ಸಮಾಧಾನ | ಸಲಿಂಗಕಾಮದ ಬಗ್ಗೆ ರಮಾನಂದ ಅವರಿಗಿದ್ದ ಆತಂಕವೇನು?

“ಪರಸ್ಪರ ಒಪ್ಪಿಗೆಯಿಂದ ಸಲಿಂಗಕಾಮ ನಡೆದರೆ ಪರವಾಗಿಲ್ಲ. ಆದರೆ, ಬಲತ್ಕಾರದ ಸಲಿಂಗಕಾಮ ಅಪಾಯಕಾರಿ. ಒತ್ತಾಯಪೂರ್ವಕ ಸಲಿಂಗಕಾಮ ಲೈಂಗಿಕ ರೋಗಗಳು ಹರಡಲು ಕಾರಣವಾಗುತ್ತದೆಂಬುದು ಎಲ್ಲ ಪ್ರಜ್ಞಾವಂತರ ಆತಂಕ,” ಎಂದು ರಮಾನಂದನಿಗೆ ತಿಳಿಸಿದೆ. ಆಮೇಲೇನಾಯಿತು?

“ನನಗೀಗ 20 ವರ್ಷ. ಬಿಇ ಮುಗಿದಿದೆ. ಪಿಜಿ ಮಾಡೋಣ ಅದ್ಕೊಂಡಿದ್ದೇನೆ. ತತ್‌ಕ್ಷಣ ಕೆಲಸಕ್ಕೆ ಸೇರಿ ಸಂಪಾದಿಸುವ ಅಗತ್ಯವಿಲ್ಲ. ನನ್ನ ಕ್ಲಾಸ್‌ ಮೇಟನ್ನು ಪ್ರೀತಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಲ್ಲಿ ನಮ್ಮ ಪ್ರೀತಿಯ ಗಿಡ ಆಳವಾಗಿ ಬೇರು ಬಿಟ್ಟಿದೆ. ಸೂಕ್ಷ್ಮವಾಗಿ ನಮ್ಮ-ನಮ್ಮ ಮನೆಯವರಿಗೆ ನಮ್ಮ ಪ್ರೀತಿಯ ವಿಷಯ ಹೇಳಿದ್ದೇವೆ. ಅವರ ತೀವ್ರ ವಿರೋಧವೇನೂ ಇಲ್ಲ. 'ನಿಮಿಷ್ಟ, ನಿಮ್ಮ ಪ್ರೀತಿ ಪ್ರಾಮಾಣಿಕವಾಗಿದ್ದರೆ, ಮದುವೆಯಾಗಿ ಸಂತೋಷವಾಗಿರುತ್ತೇವೆಂಬ ನಂಬಿಕೆ ಇದ್ದರೆ ಮದುವೆಯಾಗಿ. ನಮ್ಮ ಆಶೀರ್ವಾದ ನಿಮಗಿದೆ' ಎಂದು ಹೇಳಿದ್ದಾರೆ. ಆದರೆ, ನನಗೊಂದು ದ್ವಂದ್ವ ಕಾಡ್ತಾ ಇದೆ. ನಿಮ್ಮ ಸಲಹೆಗಾಗಿ ಬಂದಿದ್ದೇನೆ. ನೀವು ಮನೋವೈದ್ಯರು, ಈ ದ್ವಂದ್ವದ ಬಗ್ಗೆ ನೀವೇನು ಹೇಳುತ್ತೀರಿ ಎಂದು ತಿಳಿಯಲು ಬಂದಿದ್ದೇನೆ.”

"ನಿಮ್ಮ ದ್ವಂದ್ವವನ್ನು ಹೇಳಿ,” ಎಂದೆ.

"ಸಲಿಂಗಕಾಮದ ಸಮಸ್ಯೆ ಸರ್...”

"ಬಿಡಿಸಿ ವಿವರವಾಗಿ ಹೇಳಿ..."

"ನನಗೆ ನಾಲ್ಕು ವರ್ಷ ವಯಸ್ಸಾಗಿದ್ದಾಗ, ನನ್ನ ಚಿಕ್ಕಪ್ಪ ತನ್ನ ಸಲಿಂಗಕಾಮಕ್ಕೆ ನನ್ನನ್ನು ಬಳಸಿಕೊಂಡರು. ಆಗ ನನಗೇನೂ ಗೊತ್ತಿರಲಿಲ್ಲ. ನನಗಿಷ್ಟವಾದ ತಿಂಡಿ ಕೊಡಿಸಿ, ತಮ್ಮ ಚಪಲ ತೀರಿಸಿಕೊಂಡು, ಇದನ್ನು ಅಪ್ಪ-ಅಮ್ಮನಿಗೆ ಹೇಳಬಾರದು. ಹೇಳಿದರೆ ಸಾಯಿಸಿಬಿಡುತ್ತೇನೆ ಎಂದು ಹೆದರಿಸಿದ್ದರು. ಮುಂದೆ ಶಾಲೆಯಲ್ಲಿದ್ದಾಗ, ಕಾಲೇಜಿನಲ್ಲಿ ಹಾಸ್ಟೆಲ್‌ನಲ್ಲಿದ್ದಾಗ ಮೂವರು ಸಹಪಾಠಿಗಳೊಂದಿಗೆ ನಾನು ಸಲಿಂಗಕಾಮ ಮಾಡಿದ್ದೇನೆ. ಲಲಿತಳ ಪರಿಚಯ, ಪ್ರೇಮ ಶುರುವಾದ ಮೇಲೆ ಅದನ್ನು ಬಿಟ್ಟಿದ್ದೇನೆ. ಪುರುಷರನ್ನು ನೋಡಿದಾಗ ಲೈಂಗಿಕ ಕ್ರಿಯೆ ಮಾಡಬೇಕೆಂಬ ಆಸೆ ಬಂದ ಹಾಗೆ ಸ್ತ್ರೀಯರನ್ನು ನೋಡಿದಾಗಲೂ ಉದ್ರಿಕ್ತನಾಗಿದ್ದೇನೆ. ಲಲಿತಳನ್ನೂ ಅಪ್ಪಿಕೊಂಡಾಗ, ಮುತ್ತು ಕೊಟ್ಟಾಗ ಲೈಂಗಿಕ ಉದ್ರೇಕವಾಗುತ್ತದೆ. ಆದರೆ, ನಾವಿಬ್ಬರೂ ದೈಹಿಕ ಸಂಪರ್ಕ ಮಾಡಿಲ್ಲ. ಅದೆಲ್ಲ ಮದುವೆಯಾದ ಮೇಲೆ ಎಂದು ಲಲಿತ ಹೇಳಿದ್ದಾಳೆ. ‘ಸಂಯಮಿಯಾಗಿರು, ಮದುವೆಗೆ ಮುನ್ನ ಬೇಡ. ಅದು ನನಗೆ ಇಷ್ಟವಿಲ್ಲ’ ಎಂಬ ಅವಳ ಮಾತುಗಳನ್ನೂ ಗೌರವಿಸಿದ್ದೇನೆ. ಈಗ ನನ್ನ ದ್ವಂದ್ವ ಎಂದರೆ, ನನ್ನ ಸಲಿಂಗಕಾಮದ ವಿಚಾರವನ್ನು ಅವಳಿಗೆ ಹೇಳಬೇಕೇ? ಬೇಡವೇ? ಆಕೆಯೊಂದಿಗೆ ನಾನು ಸುಖ ದಾಂಪತ್ಯ ಜೀವನ ಮಾಡಬಲ್ಲೆನೇ? ನಾನು ಹೇಳದಿದ್ದರೆ, ಮುಂದೊಮ್ಮೆ ಆಕೆಗೆ ಈ ವಿಚಾರ ಗೊತ್ತಾಗಿಬಿಟ್ಟರೆ, ನಮ್ಮ ದಾಂಪತ್ಯದಲ್ಲಿ ದೊಡ್ಡ ಬಿರುಕುಂಟಾಗುತ್ತದೆಯಲ್ಲವೇ? ನಾನು ಈ ಬಗ್ಗೆ ಯೋಚಿಸಿ ಹೈರಣಾಗಿದ್ದೇನೆ. ನೀವೇ ನನಗೆ ದಾರಿ ತೋರಬೇಕು,” ಎಂದ ರಮಾನಂದ.

ಜಗತ್ತಿನಾದ್ಯಂತ, ಕನಿಷ್ಠ ಶೇ.1ರಷ್ಟು ಜನರು ಸಲಿಂಗಕಾಮವನ್ನು ಇಷ್ಟಪಡುತ್ತಾರೆ. ಪುರುಷ-ಪುರುಷ ಪ್ರೇಮಿಗಳಿಗೆ ‘GAYS’ ಎಂತಲೂ, ಸ್ತ್ರೀಯರಿಗೆ ‘LESBIANS’ ಎಂತಲೂ ಹೇಳುತ್ತಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಲಿಂಗಕಾಮವನ್ನೂ ಸಾಮಾನ್ಯ, ಸಹಜ ಎಂತಲೇ ಪರಿಗಣಿಸಿಬಿಟ್ಟಿದ್ದಾರೆ. ಇತ್ತೀಚಿನವರೆಗೆ ಸಲಿಂಗಕಾಮವನ್ನು ಅಸಹಜ, ಅಸಾಮಾನ್ಯ ಕಾಯಿಲೆ ಎಂದೇ ಗುರುತಿಸಿದ್ದ ವೈದ್ಯವಿಜ್ಞಾನ, ಇದೀಗ ಅದನ್ನು ಕಾಯಿಲೆಗಳ ಪಟ್ಟಿಯಿಂದ ತೆಗೆದುಹಾಕಿದೆ. ನಮ್ಮ ದೇಶದಲ್ಲಿ ಇಂದಿಗೂ ಸಲಿಂಗಕಾಮವನ್ನು ಅಸಹಜ, ಅನೈತಿಕ ಅಪರಾಧವೆಂದೇ ಪರಿಗಣಿಸಲಾಗಿದೆ. ಸಲಿಂಗಕಾಮ ಶಿಕ್ಷಾರ್ಹ ಅಪರಾಧವೆಂದು ಭಾರತೀಯ ದಂಡಸಂಹಿತೆ ಹೇಳುತ್ತದೆ. ಇದನ್ನು ಸಹಜ-ಸಾಮಾನ್ಯ ಎಂದೇ ಪರಿಗಣಿಸಿ ಎಂದು ಜನ ಕೋರಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪಾರ್ಲಿಮೆಂಟಿಗೆ ವಿಷಯವನ್ನು ವರ್ಗಾಯಿಸಿಬಿಟ್ಟಿದೆ. ಚರ್ಚೆ ನಡೆಯುತ್ತಿದೆ. ಏನೂ ನಿರ್ಧಾರವಾಗಿಲ್ಲ. ಭಾರತದಲ್ಲಿ ಗೇ ಕ್ಲಬ್‌ಗಳೂ, ಲೆಸ್ಬಿಯನ್ ಕ್ಲಬ್‌ಗಳೂ ಸಕ್ರಿಯವಾಗಿವೆ. ಪರಸ್ಪರ ಒಪ್ಪಿಗೆಯಿಂದ ಸಲಿಂಗಕಾಮ ನಡೆದರೆ ಪರವಾಗಿಲ್ಲ. ಆದರೆ, ಬಲತ್ಕಾರ ಹಾಗೂ ಬ್ಲಾಕ್‌ಮೇಲ್ ಸಲಿಂಗಕಾಮ ಅಪಾಯಕಾರಿ; ಲೈಂಗಿಕ ರೋಗಗಳು ಹರಡಲು ಇದು ಕಾರಣವಾಗುತ್ತದೆಂಬುದು ಎಲ್ಲ ಪ್ರಜ್ಞಾವಂತರ ಆತಂಕ.

ಸಲಿಂಗಕಾಮದಲ್ಲಿ ಮೂರು ತರಹದ ಜನರಿದ್ದಾರೆ:

1. ಸಲಿಂಗಕಾಮ ಮಾತ್ರ ಎನ್ನುವ ಗುಂಪು: ಇವರಿಗೆ ಲೈಂಗಿಕ ಸುಖ, ತೃಪ್ತಿಗೆ ಸಲಿಂಗಕಾಮವೇ ಬೇಕು. ಭಿನ್ನಲಿಂಗ ಕಾಮ ಅವರಿಗೆ ಬೇಡ. ಅದರಲ್ಲಿ ಅವರಿಗೂ ಒಂದಿಷ್ಟೂ ಆಸಕ್ತಿ ಇರುವುದಿಲ್ಲ.

2. ದ್ವಿಲಿಂಗ ಕಾಮ: ಇವರಿಗೆ ಸಲಿಂಗ ಮತ್ತು ಭಿನ್ನಲಿಂಗ ಕಾಮ ಎರಡರಲ್ಲೂ ಆಸಕ್ತಿ ಉಂಟು. ಎರಡು ವಿರುದ್ಧ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿ ಸುಖಿಸುತ್ತಾರೆ.

3. ಆಕಸ್ಮಿಕ ಅಥವಾ ಅನಿವಾರ್ಯ ಸಲಿಂಗಕಾಮ: ಇವರಿಗೆ ಭಿನ್ನಲಿಂಗ ಕಾಮದಲ್ಲೇ ಆಸಕ್ತಿ. ಆದರೆ, ಲೈಂಗಿಕ ಸಂಗಾತಿ ಇಲ್ಲದಿದ್ದಾಗ, ಲೈಂಗಿಕ ಬಯಕೆ ಇದ್ದಾಗ ಆಕಸ್ಮಿಕವಾಗಿ/ಅನಿವಾರ್ಯವಾಗಿ ಸಲಿಂಗ ಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಆದರೆ ಅದನ್ನು ಇಷ್ಟಪಡುವುದಿಲ್ಲ.

ನಮ್ಮ ದೇಶದಲ್ಲಿ ಸಲಿಂಗಕಾಮ ಚಟುವಟಿಕೆಯು ಮುಚ್ಚುಮರೆಯಲ್ಲಿ ನಡೆಯುತ್ತದೆ. ಹಾಸ್ಟೆಲ್‌ಗಳಲ್ಲಿ, ಜೈಲುಗಳಲ್ಲಿ, ವಸತಿಗೃಹಗಳಲ್ಲಿ, ಪಬ್ಲಿಕ್ ಪಾರ್ಕ್‌ಗಳಲ್ಲಿ ಸಲಿಂಗರತಿ ಮಾಡುವ ಜನ ಇದ್ದಾರೆ. ಸಲಿಂಗಕಾಮ ಏಕೆ ಉತ್ಪತ್ತಿಯಾಗುತ್ತದೆ ಗೊತ್ತಿಲ್ಲ. ಅವರ ಮನಸ್ಸಿನ ಲೈಂಗಿಕ ಕೇಂದ್ರದಲ್ಲಿ ಏನು ವ್ಯತ್ಯಾಸವಾಗುತ್ತಿದೆ ತಿಳಿದಿಲ್ಲ.

ಇದೆಲ್ಲವನ್ನೂ ರಮಾನಂದನಿಗೆ ವಿವರಿಸಿ ಹೇಳಿದೆ. "ಹೌದು ಸರ್, ನಾನೂ ಗೂಗಲ್‌ನಲ್ಲಿ, ಮತ್ತಿತರ ಮಾಹಿತಿಕೋಶಗಳಲ್ಲಿ ಸಾಕಷ್ಟು ಓದಿದ್ದೇನೆ. ತಿಳಿದುಕೊಂಡಿದ್ದೇನೆ. ಆದರೆ, ನನ್ನ ಪ್ರಶ್ನೆಗೆ ನೀವು ಇನ್ನೂ ಉತ್ತರಿಸಿಲ್ಲ. ಲಲಿತಳಿಗೆ ಈ ವಿಷಯ ಹೇಳಲೇ ಅಥವಾ ಮುಚ್ಚಿಡಲೇ?’

"ಇದನ್ನೂ ನೀವೇ ನಿರ್ಧರಿಸಿ ರಮಾನಂದ. ಈಗ ನೀವು ಸಲಿಂಗಕಾಮದ ಇಚ್ಛೆಯನ್ನು ಕೈಬಿಟ್ಟಿದ್ದೀರಿ. ಅದು ಮುಂದುವರಿದಿದ್ದರೆ ಸಮಸ್ಯೆಯಾಗುತ್ತಿತ್ತು. ಅದು ಮುಂದುವರೆಯಲೂಬಾರದು. ನಿಮಗಿರುವ ಮೊದಲನೆಯ ದಾರಿ ಎಂದರೆ; ಅದು ಹಿಂದೆ ಇತ್ತು, ಈಗಿಲ್ಲ, ಹೀಗಾಗಿ ಲಲಿತಾ ಅವರಿಗೆ ನೀವು ಇದನ್ನು ಡಿಸ್‌ಕ್ಲೋಸ್ ಮಾಡುವ ಅಗತ್ಯವಿಲ್ಲ. ಮದುವೆಯಾಗುವಾಗ ವಧುವೇ ಆಗಲಿ, ವರನೇ ಆಗಲಿ, ಪರಸ್ಪರ ವಾಗ್ದಾನ ಮಾಡುವುದು; ‘ಧರ್ಮ, ಅರ್ಥ ಮತ್ತು ಕಾಮದಲ್ಲಿ ನಾನು ನಿನ್ನ ಹಿತ, ಕ್ಷೇಮವನ್ನು ಕಾಯುತ್ತೇನೆ. ನಿನ್ನನ್ನೂ ಉಲ್ಲಂಘಿಸುವುದಿಲ್ಲ. ನಿನಗೆ ಮೋಸ, ವಂಚನೆ ಮಾಡುವುದಿಲ್ಲ’ ಎಂದು. ಆದ್ದರಿಂದ ಭೂತಕಾಲದ ಅನುಭವ ಚಟುವಟಿಕೆ, ಆಸೆಗಳನ್ನು ಬಹಿರಂಗಪಡಿಸುವ ಅಗತ್ಯವಿಲ್ಲ. ಶೇ.50ರಷ್ಟು ಜನರ ಬಾಲ್ಯ. ಹರೆಯದಲ್ಲಿ ಲೈಂಗಿಕ ಅಪರಾಧ, ಅಪಚಾರಗಳು ನಡೆದಿರುತ್ತವೆ. ಅದನ್ನು ಬಹಿರಂಗ ಮಾಡುವ ಪ್ರಮೇಯವಿಲ್ಲ.”

ಇದನ್ನೂ ಓದಿ : ಸಮಾಧಾನ | ವಿನೋದನ ಏಕಾಗ್ರತೆಗೆ ಭಂಗ ತಂದಿದ್ದ ಆ ತಪ್ಪು ಗ್ರಹಿಕೆಯಾದರೂ ಏನು? 

“ಇನ್ನೊಂದು ದಾರಿ ಎಂದರೆ, ‘ನೀವು ಪ್ರಾಮಾಣಿಕವಾಗಿ ಇದರ ಬಗ್ಗೆ ಆಕೆಗೆ ಹೇಳಿ, ಹಿಂದೆ ಆಗಿದ್ದಕ್ಕೆ ವಿಷಾದಿಸಿ, ಆಕೆಗೆ ಲೈಂಗಿಕ ನಿಷ್ಠೆ ಬಗ್ಗೆ ಭರವಸೆ ನೀಡುವುದು. ಆಕೆಯೂ ವಿದ್ಯಾವಂತೆ ಆಗಿರುವುದರಿಂದ ನಿಮ್ಮ ಸಲಿಂಗಕಾಮದ ಬಗ್ಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ನಿಮ್ಮ ಪ್ರಾಮಾಣಿಕ ಮಾತನ್ನು ಆಕೆ ಮೆಚ್ಚಲೂಬಹುದು. ಈ ಎರಡು ದಾರಿಯಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ, ಮುಂದುವರಿಯಿರಿ. ದ್ವಂದ್ವವೇ ಬೇಡ. ನಾನು ಹೇಳುವುದು ನಿಮಗೆ ಸರಿ ಕಾಣಿಸುತ್ತಿದೆಯೇ?”

“ಹ್ಞೂಂ, ಸರಿ. ಮನೆಗೆ ಹೋಗಿ ನಿರ್ಧಾರಕ್ಕೆ ಬರುತ್ತೇನೆ ಸರ್. ನೀವು ನನ್ನ ಮನದ ಭಾರ, ದುಗುಡ ಕಡಿಮೆ ಮಾಡಿದಿರಿ. ಆದರೆ ಒಂದು ಪ್ರಶ್ನೆ, ಸಲಿಂಗಕಾಮಕ್ಕೆ ಚಿಕಿತ್ಸೆ ಇದೆಯೇ?”

"ಚಿಕಿತ್ಸೆ ಎನ್ನುವುದಕ್ಕಿಂತ ಅದರಿಂದ ಹೊರಬರಲು ಮನೋಚಿಕಿತ್ಸೆ ತರಬೇತಿ ಇದೆ. ವ್ಯಕ್ತಿ ಸ್ವಇಚ್ಛೆಯಿಂದ ತರಬೇತಿ ಪಡೆದರೆ ಹೊರಬರುವುದು ಕಷ್ಟವೇನಲ್ಲ.”

ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
#MeToo | ಟಿವಿ ವೃತ್ತಿಪರರ ಮಾತಿನಲ್ಲಿ ಧಾರಾವಾಹಿ ಲೋಕದತ್ತ ಒಂದು ನೋಟ
Editor’s Pick More