ಜೇನು ಸಾಕಾಣಿಕೆಯಿಂದ ಕೃಷಿಗೂ ಚೈತನ್ಯ ತುಂಬುತ್ತಿರುವ ಟೆಕ್ಕಿ

ಪರಾಗ ಸ್ಪರ್ಶಕ್ಕೆ ಜೇನುಗಳನ್ನು ಬಾಡಿಗೆ ಕೊಡುವ ಪರಿಸ್ಥಿತಿ ಭಾರತದಲ್ಲಿದೆ ಎಂದರೆ ಇಲ್ಲಿನ ಕೃಷಿ ಓಘ ಎಂಥದ್ದು ಎಂದು ಊಹಿಸಬಹುದು. ಕೀಟನಾಶಕ ಸಿಂಪಡನೆಯಿಂದ ಜೇನು ಸಂತತಿ ನಾಶವಾಗುತ್ತಿದೆ. ಗೂಡು ಕಟ್ಟಲು ಕಾಡೂ ಇಲ್ಲವಾಗಿದೆ. ಹೀಗಾಗಿ ಪರಿಸರ ಸ್ನೇಹಿ ಜೇನು ಕೃಷಿಯತ್ತ ಹೊರಳಿದ್ದಾರೆ ಈ ಟಿಕ್ಕಿ

ಜೇನು ಹುಳಗಳಿಂದ ತುಪ್ಪವೊಂದೇ ಲಾಭ ಎಂದು ತಿಳಿದವರೇ ಹೆಚ್ಚು. ಆದರೆ ಕೃಷಿ ಇಳುವರಿ ಅಧಿಕವಾಗಲು ಕೂಡ ಜೇನುಹುಳಗಳ ಪಾತ್ರ ಪ್ರಮುಖವಾಗುತ್ತದೆ ಎಂಬುದು ಇಂದಿನ ಪೀಳಿಗೆಗೆ ಅರ್ಥವಾಗಬೇಕಿದೆ. ಮಿಶ್ರ ಕೃಷಿ ಸಂಸ್ಕೃತಿಯನ್ನು ಅನುಸರಿಸುವಂತಹ ಭಾರತ ನೆಲದಲ್ಲಿ ಈಗ ಹಲವಾರು ಬದಲಾವಣೆ ಬಂದಿದೆ. ಹೊಂದಾಣಿಕೆಯೊಂದಿಗೆ ಹೋಗುವ ಪರಿಸರ ಚಕ್ರದಲ್ಲಿ ಜೇನುಹುಳಗಳ ಪಾತ್ರವೂ ಕೂಡ ಮುಖ್ಯ.

ಭಾರತದಲ್ಲಿ ಸಣ್ಣ ರೈತರ ಪ್ರಮಾಣವೇ ಜಾಸ್ತಿ. ಎರಡರಿಂದ ನಾಲ್ಕು ಎಕರೆಯಷ್ಟು ಭೂಮಿಯಲ್ಲಿ ನಾಲ್ಕಾರು ವಿಧದ ಬೆಳೆಗಳನ್ನು ಬೆಳೆಯುತ್ತಿದ್ದರು. ಈ ವೈವಿಧ್ಯವೇ ಜೇನುಹುಳಗಳಿಗೆ ಲಾಭವಾಗಿತ್ತು. ಜೇನುಹುಳಗಳು ಒಂದು ಕಿ.ಮೀ ದೂರದವರೆಗೆ ಮಾತ್ರ ಸುತ್ತುತ್ತಿರುತ್ತವೆ. ಅದೇ ಒಂದು ಎಕರೆ ಪ್ರದೇಶದಲ್ಲಿರುವ ಬೆಳೆಗಳ ಹೂವಿನ ಮಕರಂದವನ್ನು ಹೀರಿ ಜೇನುಗಳು ಬದುಕುತ್ತಿದ್ದವು.

ಹೂವು ಬಿಡುವ ಗಿಡಗಳು ಜೇನು ಹಾಗೂ ಇತರೆ ದುಂಬಿಗಳಿಲ್ಲದೇ ಬದುಕುವುದು ಸಾಧ್ಯವಿಲ್ಲ. ಜೇನುಗಳು ಕೂರುವ ಗಿಡಗಳು ಹೆಣ್ಣು ಅಥವಾ ಗಂಡಾಗಲಿ ಮಕರಂದ ಹೀರುವಾಗ ಅಲ್ಲಿನ ಪರಾಗ ಕಣ (pollen grains) ಗಳು ಜೇನು ಹುಳಗಳ ಮೈಗೆ ತಾಗುತ್ತವೆ. ಸಹಜವಾಗಿ ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹಾರುವ ಜೇನುಗಳು ಮಕರಂದ ಹೀರುವ ಕಾರಣದಲ್ಲಿ ಅದರ ಮೈಗೆ ತಾಗಿದ ಪರಾಗ ಕಣಗಳು ಹೆಣ್ಣು ಹೂವಿನ ಗಿಡಕ್ಕೆ ತಾಗಿ ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ನಡೆಸುತ್ತವೆ.

ಹೆಚ್ಚು ಮಕರಂದ ಸಿಗುವ ಗಿಡಗಳಿಗೆ ಜೇನುಗಳು ಹೋಗುವುದರಿಂದ ಸಹಜವಾಗಿ ಆ ಬೆಳೆಗಳ ಇಳುವರಿ ಜಾಸ್ತಿ ಬರುತ್ತದೆ. ಹೂವು ಬಿಡುವ ಹಾಗೂ ಜಾಸ್ತಿ ಮಕರಂದ ದೊರೆಯುವ ಬೆಳೆಗಳಿಗೆ ಸಾಮಾನ್ಯವಾಗಿ ಇಳುವರಿ ಹೆಚ್ಚು ಬರುತ್ತದೆ. ಇಂದಿನ ಕೃಷಿ ವ್ಯವಸ್ಥೆ ಹೀಗಿಲ್ಲ. ಏಕ ಸಂಸ್ಕೃತಿ ಕೃಷಿ ಭಾದಿಸಿದಾಗಿನಿಂದ ಕೃಷಿ ಇಳುವರಿ ಜೇನುತುಪ್ಪದ ಇಳುವರಿ ಹಾಗೂ ಜೇನು ಸಂತತಿ ನಾಶವಾಗಲು ಕಾರಣವಾಗಿದೆ.

ಜೇನು ಸಂತತಿ ನಾಶವಾಗಲು ಇದೊಂದೇ ಕಾರಣವಲ್ಲ. ಕೃಷಿಯಲ್ಲಿ ಶೀಘ್ರ ಇಳುವರಿ ಹೊಂದಲು ಹಾಗೂ ರೋಗಬಾಧೆ ನಿಲ್ಲಿಸಲು ರಾಸಾಯನಿಕ ಮಾರ್ಗವನ್ನು ಕಂಡುಕೊಂಡಿರುವುದೂ ಕಾರಣವಾಗಿದೆ. ಪರಾಗ ಸ್ಪರ್ಶಕ್ಕೆ ಜೇನುಗಳನ್ನು ಬಾಡಿಗೆ ಕೊಡುವ ಪರಿಸ್ಥಿತಿ ಭಾರತದಲ್ಲಿದೆ ಎಂದರೆ ಕೃಷಿ ವ್ಯವಸ್ಥೆಯ ಓಘ ಎಂಥದ್ದು ಎಂದು ಊಹಿಸಬಹುದು. ಕೀಟನಾಶಕ (pesticide) ಹಾಗೂ ಕಳೆನಾಶಕ (herbicides) ಸಿಂಪಡನೆಯಿಂದ ಜೇನು ಸಂತತಿ ನಾಶವಾಗುತ್ತಿದೆ. ಗೂಡು ಕಟ್ಟಲು ಕಾಡು ಕೂಡ ನಾಶವಾಗುತ್ತಿದೆ ಆದರೆ ಅವುಗಳು ಕಟ್ಟಡಗಳ ಮೂಲೆಯನ್ನೋ ಅಥವಾ ಬೇರೆ ದಾರಿಗಳನ್ನು ಹುಡುಕಿಕೊಂಡು ಪರಿಸರದ ಜೊತೆ ಹೊಂದಾಣಿಕೆಯಿಂದ ಹೋಗುತ್ತಿವೆ. ಇದು ಜೇನು ಹುಳಗಳ ಸಮಸ್ಯೆಯಾದರೆ ಜನರಿಗೆ ದೊರೆಯುವ ಜೇನುತುಪ್ಪದಲ್ಲೂ ಸಮಸ್ಯೆಯಿದೆ.

ಮಾರುಕಟ್ಟೆಯಲ್ಲಿ ಸಿಗುವ ತುಪ್ಪ ಶುದ್ದ ಎಂದು ನಂಬಿ ಬಳಸುತ್ತಿದ್ದಾರೆ ನಾಗರಿಕರು. ಇದಕ್ಕೆ ಕಾರಣ ಅಗ್‌ಮಾರ್ಕ್ ಸರ್ಟಿಫಿಕೇಶನ್ ಪ್ರಕ್ರಿಯೆಗಳು ತುಂಬಾ ಹಳೆಯದ್ದು. ಫ್ರಕ್ಟೋಸ್ ಗ್ಲುಕೋಸ್ ಎಂಬ ಸ್ವಾಭಾವಿಕ ಸಕ್ಕರೆಯ ಅಂಶಗಳು ಜೇನು ತುಪ್ಪದಲ್ಲಿರುತ್ತವೆ. ಅವುಗಳನ್ನು ಮಾತ್ರ ಅಗ್‌ಮಾರ್ಕ್ ಪರೀಕ್ಷೆಯ ಸಂದರ್ಭದಲ್ಲಿ ತೋರಿಸಿ ಪಾಸ್ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಕಲಬೆರಿಕೆ ಅತಿಯಾಗುತ್ತಿದೆ. ಪೊಲನ್ ಇರದ ತುಪ್ಪವನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಸಾಮಾನ್ಯರಿಗೆ ಈ ಅಂಶಗಳು ಅರಿವಿಗಿಲ್ಲ.

ಸರ್ಕಾರವೂ ಕೂಡ ಈ ಅವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗಿಲ್ಲ. ಸರ್ಕಾರ ಜೇನು ಕೃಷಿಯಲ್ಲಿ ಸುಧಾರಣೆಗಳನ್ನು ಅಷ್ಟಾಗಿ ತಂದಿಲ್ಲ. ತೋಟಗಾರಿಕಾ ಇಲಾಖೆಯಲ್ಲಿ ಜೇನು ಕೃಷಿಯಲ್ಲಿ ಬರುವ ರೋಗಗಳು ಹಾಗೂ ಇನ್‌ಶುರೆನ್ಸ್ ಸಂಬಂಧಿಸಿದಂತೆ ಯಾವುದೇ ಸಹಾಯವಿಲ್ಲ. ಆದರೆ ಆರಂಭಿಕ ಕೃಷಿ ಉತ್ಸಾಹಿಗಳಿಗೆ ಪ್ರೋತ್ಸಾಹಧನ ಕೊಡುವ ಯೋಜನೆ ಇದೆ. ಕೇಂದ್ರ ಸರ್ಕಾರವು ಕೂಡ ಹನಿ ಮಿಶನ್‌ನನ್ನು ಆರಂಭಸಿದೆ. ಎಸ್‌ಸಿ ಎಸ್‌ಟಿ ಜನರಿಗೆ 90% ಹಾಗೂ ಜನರಲ್ ಮೆರಿಟ್ ಅವರಿಗೆ 40% ಸಬ್ಸಿಡಿಯನ್ನು ನೀಡಿ ಹತ್ತು ಜೇನು ಡಬ್ಬಿಗಳನ್ನು ನೀಡಲಾಗುತ್ತಿದೆ. ಅರಣ್ಯ ಇಲಾಖೆಯಿಂದ ಆದಿವಾಸಿಗಳಿಗೆ ಜೇನು ಕೃಷಿ ಪ್ರೋತ್ಸಾಹಿಸಲು ಉಚಿತ ಐದು ಡಬ್ಬಿಗಳನ್ನು ವಿತರಿಸಲಾಗುತ್ತಿದೆ.

ವಿದೇಶದಲ್ಲಿ ಪೊಲನ್ ಹಾಗೂ ಜೇನು ಹುಳಗಳ ಪರೀಕ್ಷೆಗೆಂದು ವ್ಯವಸ್ಥಿತ ಲ್ಯಾಬ್ ಕಾರ್ಯರೂಪದಲ್ಲಿದೆ. ಭಾರತದಲ್ಲೂ ಕೂಡ ಈ ಹಿಂದೆ Central Food Technological Research Institute ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಈಗಿಲ್ಲ. ಜರ್ಮನಿಯಲ್ಲಿ ಜೇನು ಹುಳ ಪರೀಕ್ಷೆಗೆ 80 ಸಾವಿರದಿಂದ 1ಲಕ್ಷದವರೆಗೂ ಶುಲ್ಕವಿದೆ. ಫ್ರುಕ್ಟೋಸ್ ಗ್ಲುಕೋಸ್ ಅಂಶಗಳು ಹಾಗೂ ಹುಳುವಿನ ಸಾಮರ್ಥ್ಯವನ್ನು ಪರೀಕ್ಷಿಸಿಯೇ ಖರೀದಿಸುತ್ತಾರೆ. ಸರ್ಕಾರವೂ ಕೂಡ ವಿದೇಶದಲ್ಲಿನ ಹೊಸ ನೀತಿಗಳನ್ನು ಕಂಡುಕೊಂಡು ಭಾರತದ ಜೇನು ಕೃಷಿಯಲ್ಲಿ ಸುಧಾರಣೆ ತರಬೇಕಾಗಿದೆ. ಇಂತಹ ಜೇನು ಕೃಷಿಕರನ್ನು ಪ್ರೋತ್ಸಾಹಿಸುವ ಅನಿವಾರ್ಯತೆ ಇದೆ.

ಈ ಎಲ್ಲ ಸರ್ಕಾರದ ಲೋಪದೋಷಗಳನ್ನು ತಲೆಕೆಡಿಸಿಕೊಳ್ಳದೇ, ಸಮಗ್ರ ಜೇನು ಚಿಂತನೆಯನ್ನು ಅಳವಡಿಸಿಕೊಂಡು ತಮ್ಮದೇ ಹಾದಿಯನ್ನು ಹುಡುಕಿಕೊಂಡವರು ಚಿತ್ರದುರ್ಗ ಮೂಲದ ಮೆಕ್ಯಾನಿಕಲ್ ಇಂಜಿನಿಯರ್‌ ಅಪೂರ್ವ ಬಿ ವಿ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರ ಜೊತೆ ಇವರ ಸ್ನೇಹಿತ ಗುರುಪ್ರಸಾದ್ ರಾವ್‌ ಅವರೂ ಕೂಡ ಕೈಜೋಡಿಸಿದ್ದಾರೆ. ಕೃಷಿ ಹಾಗೂ ಜೇನು ಕುಟುಂಬವನ್ನು ಗಮನದಲ್ಲಿಟ್ಟುಕೊಂಡ ಅಪೂರ್ವ ಅವರು ಬೆಳೆ ಇಳುವರಿ ಹೆಚ್ಚಿಸಲು ಜೇನುಗಳನ್ನು ಡಬ್ಬಿಗಳ ಮೂಲಕ ಬಾಡಿಗೆ ಬಿಡುತ್ತಾರೆ. ಸ್ಥಳಾಂತರ ಜೇನು ಕೃಷಿಯನ್ನು ನೆಚ್ಚಿಕೊಂಡ ಇವರು ದೇಸಿ ‘ತುಡುವೆ’ ಹಾಗೂ ಇಟಾಲಿಯನ್ ‘ಮಿಲಿಫೆರಾ’ ಜೇನುಗಳನ್ನು ಬಳಸುತ್ತಿದ್ದಾರೆ. ಸ್ಥಳಾಂತರ ಜೇನು ಕೃಷಿ ಎಂದರೆ ಪರಿಸರ ಬದಲಾವಣೆಯ ಅನುಗುಣವಾಗಿ ಹಾಗೂ ಬೆಳೆಗಳ ಆಧಾರದ ಮೇಲೆ ಜೇನುಗಳೊಂದಿಗೆ ಡಬ್ಬಿಗಳನ್ನು ಸ್ಥಳಾಂತರ ಮಾಡುತ್ತಾ ಹೋಗುತ್ತಾರೆ. ಹೀಗೆ ಇವರು ಕರ್ನಾಟಕದಾದ್ಯಂತ ಹಲವು ಕಡೆಗಳಲ್ಲಿ ಜೇನು ಡಬ್ಬಿಗಳನ್ನು ಇಡುತ್ತಿದ್ದಾರೆ. ಜೇನುಗಳನ್ನು ಹಾಗೂ ಪರಾಗ ಕಣಗಳನ್ನು ರಫ್ತು ಮಾಡುವ ಏಕೈಕ ಜೇನು ಕೃಷಿಕ ಎಂದರೆ ಅಪೂರ್ವ ಅವರು.

ಆದರೆ ಭಾರತದಲ್ಲಿ ಅಷ್ಟು ಮಾರಾಟಗೊಳ್ಳದೇ ಇದ್ದದ್ದರಿಂದ ವಿದೇಶಕ್ಕೆ ರಫ್ತು ಮಾಡಲಾಗುತ್ತಿದ್ದಾರೆ. ಒಂದು ಕೆ.ಜಿ ಪರಾಗ ರೇಣುವಿಗೆ 2000-3000 ರೂಪಾಯಿ ಬೆಲೆ ಇದೆ. ಹೆಚ್ಚು ಪ್ರೊಟೀನ್ ಇರುವ ಈ ಪರಾಗ ರೇಣುಗಳಿಗೆ ವಿದೇಶದಲ್ಲಿ ಬೇಡಿಕೆ ಇದೆ. ಕಾರಣ ಜಗತ್ತಿನ ಆಟಗಾರರೆಲ್ಲ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಪರಾಗವನ್ನು ಸೇವಿಸುತ್ತಾರೆ. ಹೆಚ್ಚು ಆಯಾಸ ಪಡಿಸದೇ ಇರುವ ಸಾಮರ್ಥ್ಯಕ್ಕಿಂತ ಒಂದು ಗಂಟೆಯಷ್ಟು ಹೆಚ್ಚು ಸ್ಟ್ಯಾಮಿನಾವನ್ನು ಇದು ಕೊಡುತ್ತದೆ.ಅಲ್ಲದೇ ಉತ್ತಮ ಫಲ ಕೊಡುವಲ್ಲಿ ಪರಾಗ ಸ್ಪರ್ಶಕ್ಕೆಂದು ಜೇನುಗಳನ್ನು ಬಾಡಿಗೆ ಕೊಟ್ಟು ತಿಂಗಳಿಗೆ ಇಂತಿಷ್ಟು ಎಂದು ಶುಲ್ಕ ವಿಧಿಸಲಾಗುತ್ತಿದೆ.

ಇದನ್ನೂ ಓದಿ : ಲಕ್ಷ ರೂಪಾಯಿ ಸಂಬಳದ ಕೆಲಸ ಬಿಟ್ಟು ಊರಿಗೆ ಬಂದ ಟೆಕ್ಕಿ; ಆಮೇಲೇನಾಯ್ತು?

ಸುಮಾರು ೧೨ ರಿಂದ ೧೪ ತರಹದ ರುಚಿ ಹಾಗೂ ಸುಗಂಧದ ಜೇನು ತುಪ್ಪವನ್ನು ಇವರು ಸಂಗ್ರಹಿಸುತ್ತಿದ್ದಾರೆ. ಸೂರ್ಯಕಾಂತಿ, ಎಳ್ಳು, ಬೇವು, ನೀಲಗಿರಿ, ಕಾಫಿ, ಕಾಡು, ಅಜವಾನ, ನೇರಳೆ, ಲೀಚಿ, ಕಶ್ಮೀರ್ ವ್ಯಾಲಿ ಹಾಗೂ ಬೇವುಗಳು ಇವರಿಗೆ ಸಿಕ್ಕ ಜೇನು ತುಪ್ಪದ ರುಚಿಗಳು.ಎಲ್ಲಾ ಸಂದರ್ಭದಲ್ಲಿ ಈ ರೀತಿಯ ಫ್ಲೇವರ್‌ಗಳು ಸಿಗುತ್ತವೆ ಎಂದು ನಿರೀಕ್ಷಿಸುವಂತಿಲ್ಲ, ಪರಿಸರ ಬದಲಾವಣೆಯ ಮೇಲೆ ವ್ಯತ್ಯಾಸವಾಗುತ್ತದೆ. ಸ್ವಾಭಾವಿಕವಾಗಿ ಸಿಗುವಂತಹ ರುಚಿಗಳು ಬಿಟ್ಟರೇ ರಾಸಾಯನಿಕ ಪದಾರ್ಥಗಳನ್ನು ಬಳಸಿ ಮಾಡುವಂತದ್ದಲ್ಲ. ಪೋಲನ್ ಆಯಾ ಪ್ರದೇಶಕ್ಕೆ ಅನುಗುಣವಾಗಿ ತುಪ್ಪಕ್ಕೆ ರುಚಿ ಬರುತ್ತದೆ.ಉದಾಹರಣೆಗೆ ನೇರೆಳೆ ಮರಗಳು ಜಾಸ್ತಿ ಇರುವ ಪ್ರದೇಶದಲ್ಲಿನ ಜೇನು ಡಬ್ಬಿಯನ್ನು ಇಟ್ಟಿದ್ದರೆ ಅಲ್ಲಿ ನೇರಳೆ ರುಚಿಯ ತುಪ್ಪವೇ ತಯಾರಾಗಿರುತ್ತದೆ.

ಕರ್ನಾಟಕದಾದ್ಯಂತ ತೋಟಗಾರಿಕೆ, ಖಾದಿ ಮತ್ತು ಗ್ರಾಮೋದ್ಯೋಗ ಹಾಗೂ ಅರಣ್ಯ ಇಲಾಖೆಗಳಿಗೆ ಜೇನುಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಕುಟುಂಬ ವಿಭಜನೆಯನ್ನು ಹೆಚ್ಚು ಗಮನದಲ್ಲಿಟ್ಟುಕೊಂಡಿದ್ದರಿಂದ ವರ್ಷಕ್ಕೆ ಸುಮಾರು ಎರಡು ಟನ್ ಅಷ್ಟು ಮಾತ್ರ ಜೇನು ತುಪ್ಪವನ್ನು ಉತ್ಪಾದಿಸುತ್ತಿದ್ದಾರೆ. ಒಂದು ಕೆಜಿ ತುಪ್ಪಕ್ಕೆ ೩೫೦ ರಿಂದ ೯೦೦ ರೂಪಾಯಿಗಳ ವರೆಗೆ ಬೆಲೆಯಿದೆ.

ಇತ್ತೀಚೆಗೆ ಇವರ ಸಕ್ರಿಯ ಜೇನು ಕೃಷಿಯನ್ನು ನೋಡಿಕೊಂಡು ಟಾಟಾ ಕಾಫಿ ಕಂಪೆನಿಯು ಒಪ್ಪಂದ ಮಾಡಿಕೊಂಡಿದೆ. ತನ್ನ ೨೦೦೦೦ ಎಕರೆ ಕಾಫಿ ತೋಟದಲ್ಲಿ ಜೇನು ಹುಳಗಳಿಂದ ಕಾಫಿ ಫಲ ಚೆನ್ನಾಗಿ ಬರುವುದರಿಂದ ಈ ಒಪ್ಪಂದವಾಗಿದೆ. ಕಾಫಿ ಲಾಭ ಒಂದು ಕಡೆಯಾದರೆ ಜೇನು ಕುಟುಂಬ ವಿಸ್ತರಣೆಯೂ ಆಗುತ್ತದೆ ಎಂಬುದು ಉದ್ದೇಶ. ಒಂದು ಕೃಷಿಯನ್ನು ಹೇಗೆ ಜೀವಪರ ಆಯಾಮದಿಂದ ನೋಡುವುದು ಎಂಬುದನ್ನು ರೈತರು ಹಾಗೂ ಸರ್ಕಾರ ಅರಿಯಬೇಕಾಗಿದೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More