ವಿಡಿಯೋ ಸ್ಟೋರಿ | ಇಂಡೋ- ಅರೇಬಿಕ್ ರೆಸ್ಟೋರೆಂಟ್‌ನಲ್ಲಿ ಸಂವಿಧಾನ ಪ್ರಸ್ತಾವನೆ

ಮೈಸೂರಿನಲ್ಲಿ ಶುರುವಾಗಿರುವ ಇಂಡೋ- ಅರೇಬಿಕ್ ರೆಸ್ಟೋರೆಂಟ್ ಮೈಸೂರು ರೋಲ್ಸ್, ಅರೇಬಿಕ್ ಶೈಲಿಯ ರೋಲ್ ತಿನಿಸುಗಳಿಗೇ ಮೀಸಲಾಗಿರುವುದು ವಿಶೇಷ. ಒಳ ಹೊಕ್ಕರೆ ಮೊದಲು ಗಮನ ಸೆಳೆಯುವುದು ಭಾರತ ಸಂವಿಧಾನದ ಪ್ರಸ್ತಾವನೆ ಎನ್ನುವುದೂ ಇಲ್ಲಿನ ಮತ್ತೊಂದು ವಿಶೇಷ

ಮೈಸೂರು ರೋಲ್ಸ್. ಇದು, ಮೈಸೂರಿನ ಸರಸ್ವತಿಪುರಂ ೭ನೇ ಮೈನ್ ೫ನೇ ತಿರುವಿನ ಕಟ್ಟಡದ ಪುಟ್ಟ ಮಳಿಗೆಯಲ್ಲಿ ಈಚೆಗೆ ಶುರುವಾಗಿರುವ ಇಂಡೋ- ಅರೇಬಿಕ್ ರೆಸ್ಟೋರೆಂಟ್ ಹೆಸರು. ಅರೇಬಿಕ್ ಶೈಲಿಯ ‘ರೋಲ್’ ತಿನಿಸುಗಳಿಗೇ ಮೀಸಲಾದ ರೆಸ್ಟೋರೆಂಟ್ ಎನ್ನುವುದು ಒಂದು ವಿಶೇಷ. ಒಳ ಹೊಕ್ಕರೆ, ತಿನಿಸು, ದರ ಫಲಕಕ್ಕಿಂತ ಮೊದಲು ಗಮನ ಸೆಳೆಯುವುದು ಭಾರತ ಸಂವಿಧಾನದ ಪ್ರಸ್ತಾವನೆ. ಆಕರ್ಷಕ ಫಲಕದಲ್ಲಿ ಕನ್ನಡ, ಹಿಂದಿ, ಇಂಗ್ಲೀಷ್ ಮೂರು ಭಾಷೆಗಳಲ್ಲಿ ಅಡಕಗೊಂಡಿರುವ ಪ್ರಸ್ತಾವನೆ ಇಂತಿದೆ, “ಭಾರತ ವಾಸಿಗಳಾದ ನಾವು, ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಲೋಕತಂತ್ರಿಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ಪ್ರಜೆಗಳಿಗೆ ಈ ಕೆಳಗಿನ ಹಕ್ಕುಗಳಾದ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ; ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯ; ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಗಳನ್ನು ದೊರಕಿಸಿ, ವೈಯಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ ಭ್ರಾತೃತ್ವತೆಯನ್ನು ಪ್ರೋತ್ಸಾಹಿಸಲು ನಿರ್ಧರಿಸಿ ನಮ್ಮ ಸಂವಿಧಾನ ರಚನಾ ಸಭೆಯಲ್ಲಿ ಈ ೧೯೪೯ರ ನವೆಂಬರ್ ಮಾಹೆಯ ೨೬ನೇ ದಿನದಂದು, ನಾವಾಗಿ ನಾವೇ ಈ ಸಂವಿಧಾನವನ್ನು ಸ್ವೀಕರಿಸಿ, ಶಾಸನವನ್ನಾಗಿ ವಿಧಿಸಿಕೊಳ್ಳುತ್ತೇವೆ.”

ಭಾರತ ಸಂವಿಧಾನದ ಘನ ಆಶಯಗಳು ಗಂಡಾಂತರಕ್ಕೆ ಸಿಲುಕಿರುವ, ಅರ್ಥಾಂತರ ಮತ್ತು ‘ದೌರ್ಜನ್ಯ’ಕ್ಕೆ ತುತ್ತಾಗುತ್ತಿರುವ ವರ್ತಮಾನದಲ್ಲಿ ಅದರ ಮುಖ್ಯ ಆಶಯಗಳನ್ನು ಹೀಗೆ, ಪುಟ್ಟ ರೆಸ್ಟೋರೆಂಟ್ ನಲ್ಲಿ ಅಳವಡಿಸಿದ್ದು ವಿಶೇಷವಾಗಿ ಕಂಡಿತು. ಇಂಥದೊಂದು ಪ್ರಯತ್ನಕ್ಕೆ ಕಾರಣವೇನು? ಸರ್ಕಾರಿ ಕಚೇರಿ ಸಹಿತ ಅವಶ್ಯ ಇರಬೇಕಾದ ಸ್ಥಳಗಳಲ್ಲೇ ಸಂವಿಧಾನ ಪ್ರಸ್ತಾವನೆಯ ಫಲಕವನ್ನು ಅಳವಡಿಸದಿರುವಾಗ, ರೆಸ್ಟೋರೆಂಟ್ ಒಂದರಲ್ಲಿ ಅದನ್ನಳವಡಿಸುವ ಆಲೋಚನೆ ಹೊಳೆದದ್ದಾದರೂ ಹೇಗೆ? ಮೈಸೂರು ರೋಲ್ಸ್ ಅನ್ನು ಆರಂಭಿಸಿರುವ ಇಬ್ಬರು ಆಪ್ತ ಸ್ನೇಹಿತರ ಹಿನ್ನೆಲೆ, ಅವರ ಗುರಿ, ಕನಸುಗಳನ್ನು ಕೇಳಿದರೆ ಇದಕ್ಕೆ ಕಾರಣ ತನ್ನಿಂತಾನೆ ತಿಳಿಯುತ್ತದೆ.

ನಿತಿನ್ ಕುಲಕರ್ಣಿ. ಹುಟ್ಟಿದೂರು ಬೆಳಗಾವಿ ಜಿಲ್ಲೆ ರಾಮದುರ್ಗ. ಪೋಷಕರು ನೆಲೆ ನಿಂತಿರುವುದು ಧಾರವಾಡದಲ್ಲಿ. ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಎಂಎಸ್ಸಿ ಕಲಿಯಲು ಬಂದಿದ್ದು ಮೈಸೂರು ವಿವಿಗೆ. ಇಲ್ಲಿ, ಸಂಬಂಧಿಕರ ಮನೆಯಲ್ಲಿದ್ದು ಓದುವಾಗ ತರಗತಿಯಲ್ಲಿ ಸ್ನೇಹಿತರಾದವರು ಮೈಸೂರಿನ ಬನ್ನಿಮಂಟಪದ ನಯಾಜ್ ಉಲ್ಲಾ ಷರೀಫ್. ೨ ವರ್ಷದಲ್ಲಿ ಇಬರೂ ಆಪ್ತ ಸ್ನೇಹಿತರಾದರು. ನಿತಿನ್ ವ್ಯಾಸಂಗ ನಂತರ ಒಂದಷ್ಟು ಕಾಲ ಮೈಸೂರಲ್ಲೇ ಉಪನ್ಯಾಸಕನಾಗಿದ್ದರು. ನಂತರ ಐಟಿ ಎಂಜಿನಿಯರ್ ಆಗಿ ಬೆಂಗಳೂರಿನ ಖಾಸಗಿ ಕಂಪನಿ ಸೇರಿ ೮ ವರ್ಷ ಕೆಲಸ ಮಾಡಿದರು. ಎರಡು ವರ್ಷ ತಂದೆಯ ಜೊತೆ ಊರಿನಲ್ಲಿ ಕೃಷಿ ಮಾಡಿದ್ದೂ ಆಯಿತು. ಮೈಸೂರಿನಲ್ಲೇ ಖಾಸಗಿ ಸಂಸ್ಥೆಯಲ್ಲಿ ಐಟಿ ಎಂಜಿನಿಯರ್ ಆಗಿದ್ದ ನಯಾಜ್, ಈ ಮಧ್ಯೆ ೨ ವರ್ಷ ಕೆಲಸದ ಮೇಲೆ ಸೌದಿಯ ರಿಯಾದ್‌ಗೆ ಹೋಗಿ ಬಂದರು.

ಈ ಮಧ್ಯೆ, ನಿರಂತರ ಸಂಪರ್ಕದಲ್ಲಿದ್ದ ಗೆಳೆಯರಿಬ್ಬರು, “ಸಂಬಳಕ್ಕೆ ದುಡಿಯುವುದು ಸಾಕು, ಸ್ವಂತದ್ದೇನಾದರು ಮಾಡಬೇಕು,’’ಎಂದು ಹಂಬಲಿಸುತ್ತಿದ್ದರು. ಇಬ್ಬರಿಗೂ ಆಹಾರ ವೈವಿಧ್ಯದ ವಿಷಯದಲ್ಲಿ ಫ್ಯಾಷನ್ ಇತ್ತು. ಈ ಉದ್ಯಮದಲ್ಲೇ ತೊಡಗಿಸಿಕೊಳ್ಳುವ ಬಯಕೆ. ಆದರೆ, “ಏನು ಮಾಡಿದರೂ ವಿಶೇಷವಾಗಿರಬೇಕು,’’ಎನ್ನುವ ಕಾರಣಕ್ಕೆ ಸಾಕಷ್ಟು ಕಾಯ್ದರು. ಗೆಳೆಯನೊಬ್ಬ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಅರೇಬಿಕ್ ರೆಸ್ಟೋರೆಂಟ್ ಅನ್ನು, ಅಲ್ಲಿನ ಖಾದ್ಯ ವಿಶೇಷವನ್ನು ನೋಡಿದ ಬಳಿಕ, “ನಾವು ಇಂಥದ್ದೇ ಪ್ರಯತ್ನ ಮಾಡಬಾರದೇಕೆ,’’ ಎನ್ನುವ ಯೋಚನೆ ಬಂದಿತು.“ಬೆಂಗಳೂರಲ್ಲೇ ಶುರು ಮಾಡಿ, ಸಪೋರ್ಟ್ ಮಾಡುತ್ತೇನೆ,’’ ಎಂದು ಆ ಸ್ನೇಹಿತ ಅಭಯ ನೀಡಿದರು. ವ್ಯಾವಹಾರಿಕ ದೃಷ್ಟಿಯಿಂದ ಅಲ್ಲೇ ಮಾಡುವುದು ಹೆಚ್ಚು ಸೂಕ್ತವಿತ್ತು ಕೂಡ. ಆದರೆ, “ಏನೇ ಮಾಡಿದರೂ ಮೈಸೂರಿನಲ್ಲೇ, ಮೈಸೂರು ಬ್ರ್ಯಾಂಡ್ ಹೆಸರಿನಲ್ಲೇ ಶುರುಮಾಡಬೇಕು,’’ ಎನ್ನುವುದು ಈ ಗೆಳೆಯರ ಉದ್ದೇಶವಾಗಿತ್ತು.

ಅದೇನಿದ್ದರೂ, ಉತ್ತಮ ಸಂಬಳದ ಉದ್ಯೋಗ ಬಿಟ್ಟು, ರೆಸ್ಟೋರೆಂಟ್ ನಂತಹ ರಿಸ್ಕಿ ಉದ್ಯಮ ಆರಂಭಿಸುವ ವಿಷಯದಲ್ಲಿ ಮನೆಯವರನ್ನು ಒಪ್ಪಿಸುವುದು ಸುಲಭವೇನೂ ಇರಲಿಲ್ಲ. ಅರೇಬಿಕ್ ರೆಸ್ಟೋರೆಂಟ್ ಮಾಡಿದರೆ ಸಸ್ಯಾಹಾರ, ಮಾಂಸಾಹಾರ ಎರಡೂ ಅನಿವಾರ್ಯ. ಮನೆಯಲ್ಲಿ ಸಸ್ಯಾಹಾರಿಯಾದ ನಿತಿನ್‌ಗೆ ಇದು ಮತ್ತೊಂದು ಸವಾಲು. ಆದರೆ, ಆರ್ಥಿಕವಾಗಿ ಅಷ್ಟೊಂದು ಸಿರಿವಂತಿಕೆ ಇಲ್ಲದಿದ್ದರೂ ನಂಬಿಕೆ, ಆಚರಣೆಗಳ ವಿಷಯದಲ್ಲಿ ಉದಾರವಾಗಿದ್ದ ಇಬ್ಬರ ಮನೆಯವರೂ ಮಕ್ಕಳ ಸಾಹಸಕ್ಕೆ ಒಪ್ಪಿದರು. ಆದರೆ, ಭಿನ್ನ ಧರ್ಮದ ಇಬ್ಬರು ಸೇರಿ ಭಿನ್ನವಾದ ರೆಸ್ಟೋರೆಂಟ್ ಆರಂಭಿಸುವುದಕ್ಕೆ ಬಂಧುಗಳನ್ನು, ನೆರೆಹೊರೆಯವರನ್ನು ಒಪ್ಪಿಸುವುದು, ಕೇಳಿದವರಿಗೆಲ್ಲ ಸಮಜಾಯಿಷಿ ನೀಡುತ್ತ ಕೂರುವುದು ಸವಾಲೆನಿಸಿತು. ಇಬ್ಬರೂ ಈ ಕುರಿತು ತಲೆಕೆಡಿಸಿಕೊಂಡಿದ್ದಾಗ ಹೊಳೆದದ್ದೇ ಸಂವಿಧಾನ ಪ್ರಸ್ತಾವನೆ.

“ನಾನು ಸಂವಿಧಾನವನ್ನು ಓದಿದ್ದೇನೆ. ಭಾರತೀಯರಾದ ಎಲ್ಲರಿಗೂ ಅದು ಬದುಕುವ ಹಕ್ಕುಗಳನ್ನು ಸಮಾನವಾಗಿ ನೀಡಿದೆ. ದೇವರ ಕುರಿತ ನನ್ನ ನಂಬಿಕೆ ನನ್ನ ಹೃದಯಕ್ಕೆ ಸಂಬಂಧಿಸಿದ್ದು. ಧರ್ಮ ನನ್ನ ಮನೆಗೆ ಸೀಮಿತ. ಮನೆಯಿಂದ ಹೊರಗೆ, ದೈನಂದಿನ ಜೀವನದಲ್ಲಿ ನಾವು ಮೊದಲು ಭಾರತೀಯರು. ಭಾರತೀಯರಾಗಿ ನಮ್ಮ ಸಂವಿಧಾನವನ್ನು ನಾವು ಪಾಲಿಸಬೇಕೆನ್ನುವ ತತ್ತ್ವವನ್ನು ನಾವಿಬ್ಬರೂ ನಂಬಿದ್ದೇವೆ. ಅದಕ್ಕೆಂದೇ ಸಂವಿಧಾನ ಪ್ರಸ್ತಾವನೆಯನ್ನು ರೆಸ್ಟೋರೆಂಟ್‌ನಲ್ಲಿ ಅಳವಡಿಸುವ ನಿರ್ಧಾರ ಮಾಡಿದೆವು. ನಮ್ಮಿಬ್ಬರ ಹಿನ್ನೆಲೆ, ಉದ್ದೇಶ ಏನು ಎನ್ನುವುದನ್ನು ಎಲ್ಲರಿಗೂ ಹೇಳಿ, ಅರ್ಥಮಾಡಿಸಬೇಕಿಲ್ಲ. ಪ್ರಸ್ತಾವನೆ ಅದನ್ನು ಸೂಕ್ಷ್ಮವಾಗಿ ಹೇಳುತ್ತದೆ. ನಮ್ಮಲ್ಲಿಗೆ ಬರುವವರು ನೋಡಲಿ, ಓದಲಿ, ನಮ್ಮನ್ನು ಪ್ರಶ್ನಿಸಲಿ ಎನ್ನುವುದು ನಮ್ಮ ಆಶಯ ಕೂಡ,’’ ಎಂದು ವಿವರಿಸಿದರು ನಿತಿನ್.

ಈ ಮಧ್ಯೆ, ನಯಾಜ್ ಬೆಂಗಳೂರಿನ ಸ್ನೇಹಿತರ ರೆಸ್ಟೋರೆಂಟ್‌ನಲ್ಲಿದ್ದು ವಿವಿಧ ಬಗೆಯ ರೋಲ್ಸ್ ಗಳನ್ನು ತಯಾರಿಸುವ ತರಬೇತಿ ಪಡೆದರು. ಗೆಳೆಯರಿಬ್ಬರೂ ಕೂಡಿ ಮೈಸೂರಿನ ನಾನಾ ಕಡೆ ಜಾಗಾ ಹುಡುಕಿ, ತಮ್ಮ ಹೂಡಿಕೆಯ ಅಳತೆಗೆ ನಿಲುಕುವಂತಹ ಈ ಸ್ಥಳವನ್ನು ಆಯ್ಕೆ ಮಾಡಿದರು. ಇಂಟೀರಿಯರ್ ಸಹಿತ ಎಲ್ಲಾ ಕೆಲಸ ಶುರುವಾಯಿತು. ಫಲಕ ಮಾಡಿಸಲೆಂದು ಸಂವಿಧಾನ ಪ್ರಸ್ತಾವನೆ ಮೇಲೆ ಕಣ್ಣಾಡಿಸುತ್ತಿದ್ದಾಗ, “೧೯೪೯ ನವೆಂಬರ್ ೨೬’’ ದಿನಾಂಕ ಕಣ್ಣಿಗೆ ಬಿದ್ದಿತು. ನವೆಂಬರ್ ಆರಂಭದಲ್ಲಿ ರೆಸ್ಟೋರೆಂಟ್ ಆರಂಭಕ್ಕೆ ಸಿದ್ಧತೆ ಆಗಿತ್ತಾದರೂ, ಅಂಬೇಡ್ಕರ್ ನೇತೃತ್ವದಲ್ಲಿ ರೂಪಿತಗೊಂಡ ಸಂವಿಧಾನ ಸ್ವೀಕೃತವಾದ ದಿನವಾದ ನವೆಂಬರ್ ೨೬ ರವರೆಗೆ ಕಾಯ್ದಿದ್ದು, ಆ ದಿನ ವಿದ್ಯುಕ್ತ ಆರಂಭ ಮಾಡಿದ್ದು, ಇನ್ನೊಂದು ಗಮನಾರ್ಹ ಸಂಗತಿ.

ಇದನ್ನೂ ಓದಿ : ವಿಡಿಯೋ ಸ್ಟೋರಿ| ಫೋಟೋಗ್ರಫಿಯ ವಿಚಿತ್ರ ತುಡಿತಕ್ಕೆ ನೌಕರಿಯನ್ನೇ ತೊರೆದ ಮಿಹೆಲ

ಘನವಾದ ಆದರ್ಶವನ್ನು ಸಾರುತ್ತಿರುವ ನಿತಿನ್-ನಯಾಜ್, ವ್ಯಾವಹಾರಿಕವಾಗಿಯೂ ಎಲ್ಲ ನಿಯಮಗಳಿಗೆ ಬದ್ಧವಾಗಿ, ಪಾರದರ್ಶಕವಾಗಿರಲು ನಿರ್ಧರಿಸಿದ್ದಾರೆ. ಮಹಿಳಾ ದಿನಾಚರಣೆ ಪ್ರಯುಕ್ತ ಈ ಮಾಸಾಂತ್ಯದವರೆಗೆ ರೆಸ್ಟೋರೆಂಟ್‌ಗೆ ಬರುವ ಮಹಿಳೆಯರಿಗೆ ಶೇ.೫ ರಿಯಾಯಿತಿ ನೀಡುತ್ತಿದ್ದಾರೆ. ಮೂವರು ಸಹಾಯಕರ ಜೊತೆ ಈ ಗೆಳೆಯರು ಎಲ್ಲ ಕೆಲಸವನ್ನು ಹಂಚಿಕೊಂಡು ಮಾಡುತ್ತಾರೆ. “ರೋಲ್ಸ್ ನಲ್ಲಿ ಹೊಸ ಹೊಸ ಸಾಧ್ಯತೆ, ರುಚಿಗಳನ್ನು ಪರಿಚಯಿಸಬೇಕು, ಮೈಸೂರು ಮಾತ್ರವಲ್ಲ ಬೆಂಗಳೂರು ಮತ್ತು ದೇಶದ ನಾನಾ ಕಡೆಗೆ ಶಾಖೆಗಳನ್ನು ವಿಸ್ತರಿಸಬೇಕು,’’ ಎನ್ನುವುದು ಅವರ ಕನಸು. “ನಾವೇ ಶಾಖೆ ವಿಸ್ತರಿಸುವುದು, ಪ್ರಾಂಚೈಸಿ ಕೊಡುವುದು ಏನೇ ಇರಲಿ. ಮೈಸೂರು ರೋಲ್ಸ್ ಬ್ರ್ಯಾಂಡ್ ಹೆಸರು, ಸಂವಿಧಾನ ಪ್ರಸ್ತಾವನೆ ಅಳವಡಿಕೆ ಕಡ್ಡಾಯ ಇರುವಂತೆ ನೋಡಿಕೊಳ್ಳುತ್ತೇವೆ,’’ ಎನ್ನುತ್ತಾರೆ ನಯಾಜ್. “ನಾವು ಮೊದಲು ಮನುಷ್ಯರು. ನಂತರ ಭಾರತೀಯ. ಆ ನಂತರ ನಮ್ಮ ಧರ್ಮವನ್ನು ಹೇಳುತ್ತೇನೆ,’’ ಎನ್ನುವುದು ಈ ಇಬ್ಬರು ಜೀವದ ಗೆಳೆಯರ ಬದ್ಧತೆ.

ಓದಿದ್ದು ಏನೇ ಇರಲಿ, ವೈವಿಧ್ಯಮಯ ಮತ್ತು ಸವಾಲಿನ ವೃತ್ತಿ, ಪ್ರಯೋಗಗಳಲ್ಲಿ ಭವಿಷ್ಯ ಅರಸುವುದರಲ್ಲಿ ಇಂದಿನ ವಿದ್ಯಾವಂತ ಯುವ ಸಮುದಾಯ ಖುಷಿ ಕಾಣುತ್ತಿದೆ. ಆದರೆ, ನಿತಿನ್-ನಯಾಜ್ ಅವರಂತೆ ಸಂವಿಧಾನದ ಆಶಯಗಳನ್ನು ರಕ್ತ ಗುಣವನ್ನಾಗಿಸಿಕೊಂಡು, ಅದನ್ನು ಬಿತ್ತರಿಸುತ್ತಲೆ ಬದುಕು ಕಟ್ಟಿಕೊಳ್ಳುತ್ತೇವೆನ್ನುವವರು ಅತ್ಯಪರೂಪ. ಈ ಗೆಳೆಯರು ಹಲವು ಖಾದ್ಯಗಳನ್ನು ಬೆರೆಸಿ, ತಯಾರಿಸಿಕೊಟ್ಟ ‘ಮೈಸೂರು ರೋಲ್ಸ್’ ರುಚಿಕಟ್ಟಾಗಿತ್ತು. ಅದಕ್ಕಿಂತ, ರುಚಿಯನ್ನು ಮೀರಿದ ಇಂಡೋ-ಅರೆಬಿಕ್’ ಸಮನ್ವಯ, ಧರ್ಮ-ಸಂಬಂಧ ಬೆಸೆಯುವ ‘ನಿತಿನ್-ನಯಾಜ್’ ಎನ್ನುವ ಆಶಯ, ಕನಸುಗಳು ಸ್ವಾದಿಷ್ಟ, ಭರವಸೆದಾಯಕ ಎನ್ನಿಸಿದವು. ಯಾರು ಏನೇ ಷಡ್ಯಂತ್ರ ಮಾಡಿದರೂ, ಅಸಂಬದ್ಧ ಮಾತನಾಡಿದರೂ ಇಂಥ ಹುಡುಗರನ್ನು ನೋಡಿದಾಗ ನಮ್ಮ ಘನ ಸಂವಿಧಾನಕ್ಕೆ, ಅದನ್ನು ಪಡೆದ ದೇಶಕ್ಕೆ ಯಾವ ಕಾರಣಕ್ಕೂ ಗಂಡಾಂತರ ಒದಗದು ಎನ್ನುವ ದೃಢ ವಿಶ್ವಾಸ ಮೂಡದೆ ಇರದು.

ವಿಡಿಯೋ: ನೇತ್ರರಾಜು

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More