ದೇಶದ ಮೊದಲ ಮುಸ್ಲಿಂ ಶಿಕ್ಷಕಿ ಯಾರು ಗೊತ್ತಾ? ಇಲ್ಲಿದೆ ಅವರ ಕುರಿತ ಮಾಹಿತಿ

ಮೇಲ್ವರ್ಗದ ಪುರುಷರಿಗೆ ಮಾತ್ರ ಶಿಕ್ಷಣ ಕಲಿಯುವ ಸ್ವಾತಂತ್ರ್ಯ ಎಂಬ ಅಲಿಖಿತ ನಂಬಿಕೆಯ ಕಾಲವದು. ಅದರಲ್ಲೂ ಮುಸಲ್ಮಾನ್ ಹೆಣ್ಣುಮಗಳೊಬ್ಬಳು, ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಸಮಾಜದ ಮುಖ್ಯವಾಹಿನಿಗೆ ಬಂದಾಗ ಪರಿಸ್ಥಿತಿ ಹೇಗಿರಬಹುದು? ಇದನ್ನೆಲ್ಲ ಗೆದ್ದವರೇ ಫಾತಿಮಾ

ತಳವರ್ಗದ ಜನರಿಗೆ ಹಾಗೂ ಮಹಿಳೆಯರಿಗೆ ಶಿಕ್ಷಣ ನೀಡಲು ಜೀವನವನ್ನು ಮುಡಿಪಾಗಿಸಿಟ್ಟ ದಿಟ್ಟ ಮಹಿಳೆ ಸಾವಿತ್ರಿ ಬಾಯ್ ಫುಲೆ ಬಗ್ಗೆ ನಾವು ಇತ್ತೀಚೆಗೆ ಬರೆದಿದ್ದೆವು. ಆದರೆ ಸಾವಿತ್ರಿ ಬಾಯ್ ಫುಲೆಯ ಶಿಕ್ಷಣ ಕ್ರಾಂತಿಯ ಯಶಸ್ಸಿಗೆ ಕಾರಣವಾಗಿದ್ದು ಯಾರೂ ಗೊತ್ತಾ? ಇದೇ ಪಾತೀಮಾ ಶೇಖ್. 19ನೇ ಶತಮಾನದ ಮೊದಲ ಮುಸಲ್ಮಾನ್ ಶಿಕ್ಷಕಿಯಾದ ಫಾತಿಮಾ ಶೇಖ್ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟವರು. ಮಹಿಳೆಯೆಂದರೆ ಪುರುಷನ ಆಶ್ರಯದಲ್ಲಿ ನಾಲ್ಕು ಗೋಡೆಗಳ ನಡುವೆ ಇರಬೇಕು ಎಂಬ ಮನಸ್ಥಿತಿಯನ್ನು ಹಿಮ್ಮೆಟ್ಟಿಸಿದ ಸಾವಿತ್ರಿಯವರೊಂದಿಗೆ ಕೈಜೋಡಿಸಿದ್ದು ಫಾತಿಮಾ ಶೇಖ್.

ಇವರು ಆಧುನಿಕ ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿಯೂ ಹೌದು. ತನ್ನ ಸಹೋದರ ಉಸ್ಮಾನ್ ಶೇಖ್ ಬೆಂಬಲದಿಂದ ಸಾಮಾಜಿಕ ಬದಲಾವಣೆಗೆ ಹೋರಾಡಿದ ದಿಟ್ಟ ಮಹಿಳೆ. ಫಾತಿಮಾ ಶೇಖ್, ಸಾವಿತ್ರಿಬಾ ಫುಲೆಯೊಂದಿಗೆ ಕೈಜೋಡಿಸಿ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೆ ಬರೆದರು.

ಭಾರತದಲ್ಲಿ ಶತಮಾನಗಳಿಂದ ತುಳಿತಕ್ಕೊಳಗಾಗಿ ಶಿಕ್ಣಣದಿಂದ ವಂಚಿತರಾದವರಿಗೆ, ಮೊಟ್ಟಮೊದಲ ಬಾರಿಗೆ ಶಾಲೆಗಳನ್ನು ತೆರೆದು ಶಿಕ್ಷಣ ನೀಡಿದ ಜ್ಯೋತಿಬಾ ಮತ್ತು ಸಾವಿತ್ರಿ ಫುಲೆ ವಿರುದ್ಧ ಸಮಾಜದ ಮೇಲ್ಪರ್ಗದ ಜನ ತಿರುಗಿಬಿದ್ದರು. ಫುಲೆ ದಂಪತಿಗಳ ಸಾಮಾಜಿಕ ಕಾರ್ಯಕ್ಕೆ ಕುಟುಂಬ ಹಾಗೂ ಸಮುದಾಯದಿಂದಲೂ ವಿರೋಧ ವ್ಯಕ್ತವಾಯಿತು. ಮಾಡುತ್ತಿರುವ ಕೆಲಸವನ್ನು ನಿಲ್ಲಿಸಿ, ಇಲ್ಲ ಊರು ಬಿಟ್ಟು ತೊಲಗಿ ಎಂಬ ಬೆದರಿಕೆಗಳು ಬಂದವು. ಹೀಗಾಗಿ ಎರಡನೇ ಮಾರ್ಗವನ್ನು ಆಯ್ಕೆ ಮಾಡಿದ ಫುಲೆ ದಂಪತಿಗಳ ಹೋರಾಟಕ್ಕೆ ನೆರವಾಗಿದ್ದು ಪುಣೆಯ ಉಸ್ಮಾನ್ ಶೇಖ್.

ಊರು ಬಿಟ್ಟು ಹೊರಬಂದ ಜ್ಯೋತಿಬಾ ಮತ್ತು ಸಾವಿತ್ರಿ ಪುಲೆ ದಂಪತಿಗಳಿಗೆ ಪುಣೆಯ ತನ್ನ ನಿವಾಸದಲ್ಲಿ ಸೂರು ಕಲ್ಪಿಸಿದ ಉಸ್ಮಾನ್ ಶೇಖ್, ತನ್ನ ಮನೆಯ ಆವರಣದಲ್ಲಿ ಶೋಷಿತ ವರ್ಗಕ್ಕೆ ಶಿಕ್ಷಣ ನೀಡಲು ಅವಕಾಶ ಮಾಡಿಕೊಟ್ಟರು. ಉಸ್ಮಾನ್ ಶೇಖ್ ಸಹೋದರಿ ಫಾತಿಮಾ ಶೇಖ್ ಸಹಾಯದಿಂದ ಫುಲೆ ದಂಪತಿಗಳು 1848ರಲ್ಲಿ ಶಾಲೆಯನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಬಂದ ಅನೇಕ ತೊಂದರೆಗಳನ್ನು ಹಾಗೂ ಫುಲೆ ದಂಪತಿಗಳ ಕೊಲೆ ಯತ್ನವನ್ನು ಫಾತಿಮಾ ಶೇಖ್ ಜಾಣ್ಮೆಯಿಂದ ತಪ್ಪಿಸಿದ್ದರು ಕೂಡ.

18ನೇ ಶತಮಾನದಲ್ಲಿ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದು ಬಿಡಿ, ಶಿಕ್ಷಣದ ಬಗ್ಗೆ ಮಾತಾನಾಡುವುದೇ ಮಹಾಪಾಪ ಎಂಬ ನಂಬಿಕೆ ಇತ್ತು. ಅದರಲ್ಲೂ ಸಂಪ್ರದಾಯವಾದಿಗಳ ಬಿಗಿಕಟ್ಟಲೆಗಳಲ್ಲಿ ನಲುಗುತ್ತಿದ್ದ ಮುಸಲ್ಮಾನ್ ಧರ್ಮದಲ್ಲಿ, ಯುವತಿಯೊಬ್ಬಳು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುತ್ತಾಳೆ ಎಂದರೆ ಆಕೆಗೆ ಯಾವ ರೀತಿಯ ಬೆಂಬಲ ಸಿಗಬಹುದು ಎಂಬುದು ಕಲ್ಪನೆಗೂ ನಿಲುಕದ ವಿಚಾರ. ಕುಟುಂಬದ ಹಾಗೂ ಸಮಾಜದ ತೀವ್ರ ವಿರೋಧ, ಕಟ್ಟುಪಾಡುಗಳ ಮಧ್ಯೆಯೇ ಹೆಣ್ಣುಮಕ್ಕಳ ಹಾಗೂ ಶೋಷಿತ ವರ್ಗಕ್ಕೆ ಧ್ವನಿಯಾದವರು ಫಾತಿಮಾ ಶೇಖ್.

ಸಾವಿತ್ರಿ ಫುಲೆ ಮತ್ತು ಫಾತಿಮಾ ಶೇಖ್ ಪುಣೆಯಲ್ಲಿ ಮೊದಲ ಬಾಲಕಿಯರ ಶಾಲೆಯನ್ನು ಆರಂಭಿಸಿದರು. ಜ್ಯೋತಿಬಾ ಸ್ಥಾಪಿಸಿದ ಶಾಲೆಗಳಿಗೆ ಫಾತಿಮಾ ಮತ್ತು ಸಾವಿತ್ರಿಯವರು ಆಗಮಿಸುವಾಗ ಅನುಭವಿಸಿದ ಹಿಂಸೆ ಅಷ್ಟಿಷ್ಟಲ್ಲ. ಹಲವು ಬಾರಿ ಇಬ್ಬರಿಗೂ ಕಲ್ಲಿನಿಂದ ಹೊಡೆಯಲಾಯಿತು. ಅವಮಾನಿಸಲಾಯಿತು. ಆದರೆ ಈ ಎಲ್ಲ ಅವಮಾನ ಹಾಗೂ ಬೆದರಿಕೆಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳದ ಇಬ್ತಬರೂ ತಮ್ಮ ಸಾಮಾಜಿಕ ಕಾರ್ಯವನ್ನು ಮುಂದುವರಿಸಿದರು.

ಇದನ್ನೂ ಓದಿ : ಸಾವಿತ್ರಿಬಾಯಿ ಫುಲೆ ಜನ್ಮದಿನವನ್ನು ‘ಶಿಕ್ಷಣ ದಿನ’ ಎಂದು ಘೋಷಿಸಿದರೆ ಹೇಗೆ?

ಫಾತಿಮಾ ಶೇಖ್ ಕಾರ್ಯಕ್ಕೆ ಹಿಂದೂ ಹಾಗೂ ಮುಸ್ಲಿಂ ಎರಡು ಸಮುದಾಯದಿಂದಲೂ ವಿರೋಧ ವ್ಯಕ್ತವಾಯಿತು. ಮೇಲ್ಪರ್ಗದವರಿಗೆ ಮಾತ್ರ ಶಿಕ್ಷಣ ಕಲಿಯುವ ಸ್ವಾತಂತ್ರ್ಯವಿರುತ್ತದೆ ಎಂಬ ಅಲಿಖಿತ ನಂಬಿಕೆಯ ಕಾಲವದು. ಹೆಣ್ಣುಮಕ್ಕಳು ಶಾಲೆಯ ಆವರಣ ಪ್ರವೇಶಿಸುವುದೇ ಮಹಾಪಾಪ ಎನ್ನುವಂತಹ ಯೋಚನೆಯಿದ್ದ ದಿನಗಳವು. ಇಂತಹ ಯೋಚನೆಯನ್ನು ಬದಲಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಅದರಲ್ಲೂ ಮುಸ್ಲಲ್ಮಾನ ಹೆಣ್ಣುಮಗಳೊಬ್ಬಳು, ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಸಮಾಜದ ಮುಖ್ಯವಾಹಿನಿಗೆ ಬರುತ್ತಾಳೆಂದರೆ ಆ ಸಮಾಜದ ವಿರೋಧ ಯಾವ ರೀತಿಯಲ್ಲಿರಬಹುದು ಎಂಬುದು ಕಲ್ಪನೆಗೂ ನಿಲುಕದ ಮಾತು. ಆದರೆ ಈ ವಿರೋಧಗಳನ್ನು ಲೆಕ್ಕಿಸದ ಫಾತಿಮಾ ಶೇಖ್, ಹೆಣ್ಣುಮಕ್ಕಳನ್ನು ಶಾಲೆಗೆ ಕರೆತರಲು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಸಂಪ್ರದಾಯವಾದಿಗಳ ಮನವೊಲಿಸಿ, ತಳಸಮುದಾಯ, ಅಲ್ಪಸಂಖ್ಯಾತರು, ಅಸ್ಪೃಶ್ಯರು ಹಾಗೂ ಮಹಿಳೆಯರ ಶಿಕ್ಷಣ ಹಾಗೂ ಅವರ ಅಭ್ಯುದಯಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡರು.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More