‘ಮಹಾನ್ವೇಷಣಂ’ಗೂ ಮೊದಲೇ ನನ್ನೊಳಗೆ ಬಾಹುಬಲಿ ಇದ್ದ: ವೀರಪ್ಪ ಮೊಯಿಲಿ

ಕಾವ್ಯ ಮತ್ತು ರಾಜಕಾರಣದ ನಂಟನ್ನು ಊಹಿಸಿಕೊಳ್ಳುವುದು ಸ್ವಲ್ಪ ಕಷ್ಟವೇ. ಅಪೂರ್ವೆನಿಸುವ ಈ ನಂಟವನ್ನು ಹಿರಿಯ ರಾಜಕಾರಣಿ ವೀರಪ್ಪ ಮೊಯಿಲಿಯವರು ಸಾಧ್ಯವಾಗಿಸಿಕೊಂಡವರು. ಅವರು ಇದೀಗ, ಬಾಹುಬಲಿ ಕುರಿತು ‘ಶ್ರೀ ಬಾಹುಬಲಿ ಅಹಿಂಸಾದಿಗ್ವಿಜಯಂ’ ಮಹಾಕಾವ್ಯ ಪ್ರಕಟಿಸಿದ್ದಾರೆ

‘ಶ್ರೀರಾಮಾಯಣ ಮಹಾನ್ವೇಷಣಂ' ಮಹಾಕಾವ್ಯದ ಮೂಲಕ ಇಪ್ಪತ್ತೊಂದನೇ ಶತಮಾನದ ಸಾಮಾಜಿಕ ಪರಿವರ್ತನೆಯ ಆಶಯ, ಅಭಿವೃದ್ಧಿ, ವಿಶ್ವದ ಬಲಾಢ್ಯ ಆರ್ಥಿಕ ರಾಷ್ಟ್ರಗಳೆದುರು ಹೋರಾಡುತ್ತಿರುವ ಭಾರತದಂಥ ತೃತೀಯ ಜಗತ್ತಿನ ರಾಷ್ಟ್ರಗಳ ಕಲಾತ್ಮಕವಾಗಿ ಚಿತ್ರಿಸಿರುವ ಮತ್ತು 'ಸಿರಿಮುಡಿ ಪರಿಕ್ರಮಣ' ಮಹಾಕಾವ್ಯದಲ್ಲಿ ಮಹಾಭಾರತದ ಶಕ್ತಿಪ್ರದಾಯಿನಿ ದ್ರೌಪದಿಯ ಮೂಲಕ ಸ್ತ್ರೀ ಸೇರಿದಂತೆ ಎಲ್ಲ ಶೋಷಿತರನ್ನು ನೊಣೆಯುತ್ತಿರುವ ಕ್ರೌರ್ಯದ ಎದುರು ಮಾನವೀಯ ಮೌಲ್ಯಗಳನ್ನು ಪುನರ್ ಸ್ಥಾಪಿಸುವುದು ಹೇಗೆಂಬ ತಮ್ಮ ಚಿಂತನೆಗಳನ್ನು ಪ್ರಸ್ತುತಪಡಿಸಿರುವ ಎಂ ವೀರಪ್ಪ ಮೊಯಿಲಿ ಅವರು, ತಮ್ಮ ಮೂರನೇ ಮಹಾಕಾವ್ಯ 'ಶ್ರೀ ಬಾಹುಬಲಿ ಅಹಿಂಸಾದಿಗ್ವಿಜಯಂ'ನಲ್ಲಿ ಈ ಶತಮಾನದ ಆಶಯಗಳಾದ ಅಹಿಂಸೆ ಮತ್ತು ತ್ಯಾಗದ ಮಹತ್ವವನ್ನು ಸಮರ್ಥವಾಗಿ ಬಿತ್ತರಿಸಿದ್ದಾರೆ.

ಶ್ರವಣಬೆಳಗೊಳದ ಗೊಮ್ಮಟ ನಗರದಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ನಡೆದ, 'ಶ್ರೀಗೊಮ್ಮಟೇಶ-ಕಾವ್ಯಾಭಿಷೇಕ’ ಕಾರ್ಯಕ್ರಮದಲ್ಲಿ ಮಹಾಕಾವ್ಯ ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ಮಹಾಕಾವ್ಯದ ಕುರಿತು ವೀರಪ್ಪ ಮೊಯಿಲಿ ಅವರೊಂದಿಗೆ, ಸಂಶೋಧಕ ಎಸ್ ಪಿ ಪದ್ಮಪ್ರಸಾದ್, ವಿಮರ್ಶಕ ಸಿ ನಾಗಣ್ಣ ಮತ್ತು ಕುವೆಂಪು ವಿವಿ ಪ್ರಾಧ್ಯಾಪಕ ಪ್ರಶಾಂತ ನಾಯಕ ಅವರು ಅರ್ಥಪೂರ್ಣ ಸಂವಾದ ನಡೆಸಿದರು.

ಸಂವಾದಕರ ಪ್ರಶ್ನೆಗಳಿಗೆ ವೀರಪ್ಪ ಮೊಯಿಲಿಯವರ ಉತ್ತರ

  • ‘ಶ್ರೀರಾಮಾಯಣ ಮಹಾನ್ವೇಷಣಂ’ ಮಹಾಕಾವ್ಯ ರಚನೆಗೂ ಮೊದಲೇ ಬಾಹುಬಲಿ ನನ್ನನ್ನು ಸೆಳೆಯುತ್ತಿದ್ದ, ನನ್ನೊಳಗೇ ಬೆಳೆಯುತ್ತಿದ್ದ
  • ಚಾವುಂಡರಾಯ ಶ್ರವಣಬೆಳಗೊಳದ ದೊಡ್ಡಬೆಟ್ಟದಲ್ಲಿ ಬಾಹುಬಲಿ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಸಾವಿರ ವರ್ಷಗಳ ಮೊದಲೇ ಭದ್ರಬಾಹು ಮುನಿ ಮತ್ತು ಚಂದ್ರಗುಪ್ತ ಶ್ರವಣಬೆಳಗೊಳಕ್ಕೆ ಬಂದಿದ್ದರು. ಧರ್ಮಪ್ರಚಾರಕ್ಕೆ ಇದನ್ನೇ ಕೇಂದ್ರ ಸ್ಥಾನವನ್ನಾಗಿಟ್ಟುಕೊಂಡಿದ್ದರು
  • ಕೊನೆಗೆ ಚಂದ್ರಗುಪ್ತ ಚಿಕ್ಕಬೆಟ್ಟದಲ್ಲಿ ಸಲ್ಲೇಖನ ವ್ರತ ಆಚರಿಸಿ ದೇಹತ್ಯಾಗ ಮಾಡಿದರು. ಹಾಗಾಗಿ, ಶ್ರವಣಬೆಳಗೊಳದಲ್ಲಿ ಏನೋ ಆಕರ್ಷಣೆ ಮತ್ತು ಶಕ್ತಿ ಇದೆ
  • ಬಾಹುಬಲಿ ಪ್ರತಿಮೆ ಸ್ಥಾಪಿಸಿದ ಒಂದು ಸಾವಿರ ವರ್ಷಗಳ ಉತ್ಸವದ ಸಂದರ್ಭದಲ್ಲಿ ನಾನೇ ಹಣಕಾಸು ಸಚಿವನಾಗಿದ್ದರಿಂದ ವಿಶೇಷ ಆಸಕ್ತಿ ವಹಿಸಿ ಕೆಲಸ ಮಾಡಿದ್ದೆ. ಅದಾದ ಮೇಲೆ, 1993ನೇ ಇಸವಿಯಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ನಡೆದ ಮಹಾಮಸ್ತಕಾಭಿಷೇಕವನ್ನು ಜವಾಬ್ದಾರಿಯಿಂದ ನಡೆಸಿದೆ
  • ಸುಮಾರು ಎರಡು ಸಾವಿರ ವರ್ಷಗಳ ಬಾಹುಳ್ಯದ ಕಥಾನಕ ನನ್ನ ಕಾವ್ಯದ ಗರ್ಭದಲ್ಲಿದೆ
  • ಕಾಳಿನದಿಯ ಪ್ರವಾಹದಂತೆ ನನ್ನೊಳಗೆ ಹರಿಯುತ್ತಿದ್ದ ಬಾಹುಬಲಿ ಮಹಾಕಾವ್ಯ ಪುಸ್ತಕ ರೂಪದಲ್ಲಿ ಹೊರಬರಲು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಕಾರಣಕರ್ತರಾದರು
ಇದನ್ನೂ ಓದಿ : ಕವಿ ದಿನ | ಸದಾ ಅನುರಣಿಸುವ ಅಂಬಿಕಾತನಯ ದತ್ತನ ಭಾವ ಲೋಕ

ಸಂವಾದ ನಡೆಸಿದ ಎಸ್ ವಿ ಪದ್ಮಪ್ರಸಾದ್ ಅವರು, "ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ' ಮಹಾಕಾವ್ಯದಲ್ಲಿ ವೃಷಭದೇವನ ಕತೆ, ಚಾವುಂಡರಾಯನ ಕತೆ, ರಾಷ್ಟ್ರಕೂಟರು ಮತ್ತು ಗಂಗರ ಕತೆ ಹಾಗೂ ಎರಡನೇ ಮಹಾಯುದ್ಧ, ಇರಾನ್ ಮೇಲಿನ ಯುದ್ಧ -ಹೀಗೆ ನಾಲ್ಕು ಕತೆಗಳನ್ನು ಸಮಾನಾಂತರವಾಗಿ ಹೇಳಲಾಗಿರುವ ಅದ್ಭುತ ಮಹಾಕಾವ್ಯ,” ಎಂದು ಬಣ್ಣಿಸಿದರು.

“ಈ ಮಹಾಕಾವ್ಯದಲ್ಲಿ ಬಾಹುಬಲಿಯನ್ನು ಸೃಷ್ಟಿಯ ಉತ್ತುಂಗಕ್ಕೇರಿಸಲಾಗಿದೆ. ಮೊಯಿಲಿಯವರ ಮೊದಲೆರಡು ಕಾವ್ಯಗಳು ಹಾರಿಜಾಂಟಲ್ ಜರ್ನಿ ಆದರೆ, ಮೂರನೇ ಮಹಾಕಾವ್ಯ ವರ್ಟಿಕಲ್ ಜರ್ನಿ. ಇದನ್ನು ಡಾಂಟೆಯ ‘ಡಿವೈನ್ ಕಾಮೆಡಿ’ ಕೃತಿಗೆ ಹೋಲಿಸಬಹುದು,” ಎಂದು ಸಿ ನಾಗಣ್ಣ ಕೊಂಡಾಡಿದರು.

ಪ್ರಾಧ್ಯಾಪಕ ಪ್ರಶಾಂತ ನಾಯಕ ಮಾತನಾಡಿ, “ಅಹಿಂಸೆಯನ್ನು ದ್ವಿಗ್ವಿಜಯದ ರೂಪಕವಾಗಿಸಿರುವುದು ಮಹತ್ವದ ಅಂಶ. ಮಹಾಕಾವ್ಯಗಳ ಕಾಲ ಮುಗಿದಿಲ್ಲ ಎಂಬುದನ್ನು ಇದು ತೋರುತ್ತದೆ. ಈ ಮಹಾಕಾವ್ಯ ಓದಿದವರು ಮೊಯಿಲಿಯವರನ್ನು ರಾಜಕಾರಣಿಯ ರೂಪದಲ್ಲಿ ನೋಡಲು ಸಾಧ್ಯವಿಲ್ಲ,” ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಮಲ್ಲೇಪುರಂ ಜಿ ವೆಂಕಟೇಶ್ ಅವರು, “ಪುರಾಣ, ಇತಿಹಾಸ ಮತ್ತು ವರ್ತಮಾನ ಎಲ್ಲವೂ ತಳುಕುಹಾಕಿಕೊಂಡಿರುವ ವಿಶಿಷ್ಟ ಮತ್ತು ಮಾನವಪ್ರೀತಿಯಿಂದ ರೂಪಿಸಿರುವ ಅದ್ಭುತ ಮಹಾಕಾವ್ಯ ‘ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ.’ ಚರಿತ್ರೆಯೊಂದಿಗೆ ನೇರವಾಗಿ ಅನುಸಂಧಾನ ಮಾಡಿ ಅಕ್ಷರಬಾಹುಬಲಿಯನ್ನು ಕಟ್ಟಿಕೊಟ್ಟಿರುವ ವೀರಪ್ಪ ಮೊಯಿಲಿಯವರು ಆಧುನಿಕ ಚಾವುಂಡರಾಯರೆನಿಸಿದ್ದಾರೆ,” ಎಂಬುದಾಗಿ ಪ್ರಶಂಸೆಯ ಮಾತುಗಳನ್ನಾಡಿದರು.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More