ರೇಣುಕಾ ನಗೆಯಿಂದ ಕನಲಿದ ಮೋದಿ, ವೆಂಕಯ್ಯ ಮೇಲ್‌ ಈಗೋ ಪ್ರದರ್ಶಿಸಿದರೆ?

ಬಾಲ್ಯದಿಂದಲೇ ಪುರುಷ ಶ್ರೇಷ್ಠ ಮತ್ತು ಮಹಿಳೆ ಕನಿಷ್ಠ ಎನ್ನುವ ಪಾಠ ಕಲಿಸುವ ಸಂಘ ಪರಿವಾರದ ನಡುವೆ ಬೆಳೆದವರು ಪ್ರೇಮವನ್ನು ಬೇಡಿ ಬಂದ ‘ಶೂರ್ಪನಖಿ’ಯನ್ನು ರಕ್ಕಸಿ ಎನ್ನುವುದು ಅಥವಾ ಸಂಸತ್ತಿನಲ್ಲಿ ಒಬ್ಬ ಮಹಿಳೆ ಜೋರಾಗಿ ನಕ್ಕರೆ ಆಕೆಯನ್ನು ರಾಕ್ಷಸಿ ಎನ್ನುವುದು ಸಹಜವೇ 

ಪ್ರತಿಯೊಬ್ಬ ಭಾರತೀಯನೂ ಮಹಾಭಾರತದಲ್ಲಿ ಕೌರವರು ಮತ್ತು ಪಾಂಡವರ ನಡುವೆ ಯುದ್ಧವಾಗಿ ಕೌರವರ ಸರ್ವನಾಶವಾದ ಕತೆಯನ್ನು ಬಾಲ್ಯದಿಂದಲೇ ತುಣುಕು ತುಣುಕಾಗಿ ಕೇಳಿಕೊಂಡೇ ಬೆಳೆದಿರುತ್ತಾರೆ. ಹೀಗಾಗಿ ಪ್ರಬುದ್ಧತೆ ಬೆಳೆಯುವ ಸಮಯಕ್ಕೆ ನಮಗೆ ತನ್ನಿಂತಾನಾಗೇ ಮಹಾಭಾರತದ ಸಂಪೂರ್ಣ ಕಥಾನಕವೂ ಗೊತ್ತಿರುತ್ತದೆ. ಕೌರವರ ಸರ್ವನಾಶಕ್ಕೆ ಕಾರಣವಾಗುವುದು ತುಂಬಿದ ಸಭಾಂಗಣದಲ್ಲಿ ಪಾಂಡವರ ಪತ್ನಿ ದ್ರೌಪದಿಯ ಸೀರೆ ಎಳೆಯುವ ಪ್ರಕರಣ ಎನ್ನುವುದೂ ನಮಗೆ ತಿಳಿದಿದೆ. ಆದರೆ ದುರ್ಯೋದನ ಹೀಗೆ ಸಭಾಂಗಣಕ್ಕೆ ಕರೆದು ದ್ರೌಪದಿಯ ಅವಮಾನ ಮಾಡಲೂ ಕಾರಣವಿದೆ. ದುರ್ಯೋದನನ ಆಕ್ರೋಶಕ್ಕೆ ಕಾರಣ ದ್ರೌಪದಿಯ ನಗು!

ಹೌದು, ಪಾಂಡವರು ಕಟ್ಟಿದ ಹೊಸ ರಾಜ್ಯವನ್ನು ನೋಡಲೆಂದು ದುರ್ಯೋದನ ಬರುತ್ತಾನೆ. ಪಾಂಡವರು ನವತಂತ್ರಜ್ಞಾನದಿಂದ ಕಟ್ಟಿದ ಅರಮನೆಯ ರಹಸ್ಯಕ್ಕೆ ಬೇಸ್ತುಬಿದ್ದು ಈಜುಕೊಳದಲ್ಲಿ ನೀರಿಗೆ ಬೀಳುತ್ತಾನೆ ದುರ್ಯೋದನ. ಅದನ್ನು ಕಂಡ ದ್ರೌಪದಿ ಜೋರಾಗಿ ನಗುವಳು. ದ್ರೌಪದಿ ತನ್ನನ್ನು ನೋಡಿ ನಕ್ಕಾಗ ದುರ್ಯೋದನನ ಪುರುಷ ಅಹಂಗೆ ಪೆಟ್ಟು ಬೀಳುತ್ತದೆ. ಅಂತಿಮವಾಗಿ ಇದು ಮಹಾಭಾರತ ಯುದ್ಧಕ್ಕೆ ಕಾರಣವಾಗಿಬಿಡುತ್ತದೆ.

ಈ ಕತೆ ಈಗ ನೆನಪಾಗಲು ಕಾರಣವಿದೆ. ಇದೇ ಬುಧವಾರದಂದು ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಭಾಷಣ ಮಾಡುತ್ತಿದ್ದಾಗ ಆಧಾರ್ ಬಗ್ಗೆ ಹೇಳಿದ ಮಾತು ಕಾಂಗ್ರೆಸ್ ನಾಯಕಿ ರೇಣುಕಾ ಚೌಧುರಿಯವರಿಗೆ ನಗು ತರಿಸುತ್ತದೆ. ಅವರು ಎಲ್ಲರಿಗೂ ಕೇಳಿಸುವಂತೆಯೇ ಗೊಳ್ಳೆಂದು ನಕ್ಕುಬಿಡುತ್ತಾರೆ. ಸಂಸತ್ತಿನಲ್ಲಿ ವಿರೋಧ ಪಕ್ಷದ ಯಾವುದೇ ಪುರುಷ ಸದಸ್ಯ ಹೀಗೆ ನಕ್ಕಿದ್ದರೆ ಮಾತನಾಡುತ್ತಿದ್ದವರು ಒಂದು ನಿಮಿಷ ಸುಮ್ಮನಿದ್ದು, ಮಾತು ಮುಂದುವರಿಸುತ್ತಿದ್ದರೇನೋ. ಆದರೆ ನಕ್ಕಿದ್ದು ಮಹಿಳೆ! ಹೀಗಾಗಿ ಆಡಳಿತ ಪಕ್ಷದ ಸದಸ್ಯರು ಸುಮ್ಮನಿರಲು ಸಾಧ್ಯವೆ? ನರೇಂದ್ರ ಮೋದಿಯವರು ತಕ್ಷಣವೇ ರೇಣುಕಾ ಚೌಧುರಿಯವರನ್ನು ಪರೋಕ್ಷವಾಗಿ ಶೂರ್ಪನಖಿಗೆ ಹೋಲಿಸಿದರು. “ ಟಿವಿಯಲ್ಲಿ ರಾಮಾಯಣ ಧಾರಾವಾಹಿಯ ನಂತರ ಇಂತಹ ನಗು ಕಂಡಿದ್ದು ಈಗಲೇ” ಎಂದು ಪ್ರಧಾನಿ ಕಮೆಂಟ್ ಮಾಡಿದರು.

ಪ್ರಧಾನಿಯವರ ಮಾತಿಗೆ ಆಡಳಿತ ಪಕ್ಷದವರ ಪ್ರತಿಕ್ರಿಯೆಯನ್ನು ಗಮನಿಸಿದರೆ, ಎಲ್ಲಾ ಪುರುಷ ಸದಸ್ಯರೂ ಮೇಜು ಕುಟ್ಟಿ ಖುಷಿಯಲ್ಲಿ ನಗುತ್ತಾ ಸಂತಸ ವ್ಯಕ್ತಪಡಿಸಿದರು. ಟಿವಿ ಪರದೆಯಲ್ಲಿ ಕಾಣುತ್ತಿದ್ದ ಆಡಳಿತ ಪಕ್ಷದ ಸದಸ್ಯರಲ್ಲಿ ಇಬ್ಬರು ಮಹಿಳೆಯರೂ ಇದ್ದರು. ಉಮಾ ಭಾರತಿಯವರು ಮೇಜು ಕುಟ್ಟಲಿಲ್ಲ. ಬದಲಾಗಿ ಬಾಯಿಗೆ ಕೈ ಅಡ್ಡ ಹಿಡಿದು ಅಚ್ಚರಿಯ ನಗು ಬೀರಿದರು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗಂಭೀರವಾಗಿ ಸಣ್ಣಗೆ ನಕ್ಕರು. ಮೋದಿಯವರ ‘ರಾಕ್ಷಸ ನಗು’ ಎನ್ನುವ ಕಮೆಂಟಿಗೆ ಬಿಜೆಪಿಯ ಮಹಿಳಾ ಸದಸ್ಯರೇಕೆ ಮೇಜು ಕುಟ್ಟಲಿಲ್ಲ? ಅವರೇಕೆ ಖುಷಿಯಿಂದ ನಗಲಿಲ್ಲ? ಇದಕ್ಕೆ ಇಂಗ್ಲಿಷ್ ನಲ್ಲಿ ಒಂದು ಶಬ್ದವಿದೆ. ಅದುವೇ ‘ಮೇಲ್ ಈಗೋ’. ಅಂದರೆ ‘ಪುರುಷ ಅಹಂ’ ಎನ್ನುವುದು. ಈ ಪುರುಷ ಅಹಂ ಸಾಮಾನ್ಯವಾಗಿ ಮಹಿಳೆಯೊಬ್ಬಳು ತನ್ನನ್ನು ಅಣಕಿಸಿ ಜೋರಾಗಿ ನಗುವುದನ್ನು ಇಷ್ಟಪಡುವುದಿಲ್ಲ. ಅಣಕಿಸಿ ನಗುವುದು ಮಾತ್ರವಲ್ಲ, ಮಹಿಳೆ ಮನೆಯಿಂದ ಹೊರಗೆ ಕಾಲಿಟ್ಟಾಗ ಯಾವ ರೀತಿ ವರ್ತಿಸಬೇಕು ಎನ್ನುವುದನ್ನು ‘ಪುರುಷ ಅಹಂ’ ಮೊದಲೇ ನಿರ್ಧರಿಸಿರುತ್ತದೆ. ಅದನ್ನು ಮೀರಿ ಮಹಿಳೆ ನಡೆದಾಗ ಆ ಅಹಂಗೆ ಪೆಟ್ಟಾಗುತ್ತದೆ.

ಇದನ್ನೂ ಓದಿ : ದಕ್ಷಿಣದ ಹೆಣ್ಣಿನ ನಗುವನ್ನು ಅಪಹಾಸ್ಯ ಮಾಡಿದ ಪ್ರಧಾನಿಗೆ ಒಂದಷ್ಟು ಪ್ರಶ್ನೆ

ಸಂಸತ್ತಿನಲ್ಲಿ ಪ್ರಧಾನಿಯವರು ಮಾಡಿದ ಟೀಕೆ ಬಹಳಷ್ಟು ಚರ್ಚೆಗೆ ಒಳಗಾಗಿದೆ. ಆದರೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸಭಾಪತಿ ಸ್ಥಾನದಲ್ಲಿ ಕುಳಿತು ಮಾಡಿದ ಕಮೆಂಟ್ ಹೆಚ್ಚು ಚರ್ಚೆಗೆ ಒಳಗಾಗಿಲ್ಲ. ಅವರ ಧ್ವನಿಯಲ್ಲೂ ಅದೇ ‘ಪುರುಷ ಅಹಂ’ ಅನ್ನು ಗುರುತಿಸಬಹುದು. “ಯು ಹ್ಯಾವ್ ಎನೀ ಪ್ರಾಬ್ಲೆಂ ಗೋ ಟೂ ಡಾಕ್ಟರ್ ಪ್ಲೀಸ್ (ನಿಮಗೇನಾದರೂ ಸಮಸ್ಯೆ ಇದ್ದಲ್ಲಿ ವೈದ್ಯರ ಬಳಿಗೆ ಹೋಗಿ)” ಎಂದು ವೆಂಕಯ್ಯ ನಾಯ್ಡು ಅವರು ರೇಣುಕಾ ಚೌಧುರಿಗೆ ಸೂಚಿಸುತ್ತಾರೆ! ಒಬ್ಬ ಮಹಿಳೆ ಬಹಿರಂಗವಾಗಿ ಜೋರಾಗಿ ನಕ್ಕರೆ ಆಕೆಗೆ ಏನೋ ಮಾನಸಿಕ ಖಾಯಿಲೆ ಇದೆ ಎನ್ನುತ್ತಾರೆ ಈ ದೇಶದ ಉಪರಾಷ್ಟ್ರಪತಿ ! ಇದೇ ಪುರುಷ ಅಹಂ.

ಭಾರತೀಯ ಸಮಾಜ ಮಹಿಳೆಯರಿಗಾಗಿ ಮುಂದಿಡುವ ಇಂತಹ ನಿಯಮಗಳು ಇಂದಿನದಲ್ಲ. ಮಹಿಳೆಯರು ಪ್ರತೀ ಕ್ಷೇತ್ರದಲ್ಲಿ, ಪ್ರತೀ ವೃತ್ತಿಯಲ್ಲಿ, ಪ್ರತೀ ಸಂಬಂಧದಲ್ಲಿ ಪುರುಷ ಅಹಂ ಜೊತೆಗೆ ಹೋರಾಡುತ್ತಲೇ ಬೆಳೆಯುತ್ತಾರೆ, ಸಾವಿನವರೆಗೂ ಈ ಹೋರಾಟ ಮುಂದುವರಿಯುತ್ತದೆ. ನಾವು ಇದನ್ನು ಮನುವಾದ ಎಂದು ಕರೆಯುತ್ತಾ ಬಂದಿದ್ದೇವೆ. ‘ಮನುಸ್ಮೃತಿ’ಯನ್ನು ಓದಿ ಅರ್ಥಮಾಡಿಕೊಳ್ಳುವಷ್ಟು ಪಂಡಿತೆಯಲ್ಲದ ಕಾರಣ ಮನು ಏನು ಹೇಳಿದ್ದಾರೆ ಎನ್ನುವ ಬಗ್ಗೆ ಇಲ್ಲಿ ಚರ್ಚೆ ಬೇಡ. ಆದರೆ ಬಾಲ್ಯದಿಂದಲೇ ಸ್ವತಃ ಅನುಭವಿಸಿದ ಕೆಲವು ವಿಷಯಗಳನ್ನಂತೂ ಇಲ್ಲಿ ಚರ್ಚಿಸಬಹುದು.

ಬಾಲಿಕಾ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾಗ ನಡೆದ ಕೆಲವು ಘಟನೆಗಳನ್ನು ಇಲ್ಲಿ ನೆನಪಿಸಲೇಬೇಕು. ತರಗತಿಯಲ್ಲಿ ಕುಳಿತಿದ್ದಾಗ ಮಕ್ಕಳು ನೆಲದ ಮೇಲೆ ಕಾಲನ್ನು ಅತ್ತ ಇತ್ತ ಶಬ್ದ ಮಾಡುವುದು ಸಾಮಾನ್ಯ ವಿಚಾರ. ಆದರೆ ಅಧ್ಯಾಪಕರೊಬ್ಬರು “ಹೆಣ್ಮಕ್ಕಳು ಹೀಗೆ ಜೋರಾಗಿ ಶಬ್ದ ಮಾಡುತ್ತಾ ನೆಲದ ಮೇಲೆ ಕಾಲು ಎಳೆಯಬಾರದು,” ಎಂದು ಉಪದೇಶ ನೀಡಿದ್ದರು. ಪ್ರೌಢಶಾಲೆಯಲ್ಲಿ ತಮಾಷೆ ಮಾಡುತ್ತಾ ಪಾಠ ಮಾಡುವ ಗಣಿತ ಶಿಕ್ಷಕರೊಬ್ಬರಿದ್ದರು. ಅವರ ತರಗತಿ ಎಂದರೆ ಬಾಲಿಕೆಯರ ನಗು ಅಷ್ಟು ದೂರಕ್ಕೆ ಕೇಳುತ್ತಿತ್ತು. ಅವರ ತಮಾಷೆ ಮಾತುಗಳಿಗೆ ಇಡೀ ತರಗತಿ ಗೊಳ್ಳೆಂದು ನಗುತ್ತಿತ್ತು. ಇದೇ ವಿಷಯದಲ್ಲಿ ಮತ್ತೊಬ್ಬ ಶಿಕ್ಷಕರು, “ಹೀಗೆ ಹೆಣ್ಮಕ್ಕಳು ಜೋರಾಗಿ ನಗುವುದು ಶೋಭೆ ತರುವುದಿಲ್ಲ. ನಗುವನ್ನು ನಿಯಂತ್ರಣದಲ್ಲಿಡಲು ಕಲಿಯಿರಿ,” ಎಂದು ತರಗತಿಯಲ್ಲಿ ಸಲಹೆ ನೀಡಿದ್ದರು. ಒಟ್ಟಾರೆ ಹೇಳಬೇಕೆಂದರೆ ಹೆಣ್ಣೆಂದರೆ ಇವರಿಗೆ ನಯ-ವಿನಯ ಪ್ರಕಟಿಸುತ್ತಾ ಮಿಥಿಲೆಯ ಸೀತೆಯಂತಿರಬೇಕು.

ಹೀಗೆ, ಸ್ತ್ರೀಯರು ಹಾಗೆ ಮಾಡಬಾರದು, ಹೀಗೆ ಮಾಡಬಾರದು ಎನ್ನುವ ಉಪದೇಶಗಳು ಬಾಲ್ಯದಿಂದಲೇ ಬಂದಿರುತ್ತವೆ. ಕೆಲವೇ ಪುರುಷರು ಈ ಉಪದೇಶಗಳ ಮಿತಿಯನ್ನು ಮೀರಿ ಮಹಿಳೆಯನ್ನು ಗೌರವಿಸುವುದನ್ನು ಕಲಿಯುತ್ತಾರೆ. ಹಾಗೆಯೇ ಕೆಲವೇ ಮಹಿಳೆಯರು ಈ ಉಪದೇಶಗಳ ಮಿತಿಯನ್ನು ಮೀರಿ ಸ್ವತಂತ್ರ ಚಿಂತನೆಯಲ್ಲಿ ಗಟ್ಟಿಗಿತ್ತಿಯಾಗಿ ಬದುಕಲು ಕಲಿಯುತ್ತಾರೆ. ಆದರೆ ಬಾಲ್ಯದಿಂದಲೇ ಪುರುಷ ಶ್ರೇಷ್ಠ ಮತ್ತು ಮಹಿಳೆ ಕನಿಷ್ಠ ಎನ್ನುವ ಪಾಠವನ್ನು ಕಲಿಸುವ ಸಂಘ ಪರಿವಾರದ ನಡುವೆ ಬೆಳೆದವರು ಪ್ರೇಮವನ್ನು ಬೇಡಿ ಬಂದ ‘ಶೂರ್ಪನಖಿ’ಯನ್ನು ರಾಕ್ಷಸಿ ಎನ್ನುವುದು ಅಥವಾ ಸಂಸತ್ತಿನಲ್ಲಿ ಒಬ್ಬ ಮಹಿಳೆ ಜೋರಾಗಿ ನಕ್ಕರೆ ಆಕೆಯನ್ನು ರಾಕ್ಷಸಿ ಎನ್ನುವುದು ಸಹಜವೇ ಬಿಡಿ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More