ. ಒಂದು ವಿಧಾನಸಭೆ ಕ್ಷೇತ್ರ ಗೆಲ್ಲಲು ಕನಿಷ್ಠ 8 ಕೋಟಿ ರು. ಬೇಕೇ ಬೇಕು. ಈ ವ್ಯವಸ್ಥೆಯಲ್ಲಿ ಗಾಂಧೀಜಿ, ಹರಿಶ್ಚಂದ್ರ ಚುನಾವಣೆಗೆ ನಿಂತರೂ ಮತದಾರರು ಠೇವಣಿ ಕಳೆದುಕೊಳ್ಳುತ್ತಾರೆ. ಶಾಸನಸಭೆಗಳಿಗೆ ಹೋರಾಟಗಾರರು ಬರಬೇಕು, ಕನ್ನಡದ ಅಭಿಮಾನ ಉಳ್ಳವರು ಬರಬೇಕು. ಇಂದು ಶಾಸಕರಾಗಿ ಆಯ್ಕೆ ಆಗುತ್ತಿರುವವರಿಗೆ ನಾವು ಇಲ್ಲಿ ಏಕೆ ಬಂದಿದ್ದೇವೆ ಎಂಬುದೇ ತಿಳಿದಿಲ್ಲ.

10 ಸಾವಿರ ಚಳವಳಿ: ವಿಭಿನ್ನ ಮತ್ತು ವಿನೂತನ ಪ್ರತಿಭಟನೆಗಳು ಆರಂಭವಾಗಿದ್ದು 1964ರಲ್ಲಿ. ರಾಸುಗಳಿಗೆ ಮೇವು ಕೊರತೆ ಉಂಟಾದಾಗ ದನಕರುಗಳೊಂದಿಗೆ ವಿಧಾನಸೌಧದ ಬಳಿ ಪ್ರತಿಭಟನೆ ಮಾಡಿದ್ದೆ. ಅದೇ ನನ್ನ ಮೊದಲ ವಿನೂತನ ಮಾದರಿಯ ಹೋರಾಟ. ಈವರೆಗೆ ಅಂತಹ 10 ಸಾವಿರಕ್ಕೂ ಅಧಿಕ ಚಳವಳಿ ಮಾಡಿದ್ದೇನೆ.

ಟೋಪಿ, ಕನ್ನಡಕ: ನಾನು ವಿಭಿನ್ನ ಮಾದರಿಯ ಟೋಪಿ ಮತ್ತು ಕನ್ನಡಕಗಳನ್ನು ಧರಿಸುತ್ತಿದ್ದೇನೆ. ಧರಿಸುತ್ತಿರುವುದಷ್ಟೇ ಸತ್ಯ. ಅದರಿಂದ ನನಗೇನೂ ಖ್ಯಾತಿ ಬಂದಿಲ್ಲ. ರಾಜ್ಯದಲ್ಲಿ ಎಲ್ಲೇ ಹೋದರೂ ನನ್ನನ್ನು ಥಟ್ಟನೆ ಗುರುತಿಸುತ್ತಾರೆ, ಅದಂತೂ ಸತ್ಯ.

ತಲೆ ಹಾಕಲ್ಲ: ನಾನು ಮಾಡುವ ಹೋರಾಟಗಳ ವಿಚಾರದಲ್ಲಿ ಕುಟುಂಬಸ್ಥರು ತಲೆ ಹಾಕುವುದಿಲ್ಲ. ಕುಟುಂಬಸ್ಥರು ನನ್ನ ಬೇಕು, ಬೇಡಗಳ ಕಡೆಗೆ ಮಾತ್ರ ಗಮನ ಹರಿಸುತ್ತಾರೆ.

ಲೂಟಿ ದೊಡ್ಡದೇನಲ್ಲ: ಕನ್ನಡಪರ ಹೋರಾಟಗಳು ದಾರಿ ತಪ್ಪುತ್ತಿವೆ ಎಂಬುದು ಸುಳ್ಳು. ಕನ್ನಡಕ್ಕಾಗಿ ಹೋರಾಟಗಳು ನಡೆಯುತ್ತಿರುವುದೇ ಸಂಘಟನೆಗಳ ಕಾರ್ಯಕರ್ತರಿಂದ. ರಾಜಕಾರಣಿಗಳು ಮಾಡುತ್ತಿರುವ ಲೂಟಿಯ ಮುಂದೆ ಸಂಘಟನೆಗಳ ಕಾರ್ಯಕರ್ತರ ತಪ್ಪು ಸಣ್ಣ ಪ್ರಮಾಣದ್ದು. ಹೋರಾಟಗಾರರು ಎಷ್ಟೇ ತಪ್ಪು ಮಾಡಿದರೂ ಕನ್ನಡಪರ ಹೋರಾಟಕ್ಕೆ ಸದಾ ಸಿದ್ಧರಾಗಿ ನಿಂತಿರುತ್ತಾರೆ. ಅವರ ಆ ಭಾವನೆ ಮಾತ್ರ ಮುಖ್ಯ. ಕನ್ನಡ ಹೋರಾಟಗಾರರ ಮೇಲೆ ಆರೋಪ ಮಾಡುವವರೆಲ್ಲರೂ ಮೂರ್ಖರು.

ಸದನಕ್ಕೆ ಗೈರಾಗಲಿಲ್ಲ: ನಾನು ವಿಧಾನಸಭೆಗೆ ಆಯ್ಕೆಯಾದಾಗ ಉತ್ತಮ ಸಂಸದೀಯ ಪಟುಗಳಿದ್ದರು. ನನ್ನ ಕೆಲ ಸಹೋದ್ಯೋಗಿಗಳು ಮತ್ತು ನಾನು ಸದನದ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೆವು. ಶಾಸಕನಾಗಿದ್ದಾಗ ನಾನು ಒಂದು ದಿನವೂ ಸದನಕ್ಕೆ ಗೈರಾಗಿರಲಿಲ್ಲ. ಪ್ರಜಾಪ್ರಭುತ್ವದ ಬಗ್ಗೆ ಚಿಂತನೆಗಳಾಗಬೇಕಿದ್ದರೆ, ಮಸೂದೆಗಳ ಬಗ್ಗೆ ಚರ್ಚೆಗಳಾಗಬೇಕಿದ್ದರೆ ಅರ್ಹರು, ಹೋರಾಟಗಾರರು, ಸಂವಿಧಾನದ ಬಗ್ಗೆ ಗೌರವ ಇಟ್ಟುಕೊಂಡವರು ಶಾಸಕರಾಗಿ ಆಯ್ಕೆಯಾಗಬೇಕು.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More