ವಧುವನ್ನು ವಸ್ತು ಆಗಿಸಿದ ‘ಮೈ ಸೋನಿ ಕುಡಿ’ ವೆಬ್‌ಸೈಟ್, ಟ್ವೀಟಿಗರ ಆಕ್ರೋಶ

ಮಹಿಳೆಯರನ್ನು ಮಾರಾಟದ ವಸ್ತುವಿನಂತೆ ಪರಿಗಣಿಸಿ ವಿವಿಧ ವಿಭಾಗಗಳಲ್ಲಿ ವರ್ಗೀಕರಿಸಿರುವುದು, ಪ್ರಾಡಕ್ಟ್ ರಿವ್ಯೂಗಳ ಮಾದರಿಯಲ್ಲಿ ವಧುಗಳ ಮೇಲೆ ವರರ ಅಭಿಪ್ರಾಯ ನೀಡಿ, ‘ಮೈಸೋನಿಕುಡಿ’ ಎನ್ನುವ ವೆಬ್‌ತಾಣವನ್ನು ರೂಪಿಸಿರುವ ಬಗ್ಗೆ ಟ್ವಿಟರ್‌ನಲ್ಲಿ ಯುವಜನರಿಂದ ಆಕ್ರೋಶ ವ್ಯಕ್ತವಾಗಿದೆ

ಮದುವೆ ಎನ್ನುವುದು ಎರಡು ಮನಸ್ಸು ಅಥವಾ ಎರಡು ಕುಟುಂಬಗಳ ಸಂಬಂಧ ಎಂಬ ಮಾತು ಪ್ರಚಲಿತ. ಜಾಗತಿಕವಾಗಿ ಮದುವೆ ಸ್ವರ್ಗದಲ್ಲೇ ನಿರ್ಧಾರವಾಗುತ್ತದೆ ಎನ್ನುವ ನಂಬಿಕೆಯೂ ಇದೆ. ಹಾಗಿದ್ದರೂ ವಧು ಆಯ್ಕೆಯ ವಿಚಾರ ಬಂದಾಗ ಮಾತ್ರ ಭಾರತೀಯರು ಆಧುನಿಕವಾಗಿದ್ದಾರೆ! ಭಾರತದಲ್ಲಿ ಕಳೆದೊಂದು ದಶಕದಲ್ಲಿ ಮದುವೆ ಮಧ್ಯವರ್ತಿ ವೆಬ್‌ತಾಣಗಳ ಹಾವಳಿ ತೀವ್ರವಾಗಿರುವುದೇ ಇದಕ್ಕೆ ಸಾಕ್ಷಿ.

ಮದುವೆ ವೆಬ್‌ತಾಣಗಳ ಮೂಲಕ ಆಯ್ಕೆಯಾದ ವಧು-ವರರು ವಂಚಿಸಿದ ಉದಾಹರಣೆಗಳೂ ಬಹಳಷ್ಟಿವೆ. ಜೊತೆಗೆ, ಮದುವೆ ಒಂದು ವ್ಯಾಪಾರವಾಗಿ ಬದಲಾಗುತ್ತಿರುವ ಬಗ್ಗೆಯೂ ಕಳೆದೊಂದು ದಶಕದಲ್ಲಿ ಬಹಳಷ್ಟು ಚರ್ಚೆಗಳನ್ನು ನಡೆಸಿದ್ದೇವೆ. ಆದರೆ, ಈಗ ಮದುವೆ ಆನ್‌ಲೈನ್ ವ್ಯಾಪಾರವಾಗುತ್ತಿರುವುದು ಹೊಸ ಬೆಳವಣಿಗೆ. ಈ ಹಿನ್ನೆಲೆಯಲ್ಲಿ, ಸೋಮವಾರ ವಧು-ವರರನ್ನು ಹುಡುಕಿಕೊಡುವ ‘ಮಧ್ಯವರ್ತಿ ವೆಬ್‌ತಾಣ’ಗಳ ನಡುವೆ ಪರೋಕ್ಷ ಯುದ್ಧಕ್ಕೆ ಸಾಮಾಜಿಕ ತಾಣ ಟ್ವಿಟರ್ ಸಾಕ್ಷಿಯಾಯಿತು. ‘ಮೈ ಸೋನಿ ಕುಡಿ’ ಎನ್ನುವ ವೆಬ್‌ತಾಣ ಹೊಸ ರೂಪದಲ್ಲಿ ವಿವಾಹ ಅಪೇಕ್ಷಿತ ವಧುಗಳನ್ನು ಪ್ರದರ್ಶನಕ್ಕೆ ಇಟ್ಟಿರುವುದು ಈ ಟ್ವಿಟರ್ ಸಮರದ ಮೂಲ.

‘ಮೈ ಸೋನಿ ಕುಡಿ’ ವೆಬ್‌ತಾಣದಲ್ಲಿ ವಧುಗಳನ್ನು ವಿಶೇಷ ರೀತಿಯಲ್ಲಿ ವ್ಯವಸ್ಥಿತವಾಗಿ ವರ್ಗೀಕರಿಸಲಾಗಿದೆ. ಹುಡುಕಾಟದಲ್ಲಿ ತೊಡಗಿರುವವರಿಗೆ ಬೇಕಾದ ರೀತಿಯಲ್ಲಿ ಯುವತಿಯರನ್ನು ಪ್ರದರ್ಶಿಸಲಾಗಿದೆ. ಉತ್ತಮ ಅಡುಗೆ ಮಾಡುವವರು ಬೇಕೆಂದರೆ ‘ವಂಡರ್ ಚೆಫ್’ ವಿಭಾಗದಲ್ಲಿ ಹುಡುಕಬಹುದು. ಹಾಗೆಯೇ, ‘ಫೇರ್ ಸ್ಕಿನ್’ (ಗೌರವರ್ಣ), ಸಂಸ್ಕಾರಿ (ಸಂಪ್ರದಾಯಶೀಲ), ಆಜ್ಞಾಕಾರಿ (ಆದೇಶ ಕೇಳುವವಳು), ಬಚತ್ ಫೋಕಸ್ಡ್ (ಹಣ ಉಳಿಸುವವಳು), ಘರೇಲು (ಗೃಹಿಣಿ), ಇಂಗ್ಲಿಷ್ ಸ್ಪೀಕಿಂಗ್ (ಇಂಗ್ಲಿಷ್ ಮಾತನಾಡುವವರು), ಸ್ಲಿಮ್ (ತೆಳುಕಾಯ), ಡ್ಯಾನ್ಸರ್ (ನೃತ್ಯಗಾತಿ) ಎನ್ನುವ ಹಲವು ವಿಭಾಗಗಳಲ್ಲಿ ವಧುಗಳನ್ನು ವರ್ಗೀಕರಿಸಲಾಗಿದೆ. ಹೀಗೆ, ವಿನೂತನವಾಗಿ ಮದುವೆ ಮಧ್ಯವರ್ತಿ ವೆಬ್‌ತಾಣವನ್ನು ಸೃಷ್ಟಿಸಿರುವುದು ಇತರ ಸ್ಪರ್ಧಿ ವೆಬ್‌ತಾಣಗಳಿಗೆ ಸರಿಬಂದಿಲ್ಲ. ಹೀಗಾಗಿ, ಟ್ವಿಟರ್‌ನಲ್ಲಿ ವೃತ್ತಿಪರವಾಗಿ ಈ ವೆಬ್‌ತಾಣದ ವಿರುದ್ಧ ಟ್ರೆಂಡ್ ಬೆಳೆಸಲಾಗಿದೆ. ‘ಮೈ ಸೋನಿ ಕುಡಿ’ ವೆಬ್‌ತಾಣದ ಸ್ಪರ್ಧಿ ವೆಬ್‌ತಾಣಗಳು ವೃತ್ತಿಪರ ನಕಲಿ ಟ್ವಿಟರ್ ಟ್ರೆಂಡಿಂಗ್ ಹ್ಯಾಂಡಲ್‌ಗಳನ್ನು ಬಳಸಿಕೊಂಡು ಇಡೀದಿನ #ChangeHerNot ಎನ್ನುವ ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗುವಂತೆ ಮಾಡಿವೆ. ಈ ಟ್ರೆಂಡ್‌ನ ಕೆಲವೊಂದು ಟ್ವೀಟ್‌ಗಳು ನಿಜವಾಗಿ ಜನಸಾಮಾನ್ಯರ ಅಭಿಪ್ರಾಯವೇನೋ ಎನ್ನುವ ರೀತಿಯಲ್ಲಿಯೇ ಟ್ವಿಟರ್‌ನಲ್ಲಿ ಪ್ರಕಟವಾಗಿವೆ. ಕೇಂದ್ರ ಸರ್ಕಾರದ ಬಜೆಟ್ ಅಧಿವೇಶನ ಆರಂಭ, ಆರ್ಥಿಕ ಸಮೀಕ್ಷೆ ಬಿಡುಗಡೆಯಾಗಿರುವುದು ಮೊದಲಾದ ನಿಜವಾದ ಟ್ರೆಂಡ್ ನಡುವೆಯೂ ೫೦೦೦ಕ್ಕೂ ಅಧಿಕ ಟ್ವೀಟ್‌ಗಳನ್ನು ಪಡೆದುಕೊಂಡು #ChangeHerNot ಟ್ರೆಂಡ್ ಆಗಿರುವುದರಿಂದಲೇ, ಮದುವೆ ವೆಬ್‌ತಾಣಗಳ ಸ್ಪರ್ಧೆ ಯಾವ ಪ್ರಮಾಣದಲ್ಲಿ ಇದೆ ಎನ್ನುವುದು ತಿಳಿದುಬರುತ್ತದೆ.

ಇದನ್ನೂ ಓದಿ : ಟ್ವಿಟರ್ ಲೋಕದಲ್ಲಿ ಚರ್ಚೆ ಮತ್ತು ತಮಾಷೆಗೆ ಎರವಾದ ಪತಂಜಲಿ ಸಂಸ್ಥೆಯ ಉತ್ಪನ್ನಗಳು

ಹೀಗೆ, ಶತ್ರುತ್ವಕ್ಕೋಸ್ಕರ ಅಧಿಕೃತ ಟ್ರೆಂಡ್ ಆಗುವಂತೆ ಗಮನಹರಿಸಿದ ‘ಮದುವೆ ಡಾಟ್‌ ಕಾಂಗಳು’ ಜನಸಾಮಾನ್ಯರ ಗಮನವನ್ನೂ ಈ ನಿಟ್ಟಿನಲ್ಲಿ ಸೆಳೆಯುವುದರಲ್ಲಿ ಯಶಸ್ವಿಯಾಗಿವೆ. ‘ಮೈ ಸೋನಿ ಕುಡಿ’ ವೆಬ್‌ತಾಣವನ್ನು ವಧುವ್ಯಾಪಾರದ ಕಲ್ಪನೆಯಲ್ಲಿ ಸೃಷ್ಟಿಸಿರುವ ಬಗ್ಗೆ ಕೆಲವು ಅಸಲಿ ಟ್ವಿಟರ್ ಹ್ಯಾಂಡಲ್‌ಗಳೂ ಪ್ರತಿಕ್ರಿಯೆ ನೀಡಿವೆ. ಗೋವಾದ ಪುಸ್ತಕಪ್ರೇಮಿ, ಪ್ರಯಾಣಪ್ರಿಯೆ ಕಾಮಾಕ್ಷಿ ಕಾಮತ್ ಶೆಣೈ ಈ ವೆಬ್‌ತಾಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. “ಟ್ರೈಲರ್ ಮೇಡ್ ವಧುಗಳು! ನಾನು ನೋಡಿರುವುದು ಸರಿ ಇದೆಯೇ? ಇದು ವಧುಗಳನ್ನು ಉಡುಗೆ-ತೊಡುಗೆಗಳಂತೆ ಮಾರುತ್ತಿದೆ. ಇದರಲ್ಲಿ ವಿವಾಹ ಅಪೇಕ್ಷಿತ ವರರು, ವಧುಗಳ ಬಗ್ಗೆ ನೀಡಿರುವ ಅಭಿಪ್ರಾಯವೂ ಇದೆ. ನಾವು ಯಾವ ತಲೆಮಾರಿನಲ್ಲಿ ನೆಲೆಸಿದ್ದೇವೆ? ಇದನ್ನು ನೋಡಿ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ,” ಎಂದು ಕಾಮಾಕ್ಷಿ ಹೇಳಿದ್ದಾರೆ. ವಧುಗಳನ್ನು ಹೀಗೆ ಶಾಪಿಂಗ್ ವಸ್ತುವಾಗಿಸಿರುವ ಬಗ್ಗೆ ಇನ್ನೂ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇದು ವಸ್ತುಶಃ ವಧು ಶಾಪಿಂಗ್‌ಗೆ ಇರುವ ಇ-ಕಾಮರ್ಸ್ ತಾಣವಾಗಿದೆ. ಜಿಗುಪ್ಸೆ ತರಿಸುತ್ತದೆ!” ಎಂದು ಕೋಲ್ಕತ್ತಾ ನಿವಾಸಿ ಶ್ರದ್ಧಾ ಹೇಳಿದ್ದಾರೆ. ಯುವಕರೂ ಈ ವೆಬ್‌ತಾಣದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್ ಸುಶೀಲ್ ಕೆ ಕಶ್ಯಪ್ ಅವರು, “ವ್ಯವಸ್ಥಿತವಾಗಿ ವರ್ಗೀಕರಿಸಿದ ವಧುಗಳ ವ್ಯವಸ್ಥಿತ ಸರಬರಾಜೂ ಈಗ ಆರಂಭವಾಗಿದೆ. ನಾನು ನೋಡಿದ್ದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಮಹಿಳೆಯರಿಂದ ನಾವು ಇದನ್ನೆಲ್ಲ ಏಕೆ ನಿರೀಕ್ಷಿಸುತ್ತಿದ್ದೇವೆ?” ಎಂದು ಕೇಳಿದ್ದಾರೆ.

ವಿವಾಹ ವೆಬ್‌ತಾಣಗಳ ಟ್ವಿಟರ್ ಕದನದ ನೆಪದಲ್ಲಿ, ಭಾರತದಲ್ಲಿ ಸಂಪೂರ್ಣ ಮದುವೆ ವ್ಯವಸ್ಥೆಯ ವಾಸ್ತವಕ್ಕೆ ಈ ವೆಬ್‌ತಾಣ ಹೇಗೆ ಕನ್ನಡಿಯಾಗಿದೆ ಎನ್ನುವುದು ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲೂ ಟ್ವಿಟರ್‌ನಲ್ಲಿ ಭಾರತೀಯ ವಿವಾಹ ವ್ಯವಸ್ಥೆಯ ವಾಸ್ತವ ಚಿತ್ರಣದ ಬಗ್ಗೆ ಬಹಳಷ್ಟು ಚರ್ಚೆಗಳಾದವು. ಭಾರತದಲ್ಲಿ ಮದುವೆಗಾಗಿಯೇ ವಧು ಬದಲಾಗಬೇಕು ಎಂದು ಬಯಸುವ ಜನರ ನಡುವೆ, ಅದಕ್ಕೆ ಭಿನ್ನವಾಗಿ ಯೋಚಿಸುವವರೂ ಇದ್ದಾರೆ ಎನ್ನುವುದನ್ನು ಟ್ವಿಟರ್ ತೋರಿಸಿತು. “ಭಾರತದ ಮದುವೆಗಳಲ್ಲಿ ಏನೇನು ತಪ್ಪುಗಳಾಗುತ್ತಿವೆ ಎನ್ನುವುದೆಲ್ಲವೂ ಈ ವೆಬ್‌ತಾಣದಲ್ಲಿದೆ. ಮಹಿಳೆಯರು ಬದಲಾಗಬೇಕು ಎಂದು ಒತ್ತಡ ಹೇರಿ ಒಂದು ಮದುವೆಗೆ ತಳಹದಿ ಹಾಕಲು ಸಾಧ್ಯವಿಲ್ಲ ಎನ್ನುವುದನ್ನು ನಾವು ತಿಳಿದುಕೊಳ್ಳುವ ಕಾಲ ಬಂದಿದೆ,” ಎಂದು ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಪರ ಅನುಜ್ ಪ್ರಜಾಪತಿ ಹೇಳಿದ್ದಾರೆ.

ಬಹಳಷ್ಟು ಟ್ವಿಟರ್ ಬಳಕೆದಾರರು ಮದುವೆಯ ನೆಪದಲ್ಲಿ ಮಹಿಳೆ ಬದಲಾಗಬೇಕು ಎನ್ನುವ ವಿಷಯದ ಬಗ್ಗೆಯೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕೇವಲ ಮದುವೆಯಾಗಲು ಮಹಿಳೆ ಬದಲಾಗಬೇಕು ಎಂದು ಯಾರೇ ಬಯಸಿದರೂ, ಮೊದಲಿಗೆ ತಮ್ಮ ಬರ್ಬರ ಯೋಚನಾ ಧಾಟಿಯನ್ನು ಬದಲಿಸಿಕೊಳ್ಳಬೇಕು,” ಎಂದು ಮುಂಬೈ ನಿವಾಸಿ, ನಟ ಸಂತೋಷ್ ಶುಕ್ಲಾ ಅಭಿಪ್ರಾಯಪಟ್ಟಿದ್ದಾರೆ

ವಧು ಬದಲಾಗಬೇಕೆಂದು ಬಯಸುವವರನ್ನು ವಿರೋಧಿಸಿ ಟ್ವಿಟರ್ ಮೂಲಕ ಅಭಿಪ್ರಾಯ ಹೇಳಿರುವವರಲ್ಲಿ ಬಹುತೇಕರು ಯುವಕರೇ ಆಗಿರುವುದು ಈ ನಿಟ್ಟಿನಲ್ಲಿ ಆಹ್ಲಾದಕರ ಬೆಳವಣಿಗೆ. “ನಮಗೆ ಉತ್ತಮ ಜೀವನ ಸಂಗಾತಿ ಪಡೆಯಲು ಇದರ ಅಗತ್ಯವಿದೆಯೆ? ಈ ರೀತಿಯಲ್ಲಿ ಮಹಿಳೆಗೆ ಅಗೌರವ ತೋರಿಸಲಾಗುತ್ತಿದೆ,” ಎಂದು ಸಾಮಾಜಿಕತಾಣಗಳ ಕಾರ್ಯತಂತ್ರಗಳನ್ನು ರೂಪಿಸುವವರಾದ ವೇದ್ ಪ್ರಕಾಶ್ ಹೇಳಿದ್ದಾರೆ. “ಮಹಿಳೆಗೂ ಆಶೋತ್ತರಗಳು, ಭಾವನೆಗಳು, ಕನಸುಗಳು ಇರುವ ನೆಲೆಯಲ್ಲಿ ನೋಡಿ, ಆಕೆ ಬದಲಾಗಬೇಕೆಂದು ಬಯಸಬಾರದು. ಆಕೆ ನಿಮ್ಮ ಆಸ್ತಿಯಲ್ಲ. ಖರೀದಿಗೆ ಲಭ್ಯವಿರುವ ವಸ್ತುವಲ್ಲ,” ಎಂದು ಬೆಂಗಳೂರಿನ ಪಕ್ಷಿವೀಕ್ಷಕ ಅಂಕಿತ್ ಕಪೂರ್ ಅಭಿಪ್ರಾಯಪಟ್ಟಿದ್ದಾರೆ.

ಇಷ್ಟೆಲ್ಲ ಟೀಕೆಗಳು ವ್ಯಕ್ತವಾಗುತ್ತಿದ್ದರೂ ವೆಬ್‌ತಾಣದ ಅಧಿಕೃತ ಹ್ಯಾಂಡಲ್ ಸಮರ್ಥನೆಯ ಒಂದೂ ಟ್ವೀಟ್ ಹಾಕಿಲ್ಲ. ಆದರೆ, “ನೀವು ಭಾವಿ ವರನಾಗಿದ್ದರೆ ಅಥವಾ ಭಾವಿ ಅತ್ತೆಯಾಗಿದ್ದಾರೆ, ಸರಳವಾದ ಆಯ್ಕೆಯ ಮೂಲಕ ನಿಮಗೆ ಅತ್ಯುತ್ತಮವಾಗಿ ಹೊಂದಿಕೊಳ್ಳುವ ವಧುವನ್ನು ನೀಡುವುದೇ ನಮ್ಮ ಮೂಲ ಉದ್ದೇಶ,” ಎಂದು ‘ಮೈ ಸೋನಿ ಕುಡಿ’ ಹ್ಯಾಂಡಲ್‌ ತನ್ನ ವಿವರವನ್ನು ಮುಂದಿಟ್ಟಿದೆ. ಹೀಗೆ ವಧುಗಳ ಮಾರಾಟಕ್ಕೆ ಸಿದ್ಧವಾದ ಆನ್‌ಲೈನ್ ತಾಣದ ವಿರುದ್ಧ ಟ್ವಿಟರ್‌ನಲ್ಲಿ ವ್ಯಕ್ತವಾದ ಕೆಲವು ಟೀಕೆಗಳು ಇಂತಿವೆ:

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More