ಸಮಾಧಾನ | ಚೈತನ್ಯಳಿಗೆ ಸಾಯುವಂತಹ ಯೋಚನೆ ಬಂದಿದ್ದಾದರೂ ಏಕೆ?

“ನಾನು ಸ್ವಲ್ಪ ಇಂಟ್ರೊವರ್ಟ್. ನನಗೆ ಗರ್ಲ್ ಫ್ರೆಂಡ್ಸ್ ಗಳೂ ಕೂಡ ಹೆಚ್ಚಿಲ್ಲ. ಈಗ ನನಗಿರುವವಳು ಒಬ್ಬಳೇ ಫ್ರೆಂಡ್. ನನ್ನ ತಾಯಿಯೇ ನನ್ನ ಮೇಲೆ ನಂಬಿಕೆ ಇಟ್ಟಿಲ್ಲ ಎನ್ನುವುದನ್ನು ನೆನೆಸಿಕೊಂಡರೆ ಬೇಜಾರಾಗುತ್ತೆ,” ಎಂದಳು ಚೈತನ್ಯ. ಜನ ಸುಖವಾಗಿ ಬದುಕುವ ವಿಧಾನವನ್ನು ಕಲಿಯಬೇಕಿದೆ ಎಂದು ನನಗನಿಸಿತು

“ವಿಪರೀತ ತಲೆನೋವು ಅಂತ ಹೇಳ್ತಾಳೆ. ಹತ್ತನೇ ತರಗತಿಯಲ್ಲಿದ್ದಾಳೆ. ಇನ್ನೂ ಮೂರೇ ತಿಂಗಳಿವೆ. ಪರೀಕ್ಷೆಯಲ್ಲಿ ಹೇಗೆ ಮಾಡ್ತೀನೋ ಅಂತ ಪೇಚಾಡ್ತಾಳೆ. ಓದೋಕೇ ಆಗ್ತಿಲ್ಲ. ಓದೋಕೆ ಕುಳಿತುಕೊಂಡು ಹತ್ತು ನಿಮಿಷ ಆಗಿರೋಲ್ಲ, ತಲೆನೋವು ಬಂದು ಬಿಡುತ್ತೆ. ನಾನು ಅಮೃತಾಂಜನ ಹಚ್ತೇನೆ. ಕ್ರೋಸೀನ್ ಮಾತ್ರೆ ತಿನ್ನಿಸ್ತೇನೆ. ಸ್ವಲ್ಪ ಕಡಿಮೆ ಆಗುತ್ತೆ. ಆದರೆ ಓದು ಮುಂದುವರೆಸೋದಕೆ ಆಗೋಲ್ಲ. ಅಳುತ್ತಾಳೆ. ನಾವು ಸಮಾಧಾನ ಮಾಡಿ ಮಲಗಿಸುತ್ತೇವೆ. ಸ್ಕೂಲ್ ಗೆ ಕ್ರಮವಾಗಿ ಹೋಗುತ್ತಾಳೆ. ಒಂದೊಂದು ಸಲ ತಲೆ ನೋವು ಬಂದರೆ ಕ್ರೋಸೀನ್ ಮಾತ್ರೆ ನುಂಗುತ್ತಾಳೆ. ನಾವು ನಾಲ್ಕೈದು ವೈದ್ಯರಿಗೆ ತೋರಿಸಿದೆವು. ಎಕ್ಸರೇ, ಸ್ಕ್ಯಾನಿಂಗ್, ಎಂಆರ್ ಐ ಮಾಡಿಸಿದೆವು. ಎಲ್ಲ ನಾರ್ಮಲ್ ಅಂತ ಬಂತು. ಎಲ್ಲ ಡಾಕ್ಟರುಗಳು ‘ನಿನಗೇನೂ ತೊಂದರೆ ಇಲ್ಲ. ರಿಲ್ಯಾಕ್ಸ್ ಮಾಡು. ಎಷ್ಟು ಆಗುತ್ತೋ ಅಷ್ಟು ಓದು. ಟೆನ್ಶನ್ ಬೇಡ’ ಎಂದು ಹೇಳಿದ್ದಾರೆ. ಯೋಗ- ಧ್ಯಾನ ಮಾಡ್ತಾಳೆ. ನನಗೇನೂ ಟೆನ್ಶನ್ ಇಲ್ಲ ಅಂತಾಳೆ. ಆದರೆ ಓದಲು ಆಗ್ತಿಲ್ಲ ಅವಳಿಗೆ. ‘ಬೇಡ. ಬಿಟ್ಟು ಬಿಡು ಮುಂದಿನ ಸಲ ಪರೀಕ್ಷೆಗೆ ಕುಳಿತುಕೋ. ನಮಗೇನೂ ಬೇಸರವಿಲ್ಲ’ ಅಂತ ಹೇಳಿದ್ದೇವೆ. ಆಕೆ ಅದಕ್ಕೆ ಒಪ್ಪಲ್ಲ. ‘ಒಂದು ವರ್ಷ ಕಳೆದುಕೊಳ್ಳಲು ನಾನು ತಯಾರಿಲ್ಲ. ನಾನು ಓದಬೇಕು. ಈ ತಲೆ ನೋವು ನನಗೆ ಬರಬಾರದು ಅಷ್ಟೆ’ ಎನ್ನುತ್ತಾಳೆ. ಯಾರೋ ನಿಮ್ಮ ಸೆಂಟರ್ ಹೆಸರನ್ನು ಹೇಳಿದರು. ನಿಮ್ಮಲ್ಲಿಗೆ ಬಂದಿದ್ದೇವೆ ಇವಳ ತಲೆನೋವಿಗೆ ಪರಿಹಾರ ಹೇಳಿ,” ಎಂದರು ಗೀತಾಮೂರ್ತಿ.

“ನಾನು ನಿಮ್ಮ ಜೊತೆ ಒಬ್ಬಳೇ ಮಾತನಾಡಬೇಕು,” ಎಂದಳು ಗೀತಾಮೂರ್ತಿ ಮಗಳು ಚೈತನ್ಯ.

“ಆಯಿತು, ಅಮ್ಮ ಸ್ವಲ್ಪ ಹೊತ್ತು ನೀವು ಹೊರಗಡೆ ಇರಿ. ಚೈತನ್ಯ ನನ್ನ ಜೊತೆ ಮಾತಾಡಲಿ,” ಎಂದೆ.

ಅಮ್ಮ ಹೊರಗಡೆ ಹೋಗಿ ಕುಳಿತರು. ಬಾಗಿಲನ್ನು ಮುಚ್ಚಿ, “ನಾನು ಹೇಳುವುದನ್ನು ನಮ್ಮ ತಾಯಿಗೆ ನೇರವಾಗಿ ಹೇಳಬೇಡಿ. ಭಯ ಪಟ್ಟುಕೊಳ್ಳುತ್ತಾಳೆ,” ಎಂದಳು.

“ಆಯಿತು, ಏನು ವಿಷಯ ಹೇಳು ಚೈತನ್ಯಾ,”

“ನನಗೆ ಬಹಳ ದುಃಖ ಆಗುತ್ತೆ. ಅಳು ಬರುತ್ತೆ. ಸತ್ತು ಹೋಗೋಣ ಅಂತ ಅನ್ಸುತ್ತೆ,”

“ಅದಕ್ಕೆ ಏನಾದರೂ ಕಾರಣ ಇದೆಯಾ? ಕಾರಣವಿಲ್ಲದೆ ಅಳು, ಆತ್ಮಹತ್ಯೆಯ ಯೋಚನೆ ಬರುತ್ತಾ?” ಎಂದು ಪ್ರಶ್ನಿಸಿದೆ.

“ಕೆಲವು ಸಲ ಕಾರಣ ಇರುತ್ತೆ. ಕೆಲವು ಸಲ, ಆ ಸಮಯಕ್ಕೆ ಏನೂ ಕಾರಣವಿರುವುದಿಲ್ಲ. ಏನಾದರೂ ಮಾಡಿಕೊಂಡು ಸಾಯೋಣ ಅನ್ನಿಸತ್ತೆ, ಭಯ ಆಗುತ್ತೆ,” ಎಂದು ಹೇಳಿದಳು.

“ಕಾರಣವಾಗುವ ವಿಷಯ ಸಂದರ್ಭದ ಬಗ್ಗೆ ಹೇಳು” ಎಂದು ಕೇಳಿದೆ.

“ಅಮ್ಮನೇ ಕಾರಣ. ನಾನು ಮಾಡುವ ಪ್ರತಿಯೊಂದು ಕೆಲಸ-ಚಟುವಟಿಕೆಯಲ್ಲಿ ಏನಾದರೂ ತಪ್ಪ ಕಂಡುಹಿಡಿದು ರೇಗ್ತಿರ್ತಾರೆ. ಬೈತಿರ್ತಾರೆ. ಆಗ ಬಹಳ ಅಳು ಬಂದು ಬಿಡುತ್ತೆ. ಬೀರುವಿನಲ್ಲಿ ನೀನು ಬಟ್ಟೆ ಸರಿಯಾಗಿಟ್ಟಿಲ್ಲ. ಪೇಪರ್ ಓದೋಕೆ ತಗೊಂಡು ನೋಡು ಎಲ್ಲಿ ಬಿಸಾಕಿದ್ದೀಯಾ. ತಿಂಡಿ ತಿಂದ ಪ್ಲೇಟನ್ನು ತೊಳೆದು ಇಡದೆ ಹಾಗೆ ಸಿಂಕ್ ನಲ್ಲಿ ಬಿಟ್ಟಿದ್ದೀಯಾ. ಊಟ ಮಾಡುವಾಗ ಅನ್ನ ಚೆಲ್ಲಿದ್ದೀಯಾ, ನೀರನ್ನು ಕುಡಿಯದೇ ಬಿಟ್ಟಿದ್ದೀಯಾ. ಅಮ್ಮನ ಇನ್ನೊಂದು ಕೆಟ್ಟ ಬುದ್ಧಿ ಎಂದರೆ ನನ್ನ ಬ್ಯಾಗು, ಪರ್ಸು, ನನ್ನ ಬೀರು, ನನ್ನ ವಸ್ತುಗಳನ್ನು ನನಗೆ ಕಾಣದಂತೆ ಚೆಕ್ ಮಾಡುತ್ತಾಳೆ. ಇದು ನನಗೆ ಸಿಟ್ಟು ತರುತ್ತೆ. ಕೇಳಿದರೆ ಚೆಕ್ ಮಾಡಲಿಲ್ಲ ಎಂದು ಸುಳ್ಳು ಹೇಳುತ್ತಾಳೆ.” ಎಂದಳು ಚೈತನ್ಯ.

“ಏತಕ್ಕಾಗಿ ಚೆಕ್ ಮಾಡುತ್ತಾಳೆ ಅಮ್ಮ?”

“ಸರಿಯಾಗಿ ಗೊತ್ತಿಲ್ಲ ಸರ್, ಹೋದ ವರ್ಷ ನನ್ನ ಫ್ರೆಂಡ್ ಒಬ್ಬಳಿದ್ದಳು ಬಿಂದಾಸ್ ಹುಡುಗಿ. ಬಾಯ್ ಫ್ರೆಂಡ್ ಜೊತೆ ಸುತ್ತುತ್ತಿದ್ದಳು. ಒಂದು ದಿನ ಯಾವನೋ ಹುಡುಗನ ಜೊತೆ ಓಡಿ ಹೋದಳು. ಈಗ ಎಲ್ಲಿದ್ದಾಳೆ ಗೊತ್ತಿಲ್ಲ. ನನ್ನ ಮೇಲೂ ನನ್ನ ಅಮ್ಮನಿಗೆ ಡೌಟ್ ಇರಬೇಕು. ನನಗೆ ಯಾವ ಬಾಯ್ ಫ್ರೆಂಡ್ ಇಲ್ಲ. ನನಗೆ ಹುಡುಗರೆಂದರೆ ಭಯ. ನಾನು ಯಾರೊಂದಿಗೂ ಮಾತನಾಡುವುದಿಲ್ಲ. ನಾನು ಸ್ವಲ್ಪ ಇಂಟ್ರೊವರ್ಟ್ (ಅಂತರ್ಮುಖಿ). ನನಗೆ ಗರ್ಲ್ ಫ್ರೆಂಡ್ಸ್ ಗಳೂ ಕೂಡ ಹೆಚ್ಚಿಲ್ಲ. ಈಗ ನನಗಿರುವವಳು ಒಬ್ಬಳೇ ಫ್ರೆಂಡ್. ನನ್ನ ತಾಯಿಯೇ ನನ್ನ ಮೇಲೆ ನಂಬಿಕೆ ಇಟ್ಟಿಲ್ಲ ಎನ್ನುವುದನ್ನು ನೆನೆಸಿಕೊಂಡರೆ ಬೇಜಾರಾಗುತ್ತೆ, ಸಿಟ್ಟು ಬರುತ್ತೆ.”

“ನಿಮ್ಮ ತಂದೆ ಹೇಗೆ?”

“ಅವರು ತಾವಾಯಿತು, ತಮ್ಮ ಕೆಲಸವಾಯಿತು ಯಾವಾಗಲೂ ಬಿಜಿಯಾಗಿರುತ್ತಾರೆ. ಗಂಭೀರ. ಅಪರೂಪಕ್ಕೆ ನಗ್ತಾರೆ. ಹೆಚ್ಚು ಮಾತಾಡೋಲ್ಲ. ದುಡ್ಡಿನ ವಿಚಾರದಲ್ಲಿ ಬಹಳ ಸ್ಟ್ರಿಕ್ಟು. ಜಿಪುನ ಎಂದರೂ ನಡೆಯುತ್ತೆ. ನಾವು ಹೆಣ್ಣು ಮಕ್ಕಳಿಗೆ ಆಸೆ ಹೆಚ್ಚು. ಪ್ಯಾಶನೇಬಲ್ ಸಾಮಾನುಗಳನ್ನು, ಅಲಂಕಾರಿಕ ವಸ್ತುಗಳನ್ನು ಕೊಂಡುಕೊಳ್ಳುವುದಕ್ಕೆ ಇಷ್ಟ. ಆದರೆ, ಅಂತಹ ಸಾಮಾನನ್ನು ಕೊಂಡುಕೊಳ್ಳುವುದಕ್ಕೆ ವಿರೋಧ ಮಾಡ್ತಾರೆ. ಅವಕ್ಕೆ ಖರ್ಚು ಮಾಡುವುದು, ಹಣದ ಅಪವ್ಯಯ ಎಂದು ಹೇಳ್ತಾರೆ. ಅವು ಕೊಡುವ ಸುಖ, ಸಂತೋಷ ಲಾಭವಲ್ಲವೇ ಎಂದು ಕೇಳಿದ್ದೇನೆ. ಅದು ಕ್ಷಣಿಕ ಸುಖ. ಅದಕ್ಕೆಲ್ಲಾ ಹಣ ವ್ಯಯಮಾಡಬಾರದು ಎನ್ನುತ್ತಾರೆ. ಅವರಿಗೆ ನನ್ನ ತಾಯಿಯ ಕಡೆ ನೆಂಟರೆಂದರೆ ಆಗುವುದಿಲ್ಲ. ಅವರು ಅಂದರೆ ತಾಯಿಯ ನೆಂಟರು ಬಂದಾಗ ಮುಖ ಊದಿಸಿಕೊಳ್ಳುತ್ತಾರೆ. ಅವರೊಂದಿಗೆ ಮುಖ ಕೊಟ್ಟು ಮಾತಾಡುವುದಿಲ್ಲ. ಆದರೆ, ತನ್ನ ಕಡೆಯ ನೆಂಟರು ಅಂದರೆ ನನ್ನ ತಂದೆಯ ಅಣ್ಣ, ತಮ್ಮಂದಿರು ಮತ್ತು ಅವರ ಕುಟುಂಬದವರು ಬಂದಾಗ ಖುಷಿಪಡುತ್ತಾರೆ. ವಿಶೇಷ ಅಡುಗೆ ಮಾಡು ಎಂದು ಅಮ್ಮನಿಗೆ ಹೇಳುತ್ತಾರೆ. ಅಮ್ಮ ಎಷ್ಟು ಚೆನ್ನಾಗಿ ಅಡುಗೆ ಮಾಡಿದರೂ ಇನ್ನಷ್ಟು ಚೆನ್ನಾಗಿ ಮಾಡಬೇಕಿತ್ತು. ನೀನು ಬೇಕಂತಲೇ ಅಡುಗೆ ಕೆಡಿಸಿದ್ದೀಯಾ ಎಂದು ಬೈಯುತ್ತಾರೆ. ಈ ಸ್ವಭಾವ ನನಗೆ ಹಿಡಿಸುವುದಿಲ್ಲ. ಅಡುಗೆ ಚೆನ್ನಾಗಿದೆಯಪ್ಪ. ನೀನು ಈ ರೀತಿ ಬೇಕಂತಲೇ ಆರೋಪ ಮಾಡುತ್ತೀಯಾ ಎಂದು ದಬಾಯಿಸಿ ಬಿಡಬೇಕೆನಿಸುತ್ತದೆ. ಆದರೆ, ಅಷ್ಟು ಧೈರ್ಯ ನನಗೆ ಬರುವುದಿಲ್ಲ. ಜೊತೆಗೆ ಇನ್ನೊಂದು ಕೆಟ್ಟ ಬುದ್ದಿ ಎಂದರೆ, ಅಪ್ಪ ತನ್ನ ಆದಾಯವೆಷ್ಟು, ಎಷ್ಟು ಉಳಿಸಿದ್ದಾರೆ. ಹಣಕಾಸಿನ ವ್ಯವಹಾರ ಏನು ಎಂಬುದನ್ನೂ ನನ್ನ ತಾಯಿಗೆ ಹೇಳುವುದಿಲ್ಲ. ಹೆಂಗಸರಿಗ್ಯಾಕೆ ಈ ವ್ಯವಹಾರದ ವಿಷಯ ಎಂಬುದೇ ಅವರ ಧೋರಣೆ. ಅಮ್ಮನೂ ಕೇಳಲು ಹೋಗುವುದಿಲ್ಲ. ಕೇಳಿದರೆ ಯಾವ ಮಾಹಿತಿಯೂ ಸಿಗದು ಎಂಬುದು ಅವರಿಗೆ ಗೊತ್ತಾಗಿದೆ. ಈ ಎಲ್ಲ ವಿಷಯಗಳು ನನಗೆ ಬೇಸರವನ್ನು ತಂದಿವೆ. ನಮ್ಮ ಕುಟುಂಬ ಎಷ್ಟು ಚೆನ್ನಾಗಿರಲು ಸಾಧ್ಯವಿದೆ. ಆದರೆ ನಾನಾಗಲಿ, ನನ್ನ ತಮ್ಮನಾಗಲೀ, ನನ್ನ ತಾಯಿಯಾಗಲಿ, ನನ್ನ ತಂದೆಯಾಗಲಿ ಯಾರೂ ನೆಮ್ಮದಿ, ಸಂತೋಷದಿಂದಿಲ್ಲ. ತಮ್ಮದೇ ಆದ ಧೋರಣೆ, ನಿಯಮಗಳನ್ನು ಹಾಕಿಕೊಂಡು ತಾವು ಹಿಂಸೆ ಪಡುತ್ತಾರೆ. ಎಲ್ಲರನ್ನೂ ಹಿಂಸೆಗೆ ನೂಕುತ್ತಾರೆ. ಸರಳವಾಗಿ, ಸಂತೋಷವಾಗಿ ಬದುಕಲು ಇವರಿಗೆ ಏಕೆ ಆಗುತ್ತಿಲ್ಲ. ನೀವೇ ಹೇಳಿ ನೀವು ಮನೋವೈದ್ಯರು ನನ್ನ ಅಮ್ಮ, ಅಪ್ಪನಿಗೆ ತಿಳಿವಳಿಕೆ ಹೇಳಿ, ಸರಿಪಡಿಸಿ. ಇದನ್ನೆಲ್ಲಾ ನಾನು ಹೇಳಿದೆ, ದೂರು ಕೊಟ್ಟೆ ಎಂದು ನನ್ನ ಅಪ್ಪನಿಗೆ ಹೇಳಬೇಡಿ,” ಎಂದಳು.

ಇದನ್ನೂ ಓದಿ : ಸಮಾಧಾನ | ಅಪ್ಪ-ಅಮ್ಮನ ಜಗಳದಿಂದ ಬೇಸತ್ತ ವಿನುತಾ ಮಾಡ ಹೊರಟಿದ್ದೇನು ಗೊತ್ತೇ?

ಗೀತಾಮೂರ್ತಿಯನ್ನೂ ಒಳಗೆ ಕರೆದು, ಚೈತನ್ಯ ಹೇಳಿದ ವಿಷಯಗಳನ್ನು ಸೂಕ್ಷ್ಮವಾಗಿ ಅವರಿಗೆ ಹೇಳಿದೆ, “ಚೈತನ್ಯ ಇಷ್ಟೆಲ್ಲವನ್ನೂ ನಿಮಗೆ ಹೇಳಿದಳಾ ಆಶ್ಚರ್ಯ,” ಎಂದರು. “ಏಕೆ ಆಶ್ಚರ್ಯ?” ಎಂದೆ. “ಅವಳು ನನ್ನ ಜೊತೆ ಮಾತೇ ಆಡುವುದಿಲ್ಲ. ಮೌನ ಗೌರಿ ರೀತಿ ಇರ್ತಾಳೆ. ನಾನು ಖಂಡಿತ ಬದಲಾಗ್ತೇನೆ. ನನ್ನ ಯಜಮಾನರನ್ನೂ ನಿಮ್ಮಲ್ಲಿಗೆ ಕರೆದು ತರಬೇಕು. ಬರ್ತಾರೋ ಇಲ್ಲವೋ ಗೊತ್ತಿಲ್ಲ. ಅವರೂ ಬಂದು, ಬದಲಾದರೆ ಎಷ್ಟು ಚೆನ್ನಾಗಿರುತ್ತೆ. ಅವರು ಸ್ವಲ್ಪ ಸ್ವಾರ್ಥಿ. ಗಂಡಸರೇ ಶ್ರೇಷ್ಟ, ಹೆಂಗಸರಿಗೆ ಬುದ್ಧಿ ಇಲ್ಲ ಎನ್ನುವ ಜಾತಿ. ಹೋಗಲಿ ಬಿಡಿ ಸರ್. ಚೈತನ್ಯ ನಗುನಗುತ್ತಾ ಇದ್ದರೆ ಸಾಕು. ಅವಳು ಬುದ್ದಿವಂತೆ, ಬದಲಾಗ್ತಾಳೆ. ಮತ್ತೆ ಯಾವಾಗ ಬರಬೇಕು?”

“ಬನ್ನಿ, ಎರಡು ವಾರಕ್ಕೊಮ್ಮೆ” ಎಂದು ಚೈತನ್ಯಳಿಗೆ ಮಾತ್ರೆ ಬರೆದುಕೊಟ್ಟೆ.

ಚೈತನ್ಯ ಕಡೆಯಲ್ಲಿ ಹೇಳಿದ ಮಾತುಗಳು ಎಷ್ಟು ನಿಜ ಎಂದುಕೊಂಡೆ. ಜನ ಸುಖವಾಗಿ ಬದುಕುವ ವಿಧಾನವನ್ನು ಕಲಿಯಬೇಕಾಗಿದೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More