ನುಡಿನಮನ | ರೈತರ ಪರವಾಗಿಯೂ ದನಿ ಎತ್ತಿದ್ದರು ಭೀಮರಾವ್‌ ಅಂಬೇಡ್ಕರ್‌

ರೈತರ ಶೋಷಣೆಯ ಅಸ್ತ್ರವಾಗಿದ್ದ ಜಮೀನ್ದಾರಿ ಪಳೆಯುಳಿಕೆಯ ‘ಖೋತಿ’  ಕಂದಾಯ ವ್ಯವಸ್ಥೆ ವಿರುದ್ಧ ಅಂಬೇಡ್ಕರ್‌ ನಡೆಸಿದ ಹೋರಾಟವನ್ನು ಚಂದ್ರಕಾಂತ ಅಧಿಕಾರಿ ಅವರು ‘ಖೋತಿ ವಿರುದ್ಧದ ಹೋರಾಟ’ ಕೃತಿಯಲ್ಲಿ ದಾಖಲಿಸಿದ್ದಾರೆ. ಈ ಕೃತಿಯನ್ನು ಎನ್‌ ಗಾಯತ್ರಿ ಕನ್ನಡಕ್ಕೆ ತಂದಿದ್ದಾರೆ. ಈ ಕೃತಿಗೆ ಸಿದ್ದನಗೌಡ ಪಾಟೀಲರು ಬರೆದ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ

ಭಾರತ ಇತಿಹಾಸದಲ್ಲಿ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ಸಂದರ್ಭದಲ್ಲಿಯೇ ಊಳಿಗಮಾನ್ಯ ವ್ಯವಸ್ಥೆಯ ವಿರೋಧಿ ಹೋರಾಟಗಳೂ ತೀವ್ರವಾಗಿದ್ದವು. ಊಳಿಗಮಾನ್ಯ ವ್ಯವಸ್ಥೆಯಲ್ಲಿ ಪ್ರಭುತ್ವಗಳು ಬದಲಾದರೂ ಜಮೀನ್ದಾರಿ ವ್ಯವಸ್ಥೆ ಬದಲಾಗುತ್ತಿರಲಿಲ್ಲ. ಬ್ರಿಟಿಷರಿಗಿಂತ ಮುಂಚೆಯೂ ಭಾರತದ ಆಡಳಿತ ವರ್ಗ ಜಮೀನ್ದಾರರಾದ ದೇಸಾಯಿ, ದೇಶಪಾಂಡೆ, ಜಹಾಗಿರ್‌ದಾರ್, ಜಮಾದಾರ, ದೇಶಮುಖ, ಪೊಲೀಸ್ ಪಾಟೀಲ, ಖೋತ್ ಹೀಗೆ ಹಲವಾರು ಹೆಸರುಗಳಲ್ಲಿರುವ ಇವರ ಮೂಲಕವೇ ತನ್ನ ಆಡಳಿತವನ್ನು ನಡೆಸುತ್ತಿತ್ತು. ಬ್ರಿಟಿಷರು ಬಂದ ಮೇಲೆಯೂ ಇದೇ ವ್ಯವಸ್ಥೆಯನ್ನು ತಳಪಾಯದಲ್ಲಿಟ್ಟುಕೊಂಡು ತಮ್ಮ ಸಾಮ್ರಾಜ್ಯವನ್ನು ಕಟ್ಟಿದರು.

ಕೃಷಿ ಮತ್ತು ಕೃಷಿ ಆದಾಯವೇ ಪ್ರಧಾನವಾಗಿದ್ದ ಆ ಕಾಲದಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಈ ಜಮೀನ್ದಾರರೇ ಪ್ರಭುಗಳು. ಇಡೀ ದೇಶದ ಗ್ರಾಮೀಣ ವ್ಯವಸ್ಥೆಯನ್ನು ತಮ್ಮ ಸುಲಿಗೆಗೆ ಬಳಸಿಕೊಂಡು, ಪ್ರತಿರೋಧಗಳನ್ನು ನಿರ್ದಯವಾಗಿ ಸದೆಬಡೆಯುತ್ತಿದ್ದ ಈ ಸ್ಥಳೀಯ ಆಡಳಿತಗಾರರನ್ನು ಯಾವ ರಾಜರೂ, ಬ್ರಿಟಿಷರೂ ಪ್ರಶ್ನಿಸುತ್ತಿರಲಿಲ್ಲ. ಇಂಥ ವ್ಯವಸ್ಥೆಯ ವಿರುದ್ಧ ರೈತರು, ಗೇಣಿದಾರರು, ಕೃಷಿಕೂಲಿಕಾರರು ಬಂಡೆದ್ದ ಹಲವಾರು ಉದಾಹರಣೆಗಳಿವೆ. ತೆಲಂಗಾಣ, ಕಯ್ಯೂರು, ತೇಭಾಗ, ಕಾಗೋಡು ಇಂತಹ ಹಲವಾರು ರೈತ ಹೋರಾಟಗಳು ದಾಖಲಾಗಿವೆ. ಇಂಥದೇ ಸುದೀರ್ಘವಾದ, ರಚನಾತ್ಮಕವಾದ, ಸಂಘಟಿತವಾದ ಗೇಣಿದಾರರ ಹೋರಾಟವೆಂದರೆ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ನಡೆದ ‘ಖೋತಿ' ವ್ಯವಸ್ಥೆ ವಿರೋಧಿ ಹೋರಾಟ.

ಪೇಶ್ವೆಗಳ ದುರಾಡಳಿತದಲ್ಲಿ 'ಖೋತಿ’ ಕಂದಾಯ ವ್ಯವಸ್ಥೆಯ ಯಜಮಾನರಾದ 'ಖೋತ್’ಗಳ ಮಿತಿಮೀರಿದ ಸುಲಿಗೆಯಿಂದ ಬದುಕನ್ನೇ ಕಳೆದುಕೊಂಡಿದ್ದ ರೈತರು, ಬ್ರಿಟಿಷರು ಬಂದ ಮೇಲೂ 'ಖೋತ್’ಗಳಿಂದ ಅದೇ ರೀತಿಯ ದಮನಕ್ಕೆ ಬಲಿಯಾಗಿದ್ದರು. ಇಂಥ ಕ್ರೂರ ಪದ್ಧತಿಯ ವಿರುದ್ಧ ಧ್ವನಿ ಎತ್ತಿದವರು ಮತ್ತು ಅದು ನಿರ್ನಾಮವಾಗುವವರೆಗೂ ಹೋರಾಡಿದವರು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸಂಗಾತಿಗಳು. 1929ರಿಂದ 1948ರವರೆಗೆ ನಿರಂತರವಾಗಿ ನಡೆದ ಈ ಹೋರಾಟ ಹೆಚ್ಚು ಪ್ರಚಾರ ಪಡೆದುಕೊಂಡಿಲ್ಲ.

ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆ ಮತ್ತು ಹೋರಾಟಗಳನ್ನು ಎರಡು ಆಯಾಮಗಳಲ್ಲಿ ನೋಡಬೇಕಿದೆ. ಸ್ವಾಭಿಮಾನ ಮತ್ತು ಸ್ವಾವಲಂಬನೆ, ಇವೇ ಆ ಎರಡು ಆಯಾಮಗಳು. ಅಂಬೇಡ್ಕರ್ ಅವರು ಅಸ್ಪೃಶ್ಯರ ಸ್ವಾಭಿಮಾನಕ್ಕಾಗಿ ನಡೆಸಿದ ಹೋರಾಟಗಳೇ ಹೆಚ್ಚು ಪ್ರಚಾರ ಪಡೆದುಕೊಂಡು, ಸ್ವಾವಲಂಬನೆಗಾಗಿ ಅವರು ನಡೆಸಿದ್ದ ಹೋರಾಟಗಳು, ಚಿಂತನೆಗಳು ಗೌಣವಾಗಿ ಉಳಿದಿವೆ. ಆ ಕಾರಣಕ್ಕೇ ಅಂಬೇಡ್ಕರ್ ಅವರನ್ನು ಇಂದು ಕೇವಲ ದಲಿತನಾಯಕರನ್ನಾಗಿ ನೋಡಲಾಗುತ್ತಿದೆ. ಮಹಾರಾಷ್ಟ್ರದ 'ಖೋತಿ' ವ್ಯವಸ್ಥೆಯ ವಿರೋಧಿ ಹೋರಾಟವನ್ನು ಗಮನಿಸಿದರೆ ಅಂಬೇಡ್ಕರ್ ಎಂಥ ರೈತ ಹೋರಾಟಗಾರ ಆಗಿದ್ದರು ಎಂಬುದು ಗೋಚರವಾಗುತ್ತದೆ. ಮಹಾರ್, ಮರಾಠ, ಕುಣಬಿ, ಮುಸ್ಲಿಂ ಹೀಗೆ ಎಲ್ಲ ಜಾತಿ, ಧರ್ಮಗಳ ಗೇಣಿದಾರರನ್ನು, ರೈತರನ್ನು ಒಗ್ಗೂಡಿಸಿ ನಡೆಸಿದ ಹೋರಾಟ, ಖೋತಿ ವ್ಯವಸ್ಥೆಯ ರದ್ದತಿಗಾಗಿ ಮುಂಬೈ ಪ್ರಾಂತೀಯ ಸರಕಾರದಲ್ಲಿ ಅವರು ಮಂಡಿಸಿದ ಮಸೂದೆ, ಜಾತಿ-ಧರ್ಮಗಳನ್ನು ಮೀರಿ ಬೆಳೆಸಿದ ನಾಯಕತ್ವ, ಎಲ್ಲವೂ ಅವರೊಳಗಿನ ರೈತರ ಕುರಿತ ಕಾಳಜಿ, ಕಳಕಳಿ ಮತ್ತು ಮುನ್ನೋಟಗಳನ್ನು ಸಾಬೀತುಗೊಳಿಸುತ್ತವೆ.

ಅಮಾನುಷ ಖೋತಿ ವ್ಯವಸ್ಥೆಯ ಕುರಿತು ಕಾಂಗ್ರೆಸ್ ಧ್ವನಿ ಎತ್ತದೆ ಇರುವಾಗ ಹೋರಾಟದ ನಾಯಕತ್ವ ವಹಿಸಿದ್ದ ಅಂಬೇಡ್ಕರ್ ಅವರು, "ಗಾಂಧೀಜಿಯವರ ದೃಷ್ಟಿಯಲ್ಲಿ ಭೂಮಿಯ ಕೃಷಿ ಮಾಡಲು ನೊಗಕ್ಕೆ ಕಟ್ಟುವ ಎರಡು ಎತ್ತುಗಳ ಜೊತೆ ರೈತನು ಮೂರನೆಯ ಎತ್ತು ಮಾತ್ರ. ಆದರೆ, ನನ್ನ ಧ್ಯೇಯವೇ ಸಂಪೂರ್ಣ ಭಿನ್ನ. ರೈತನನ್ನು ತಳ್ಳಲ್ಪಟ್ಟ ಅಸಹನೀಯ ಸಂಕಟವನ್ನು ನಿವಾರಿಸಲು ಮತ್ತು ಅವನ ಒಳಿತಿಗಾಗಿ ಹೋರಾಡಲು ನಾನು ಸಂಪೂರ್ಣ ಬದ್ಧನಾಗಿದ್ದೇನೆ,’’ ಎಂದು ಹೇಳುತ್ತಾರೆ. ತಮ್ಮ ಎಲ್ಲ ಕೆಲಸದ ಮಧ್ಯೆಯೂ ಈ ರೈತರ ಬಿಡುಗಡೆಗಾಗಿ ನಡೆಸಿದ ಹೋರಾಟದಲ್ಲಿ ಕೊನೆಯವರೆಗೂ ತೊಡಗಿಸಿಕೊಳ್ಳುತ್ತಾರೆ.

ಇದನ್ನೂ ಓದಿ : ನುಡಿನಮನ | ತನ್ನದೇ ಆದ ನಾಯಕರಿಂದ ಮಿಂಚುತ್ತಿದೆ ದಕ್ಷಿಣದ ಶೋಷಿತ ಸಮುದಾಯ

‘ಖೋತಿ’ ವ್ಯವಸ್ಥೆಯ ವಿರೋಧಿ ಹೋರಾಟ ಕೇವಲ ರೈತ ಹೋರಾಟ ಮಾತ್ರವಲ್ಲ. ಪರಿಣಾಮದಲ್ಲಿ ಅದು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಹೋರಾಟವೂ ಆಗಿದೆ. ಬ್ರಿಟಿಷ್‌ ಸರಕಾರವನ್ನೂ, ಸ್ಥಳೀಯ ಆಡಳಿತಗಾರರು ಮತ್ತು ಗ್ರಾಮಗಳನ್ನೂ ತಮ್ಮ ಕಪಿಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡ ಖೋತ್‍ಗಳನ್ನು ಎದುರಿಸಿ ಗೇಣಿದಾರರನ್ನು ಒಗ್ಗೂಡಿಸಿ ಹೋರಾಡುವುದು ಸಾಮಾನ್ಯ ಕೆಲಸವಲ್ಲ.

ಶನಿವಾರ (ಏ.14) ಸಂಜೆ ೫ ಗಂಟೆಗೆ ಬೆಂಗಳೂರು ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರ ಸಭಾಂಗಣದಲ್ಲಿ 'ಖೋತಿ ವಿರುದ್ಧದ ಹೋರಾಟ' ಕೃತಿ ಲೋಕಾಪರ್ಣೆಯಾಗಲಿದೆ. ಈ ಪುಸ್ತಕವನ್ನು ನವಕರ್ನಾಟಕ ಪ್ರಕಾಶನ ಪ್ರಕಟಸಿದೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More