ಪುರುಷ ಪತ್ರಕರ್ತರನ್ನೂ ಮೀರಿಸಿ ದಿಟ್ಟ ವರದಿ ಮಾಡಿದವರು ಈ ಮಹಿಳಾ ಪತ್ರಕರ್ತರು

‘ಪುರುಷ ಪತ್ರಕರ್ತರ ಸಬಲೀಕರಣ ಆಗಬೇಕಿದೆ,’ ಎಂದು ಸೂಚಿಸುವ ಒಂದು ಟ್ವೀಟ್ ಸಾಮಾಜಿಕ ತಾಣಗಳಲ್ಲಿ ಪ್ರಚಾರ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ತಮ್ಮ ಲೇಖನಗಳಿಂದ ಬಿಜೆಪಿ ಮತ್ತು ಸಂಘಪರಿವಾರದ ಚಟುವಟಿಕೆಗಳ ಮೇಲೆ ಮಾಧ್ಯಮದಲ್ಲಿ ಸಮರವನ್ನೇ ಸಾಧಿಸಿರುವ ಪತ್ರಕರ್ತೆಯರ ವಿವರ ಇಲ್ಲಿದೆ

ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಮಾಧ್ಯಮಗಳಲ್ಲಿ ವಸ್ತುನಿಷ್ಠ ವಿಷಯಗಳು ಮತ್ತು ತನಿಖಾ ವರದಿಗಳು ಪ್ರಕಟವಾಗುವುದು ಬಹಳ ಅಪರೂಪ. ಆದರೆ ಲೇಖನಗಳಿಂದ ಮಾಧ್ಯಮ ಸಮರ ಸಾಧಿಸಿರುವವರಲ್ಲಿ ಪತ್ರಕರ್ತೆಯರೇ ಪ್ರಮುಖವಾಗಿ ಕಾಣಿಸುತ್ತಿದ್ದಾರೆ. ಗುಜರಾತ್ ಗಲಭೆಗಳ ಬಗ್ಗೆ ಕುಟುಕು ಕಾರ್ಯಾಚರಣೆ ನಡೆಸಿ ಪುಸ್ತಕವನ್ನು ಹೊರತಂದಿರುವವರು ರಾಣಾ ಆಯೂಬ್. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳನ್ನು ಆರಿಸಿಕೊಂಡು ಹಿಂದುತ್ವ ಚಿಂತನೆಗಳನ್ನು ಅವರಲ್ಲಿ ತುಂಬಲಾಗುತ್ತದೆ ಎಂದು ಆರ್‌ಎಸ್ಎಸ್ ವಿರುದ್ಧ ಲೇಖನ ಬರೆದವರು ನೇಹಾ ದೀಕ್ಷಿತ್. ನರೇಂದ್ರ ಮೋದಿ ೨೦೧೪ರಲ್ಲಿ ಚುನಾವಣೆ ಗೆಲ್ಲುವ ನಿಟ್ಟಿನಲ್ಲಿ ಸಿದ್ಧಪಡಿಸಿದ ಟ್ವಿಟರ್ ಟ್ರೋಲ್‌ಗಳ ಪಡೆ ಹೇಗೆ ಅಂತರ್ಜಾಲದಲ್ಲಿ ವ್ಯವಸ್ಥಿತವಾಗಿ ಪ್ರಗತಿಪರರ ಮೇಲೆ ದಾಳಿ ಮಾಡುತ್ತಿದೆ ಎಂದು ಬರೆದವರು ಸ್ವಾತಿ ಚತುರ್ವೇದಿ. ಅಮಿತ್ ಶಾ ಅವರ ಮಗ ಜೇ ಶಾ ಉದ್ಯಮ ಅವ್ಯವಹಾರಗಳ ಬಗ್ಗೆ ತನಿಖಾ ವರದಿ ಬರೆದವರು ರೋಹಿಣಿ ಸಿಂಗ್, ಶತಕೋಟಿಗೂ ಹೆಚ್ಚು ಆಧಾರ್ ವಿವರಗಳು ಸೋರಿಕೆಯಾಗಿರುವ ಬಗ್ಗೆ ವರದಿ ಮಾಡಿರುವವರು ರಚ್ನಾ ಖೈರಾ. ಇವೆರಲ್ಲರೂ ಮಹಿಳಾ ಪತ್ರಕರ್ತರು. ಹೀಗಾಗಿ ಪುರುಷ ಪತ್ರಕರ್ತರ ಸಬಲೀಕರಣ ಆಗಬೇಕಿದೆ ಎನ್ನುವ ಒಂದು ಟ್ವೀಟ್ ಇಂದು ಸಾಮಾಜಿಕ ತಾಣಗಳಲ್ಲಿ ಹೆಚ್ಚು ಪ್ರಚಾರ ಪಡೆದುಕೊಂಡಿದೆ. ಬಿಜೆಪಿ ಮತ್ತು ಹಿಂದೂಪಡೆಗಳಿಂದ ತೊಂದರೆಯಾಗುವ ಭಯವಿದ್ದರೂ, ಕೆಚ್ಚೆದೆಯಿಂದ ಅಕ್ರಮಗಳನ್ನು ಬಹಿರಂಗಪಡಿಸುವಲ್ಲಿ ಮುಂಚೂಣಿಯಲ್ಲಿರುವ ಈ ಮಹಿಳೆಯರು ವಾಸ್ತವದಲ್ಲಿ ಏನು ಕೆಲಸ ಮಾಡಿದ್ದಾರೆ ಎನ್ನುವ ವಿವರ ಇಲ್ಲಿದೆ.

ರಾಣಾ ಅಯೂಬ್

ರಾಣಾ ಅಯೂಬ್ ‘ತೆಹಲ್ಕಾ’ದಲ್ಲಿ ತನಿಖಾ ಪತ್ರಕರ್ತೆಯಾಗಿದ್ದ ಸಂದರ್ಭದಲ್ಲಿ ಗುಜರಾತ್ ಗಲಭೆಗಳ ಬಗ್ಗೆ ಕುಟುಕು ಕಾರ್ಯಾಚರಣೆ ನಡೆಸಿ ಸರಣಿ ಲೇಖನಗಳನ್ನು ಪ್ರಕಟಿಸಿದ್ದರು. ಈಗ ಸ್ವತಂತ್ರ ಪತ್ರಕರ್ತರಾಗಿರುವ ಅವರು ಇದೇ ಕುಟುಕು ಕಾರ್ಯಾಚರಣೆಗಳನ್ನು ಆಧರಿಸಿ ‘ಗುಜರಾತ್ ಫೈಲ್ಸ್’ ಎನ್ನುವ ಪುಸ್ತಕ ಪ್ರಕಟಿಸಿದ್ದಾರೆ. ರಾಣಾ ಅವರು ಗುಜರಾತ್‌ನಲ್ಲಿ ಅನೇಕ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಜೊತೆಗೆ ಸ್ನೇಹಶೀಲರಾಗಿ ನಡೆದುಕೊಂಡು ಬಹಳ ಧೀರ್ಘಕಾಲ ತನಿಖೆ ನಡೆಸಿ ಅವರಿಂದ ೨೦೦೨ರ ಗುಜರಾತ್ ಗಲಭೆಗಳ ಬಗ್ಗೆ ಕೆಲವು ರಹಸ್ಯ ಮಾಹಿತಿಗಳನ್ನು ಪಡೆದುಕೊಂಡಿದ್ದರು. ಆರ್‌ಎಸ್‌ಎಸ್ ವಿಚಾರಧಾರೆಗಳನ್ನು ನಂಬಿರುವ ‘ಅಮೆರಿಕನ್ ಫಿಲ್ಮ್ ಇನ್ಸ್ಟಿಟ್ಯೂಟ್’ ವಿದ್ಯಾರ್ಥಿನಿ ಮೈಥಿಲಿ ತ್ಯಾಗಿ ಎನ್ನುವ ನಕಲಿ ಹಿಂದೂ ಹುಡುಗಿಯ ಹೆಸರಿನಲ್ಲಿ ನಕಲಿ ಗುರುತು ದಾಖಲೆಗಳನ್ನು ಮಾಡಿಕೊಂಡ ಕಾರಣ ತಮ್ಮ ಗುರಿಯಾಗಿರುವ ವ್ಯಕ್ತಿಗಳನ್ನು ಭೇಟಿಯಾಗಲು ಅವರಿಗೆ ಸಾಧ್ಯವಾಗಿತ್ತು. ಸುಮಾರು ಹತ್ತು ತಿಂಗಳ ಕಾಲ ಅವರು ಈ ತನಿಖೆ ನಡೆಸಿದ್ದರು.

ಸ್ವಾತಿ ಚತುರ್ವೇದಿ

ಭಾರತೀಯ ಪತ್ರಕರ್ತೆ ಸ್ವಾತಿ ಚತುರ್ವೇದಿ ಅವರು ಹಲವು ಸುದ್ದಿವಾಹಿನಿಗಳು ಮತ್ತು ವಿವಿಧ ದಿನಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವಿ. ಟ್ವಿಟರ್‌ನಲ್ಲಿ ಸಕ್ರಿಯವಾಗಿದ್ದ ಸ್ವಾತಿ ಚತುರ್ವೇದಿಯವರು ಬಿಜೆಪಿ ಪರ ಟ್ವಿಟರ್ ಖಾತೆಗಳಿಂದ ಬಹಳ ಪ್ರತಿರೋಧ ಎದುರಿಸುತ್ತಿದ್ದರು. ಬಿಜೆಪಿ ಡಿಜಿಟಲ್ ಸೇನೆ ಹೇಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ವಿರುದ್ಧ ಅಭಿಪ್ರಾಯಗಳನ್ನು ಹೊಂದಿರುವವರ ಮೇಲೆ ಧ್ವೇಷಪೂರಿತ ದಾಳಿಗಳನ್ನು ನಡೆಸುತ್ತದೆ ಎಂದು ಪುಸ್ತಕವನ್ನೂ ಅವರು ಬರೆದಿದ್ದಾರೆ. ಬಿಜೆಪಿಯ ಡಿಜಿಟಲ್ ಸೇನೆಯಲ್ಲಿ ಕೆಲಸ ಮಾಡಿದ ವ್ಯಕ್ತಿಯೊಬ್ಬರ ಪ್ರಥಮ ಮಾಹಿತಿಯೂ ಇರುವ ಪುಸ್ತಕ, ಟ್ವಿಟರ್‌ನ ಧ್ವೇಷ ಸ್ಫುರಿಸುವ ಟ್ರೋಲ್ ಪ್ರಪಂಚದ ಕಹಿವಾಸ್ತವವನ್ನು ಅನಾವರಣ ಮಾಡಿದೆ.

ರೋಹಿಣಿ ಸಿಂಗ್

ಅಮಿತ್ ಶಾ ಅವರ ಮಗ ಜೈ ಶಾ ಅವರ ಉದ್ಯಮ ಅವ್ಯವಹಾರಗಳ ಬಗ್ಗೆ ತನಿಖಾ ವರದಿ ಬರೆದವರು ಸ್ವತಂತ್ರ ಪತ್ರಕರ್ತೆ ರೋಹಿಣಿ ಸಿಂಗ್. ‘ದಿ ವೈರ್’ ಸಂಸ್ಥೆ ಅವರ ತನಿಖಾ ವರದಿಯನ್ನು ಪ್ರಕಟಿಸಿತ್ತು. ರೋಹಿಣಿ ಸಿಂಗ್ ಮತ್ತು ‘ದಿ ವೈರ್’ ಮೇಲೆ ಜೈ ಶಾ ಕಂಪನಿ ರು. ೧೦೦ ಕೋಟಿಗಳ ಮಾನನಷ್ಟ ಮೊಕದ್ದಮೆ ಹೂಡಿದೆ. ಆದರೆ ರೋಹಿಣಿ ಸಿಂಗ್ ಮೊಕದ್ದಮೆಯನ್ನು ಎದುರಿಸಲು ಸಿದ್ಧರಿರುವುದಾಗಿ ತಮ್ಮ ಫೇಸ್‌ಬುಕ್‌ ತಾಣದಲ್ಲಿ ಬರೆದಿದ್ದಾರೆ. “೨೦೧೧ರಲ್ಲಿ ರಾಬರ್ಟ್ ವಾಡ್ರಾ ಅವರು ಡಿಎಲ್ಎಫ್ ಜೊತೆಗೆ ಇಟ್ಟುಕೊಂಡಿದ್ದ ಅವ್ಯವಹಾರವನ್ನೂ ನಾನು ಬರೆದಿರುವೆ. ಆದರೆ ಈಗ ನಾನು ಎದುರಿಸುತ್ತಿರುವಂತಹ ಬ್ಲಾಕ್‌ಮೇಲ್ ಆಗ ಎದುರಿಸಿರಲಿಲ್ಲ. ವಾಟ್ಸಪ್ ಮತ್ತು ಫೇಸ್‌ಬುಕ್‌ನಲ್ಲಿ ನನಗೆ ಬರುವ ಸಂದೇಶಗಳು ಮತ್ತು ನನ್ನ ವಿರುದ್ಧ ಅಂತರ್ಜಾಲದಲ್ಲಿ ನಡೆಯುತ್ತಿರುವ ಕೀಳುದರ್ಜೆಯ ಅಪಪ್ರಚಾರ ಹಿಂದೆಂದೂ ಎದುರಿಸಿಲ್ಲ. ಅಧಿಕಾರದಲ್ಲಿರುವ ಶಕ್ತಿಪಡೆಗಳು ಯಾವಾಗಲೂ ಪತ್ರಕರ್ತರನ್ನು ಬಗ್ಗಿಸಲು ಇಂತಹ ದಾರಿಗಳನ್ನು ಹುಡುಕುತ್ತಿರುತ್ತವೆ. ಆದರೆ ನಾನು ನನ್ನ ಏಕಾಗ್ರತೆ ಕಳೆದುಕೊಳ್ಳುವುದಿಲ್ಲ. ನಾನು ದಿಟ್ಟೆ ಎಂದು ಇಂತಹ ಲೇಖನಗಳನ್ನು ಮಾಡುವುದಿಲ್ಲ, ಇದು ಪತ್ರಿಕೋದ್ಯಮವೇ ವಿನಾಃ ಧೈರ್ಯ ಪ್ರದರ್ಶನವಲ್ಲ,” ಎಂದು ರೋಹಿಣಿ ಬರೆದಿದ್ದಾರೆ.

ಇದನ್ನೂ ಓದಿ : ಬ್ಯಾಂಕಿಂಗ್ ಕ್ಷೇತ್ರ ಶ್ರೀಮಂತಗೊಳಿಸಿದ ಈ ಮಹಿಳಾ ಬ್ಯಾಂಕರ್‌ಗಳನ್ನು ಬಲ್ಲಿರಾ?

ನೇಹಾ ದೀಕ್ಷಿತ್

ನೇಹಾ ದೀಕ್ಷಿತ್ ಸ್ವತಂತ್ರ ಪತ್ರಕರ್ತೆಯಾಗಿ ಲಿಂಗ ತಾರತಮ್ಯ, ಅಭಿವೃದ್ಧಿ ಮತ್ತು ದಕ್ಷಿಣ ಏಷ್ಯಾ ವಿಚಾರಗಳ ಬಗ್ಗೆ ವಿವಿಧ ಪತ್ರಿಕೆಗಳಿಗೆ ಬರೆಯುತ್ತಾರೆ. ಭಾರತದಲ್ಲಿ ಮಹಿಳಾ ಪತ್ರಕರ್ತೆಯರಿಗೆ ಸಿಗುವ ಅತ್ಯುನ್ನತ ಪ್ರಶಸ್ತಿಯಾಗಿರುವ ಚಮೇಲಿ ದೇವಿ ಜೈನ್ ಪ್ರಶಸ್ತಿಯನ್ನು ೨೦೧೬ರಲ್ಲಿ ಅವರು ಪಡೆದಿದ್ದರು. ಬುಡಕಟ್ಟು ಜನಾಂಗದ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿಯೇ ಆರಿಸಿಕೊಂಡು ಹಿಂದುತ್ವಕ್ಕಾಗಿ ಅವರನ್ನು ಸಿದ್ಧಪಡಿಸುವ ಕೆಲಸ ಸಂಘಪರಿವಾರ ಮಾಡುತ್ತಿದೆ ಎಂದು ನೇಹಾ ದೀಕ್ಷಿತ್ ಅವರು ‘ಔಟ್‌ಲುಕ್‌’ ಬರೆದ ಲೇಖನ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಬಹಳ ಪ್ರಚಾರ ಪಡೆದಿತ್ತು. ಮಕ್ಕಳ ಸಾಗಾಣಿಕೆ ವಿಚಾರದಲ್ಲಿ ಆರ್‌ಎಸ್ಎಸ್ ಹೇಗೆ ಭಾರತೀಯ ಮತ್ತು ಅಂತಾರಾಷ್ಟ್ರೀಯ ಕಾನೂನುಗಳನ್ನು ಧಿಕ್ಕರಿಸಿ ಸಾಗಿದೆ ಎಂದು ಅವರು ವಿವರ ನೀಡಿದ್ದರು.

ರಚ್ನಾ ಖೈರಾ

ದಿ ಟ್ರಿಬ್ಯೂನ್ ಪತ್ರಿಕೆಯ ವರದಿಗಾರ್ತಿಯಾಗಿರುವ ರಚ್ನಾ ಖೈರಾ ಅವರು ಇತ್ತೀಚೆಗೆ ಆಧಾರ್ ವಿವರಗಳು ಸೋರಿಕೆಯಾಗಿರುವ ಬಗ್ಗೆ ವರದಿ ಮಾಡಿದ್ದರು. ಈ ವರದಿಯ ವಿರುದ್ಧ ಆಧಾರ್ ಸಂಸ್ಥೆಯ ಉಪನಿರ್ದೇಶಕರು ದೆಹಲಿ ಪೊಲೀಸರ ಮೂಲಕ ಮೊಕದ್ದಮೆ ದಾಖಲಿಸಿದ್ದಾರೆ. “ನನ್ನ ಮೇಲೆ ಈ ಎಫ್ಐಆರ್ ಬರಲೇಬೇಕು. ಕನಿಷ್ಠ ಆಧಾರ್ ಸಂಸ್ಥೆ ಒಂದು ಕ್ರಮ ಕೈಗೊಂಡಿದೆ ಎಂದು ನನಗೆ ಸಮಾಧಾನವಾಗಿದೆ. ಈ ಎಫ್ಐಆರ್ ಜೊತೆಗೆ ಭಾರತ ಸರ್ಕಾರ ಯಾವ ವಿವರ ಸೋರಿಕೆಯಾಗಿದೆ ಎಂದು ತನಿಖೆ ನಡೆಸಿ ಸೂಕ್ತ ಕ್ರಮಗಳನ್ನೂ ಕೈಗೊಳ್ಳಲಿದೆ ಎನ್ನುವುದು ನನ್ನ ನಿರೀಕ್ಷೆಯಾಗಿದೆ,” ಎಂದು ಟಿವಿ ವಾಹಿನಿಗಳ ಮುಂದೆ ರಚ್ನಾ ಹೇಳಿದ್ದಾರೆ. ಆದರೆ ತಾವು ಬರೆದ ಲೇಖನದ ವಿವರಗಳು ಸತ್ಯ ಮತ್ತು ಅದರಿಂದ ಹಿಂದೆ ಸರಿಯುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More