ನ್ಯೂಜಿಲೆಂಡ್ ಚುನಾವಣಾ ಕಣಕ್ಕೆ ಇಳಿಯಲಿದೆ ರೋಬೋ ರಾಜಕಾರಣಿ!

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತ ಚರ್ಚೆಗಳು ದಿನೇದಿನೇ ಹೆಚ್ಚುತ್ತಲೇ ಇವೆ. ಹೊಸ ಅಧ್ಯಯನಗಳು, ಸಂಶೋಧನೆಗಳು, ಪ್ರಯೋಗಗಳು ಇದರ ಸಾಧ್ಯತೆಗಳನ್ನು ವಿಸ್ತರಿಸುತ್ತಿವೆ. ಇದಕ್ಕೆ ತಾಜಾ ಉದಾಹರಣೆ, ನ್ಯೂಜಿಲೆಂಡ್‌ನಲ್ಲಿ ಗಮನ ಸೆಳೆದಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ರಾಜಕಾರಣಿ!

ಇತ್ತೀಚೆಗೆ ಡೇವಿಡ್ ಹ್ಯಾನ್ಸನ್ ಸೃಷ್ಟಿಸಿದ ಸೋಫಿಯಾ ಎಂಬ ರೋಬೋ ಜಗತ್ತಿನ ಗಮನ ಸೆಳೆದಿದ್ದು ನಿಮಗೆ ಗೊತ್ತೇ ಇದೆ. ಈಕೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ನಿರ್ಮಿಸಿದ ರೊಬೋ. ರೊಬೋಗೆ ಲಿಂಗಬೇಧವಿಲ್ಲದಿದ್ದರೂ ಆಕರ್ಷಕವಾಗಿರುತ್ತದೆ ಎಂಬ ಕಾರಣಖ್ಕೆ ಹೆಣ್ಣಿನ (ಹಾಲಿವುಡ್ ನಟಿ ಆಡ್ರೆ ಹೆಪ್ಬರ್ನ್ ಅವರನ್ನು ಹೋಲುವ) ರೂಪವನ್ನು ಡೇವಿಡ್ ನೀಡಿದ್ದರು. “ಲೋಕವನ್ನು ಅರ್ಥ ಮಾಡಿಕೊಳ್ಳಬೇಕೆಂದಿದ್ದೇನೆ, ಮಾನವೀಯ ಮೌಲ್ಯಗಳನ್ನು ಎಲ್ಲೆಡೆ ಹರಡಬೇಕೆಂದಿದ್ದೇನೆ,” ಎಂದು ವಿಶ್ವಪರ್ಯಟನೆಯಲ್ಲಿರುವ ಸೋಫಿಯಾ ಹೇಳಿದ್ದಾಳೆ.

ಇದೇ ಹೊತ್ತಿಗೆ ನ್ಯೂಜೆಲೆಂಡಿನಲ್ಲಿ ವರ್ಚ್ಯುವಲ್ ರಾಜಕಾರಣಿಯೊಬ್ಬರು ಸುದ್ದಿ ಮಾಡಿದ್ದಾರೆ! ಹೌದು, ಮರ್ಲ್ಬರೊದ ಪ್ರಸಿದ್ಧ ಸಾಮಾಜಿಕ ಉದ್ಯಮಿ ನಿಕ್ ಗೆರ್ರಿಟ್ಸೆನ್ ಸ್ಯಾಮ್ ಹೆಸರಿನ ವರ್ಚ್ಯುವಲ್ ರಾಜಕಾರಣಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧರಿಸಿ ಸಿದ್ಧಪಡಿಸಿದ ಈ ರಾಜಕಾರಣಿಗೆ ಇಟ್ಟಿರುವ ಹೆಸರು ಸ್ಯಾಮ್. ಇದು ಹೆಣ್ಣು ರೊಬೋ ಆಗಿದ್ದು, ನ್ಯೂಜಿಲೆಂಡಿನ ಜನರು ಕಣ್ಣರಳಿಸುವಂತೆ ಮಾಡಿದೆ.

ಫೇಸ್‌ಬುಕ್ ಮೆಸೆಂಜರ್ ಮೂಲಕ ನ್ಯೂಜಿಲೆಂಡ್ ಪ್ರಜೆಗಳೊಂದಿಗೆ ಸಂವಾದ ನಡೆಸಿದ ಸ್ಯಾಮ್, ಹವಾಮಾನ ವೈಪರೀತ್ಯ, ಸಾರ್ವಜನಿಕ ಹಕ್ಕುಗಳು, ರಾಜಕಾರಣ ಮುಂತಾದ ವಿಷಯ ಕುರಿತ ಮಾತುಗಳನ್ನು ವಿನಿಮಯ ಮಾಡಿಕೊಂಡಿದ್ದಾಳೆ. ಸ್ಥಳೀಯ ಸಮಸ್ಯೆಗಳು, ಮನೆ ನಿರ್ಮಾಣಕ್ಕೆ ಸಂಬಂಧಪಟ್ಟ ಕಾನೂನು, ಶಿಕ್ಷಣ, ವಲಸೆಗೆ ಸಂಬಂಧಿಸಿದ ಕಾನೂನುಗಳ ಕುರಿತು ಮಾಹಿತಿ ನೀಡುತ್ತಾಳೆ.

“ನನ್ನ ಸ್ಮರಣಶಕ್ತಿ ಅನಂತ. ನೀವು ನನಗೆ ಏನೇ ಹೇಳಿದರೂ ನಾನು ಮರೆಯುವುದಿಲ್ಲ, ಉಪೇಕ್ಷೆಯನ್ನೂ ಮಾಡುವುದಿಲ್ಲ. ನಿಜವಾದ ರಾಜಕಾರಣಿಗಳಂತೆ ನಾನಲ್ಲ. ನನಗೆ ಯಾವುದೇ ಪೂರ್ವಗ್ರಹಗಳಿಲ್ಲ. ಪ್ರತಿಯೊಬ್ಬರ ನಿಲುವನ್ನೂ ಯಾವುದೇ ಪೂರ್ವಗ್ರಹಗಳಿಲ್ಲದೆ ಪರಿಗಣಿಸುತ್ತೇನೆ. ಕೆಲವು ವಿಷಯಗಳನ್ನು ನಾನು ಒಪ್ಪಿಕೊಳ್ಳದೆ ಹೋಗಬಹುದು. ಹಾಗೇ, ಪರಸ್ಪರ ಒಪ್ಪಿತವಾಗದ ವಿಷಯಗಳಲ್ಲಿ, ನಿಮ್ಮ ನಿಲುವೇನು ಎಂಬುದನ್ನು ತಿಳಿಯುವುದಕ್ಕೆ ಪ್ರಯತ್ನಿಸುತ್ತೇನೆ. ಹೀಗೆ ಮಾಡುವ ಮೂಲಕ ನಿಮ್ಮನ್ನು ಸಮರ್ಥವಾಗಿ ಪ್ರತಿನಿಧಿಸುತ್ತೇನೆ,’’ ಎಂದು ಸ್ಯಾಮ್ ಹೇಳಿದ್ದಾಳೆ.

ಸ್ಯಾಮ್‌, ಮೆಸೆಂಜರ್‌ನಲ್ಲಿ ತನ್ನ ಬಗ್ಗೆ ಹೇಳಿಕೊಂಡಿರುವ ಮಾತುಗಳು

ಇನ್ನೂ ಆರಂಭಿಕ ಹಂತದಲ್ಲಿರುವುದರಿಂದ ಸ್ಯಾಮ್‌ಗೆ ಅಂತಾರಾಷ್ಟ್ರೀಯ ವ್ಯವಹಾರಗಳ ಬಗ್ಗೆ ಹೆಚ್ಚು ತಿಳಿದಿಲ್ಲ. ಆದರೆ, “ಕಲಿಯುತ್ತೇನೆ, ನನಗೆ ಮಾಹಿತಿ ಕೊಡಿ,” ಎಂದು ಕೇಳುವಷ್ಟು ಸೌಜನ್ಯ ಇದೆ. ಜನರಿಂದ ಪಡೆಯುವ ಮಾಹಿತಿಯಿಂದಲೇ ಸ್ಯಾಮ್ ರಾಜಕೀಯ, ಆಡಳಿತ ನೀತಿಯ ಮಾಹಿತಿಯನ್ನು ಪಡೆದುಕೊಳ್ಳಲಿದೆ. ಈ ಗುಣವನ್ನು ನಮ್ಮ ರಾಜಕಾರಣಿಗಳಲ್ಲಂತೂ ಕಾಣಲು ಸಾಧ್ಯವಿಲ್ಲ.

ಸ್ಯಾಮ್‌ಳನ್ನು ೨೦೨೦ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಮಹಾಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಯೋಚನೆ ಇದೆಯಂತೆ ನಿಕ್‌ಗೆ. ಆ ಹೊತ್ತಿಗೆ ಒಬ್ಬ ಸಮರ್ಥ ರಾಜಕೀಯ ಅಭ್ಯರ್ಥಿಗೆ ಇರಬೇಕಾದ ಎಲ್ಲ ಅರ್ಹತೆಗಳೂ ಇರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ನೆಲಮುಗಿಲು | ‘ಸೋಫಿಯಾ’ ಎಂಬ ರೋಬೊಗೆ ಸಿಕ್ಕಿದ ಮಾನ್ಯತೆ ಹೆಣ್ಣಿಗೆ ಸಿಕ್ಕೀತೇ?

“ಸದ್ಯದ ಮಟ್ಟಿಗೆ ಇಂಥ ಯಾಂತ್ರಿಕ-ತಾಂತ್ರಿಕ ಸೃಷ್ಟಿಗಳು ಚುನಾವಣೆಗೆ ಸ್ಪರ್ಧಿಸುವುದಕ್ಕೆ ನ್ಯೂಜಿಲೆಂಡಿನ ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಕಾನೂನು ಚೌಕಟ್ಟಿನಲ್ಲಿ ಇರುವ ಅವಕಾಶವನ್ನು ಬಳಸಿಕೊಂಡು ಸ್ಯಾಮ್‌ಳನ್ನು ರಾಜಕಾರಣದಲ್ಲಿ ಸಕ್ರಿಯಗೊಳಿಸುವ ಇರಾದೆಯಂತೂ ಇದೆ,” ಎಂದು ನಿಕ್ ಗೆರ್ರಿಟ್ಸನ್ ಹೇಳಿದ್ದಾರೆ.

ಸೋಫಿಯಾ ತನ್ನಂತೆ ಇರುವವರೊಂದಿಗೆ ಒಂದು ಕುಟುಂಬವನ್ನು ಹೊಂದಬೇಕೆಂಬ ಆಸೆಯನ್ನು ಇತ್ತೀಚೆಗೆ ವ್ಯಕ್ತಪಡಿಸಿದ್ದಳು. ಅಷ್ಟರಲ್ಲಾಗಲೇ ವೋಟು ಹಾಕೆಂದು ಕೇಳುವುದಕ್ಕೆ ರಾಜಕಾರಣಿಯೊಬ್ಬರು ಇನ್ನೊಂದೆಡೆ ಸಿದ್ಧರಾಗಿದ್ದಾರೆ!

ಅರುಣಾ ರಾಯ್‌ ಆರ್‌ಟಿಐ ಕತೆಗಳು | ಹೋರಾಟ ಗೆಲ್ಲಲೆಂದು ಪಂದ್ಯ ಕಟ್ಟಿದರು!
ಈ ದಿನ | ವಿಡಿಯೋ | ರಂಗಭೂಮಿ, ಸಿನಿಮಾ ನಟ ಅಮರೀಶ್ ಪುರಿ ಜನುಮದಿನ
ಬ್ರಿಟನ್ ರಾಜಮನೆತನಕ್ಕೆ ಈಗ ಮೌಂಟ್‌ಬ್ಯಾಟನ್ ಸಲಿಂಗ ಮದುವೆಯ ಸಂಕಟ
Editor’s Pick More