ವೀಕೆಂಡ್‌ ಸ್ಪೆಷಲ್‌ | ಬುಕ್‌ಮಾರ್ಕ್ | ವಿಡಿಯೋ | ಶಿರೀಷ್ ಜೋಶಿ ಅವರ ಕುಮಾರ ಸಂಗೀತ

ಹಿಂದೂಸ್ತಾನಿ ಸಂಗೀತದ ಮೇರು ಪ್ರತಿಭೆ ಕುಮಾರ ಗಂಧರ್ವ. ಸಂಗೀತವೇ ಸರ್ವಸ್ವ ಎಂದು ಭಾವಿಸಿದ್ದ ಕುಮಾರರ ಬದುಕು, ಸಂಗೀತ ಸಾಧನೆಗಳೆರಡೂ ವಿಸ್ಮಯ ಎನಿಸುವಂಥವು. ಲೇಖಕರಾದ ಶಿರೀಷ್‌ ಜೋಶಿ “ಕುಮಾರ ಸಂಗೀತ” ಕೃತಿಯ ಮೂಲಕ ಕುಮಾರರ ಬದುಕು ಕಟ್ಟಿಕೊಟ್ಟಿದ್ದಾರೆ

ದೆಹಲಿಯ ಓರ್ವ ಶ್ರೀಮಂತರ ಮನೆಯಲ್ಲಿ ವಿಶಾಲವಾದ ದಿವಾನಖಾನೆಯಲ್ಲಿ ಕುಮಾರರ ಕಾರ್ಯಕ್ರಮ. ಮೊಗಸಾಲೆಯ ತುಂಬ ಮಾಲೀಕನ ಶ್ರೀಮಂತಿಕೆಯನ್ನು ಬಿಂಬಿಸುವ ವಸ್ತುಗಳು, ಅಲಂಕಾರಿಕ ವಸ್ತುಗಳು ರಾರಾಜಿಸುತ್ತಿವೆ. ಆ ಮೊಗಸಾಲೆಯಲ್ಲಿಯೇ ಕುಮಾರರು ಹಾಡಲು ಕುಳಿತಿದ್ದಾರೆ. ಕುಮಾರರು ‘ನಿರ್ಗುಣಿ’ ಭಜನೆಗಳನ್ನು ಹಾಡತೊಡಗಿದಂತೆಲ್ಲ ಶ್ರೀಮಂತಿಕೆಯನ್ನು ಮೆರೆಯುವ ಆ ವಸ್ತುಗಳು ತಮ್ಮ ಅರ್ಥವನ್ನು ಕಳೆದುಕೊಳ್ಳತೊಡಗಿದವು. ‘ಹಿರನಾ ಸಮಝಬೂಝ ಚರನಾ’ ಎಂಬ ಭಜನೆ ಆರಂಭವಾದಾಗಲಂತೂ ಮನೆ ತುಂಬಾ ವೈರಾಗ್ಯದ ಛಾಯೆ ಆವರಿಸತೊಡಗಿತು. ಮೊದಲಿಗೆ ಮೊಗಸಾಲೆಯಲ್ಲಿರುವ ಅಲಂಕಾರಿಕ, ವೈಭೋಗದ ವಸ್ತುಗಳೆಲ್ಲ ಅರ್ಥವನ್ನು ಕಳೆದುಕೊಳ್ಳತೊಡಗಿವೆ ಅನ್ನಿಸಿತು. ನಂತರ ಆ ಮನೆಯ ಹೆಂಗಳೆಯರು ಪದೇಪದೆ ತಮ್ಮ ಮೈಮೇಲಿನ ಆಭರಣಗಳನ್ನು ನೋಡಿಕೊಳ್ಳತೊಡಗಿದರು. ಅಲ್ಲಿ ನೆರೆದವರಿಗೆಲ್ಲ ವೈರಾಗ್ಯ ಉಂಟಾಯಿತು. ಸಾವು ತಮ್ಮ ಮನೆಯ ಪಕ್ಕದಲ್ಲೇ ಬಂದು ಕುಳಿತಿದೆ ಎನ್ನುವಷ್ಟು ತೀವ್ರವಾಗಿ ಭಾವಪರವಶರಾದರು. ಕುಮಾರರು ಕಾರ್ಯಕ್ರಮ ಮುಗಿಸುವಾಗ ಆ ಮನೆಯ ಗೃಹಿಣಿಯರೆಲ್ಲ ತಮ್ಮ ಮೈಮೇಲಿನ ಆಭರಣಗಳನ್ನು ಕಳಚಿಟ್ಟು ಬಂದು ಹಾಡು ಕೇಳಲು ಕುಳಿತುಕೊಂಡಿದ್ದರು.

ಇದು ಕುಮಾರರು ಭಾವಪರವಶವಾಗಿ ಹಾಡುತ್ತಿದ್ದ ‘ನಿರ್ಗುಣಿ’ ಭಜನೆಗಳ ತಾಕತ್ತು. ಏನಿದು ನಿರ್ಗುಣಿ ಭಜನೆ? ಹೆಸರೇ ಹೇಳುವಂತೆ ಗುಣವಿಲ್ಲದ್ದು ಯಾವುದೋ ಅದು ನಿರ್ಗುಣಿ. ಭಾರತೀಯ ಸಂಗೀತದ ಒಂದು ಭಾಗವಾದ ಭಜನೆಯಲ್ಲಿ ಸ್ಥೂಲವಾಗಿ ಎರಡು ಪ್ರಕಾರಗಳಿವೆ. ಸಗುಣ ಭಜನೆಗಳು ಮತ್ತು ನಿರ್ಗುಣ ಭಜನೆಗಳು. ದಾಸರ ಪದಗಳು, ಸ್ತುತಿಪರ ವಚನಗಳು, ದೇವಾತ ಸ್ತುತಿ ಪದ್ಯಗಳು ಸಗುಣ ಭಜನೆಯಲ್ಲಿ ಬರುತ್ತವೆ. ಸಗುಣ ಭಜನೆಗಳಲ್ಲಿ ನಿಶ್ಚಿತವಾದ ಆಕಾರವಿರುತ್ತದೆ. ಉಪಾಸಕನಿದ್ದಾನೆ. ಸಗುಣ ಭಜನೆಗಳಲ್ಲಿ ಉಪಚಾರ-ಉಪಚಾರಕ ಎಂಬೆರಡು ಸಂಗತಿಗಳೂ ಇವೆ. ನಿರ್ಗುಣಿ ಭಜನೆಗಳಲ್ಲಿ ಇದಾವುದೂ ಇಲ್ಲ. ಇಲ್ಲಿರುವುದು ಬರೀ ತತ್ವ ಮಾತ್ರ. ಸ್ಥಿತಿ ಮಾತ್ರ, ದೇವರು ನಿರಾಕಾರ ಎಂದು ಸಾರುವ ಇಲ್ಲವೇ ತತ್ವ ಪ್ರಧಾನವಾಗಿರುವ ಭಜನೆಗಳಿವು. ಭಜಿಸು ಎಂಬ ಶಬ್ದದ ಇನ್ನೊಂದು ಅರ್ಥವೇ ಸ್ತುತಿಸು ಎಂದು. ನಿರಾಕಾರವಾದ ದೇವರನ್ನು ಕುರಿತಾದ ಇಲ್ಲವೆ ತತ್ವವನ್ನು ಸಾರುವ ನಿರ್ಗುಣಿ ಭಜನೆಗಳು ಎಂದು ಸಾಮಾನ್ಯಾರ್ಥದಲ್ಲಿ ಹೇಳಬಹುದು.

ಒಂದು ದಿನ ಒಬ್ಬ ಭಿಕ್ಷುಕ ಕುಮಾರರ ಮನೆಗೆ ಬಂದು ಸಂಗೀತದ ಭಿಕ್ಷೆ ಬೇಡಿದ. ಆತನ ಚಹರೆಯನ್ನು ಗಮನಿಸಲಾಗಿ ಪರಿಚಿತ ಮುಖವೆನಿಸಿತು. "ಭಿಕ್ಷೆ ಬೇಡುತ್ತಾ ಯಾಕೆ ತಿರುಗುತ್ತೀಯಾ?'' ಕುಮಾರರು ಅವನ ಮೇಲೆ ಕೋಪಗೊಂಡರು. ಆತ ನಾನು ಕೆಲಸ ಹುಡುಕುತ್ತಿದ್ದೇನೆ ಎಂದ. ಆದರೆ ಕುಮಾರರಿಗೆ ಆತ ಹೀಗೆ ಹೇಳುತ್ತಲೇ ಭಿಕ್ಷೆ ಎತ್ತುತ್ತ ತಿರುಗುತ್ತಿದ್ದಾನೆಂಬುದು ಗೊತ್ತಾಯಿತು. ಇದಾದ ನಂತರವೂ ಅವನು ಅನೇಕ ಸಲ ಕುಮಾರರಲ್ಲಿಗೆ ಬಂದು ಬೈಸಿಕೊಂಡು ಮರಳಿದ. ಮತ್ತೊಂದು ದಿನ ಆತ ಬಂದಾಗ ಅವನು ಹೊಸದೇನನ್ನೋ ತಂದಿರುವಂತೆ ಭಾಸವಾಯಿತು. ಆತ ಕುಮಾರರ ಎದುರು ನಿರ್ಗುಣಿ ಭಜನೆಯ ಮುಖಡಾ ಒಂದು ಹಾಡಿದ. ಕುಮಾರರಿಗೆ ಆಶ್ಚರ್ಯವಾಯಿತು. ಮಹಾರಾಷ್ಟ್ರದ ಮೂಲದವನಾದ ಈತ ಇದನ್ನು ಎಲ್ಲಿ ಹೇಗೆ ಕಲಿತ ಎಂಬ ಕುತೂಹಲ ಮೂಡಿತು. ಇದೊಂದು ಒಳ್ಳೆಯ ಭಜನೆ ಅನ್ನಿಸಿತು. ಅದರಿಂದ ಪ್ರಭಾವಿತರಾದ ಅವರು ನಿರ್ಗುಣಿ ಭಜನೆಗಳ ಸಾಗರವನ್ನೇ ತಮ್ಮದಾಗಿಸಿಕೊಂಡರು ಎಂಬ ಘಟನೆಯನ್ನು ಅನೇಕರು ಹೇಳುತ್ತಾರೆ. ಸಂಗೀತ ಲೋಕದಲ್ಲಿ ದಂತಕತೆಯಂತೆ ಈ ಘಟನೆಯನ್ನು ಹೇಳಲಾಗುತ್ತದೆ. ಇದು ನಿಜವೇ? ಕಟ್ಟು ಕತೆಯೇ? ಹೇಳುವವರಾರು?

ಬೇಂದ್ರೆ ಮತ್ತು ಕುಮಾರ ಗಂಧರ್ವ
ಇದನ್ನೂ ಓದಿ : ವೀಕೆಂಡ್‌ ಸ್ಪೆಷಲ್‌ | ಬುಕ್‌ ಮಾರ್ಕ್‌ | ‘ಸ್ವಾಮೀಜಿಯೇ ನಮಸ್ಕರಿಸಿಬಿಟ್ಟರು’

ಅದೇನೇ ಇರಲಿ, ಕುಮಾರರ ನಿರ್ಗುಣಿ ಭಜನೆಗಳ ಕುರಿತು ಚರ್ಚಿಸುವ ಮುನ್ನ ಅವರು ನಿರ್ಗುಣಿ ಭಜನೆಗಳ ಸಂಪರ್ಕಕ್ಕೆ ಬಂದ ಬಗೆ ಹೇಗಿದೆ ನೋಡಿ. ಅನಾರೋಗ್ಯದ ನಿಮಿತ್ತ ಕುಮಾರರು ನೆಲೆ ನಿಂತ ದೇವಾಸವು ನಾಥಪಂಥದ ‘ಶೀಲನಾಥ’ ಮಹಾರಾಜರ ನೆಲೆಯಾಗಿತ್ತು. ೧೯೦೧ರಿಂದ ಅವರು ದೇವಾಸದಲ್ಲಿ ನೆಲೆ ನಿಂತಿದ್ದರು. ಇಂದಿಗೂ ಅಲ್ಲಿ ಶೀಲನಾಥ ಸಂಸ್ಥಾನ ಎಂಬ ಹೆಸರಿನ ದೊಡ್ಡ ಮಠವಿದೆ. ಅಲ್ಲಿ ಧುನಿ ಈಗಲೂ ಉರಿಯುತ್ತಿದೆ. ಹೀಗಾಗಿ ದೇವಾಸ ಬರೀ ಸಂಸ್ಥಾನ ಮಾತ್ರವಾಗಿರದೆ ನಿರ್ಗುಣಿ ಭಜನೆಗಳ ಮುಖ್ಯ ಕೇಂದ್ರಸ್ಥಾನವೂ ಆಗಿತ್ತು. ಮಾಲವ ಪ್ರಾಂತ ನಿರ್ಗುಣಿ ಭಜನೆಗಳ ತಾಣವೆಂದೇ ಹೆಸರಾಗಿದೆ. ಮಾಲವ ಹಾಗೂ ದೇವಾಸಗಳಲ್ಲಿ ಜನಜನಿತವಾಗಿರುವ ನಿರ್ಗುಣಿ ಭಜನೆಗಳಿಂದ ಕುಮಾರರು ಸಹಜವಾಗಿಯೇ ಪ್ರಭಾವಿತರಾದುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ತಮ್ಮ ಅನಾರೋಗ್ಯದ ಐದು ವರ್ಷಗಳ ಅವಧಿಯಲ್ಲಿ ಅವರು ಅನೇಕ ನಿರ್ಗುಣಿ ಭಜನೆಗಳನ್ನು ಕೇಳಿದ್ದಾರೆ. ದೇವಾಸದಲ್ಲಿ ನಿರ್ಗುಣಿ ಭಜನೆಗಳನ್ನು ಬಿತ್ತಿದವರು ಪಂ.ಶೀಲನಾಥ ಮಹಾರಾಜರು. ಇವರು ಶಿರಡಿಯ ಸಂತ ಸಾಯಿಬಾಬಾ ಅವರ ಒಡನಾಡಿಗಳು, ಗೆಳೆಯರು ನಾಥಪಂಥದ ಅನುಯಾಯಿಗಳು. ಭಜನೆ, ಹಾಡುಗಳು ಅವರ ಪೂಜೆಯ ವಿಧಾನಗಳಾಗಿದ್ದವು. ಉಸ್ತಾದ್‌ ರಜಬ್‌ ಅಲಿಖಾನ್‌, ಪಂ. ಭಾಸ್ಕರ ಬುವಾ ಬಖಲೆ ಮೊದಲಾದವರು ಶೀಲನಾಥ ಮಹಾರಾಜರ ದರ್ಶನ ಸೇವೆಯಿಂದ ಪುನೀತರಾಗಿದ್ದಾರೆ. ೧೯೨೦ರಲ್ಲಿ ಅವರು ದೇವಾಸವನ್ನು ತೊರೆದು ಋಷಿಕೇಶಕ್ಕೆ ತೆರಳಿದರು. ಅಲ್ಲಿಯೇ ಅವರ ಸಮಾಧಿಯಿದೆ. ಇದಾದ ಎರಡು ದಶಕಗಳ ತರುವಾಯ ಕುಮಾರರು ದೇವಾಸಕ್ಕೆ ಆಗಮಿಸುತ್ತಾರೆ. ಶೀಲನಾಥ ಮಹಾರಾಜರು ನಾಥ ಸಂಪ್ರದಾಯದ ಸಂತರು. ನಾಥ ಸಂಪ್ರದಾಯದ ಭಜನೆಗಳನ್ನೆಲ್ಲ ಅವರು ಸಂಗ್ರಹಿಸಿದ್ದರು. ಅದನ್ನು ಪುಸ್ತಕರೂಪದಲ್ಲಿಯೂ ಪ್ರಕಟಿಸಿದ್ದರು. ಅದರ ಒಂದು ಪ್ರತಿಯನ್ನು ಕುಮಾರರು ದೊರಕಿಸಿಕೊಂಡಿದ್ದರು. ಅವುಗಳ ಅಧ್ಯಯನವನ್ನು ಮಾಡಿದರು. ನಾಥಪಂಥೀಯ ನಿರ್ಗುಣಿಗಳ ಜೀವನವಿಧಾನವೇ ವಿಭಿನ್ನ. ರಾತ್ರಿಯಿಡೀ ಧುನಿ ಉರಿಸಿ ಜಾಗರಣೆ ಮಾಡುತ್ತಾರೆ. ಸಮಾಜದ ಸಂಪರ್ಕವೇ ಇಲ್ಲವೆನ್ನವಷ್ಟು ನಿರ್ಲಿಪ್ತತೆ ಅವರಲ್ಲಿರುತ್ತದೆ. ಹೀಗಾಗಿ ಅವರದೇ ಆದ ಬೇರೊಂದು ಜಗತ್ತು ನಿರ್ಮಾಣಗೊಂಡಿರುತ್ತದೆ. ಈ ಅಂಶಗಳೆಲ್ಲ ಅವರ ಹಾಡಿನಲ್ಲಿ ಅಭಿವ್ಯಕ್ತಗೊಳ್ಳುತ್ತವೆ. ಜೀವನದ ಮೇಲಿನ ಅದಮ್ಯವಾದ ವಿಶ್ವಾಸದಿಂದಾಗಿಯೇ ಅವರು ತುಂಬ ಸಶಕ್ತವಾದ ಸ್ವರಗಳನ್ನು ಹೊರಡಿಸಲು ಸಾಧ್ಯವಾಗುತ್ತದೆ. ಅಂಥ ಸ್ವರದ ಮೇಲೆ ಕುಮಾರರೂ ಪ್ರಭುತ್ವ ಸಾಧಿಸಿದರು. ನಿರ್ಗುಣಿ ಜೀವನದೊಳಗಿನ ದಿಗಂಬರತ್ವ, ಔದಾಸೀನ್ಯ, ಗಟ್ಟಿತನ, ತಾದಾತ್ಮ್ಯಗಳನ್ನು ಕುಮಾರರು ಸಾಧಿಸಿಕೊಂಡರು.

ಪುಸ್ತಕ : ಕುಮಾರ ಸಂಗೀತ | ಲೇಖಕರು : ಶಿರೀಷ ಜೋಶಿ | ಪ್ರಕಾಶಕರು : ರಾಗಮಾಲ, ಮೈಸೂರು | ಪುಟ : ೧೭೨ | ಬೆಲೆ: ೧೨೫/-

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More