ಮತ್ತೊಮ್ಮೆ ಬಯಲಾಯ್ತು ಬಿಜೆಪಿಯ ಟ್ವಿಟರ್ ಟ್ರೆಂಡಿಂಗ್ ಹೈಜಾಕ್‌ ತಂತ್ರ!

ದೇಶದ ಅರ್ಥವ್ಯವಸ್ಥೆಯನ್ನೇ ಹಣಿದ ಅಪನಗದೀಕರಣದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ವಾಸ್ತವಕ್ಕೆ ತದ್ವಿರುದ್ಧವಾಗಿ ಟ್ರೆಂಡಿಂಗ್ ಆಗಿದೆ! ಕಳೆದೆರಡು ತಿಂಗಳಲ್ಲಿನ ಪ್ರಮುಖ 10 ಹ್ಯಾಶ್‌ಟ್ಯಾಗ್‌ ಹಿಂದಿದೆ ಇದೇ ಬಗೆಯ ಕೃತಕ ಜಾಲ

ನೋಟು ರದ್ದತಿ, ಜಿಎಸ್ ಟಿ, ಆಧಾರ್‌ನಂತಹ ಕೇಂದ್ರ ಸರ್ಕಾರದ ವೈಫಲ್ಯಗಳಿಂದ ಭಾರತೀಯ ಜನಸಾಮಾನ್ಯರು ಹೈರಾಣಾಗಿರುವ ನಡುವೆಯೂ, ಸಾಮಾಜಿಕ ಜಾಲತಾಣಗಳು ಈ ವಿಷಯಗಳ ಪರ ಭಾರೀ ಬೆಂಬಲ ವ್ಯಕ್ತವಾಗುತ್ತಿರುವುದು ಮತ್ತು ಸರ್ಕಾರದ ದೊಡ್ಡ ಸಾಧನೆಯೇ ಅದು ಎಂಬಂತೆ ಬಿಂಬಿಸಲಾಗುತ್ತಿರುವುದು ಹೇಗೆ ಎಂದು ಯಾವತ್ತಾದರೂ ನೀವು ಯೋಚಿಸಿದ್ದೀರಾ?

ಅದರಲ್ಲೂ ನೋಟು ರದ್ದತಿಯಂತಹ ಜನಸಾಮಾನ್ಯರ ಬದುಕನ್ನೇ ಅಭದ್ರಗೊಳಿಸಿದ, ನೂರಾರು ಸಾವುನೋವುಗಳಿಗೆ, ಉದ್ಯೋಗ ನಷ್ಟಕ್ಕೆ ಕಾರಣವಾದ, ದೇಶದ ಅರ್ಥವ್ಯವಸ್ಥೆಯನ್ನೇ ಹಣಿದ ಕ್ರಮದ ಬಗ್ಗೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವಾಸ್ತವಾಂಶಕ್ಕೆ ತೀರಾ ತದ್ವಿರುದ್ಧವಾದ ಚಿತ್ರಣ ಮೂಡಿರುವುದು ಹೇಗೆ? ಎಂಬುದು ಬಹುತೇಕರಿಗೆ ಇರುವ ದೊಡ್ಡ ಅನುಮಾನ.

ಆದರೆ, ಟ್ವಿಟರ್‍ನಂಥ ಸಾಮಾಜಿಕ ಜಾಲತಾಣದಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ರಾಜಕೀಯ ಸಂಬಂಧಿತ ಹ್ಯಾಶ್ ಟ್ಯಾಗ್‌ಗಳ ಟ್ರೆಂಡಿಂಗ್ ಹಿಂದಿನ ಮರ್ಮ ತಿಳಿದರೆ ನಿಮ್ಮ ಅನುಮಾನಕ್ಕೆ ಬೆಚ್ಚಿಬೀಳುವ ಉತ್ತರ ಸಿಗಲಿದೆ. ಹೌದು, ವ್ಯಾಪಕ ಬಳಕೆಯ ಮತ್ತು ಆ ಕಾರಣಕ್ಕಾಗೇ ದೇಶದ ಅತ್ಯಂತ ಪ್ರಭಾವಿ ಜಾಲತಾಣವಾಗಿರುವ ಟ್ವಿಟರ್ ಈ ಹೊತ್ತು ಭಾರತದ ರಾಜಕಾರಣಿಗಳು, ಸಿನಿಮಾ ಮತ್ತು ಕ್ರೀಡಾತಾರೆಯರು ಮತ್ತು ಪತ್ರಕರ್ತರು ಸೇರಿದಂತೆ ಸಮಾಜದ ಅಭಿಪ್ರಾಯ ರೂಪಿಸುವ ಎಲೈಟ್ ವರ್ಗದ ಸಂವಹನದ ನೆಚ್ಚಿನ ತಾಣ

ಇಂತಹ ಪ್ರಭಾವಿ ಜಾಲತಾಣವನ್ನು ಬಳಸಿಕೊಂಡು ಹೇಗೆ ಹುಸಿ ಸತ್ಯಗಳನ್ನು, ಹಸಿಹಸಿ ಮಿಥ್ಯೆಗಳನ್ನು ಸೃಷ್ಟಿಸಬಹುದು ಮತ್ತು ಆ ಮೂಲಕ ಜನಸಾಮಾನ್ಯರನ್ನು ಭ್ರಮೆಯಲ್ಲಿಡಬಹುದು ಎಂಬುದಕ್ಕೆ ಈ ಎರಡು ತಿಂಗಳ ಅವಧಿಯಲ್ಲಿ ನೋಟು ರದ್ದತಿ ಸೇರಿದಂತೆ ಪ್ರಮುಖ ರಾಜಕೀಯ ವಿಷಯಗಳನ್ನು ಟ್ರೆಂಡಿಂಗ್ ಮಾಡಿರುವುದೇ ತಾಜಾ ನಿದರ್ಶನ.

ನೋಟು ರದ್ದತಿ ಕ್ರಮದ ಮೂಲಕ ರದ್ದುಪಡಿಸಲಾದ ಒಟ್ಟು ನೋಟುಗಳ ಪೈಕಿ ಶೇ.99ರಷ್ಟು ನಗದು ವಿನಿಮಯದ ಮೂಲಕ ನಿಗದಿತ ಅವಧಿಯಲ್ಲೇ ಬ್ಯಾಂಕುಗಳಿಗೆ ವಾಪಸು ಬಂದಿದೆ ಎಂಬುದನ್ನು ಆರ್‌ಬಿಐ ಆಗಸ್ಟ್ 30 ರಂದೇ ಘೋಷಿಸಿತು. ಆ ಮೂಲಕ ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ ಸುಧಾರಣೆಯ ಹೆಜ್ಜೆ ಎಂದೇ ಬಿಜೆಪಿ ಮತ್ತು ಸಂಘಪರಿವಾರದ ಮಂದಿ ಬೊಬ್ಬೆ ಹಾಕಿದ್ದ ನೋಟು ರದ್ದತಿಯ ಮೊದಲ ಆಶಯವಾಗಿದ್ದ ಕಪ್ಪುಹಣ ನಿರ್ಮೂಲನೆಯ ವಿಷಯದಲ್ಲಿ ಆ ಕ್ರಮ ಸಂಪೂರ್ಣ ವಿಫಲವಾಗಿದೆ ಎಂಬ ಜನಸಾಮಾನ್ಯರು ಮತ್ತು ಪ್ರತಿಪಕ್ಷಗಳ ವಾದಕ್ಕೆ ಸ್ವತಃ ಆರ್‌ಬಿಐ ಕೂಡ ಮನ್ನಣೆಯ ಮುದ್ರೆ ಒತ್ತಿತ್ತು.

ಆದರೆ, ಈ ವಾಸ್ತವಕ್ಕೆ ಪ್ರತಿಯಾಗಿ ಮಾರನೇ ದಿನ ಟ್ವಿಟರ್‌ನಲ್ಲಿ ಭಾರತದ ಟಾಪ್ ಟ್ರೆಂಡಿಂಗ್ ವಿಷಯವಾಗಿ #DemonetisationSuccess ಹ್ಯಾಶ್ ಟ್ಯಾಗ್ ನಿರಂತರ ಹತ್ತು ಗಂಟೆಗಳ ಕಾಲ ಮುಂಚೂಣಿಯಲ್ಲಿತ್ತು! ಆರ್‌ಬಿಐ ಬಿಡುಗಡೆ ಮಾಡಿರುವ ನೋಟು ರದ್ದತಿ ಕುರಿತ ಅಂಕಿಅಂಶಗಳು ಬೇರೆಯದೇ ವಾಸ್ತವಾಂಶಗಳನ್ನು ಹೇಳುತ್ತಿದ್ದರೂ, ಜನಸಾಮಾನ್ಯರ ಅನುಭವ ಕೂಡ ಆರ್‌ಬಿಐ ಅಂಕಿಅಂಶಗಳು ಸೂಚಿಸುವ ಅಂಶಗಳೇ ಆಗಿದ್ದರೂ, ಟ್ವಿಟರ್‌ನಲ್ಲಿ ಅದಕ್ಕೆ ತದ್ವಿರುದ್ಧವಾದ ಟ್ರೆಂಡಿಂಗ್ ಹೇಗೆ ಬಂದಿದೆ ಎಂಬುದನ್ನು ವಿಶ್ಲೇಷಣೆಗೊಳಪಡಿಸಿದಾಗ ಬಿಜೆಪಿ ಮತ್ತು ಸಂಘಪರಿವಾರದ ಮಂದಿಯ ಅಸಲೀ ಕರಾಮತ್ತು ಬಯಲಾಯಿತು.

‘ಆಲ್ಟ್ ನ್ಯೂಸ್’ ಎಂಬ ಸುದ್ದಿಗಳ ಸತ್ಯಾಸತ್ಯತ ಪತ್ತೆ ಮಾಡುವ ವೆಬ್ಸೈಟ್ ಈ ಕುರಿತು ಕುತೂಹಲದೊಂದಿಗೆ #DemonetisationSuccess ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ವಿಶ್ಲೇಷಿಸಿದಾಗ, ಈ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದವರು ಬಹುತೇಕ ಬಿಜೆಪಿ ಮತ್ತು ಅದರ ವಿವಿಧ ಸಂಘಟನೆಗಳ ನಾಯಕರು ಮತ್ತು ಕಾರ್ಯಕರ್ತರೇ ಆಗಿದ್ದರು ಎಂಬುದು ದೃಢಪಟ್ಟಿತು. ಅದಕ್ಕಿಂತ ಆಘಾತಕಾರಿ ಸಂಗತಿಯೆಂದರೆ; ಈ ಹ್ಯಾಶ್ ಟ್ಯಾಗ್ ಜನಪ್ರಿಯವಾಗಲು ಕಾರಣವಾದ ಟ್ವೀಟ್‌ಗಳ ಪೈಕಿ ಬಿಜೆಪಿ ಬೆಂಬಲಿಗರು ಮತ್ತು ನಾಯಕರು ಮಾಡಿದ ಟ್ವೀಟ್‌ಗಳ ಪದ, ವಾಕ್ಯ ಸೇರಿದಂತೆ ಭಾಷೆ ಮತ್ತು ವಾದಗಳು ಒಂದೇ ರೀತಿ ಇದ್ದವು. ಜೊತೆಗೆ ಆಗಸ್ಟ್ 31ರ ಸಂಜೆ 4.30ರ ಬಳಿಕವೇ, ಪದ-ಪದವೂ ಹೋಲಿಕೆಯುಳ್ಳ ಈ ಟ್ವೀಟ್‌ಗಳನ್ನು ಬಹುತೇಕ ಒಂದೇ ಕಾಲಕ್ಕೆ ಮಾಡಲಾಗಿತ್ತು!

ಈ ವಿವರಗಳ ಬಳಿಕ ಮತ್ತಷ್ಟು ಬೆನ್ನು ಹತ್ತಿದಾಗ, ಆಗಸ್ಟ್ 31ರ ಸಂಜೆ 4.30ರ ವೇಳೆಗೆ #DemonetisationSuccess ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಮಾಡುವಂತೆ ಸೂಚಿಸಿ ರವಾನಿಸಿದ ಗೂಗಲ್ ಸ್ಪ್ರೆಡ್ ಶೀಟ್ ಕೂಡ ವೆಬ್ಸೈಟಿಗೆ ದೊರೆಯುತ್ತದೆ. ಜೊತೆಗೆ ಹೇಗೆ, ಯಾವ ಪದ ಬಳಸಿ, ಯಾವ ವಿಷಯ ಪ್ರಸ್ತಾಪಿಸಿ ಟ್ವೀಟ್ ಮಾಡಬೇಕು ಎಂಬ ಬಗ್ಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿನ ಮಾದರಿ ಪಠ್ಯ ಕೂಡ ಅದರಲ್ಲಿ ಅಡಕವಾಗಿತ್ತದೆ! ಈ ಮಾದರಿ ಪಠ್ಯ, #DemonetisationSuccess ಹ್ಯಾಶ್ ಟ್ಯಾಗ್ ನ ಸಾವಿರಾರು ಟ್ವೀಟ್‌ಗಳ ಪದಪದಕ್ಕೂ ಯಥಾವತ್ತು ಹೋಲಿಕೆಯಾಗುತ್ತದೆ! ಹೀಗೆ ಸೂಚನೆಗಳನ್ನು ನೀಡಿದ ವ್ಯಕ್ತಿ ಯಾರು ಎಂಬುದನ್ನು ಹುಡುಕಿದಾಗ, ಆತ ಬಿಜೆಪಿ ಐಟಿ ಸೆಲ್ ಸದಸ್ಯ ಎಂದು ಸ್ವತಃ ಹೇಳಿಕೊಂಡಿರುವ ಯೋಗೀಶ್ ಮಲಿಕ್ ಎಂಬುದು ಬಯಲಾಗುತ್ತದೆ! ಜೊತೆಗೆ ಅದನ್ನು ಖಚಿತಪಡಿಸುವಂತೆ, ಆತನ ಟ್ವಿಟರ್ ಬ್ಯಾನರ್ ಫೋಟೋದಲ್ಲಿ ನರೇಂದ್ರ ಮೋದಿಯವರ ಪಕ್ಕ ನಿಂತು ತೆಗೆಸಿಕೊಂಡಿರುವ ಚಿತ್ರ ರಾರಾಜಿಸುತ್ತಿತ್ತು!

ಮತ್ತೊಂದು ಅಂತಾರಾಷ್ಟ್ರೀಯ ಸುದ್ದಿ ವಿಶ್ಲೇಷಕ ವೆಬ್ ತಾಣದ ವಿಶ್ಲೇಷಣೆಯಂತೆ, ಕಳೆದ ಎರಡು ತಿಂಗಳಲ್ಲಿ ನೋಟು ರದ್ದತಿಗೆ ಸಂಬಂಧಿಸಿದ #DemonetisationSuccess ಹ್ಯಾಶ್ ಟ್ಯಾಂಗ್ ಒಂದೇ ಅಲ್ಲದೆ, #MyNewIndia ಸೇರಿದಂತೆ ಇಂತಹದ್ದೇ 10 ಪ್ರಮುಖ ರಾಜಕೀಯ ವಿಷಯಗಳ ಕುರಿತ ಹ್ಯಾಶ್ ಟ್ಯಾಗ್‌ಗಳ ಟ್ವಿಟರ್ ಟ್ರೆಂಡಿಂಗ್ ಹಿಂದೆ ಇದೇ ರೀತಿಯಲ್ಲಿ ಲಕ್ಷಾಂತರ ಜನರಿಗೆ ಟ್ವಿಟರ್ ಪಠ್ಯದ ಮಾದರಿ ನೀಡಿ, ವ್ಯವಸ್ಥಿತವಾಗಿ ಅದನ್ನು ಟ್ರೆಂಡಿಂಗ್ ಮಾಡಿಸಿರುವುದು ಪತ್ತೆಯಾಗಿದೆ. ಜೊತೆಗೆ ನಕಲಿ ಟ್ವಿಟರ್ ಹ್ಯಾಂಡಲ್ ಬಳಸಿಯೂ ರಾಜಕೀಯ ಹಿತಾಸಕ್ತಿಯ ವಿಷಯಗಳನ್ನು ಟ್ರೆಂಡಿಂಗ್ ಮಾಡುವ ಮೂಲಕ ಮಾಧ್ಯಮ ಮತ್ತು ಜನರನ್ನು ದಿಕ್ಕು ತಪ್ಪಿಸುತ್ತಿರುವುದು ಕೂಡ ಬೆಳಕಿಗೆ ಬಂದಿದೆ. ಆ ಹತ್ತು ಟ್ರೆಂಡಿಂಗ್ ಹ್ಯಾಶ್ ಟ್ಯಾಗ್‌ಗಳಿಗೆ ಸಂಬಂಧಿಸಿದ ಶೇ.50ಕ್ಕೂ ಅಧಿಕ ಟ್ವೀಟ್‌ಗಳು ಇಂತಹ ನಕಲುಗಳಾಗಿದ್ದು, ಇನ್ನಾರೋ ರವಾನಿಸಿದ ಮಾದರಿ ಟೆಂಪ್ಲೇಟ್‌ಗಳಿಂದ ಯಥಾವತ್ತು ತೆಗೆದು ಅಂಟಿಸಿ ಟ್ವೀಟ್ ಮಾಡಿದವುಗಳೇ ಆಗಿವೆ ಎಂದು ಆ ವೆಬ್‌ತಾಣ ಹೇಳಿದೆ.

ಹೀಗೆ ಕೃತಕ ಅಥವಾ ನಕಲಿ ಟ್ವೀಟ್ ಮೂಲಕ ಟ್ರೆಂಡಿಂಗ್ ಸೃಷ್ಟಿಸುವುದು ವಾಸ್ತವವಾಗಿ ಟ್ವಿಟರ್ ನಿಯಮಕ್ಕೆ ವಿರುದ್ಧ. ಅಮೆರಿಕ ಅಧ್ಯಕ್ಷರ ಚುನಾವಣೆ ವೇಳೆ ರಷ್ಯಾ ಕೂಡ ಇದೇ ಕಳ್ಳದಾರಿಯ ಟ್ರೋಲ್ ಮೂಲಕವೇ ಕೃತಕ ಟ್ವಿಟರ್ ಟ್ರೆಂಡಿಂಗ್ ಸೃಷ್ಟಿಸಿ ತನ್ನ ಪರವಾದ ನಿಲುವಿನ ವ್ಯಕ್ತಿಗೆ ಬಹುಮತ ದೊರೆಯುಂತೆ ಚುನಾವಣೆಯನ್ನೇ ತಿರುಚಿತ್ತು. ಆ ವಿಷಯ ಬಹಿರಂಗವಾಗುತ್ತಲೇ ಅಲ್ಲಿ ಟ್ವಿಟರ್ ಹಲವು ಬಿಗಿ ಕ್ರಮಗಳ ಮೂಲಕ ನಕಲಿ ಟ್ವೀಟ್ ಮತ್ತು ಕೃತಕ ಟ್ರೆಂಡಿಂಗ್‌ಗೆ ಬ್ರೇಕ್ ಹಾಕಿದೆ.

ಇದನ್ನೂ ಓದಿ : ಗುಜರಾತ್ ಹಣಾಹಣಿ | ಬಿಜೆಪಿಗೆ ಉಳಿದದ್ದು ಮೋದಿಯ ಕೊನೇ ಕ್ಷಣದ ಅಸ್ತ್ರ ಮಾತ್ರ

ಆದರೆ, ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜನಾಭಿಪ್ರಾಯ ಮೂಡಿಸುವ ಪ್ರಭಾವಿ ಸಾಮಾಜಿಕ ಮಾಧ್ಯಮವಾಗಿರುವ ಟ್ವಿಟರ್‌ನ ದುರ್ಬಳಕೆ ತಡೆಗೆ ಗಂಭೀರ ಕ್ರಮಗಳೇ ಇಲ್ಲ ಎಂಬುದು ಈ ಸಾಲುಸಾಲು ಹುಸಿ ಟ್ರೆಂಡಿಂಗ್ ಮೂಲಕ ಸಾಬೀತಾಗಿದೆ. ಹಾಗಾಗಿ, ರಾಜಕೀಯ ಹಿತಾಸಕ್ತಿಯ ವಿಷಯಗಳಷ್ಟೇ ಅಲ್ಲದೆ, ಬ್ರಾಂಡೆಡ್ ಮಾರಾಟ ಸರಕುಗಳ ವಸ್ತುಗಳನ್ನೂ ಕೃತಕ ಟ್ರೆಂಡಿಂಗ್ ಸೃಷ್ಟಿಸುವ ಮೂಲಕ ಸುಲಭವಾಗಿ ಜನಪ್ರಿಯಗೊಳಿಸುವ ಆಟಗಳು ಕೂಡ ಭಾರತದಲ್ಲಿ ಹೆಚ್ಚುತ್ತಿವೆ. ಅದರಲ್ಲೂ ಜನಪ್ರಿಯ ವ್ಯಕ್ತಿಗಳನ್ನು ಬಳಸಿಕೊಂಡೇ ಹೊಸ ಉತ್ಪನ್ನಗಳಿಗೆ ಟ್ರೆಂಡಿಂಗ್ ಸೃಷ್ಟಿಸುವ ವ್ಯವಹಾರವೂ ನಡೆಯುತ್ತಿದೆ. ಒಂದು ವರದಿಯ ಪ್ರಕಾರ, ಭಾರತದಲ್ಲಿ ಟ್ವಿಟರ್ ಮೂಲಕ ಸ್ವತಃ ಟ್ವಿಟರ್ ಸಂಸ್ಥೆ ಸಂಪಾದಿಸಿರುವ ಆದಾಯಕ್ಕಿಂತ ಹಲವು ಪಟ್ಟು ಆದಾಯವನ್ನು ಡಿಜಿಟಲ್ ಮಾರ್ಕೆಟಿಂಗ್ ಸಂಸ್ಥೆಗಳು ಮಾಡಿಕೊಂಡಿವೆ.

ಜೊತೆಗೆ, ನಿತ್ಯ ಜನರನ್ನು ಕಾಡುವ ಸರ್ಕಾರದ ಕೆಲವು ತಪ್ಪು ನಡೆಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸುಧಾರಣೆಯ ಮಹಾ ಯಶಸ್ಸುಗಳಾಗಿ ಹೇಗೆ ಬಿಂಬಿತವಾಗುತ್ತಿವೆ ಎಂಬುದೂ ಈಗ ಮತ್ತೊಮ್ಮೆ ಬಯಲಾಗಿದೆ!

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More