ಸಮಾಧಾನ | ಅಕ್ಷರಗಳನ್ನು ಸರಿಯಾಗಿ ಗುರುತಿಸದ ಮಕ್ಕಳ ಬಗ್ಗೆ ಚಿಂತೆ ಬೇಡ

ಡಿಸ್‌ಲೆಕ್ಸಿಯಾ ಎಂದರೆ ಓದುವ, ಬರೆಯುವ ಮತ್ತು ಗಣಿತವನ್ನು ಕಲಿಯಲಾಗದ ತೊಂದರೆ. ಈ ತೊಂದರೆ ಇರುವ ಮಕ್ಕಳು ಸರಾಗವಾಗಿ ಮಾತನಾಡುತ್ತಾರೆ. ಕೇಳಿದ ವಿಷಯಗಳನ್ನು ನೆನಪಿನಲ್ಲಿಟ್ಟುಕೊಂಡು ಹೇಳಬಲ್ಲರು ಎನ್ನುತ್ತಾರೆ ಹಿರಿಯ ಮನೋವೈದ್ಯ ಸಿ ಆರ್ ಚಂದ್ರಶೇಖರ್

“ನಿಮ್ಮ ಮಗಳು ಮಾತಾಡುವ ಗಿಣಿ ಎನ್ನುತ್ತಾರೆ ಇವಳ ಟೀಚರ್ಸ್. ಎಂಟನೇ ತರಗತಿಯಲ್ಲಿದ್ದಾಳೆ. ಚೆನ್ನಾಗಿ ಹಾಡುತ್ತಾಳೆ. ಶಾಲೆಯ ಯಾವುದೇ ಸಮಾರಂಭದಲ್ಲಿ ಇವಳದೇ ಪ್ರಾರ್ಥನಾ ಗೀತೆ. ಕೋಲಾಟ, ಡಾನ್ಸ್ ಗುಂಪಿನಲ್ಲೂ ಇರುತ್ತಾಳೆ. ಇವಳ ಮುಖ್ಯ ಸಮಸ್ಯೆ ಎಂದರೆ, ಅಕ್ಷರಗಳನ್ನು ಸರಿಯಾಗಿ ಬರೆಯುವುದಿಲ್ಲ. ಸಿಕ್ಕಾಪಟ್ಟೆ ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡುತ್ತಾಳೆ. ಅಕ್ಷರಗಳನ್ನೂ ಉಲ್ಟಾ ಬರೆಯುತ್ತಾಳೆ. ಪದಗಳನ್ನು ಉಲ್ಟಾ ಓದುತ್ತಾಳೆ. ಒಂದು ಪ್ಯಾರಾ ಬರೆಯಬೇಕಾದರೆ ಅವಳಿಗೆ ಅರ್ಧ ಗಂಟೆ ಬೇಕು. ಬರೆಯುವುದರಿಂದ ಆದಷ್ಟು ತಪ್ಪಿಸಿಕೊಳ್ಳುತ್ತಾಳೆ. ಹೋಂವರ್ಕ್ ತಾನು ಮಾಡುವುದಿಲ್ಲ. ನಾನು ಮತ್ತು ನನ್ನ ಮಗ ಬರೆದುಕೊಡುತ್ತೇವೆ. ‘ನೀನೇ ಬರಿಯೇ’ ಎಂದರೆ ಅಳುತ್ತಾಳೆ. ಕೈನೋವು ಎನ್ನುತ್ತಾಳೆ. ಇವಳಿಗೆ ನರಗಳ ವೀಕ್‌ನೆಸ್ ಇದೆಯಾ ನೋಡಿ ಅಥವಾ ಸೋಮಾರಿತನವೇ ನಮಗೆ ತಿಳಿಯುತ್ತಿಲ್ಲ. ಮಕ್ಕಳ ತಜ್ಞರು ಡಾ. ನಾರಾಯಣ್ ಅವರನ್ನು ಕಂಡೆವು. ಅವರು ಪರೀಕ್ಷಿಸಿ, ರಕ್ತ ಪರೀಕ್ಷೆ ಮಾಡಿಸಿ, ರಕ್ತಪುಷ್ಟಿ ಚೆನ್ನಾಗಿದೆ. ಯಾವ ಕೊರತೆ ಇಲ್ಲ. ನಿಮ್ಮನ್ನು ಕಾಣಲು ಹೇಳಿದರು,” ಎಂದರು ಗಣಪತಿ.

“ಅರ್ಪಿತಾ, ಬರೆಯಲು ನಿನಗೇನು ಕಷ್ಟ? ಎಲ್ಲಿ ಈ ಹಾಳೆಯಲ್ಲಿ ನಮ್ಮ ಬೆಂಗಳೂರಿನ ಬಗ್ಗೆ, ನಿಮ್ಮ ಸ್ಕೂಲಿನ ಬಗ್ಗೆ ಬರಿ. ನಿಧಾನವಾಗಿಯೇ ಬರಿ,” ಎಂದೆ. ಐದು ನಿಮಿಷದ ನಂತರ ಅವಳು ತಾನು ಬರೆದ ಹಾಳೆಯನ್ನು ತೋರಿಸಿದಳು. ನೋಡಿದೆ ಅವಳಿಗೆ ಬರೆಯುವ ನ್ಯೂನತೆ-ಡಿಸ್‌ಲೆಕ್ಸಿಯಾ ಇತ್ತು.

ಏನಿದು ಡಿಎಸ್‌ಲೆಕ್ಸಿಯಾ?

ಡಿಸ್‌ಲೆಕ್ಸಿಯಾ ಎಂದರೆ ಓದುವ, ಬರೆಯುವ ಮತ್ತು ಗಣಿತವನ್ನು ಕಲಿಯಲಾಗದ ತೊಂದರೆ. ಈ ತೊಂದರೆ ಇರುವ ಮಕ್ಕಳು ಸರಾಗವಾಗಿ ಮಾತನಾಡುತ್ತಾರೆ. ಕೇಳಿದ ವಿಷಯ-ಮಾಹಿತಿಗಳನ್ನು ಅರ್ಥ ಮಾಡಿಕೊಂಡು, ಕಲಿತು ನೆನಪಿನಲ್ಲಿಟ್ಟುಕೊಂಡು ಹೇಳಬಲ್ಲರು. ಬುದ್ದಿವಂತರಾಗಿರುತ್ತಾರೆ. ಆದರೆ ಅಕ್ಷರಗಳನ್ನು ಸರಿಯಾಗಿ ಗುರುತಿಸಲಾರರು. ಸರಾಗವಾಗಿ ಓದಲಾರರು ಹಾಗೂ ಬರೆಯಲಾರರು. ಬಾಯಲ್ಲಿ ಒಂದು ಪದದ ಸ್ಲೆಲ್ಲಿಂಗ್‌ಅನ್ನು ಸರಿಯಾಗಿ ಹೇಳುವ ಅವರು, ಬರೆಯುವಾಗ ತಪ್ಪು ಮಾಡುತ್ತಾರೆ. ಬರೆಯಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ. ಬರೆಯುವ ಕೆಲಸ ಅವರಿಗೆ ಇಷ್ಟವಾಗುವುದಿಲ್ಲ. ಕಷ್ಟವನ್ನು ಅನುಭವಿಸುತ್ತಾರೆ. ಇದೊಂದು ಹುಟ್ಟಿನಿಂದಲೇ ಬರುವ ಮಿದುಳಿನ ನ್ಯೂನತೆ. ಶೇ. 10 ರಿಂದ 12 ರಷ್ಟು ಮಕ್ಕಳಿಗೆ ಡಿಸ್‌ಲೆಕ್ಸಿಯಾ ಇರುತ್ತದೆ ಎಂಬುದನ್ನೂ ಗಮನಿಸಿ. ಈ ಮಕ್ಕಳನ್ನು ಗುರುತಿಸಿ, ನೇರವಾಗಿ.

ಡಿಸ್‌ಲೆಕ್ಸಿಯಾದ ಸಾಮಾನ್ಯ ಲಕ್ಷಣಗಳು

ಓದುವಾಗ ನಿಧಾನವಾಗಿ, ತಡವರಿಸುತ್ತಾ ಓದುತ್ತಾರೆ. ನಡುವೆ ಓದುವುದನ್ನು ನಿಲ್ಲಿಸಿಬಿಡುತ್ತಾರೆ. ಓದುವಾಗ ಅಕ್ಷರ ಸಾಲಿನ ಮೇಲೆ ಬೆರಳಿಟ್ಟು ಓದುತ್ತಾರೆ. ಅಕ್ಷರವನ್ನು ಅಥವಾ ಪದವನ್ನು ಓದದೆ ಬಿಟ್ಟುಬಿಡುತ್ತಾರೆ.

 • ಕನ್ನಡ ಅಕ್ಷರಗಳಾದ ಕ-ಗ, ಚ-ಜ, ತ-ದಗಳ ಉಚ್ಚಾರಣೆಯ ವ್ಯತ್ಯಾಸ ಗೊತ್ತಾಗುವುದಿಲ್ಲ. ನ-ಸ, ವ-ಪ, ಒ-ಬ ಅಕ್ಷರಗಳನ್ನು ಸರಿಯಾಗಿ ಗುರುತಿಸುವುದಿಲ್ಲ. ನ ಅನ್ನು ಸ ಎಂದು ಸ ಅನ್ನು ನ ಎಂದೂ ಹೇಳಬಹುದು
 • ಇಂಗ್ಲಿಷಿನ ಅಕ್ಷರಗಳ p q, b d, m w, f t ಗಳ ವ್ಯತ್ಯಾಸ ತಿಳಿಯದೇ ಅವನ್ನು ಸರಿಯಾಗಿ ಗುರುತಿಸುವುದಿಲ್ಲ
 • ಪುಸ್ತಕದಲ್ಲಿರುವ ಚಿತ್ರ ನೋಡಿ ಪಾಠ ಒಪ್ಪಿಸುತ್ತಾರೆ !
 • ಭೂತ ಕಾಲದ ವಾಕ್ಯಗಳನ್ನು, ವರ್ತಮಾನ ಕಾಲದ ವಾಕ್ಯಗಳಂತೆ ಓದುತ್ತಾರೆ ಉದಾ: ‘ರಾಮನು ಕಾಡಿಗೆ ಹೋದನು’ ಎಂದಿರುವುದನ್ನು ‘ರಾಮನು ಕಾಡಿಗೆ ಹೋಗುತ್ತಾನೆ,’ ಎಂದು ಓದುತ್ತಾರೆ. ‘ಪಂದ್ಯದಲ್ಲಿ ರಾಜೀವನು ಶಂಕರನನ್ನು ಸೋಲಿಸಿದನು’ ಎನ್ನುವುದನ್ನು ‘ರಾಜೀವನು ಶಂಕರನನ್ನು ಸೋಲಿಸುತ್ತಾನೆ,’ ಎಂದು ಓದುತ್ತಾರೆ.
 • ಪದಗಳನ್ನು ಉಲ್ಟಾ ಓದಬಹುದು. Dog ಅನ್ನು God, Top ಅನ್ನು Pot ಎನ್ನಬಹುದು.
 • ಅಕ್ಷರಗಳನ್ನು ಉಲ್ಟಾ ಬರೆಯುತ್ತಾರೆ
 • ಒಂದು ಪದವನ್ನು ಅದರ ಸಮೀಪದ ಅರ್ಥವನ್ನು ಹೇಳುವ ರೀತಿಯಲ್ಲಿ ಉಚ್ಚರಿಸಬಹುದು. ‘ಬೆಂಕಿ’ ಎನ್ನುವುದನ್ನು ‘ಸುಡು’ ಅಂತಲೂ, ‘ನೀರು’ ಎನ್ನುವುದನ್ನು ‘ಬಾಯಾರಿಕೆ’ ಅಂತಲೂ ಹೇಳಬಹುದು
 • ಪದದ ಅಕ್ಷರಗಳನ್ನು ಚೆಲ್ಲಾಪಿಲ್ಲಿಯಾಗಿ ಬರೆಯಲಾಗುತ್ತದೆ. MYSURU ಎನ್ನುವ ಪದವನ್ನು MSYRU ಅಂತಲೋ MUDYUR ಅಂತಲೋ ಬರೆಯಬಹುದು
 • ಪದದ ಒಂದೆರಡು ಅಕ್ಷರಗಳನ್ನು ಬರೆಯದೇ ಇರಬಹುದು COMPLETE ಅನ್ನು COPLET ಎಂದು ಬರೆಯಬಹುದು
 • ಅಂಕಿಗಳನ್ನು ಸಾಲಾಗಿ ಒಂದರ ಮೇಲೆ ಸರಿಯಾಗಿ ಹೇಳಿದರೂ 6 ಆದ ಮೇಲೆ ಯಾವ ಅಂಕಿ, 8 ಕ್ಕೆ ಮೊದಲು ಯಾವ ಅಂಕಿ ಎಂದರೆ ತಬ್ಬಿಬ್ಬಾಗುತ್ತಾರೆ. ಹಾಗೆಯೇ ಈ ದಿನ ಬುಧವಾರ ನಿನ್ನೆ ಯಾವ ವಾರ, ನಾಳೆ ಯಾವ ವಾರ ಎಂದು ಹೇಳಲು ಬರುವುದಿಲ್ಲ.
 • ಕೂಡುವುದು, ಕಳೆಯುವುದು, ಗುಣಾಕಾರ, ಭಾಗಾಕಾರ-ಸರಳ ಗಣಿತವೂ ಅವರಿಗೆ ಕಷ್ಟವಾಗುತ್ತದೆ. ಲೆಕ್ಕಾಚಾರ ಬರುವುದಿಲ್ಲ.
 • ಹಲವು ಹಂತದ ಚಟುವಟಿಕೆ ಹೇಳಿದರೆ ಅವರಿಗೆ ಅರ್ಥವಾಗದು. ಉದಾಹರಣೆಗೆ ರೂಮಿಗೆ ಹೋಗಿ, ಟೇಬಲ್ಲಿನ ಮೇಲಿರುವ ಪೆನ್ನನ್ನು ತೆಗೆದುಕೊಂಡು ಬಂದು ಅಪ್ಪನಿಗೆ ಕೊಡು.

ಇತಿಹಾಸದಲ್ಲಿ ಅನೇಕ ವಿಜ್ಞಾನಿಗಳು, ವಿದ್ವಾಂಸರು, ನಾಯಕರು ಡಿಸ್‌ಲೆಕ್ಸಿಯಾದಿಂದ ತೊಂದರೆಗೆ ಒಳಗಾಗಿದ್ದರು. ಆಲ್ಬರ್ಟ್ ಐನ್‌ಸ್ಟೀನ್, ಥಾಮಸ್ ಆಲ್ವಾಎಡಿಸನ್, ಲಿಯೋನಾರ್ಡೋ ವಿಂಚಿ, ಅಗಾಥಕ್ರಿಸ್ಪಿ, ರೂಸ್ ವೆಲ್ಟ್, ಜನರಲ್ ಪ್ಯಾಟನ್.

ಡಿಎಸ್‌ಲೆಕ್ಸಿಯಾವನ್ನು ಹೇಗೆ ನಿಭಾಯಿಸಬೇಕು

ಡಿಸ್‌ಲೆಕ್ಸಿಯಾವನ್ನು ಸರಿಪಡಿಸುವ ಔಷಧ/ಶಸ್ತ್ರಚಿಕಿತ್ಸೆ ಇಲ್ಲ. ಪಾಲಕರು, ಶಿಕ್ಷಕರು ಡಿಸ್‌ಲೆಕ್ಸಿಯಾ ಮಕ್ಕಳಿಗೆ ಧೈರ್ಯ ಹೇಳಿ ಓದುವುದು, ಬರೆಯುವುದನ್ನು ನಿತ್ಯ ಪ್ರಾಕ್ಟೀಸ್ ಮಾಡಲು ಹೇಳಬೇಕು. ನಿತ್ಯ ಮುದ್ರಿತ ಪುಸ್ತಕದ ಪ್ರತಿಯೊಂದು, ಅಕ್ಷರ-ಪದವನ್ನು ಬಾಯಲ್ಲಿ ಹೇಳುತ್ತಾ, ಬರೆಯಲು ಪ್ರೋತ್ಸಾಹಿಸಬೇಕು.

ಅಕ್ಷರಗಳನ್ನು ದೊಡ್ಡದಾಗಿ ಬಿಡಿಬಿಡಿಯಾಗಿ ಬರೆಯಬೇಕು. ಡಿಕ್ಟೇಶನ್ - ಕಾಪಿ ಮಾಡಿಸಬೇಕು. ತಪ್ಪುಗಳಾದಾಗ ಗುರುತಿಸಲು ತಿದ್ದಿಕೊಳ್ಳಲು ಸೂಚಿಸಬೇಕು.

ಇದನ್ನೂ ಓದಿ : ಸಮಾಧಾನ | ಚೈತನ್ಯಳಿಗೆ ಸಾಯುವಂತಹ ಯೋಚನೆ ಬಂದಿದ್ದಾದರೂ ಏಕೆ?

ಸರಿಯಾಗಿ ಓದಿದಾಗ, ಸರಿಯಾಗಿ ಬರೆದಾಗ ಭೇಷ್ ಎನ್ನಬೇಕು. ವಾರಾಂತ್ಯದಲ್ಲಿ ಮಗುವಿನ ಶ್ರಮಕ್ಕೆ ಬಹುಮಾನ ನೀಡಬೇಕು. ವೇಗವಾಗಿ, ತಪ್ಪಿಲ್ಲದೆ ಹೇಳುವ ಬರೆಯುವ ಸ್ಪರ್ಧೆಯನ್ನೂ ಡಿಸ್‌ಲೆಕ್ಸಿಯಾ ಮಕ್ಕಳಲ್ಲಿ ಏರ್ಪಡಿಸಿ, ಉತ್ತಮವಾಗಿ ನಿರ್ವಹಣೆ ಮಾಡಿದವರಿಗೆ ಬಹುಮಾನ ನೀಡಬೇಕು.

ಡಿಸ್‌ಲೆಕ್ಸಿಯ ಮೂರು ಮಟ್ಟದಲ್ಲಿರಬಹುದು. ಅಲ್ಪ-ಸಾಧಾರಣ ಮತ್ತು ತೀವ್ರ ಮಟ್ಟ. ಮನಶಾಸ್ತ್ರಜ್ಞರಿಂದ ಸರ್ಟಿಫಿಕೇಟ್ ಪಡೆದು (ಇದೊಂದು ಅಂಗವೈಕಲ್ಯ-Disability) ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕೆಲವು ರಿಯಾಯಿತಿ ಪಡೆಯಲು - ಒಂದೆರಡು ವಿಷಯಗಳ ಮಾಫಿ, ಬರೆಯಲು ಹೆಚ್ಚು ಸಮಯ ಅಥವಾ ಬೇರೆಯವರಿಂದ ಬರೆಸಲು ಅನುಮತಿ, ವ್ಯವಸ್ಥೆ ಮಾಡಬೇಕು. ಶಾಲೆಯ ಪ್ರಿನ್ಸಿಪಾಲರು ಎಸ್ಸೆಸ್ಸೆಲ್ಸಿ ಬೋರ್ಡ್‌ಗೆ ಅರ್ಜಿಯನ್ನು ಕಳುಹಿಸಬೇಕು. ಎಸ್ಸೆಸ್ಸೆಲ್ಸಿ ಆದ ಮೇಲೆ, ಓದುವ ಬರೆಯುವ ಕೋರ್ಸ್ ಬಿಟ್ಟು ಕುಶಲ, ಕಲೆಗಳೂ, ಸಂಗೀತ, ನೃತ್ಯ, ಚಿತ್ರಕಲೆಗಳ ಕೋರ್ಸ್‌ಗೆ ಈ ಮಕ್ಕಳನ್ನು ಸೇರಿಸುವುದು ಉತ್ತಮ ಎಲ್ಲರಂತೆ ಬದುಕುವ ಅವಕಾಶವನ್ನು ಇವರಿಗೆ ನೀಡಬೇಕು. ಇವರನ್ನು ನಿರ್ಲಕ್ಷಿಸಬೇಡಿ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More