ಜನುಮದಿನ | ಹಿಂದೂಸ್ತಾನಿ ಸಂಗೀತದಲ್ಲಿ ಭಾವ ಪ್ರಧಾನತೆ ತಂದ ಕಿಶೋರಿ ಅಮೋನ್ಕರ್‌

ಹಿಂದೂಸ್ತಾನಿ ಸಂಗೀತದಲ್ಲಿ ಕ್ರಾಂತಿಕಾರಿ ಎನಿಸಿಕೊಂಡವರು ಕಿಶೋರಿ ಅಮೋನ್ಕರ್‌. ಗಾಯಕಿಯಲ್ಲಿ ಭಾವಪೂರ್ಣತೆ ಮುಖ್ಯವೆಂದು ಪ್ರತಿಪಾದಿಸಿ, ಖಯಾಲ್‌ಗಳಿಗೆ, ಬಂದಿಶ್‌ಗಳಿಗ ಹೊಸ ಆಯಾಮ ನೀಡಿದವರು. ಠುಮ್ರಿ, ಭಜನ್‌ಗಳನ್ನು ಇವರ ಕಂಠದಲ್ಲಿ ಕೇಳಿದವರು ಮರೆಯಲಾರರು

ಸ್ವಾತಂತ್ರ್ಯೋತ್ತರ ಭಾರತದ ಅತ್ಯಂತ ಪ್ರಭಾವಶಾಲಿ ಹಿಂದುಸ್ತಾನಿ ಗಾಯಕಿ ಕಿಶೋರಿ ಅಮೋನ್ಕರ್, ಜೈಪುರ್ ಅತ್ರೌಲಿ ಘರಾನೆಯ ದಿಗ್ಗಜೆ ಎನಿಸಿಕೊಂಡಿದ್ದ ಮೋಗೂಬಾಯಿ ಕುರ್ಡೀಕರ್ ಅವರ ಪುತ್ರಿ ಹಾಗೂ ಶಿಷ್ಯೆ. ಜೈಪುರ್ ಅತ್ರೌಲಿ ಶೈಲಿಯ ಅತ್ಯಂತ ಸೃಜಲಶೀಲ, ಸ್ವೋಪಜ್ಞ, ಕಲಾತ್ಮಕ ನಿರೂಪಣೆಗಾಗಿ ಕಿಶೋರಿಯವರು ಸಂಗೀತಲೋಕದಲ್ಲಿ ಖ್ಯಾತರಾದರು. ಈ ಘರಾನೆಯು ಶಾಸ್ತ್ರಿಯತೆಗೆ ಹೆಚ್ಚು ಪ್ರಾಮುಖತ್ಯೆ ನೀಡುತ್ತಿತ್ತು. ಆದರೆ, ಕಿಶೋರಿಯವರು ಭಾವಪೂರ್ಣತೆಗೆ ಹೆಚ್ಚು ಪ್ರಾಮುಖ್ಯ ನೀಡಿದರು. ಇದರಿಂದಾಗಿ ಸಂಪ್ರದಾಯಶೀಲರಿಂದ ಕಟುಟೀಕೆಗಳನ್ನು ಎದುರಿಸಬೇಕಾಯಿತು. ಆದರೆ, ಅವುಗಳನ್ನು ಗೆದ್ದು ಅಪ್ರತಿಮ ಗಾಯಕಿ ಎನಿಸಿಕೊಂಡರು. ಇಂದು ಕಿಶೋರಿಯವರ ಈ ಪರಿಷ್ಕ್ರತ ಶೈಲಿಯೇ ಜೈಪುರ್-ಅತ್ರೌಲಿ ಗಾಯಕಿಯ ವಿಶೇಷತೆಯಾಗಿದೆ. ಈ ಘರಾನೆಯ ಸಾಂಪ್ರದಾಯಿಕ ಶೈಲಿ ಇಂದು ಚರಿತ್ರೆಯ ಪುಟಗಳಲ್ಲಿ ಸೇರಿಹೋಗಿದೆ.

ಕಿಶೋರಿಯವರು ಅದ್ಭುತ ಗಾಯಕಿ ಮಾತ್ರವಲ್ಲ, ಸಂಗೀತದಲ್ಲಿ ಭಾವಪ್ರಧಾನ ಚಳವಳಿಯ ಪ್ರಮುಖ ಪ್ರತಿಪಾದಕಿ ಕೂಡ. ಈ ನಿಟ್ಟಿನಲ್ಲಿ ಅವರ ಚುರುಕುಬುದ್ಧಿ, ಪಾಂಡಿತ್ಯ ಹಾಗೂ ಕೊನೇ ಪಕ್ಷ ಮೂರು ಭಾಷೆಗಳಲ್ಲಿ (ಇಂಗ್ಲೀಷ್ ಸೇರಿದಂತೆ) ಸೊಗಸಾಗಿ ಮಾತನಾಡಬಲ್ಲ ಸಾಮರ್ಥ್ಯ ಅವರ ನೆರವಿಗೆ ಬಂದಿವೆ. ಅವರಲ್ಲಿ ಸಂಗೀತಕ್ಕೆ ಸಂಬಂಧಿಸಿದ ಅತ್ಯುತ್ತಮ ಗ್ರಂಥಗಳಿವೆ. ಕಛೇರಿ ವೇದಿಕೆಯಲ್ಲಿ ಹೇಗೋ ಹಾಗೆಯೇ ವಿಚಾರ ಸಂಕಿರಣ, ಸಮ್ಮೇಳನಗಳಲ್ಲಿಯೂ ಕಿಶೋರಿಯವರು ತಮ್ಮ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಾರೆ. ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ, ರಾಷ್ಟ್ರಪತಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಅವರ ಸಾಧನೆಗೆ ಸಂದಿವೆ.

ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಹಿಂದುಸ್ತಾನಿ ಗಾಯನದಲ್ಲಿ ಭಾವಪ್ರಾಧಾನ್ಯತೆಯ ಅಲೆ ಮೊದಲಿಗೆ ಕಂಡುಬರುವುದು ವಿಶೇಷವಾಗಿ ಪಂಡಿತ್ ಓಂಕಾರ್ ನಾಥ್ ಠಾಕೂರರಲ್ಲಿ (1897-1967). ಆದರೆ, ಈ ಅಂಶ ಅವರಲ್ಲಿ ತುಂಬಾ ಎದ್ದುಕಾಣುವುದಿಲ್ಲ. ಹಿಂದುಸ್ತಾನಿ ಸಂಗೀತದಲ್ಲಿ ಈ ಭಾವಪ್ರಾಧಾನ್ಯತೆ ಒಂದು ವಿಶಿಷ್ಟ ಚಳುವಳಿಯಾಗಿ ರೂಪುಗೊಂಡಿದ್ದು, ಸ್ವಾತಂತ್ರ್ಯೋತ್ತರ ಕಾಲದಲ್ಲಿ. ಭಾವಪ್ರಾಧಾನ್ಯ ಸಂಗೀತವು ತನ್ನ ವಿಷಯದ ಚೌಕಟ್ಟಿನೊಳಗೆ ಕೆಲಸ ಮಾಡುವುದರಲ್ಲೇ ತೃಪ್ತಿಯನ್ನು ಕಂಡುಕೊಳ್ಳುತ್ತದೆ. ಆದರೆ, ಅಭಿಜಾತತೆ ಅದನ್ನು ಮೀರಲು ಪ್ರಯತ್ನಿಸುತ್ತದೆ. ಶಾಸ್ತ್ರೀಯ ಸಂಗೀತದ ಈ ಹೊಸ ಅಲೆ ಭಾವನೆಗಳನ್ನು ಉದ್ದೀಪಿಸಿ, ಶೋತೃವಿನಲ್ಲಿ ಅಕ್ಕರೆಯ, ಪ್ರೀತಿಯ, ಆತ್ಮೀಯತೆಯ ಭಾವ ಮೂಡಿಸುವುದಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ ಮತ್ತು ಸಂಗೀತದ ರಾಚನಿಕ ವಿನ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡುವುದಿಲ್ಲ. ಆದರೆ, ಅಭಿಜಾತತೆಯ ಲಕ್ಷಣವೇ ತಾಟಸ್ಥ್ಯ. ಶ್ರೋತೃಗಳು ತಾವಾಗಿಯೇ ಅದಕ್ಕೆ ಪ್ರತಿಕ್ರಿಯಿಸಬೇಕು. ಆದರೆ ಭಾವಪ್ರಾಧಾನ್ಯ ಪಂಥ ಶ್ರೋತೃಗಳ ಸಕ್ರಿಯ ಭಾಗವಹಿಸುವಿಕೆ ಮತ್ತು ಪ್ರತಿಕ್ರಿಯೆ ಬೇಡುವಂತಹ ಆತ್ಮೀಯ, ಆಪ್ತವಾದ ಸಂಗೀತ.

ಖಯಾಲ್ ಗಾಯನದಲ್ಲಿ ಭಾವಪ್ರಾಧಾನ್ಯಕ್ಕೆ ಪ್ರಾಮುಖ್ಯ ದೊರಕಿದ್ದು ಈ ಕಾಲಘಟ್ಟದ ತೀರಾ ಸಹಜ, ತಾರ್ಕಿಕ ಬೆಳವಣಿಗೆ. ಭಾವಪ್ರಾಧಾನ್ಯ ಸಂಗೀತದ ಮೂಲ ಪ್ರಕಾರ ಬನಾರಸ್ ಠುಮ್ರಿ. 1950ರ ಸುಮಾರಿಗೆ ಇದನ್ನು ಹಾಡುತ್ತಿದ್ದ ಪರಿಣತರೆಲ್ಲ ಹೆಚ್ಚೂಕಡಿಮೆ ನಿಧನರಾಗಿದ್ದರು. ಶ್ರೋತೃಗಳಿಗೆ ಭಾವಪೂರ್ಣವಾದ ಸಂಗೀತವನ್ನು ಕೇಳಬೇಕೆಂಬ ಹಂಬಲವಿತ್ತು. ಕೇಳುಗರ ಈ ಹಂಬಲವನ್ನು ಪೂರೈಸಲು ಖಯಾಲ್ ಗಾಯಕರು ಭಾವಪ್ರಧಾನವಾದ ಠುಮ್ರಿಗಳನ್ನು ಮತ್ತು ಗಜಲ್ ಗಾಯಕರು ಭಾವಪೂರ್ಣ ಶೃಂಗಾರಪ್ರಧಾನ ರಚನೆಗಳನ್ನು ಹಾಡಲಾರಂಭಿಸಿದರು. ಈ ಪ್ರವೃತ್ತಿಗಳು, ಮಹಾನ್ ಗಾಯಕರಾದ ಬಡೇ ಗುಲಾಂ ಅಲಿಖಾನ್ ಅವರ ಠುಮ್ರಿಗಾಯನ ಶೈಲಿಯನ್ನು ಮತ್ತು ಬೇಗಂ ಅಖ್ತರ್ ಮತ್ತು ಅವರ ನಂತರದ ಮೆಹದಿ ಹಸನ್ ಅವರ ಗಜಲ್ ಗಾಯನ ಶೈಲಿಯನ್ನು ರೂಪಿಸಿದವು. ಆದರೆ ಅಪ್ಪಟ ಬನಾರಸ್ ಠುಮ್ರಿಯ ಜಾಗವನ್ನು ತುಂಬಲು ಖಯಾಲ್ ಶೈಲಿಯ ಠುಮ್ರಿಗಾಗಲೀ ಅಥವ ಠುಮ್ರಿ ಶೈಲಿಯ ಗಜಲ್ ಗಾಗಲೀ ಸಾಧ್ಯವಾಗಲಿಲ್ಲ.

ಇನ್ನೂ ಹೆಚ್ಚಿನ ದಿಟ್ಟ ಪ್ರಯೋಗಗಳನ್ನು ಮಾಡಬಲ್ಲ ಛಾತಿಯಿದ್ದ ಕಲಾವಿದರಿಗೆ ಒತ್ತಾಸೆ ನೀಡುವಷ್ಟು ಆಗಿನ ಸಾಂಸ್ಕೃತಿಕ ಪರಿಸರ ಪಕ್ವವಾಗಿತ್ತು. ಹೀಗೊಂದು ಭಾವಪ್ರಧಾನ ಮನೋಧರ್ಮವಿದ್ದು, ಹೊಸದೊಂದು ಕಲಾತ್ಮಕ ಪ್ರವೃತ್ತಿಯನ್ನು ರೂಪಿಸುವ ದಿಟ್ಟತನವಿದ್ದ ಕಲಾವಿದರು ಖಯಾಲ್ ಶೈಲಿಗೆ ಠುಮ್ರಿಯ ಭಾವಪೂರ್ಣತೆಯನ್ನು ಅಳವಡಿಸಿಕೊಳ್ಳುವ ಹೊಸ ಅಲೆಯೊಂದನ್ನು ಹುಟ್ಟುಹಾಕಿದರು. ಖಯಾಲ್ ಕಾಪಾಡಿಕೊಂಡು ಬಂದಿದ್ದ ತಾಟಸ್ಥ್ಯವನ್ನು ವಿರೋಧಿಸಿ, ಹಿಂದೂಸ್ತಾನಿ ಗಾಯನದಲ್ಲಿ ಭಾವಪ್ರಾಧಾನ್ಯತೆಗೆ ಒಂದು ಗೌರವಾನ್ವಿತ ಸ್ಥಾನವನ್ನು ತಂದುಕೊಟ್ಟವರಲ್ಲಿ ಕಿಶೋರಿ ಅಮೋನ್ಕರ್ ಪ್ರಮುಖರು. ಸುಮಾರಾಗಿ ಇದೇ ಕಾಲಘಟ್ಟದಲ್ಲಿ ಈ ಕೆಲಸವನ್ನು ತುಂಬಾ ಯಶಸ್ವಿಯಾಗಿ ಮಾಡಿದ ಇನ್ನಿಬ್ಬರು ಕಲಾವಿದರು ಕುಮಾರ ಗಂಧರ್ವ (1924-1992) ಮತ್ತು ಜಸ್ ರಾಜ್ (ಜನನ 1930). ಹೀಗೆ, ಭಾವಪ್ರಧಾನ ಖಯಾಲ್ ಗಾಯಕಿಯ ಪ್ರವರ್ತಕರೆಲ್ಲರೂ ಭಾವಪೂರ್ಣ ಪ್ರಕಾರವಾಗಿದ್ದ ಭಕ್ತಿಸಂಗೀತವನ್ನು ತುಂಬಾ ಹಾಡುತ್ತಿದ್ದರು. ಜೊತೆಗೆ ಠುಮ್ರಿಯ ಭಾವಪೂರ್ಣತೆಯನ್ನು ಖಯಾಲ್ ಗಾಯಕಿಗೆ ಅಳವಡಿಸಿಕೊಂಡ ಇವರ್ಯಾರಿಗೂ ಠುಮ್ರಿಯನ್ನು ಹಾಡುವುದರಲ್ಲಿ ಯಾವ ಆಸಕ್ತಿಯೂ ಇರಲಿಲ್ಲ. ಇದು ನಿಜಕ್ಕೂ ಸ್ವಾರಸ್ಯಕರ ಸಂಗತಿ.

ವಿ ಶಾಂತರಾಂ ಅವರ ‘ಗೀತ್‌ ಗಾಯಾ ಪತ್ಥರೋನೆ’ ಚಿತ್ರದಲ್ಲಿ ಹಾಡಿ, ಅವರು ಹಿನ್ನೆಲೆ ಗಾಯಕಿಯಾಗಲು ಪ್ರಯತ್ನಿಸಿದರು. ಆದರೆ, ಆ ಕ್ಷೇತ್ರದಲ್ಲಿ ಬೆಳೆಯುವುದಕ್ಕೆ ತನಗೆ ಸಾಧ್ಯವಿಲ್ಲವೆನಿಸಿ ಅದನ್ನು ಬಿಟ್ಟರು. ಆವತ್ತಿಗೆ ಅದು ನೋವಿನ ನಿರ್ಧಾರವಾಗಿರಬಹುದು. ಕಿಶೋರಿಯಾಗಲಿ ಅಥವಾ ಸಂಗೀತ ಪ್ರೇಮಿಗಳಾಗಲಿ ಕೊರಗಬೇಕಾಗಿಲ್ಲ.

ಕಿಶೋರಿ ಅಮೋನ್ಕರ್‌ ಅವರ ಕಂಠಸಿರಿಯನ್ನು ಕುರಿತು ಮಾತನಾಡುವಾಗ ವಿಮರ್ಶಕರು ಹೆಚ್ಚೂಕಡಿಮೆ ಕವಿಗಳಾಗಿಬಿಡುತ್ತಾರೆ. ಅವರದ್ದು ನಿಷಿತವಾದ, ಸಮ್ಮೋಹಕ, ಮಧುರ, ದುಃಖ-ದುಮ್ಮಾನ ತುಂಬಿದ, ಎದೆಯಾಂತರಾಳದಲ್ಲಿ ಭಾವಗಳನ್ನು ಶೋಧಿಸುವ ಅಪರೂಪದ ಕಂಠವೆಂದು ಬಣ್ಣಿಸುತ್ತಾರೆ. ಅಧ್ಯಾತ್ಮಿಕ ಮತ್ತು ಐಹಿಕ ವಾಸ್ತವಗಳ ಒಂದು ಸುಂದರ ಸಮಾಗಮ ಎಂದು ಕೊಂಡಾಡುತ್ತಾರೆ. ಕಿಶೋರಿಯವರದ್ದು ಭಾವಪೂರ್ಣ ಶುದ್ಧ ಶಾರೀರ. ಎಲೆಕ್ಟ್ರಾನಿಕ್‌ ಧ್ವನಿವರ್ಧಕಗಳು ಮತ್ತು ಸೌಂಡ್‌ ಪ್ರೊಸೆಸಿಂಗ್‌ ತುಂಬಿಹೋಗಿರುವ ಸಮಕಾಲೀನ ನಾದಲೋಕಕ್ಕೆ ಹೇಳಿ ಮಾಡಿಸಿದಂತಹ ಕಂಠ ಅವರದ್ದು. ಸಾಂಪ್ರದಾಯಿಕ ಜೈಪುರ-ಅತ್ರೌಲಿ ಘರಾನೆಯ ಸಂಗೀತಗಾರರು ಮಾತ್ರವೇ ಹಾಡುತ್ತಿದ್ದ ಆಯ್ದ ರಾಗಗಳನ್ನು ಬಿಟ್ಟು, ಬೇರೆಯದನ್ನು ಕಿಶೋರಿಯವರು ಹಾಡುತ್ತಿದ್ದರು. ಆಗೊಮ್ಮೆ ಈಗೊಮ್ಮೆ ‘ಖೆಮ್’ನಂತಹ ಅಪರೂಪದ ರಾಗವನ್ನು ಅಥವಾ ಬಸಂತಿ-ಕೇದಾರ್‌, ಖಟ್‌, ಅಡಾನಾ-ಮಲ್ಹಾರ್‌, ಸಂಪೂರ್ಣ ಮಾಲ್‌ಕೌನ್ಸ್‌ನಂತಹ ಸಂಕೀರ್ಣವಾದ ರಾಗಗಳನ್ನು ಹಾಡುತ್ತಿದ್ದರು. ಆದರೆ, ಸಾಮಾನ್ಯವಾಗಿ ವಿಸ್ತರಿಸಲು ತುಂಬಾ ಸಾಧ್ಯತೆಗಳಿರುವ ಪರಿಚಿತ, ಪ್ರೌಢರಾಗಗಳನ್ನೇ ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆ ಕಾಲದ ಲಹರಿಗೆ ಅನುಗುಣವಾಗಿ ಕರ್ನಾಟಕ ಸಂಗೀತದಿಂದ ಆಮದಾದ ಹಂಸಧ್ವನಿಯಂತಹ ರಾಗಗಳನ್ನು ಅವರು ಹಾಡುತ್ತಿದ್ದರು. ಅವರು ಹಿಡಿದ ಈ ಭಿನ್ನ ಹಾದಿಯಿಂದಾಗಿ ಅವರು ಖಯಾಲ್‌ ಪ್ರಸ್ತುತಿ ಸಮಕಾಲೀನ ಶ್ರೋತೃಗಳಿಗೆ ಮೆಚ್ಚುಗೆಯಾಗುತ್ತಿತ್ತು ಮತ್ತು ಅವರ ಸಂಗೀತ ಸುಲಭವಾಗಿ ಎಲ್ಲರನ್ನೂ ಮುಟ್ಟುತ್ತಿತ್ತು.

ಕಿಶೋರಿಯವರು ತಮ್ಮ ಸಮಕಾಲೀನ ಸಂಗೀತಗಾರರಂತೆ, ಹಿಂದಿ, ಮರಾಠಿ, ಕನ್ನಡ ಹಾಗೂ ಸಂಸ್ಕೃತದ ಭಜನೆಗಳನ್ನು ಹಾಡುತ್ತಿದ್ದರು. ಈ ಮೂಲಕ ಕೇಳುಗರಲ್ಲಿ ತಮಗಾಗಿ ಒಂದು ವಿಶೇಷ ಸ್ಥಾನವನ್ನು ಪಡೆದುಕೊಂಡರು. ಅವರ ಘರಾನೆಯ ಹಿಂದಿನ ಗಾಯಕರು ಇವುಗಳನ್ನು ಹಾಡುತ್ತಿರಲಿಲ್ಲ. ತಮ್ಮ ತಾಯಿಯವರಂತೆ ಅವರು ಕೂಡ ತರಾನಾಗಳನ್ನು ಹಾಡುತ್ತಿದ್ದರು ಇಲ್ಲಿ ಕೂಡ ಅವರು ತಮ್ಮ ಘರಾನೆಯವರಿಗಿಂತ ಭಿನ್ನ. ಏಕೆಂದರೆ, ಜೈಪುರ-ಅತ್ರೌಲಿ ಘರಾನೆಯ ಕಟ್ಟಾ ಸಂಪ್ರದಾಯಸ್ಥ ಗಾಯಕರು ತರಾನಾಗಳನ್ನು ಹಾಡುತ್ತಿರಲಿಲ್ಲ.

ಜೈಪುರ-ಅತ್ರೌಲಿ ಘರಾನೆಯ ಪ್ರವರ್ತಕರಾಗಿದ್ದ ಉಸ್ತಾದ್‌ ಅಲ್ಲಾದಿಯಾ ಖಾನ್‌ ಅವರ ಕಂಠಕ್ಕೆ ತೊಂದರೆಯಾಗಿದ್ದರಿಂದ ಅವರಿಗೆ ವಿಸ್ತಾರವಾದ ಆಲಾಪನೆ ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಅವರು ಅತಿ ವಿಸ್ತಾರವಲ್ಲದ, ಆದರೆ ತುಂಬಾ ಸಂಕ್ಷಿಪ್ತವೂ ಅಲ್ಲದ, ರಾಗದ ಸಾರವೆಲ್ಲವೂ ಬರುವಂತೆ ಮಧ್ಯಸ್ಥವಾಗಿ ಆಲಾಪಿಸುತ್ತಿದ್ದರು. ಕೇಸರ್‌ಬಾಯ್‌ ಕೇರ್ಕರ್‌ ಸ್ವಲ್ಪಮಟ್ಟಿನ ವಿಸ್ತಾರವಾದ ಆಲಾಪನೆಯನ್ನು ಮತ್ತೆ ಪ್ರಾರಂಭಿಸಿದರು. ಕಿಶೋರಿಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ಖಯಾಲ್‌ ಪ್ರಸ್ತುತಿಯಲ್ಲಿ ಆಲಾಪನೆಗೇ ಸಿಂಹಪಾಲನ್ನು ಮೀಸಲಿಟ್ಟರು. ಅವರ ಆಲಾಪನೆ ಬೇರೆಲ್ಲ ಘರಾನೆಗಳಿಗಿಂತ ಮತ್ತು ಬೇರೆಲ್ಲ ಸಂಗೀತಗಾರರಿಗಿಂತ ಭಿನ್ನವಾಗಿದೆ. ಜೈಪುರ್-ಅತ್ರೌಲಿ ಆಲಾಪದ ಶೈಲಿಯಲ್ಲಿರುವ ಸೂಕ್ಷ್ಮವಾದ ನವಿರಾದ ಕಂಪನ ಕಿಶೋರಿಯವರಲ್ಲಿ ಕಾಣುವುದಿಲ್ಲ.ಲಾವರ ರಾಗದ ಆಲಾಪಗಳು ಲಯದ ಹಂಗನ್ನು ಸಂಪೂರ್ಣವಾಗಿ ತೊರೆದಿವೆ. ಸಾಂಪ್ರದಾಯಿಕ ಭಾವನೆಯನ್ನು ಅದು ಕೇಳುಗರಲ್ಲಿ ಮೂಡಿಸುತ್ತದೆ. ಇದು ಕಿಶೋರಿಯವರ ವೈಶಿಷ್ಟ್ಯ.

ಇಷ್ಟೊಂದು ಕ್ರಾಂತಿಕಾರಕ ಕಾಣ್ಕೆ ಇರುವ ಕಲಾವಿದೆಗೆ ಈಗಾಗಲೇ ಇದ್ದ ಸಾಂಪ್ರದಾಯಿಕ ರಚನೆಗಳು ತನ್ನ ಸಂಗೀತವನ್ನು ಅಭಿವ್ಯಕ್ತಿಸುವುದಕ್ಕೆ ಸಾಲುತ್ತಿಲ್ಲ ಎಂಬ ಅತೃಪ್ತಿ ಕಾಡುವುದು ತೀರಾ ಸ್ವಾಭಾವಿಕ. ಸಾಂಪ್ರದಾಯಿಕ ಖಯಾಲ್‌ ಬಂದಿಶ್‌ಗಳನ್ನು ಪ್ರಸ್ತುತಪಡಿಸುವಾಗಲೂ ಅವರು ಅದನ್ನು ತಮ್ಮದೇ ಆದ ವೈಯಕ್ತಿಕ ವಿಶಿಷ್ಟ ಶೈಲಿಯಲ್ಲಿ ನಿರೂಪಿಸುತ್ತಾರೆ. ತಮಗಿರುವ ರಾಗದ ಕಲ್ಪನೆ ಮತ್ತು ಮಾಧುರ್ಯದ ಸಂವೇದನೆಯನ್ನು ಸೂಕ್ತವಾಗಿ ನಿರೂಪಿಸಲು ಸ್ವತಃ ಹಲವಾರು ಬಂದಿಶ್‌ಗಳನ್ನು ರಚಿಸಿದ್ದಾರೆ.

ಕಿಶೋರಿಯವರು ಈಗಾಗಲೇ ಎರಡು ತಲೆಮಾರು ಶಿಷ್ಯರನ್ನು ತಮ್ಮ ವಿಶಿಷ್ಟ ಗಾಯನ ಶೈಲಿಯಲ್ಲಿ ತಯಾರು ಮಾಡಿದ್ದಾರೆ. ಅದಕ್ಕಿಂತ ಮಹತ್ವದ ಸಂಗತಿಯೆಂದರೆ ಸಂಗೀತಾಭ್ಯಾಸ ಮಾಡುತ್ತಿರುವ ಸಾವಿರಾರು ಗಾಯಕರಿಯರಿಗೆ ಅವರು ಕಛೇರಿ, ಧ್ವನಿತಟ್ಟೆ, ಧ್ವನಿಸುರುಳಿಗಳು ಮತ್ತು ಬಾನುಲಿ ಪ್ರಸಾರಗಳು ಸ್ಫೂರ್ತಿ ನೀಡುತ್ತಿವೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಿಂದೂಸ್ತಾನಿ ಗಾಯಕರ ಮೇಲೆ ಉಸ್ತಾದ್‌ ಅಮೀರ್‌ ಖಾನ್‌ ಬೀರಿದಷ್ಟೇ ಗಾಢ ಪ್ರಭಾವವನ್ನು ಕಿಶೋರಿಯವರು ಹಿಂದೂಸ್ತಾನಿ ಗಾಯಕಿಯರ ಮೇಲೆ ಬೀರಿದ್ದಾರೆ ಎನ್ನಬಹುದು.

ಇದನ್ನೂ ಓದಿ : ಬಿಸ್ಮಿಲ್ಲಾ ಖಾನ್ ಜನ್ಮದಿನ | ಮೇರು ಸಂಗೀತಗಾರನ ಮನೆಗೆ ಭೇಟಿ ನೀಡಿದ ಘಳಿಗೆ

ಕಿಶೋರಿ ಅಮೋನ್ಕರ್‌ ಮತ್ತು ಅಮೀರ್‌ಖಾನ್‌ ಅವರ ಸಂಗೀತದ ಯಶಸ್ಸಿಗೆ ಮೂಲ ಕಾರಣ ಅವರ 'ಸಂಗೀತ'ವು ಆಗುವ 'ಪ್ರಕ್ರಿಯೆ'. ಆದರೆ ಇಂದು ಅವರ ಹೆಚ್ಚಿನ ಅನುಯಾಯಿಗಳಿಗೆ ಕಿಶೋರಿಯವರ ಸಿದ್ಧ ಸಂಗೀತ ಸಾಕು. ಆ ಸಂಗೀತ ಆಗುವ ಪ್ರಕ್ರಿಯೆ ಬೇಕಾಗಿಲ್ಲ. ಇಂದಿನ ಸಂಗೀತ ಸಂಸ್ಕೃತಿಯ ಸ್ವಂತಿಕೆ ಇಲ್ಲದ, ಸೃಜನಶೀಲರಲ್ಲದ ಗಾಯಕರು ಈ ಶತಮಾನದ ಅಪಾರ ಸ್ವಂತಿಕೆ ಇರುವ ಈ ಸೃಜನಶೀಲ ಗಾಯಕರಂತೆಯೇ ಹಾಡಲು ಪ್ರಯತ್ನಿಸುತ್ತಾರೆ. ಆಗ ಹೆಚ್ಚಿನ ಬಾರಿ ಅದು ಅನುಕರಣೆಯಂತೆ, ಮತ್ತೆ ಕೆಲವು ಸಲ ಅಣಕದಂತೆ ಕಾಣುತ್ತದೆ. ಇದು ಖೇದದ ಸಂಗತಿ.

ಕಿಶೋರಿಯಂತಹ ನಕ್ಷತ್ರಗಳು ಸದಾ ಬೆಳಗಲೆಂದೇ ಮೂಡಿರುತ್ತವೆ. ಅವುಗಳ ಕಾಂತಿಯನ್ನು, ಬೆಳಕನ್ನು ಪ್ರತಿಬಿಂಬಿಸುವುದಕ್ಕೆ ಯಾವ ಉಪಗ್ರಹಗಳಿಗೂ ಸಾಧ್ಯವಿಲ್ಲ.

(ರಾಗಮಾಲ ಪ್ರಕಟಿಸಿದ 'ನಾದ ಬಿಂಬ' ಪುಸ್ತಕದ ಲೇಖನದಿಂದ ಆಯ್ದ ಭಾಗ)

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More