ಸನ್ನಿ ಲಿಯೋನ್‌ ವಿಷಯದಲ್ಲಿ ನೈತಿಕ ಪೊಲೀಸ್‌ಗಿರಿಗೆ ಇಳಿಯಿತೇ ರಾಜ್ಯ ಸರ್ಕಾರ?

ಹೊಸ ವರ್ಷಾಚರಣೆಯ ಖಾಸಗಿ ಕಾರ್ಯಕ್ರಮವೊಂದರಲ್ಲಿ ನಟಿ ಸನ್ನಿ ಲಿಯೋನ್‌ ಭಾಗವಹಿಸುವುದಿತ್ತು. ಆದರೆ, ಈ ಬಗ್ಗೆ ಸಾರ್ವಜನಿಕ ವಿರೋಧ ವ್ಯಕ್ತವಾಯಿತೆಂದು ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನಿರಾಕರಿಸಿದೆ. ಸಂಸ್ಕೃತಿ ರಕ್ಷಣೆಗಾಗಿ ಈ ಕ್ರಮ ಎಂಬುದು ಗೃಹ ಸಚಿವರ ಸಮರ್ಥನೆ!

ನಾ ಬರಬಾರ್ದಂತ ಗೌರ್ಮೆಂಟ್ನವ್ರು ಮೀಟಿಂಗ್ ಮಾಡವ್ರೆ

ನಾ ಬರಬಾರ್ದಂತ ಸಿಟಿಯಲ್ಲಿ ಕರ್ಫ್ಯೂ ಹಾಕವ್ರೆ

ಎರಡು ವರ್ಷಗಳ ಹಿಂದೆ ನಿರ್ದೇಶಕ ಪ್ರೇಮ್ ಅವರು ತಮ್ಮ 'ಡಿಕೆ' ಚಿತ್ರಕ್ಕೆ ಸನ್ನಿ ಲಿಯೋನ್‌ ಅವರಿಂದ ಐಟಮ್ ಡಾನ್ಸ್ ಮಾಡಿಸಿದರು. ಆ ಹಾಡಿನ ಚರಣವೊಂದರಲ್ಲಿ ಬರುವ ಸಾಲುಗಳಿವು. ಗೃಹ ಸಚಿವ ರಾಮಲಿಂಗಾ ರೆಡ್ಡಿ ಕೇಳಿದ್ದಾರೋ ಇಲ್ಲವೋ, ಆದರೆ ಈ ಸಾಲುಗಳನ್ನಂತೂ ನಿಜ ಮಾಡುತ್ತಿದ್ದಾರೆ.

ಹೊಸ ವರ್ಷಾಚರಣೆಗಾಗಿ ಟೈಮ್ಸ್ ಕ್ರಿಯೇಷನ್ ಸಂಸ್ಥೆ ಡಿ.೩೧ರಂದು ರಾತ್ರಿ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ‘ಸನ್ನಿ ನೈಟ್’ ಹೆಸರಿನ ಕಾರ್ಯಕ್ರಮ ಏರ್ಪಡಿಸಿತ್ತು. ಆದರೆ, ಕೆಲವು ಸಂಘಟನೆಗಳು ಸನ್ನಿ ಲಿಯೋನ್‌ ಕುರಿತು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದೆಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದ್ದಾರೆ.

ಸನ್ನಿ ಲಿಯೋನ್‌ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ಅವರ ಹೆಸರಿನಲ್ಲಿ ಕಾರ್ಯಕ್ರಮ ನಡೆಸುತ್ತಿರುವುದು ದೇಶದ ಸಂಸ್ಕೃತಿಗೆ ಅಪಮಾನ ಎಂದು ಗೃಹ ಸಚಿವರು ವ್ಯಾಖ್ಯಾನಿಸಿದ್ದು, ನೆಲದ ಸಂಸ್ಕೃತಿ, ಕಲೆಗೆ ಧಕ್ಕೆ ಉಂಟು ಮಾಡಲಾಗಿದೆ ಎಂದಿದ್ದಾರೆ. ರಾಜ್ಯ ರಕ್ಷಣೆಯ ಹೊಣೆ ಹೊತ್ತ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರು ನೈತಿಕ ಪೊಲೀಸ್‌ಗಿರಿ ಆರಂಭಿಸಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ. ಭಾಷೆ, ಧರ್ಮ, ಸಂಸ್ಕೃತಿಗಳ ಬಗ್ಗೆ ಮಾತನಾಡುವ ಮೂಲಭೂತವಾದದ ನೆಲೆಯಲ್ಲಿ ಈ ಕಾರ್ಯಕ್ರಮಕ್ಕೆ ಸ್ಪಂದಿಸಿದ್ದಾರೆಂದು ಕಲಾವಿದರ ವಲಯದಲ್ಲಿ ಅಚ್ಚರಿ ವ್ಯಕ್ತವಾಗಿದೆ.

ಇದು ಸರಿಯಲ್ಲ ಎಂದ ನಿರ್ದೇಶಕ ಪ್ರೇಮ್

ಪ್ರೇಮ್ ಈ ಬೆಳವಣಿಗೆಗೆ ಕುರಿತು ಆಶ್ಚರ್ಯ ವ್ಯಕ್ತಪಡಿಸಿದರು. “ಆಕೆ ಒಬ್ಬ ನಟಿ. ನಟಿಸುವುದು, ರಂಜಿಸುವುದು ಆಕೆಯ ಕೆಲಸ. ಆಕೆ ಪೂರ್ವಾಶ್ರಮದಲ್ಲಿ ಪೋರ್ನ್ ಇಂಡಸ್ಟ್ರಿಯಲ್ಲಿ ಇದ್ದಿರಬಹುದು. ಈಗಲೂ ಅದನ್ನೇ ಗಮನದಲ್ಲಿಟ್ಟುಕೊಂಡು ಆಕೆಯ ಬಗ್ಗೆ, ಆಕೆಯ ವ್ಯಕ್ತಿತ್ವದ ಬಗ್ಗೆ ಯೋಚಿಸುವುದು ತಪ್ಪು. ಹಾಗೆ ತಕರಾರು ಇದ್ದಿದ್ದರೆ, ಭಾರತದೊಳಗೆ ಬಿಟ್ಟುಕೊಳ್ಳಬಾರದಿತ್ತು. ಆದರೆ ಆಗಿದ್ದೇನು? ಇವತ್ತು ದೇಶದಲ್ಲಿ ಅಸಂಖ್ಯ ಜನ ಆಕೆಯ ಅಭಿಮಾನಿಗಳಿದ್ದಾರೆ,” ಎನ್ನುತ್ತಾರೆ ಪ್ರೇಮ್.

ತಮ್ಮ ಚಿತ್ರದ ಚಿತ್ರೀಕರಣಕ್ಕೆ ಬಂದಾಗಲೂ ಇದೇ ಪ್ರಶ್ನೆಗಳು ಕೇಳಿಬಂದಿದ್ದವು. ಆಗ, "ಹಿಂದೆ ಆಗಿದ್ದು ಆಯ್ತು. ತಪ್ಪು ತಿದ್ದಿಕೊಳ್ಳೋಕೆ ದಾರಿ ಇರುವುದಿಲ್ಲವೇ?’’ ಎಂದು ಉತ್ತರಿಸಿದ್ದಾಗಿ ಪ್ರೇಮ್ ನೆನಪಿಸಿಕೊಂಡರು.

“ಸಚಿವರ ಗ್ರಹಿಕೆ ತಪ್ಪು. ಒಂದು ಕಾರ್ಯಕ್ರಮ, ಅಲ್ಲಿ ಹಾಡಿ ಕುಣಿದು ಹೋಗುತ್ತಾರೆ. ಆದರೆ ಸಿನಿಮಾ ನೋಡುವವರ ಸಂಖ್ಯೆ ದೊಡ್ಡದು. ಸನ್ನಿ ಲಿಯೋನ್‌ ಬಗ್ಗೆ ತಕರಾರಿದ್ದರೆ, ಆಕೆಯ ಚಿತ್ರಗಳನ್ನು ಬ್ಯಾನ್ ಮಾಡಲಿ. ಕಲಾವಿದರು ಕಲಾವಿದರಷ್ಟೇ. ಅವರನ್ನು ಬೇರೆ ಚೌಕಟ್ಟುಗಳಲ್ಲಿ ನೋಡಬಾರದು,’’ ಎಂಬುದು ಪ್ರೇಮ್ ನೇರಮಾತು.

ಸನ್ನಿಗೇ ಬೇಡದ ಪೂರ್ವಾಶ್ರಮ ಬೇರೆಯವರಿಗೆ ಏಕೆ?

ಯಾರೀ ಸನ್ನಿ ಲಿಯೋನ್‌? ಆಕೆಯ ನಿಜ ಹೆಸರು ಕರನ್ಜಿತ್ ಕೌರ್ ವೋಹ್ರಾ. ಪಂಜಾಬ್ ಮೂಲದ ತಂದೆ-ತಾಯಿಯ ಒಬ್ಬಳೇ ಮಗಳು. ಹುಟ್ಟಿ ಬೆಳೆದದ್ದು ಕೆನಡಾದಲ್ಲಿ. ಹದಿನೆಂಟನೇ ವಯಸ್ಸಿಗೆ ಪೋರ್ನ್ ಇಂಡಸ್ಟ್ರಿಗೆ ಕಾಲಿಟ್ಟಳು. ವಾರಕ್ಕೆ ೫೦ ಸಾವಿರ ಡಾಲರ್ ಸಂಪಾದಿಸುವ ವೃತ್ತಿ ಹರೆಯದಲ್ಲಿ ದೊಡ್ಡ ಆಕರ್ಷಣೆಯೇ ಆಗಿತ್ತು.

ಏಷ್ಯಾ ದ ಸ್ತ್ರೀ ಸೌಂದರ್ಯ ಹೊಂದಿದ್ದ ಸನ್ನಿ ಲಿಯೋನ್‌, ಅಮೆರಿಕದ ವಯಸ್ಕರನ್ನು ರಂಜಿಸುವ ಉದ್ಯಮದಲ್ಲಿ ವಿಶೇಷ ಸ್ಥಾನ ಗಿಟ್ಟಿಸಿಕೊಂಡಳು. ‘ಪೆಂಡ್ ಹೌಸ್’ ಹೆಸರಿನ ವಯಸ್ಕರ ಪತ್ರಿಕೆಯ ವರ್ಷದ ವ್ಯಕ್ತಿಯಾದಳು. ಪೋರ್ನ್ ಚಿತ್ರಗಳನ್ನು ನಿರ್ಮಿಸುವ ದೊಡ್ಡ ಸಂಸ್ಥೆ ವಿವಿಡ್ ಎಂಟರ್ಟೈನ್ಮೆಂಟ್ ಸೇರಿಕೊಂಡಳು. ಏಳೆಂಟು ವರ್ಷಗಳ ಅವಧಿಯಲ್ಲಿ ಜನಪ್ರಿಯತೆ ಜೊತೆಗೆ ಹಣವನ್ನೂ ಸಂಪಾದಿಸಿಕೊಂಡಳು.

ಕುಟುಂಬ ಹೇಗೆ ಒಪ್ಪಿತು ಎಂಬ ಸಹಜ ಪ್ರಶ್ನೆ ಏಳುತ್ತದೆ. ಆದರೆ, ಆಘಾತಕ್ಕೊಳಗಾದರೂ ಸನ್ನಿಯ ಆಯ್ಕೆಯ ಸ್ವಾತಂತ್ರ್ಯವನ್ನು ಅವರ್ಯಾರೂ ಪ್ರಶ್ನಿಸಲಿಲ್ಲ. ಹದಿನಾಲ್ಕು ವರ್ಷಗಳ ಅವಧಿಯಲ್ಲಿ ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಏರಿದ ಸನ್ನಿ, ವೈಯಕ್ತಿಕ ಬದುಕಿನಲ್ಲಿ ಸಂಬಂಧಿಕರು ಮತ್ತು ಸ್ನೇಹಿತರನ್ನು ಕಳೆದುಕೊಂಡರು.

ಮನ್ವಂತರವೂ ಕಾದಿತ್ತು

ಸನ್ನಿ ಭಾರತಕ್ಕೆ ಮೊದಲು ಬಂದಿದ್ದು ೨೦೦೫ರಲ್ಲಿ, ಎಂಟಿವಿ ಇಂಡಿಯಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ. ಇದಾದ ಮೇಲೆ ಆಕಸ್ಮಿಕವಾಗಿ ೨೦೧೧ರ ಬಿಗ್ಬಾಸ್ ರಿಯಾಲಿಟಿ ಶೋಗೆ ಪ್ರವೇಶ ಪಡೆದರು. ಆ ಹೊತ್ತಿನಲ್ಲಿ ಪೋರ್ನ್ ನಟಿಯೊಬ್ಬಳನ್ನು ಶೋಗೆ ಕರೆತಂದದ್ದು ವಿವಾದಕ್ಕೆ ಕಾರಣವಾಗಿತ್ತು. ವಾಹಿನಿಯವರಿಗೆ ಬೇಕಿದ್ದದ್ದೂ ಇದೇ ಆಗಿತ್ತು.

ಪೋರ್ನ್ ನಟಿಯಾಗಿದ್ದ ಸನ್ನಿಗೆ ನಟನೆಯ ಹೊಸ ಅವಕಾಶವೊಂದನ್ನು ಈ ಶೋ ತಂದುಕೊಟ್ಟಿತು. ಚಿತ್ರ ನಿರ್ದೇಶಕ ಮಹೇಶ್ ಭಟ್ ಶೋನ ಸೆಟ್‌ನಲ್ಲೇ ತಮ್ಮ ಚಿತ್ರದಲ್ಲಿ ನಟಿಸುವಂತೆ ಆಹ್ವಾನವಿತ್ತರು. ಸಿನಿಮಾ ಕೂಡ ಬಂತು; ಅದೇ, ಪೂಜಾ ಭಟ್ ನಿರ್ದೇಶನದ ‘ಜಿಸ್ಮ್ ೨.’

‘ಪೋರ್ನ್ ನಟಿ’ ಎಂಬ ಪೊರೆ ಕಳಚುವುದಕ್ಕೆ ಸನ್ನಿ ಲಿಯೋನಿ ಕಾಯುತ್ತಿದ್ದಾಗ ಸಿಕ್ಕ ಅವಕಾಶವಿದು. ಹಾಗಾಗಿ ಸಂತಸದಿಂದ ಒಪ್ಪಿಕೊಂಡು ಬಾಲಿವುಡ್‌ಗೆ ಕಾಲಿಟ್ಟರು. ಆದರೆ, ಮಡಿವಂತಿಕೆ ಎಂಬುದು ಆಕೆಯನ್ನು ಹಣಿಯಲು ಕಾದಿತ್ತು. ಸನ್ನಿ ಲಿಯೋನ್‌ ಅವರ ಹಳೆಯ ವೃತ್ತಿಯನ್ನು ಪದೇಪದೇ ನೆನಪಿಸಿ, ಆ ನೆಲೆಯಲ್ಲೇ ಆಕೆಯನ್ನು ಗ್ರಹಿಸುವ, ಆಕೆಯ ಆಯ್ಕೆ, ನಡೆಗಳನ್ನು ಅಳೆಯುವ ಕೆಲಸವನ್ನು ಮಾಧ್ಯಮದ ಮಂದಿ, ರಾಜಕಾರಣಿಗಳು, ಸಹ ಕಲಾವಿದರೂ ಮಾಡುತ್ತಲೇ ಬಂದಿದ್ದಾರೆ.

ದಿಲೀಪ್ ಮೆಹ್ತಾ ನಿರ್ಮಿಸಿ, ನಿರ್ದೇಶಿಸಿದ 'ಮೋಸ್ಟ್ಲಿ ಸನ್ನಿ' ಸಾಕ್ಷ್ಯಚಿತ್ರವು ಸನ್ನಿ ಲಿಯೋನ್‌ ವೃತ್ತಿ ಮತ್ತು ಬದುಕನ್ನು ಚಿತ್ರಿಸುತ್ತದೆ. ಇಲ್ಲಿ ಸನ್ನಿ ಲಿಯೋನ್‌ ವಿಷಯದಲ್ಲಿ ಭಾರತೀಯರು ಪ್ರತಿಕ್ರಿಯಿಸಿದ ಬಗೆಯನ್ನು, ಸಂಸ್ಕೃತಿ ಮತ್ತು ನಟಿಯ ಹಿನ್ನೆಲೆಯಲ್ಲಿ ಚರ್ಚಿಸಿದವರ ಆಷಾಢಭೂತಿಯನ್ನು ಬೆಳಕಿಗೆ ತರಲಾಗಿದೆ.

"ನಮ್ಮದು ಕಾಮಸೂತ್ರದ ನಾಡು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ಈಗ ಸಂಪ್ರದಾಯವಾದಿಗಳಂತೆ, ನೈತಿಕತೆಯ ವಾರಸುದಾರರಂತೆ, ಕಾಲ ಮತ್ತು ಅಗತ್ಯಕ್ಕೆ ತಕ್ಕಂತೆ ವಾದ ಮಾಡಿ ನಿಷೇಧ, ಬಹಿಷ್ಕಾರಗಳ ನಿರ್ಧಾರಗಳನ್ನು ಹೇರುತ್ತೇವೆ," ಎಂದು ಸನ್ನಿ ಲಿಯೋನ್‌ ಬದುಕು ಪರಿಚಯಿಸಲು ಪೀಠಿಕೆ ಹಾಕುತ್ತದೆ ಆ ಸಾಕ್ಷ್ಯಚಿತ್ರ.

ಬಿಜೆಪಿ ಅಥವಾ ಅದರ ಅಂಗಪಕ್ಷಗಳಂತೆ ಇರುವ ಸಂಘಟನೆಗಳು ನೈತಿಕತೆ, ಸಂಸ್ಕೃತಿಯ ಹೆಸರಿನಲ್ಲಿ ದಾಳಿ ಮಾಡುವುದು, ಪ್ರತಿಭಟಿಸುವುದು, ನಿಷೇಧ ಹೇರುವುದು ಮಾಡುತ್ತವೆ. ಆದರೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಸನ್ನಿ ಲಿಯೋನ್‌ ಕಾರ್ಯಕ್ರಮವನ್ನು ಸಂಸ್ಕೃತಿ ಕಾರಣಕ್ಕೆ ನಿರಾಕರಿಸುವ ಮೂಲಕ ಸಾಂಸ್ಕೃತಿಕ ಮೂಲಭೂತವಾದದತ್ತ ವಾಲಿದಂತೆ ಕಾಣುತ್ತಿದೆ.

ಇದೇ ಮೊದಲಲ್ಲ!

ಸನ್ನಿ ಲಿಯೋನ್‌ ಹಿನ್ನೆಲೆಯನ್ನು ಮುಂದಿಟ್ಟು ಅನೇಕರು ಆಕೆಯನ್ನು ಟೀಕಿಸಿದ್ದಾರೆ, ವ್ಯಂಗ್ಯವಾಡಿದ್ದಾರೆ, ಅವಮಾನಿಸಿದ್ದಾರೆ. ಆದರೆ, ಅದೆಲ್ಲವನ್ನೂ ದಿಟ್ಟವಾಗಿ ಉತ್ತರಿಸಿದಾಕೆ ಸನ್ನಿ ಲಿಯೋನಿ. ಪತ್ರಕರ್ತ ಭೂಪೇಂದ್ರ ಚೌಬೆ ೨೦೧೬ರಲ್ಲಿ ಮೆಹಬೂಬ್ ಸ್ಟುಡಿಯೋದಲ್ಲಿ ಸಂದರ್ಶನ ನಡೆಸಿದರು. ಆಗ ಅವರು ಕೇಳಿದ ಪ್ರಶ್ನೆಗಳಲ್ಲಿ ಕೆಲವು ಹೀಗಿವೆ:

  1. ನಿಮ್ಮ ಅತಿ ದೊಡ್ಡ ಪಶ್ಚಾತ್ತಾಪ ಯಾವುದು?
  2. ಸಾಮಾನ್ಯವಾದ ಕುತೂಹಲ ಹಾಗೂ ನಿಮ್ಮ ಬಗ್ಗೆ ಜನ ಕೆಟ್ಟದಾಗಿ ಮಾತನಾಡಿದಾಗ ನಿಮಗೆ ಬೇಜಾರಾಗುತ್ತಾ?
  3. ಆಮೀರ್ ಖಾನ್ ನಿಮ್ಮೊಂದಿಗೆ ನಟಿಸಲು ಇಷ್ಟಪಡುತ್ತಾರಾ? ನಿಮಗೆ ಆಮೀರ್ ಖಾನ್ ಜೊತೆ ಕೆಲಸ ಮಾಡಲು ಇಷ್ಟವೇ? ಅವರು ಒಪ್ಪಿಕೊಳ್ಳುವರೇ?
  4. ನಿಮ್ಮ ಭೂತಕಾಲ ನಿಮ್ಮನ್ನು ಕಾಡುತ್ತದೆ ಎಂದು ಅನ್ನಿಸುತ್ತದೆಯೇ?
  5. ಮತ್ತೆ ನಾನು ನಿಮ್ಮನ್ನು ಕಳೆದ ಕಾಲಕ್ಕೆ ಕರೆದುಕೊಂಡು ಹೋಗಬಲ್ಲೆನಾದರೆ, ನೀವು ಏನು ಮಾಡುತ್ತಿದ್ದಿರೋ, ಅದನ್ನೇ ಮುಂದುವರಿಸುವಿರಾ?
  6. ಮುಂದಿನ ದಿನಗಳಲ್ಲಿ ಸೀರೆ ಉಟ್ಟು, ಮೈ ಪೂರ್ಣ ಮುಚ್ಚಿಕೊಂಡ ಸನ್ನಿ ಲಿಯೋನ್‌ ಇರುವ ಚಿತ್ರಗಳನ್ನು ಕಾಣಬಹುದೇ?
  7. ನಿಮ್ಮನ್ನು ನೀವು ಒಬ್ಬ ನಟಿ ಎಂದು ಪರಿಗಣಿಸುತ್ತೀರೋ ಅಥವಾ ಐಟಮ್ ಗರ್ಲ್ ಎಂದು ಪರಿಗಣಿಸುತ್ತೀರೋ?
  8. ನೀವು ಭಾರತಕ್ಕೆ ಬಂದ ಮೇಲೆ ದೇಶದಲ್ಲಿ ನೀಲಿಚಿತ್ರಗಳನ್ನು ನೋಡುವವರ ಸಂಖ್ಯೆ ಹೆಚ್ಚಿದೆ. ನೀಲಿಚಿತ್ರಗಳನ್ನು ನೋಡುವ ಜಗತ್ತಿನ ಎರಡನೇ ಅತಿ ದೊಡ್ಡ ದೇಶ ಇಂಡಿಯಾ ಎನಿಸಿಕೊಂಡಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?
  9. ಭಾರತ ನೈತಿಕವಾಗಿ ಭ್ರಷ್ಟವಾಗಲು ನೀವು ಕಾರಣ ಎಂದು ಸಂಸದರೊಬ್ಬರು ಹೇಳಿದ್ದಾರೆ. ಏನು ಹೇಳುತ್ತೀರಿ?
  10. ನಿಮ್ಮನ್ನು ಸಂದರ್ಶನ ಮಾಡುವ ಮೂಲಕ ನಾನು ನೈತಿಕವಾಗಿ ಭ್ರಷ್ಟನಾಗುತ್ತಿದ್ದೇನೆಯೇ?

ಭೂಪೇಂದ್ರ ಚೌಬೆ ಈ ಸಂದರ್ಶನದಲ್ಲಿ ಯಾವುದೇ ರೀತಿಯಲ್ಲಿ ಸ್ತ್ರೀ ಘನತೆಯನ್ನು ಗೌರವಿಸಲಿಲ್ಲ. ಸಂದರ್ಶನ ಮಾಡುವ ವ್ಯಕ್ತಿಗೆ ತೋರಬಹುದಾದ ಕನಿಷ್ಠ ಸೌಜನ್ಯವನ್ನೂ ತೋರಲಿಲ್ಲ. ಹಾಗಾಗಿ ಈ ಸಂರ್ದಶನ ವಿವಾದ ಹುಟ್ಟುಹಾಕಿತು. ಸಿಪಿಐ ನಾಯಕರೊಬ್ಬರು, “ಸನ್ನಿ ಲಿಯೋನ್‌ ಇರುವ ಕಾಂಡೋಮ್ ಜಾಹೀರಾತಿನಿಂದಾಗಿ ಅತ್ಯಾಚಾರ ಹೆಚ್ಚಾಗಿವೆ,” ಎಂದು ಹೇಳಿಕೆ ನೀಡಿದರು!

ಇದನ್ನೂ ಓದಿ : ಬುಕ್‌ಮಾರ್ಕ್‌ | ನವಾಝುದ್ದೀನ್‌ ಆತ್ಮಕತೆ | ಅನುರಾಗ್‌ ಕಣ್ಣಲ್ಲಿ ನಾನು ಕಳ್ಳ!

ಇದಾವ ಸಂಸ್ಕೃತಿ?

ಸನ್ನಿ ಲಿಯೋನ್‌ ಕಾರ್ಯಕ್ರಮ ವಿರೋಧಿಸಿ ರಕ್ಷಣಾ ವೇದಿಕೆ ಯುವಸೇನೆ ಪ್ರತಿಭಟನೆ ನಡೆಸಿದ್ದಕ್ಕೆ ರಾಮಲಿಂಗಾ ರೆಡ್ಡಿಯವರು ‘ಸನ್ನಿಯ ಕಾರ್ಯಕ್ರಮ ಸಂಸ್ಕೃತಿ ವಿರೋಧಿ’ ಎಂದು ಘೋಷಿಸಿಬಿಟ್ಟರು. ಸಂಘಟನೆಯೊಂದರ ಒತ್ತಡಕ್ಕೆ ಮಣಿಯುವಷ್ಟು ಗೃಹ ಖಾತೆ ದುರ್ಬಲವಾಯಿತೇ? ಸಂಘಟನೆಯೊಂದರ ನೈತಿಕ ಪೊಲೀಸ್‌ಗಿರಿಗೆ ಈ ಮೂಲಕ ಬೆಂಬಲಿಸಿದಂತಾಗುತ್ತದೆ ಎಂದು ಸಚಿವರು ಯಾಕೆ ಭಾವಿಸಲಿಲ್ಲ? ಅಥವಾ ಸರ್ಕಾರ ಈಗ ಇದೇ ನಿಲುವನ್ನು ಅನುಸರಿಸಲು ಮುಂದಾಗಿದೆಯೇ?

ಸದ್ಯ ಕಾರ್ಯಕ್ರಮದ ಆಯೋಜಕರಾದ ಟೈಮ್ಸ್ ಕ್ರಿಯೇಷನ್ ಸಂಸ್ಥೆಯು ಸರ್ಕಾರದ ನಿಲುವಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದೆ. ಸರ್ಕಾರದ ನಡೆಯನ್ನು ಕೋರ್ಟ್ ಹೇಗೆ ನೋಡುತ್ತದೆ ಎಂಬ ಕುತೂಹಲ ಹುಟ್ಟಿದೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More