ಪ್ರಧಾನಿಯವರು ಓದುತ್ತೇನೆ ಎಂದ ‘ಸೌಂದರ್ಯ ಲಹರಿ’ಯಲ್ಲಿ ನಿಜಕ್ಕೂ ಏನಿದೆ?

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ಕೊಟ್ಟಾಗ, ತಾವು ‘ಸೌಂದರ್ಯ ಲಹರಿ’ ಓದುವುದಾಗಿ ಹೇಳಿಹೇಳಿಕೊಂಡಿದ್ದರು. ನಾನಾ ಕಾರಣಕ್ಕೆ ಈ ಕೃತಿ ಮಹತ್ವದ್ದು. ಈ ಹಿನ್ನೆಲೆಯಲ್ಲಿ, ‘ಸೌಂದರ್ಯ ಲಹರಿ’ ಪುಸ್ತಕದಲ್ಲಿ ನಿಜಕ್ಕೂಏನಿದೆ ಎಂಬುದರ ಕುರಿತ ಪರಿಚಯತ್ಮಾಕ ಬರಹ ಇಲ್ಲಿದೆ

ಪಿಯುಸಿ ಓದುವ ಕಾಲದಲ್ಲಿ ನಾನು ಮೊದಲ ಬಾರಿಗೆ ‘ಸೌಂದರ್ಯ ಲಹರಿ’ಯನ್ನು ಓದಿದ್ದೆ. ಒಂದೊಂದು ಶ್ಲೋಕವನ್ನು ದಪ್ಪನಾಗಿ ಮುದ್ರಿಸಿ ಪಕ್ಕದಲ್ಲಿ ಮಂಡಲವನ್ನು ಹಾಕಿ ವಿದ್ಯೆ, ವಶೀಕರಣ, ಸಂಪತ್ತು, ಆರೋಗ್ಯ ಹೀಗೆ ವಿವಿಧ ಇಷ್ಟಾರ್ಥ ಸಿದ್ಧಿಗಳ ಪಡೆಯುವುದಕ್ಕೆ ಹೇಗೆ ಪಾರಾಯಣ/ ಉಪಾಸನೆ ಮಾಡಬೇಕು ಎಂದು ಆ ಪುಸ್ತಕದಲ್ಲಿ ವಿವರಿಸಲಾಗಿತ್ತು. ಅದರಲ್ಲಿ ಸಂಸ್ಕೃತ ಶ್ಲೋಕಗಳಿಗೆ ಕನ್ನಡದ ಅರ್ಥವಿರಲಿಲ್ಲ, ಉಪಾಸನೆಯ ವಿವರಗಳು ಮಾತ್ರ ಇದ್ದುವು. ಕುತೂಹಲದಿಂದ ನಾನು ಕೂಡ ಒಂದಷ್ಟು ದಿನ ಉಪಾಸನೆಯ ಕಸರತ್ತು ಮಾಡಿ ದಣಿದು ಸುಮ್ಮನಾದೆ. ಹಂತಹಂತವಾಗಿ ಉಪಾಸನೆಯ ಭ್ರಾಂತು ಇಳಿಯಿತು. ಮುಂದೆ ಪದವಿ ಕಾಲೇಜಿನಲ್ಲಿ ಓದುವಾಗ ಸೌಂದರ್ಯ ಲಹರಿಯ ಕನ್ನಡ ಮತ್ತು ಇಂಗ್ಲಿಷ್ ಅನುವಾದಗಳು ಸಿಕ್ಕವು. ಅವುಗಳನ್ನು ಓದುತ್ತಾ ಲಹರಿಯಲ್ಲಿ ಅಡಗಿರುವ ಕಾವ್ಯ ಭಾಷೆ, ಉಪಮೆ ರೂಪಕಗಳ ರೋಚಕತೆ ತಿಳಿದು ಆಹಾ! ಅನಿಸಿತು. ಅಲ್ಲಿಯವರೆಗೂ ಅದೊಂದು ಪೂಜಾವಿಧಾನ ಕುರಿತ ಒಣ ವಿವರಣೆ ಎಂದೇ ಭಾವಿಸಿದ್ದೆ. ಚೂರು ಸಂಸ್ಕೃತವೂ, ಇಂಗ್ಲೀಶೂ ಅರ್ಥವಾಗ ತೊಡಗಿದ ಮೇಲೆ ಅದರಲ್ಲಿ ಅದ್ಭುತವಾದ ಕಾವ್ಯವು ಹುದುಗಿರುವುದನು ಕಂಡುಕೊಂಡೆ.

ಮೊದಲ ಭಾಗವನ್ನು ಆನಂದ ಲಹರಿ ಎಂದೂ, ಕಡೆಯ ಭಾಗವನ್ನು ಸೌಂದರ್ಯಲಹರಿ ಎಂದೂ ಕರೆಯಲಾಗಿದೆ. ಮೊದಲ ಮತ್ತು ಕಡೆಯ ಎರಡು ಭಾಗ ಸೇರಿಸಿ ಒಟ್ಟು ಒಂದು ನೂರು ಶ್ಲೋಕಗಳು ಈ ಕಾವ್ಯದಲ್ಲಿವೆ. ಅದ್ವೈತ ಸಿದ್ದಾಂತ ಪ್ರತಿಪಾದಕರಾದ ಆದಿಶಂಕರಾಚಾರ್ಯರೇ ಈ ಕಾವ್ಯದ ಕರ್ತೃ ಎಂಬುದು ರೂಢಿಗತ ನಂಬಿಕೆ. ಈ ತರಹದ ಹಲವಾರು ಸ್ತೋತ್ರಮಾಲೆಗಳ ಕಡೆಯಲ್ಲಿ ಆದಿ ಶಂಕರಾಚಾರ್ಯ ಕೃತವೆಂದು ನಮೂದಿಸಿಲಾಗಿದೆ. ಆದರೆ ಅದೆಷ್ಟು ನಿಜವೆಂದು ಅಧ್ಯಯನಕಾರರು ಸಂಶೋಧಿಸಬೇಕು. ಶಂಕರರ ಕಾಲದ ನಂತರ ಮುಂದೆ ತತ್ವಜ್ಞಾನ ಪ್ರಸಾರದ ಪೀಠಗಳಿಗೆ ಬಂದ ಆಚಾರ್ಯರು ಬರೆದಿರುವ ಶಂಕೆಯೂ ಅಧಿಕವಾಗಿದೆ. ಆಯಾ ಕಾಲಘಟದಲ್ಲಿ ಜನಪ್ರಚಾರಕ್ಕಾಗಿ ಶಂಕರರ ಹೆಸರನ್ನೇ ಬಳಸಿರಬಹುದು. ಒಟ್ಟೂ ಶಂಕರರ ಕಾಲ ಮತ್ತು ಕೃತಿಗಳ ಕುರಿತ ಬಹಳ ಆಸಕ್ತಿಕರ ಚರ್ಚೆಗಳಿವೆ. ಆದರೆ ಶೃಂಗಾರ ಮತ್ತು ವೈರಾಗ್ಯ ಶತಕಗಳ ಬರೆದ ಬಿಲ್ಹಣ, ಭರ್ತೃಹರಿ ಮುಂತಾದವರ ಕಾಲ ಹನ್ನೊಂದು-ಹನ್ನೆರಡನೆಯ ಶತಮಾನ. ಈ ಕಾಲದಲ್ಲಿಯೇ ಹೆಚ್ಚು ಈ ಸ್ವರೂಪದ ಕಾವ್ಯರಚನೆಗಳು ಕಂಡು ಬಂದಿವೆ.

ಸೌಂದರ್ಯ ಲಹರಿಯ ಸೌಂದರ್ಯ ಕಾಣುವ ಬಗೆ ಹೇಗೆ? ಅದು ಉಪಾಸಕರಿಗೆ ಕಾಣುವುದೋ ಅಥವಾ ಭಕ್ತರಿಗೋ ಅಥವಾ ವಿದ್ವಾಂಸರಿಗೋ ಎಂದು ಕೇಳಿದರೆ ಒಬ್ಬ ಸಹೃದಯ ಅಥವಾ ರಸಿಕ ಸೌಂದರ್ಯವನ್ನು ಕಾಣಬಲ್ಲ. ಅವನಿಗೆ ಆ ಕಾಣ್ಕೆ ಸಿದ್ಧಿಸಿರುತ್ತದೆ. ಅವನು ಅದಕ್ಕೆ ತಯಾರಾಗಿರುತ್ತಾನೆ. ನಾವು ಯಾವುದನ್ನ ಪ್ರೀತಿಸ್ತಿವೋ ಅಲ್ಲಿ ಸೌಂದರ್ಯ ಹುಟ್ಟುತ್ತೆ. ಯಾವುದನ್ನ ದ್ವೇಷಿಸ್ತೀವೋ ಅಲ್ಲಿ ಕುರೂಪ ಕಾಣುತ್ತೆ. ‘ಸೌಂದರ್ಯ ಮೀಮಾಂಸೆ’ ಹುಟ್ಟುವುದೇ ಒಲವಿನಿಂದ. ಭಕ್ತಿ -ಕಾವ್ಯ-ಕಾಮ ಹೇಗೆ ಕಾಣಲು ಇಷ್ಟಪಡುತ್ತೀವೋ ಹಾಗೆ ಸೌಂದರ್ಯವೂ ಸಿದ್ಧವಾಗುತ್ತೆ. ಆಂತರ್ಯದ ಅನುಕೂಲಕ್ಕೆ ತಕ್ಕಂತೆ ನೋಟ ಬದಲಾಗುತ್ತ ತನ್ನ ಚೌಕಟ್ಟನ್ನು ನಿಗದಿ ಮಾಡಿಕೊಳ್ಳುತ್ತದೆ. ಅಂತಹ ಚೌಕಟ್ಟನ್ನು ಸೌಂದರ್ಯ ಲಹರಿಗೆ ವಿದ್ವಾಂಸರು, ಉಪಾಸಕರು, ಕಾವ್ಯಪ್ರೇಮಿಗಳು ತಮ್ಮದೇ ಕೋನಗಳಿಂದ ನಿರ್ಮಿಸಿಕೊಂಡಿದ್ದಾರೆ. ಅತ್ಯಂತ ಮನೋಹರವಾದ ಸ್ತ್ರೀ ಸ್ವರೂಪ ವರ್ಣನೆಗಳಿಂದ, ಒಗಟಾದ ಉಪಮೆಗಳಿಂದ ಕೂಡಿದ ಈ ಕಾವ್ಯಗುಚ್ಛವನ್ನು ಕೆಲವರು ವಸ್ತುನಿಷ್ಠ ಪ್ರಜ್ಞೆಯಿಂದ ‘ಕಾಮರೂಪಿ’ ಎನ್ನುತ್ತಾರೆ, ಹಲವರು ಆಧ್ಯಾತ್ಮ ಪ್ರಜ್ಞೆಯಿಂದ ‘ಭಕ್ತಿ ಸ್ವರೂಪಿ’ ಎನ್ನುತ್ತಾರೆ. ಎರಡೂ ಸತ್ಯ!

ಹಿಂದಿನ ಉಪಾಸನೆ / ಆರಾಧನೆಗಳ ಚೌಕಟ್ಟು ಬಿಟ್ಟು ಇಂದು ‘ಸೌಂದರ್ಯ ಲಹರಿ’ ಯಾಕೆ ಇಷ್ಟವಾಗುತ್ತದೆ? ಅಥವಾ ಅದರಲ್ಲಿ ಏನು ವಿಶೇಷ? ಎಂದು ಕೇಳಿದರೆ ಅದರ ‘ಸೌಂದರ್ಯ’ವೇ ವಿಶೇಷ ಮತ್ತು ಅದರ ‘ಲಹರಿ’ ಬಲುಚೆಂದ. ಕಾವ್ಯವಾಗಿ ಅದನ್ನು ನಾನು ಭಾಳ ಇಷ್ಟಪಡ್ತೀನಿ. ಅದರ ಉಪಾಸನೆ ಕುರಿತು ನಂಗೇನು ಗೊತ್ತಿಲ್ಲ. ಕೆಲದಿನಗಳ ಗುಂಗು ಮಾತ್ರ ನನ್ನ ತಲೆಯಲ್ಲಿತ್ತು ಆದರೆ ಈಗಂತೂ ನಾನು ಅದಕ್ಕೆ ಹೊರತಾದ ಮನುಷ್ಯ. ಕಾವ್ಯ ಸದಾ ನನ್ನ ಆಸಕ್ತಿಯ ವಿಚಾರ. ಕಾವ್ಯದ ದೃಷ್ಟಿಯಲ್ಲಿ ‘ಸೌಂದರ್ಯ ಲಹರಿ’ ಕಡೆದಿಟ್ಟ ಕರಚೆಲುವೆ.

ಭಕ್ತಿ ಶೃಂಗಾರವಾಗುವ ರೀತಿಯು ನಮಗೆ ಹೊಸದೇನಲ್ಲ. ಅದು ಪ್ರಾಚೀನದಿಂದಲೂ ನಮ್ಮ ಸಾಹಿತ್ಯ, ಸಮಾಜದೊಳಗೆ ಬೆಳೆದು ಬಂದಿದೆ. ಅದು ಯಾವಾಗಲೂ ದೈವ ಪುರುಷ ಸ್ವರೂಪನಾಗಿ ಭಕ್ತ ಸ್ತ್ರೀಸ್ವರೂಪನಾಗಿ ಸಮರ್ಪಿಸಿಕೊಳ್ಳುವ ಭಾವದಲ್ಲಿ ಭಕ್ತಿ ಬೆಳೆದು ಬಂದಿದೆ. ಆದರೆ ಸೌಂದರ್ಯ ಲಹರಿಯಲ್ಲಿ ಆ ಭಾವವು ಸೃಷ್ಟಿ ಕಾರಣಳಾದ ತಾಯಿ ‘ದೈವ ಸ್ವರೂಪಿ’ಯಾಗಿ ಮಗನು ಆಕೆಯನ್ನು ಶೃಂಗಾರ, ಭಕ್ತಿ, ಪ್ರೀತಿಗಳ ಸಮ್ಮಿಲನದೊಂದಿಗೆ ಸಮರ್ಪಿಸಿಕೊಳ್ಳುವ ಭಕ್ತನಾಗಿ ಕಂಡು ಬರುತ್ತದೆ.ಎರಡು ಪದ್ಯಗಳ ಉದಾಹರಣೆ ಇಲ್ಲಿದೆ.

‘’ಭ್ರುವೌ ಭುಗ್ನೇ ಕಿ೦ಚಿದ್ಭುವನಭಯಭ೦ಗವ್ಯಸನಿನಿತ್ವದೀಯೇ ನೇತ್ರಾಭ್ಯಾ೦ ಮಧುಕರರುಚಿಭ್ಯಾ೦ ಧೃತಗುಣಮ್ | ಧನುರ್ಮನ್ಯೇ ಸವ್ಯೇತರಗೃಹೀತ೦ ರತಿಪತೇಃ ಪ್ರಕೋಷ್ಠೇ ಮುಷ್ಟೌ ಚ ಸ್ಥಗಯತಿ ನಿಗೂಢಾ೦ತರಮುಮೇ||
-ಸೌಂದರ್ಯ ಲಹರಿ 47

ಹೇ ಉಮೇ,ಲೋಕ ಭಯವ ಕಳೆವುದರಲ್ಲೇ ನಿರತಳಾದನಿನ್ನ ತುಸು ಬಾಗಿದ ಹುಬ್ಬೆರಡೂ ಮನ್ಮಥನ ಬಿಲ್ಲಿನಂತಿದ್ದುಜೇನ ಹೀರುವ ಕರಿದುಂಬಿಗಳಂತೆ ಮೆರೆವ ನಿನ್ನೆರಡು ಕಣ್ಣುಗಳಬಳ್ಳಿಯಂತೆ ಬಿಲ್ಲಿಗೆ ಬಿಗಿದು ಹೆದೆಯೇರಿಸಿಎಡಗೈಯಲ್ಲಿ ಹಿಡಿದ ಮನ್ಮಥನ ಮಣಿಕಟ್ಟು ಮುಷ್ಟಿಯಲಿಅದರ ನಡು ಮುಚ್ಚಿ ಹೋಯ್ತಲ್ಲ!

ಸ್ಫುರದ್ಗ೦ಡಾಭೋಗಪ್ರತಿಫಲಿತತಾಟ೦ಕಯುಗಲ೦ಚತುಶ್ಚಕ್ರ೦ ಮನ್ಯೇ ತವ ಮುಖಮಿದ೦ ಮನ್ಮಥರಥಮ್ | ಯಮಾರುಹ್ಯ ದ್ರುಹ್ಯತ್ಯವನಿರಥಮರ್ಕೇ೦ದುಚರಣ೦ ಮಹಾವೀರೋ ಮಾರಃ ಪ್ರಮಥಪತಯೇ ಸಜ್ಜಿತವತೇ||
-ಸೌಂದರ್ಯ ಲಹರಿ 59

ಹೇ ಭಗವತಿ,ನಿನ್ನ ಸಿರಿಮೊಗದ ಕಿವಿಯಲ್ಲಿ ಆ ಎರಡು ಚಕ್ರಾಕಾರದ ಬೆಂಡೋಲೆಗಳುಮಿಂಚಿಹೊಳೆವಾಗ, ನಾಲ್ಕು ಚಕ್ರದ ಮನ್ಮಥನ ರಥವನೇ ಹೋಲುವುದು.ಮಹಾವೀರನಾಗಿ ಆ ರಥವನೇರಿದ ಮಾರನು, ಸೂರ್ಯ-ಚಂದ್ರರನ್ನೇ ಗಾಲಿಯಾಗಿಸಿಭೂರಥದಲ್ಲಿ ಎದುರು ಬರುವ ಶಿವನಿಗೇ ಬಾಣ ಬಿಟ್ಟು ಬಾಧಿಸುವನಲ್ಲ!

ಈ ತರಹದ ಹಲವಾರು ಪದ್ಯಗಳು ಲಹರಿಯಲ್ಲಿವೆ. ನಿಗೂಢವಾದ ಶ್ರೀವಿದ್ಯೆ, ತಂತ್ರವಿದ್ಯೆ ಮೊದಲಾದ ಉಪಾಸನಾಕ್ರಮಗಳನ್ನು ಲಹರಿ ಒಳಗೊಂಡಿದೆ ಎಂಬುದು ಜನನಂಬಿಕೆ. ಅದೆಷ್ಟು ಸತ್ಯವೋ ತಿಳಿಯದು. ಆದರೆ ಅದರ ಕಾವ್ಯಪ್ರಜ್ಞೆಯ ವಿಸ್ತಾರ ಬಲುದೊಡ್ಡದು. ಭಕ್ತಿಯಿಂದ ಶೃಂಗಾರಕ್ಕೆ ಅಲ್ಲಿಂದ ವೈರಾಗ್ಯಕ್ಕೆ ಮತ್ತಲ್ಲಿಂದ ಶಿವಸಂಸಾರಕ್ಕೆ ಜಿಗಿಯುತ್ತ ಪದಾರ್ಥಸಂಪತ್ತನ್ನು ಬಾಚಿ ಲಹರಿಯೊಳಗೆ ತುಂಬಿಕೊಳ್ಳುತ್ತಾ ನಮ್ಮ ಓದಿನೊಂದಿಗೆ ಅದು ಸಾಗುತ್ತಲೇ ಇರುತ್ತದೆ.

ಲಲಾಟಂ ಲಾವಣ್ಯ ದ್ಯುತಿ ವಿಮಲ-ಮಾಭಾತಿ ತವ ಯತ್ ದ್ವಿತೀಯಂ ತನ್ಮನ್ಯೇ ಮಕುಟಘಟಿತಂ ಚಂದ್ರಶಕಲಮ್ | ವಿಪರ್ಯಾಸ-ನ್ಯಾಸಾ ದುಭಯಮಪಿ ಸಂಭೂಯ ಚ ಮಿಥಃ ಸುಧಾಲೇಪಸ್ಯೂತಿಃ ಪರಿಣಮತಿ ರಾಕಾ-ಹಿಮಕರಃ ||
-ಸೌಂದರ್ಯ ಲಹರಿ ೪೬

ಲಲಿತೇ, ನಿನ್ನ ಹಸನಾದ ಹೊಳೆವಹಣೆಯದು ಬಿದಿಗೆಚಂದ್ರಮನಂತೆ ಕಾಣುತಿರೆಕಿರೀಟದ ಮೇಲ್ಮತ್ತೊಂದು ಅರ್ಧಚಂದ್ರನ ಚೂರುತಲೆಕೆಳಗು ಮಾಡಿ ಕೂಡಿಸಿದರಲ್ಲಿಎರಡು ಹೋಳು ಒಂದಾಗಿಸಿಅಮೃತವೇ ಹರಿವ ಪೂರ್ಣಚಂದಿರಕಾಣುವನಲ್ಲಿ ನಿನ್ನ ಮೊಗದಲ್ಲಿ.

ಇವನ್ನು ಬಿಡಿಸಿ ಬಿಡಿಸಿ ಪದಾರ್ಥವನು ಅನುಭವಿಸಿ ಓದುತ್ತ ಹೋದ ಹಾಗೆ ಬಿಲ್ಹಣ, ಭರ್ತೃಹರಿ ಮುಂತಾದ ಕವಿಗಳು ಬರೆದ ಶೃಂಗಾರ ಕಾವ್ಯಗಳು ನೆನಪಾಗುವುದು ಸುಳ್ಳಲ್ಲ. ಆದರೆ ಇಲ್ಲಿನ ಇಡೀ ಆಯಾಮ ಬೇರೆಯದು. ಇಲ್ಲಿ ಭಕ್ತಿ ಶೃಂಗಾರವನ್ನು ವ್ಯಾಪಿಸಿಕೊಂಡಿದೆ. ಮತ್ತು ವ್ಯಾಪ್ತಿಯು ಅದುವರೆವಿಗೂ ಇದ್ದ ಸಂಪ್ರದಾಯವನ್ನು ಮೆಟ್ಟಿ ನಿಂತಿದೆ. ಇದು ಕಾವ್ಯದ ಭಾಷೆ ಮತ್ತು ಪ್ರಯೋಗದ ದೃಷ್ಟಿಯಿಂದಲೂ ಮಹತ್ತರವಾದುದು. ಹಿರಿಯರಾದ ಲಕ್ಷೀಶ ತೋಳ್ಪಡಿಯವರು ಮೊದಲ ಭಾಗ ‘ಆನಂದ ಲಹರಿ’ಯನ್ನು ಕುರಿತ ಅವರ ಜಿಜ್ಞಾಸೆಯನ್ನು ಹಲವು ಲೇಖನಗಳಲ್ಲಿ ಈಗಾಗಲೇ ಪ್ರಕಟಿಸಿದ್ದಾರೆ. ಅವರ ಬರಹಗಳಲ್ಲಿ ಅಧ್ಯಾತ್ಮ ಪ್ರಭೆಯೇ ಹೆಚ್ಚಾಗಿ ತೋರುತ್ತದೆ. ‘ಸೌಂದರ್ಯ ಲಹರಿ’ಯನ್ನು ಸ್ತ್ರೋತ್ರಮಾಲೆಯಾಗಿ ನೋಡುವುದನ್ನು ಬಿಟ್ಟು ಕಾವ್ಯವಾಗಿ ಕಾಣಲು, ಅದರ ಕಾಣ್ಕೆಯನ್ನು ಪಡೆಯಲು ಪ್ರಯತ್ನಿಸಬೇಕು. ಅದು ಬಿಟ್ಟು ಬರಿಯ ಪಾರಾಯಣ ಮಾಡುವುದು ಕಾಲಹರಣವಾಗುತ್ತದೆಯಷ್ಟೆ! ತಂತ್ರಸಾಧನೆಯ ಮಂತ್ರಸ್ವರೂಪವೆಂದು ಬಗೆದಿದ್ದ ‘ಸೌಂದರ್ಯ ಲಹರಿ’ಯು ಈಚಿನ ಓದಿನಲ್ಲಿ ಅಪ್ರತಿಮ ಶೃಂಗಾರ ಕಾವ್ಯದಂತೆ ಗೋಚರಿಸುತ್ತಿದೆ. ದೈವೀಕ ಪಠ್ಯದ ಹಣೆಪಟ್ಟಿಯಿಂದ ತೆಗೆದು ಕಾವ್ಯದ ಹೂಮಾಲೆ ಇಟ್ಟು ಸೌಂದರ್ಯ ಲಹರಿಯನ್ನು ಓದುವುದು ಉತ್ತಮವೆನಿಸುತ್ತದೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More