ಹೆಣ್ಣು ನಗಬಾರದು, ಕುಡಿಯಬಾರದು, ಇನ್ನು ಏನೇನು ‘ಬಾರದು’ಗಳು ಬರಲಿವೆಯೋ!

ಸಂಸತ್ತಿನಲ್ಲಿ ರೇಣುಕಾ ಚೌಧುರಿಯವರು ನಕ್ಕದ್ದು ತಮಾಷೆಗೆ ಕಾರಣವಾಯಿತು. ಪರೋಕ್ಷವಾಗಿ, ಹೆಣ್ಣು ಹಾಗೆ ನಗಬಾರದು ಎನ್ನಲಾಯಿತು. ಈಗ ಪರಿಕ್ಕರ್‌ ಕುಡೀಬಾರದು ಎಂದಿದ್ದಾರೆ. ಇಂಥ ಹೇಳಿಕೆಗಳು ಹೆಣ್ಣಿನ ಆಯ್ಕೆಯ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ

ಸ್ನೇಹಿತೆಯೊಂದಿಗೆ ಬೆಂಗಳೂರಿನಲ್ಲಿರುವ ಒಂದು ಮಾಲ್‌ಗೆ ಹೋಗಿದ್ದೆ. ದೀಪಾವಳಿ ಹಬ್ಬಕ್ಕೆ ಒಂದು ವಾರ ಬಾಕಿ ಇತ್ತೆನ್ನಿ. ಸಹಜವಾಗಿಯೇ ಮಾಲ್‌ನಲ್ಲಿ ದೀಪಾವಳಿಯ ಖದರು ಕಾಣುತ್ತಿತ್ತು. ಮಾಲ್ ಒಳಗೆ ಪ್ರವೇಶಿಸಿದ ಕೂಡಲೇ ಬಲಭಾಗದಲ್ಲಿ ಲಿಕ್ಕರ್ ಶಾಪ್ ಕಣ್ಣಿಗೆ ಬಿತ್ತು. “ನೋಡು, ಹಿಂದಿನ ಬಾರಿ ಬಂದಾಗ ಈ ಜಾಗದಲ್ಲಿ ಬೇರೆ ಶಾಪ್ ಇತ್ತು. ಈಗ ಲಿಕ್ಕರ್ ಶಾಪ್ ಇದೆ,” ಎಂದು ಸ್ನೇಹಿತೆಗೆ ಹೇಳಿದೆ. ಹೀಗೆ ಇಬ್ಬರೂ ಮಾತನಾಡುತ್ತ ಲಿಕ್ಕರ್ ಶಾಪ್ ಪಕ್ಕದಲ್ಲೇ ರಾಶಿರಾಶಿಯಾಗಿ ಇಟ್ಟಿದ್ದ ದೀಪಾವಳಿ ಸಿಹಿತಿನಿಸುಗಳು, ಒಣಹಣ್ಣುಗಳು ಇತ್ಯಾದಿ ಉಡುಗೊರೆ ಪ್ಯಾಕೇಟ್‌ಗಳನ್ನು ನೋಡುತ್ತಿದ್ದೆವು. ಆಗ ನಮ್ಮ ಮುಂದೆಯೇ ಹಾದುಹೋದ ಸುಮಾರು 40 ಆಸುಪಾಸಿನ ಮಹಿಳೆ ನೇರವಾಗಿ ಲಿಕ್ಕರ್ ಶಾಪ್ ಹೊಕ್ಕರು. ಅಲ್ಲಿನ ಹುಡುಗರು ಅವರನ್ನು ವಿಚಿತ್ರವಾಗಿ ನೋಡಿದರು. ಆಕೆ ಬ್ಲೆಂಡರ್ಸ್ ಪ್ರೈಡ್ ವಿಸ್ಕಿ ಬಾಟಲ್ ತೆಗೆದುಕೊಂಡು ಕೌಂಟರ್ ಬಳಿ ಬಂದಾಗ ಬಿಲ್ ಮಾಡುವ ಹುಡುಗ ಪಿಳಿಪಿಳಿ ಕಣ್ಣು ಬಿಡುತ್ತ ನಿಂತಿದ್ದ. ಅಲ್ಲಿದ್ದ ಇನ್ನಿಬ್ಬರು ಹುಡುಗರು ಮರೆಯಲ್ಲಿಯೇ ಮುಸಿಮುಸಿ ನಗುತ್ತಿದ್ದರು. ಆಕೆ ಏನೋ ಅಪರಾಧ ಮಾಡಿದರು, ನಡೆಯಬಾರದ್ದು ನಡೆಯುತ್ತಿದೆ ಎನ್ನುವಂತಿತ್ತು ಅವರೆಲ್ಲರ ಮುಖಭಾವ. ಕೂಡಲೇ ನನ್ನ ಸ್ನೇಹಿತೆ ಪರೋಕ್ಷವಾಗಿ ಆ ಹುಡುಗರನ್ನು ಉದ್ದೇಶಿಸಿ, “ಯಾಕೆ ಹುಡುಗೀರು, ಮಹಿಳೆಯರು ಕುಡೀಬಾರ್ದಾ? ಛೇ ಜನ ಯಾವ ಕಾಲದಲ್ಲಿದ್ದಾರೆ ಮಾರಾಯ್ತಿ?” ಎಂದು ಕೇಳಿದಳು.

ಅವತ್ತು ನನ್ನ ಸ್ನೇಹಿತೆ ಕೇಳಿದ ಅದೇ ಪ್ರಶ್ನೆಯನ್ನು ಈಗ ಹೆಣ್ಣುಮಕ್ಕಳು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರಿಗೆ ಕೇಳುತ್ತಿದ್ದಾರೆ. “ಹುಡುಗೀರೂ ಬಿಯರ್ ಕುಡಿಯೋದು ಕಲಿತುಬಿಟ್ಟಿದ್ದಾರಲ್ಲಾ!’’ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ದಿಗಿಲುಬಿದ್ದಾರೆ. ಪಣಜಿಯಲ್ಲಿ ನಡೆದ ‘ಯುವ ಸಂಸತ್’ ಕಾರ್ಯಕ್ರಮದಲ್ಲಿ ರಾಜ್ಯದಲ್ಲಿ ಮಾದಕದ್ರವ್ಯ ವ್ಯಸನದ ಬಗ್ಗೆ ಮಾತನಾಡುತ್ತ ಸಚಿವರು, “ಈಗೀಗ ಯುವತಿಯರು ಮದ್ಯಪಾನದತ್ತ ಆಕರ್ಷಿತರಾಗುತ್ತಿರುವುದನ್ನು ನೋಡಿದರೆ ಆತಂಕವಾಗುತ್ತದೆ,” ಎಂದು ಪಕ್ಕಾ ಪಿತೃಪ್ರಧಾನ ಧೋರಣೆಯನ್ನು ಪ್ರದರ್ಶಿಸಿದರು.

ರಾಜ್ಯವನ್ನು ಮದ್ಯವ್ಯಸನ ಮುಕ್ತಗೊಳಿಸುವ ಮುಖ್ಯಮಂತ್ರಿಗಳ ಕಳಕಳಿಯನ್ನು ಒಪ್ಪೋಣ. ಆದರೆ “ಹುಡುಗಿಯರೂ ಬಿಯರ್ ಕುಡಿಯಲು ಶುರುಮಾಡಿದ್ದಾರೆ,” ಎಂದು ಅವರಾಡಿದ ಆಕ್ಷೇಪದ ಧಾಟಿಯ ಮಾತನ್ನು ಸಮರ್ಥಿಸುವುದು ಕಷ್ಟವಾಗುತ್ತದೆ. ದೇಶ ವಿದೇಶಗಳ ಪ್ರವಾಸಿಗರು ಧಾಂಗುಡಿ ಇಡುವ ಗೋವಾದಂತಹ ಪ್ರವಾಸಿ-ವಿಲಾಸಿ ಆಕರ್ಷಣೆಯ ತಾಣದ ಸಚಿವರೊಬ್ಬರು ಈ ರೀತಿ ಮಾತನಾಡುವರೇ ಎಂಬ ಪ್ರಶ್ನೆ ಕೂಡ ಇದೇ ಹೊತ್ತಿನಲ್ಲಿ ಮೂಡುತ್ತದೆ. ‘ಸಹನೆಯ ಮಿತಿ ಮೀರಿದೆ’ ಎಂದು ಸಚಿವರು ಹೇಳಿದ ಮಾತಿಗೆ “ಹೌದು, ಇಂತಹ ಹೇಳಿಕೆಗಳನ್ನು ಒಪ್ಪುವಷ್ಟು ಸಹನೆ ನಮಗೂ ಇಲ್ಲ,” ಎಂದು ಹೆಣ್ಣುಮಕ್ಕಳು ಜವಾಬು ಕೊಡುತ್ತಿದ್ದಾರೆ.

ಸಂಸತ್ತಿನಲ್ಲಿ ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ನಗುವನ್ನು ಕುರಿತು ಪ್ರಧಾನಿಯಾಡಿದ ಗೇಲಿ ಮಾತಿನ ವಿವಾದ ತಣ್ಣಗಾಗುವ ಮುನ್ನವೇ ಅವರದ್ದೇ ಪಾಳೆಯದ ಸಚಿವರಿಂದ ಈಗ ಇನ್ನೊಂದು ವಿವಾದಾಸ್ಪದ ಹೇಳಿಕೆ ಹೊರಬಿದ್ದಿದೆ.

ಮಹಿಳಾ ರಾಜಕಾರಣಿಗಳು ಹಾಗೂ ಇತರ ಮಹಿಳೆಯರ ಕುರಿತಾಗಿ ಈ ರೀತಿ ಆಕ್ಷೇಪಾರ್ಹ ಮಾತನಾಡುವುದು, ಗೇಲಿ ಮಾಡುವುದು ಪುರುಷ ರಾಜಕಾರಣಿಗಳ ಚಾಳಿ ಆಗಿಬಿಟ್ಟಿದೆ. ಪುರುಷ ಅಹಮಿಕೆಯೆಂಬ ಅಂಕುಶದಿಂದ ಮಹಿಳೆಯರನ್ನು ನಿಯಂತ್ರಿಸುವುದು ಇದರ ಹಿಂದಿನ ಉದ್ದೇಶ ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ. ಹೆಣ್ಣಿನ ಆಯ್ಕೆ, ಅಭಿರುಚಿ, ನಡವಳಿಕೆಯನ್ನು ತಾವೇ ನಿರ್ದೇಶಿಸುವುದಕ್ಕೆ ಗುತ್ತಿಗೆ ಪಡೆದಂತೆ ರಾಜಕಾರಣಿಗಳು, ಧಾರ್ಮಿಕ ಮುಖಂಡರು ಇಂತಹ ಅಣಿಮುತ್ತುಗಳನ್ನು ಉದುರಿಸುವುದು ಮಾಮೂಲಿಯಾಗಿಬಿಟ್ಟಿದೆ. ಆದರೆ ಇಂತಹ ಮಾತುಗಳನ್ನು ಮಾಮೂಲಾಗಿ ಸ್ವೀಕರಿಸುವಷ್ಟು ಸ್ಥಿತಪ್ರಜ್ಞ ಮನಸ್ಥಿತಿ ಇಂದಿನ ಹೆಣ್ಣುಮಕ್ಕಳಿಗೆ ಇಲ್ಲ ಎನ್ನುವ ಸೂಕ್ಷ್ಮ ಗೋವಾ ಮುಖ್ಯಮಂತ್ರಿಗೆ ಇರಬೇಕಿತ್ತಲ್ಲವೇ? ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಕನಿಷ‍್ಠ ಪಕ್ಷ ಈ ಒಂದು ಎಚ್ಚರಿಕೆ ಇಲ್ಲದೆಯೇ ಹೀಗೆ ಬೀಡುಬೀಸಾಗಿ ಮಾತನಾಡಿದರೆ ಅದನ್ನು ಖಂಡಿತವಾಗಿಯೂ ಆಕ್ಷೇಪಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಇಂತಹ ಮೂರ್ಖತನದ ಮಾತಿಗೆ ಗಹಗಹಿಸಿ ನಗುವಂತಾಗಿದೆ. ಈಗಾಗಲೇ ಇತ್ತ ಸಾಮಾಜಿಕ ಜಾಲ ತಾಣಗಳಲ್ಲಿ ಈ ಹೇಳಿಕೆಯು ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್‌ | ಪರ್ರಿಕರ್‌ಗೆ ಬಿಯರ್‌ ಸೇವನೆಯ ಹೇಳಿಕೆಗೆ ಮಹಿಳೆಯರ ಟಾಂಗ್‌

ಹಾಗೆ ನೋಡಿದರೆ, ಶುರುವಿನಲ್ಲಿ ಪ್ರಸ್ತಾಪಿಸಿದ ಮಾಲ್ ಪ್ರಸಂಗದ ಹುಡುಗರಿಗೂ ಈ ಸಚಿವರಿಗೂ ಏನಾದರೂ ವ್ಯತ್ಯಾಸ ಇದೆಯಾ ಎಂದು ಯೋಚಿಸುವಂತಾಗಿದೆ. ಇಂತಹ ಮನಸ್ಥಿತಿಯ ಜನಪ್ರತಿನಿಧಿಗಳಿಂತ ನಮ್ಮೂರಿನ ಕಾಳನೇ ಎಷ್ಟೋ ವಾಸಿ ಎಂದೂ ಅನಿಸುತ್ತದೆ. ನಿತ್ಯ ಕೂಲಿ ಮಾಡಿ ಬದುಕುವ ಕಾಳನಂತವರಿಗೆ ಇಂತಹ ತಾರತಮ್ಯ ಹತ್ತಿರವೂ ಸುಳಿಯುವುದಿಲ್ಲ. ತನ್ನಂತೆಯೇ ಹೆಂಡತಿಯೂ ದುಡಿದು ದಣಿದು ಬಂದಿದ್ದಾಳೆ, ಆಕೆಗೂ ರವಷ್ಟು ಕೊಡುವ ಎಂಬ ಉದಾರತೆ ಮೆರೆಯುತ್ತಾರೆ. ಇದನ್ನು ಇಲ್ಲಿ ಪ್ರಾಸಂಗಿಕವಾಗಿ ಹೇಳಿದ್ದಷ್ಟೆ. ಹೆಣ್ಣುಮಕ್ಕಳ ಬಗ್ಗೆ ಮಾತ್ರವಲ್ಲ, ಕುಡಿಯುವ ಗಂಡುಮಕ್ಕಳ ಬಗ್ಗೆಯೂ ಸಚಿವರಿಗೆ ಕಾಳಜಿ ಇದ್ದರೆ ಒಳ್ಳೆಯದೇನೋ. ಹೆಣ್ಣು-ಗಂಡೆಂಬ ಬೇಧವಿಲ್ಲದೆ ಎಲ್ಲರ ಆರೋಗ್ಯದ ಮೇಲೂ ಮದ್ಯಪಾನ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದು ಸಚಿವರಿಗೆ ಗೊತ್ತಿದ್ದರೆ ಸಾಕು.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More