ಎದೆ ಹಾಲಿಗಿಂತ ಹಾಲಿನ ಪುಡಿಯೇ ಉತ್ತಮ ಎಂದೇಳುವ ಕಂಪನಿಗಳ ಬಗ್ಗೆ ಎಚ್ಚರವಿರಲಿ!

ಪಿಲಿಫೈನ್ಸ್‌ನಲ್ಲಿ ತಾಯಂದಿರನ್ನು ಗುರಿಯಾಗಿಸಿಕೊಂಡು ಕೆಲ ಕಂಪನಿಗಳು ತಮ್ಮ ವ್ಯಾಪಾರವನ್ನು ಯಶಸ್ವಿಯಾಗಿಸಿಕೊಂಡಿವೆ. ‘ಎದೆ ಹಾಲಿಗಿಂತ ಈ ಹಾಲಿನ ಪುಡಿ ಉತ್ತಮ’ ಎಂಬ ಮಾಹಿತಿ ಹಬ್ಬಿಸಿ, ಜನರ ದಾರಿ ತಪ್ಪಿಸಿವೆ. ಅಲ್ಲದೇ, ಅಭಿವೃದ್ಧಿಶೀಲ ದೇಶಗಳನ್ನು ತಮ್ಮ ಮಾರುಕಟ್ಟೆಯನ್ನಾಗಿ ಮಾಡಿಕೊಳ್ಳುತ್ತಿವೆ

ಮಗು ತಾಯಿಯ ಎದೆ ಹಾಲು ಕುಡಿದರೆ ಹೆಚ್ಚು ಆರೋಗ್ಯವಾಗಿರುತ್ತದೆ ಎಂಬುದು ವೈಜ್ಞಾನಿಕ ವಾಸ್ತವ. ತಾಯಿ, ಮಗು ಎದೆ ಹಾಲು ಕುಡಿಯುವವರೆಗೂ ಹಾಗೂ ತನ್ನ ಎದೆ ಹಾಲು ಪೂರೈಸುವವರೆಗೂ ಹಾಲು ಕುಡಿಸುತ್ತಾಳೆ. ತಾಯಿಯ ದೈಹಿಕ ಆರೋಗ್ಯ ಹದಗೆಟ್ಟು ಹಾಲಿಲ್ಲದೇ ತಾಯಿ ಹಾಲಿನ ಪುಡಿಯನ್ನೋ ಅಥವಾ ಬಾಟಲಿ ಹಾಲಿಗೋ ಮೊರೆ ಹೋಗುತ್ತಾಳೆ. ಕೆಲ ಬಡರಾಷ್ಟ್ರಗಳ ಪರಿಸ್ಥಿತಿ ಬೇರೆಯದ್ದೇ ಆಗಿದೆ. ಬಡ ತಾಯಂದಿರನ್ನು ಗಮನದಲ್ಲಿಟ್ಟುಕೊಂಡು ಹಾಲಿನ ಪುಡಿ (Formula Milk) ಮಾರಾಟ ಮಾಡಲಾಗುತ್ತಿದೆ. ಇದು ನವಜಾತ ಶಿಶುಗಳ ಭವಿಷ್ಯದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ‘ದ ಗಾರ್ಡಿಯನ್’ ಪತ್ರಿಕೆ ವರದಿ ಮಾಡಿದೆ.

ಪಿಲಿಫೈನ್ಸ್ ದೇಶದಲ್ಲಿ ಬಡ ತಾಯಂದಿರನ್ನು ಗುರಿಯಾಗಿಸಿಕೊಂಡು ಕೆಲ ಕಂಪನಿಗಳು ತಮ್ಮ ವ್ಯಾಪಾರವನ್ನು ಯಶಸ್ವಿಯಾಗಿಸಿಕೊಂಡಿವೆ. ಎದೆ ಹಾಲಿಗಿಂತ ಉತ್ತಮವಾದದ್ದು ಈ ಹಾಲಿನ ಪುಡಿ ಎಂಬ ತಪ್ಪು ಮಾಹಿತಿ ನೀಡಿ, ಮುಗ್ಧ ಜನರನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುತ್ತಿವೆ. ಅಲ್ಲಷ್ಟೇ ಅಲ್ಲದೇ ಜಗತ್ತಿನ ಬಡ ದೇಶಗಳನ್ನು ಆರಿಸಿಕೊಂಡು ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ.

ಜನರನ್ನು ಹೀಗೆ ವಂಚಿಸಿರುವ ಪ್ರದೇಶಗಳಲ್ಲಿ ಪತ್ರಿಕೆ ಅಧ್ಯಯನ ನಡೆಸಿದಾಗ ಈ ಕೃತ್ಯದ ಹಿಂದೆ ಸಂಸ್ಕರಿತ ಆಹಾರ ಉತ್ಪಾದನಾ ಕಂಪನಿ ‘ನೆಸ್ಲೇ’ (Nestlé) ಹಾಗೂ ಇತರೆ ಮೂರು ಕಂಪನಿಗಳ ಹೆಸರು ಕೇಳಿ ಬಂದಿದೆ. ಬಡ ಹೆಣ್ಣುಮಕ್ಕಳನ್ನು ತಮ್ಮ ದಾರಿಗೆ ತರಲು ಕಂಪನಿಗಳು ಆಸ್ಪತ್ರೆಯ ವೈದ್ಯರಿಗೆ, ಸೂಲಗಿತ್ತಿಯರಿಗೆ ಹಾಗೂ ಸ್ಥಳೀಯ ಆರೋಗ್ಯ ಸೇವಕರಿಗೆ ಆಮಿಷ ಒಡ್ಡುತ್ತಾರೆ. ದುಬಾರಿ ವೆಚ್ಚದ ಸಮಾವೇಶಗಳನ್ನು ಏರ್ಪಡಿಸುವುದು, ಸಿನೆಮಾಗಳಿಗೆ ಉಚಿತ ಟಿಕೆಟ್‌ಗಳನ್ನು ಕೊಡಿಸಿ, ಅವರ ಕಣ್ಣಲ್ಲಿ ತಾವು ಸ್ನೇಹಪರರರು ಎಂದು ಬಿಂಬಿಸಿಕೊಳ್ಳುವುದು ಅವರ ತಂತ್ರಗಾರಿಕೆ.

ನೆಸ್ಲೇ ಕಂಪನಿಯ ಜೊತೆಗೆ ಅಬ್ಬಾಟ್ (Abbott), ಮೀಡ್ ಜಾನ್ಸನ್ ನುಟ್ರಿಷಿಯನ್ (Mead Johnson), ವೈಥ್ (Wyeth) ಕಂಪನಿಗಳು ಸೇರಿಕೊಂಡಿವೆ. ಈ ಕಂಪನಿಗಳು ನೇರವಾಗಿ ಆಸ್ಪತ್ರೆಗಳಲ್ಲಿ ತಮ್ಮ ಪ್ರಚಾರ ಕೈಗೊಳ್ಳುತ್ತವೆ. ಇದು ನಿಮ್ಮ ಮಕ್ಕಳ ಐಕ್ಯೂ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂಬ ಸುಳ್ಳು ಆಸೆ ಹುಟ್ಟಿಸುತ್ತವೆ. ತಮ್ಮ ಕಂಪನಿಗಳ ಕರಪತ್ರಗಳು ನೇರವಾಗಿ ತಾಯಂದಿರ ಕೈ ತಲುಪುವ ಹಾಗೇ ನೋಡಿಕೊಳ್ಳುತ್ತವೆ. ಮುಖಾ ಮುಖಿ ಪ್ರಚಾರವಲ್ಲದೇ ಸಾಮಾಜಿಕ ಜಾಲತಾಣದಲ್ಲಿ ‘ಮಮ್ಮಿ ಬ್ಲಾಗರ್ಸ್’ ಹೆಸರಿನಲ್ಲಿ ತಾಯಂದಿರನ್ನು ಗುರಿಯಾಗಿಸಿಕೊಂಡು ತಮ್ಮ ಹಾಲಿನ ಪುಡಿಯನ್ನು ಮಾರಾಟ ಮಾಡಲಾಗುತ್ತಿದೆ. ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಈ ಕಂಪನಿಗಳ ಹಾಲಿನ ಪುಡಿಯನ್ನು ಮಾರಾಟ ಮಾಡಿಸುತ್ತಾರೆ. ವೈದ್ಯಕೀಯ ಸಲಹೆಯ ಚೀಟಿಯಲ್ಲೇ ನೇರವಾಗಿ ಉಲ್ಲೇಖಿಸಿ ಖರೀದಿಸುವಂತೆ ಒತ್ತಾಯಿಸುತ್ತಾರೆ. ಅಲ್ಲಿನ ಟಿವಿ ಮಾಧ್ಯಮಗಳಲ್ಲೂ ‘ಬೊನಾ’ ಹೆಸರಿನ ಬ್ರ್ಯಾಂಡ್ ‘ಬೊನಾ ಕಿಡ್’ ಎಂದು ಜಾಹೀರಾತುಗಳನ್ನು ನೀಡುತ್ತಿವೆ. ದೃಶ್ಯ ಮಾಧ್ಯಮದ ಮೂಲಕ ಮಾರಾಟದ ಮನವಿಯನ್ನು ಭಿನ್ನವಾಗಿ ಮಾಡುತ್ತಿವೆ.

ಪಿಲಿಫೈನ್ಸ್‌ನಲ್ಲಿ ಶೇಕಡ 34 ರಷ್ಟು ತಾಯಂದಿರು ಮಗು ಹುಟ್ಟಿದ ಆರು ತಿಂಗಳು ಮಾತ್ರ ಎದೆಹಾಲು ಕುಡಿಸುತ್ತಾರೆ. ನಂತರದಲ್ಲಿ ಈ ಕಂಪನಿಗಳ ಹಾಲಿನ ಪುಡಿಯೇ ಮಕ್ಕಳಿಗೆ ಆಹಾರ. ಅಲ್ಲಿನ ರಾಜಧಾನಿ ‘ಮನೀಲಾ’ ಸುತ್ತಲಿನ ತಾಯಂದಿರು ತಮ್ಮ ಕುಟುಂಬದ ಆದಾಯದ ಮುಕ್ಕಾಲು ಪಾಲಷ್ಟು ಹಣವನ್ನು ಮಕ್ಕಳ ಹಾಲಿನ ಪುಡಿ ಖರೀದಿಸಲೆಂದೇ ವಿನಿಯೋಗಿಸುತ್ತಾರಂತೆ. ಮಾಡುತ್ತಿರುವ ಸತ್ಯಾಂಶ ಹೊರಬೀಳುತ್ತದೆ.ಆ ದೇಶದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಸರ್ಕಾರದ ಕಾನೂನುಗಳನ್ನು ಮೊಟಕುಗೊಳಿಸಿ, ಎಗ್ಗಿಲ್ಲದೇ ಪ್ರಚಾರ, ಮಾರಾಟದ ತಂತ್ರಗಾರಿಕೆ ನಡೆಯುತ್ತಿದೆ. ಈ ಎಲ್ಲ ತಪ್ಪು ನಡೆಗಳನ್ನು ಕಂಪನಿಯ ವಿರುದ್ಧ ಗುರುತಿಸಿದ್ದರೂ ಹಾಲಿನ ಪುಡಿ ಮಾರಾಟ ಮಾಡುವ ಎಲ್ಲ ಕಂಪನಿಗಳು ಆರೋಪಗಳನ್ನು ತಳ್ಳಿ ಹಾಕಿವೆ.

ಮಲಬೋನ್ ನಗರದ ತಾಯಿ ಜೆಸ್ಸಿಕಾ ಐಸ್ವಾತ್ (24) ವಿವರಿಸುವಂತೆ ತನ್ನ ಎರಡು ವರ್ಷದ ಮಗಳು ಟ್ರಿಸ್ಟಾಳಿಗೆ ತನ್ನ ಎದೆಹಾಲು ಕುಡಿಸುವುದು ಕಷ್ಟ ಎಂದು ಹೇಳಿ ‘ನೆಸ್ಲೇ’ ಕಂಪನಿಯ ‘ನೆಸ್ಟೋಜೆನ್’ ಹಾಲನ್ನು ಕುಡಿಸುತ್ತಿದ್ದಾರೆ. ಅವರ ಸಮುದಾಯದವರೂ ಸಹ ಎದೆಹಾಲಿನಷ್ಟೇ ಪೌಷ್ಟಿಕವಾಗಿರುತ್ತದೆ ಎಂದು ಕೃತಕ ಹಾಲನ್ನು ನೆಚ್ಚಿಕೊಂಡಿದ್ದಾರೆ. ಒಂದು ‘ನೆಸ್ಟೋಜೆನ್’ ಖರೀದಿಸಲು ಒಬ್ಬ ತಾಯಿ ಸುಮಾರು ೨೫೦೦ ರೂಪಾಯಿಯಷ್ಟು (£28) ಹಣವನ್ನು ತಿಂಗಳಿಗೆ ವ್ಯಯಿಸುತ್ತಾಳೆ.

ಸ್ಥಳೀಯ ಮಹಿಳೆ ಗೀ ಜಯೋನಾ, “ಗ್ರಾಹಕರು ಸಕ್ರಿಯವಾಗಿ ಫಾರ್ಮುಲಾ ಹಾಲನ್ನು ಖರೀದಿಸುವಂತೆ ಕಂಪನಿಗಳು ಅಭಿಯಾನ ಮಾಡುತ್ತಿವೆ. ಆದರೆ ನಾನು ಎಲ್ಲ ಸಮಯದಲ್ಲೂ ನನ್ನ ಮಗಳಿಗೆ ಆ ಹಾಲನ್ನು ಕುಡಿಸುವುದಿಲ್ಲ. ಎದೆ ಹಾಲಿರುವಾಗಲು ಕೆಲ ಮಹಿಳೆಯರು ಹಾಲಿನ ಪುಡಿಯನ್ನು ಐಚ್ಛಿಕವಾಗಿ ಉಪಯೋಗಿಸುತ್ತಲೇ ಇದ್ದಾರೆ,” ಎಂದು ಹೇಳುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಈ ಫಾರ್ಮಲಾ ಕಂಪನಿಗಳು ತಮ್ಮ ಉತ್ಪಾದನೆಗಳನ್ನು ನೇರವಾಗಿ ತಾಯಂದಿರು ಹಾಗೂ ವೈದ್ಯಕೀಯ ವೃತ್ತಿಪರರನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡುವಂತಿಲ್ಲ. ಈ ಫಾರ್ಮುಲಾ ಪುಡಿ ಸೇವನೆಯಿಂದ ಮಕ್ಕಳಲ್ಲಿ ಅತಿಸಾರ, ಶ್ವಾಸಕೋಶದ ಉರಿಯೂತ, ನ್ಯೂಮೋನಿಯಾದಂತಹ ಕಾಯಿಲೆಗಳು ಬಾಧಿಸಬಹುದು ಎಂದು ಎಚ್ಚರಿಸುತ್ತವೆ. ಅಲ್ಲದೇ, ಬಡ ರಾಷ್ಟ್ರಗಳ ಸಮಸ್ಯೆಯೆಂದರೆ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾದರೆ ಆಸ್ಪತ್ರೆಗೆ ಕರೆದೊಯ್ಯಬೇಕಾದ ಪ್ರಾಥಮಿಕ ಕಾಳಜಿ ಇಲ್ಲ, ಮೂಲಭೂತವಾಗಿ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿಲ್ಲ, ಜೊತೆಗೆ ಎದೆಹಾಲಿನಿಂದ ಆಗುವ ಲಾಭದ ಕುರಿತು ಮಾಹಿತಿಯ ಕೊರತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಈ ಹಿಂದೆ ೧೯೮೧ರಲ್ಲಿ ಮಕ್ಕಳ ಅನಾರೋಗ್ಯದ ಸಾಕ್ಷ್ಯಗಳನ್ನಿಟ್ಟುಕೊಂಡು ಹಾಗೂ ಹಾಲಿನ ಬಾಟಲಿಯ ಕ್ರಿಮಿಗಳಿಂದ ಮಕ್ಕಳು ಅಸ್ವಸ್ಥರಾಗುತ್ತಿದ್ದಾರೆ ಎಂದು ನೆಸ್ಲೇ ಕಂಪನಿಯ ವಿರುದ್ಧ ಫಿಲಿಫೈನ್ಸ್‌ನಲ್ಲಿ ಅಸಹನೆಯ ಕೂಗು ವ್ಯಕ್ತವಾಗಿತ್ತು.

ಇದನ್ನೂ ಓದಿ : ನಿಯಮ ಗಾಳಿಗೆ ತೂರಿದ ಕೇಂದ್ರ ಸರ್ಕಾರ; ಸಂಸ್ಕರಿತ ಆಹಾರ ಎಷ್ಟು ಸುರಕ್ಷಿತ?
ಈ ಕಂಪನಿಗಳು ಸೂಲಗಿತ್ತಿಯರು, ಸ್ಥಳೀಯ ವೈದ್ಯರ ಮುಖಾಂತರ ಗೌಪ್ಯವಾಗಿ ಕೆಲಸದ ವೇಳೆಯಲ್ಲಿ ತಮ್ಮ ಹಾಲಿನ ಪುಡಿ ಉತ್ಪನ್ನದ ಬಗ್ಗೆ ಪ್ರಚಾರ ಮಾಡಿಸುತ್ತಿವೆ.
ಡಾ. ಅಮಡೋ ಪರವಾನ್, ಸೇವ್ ದಿ ಚಿಲ್ಡ್ರನ್ ಫೌಂಡೇಷನ್‌ನ ಕಾರ್ಯಕರ್ತ 

ಇಷ್ಟೆಲ್ಲಾ ಖಂಡಿಸಲ್ಪಟ್ಟಿದ್ದರೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅದರ ಮಾರುಕಟ್ಟೆ ವಿಸ್ತಾರಗೊಂಡಿದೆ. ‘ಸೇವ್ ದಿ ಚಿಲ್ಡ್ರನ್’ ಸಂಘಟನೆಯ ವರದಿ, ಕಂಪೆನಿಗಳು ಕಾನೂನಿನ ಉಲ್ಲಂಘನೆ ವ್ಯವಸ್ಥಿತವಾಗಿ ಮಾಡುತ್ತಿವೆ ಎಂದು ಹೇಳಿದ್ದಾರೆ. ಶಿಶು ಆರೋಗ್ಯದ ಕಾರಣವನ್ನು ನೀಡಿ ಈ ಕಂಪನಿಗಳು ವಿಶ್ವದಾದ್ಯಂತ ಹುಟ್ಟಿದ ಪ್ರತಿ ಮಗುವಿಗೆ 3500 ರೂಪಾಯಿಗಳಷ್ಟು ಖರ್ಚು ಮಾಡಿಸುತ್ತಿವೆ. ಪೂರ್ವ ಏಷ್ಯಾ ಭಾಗದಲ್ಲಿ ಅದರಲ್ಲೂ ಬೆಳೆಯುತ್ತಿರುವ ಆರ್ಥಿಕತೆ ಮತ್ತು ಹೆಚ್ಚಿನ ಜನನ ಪ್ರಮಾಣ, ಈ ಕಂಪನಿಗಳಿಗೆ ವಿಫುಲ ಗ್ರಾಹಕರನ್ನು ಸೃಷ್ಟಿಸಿದೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More