ಕುಹೂ ಕುಹೂ ಹಕ್ಕಿ ಭಾಷೆ ಮಾತನಾಡುವ ಕುಷ್ಕೋಯ್ ಗ್ರಾಮದ ಜನತೆ

ಕೀ ಕೀ, ಕುಹೂ ಕುಹೂ ಎಂದು ನಿನಾದದ ಮೂಲಕವೇ ಪರಸ್ಪರರ ಜೊತೆಗೆ ಮಾತನಾಡುವ ಇವರ ಭಾಷೆಯನ್ನು ಕೇಳುವುದೇ ಚಂದ. ಈ ವಿಶಿಷ್ಟ ಭಾಷೆಯ ಸಲುವಾಗಿಯೇ ಉತ್ತರ ಟರ್ಕಿಯ ಕುಷ್ಕೋಯ್ ಗ್ರಾಮ ಈಗ ವಿಶ್ವದ ಗಮನ ಸೆಳೆದಿದೆ. ಈ ಭಾಷೆ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ

ಈ ಗ್ರಾಮದ ಜನರದ್ದು ಒಂದು ವಿಶೇಷ ಭಾಷೆ. ಚಿಲಿಪಿಲಿ, ಕುಹೂ ಕುಹು, ಕೀ ಕೀ ಎನ್ನುವ ಹಕ್ಕಿ ಹಾಡುಗಳೇ ಇವರ ಭಾಷೆ! ಇದೇ ಕಾರಣದಿಂದ ಈಗ ಉತ್ತರ ಟರ್ಕಿಯ ಕುಷ್ಕೋಯ್ ಗ್ರಾಮದ ಈ ಭಾಷೆ ವಿಶ್ವಸಂಸ್ಥೆಯ ಪಾರಂಪರಿಕ ಮನ್ನಣೆ ಪಡೆದಿದೆ. ಗ್ರಾಮಕ್ಕೆ ಭೇಟಿ ನೀಡಿದರೆ ಹಕ್ಕಿಗಳಂತೆಯೇ ಸಂವಹನ ನಡೆಸುವ ಜನರನ್ನು ನೋಡುವುದೇ ಕುತೂಹಲಕಾರಿ. ಹೀಗೆ ಹಕ್ಕಿಗಳ ನೀನಾದದಲ್ಲೇ ಈ ಪ್ರಾಂತ್ಯದ ಜನರು ನೂರಾರು ಕಿಲೋಮೀಟರ್‌ವರೆಗೂ ಸಂವಹನ ನಡೆಸುತ್ತಾರೆ. ಜಾಗತಿಕವಾಗಿ ಎಲ್ಲ ದೇಶಗಳು ಅಭಿವೃದ್ಧಿ ಪಥದಲ್ಲಿ ಆಧುನಿಕತೆಯ ಹೊಸ ತಾಂತ್ರಿಕ ಭಾಷೆಗಳನ್ನು ಮೈಗೂಡಿಸಿಕೊಳ್ಳುತ್ತಿರುವಾಗ ಈ ಗ್ರಾಮ ಇನ್ನೂ ಪಾರಂಪರಿಕ ಭಾಷೆಯಲ್ಲೇ ಸಂವಹನ ನಡೆಸುವುದು ಅಚ್ಚರಿ ಮತ್ತು ಸಂತಸವನ್ನೂ ಕೊಡುತ್ತದೆ.

ಕಡಿದಾದ ಪರ್ವತ ಶ್ರೇಣಿಗಳ ನಡುವೆ ವಾಸಿಸುವ ಉತ್ತರ ಟರ್ಕಿಯ ಕಾನಾಕ್ಸಿ ಜಿಲ್ಲೆಯ ಕಪ್ಪು ಸಮುದ್ರ ತೀರ ನಿವಾಸಿಗಳ ಭಾಷೆಯೇ ಈ ಹಕ್ಕಿ ಹಾಡು. ಇಲ್ಲಿ ಮನೆಗಳು ಬಹಳ ದೂರ-ದೂರ. ನಿರ್ಜನ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್‌ ಸಿಗುವುದೂ ಕಷ್ಟ. ಹೀಗಾಗಿ, ಇಲ್ಲಿನ ಜನರು ಹಕ್ಕಿಭಾಷೆಯಲ್ಲೇ ಮಾತನಾಡುತ್ತಾರೆ. ಇವರಿಗೆ ಇದು ಪರಂಪರೆಯ ಜೊತೆಗೆ ಅನಿವಾರ್ಯತೆಯೂ ಹೌದು. ಹಾಗೆಂದು ಇಲ್ಲಿನ ನಿವಾಸಿಗಳು, ನಗರಜೀವನದಿಂದ ಸಂಪೂರ್ಣ ದೂರ ಉಳಿದಿದ್ದಾರೆ ಎಂದೇನೂ ಅಲ್ಲ. ಗೈರೆಸನ್ ಪ್ರಾಂತ್ಯದ ಕನಾಕ್ಸಿ ಜಿಲ್ಲೆಯ ಈ ಪರ್ವತ ಶ್ರೇಣಿಯಲ್ಲಿ ವಾಸಿಸುವ ಸುಮಾರು 10,000 ಜನರು ಬುಡಕಟ್ಟು ಜನಾಂಗವೇನೂ ಅಲ್ಲ. ಹಾಗಿದ್ದರೂ ಇವರದು ಹಕ್ಕಿ ಭಾಷೆ ಎನ್ನುವುದೇ ವಿಶೇಷ.

50 ವರ್ಷಗಳ ಹಿಂದೆ ಕಪ್ಪು ಸಮುದ್ರ ತೀರದಲ್ಲಿದ್ದ ಟ್ರಾಬ್ಜಾನ್, ರಿಝೆ, ಒರ್ದು, ಆರ್ಟ್ವೀನ್ ಮತ್ತು ಬೇಬರ್ಟ್ ಪ್ರದೇಶದ ಎಲ್ಲ ಜನರು ಹಕ್ಕಿಭಾಷೆಯನ್ನೇ ಸಂವಹನಕ್ಕೆ ಬಳಸುತ್ತಿದ್ದರು. ಆದರೆ, ಬದಲಾದ ಕಾಲಘಟದಲ್ಲಿ, ಈ ಪ್ರದೇಶಗಳಲ್ಲಿ ಇತರ ಭಾಷೆಯ ಪ್ರಾಬಲ್ಯ ಹೆಚ್ಚಾಯಿತು. ಹೀಗಾಗಿ ಇದೀಗ ಕುಷ್ಕೋಯ್ ಗ್ರಾಮದಲ್ಲಿ ಮಾತ್ರ ಹಕ್ಕಿ ಭಾಷೆಯನ್ನು ಸಂವಹನಕ್ಕಾಗಿ ಬಳಸುತ್ತಿದ್ದು, ಇದನ್ನು 'ಹಕ್ಕಿ ಗ್ರಾಮ'  ಎಂದೇಕರೆಯಲಾಗುತ್ತಿದೆ.

ಈ ನಡುವೆ, ಅಭಿವೃದ್ಧಿ ಹೊಂದಿದ ಟರ್ಕಿಯಂತಹ ದೇಶದ ಪರ್ವತ ಶ್ರೇಣಿಗಳ ನಡುವೆ ಇಂದಿಗೂ ಪಾರಂಪರಿಕ ಭಾಷೆಯೊಂದು ಇನ್ನೂ ಚಾಲ್ತಿಯಲ್ಲಿರುವುದಕ್ಕೆ ಯುನೆಸ್ಕೋ ಮೆಚ್ಚುಗೆ ವ್ಯಕ್ತಪಡಿಸಿದೆ. ಜೊತೆಗೇ, ಭಾಷೆಯ ಅಳಿವಿನ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ. ಸಾಮಾಜಿಕ ಮತ್ತು ತಾಂತ್ರಿಕ ಬದಲಾವಣೆಯ ಕಾರಣಗಳಿಂದಾಗಿ 'ಪಕ್ಷಿ ಭಾಷೆ'ಯ ತುರ್ತು ಸಂರಕ್ಷಣೆಯ ಅಗತ್ಯವಿದೆ ಎಂದು ಕಳಕಳಿವ್ಯಕ್ತಪಡಿಸಿರುವ ಯುನೆಸ್ಕೋ, ಈ ಭಾಷೆಯನ್ನು ಸಾಂಸ್ಕತಿಕ ಪರಂಪರೆಯ ಪಟ್ಟಿಗೆ ಸೇರಿಸಿದೆ. “ವಿಶ್ವಪರಂಪರೆಯ ಅಳಿವಿನಂಚಿನಲ್ಲಿರುವ ಪಕ್ಷಿಭಾಷೆಯನ್ನು ಉಳಿಸಿಕೊಳ್ಳಬೇಕಾದ ಅಗತ್ಯವಿದ್ದು, ಇದಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ,” ಎಂದು ಯುನೆಸ್ಕೋ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ : ಲೋಕ ತಾಯ್ನುಡಿ ದಿನ | ಭಾಷೆ ಬಳಕೆಯಲ್ಲಿ ಶುದ್ಧತೆ ಬಯಸುವವರ ಆಶಯವಾದರೂ ಏನು?

ಸಂಶೋಧಕರ ಪ್ರಕಾರ, ಹೆಚ್ಚಾಗುತ್ತಿರುವ ಮೊಬೈಲ್ ಬಳಕೆ ಹಾಗೂ ಸಾಮಾಜಿಕವಾಗಿ ಆಗುತ್ತಿರುವ ಬದಲಾವಣೆಗಳಿಂದಾಗಿ ಪಕ್ಷಿಭಾಷೆ ಅಳಿವಿನಂಚಿನತ್ತ ಸಾಗುತ್ತಿದೆ. ಈ ನಡುವೆ, ತಮ್ಮ ಪಾರಂಪರಿಕ ಭಾಷೆಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಳ್ಳುವ ಸಲುವಾಗಿ ಈ ಜನ, ಬರ್ಡ್ ಲಾಂಗ್ವೇಜ್ ಫೆಸ್ಟಿವಲ್ ಆಚರಿಸುತ್ತಾರೆ. ಅಲ್ಲದೆ, ಇತರರಿಗೂ ಭಾಷೆ ಕಲಿಸುವ ತರಗತಿಗಳನ್ನು ನಡೆಸಲಾಗುತ್ತದೆ. ಅಲ್ಲಿನ ಸ್ಥಳೀಯ ಆಡಳಿತ  2014ರಿಂದ ಪ್ರಾಥಮಿಕಾ ಶಾಲಾ ಮಟ್ಟದಲ್ಲಿ ಪಕ್ಷಿ ಭಾಷೆಯನ್ನು ಬೋಧಿಸುವ ಕಾರ್ಯಗಳನ್ನು ಆರಂಭಿಸಿದೆ ಎಂಬ ವರದಿಗಳು ಇವೆ.

ಆದರೆ, ಜಾಗತಿಕವಾಗಿ ಕಾಣುತ್ತಿರುವ ಸಾಮಾಜಿಕ ಹಾಗೂ ತಾಂತ್ರಿಕ ಅಭಿವೃದ್ಧಿಯಿಂದಾಗಿ ಪಕ್ಷಿ ಭಾಷೆಯು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದೆ. ಮುಂದಿನ ತಲೆಮಾರಿಗೆ ಪರಿಚಯಿಸುವ ನಿಟ್ಟಿನಲ್ಲಾದರೂ ಈ ಪಕ್ಷಿ ಭಾಷೆಯ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಯುನೆಸ್ಕೋಅಭಿಪ್ರಾಯಪಟ್ಟಿದೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More