ಸ್ಯಾನಿಟರಿ ಪ್ಯಾಡ್‌ಗಳ ಮಾರ್ಕೆಟ್ ತಂತ್ರ ಜಾಗೃತಿಯಾಗಿ ಬದಲಾದ ಸೋಜಿಗ

ಸ್ಯಾನಿಟರಿ ಪ್ಯಾಡ್‌ಗಳಿಗೆ ಬೇಡಿಕೆ ಸೃಷ್ಟಿಸಲು ಜಾಹೀರಾತು ಸಂಸ್ಥೆಗಳು ಮತ್ತು ಮಾರುಕಟ್ಟೆ ಕೌಶಲ್ಯವನ್ನು ರೂಪಿಸುವವರು ಸಾಕಷ್ಟು ಸರ್ಕಸ್ ಮಾಡಿದ್ದಾರೆ. ಆ ಬೇಡಿಕೆಯನ್ನು ಸೃಷ್ಟಿಸುವುದೇ ದೊಡ್ಡ ಸವಾಲಾಗಿದ್ದ ದಿನಗಳವು. ಸ್ಯಾನಿಟರಿ ಪ್ಯಾಡ್‌ನ ಈ ಪ್ರಮಾಣದ ಬಳಕೆಗೆ ಅಂದಿನ ಆ ಸರ್ಕಸ್ಸೇ ಕಾರಣ!

ಋತುಸ್ರಾವದ ಬಗ್ಗೆ ಜನರಲ್ಲಿದ್ದ ಮಡಿವಂತಿಕೆ ಮತ್ತು ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸುವುದು ಎಷ್ಟು ಅಗತ್ಯ ಎನ್ನುವ ಸಾಮಾಜಿಕ ಸಂದೇಶವನ್ನುಇತ್ತೀಚೆಗೆ ಬಿಡುಗಡೆಯಾಗಿರುವ ‘ಪ್ಯಾಡ್‌ಮ್ಯಾನ್’ ಸಿನಿಮಾ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಈಗ ಸ್ಯಾನಿಟರಿ ಪ್ಯಾಡ್ ಬಗ್ಗೆ ಚರ್ಚೆಯೂ ಹೆಚ್ಚಾಗಿದೆ. ಆದರೆ, ಒಂದು ಕಾಲದಲ್ಲಿ ಬಳಕೆಯೇ ಮಾಡದ ವಸ್ತುವೊಂದು ಈಗ ಸ್ತ್ರೀಯರ ಅತ್ಯಗತ್ಯ ವಸ್ತುವಾಗಿದ್ದು ಹೇಗೆನ್ನುವುದು ಕುತೂಹಲಕರ.

ಸ್ತ್ರೀಯರ ನಡುವೆ ಈ ಸ್ಯಾನಿಟರಿ ಪ್ಯಾಡ್‌ಗಳಿಗೆ ಬೇಡಿಕೆ ಸೃಷ್ಟಿಸಲು ಜಾಹೀರಾತು ಸಂಸ್ಥೆಗಳು ಮತ್ತು ಮಾರುಕಟ್ಟೆ ಕೌಶಲ್ಯವನ್ನು ರೂಪಿಸುವವರು ಸಾಕಷ್ಟು ಸರ್ಕಸ್ ಮಾಡಿದ್ದಾರೆ. ಆ ಬೇಡಿಕೆಯನ್ನು ಸೃಷ್ಟಿಸುವುದೇ ದೊಡ್ಡ ಸವಾಲಾಗಿದ್ದ ದಿನಗಳವು. ಕಾರಣ, ಮಡಿವಂತಿಕೆ, ಆರ್ಥಿಕ ಪರಿಸ್ಥಿತಿ. ಪ್ರಮುಖವಾಗಿ ವ್ಯವಹಾರ, ಲಾಭ ಗಳಿಕೆಯಿಂದ ಹುಟ್ಟಿದ ಈ ಕಂಪನಿಗಳು ಗೆಲುವು ಸಾಧಿಸಿದ್ದು ಹೇಗೆ ಎಂಬ ಪ್ರಶ್ನೆಗಳು ಏಳುತ್ತವೆ. ಯಾರೂ ಯೋಚಿಸದ ಮಹಿಳೆಯರ ಅಗತ್ಯಗಳನ್ನು ಅರಿತ ಕಂಪನಿಗಳು ಜಾಗತಿಕವಾಗಿ ಯಶಸ್ವಿಯಾಗಿದ್ದು ಹೇಗೆ ಎಂಬುದರ ಹಿಂದಿನ ಕತೆಗಳೂ ರೋಚಕವಾಗಿವೆ. ಅಂದಿನ ಜಾಹೀರಾತು ತಂತ್ರಗಾರಿಕೆಯಿಂದ ಇಂದು ಭಾರತೀಯ ಸ್ತ್ರೀ ಸಮುದಾಯದಲ್ಲಿ ಅಲ್ಪ ಮಟ್ಟಿಗಿನ ಆರೋಗ್ಯ ಕಾಳಜಿಯ ಬದಲಾವಣೆ ಬಂದಿರುವುದಂತೂ ನಿಜ. ಈ ಹಿಂದೆ ಋತುಸ್ರಾವದ ರಕ್ತವನ್ನು ಕಾಣದಂತೆ ಗೌಪ್ಯತೆ ಕಾಪಾಡಬೇಕು ಹಾಗೂ ನಿಯಂತ್ರಿಸಬೇಕು ಎಂಬ ಕಲ್ಪನೆಯನ್ನು ತೊಡೆದುಹಾಕಿ ನೈರ್ಮಲ್ಯ, ಆರೋಗ್ಯ ಹಾಗೂ ಅನುಕೂಲವೆನ್ನುವ ಅಂಶಗಳನ್ನಿಟ್ಟುಕೊಂಡು ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಜನರಿಗೆ ಮಾರಲು ಸಂಸ್ಥೆಗಳೂ ಸಕಾರಣಗಳನ್ನು ಹುಡುಕಿಕೊಂಡಿವೆ.

ಋತುಸ್ರಾವದ ಸಂದರ್ಭದಲ್ಲಿ ಮಹಿಳೆಯರು ಬಳಸಿದ ಸ್ಯಾನಿಟರಿ ನ್ಯಾಪ್‌ಕಿನ್ ಉತ್ಪನ್ನದ ಇತಿಹಾಸ ಏನು? ಗೂಗಲ್ ಹೀಗೊಂದು ಸ್ಯಾನಿಟರಿ ನ್ಯಾಪ್‌ಕಿನ್/ವಸ್ತ್ರ/ಪ್ಯಾಡ್‌‌ಗಳ ಇತಿಹಾಸವನ್ನು ಆಂಗ್ಲೋ-ಅಮೆರಿಕನ್ ಪ್ರದೇಶದಲ್ಲಿ ಕೆದಕಿದೆ. ಇಂತಹ ಒಂದು ಕಿರುಸಂಶೋಧನೆಯು ಭಾರತದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಇತಿಹಾಸ ಬಿಚ್ಚಿಡುತ್ತದೆ. ಇದಕ್ಕೆ ಪೂರಕವಾಗುವಂತೆ ‘ಟೈಮ್ಸ್ ಆಫ್ ಇಂಡಿಯಾ’ದ ಸಂಗ್ರಹವು ೨೦ನೇ ಶತಮಾನದ ಮೊದಲಾರ್ಧದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ ಕಂಪನಿಗಳು ಸಂಘಟಿತ ಮಧ್ಯಮ ಹಾಗೂ ಮೇಲ್ವರ್ಗದಲ್ಲಿ ನಿರ್ದಿಷ್ಟ ಗ್ರಾಹಕರನ್ನು ಗುರಿಯಾಗಿಸಿಕೊಂಡು ಮಾಡಿದ ಪ್ರಚಾರಾಭಿಯಾನದ ವಿವರ ತಿಳಿಯುತ್ತದೆ. ಅಲ್ಲದೆ, ಆ ಕಾಲದಲ್ಲಿ ಮೇಲ್ವರ್ಗ ಹಾಗೂ ಮಧ್ಯಮ ವರ್ಗಗಳ ಮೇಲೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಹೇಗೆ ಪ್ರಭಾವ ಬೀರಿದವು ಎಂಬುದನ್ನೂ ಬಹಿರಂಗಪಡಿಸುತ್ತದೆ.

19ನೇ ಶತಮಾನದಲ್ಲಿ ಸೌತಹಾಲ್ ಕಂಪನಿ ನೀಡಿದ ಸ್ಯಾನಿಟರಿ ನ್ಯಾಪ್‌ಕಿನ್ ಜಾಹಿರಾತು

ಹೆಣ್ಣುಮಕ್ಕಳು ಬಟ್ಟೆಯನ್ನೇ ಬಳಸುತ್ತಿದ್ದ ಕಾಲದಿಂದಲೂ ಅದನ್ನು ವಿರೋಧಿಸುವ ಧೋರಣೆಗೂ ಒಂದು ಇತಿಹಾಸವಿದೆ. ಋತುಸ್ರಾವವನ್ನು ಆಗಾಗ ಬರುವ ಕರಿನೆರಳು ಹಾಗೂ ಲೈಂಗಿಕ ಸಮಸ್ಯೆ ಎಂದು ಹೇಳಲಾಗುತ್ತಿತ್ತು. ಈ ಪೂರ್ವಗ್ರಹಗಳನ್ನು ನಿವಾರಿಸಲೆಂದೇ ೧೮೮೫ರಲ್ಲಿ ‘ಸೌತ್‌ಹಾಲ್‌’ ಕಂಪನಿ ಸ್ಯಾನಿಟರಿ ನ್ಯಾಪ್‌ಕಿನ್‌’ಗಳ ಕುರಿತಾಗಿ ಜಾಹಿರಾತು ಪ್ರಕಟಿಸಿತು.

ಜಾಹಿರಾತುಗಳಲ್ಲಿ ‘Hygiene’, ‘Cleanliness’ ಮತ್ತು ‘Comfort’ ಎಂಬ ಪದಗಳೇ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತ ಹೋದವು. ಇಂಗ್ಲೆಂಡ್‌ನಲ್ಲಿ ಮೊದಲು ಸೌತ್‌ಹಾಲ್ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ತಯಾರಾಗುತ್ತಿದ್ದವು. ಭಾರತಕ್ಕೆ ಈ ನ್ಯಾಪ್‌ಕಿನ್‌ಗಳು ಮೊದಲು ವಿತರಣೆ ಆಗಿದ್ದು ಕೋಲ್ಕತ್ತಾ ನಗರಕ್ಕೆ. ನಂತರ ಬಾಂಬೆ ಹಾಗೂ ಪುಣೆ ಮಾರಾಟ ಕೇಂದ್ರಗಳಾದವು. ‘ಟೈಮ್ಸ್’ ಪತ್ರಿಕೆಯ ತನ್ನ ಏಳನೇ ಪೇಜಿನಲ್ಲಿ ೧೮೮೯ರಲ್ಲಿ ಮೊದಲು ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಬರಹಗಳ ಜೊತೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಜಾಹಿರಾತು ಪ್ರಕಟವಾಯಿತು. ಅಲ್ಲಿಯೂ ಮೇಲೆ ಉಲ್ಲೇಖಿಸಿದ ಮೂರು ಪದಗಳೇ ಮುಖ್ಯವಾಗಿ ಪ್ರಚಾರದ ಪದಗಳಾಗಿದ್ದವು. ಆದರೆ, ಆ ಪ್ಯಾಡ್‌ಗಳು ಅವಶ್ಯಕತೆಯ ಭಾಗವಾಗಿ ಖರೀದಿಯಾಗಲಿಲ್ಲ. ಆರೋಗ್ಯ, ನೈರ್ಮಲ್ಯದ ದೃಷ್ಟಿಯಿಂದ ಮಾರಾಟವಾದವು.

ಅಮೆರಿಕದ ಜಾನ್ಸನ್ ಅಂಡ್ ಜಾನ್ಸನ್ (Johnson and Johnson) ಕಂಪನಿಯು ಋತುಸ್ರಾವಕ್ಕೆ ಬೇಕಾದ ಟವಲ್‌ಗಳನ್ನು ತಯಾರಿಸಿತು. ಇದನ್ನು ಕೊಳ್ಳುವ ಶ್ರೀಮಂತ ಜನರ ಹುಡುಕಾಟದಲ್ಲಿದ್ದಾಗ ಭಾರತಕ್ಕೆ ಈ ಕಂಪನಿ ಧಾವಿಸಿತು. ಮೊದಲ ಜಾಗತಿಕ ಯುದ್ಧದ ಸಮಯದಲ್ಲಿ ಗಾಯಗಳಿಗೆ ಹತ್ತಿಯ ಅಭಾವವಿದ್ದರಿಂದ ಬ್ಯಾಂಡೇಜ್‌ ಆಗಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಬಳಸಲಾಗುತ್ತಿತ್ತು. 1920ರಲ್ಲಿ ಕೋಟೆಕ್ಸ್ (Kotex) ಕಂಪನಿಯು ಆರಂಭವಾಯಿತು. ಈ ಕಂಪನಿ ಭಾರತಕ್ಕೆ ೧೯೨೯ರಲ್ಲಿ ಬಂತು. ಆರಂಭದಲ್ಲಿ ಮಧ್ಯಮ ಹಾಗೂ ಕೆಳವರ್ಗದ ಜನರನ್ನು ಗುರಿಯಾಗಿಸಿಕೊಂಡು ಈ ಕಂಪನಿ ಭಾರತಕ್ಕೆ ಕಾಲಿಟ್ಟಿತು. ಆದರೆ, ಶೀಘ್ರದಲ್ಲೇ ಜಾಹಿರಾತುಗಳು ಮಹಿಳೆಯರ ನಡುವೆ ವಿಶ್ವಾಸಾರ್ಹತೆ ಬೆಳೆಸಿಕೊಳ್ಳುವ ಪ್ರಯತ್ನದಲ್ಲಿದ್ದವು. ಅಮೆರಿಕದಲ್ಲಿ ಇದೇ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಆಧುನಿಕ ಸ್ಥಿತಿವಂತ ಮಹಿಳೆಯರಿಗಾಗಿ ಎಂದು ಮಾರಾಟವಾಗುತ್ತಿದ್ದವು. ಕಾಲಾಂತರದಲ್ಲಿ ೧೯೫೪ರಲ್ಲಿ ವಿದೇಶಿ ಸ್ಯಾನಿಟರಿ ನ್ಯಾಪ್‌ಕಿನ್‌ ಕಂಪನಿಗಳು ತಮ್ಮ ಬ್ರ್ಯಾಂಡ್‌ ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಎಲ್ಲ ಮಹಿಳೆಯರಿಗಾಗಿ ಮಾರಾಟ ಮಾಡಲು ಆರಂಭಿಸಿದವು.

ಭಾರತದಲ್ಲಿ ಸಂಘಟಿತ ವಲಯಗಳಿಂದಲೂ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ತಯಾರಿಸಲ್ಪಟ್ಟವು. ಆದರೆ, ಅವರ ಜಾಹೀರಾತುಗಳು 20ನೇ ಶತಮಾನದ ೫೦-೭೦ರ ದಶಕದಲ್ಲಿ (1975 ರಿಂದ ಅಲಹಾಬಾದ್‌ನಲ್ಲಿ), ಸಾಫ್ಟ್‌ಟಚ್ (1981ರಿಂದ ಅಹಮದಾಬಾದ್) ಮತ್ತು ಕೇರ್‌ವೆಲ್ ಹೆಸರಿನಲ್ಲಿ (1992ರಿಂದ ಚಂಡೀಗಢ) ಬೆಲ್ಟ್‌ನೊಂದಿಗೆ ಮಹಿಳೆಯರಿಗೆ ಧರಿಸಲು ಅನುಕೂಲವಾಗುವ ರೀತಿಯಲ್ಲಿ ಮಾರುಕಟ್ಟೆಗೆ ಬಂದವು ಮತ್ತು 1990ರ ದಶಕದಿಂದ ಒಳಉಡುಪುಗಳಲ್ಲೇ ಬಳಸುವಂಥ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ತಯಾರಾದವು. ಬಳಕೆಯಲ್ಲಿ ಬದಲಾವಣೆಗಳನ್ನು ಸೂಚಿಸಿದವು. ಆದರೆ ಶೇ.60ರಷ್ಟು ದರವನ್ನು ಮೊದಲಿನ ಪ್ರಾಡಕ್ಟ್‌ಗಳಿಗಿಂತ ಹೆಚ್ಚು ವಿಧಿಸಿದವು.

೧೯೯೦ರ ದಶಕದಲ್ಲಿ ‘ಟೈಮ್ಸ್’ ಪತ್ರಿಕೆಯಲ್ಲಿ ಬರಹಗಾರ್ತಿ ವೀಣಾ ಗೋಖಲೆ ಸ್ಯಾನಿಟರಿ ನ್ಯಾಪಕಿನ್‌ಗಳ ಬಗ್ಗೆ ಹೀಗೆ ಬರೆಯುತ್ತಾರೆ: “ಆರ್ಥಿಕವಾಗಿ ಭಾರತದಲ್ಲಿ ಉದಾರೀಕರಣವಾಗುತ್ತಿದ್ದಂತೆ ವಿದೇಶಿ ಕಂಪನಿಗಳು ತಮ್ಮ ಮಾರುಕಟ್ಟೆಯನ್ನು ವಿಸ್ತರಿಸತೊಡಗಿದವು. ಸಂಘಟಿತ ವಲಯದ ಮಹಿಳೆಯರಲ್ಲಿ ವ್ಯಾಪಕ ಬದಲಾವಣೆಗೆ ಇದು ಕಾರಣವಾಯಿತು. ಕಂಪನಿಗಳ ಆಕರ್ಷಕ ಪ್ರಚಾರದ ತಂತ್ರಗಾರಿಕೆಗಳು ಬಹುಬೇಗನೇ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಒಪ್ಪಿಕೊಳ್ಳಲು ಕಾರಣವಾಯಿತು. ಜಾನ್ಸನ್ ಆಂಡ್ ಜಾನ್ಸನ್ ಕೇರ್‌ಫ್ರೀ, ಒಬಿ ಟ್ಯಾಂಪೂನ್ಸ್ ಮತ್ತು ಸ್ಟೇಫ್ರೀ ಕಂಪನಿಗಳು ಭಾರತದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಭಿನ್ನವಾಗಿ ಪರಿಚಯಿಸಿದವು. ಇವುಗಳು ೬೦ರ ದಶಕದಲ್ಲೇ ಭಾರತಕ್ಕೆ ಬಂದಿದ್ದರೂ ಮಾರುಕಟ್ಟೆಯ ವಿಸ್ತರಿಸಲು ಸಮಯ ತೆಗೆದುಕೊಂಡವು.”

ಈ ಹಿಂದೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಮಹಿಳೆಯರ ಋತುಸ್ರಾವಕ್ಕಾಗಿ ಮಾತ್ರ ಬಳಕೆ ಆಗುತ್ತಿರಲಿಲ್ಲ. ಹುಡುಗರು ಬೆವರನ್ನು ನಿಯಂತ್ರಿಸಲು ಶರ್ಟ್‌ಗಳಲ್ಲಿ ಬಳಸುತ್ತಿದ್ದರು. ಗಾಯಗಳಿಗೆ ಬ್ಯಾಂಡೇಜ್‌ಗಳಾಗಿ ಬಳಸುತ್ತಿದ್ದರು. ಆದರೆ, ಸ್ಯಾನಿಟರಿ ನ್ಯಾಪ್‌ಕಿನ್ ಕಂಪನಿಗಳು ಮುಖ್ಯವಾಗಿ ಮಹಿಳೆಯರೇ ಬಳಸುವಂತೆ ಜಾಹಿರಾತುಗಳನ್ನು ತಯಾರಿಸಿದವು. ತಾಯಿಯು ಮಗಳಿಗೆ ಬಟ್ಟೆ ಬದಲು ನ್ಯಾಪ್‌ಕಿನ್‌ ಬಳಸು ಎಂದು ತಿಳಿಹೇಳುವಂತೆ ತಂತ್ರಗಾರಿಕೆಯನ್ನು ಬಳಸಿದರು.

ಭಾರತದಲ್ಲಿ ವಿದೇಶಿ ಸ್ಯಾನಿಟರಿ ನ್ಯಾಪಕಿನ್‌ ಕಂಪನಿಗಳೇ ಮಾರ್ಕೆಟಿಂಗ್ ತಂತ್ರಗಾರಿಕೆಯಿಂದ ಜಾಗೃತಿಯನ್ನು ತರಲು ಮುಂದಾದವೇ ಹೊರತು ದೇಶಿ ಕಂಪನಿಗಳು ಕಾಣಸಿಗುವುದಿಲ್ಲ. ಆದರೆ, ತದನಂತರದಲ್ಲಿ ಕೆಲ ದೇಸಿ ಕಂಪನಿಗಳು ಹುಟ್ಟಿಕೊಂಡವು. ಉದಾಹರಣೆಗೆ, ಭಾರತದ ಕೆಲವು ಕಂಪನಿಗಳಾದ ತಮಿಳುನಾಡಿನ ಜಯಶ್ರೀ ಇಂಡಸ್ಟ್ರೀಸ್ (ರಾಸಿ), ಅರುಣಾಚಲಂ ಮುರುಗನಾಥನ್, ವಿವನಿಯಾನ್ ಕಂಪನಿಗಳು ಹಾಗೂ ಮಹರಾಷ್ಟ್ರದ ಸ್ನೊವಿ, ಗುಜರಾತ್‌ನ ಸಾಥಿ, ಬೆಂಗಳೂರಿನ ಏಶಿಯನ್ ಏಜೆನ್ಸಿ (ಬೆಸ್ಟಿ) ಮಾರುಕಟ್ಟೆಯಲ್ಲಿವೆ. ಆದರೆ, ಒಟ್ಟಾಗಿ ನೋಡುವುದಾದರೆ, ಆರೋಗ್ಯದ ದೃಷ್ಟಿಯಿಂದ ಈ ಬದಲಾವಣೆಗೆ ಖುಷಿಪಡಬೇಕು.

ಭಾರತದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ ಬಳಸುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದ್ದಂತೆ ಉತ್ಪನ್ನಗಳು ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ವಿಫಲವಾದವು ಎಂಬ ಆರೋಪಗಳಿವೆ. ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆಯೂ ಹೆಚ್ಚು ಗಮನಹರಿಸಲಿಲ್ಲ. ಸ್ಯಾನಿಟರಿ ನ್ಯಾಪ್‌ಕಿನ್‌ ತಯಾರಿಸಲು ಬಳಸುವ ಸೆಲ್ಯೂಲೋಸ್ ಜೆಲ್‌ನಿಂದ, ಸುವಾಸನೆ ಬರಲು ಬಳಸುವ ಕೃತಕ ದ್ರವ್ಯಗಳು ಹಾಗೂ ಸಂಪೂರ್ಣವಾಗಿ ನ್ಯಾಪ್‌ಕಿನ್‌ ಮುಚ್ಚದೆ ರೆಯಾನ್ ಬಟ್ಟೆ ಬಳಸಲಾಗುತ್ತಿದ್ದು ‘ಗರ್ಭಕೋಶ’ದ ಹಾಗೂ ‘ವಜಿನಲ್’ ರೋಗಗಳಿಗೆ ಕಾರಣವಾಗುತ್ತಿದೆ. ತಯಾರಿಸಲು ಹತ್ತಿಯನ್ನು ಬಳಸುತ್ತಿದ್ದರೂ ಅವಧಿ ಮುಗಿದ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಬಳಸಿದರೆ ಸೋಂಕು ತಗಲುವ ಸಾಧ್ಯತೆಗಳು ಹೆಚ್ಚಾಗಿದೆ.

ಇದನ್ನೂ ಓದಿ : ‘ಪ್ಯಾಡ್‌ಮ್ಯಾನ್’ ಸವಾಲಿಗಾಗಿ ಋತುಸ್ರಾವದ ಚರ್ಚೆಯಲ್ಲಿ ಮುಳುಗಿದ ಟ್ವಿಟರ್

"ವೆಚ್ಚ, ವಿನ್ಯಾಸ ಮತ್ತು ಪ್ಯಾಕೇಜಿಂಗ್ ಆಧಾರದ ಮೇಲೆ ಜನರು ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಆಯ್ಕೆ ಮಾಡುತ್ತಾರೆ," ಎಂದು ದೆಹಲಿಯ ಲೇಡಿ ಇರ್ವಿನ್ ಕಾಲೇಜಿನ ಫ್ಯಾಬ್ರಿಕ್ ಮತ್ತು ಉಡುಪು ವಿಜ್ಞಾನ ವಿಭಾಗದ ಪ್ರಾಧ್ಯಾಪಕರೊಬ್ಬರು ಅಭಿಪ್ರಾಯಪಡುತ್ತಾರೆ. ಮಾರುಕಟ್ಟೆಯಲ್ಲಿರುವ ಉತ್ಪನ್ನಗಳು ಅಧಿಕೃತ ಏಜೆನ್ಸಿಗಳಿಂದ ಪ್ರಮಾಣೀಕರಿಸಲ್ಪಟ್ಟಾಗ, ಗ್ರಾಹಕರು ತಾವು ಸುರಕ್ಷಿತವೆಂದು ಭಾವಿಸುತ್ತಾರೆ. ಆದರೆ, ಭಾರತದಲ್ಲಿ, 1980ರಿಂದ ನವೀಕರಿಸದ ಮಾನದಂಡಗಳ ಪ್ರಕಾರ ಸ್ಯಾನಿಟರಿ ಪ್ಯಾಡ್‌ಗಳನ್ನು ಪರೀಕ್ಷಿಸಲಾಗುತ್ತದೆ. ಆದ್ದರಿಂದ ಗುಣಮಟ್ಟ ಹಾಗೂ ಮಹಿಳೆಯರ ಆರೋಗ್ಯ, ನೈರ್ಮಲ್ಯದ ವಿಷಯದಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳು ಜನರಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿವೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More