ತಂದೆ-ತಾಯಿ ಮಾಡುವ ಬಲವಂತದ ಮದುವೆ ರದ್ದು ಮಾಡಲು ಸುಪ್ರೀಂ ಚಿಂತನೆ

ಮದುವೆ ಎಂಬುದು, ಒಬ್ಬ ವ್ಯಕ್ತಿ ತನ್ನ ಸಿಹಿ-ಕಹಿ ಹಂಚಿಕೊಳ್ಳಲು ಜೀವನ ಸಂಗಾತಿಯನ್ನು ಆರಿಸಿಕೊಂಡಿರುವುದನ್ನು ಜಗತ್ತಿಗೆ ಸಾರುವ ದಿನ. ಆದರೆ, ಅಧಿಕೃತವಾಗಿ ಮದುವೆಯಾಗುವ ವ್ಯಕ್ತಿಗೇ ತನ್ನ ಜೊತೆಗಾರರನ್ನು ಆರಿಸುವ ಹಕ್ಕನ್ನು ನಮ್ಮ ಸಮಾಜ ಕೊಡದೆ ಇರುವ ಬಗ್ಗೆ ಚರ್ಚೆಯಾಗಬೇಕಲ್ಲವೇ?

ನಮ್ಮದು ಸುಸಂಸ್ಕೃತ ಸಮಾಜ ಎಂದು ನಾವೆಷ್ಟೇ ಹೇಳಿಕೊಂಡರೂ ಆಗಾಗ್ಗೆ ನ್ಯಾಯಾಲಯಗಳಲ್ಲಿ ದಾಖಲಾಗುವ ಕೆಲವು ಪ್ರಕರಣಗಳು ನಮ್ಮ ಈ ಹೆಮ್ಮೆಯನ್ನು ಕೊಡವಿಕೊಳ್ಳುವುದು ಅನಿವಾರ್ಯ ಆಗಿಸಿಬಿಡುತ್ತವೆ. ಇಂದಿಗೂ ಭಾರತೀಯ ಸಮಾಜ ಮಹಿಳೆಗೆ ಮದುವೆ ವಿಚಾರದಲ್ಲಿ ತನ್ನದೇ ಅಭಿಪ್ರಾಯವನ್ನು ಮುಂದಿಡುವ ಅವಕಾಶವನ್ನು ನೀಡದೆ ಇರುವುದು ಅವುಗಳಲ್ಲಿ ಒಂದಾಗಿದೆ. ದೇಶದಲ್ಲಿ ನಡೆಯುವ ಬಹಳಷ್ಟು ಮದುವೆಗಳು ಹಿರಿಯರು ನಿಶ್ಚಯಿಸಿದವುಗಳೇ ಆಗಿರುತ್ತವೆ. ಪ್ರೀತಿಸಿ ಮದುವೆಯಾದವರೂ ಸದಾ ಸಮಾಜದ ಕೆಂಗಣ್ಣಿಗೆ ಗುರಿಯಾಗಿರುತ್ತಾರೆ. ಹಿರಿಯರೂ ಮಗ ಅಥವಾ ಮಗಳು ಪ್ರೀತಿಯಲ್ಲಿ ಬಿದ್ದರೆ, ಜಾತಿ, ಧರ್ಮ ಹಾಗೂ ಮರ್ಯಾದೆಯನ್ನು ಮುಂದಿಟ್ಟು ವಿವಾಹಕ್ಕೆ ವಿರೋಧ ವ್ಯಕ್ತಪಡಿಸುವುದು ನಿತ್ಯ ನೋಡುತ್ತಲೇ ಇದ್ದೇವೆ. ವಾಸ್ತವದಲ್ಲಿ ಯುವತಿ ಮಾತ್ರವಲ್ಲ, ಬಹಳಷ್ಟು ಭಾರತೀಯ ಕುಟುಂಬಗಳಲ್ಲಿ ಯುವಕರೂ ಕುಟುಂಬದ ಒತ್ತಡಕ್ಕೆ ಕಟ್ಟುಬಿದ್ದು ತಮ್ಮ ಪ್ರೀತಿಯನ್ನು ತ್ಯಾಗ ಮಾಡುವುದು ನಡೆಯುತ್ತದೆ.

ಕೇರಳದಲ್ಲಿ ಹಾದಿಯಾ ಎನ್ನುವ ಯುವತಿ ಅನ್ಯಜಾತಿಯ ವಿವಾಹವಾಗಿದ್ದಕ್ಕಾಗಿ ಹೆತ್ತವರೇ ಆ ವಿವಾಹವನ್ನು ಮುರಿಯಲು ಪ್ರಯತ್ನಿಸಿ ನ್ಯಾಯಾಲಯದ ಮೆಟ್ಟಿಲು ಹತ್ತಿರುವುದು ಇತ್ತೀಚೆಗೆ ನಾವು ನೋಡಿರುವ ಅತೀ ಜನಪ್ರಿಯ ಪ್ರಕರಣ. ಇದನ್ನು ಹೊರತುಪಡಿಸಿ ದೇಶದಲ್ಲಿ ಮದುವೆ ವಿಚಾರವಾದ ಮರ್ಯಾದೆಗೇಡು ಹತ್ಯೆಗಳು ಆಗಾಗ್ಗೆ ದಾಖಲಾಗುತ್ತಲೇ ಇರುತ್ತದೆ. ಬುಧವಾರದಂದು ಸುಪ್ರೀಂ ಕೋರ್ಟ್ ಮುಂದೆ ಬಂದಿರುವ ಅಂತಹುದೇ ಆದರೆ ಸ್ವಲ್ಪ ವಿಭಿನ್ನ ಪ್ರಕರಣ ಹೆಚ್ಚು ಸುದ್ದಿಯಾಗದೇ ಹೋಗಿದೆ. ಇಲ್ಲೂ ಯುವತಿ ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಳು. ಹೆತ್ತವರು ಆ ಪ್ರೀತಿಗೆ ವಿರೋಧಿಸಿದ್ದಾರೆ. ಆದರೆ ಯುವತಿ ಹೆತ್ತವರ ಒತ್ತಡದಿಂದ ಆಗಿರುವ ಮದುವೆಯನ್ನು ನಿರಾಕರಿಸಿ ನ್ಯಾಯಾಲಯದಲ್ಲಿ ರಕ್ಷಣೆಯನ್ನು ಬಯಸಿದ್ದಾಳೆ.

ಎರಡು ರಾಷ್ಟ್ರೀಯ ಪಕ್ಷಗಳ ರಾಜಕಾರಣಿಗಳು ಜೊತೆಗೂಡಿ ಮರ್ಯಾದೆಯ ಹೆಸರಿನಲ್ಲಿ ಯುವತಿಯೊಬ್ಬಳ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿರುವ ಪ್ರಕರಣ ಈಗ ನ್ಯಾಯಾಲಯದ ಮೆಟ್ಟಿಲೇರಿದೆ. ಗುಲ್ಬರ್ಗಾದ ರಾಜಕಾರಣಿಯ ಮಗಳೊಬ್ಬಳು ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಾಳೆ. ಆದರೆ ಈ ಪ್ರೀತಿಗೆ ಹೆತ್ತವರ ವಿರೋಧ ವ್ಯಕ್ತವಾಗುತ್ತದೆ. ಮನೆತನದ ಗೌರವದ ಹೆಸರಲ್ಲಿ ಯುವತಿಯನ್ನು ತಮ್ಮಿಚ್ಛೆಯಂತೆ ಮದುವೆಯಾಗುವಂತೆ ಒತ್ತಡ ಹೇರಲಾಗುತ್ತದೆ. ಮತ್ತೊಂದು ಪಕ್ಷದ ರಾಜಕೀಯ ಮನೆತನದ ಜೊತೆಗೆ ಯುವತಿಯ ಮದುವೆಯನ್ನು ಹೆತ್ತವರು ನಿಶ್ಚಯಿಸಿಯೂಬಿಡುತ್ತಾರೆ. ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿರುವ ಆ ಯುವತಿಗೆ ಈ ಮದುವೆ ಇಷ್ಟವಾಗುವುದಿಲ್ಲ. ಆದರೆ, ಇಬ್ಬರು ರಾಜಕಾರಣಿಗಳು ಸಂಬಂಧಿಗಳಾಗುವ ಪ್ರಯತ್ನದಲ್ಲಿ ಪ್ರಭಾವಿ ಮನೆತನಗಳು ಮದುವೆ ನಿಶ್ಚಿಯಿಸಿರುವಾಗ ಅದರಿಂದ ತಪ್ಪಿಸಿಕೊಂಡು ಯಾರ ನೆರವನ್ನು ಕೇಳುವುದು ಎನ್ನುವುದೇ ಯುವತಿಗೆ ತಿಳಿಯುವುದಿಲ್ಲ. “ತಮ್ಮ ಇಚ್ಛೆಗೆ ಒಪ್ಪದಿದ್ದರೆ ವಿಷ ಸೇವಿಸುವ ಒತ್ತಡವನ್ನೂ ಅವಳ ಹೆತ್ತವರು ಹೇರಿದ್ದರು. ಅಲ್ಲದೆ, ತಾನು ಮತ್ತು ಪ್ರೀತಿಸುವ ಯುವಕನೇ ಮರ್ಯಾದೆ ಹತ್ಯೆಯಾಗುವ ಸಾಧ್ಯತೆಯಿದೆ ಎಂದೂ ಆಕೆಗೆ ಭಯವಾಗಿತ್ತು,” ಎಂದು ಹೆಸರು ಹೇಳಲಿಚ್ಛಿಸದ ಗುಲ್ಬರ್ಗಾ ಮೂಲದ ವ್ಯಕ್ತಿಯೊಬ್ಬರು ವಿವರ ನೀಡುತ್ತಾರೆ.

ಅಂತಿಮವಾಗಿ ಯುವತಿಯ ವಿರೋಧದ ನಡುವೆಯೇ ಬಲವಂತದ ಮದುವೆ ನಡೆದು ಹೋಗುತ್ತದೆ. ಆದರೆ ಮದುವೆಯನ್ನು ಒಪ್ಪಿಕೊಳ್ಳಲೂ ಯುವತಿ ಸಿದ್ಧವಿಲ್ಲ. ತಾನು ಪ್ರೀತಿಸುವ ಅನ್ಯಜಾತಿಯ ಯುವಕನ ಜೊತೆಯೇ ಸಂಸಾರ ನಡೆಸುವ ಬಯಕೆಯಲ್ಲಿ ಮದುವೆಯ ನಂತರ ಆಕೆ ದೆಹಲಿಗೆ ಹೋಗಿ ಮಾನವ ಹಕ್ಕು ಆಯೋಗದ ಮುಂದೆ ತನ್ನ ಅಳಲನ್ನು ತೋಡಿಕೊಳ್ಳುತ್ತಾಳೆ. ನಂತರ ಆಕೆಯ ಪ್ರಕರಣವನ್ನು ಸುಪ್ರೀಂ ಕೋರ್ಟ್ ನ್ಯಾಯವಾದಿ ಇಂದಿರಾ ಜೈಸಿಂಗ್ ತೆಗೆದುಕೊಳ್ಳುತ್ತಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರ ಯುವತಿಯ ಪ್ರಕರಣ ವಿಚಾರಣೆ ನಡೆದಿದೆ. ಯುವತಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ, “ಮರ್ಯಾದೆಗೇಡು ಹತ್ಯೆ ನಡೆಯಬಹುದೆಂದು ಬೆದರಿ ತಾನು ಮದುವೆಯಾಗಿದ್ದೇನೆ. ಈ ಮದುವೆಯನ್ನು ಅಸಿಂದು ಎಂದು ಘೋಷಿಸಬೇಕು. ಮದುವೆಗೆ ಗಂಡು ಅಥವಾ ಹೆಣ್ಣಿನ ಸಮ್ಮತಿ ಅಗತ್ಯವಿಲ್ಲ ಎಂದು ಹೇಳುವ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ ೫ ಮತ್ತು ೭ನ್ನು ರದ್ದು ಮಾಡಬೇಕು,” ಎಂದು ಕೋರಿಕೊಂಡಿದ್ದರು. ಆದರೆ ಹಿಂದೂ ವಿವಾಹ ಕಾಯ್ದೆಯಲ್ಲಿ ಮದುವೆಯ ಸಂದರ್ಭದಲ್ಲಿ ಹೆಣ್ಣು ಮತ್ತು ಗಂಡಿನ ಸಮ್ಮತಿ ವಿಚಾರವಾಗಿ ಆಳವಾಗಿ ಚರ್ಚಿಸಲು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಡಿ ವೈ ಚಂದ್ರಚೂಡ್ ಅವರ ನೇತೃತ್ವದ ಪೀಠವು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಯುವತಿಯ ಪರ ನ್ಯಾಯವಾದಿ ಇಂದಿರಾ ಜೈಸಿಂಗ್ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾದೀಶರ ನಡುವೆ ವಾದ ವಿವಾದಗಳು ನಡೆದಿವೆ. “ವಾಸ್ತವದಲ್ಲಿ ಈ ಮದುವೆ ಒಪ್ಪಿಗೆ ಇಲ್ಲದೆ ನಡೆದಿದೆ. ಮದುವೆಗೆ ಮೊದಲು ಯುವಕ-ಯುವತಿಯ ಒಪ್ಪಿಗೆ ಅಗತ್ಯ ಎನ್ನುವ ಬಗ್ಗೆ ಸೂಕ್ತ ನಿಬಂಧನೆಗಳು ಹಿಂದೂ ವಿವಾಹ ಕಾಯ್ದೆಯಲ್ಲಿ ಇಲ್ಲ,” ಎನ್ನುವ ಜೈಸಿಂಗ್ ಅವರ ವಾದಕ್ಕೆ ಉತ್ತರವಾಗಿ ನ್ಯಾಯಮೂರ್ತಿ ಚಂದ್ರಚೂಡ್ ಅವರು, “ಒಪ್ಪಿಗೆಯನ್ನು ವಂಚನೆಯಿಂದ ಪಡೆದುಕೊಂಡಿದ್ದಲ್ಲಿ ಮದುವೆಯು ರದ್ದಾಗಲಿದೆ ಎನ್ನುವ ನಿಬಂಧನೆಯಿದೆ. ಮದುವೆಗೆ ಮೊದಲು ಒಪ್ಪಿಗೆ ಅಗತ್ಯ ಎನ್ನುವುದನ್ನು ಇದು ಖಚಿತವಾಗಿ ತೋರಿಸುತ್ತದೆ,” ಎಂದು ಹೇಳಿದ್ದಾರೆ. “ಆದರೆ ಒಪ್ಪಿಗೆ ಇಲ್ಲದ ಮದುವೆ ಅಧಿಕೃತವಲ್ಲ ಎಂದು ಘೋಷಿಸುವ ನಿಬಂಧನೆಯ ಅಗತ್ಯವಿದೆ. ಭಾರತೀಯ ಹಿಂದೂ ವಿವಾಹಗಳಲ್ಲಿ ಹಲವು ರೀತಿಯ ಸಮಾರಂಭಗಳು ಇರುವ ಕಾರಣ ಒಪ್ಪಿಗೆಯನ್ನು ಸೂಕ್ತ ರೀತಿಯಲ್ಲಿ ವಿವರಿಸುವ ನಿಬಂಧನೆಗಳು ಕಾಯ್ದೆಯಲ್ಲಿಲ್ಲ,” ಎಂದು ಇಂದಿರಾ ಜೈಸಿಂಗ್ ಹೇಳಿದ್ದಾರೆ. ಆದರೆ, ನ್ಯಾಯಾಲಯವು ಈ ವಿಚಾರವಾಗಿ ರಚನಾತ್ಮಕವಾಗಿ ಚರ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಪ್ರಕರಣ ಮೇ ೫ರಂದು ಮತ್ತೆ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿದೆ.

ಇದನ್ನೂ ಓದಿ : ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಕೇರಳದ ಹಾದಿಯಾ-ಶಫೀನ್ ಜೋಡಿ ಹೇಳಿದ್ದೇನು?

ವಿವಾಹ ಕಾಯ್ದೆಯ ವಿಶ್ಲೇಷಣೆಗೆ ನಿರಾಕರಿಸಿದರೂ, ಒಲ್ಲದ ಮದುವೆಯಿಂದ ರಕ್ಷಣೆ ಬೇಕೆಂದು ಕೇಳಿದ ಯುವತಿಗೆ ರಕ್ಷಣೆ ಒದಗಿಸುವ ಜವಾಬ್ದಾರಿಯನ್ನು ನ್ಯಾಯಾಲಯ ಹೊತ್ತಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿರುವ ಸುಪ್ರೀಂಕೋರ್ಟ್ ಯುವತಿಗೆ ಸೂಕ್ತ ರಕ್ಷಣೆ ನೀಡುವಂತೆ ಹೇಳಿದೆ. ಯುವತಿ ನಿಜವಾಗಿಯೂ ಬಲವಂತದ ಮದುವೆಯಾಗಿದ್ದಲ್ಲಿ ಹಿಂದೂ ವಿವಾಹ ಕಾಯ್ದೆಯ ೧೨ ಸಿ ಸೆಕ್ಷನ್‌ನಲ್ಲಿ ಮದುವೆ ರದ್ದು ಮಾಡುವ ಅವಕಾಶವಿದೆ ಎಂದು ನ್ಯಾಯಾಲಯ ಹೇಳಿದೆ.

ಗುಲ್ಬರ್ಗಾದ ಯುವತಿ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು, ತಮ್ಮ ಹೆತ್ತವರ ಒತ್ತಡವನ್ನು ಮೀರಿ ನೆರವು ಪಡೆದುಕೊಳ್ಳುವ ದಾರಿಯನ್ನು ಕಂಡುಕೊಂಡಿದ್ದಾರೆ. ಆದರೆ, ದೇಶದ ಬಹಳಷ್ಟು ಯುವಕ-ಯುವತಿಯರು ತಮ್ಮ ಹೆತ್ತವರ ಒತ್ತಡಕ್ಕೆ ತಲೆಬಾಗಿ ಮದುವೆಯ ಹೊಂದಾಣಿಕೆಯಲ್ಲಿ ಜೀವನವಿಡೀ ಕಳೆದುಕೊಂಡು ಬಿಡುತ್ತಾರೆ. ಭಾರತದ ಪರಂಪರೆ, ಕೂಡು ಕುಟುಂಬಗಳ ಸಾಂಪ್ರದಾಯಿಕ ವ್ಯವಸ್ಥೆಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವ ರಾಷ್ಟ್ರವಾದಿಗಳು ನಿರ್ಧಾರ ಸ್ವಾತಂತ್ರ್ಯ, ವ್ಯಕ್ತಿಗತ ಇಚ್ಛೆಗಳು, ಜೀವನದ ಹಕ್ಕು ಮೊದಲಾದ ಪದಗಳನ್ನೂ ಗೌರವಿಸುವುದನ್ನು ಕಲಿಯಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಆ ದಿನ ಬರುವುದು ಕನಸೆಂದೇ ಹೇಳಬಹುದು.

ಚಿತ್ರ: ಸುಪ್ರೀಂ ಕೋರ್ಟ್ ನ್ಯಾಯವಾದಿ ಇಂದಿರಾ ಜೈಸಿಂಗ್

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More