ನುಡಿನಮನ | ಅಂಬೇಡ್ಕರ್ ಚಿಂತನೆಗಳು ದಲಿತರನ್ನು ಪ್ರತಿನಿಧಿಸುವ ದನಿಯಷ್ಟೇ ಅಲ್ಲ

ಭಾವನಾತ್ಮಕ ನೆಲೆಗಟ್ಟಿನಲ್ಲಿ ದಲಿತರೆಲ್ಲರೂ ಅಂಬೇಡ್ಕರ್‌ ಅವರನ್ನು ದೈವತ್ವಕ್ಕೆ ಹೊತ್ತೊಯ್ದು ನಿಲ್ಲಿಸಿರುವುದು ಕಾಣುತ್ತಿದೆ. ಇದರಿಂದಾಗಿ ಸಹಜವಾಗೇ ದಲಿತ ಸಮೂಹದ ಒಳಗೆ ಅಂಬೇಡ್ಕರ್ ಕುರಿತು ಭಕ್ತಿ ಹೆಚ್ಚುತ್ತಿರುವುದು ಎಷ್ಟು ನಿಜವೋ, ದಲಿತೇತರರ ನಡುವೆ ಅವರ ಚಿಂತನೆಗಳು ವಿಸ್ತಾರಗೊಳ್ಳದಿರುವುದೂ ಅಷ್ಟೇ ನಿಜ

ಪ್ರತಿವರ್ಷವೂ ಏಪ್ರಿಲ್ 14ನ್ನು ಶೋಷಿತ ಸಮುದಾಯಗಳು ಗೌರವಾದರಗಳಿಂದ ಬರಮಾಡಿಕೊಳ್ಳುತ್ತವೆ. ಈ ಸಡಗರ ಸಂಭ್ರಮ ದಲ್ಲಿ ಒಂದಷ್ಟು ಅವರ ಬದುಕಿನ ರೀತಿ-ನೀತಿಗಳನ್ನು, ಸಾಧನೆಗಳನ್ನು ಕೊಂಡಾಡಿ ಸುಖಿಸುತ್ತವೆ. ಆಗ ಇದೇ ವೇಳೆ ಅಂಬೇಡ್ಕರ್ ಹುಟ್ಟಿ ಬಂದ ಸಮುದಾಯದ ಕಷ್ಟ ಕೋಟಲೆಗಳು, ಅವಮಾನಗಳೂ ಕಿಂಚಿತ್ತಾದರೂ ಕಮ್ಮಿ ಆಗಿರುವುದೇ? ತಲೆ ಎತ್ತಿ ನಡೆಯಬೇಕಾದಷ್ಟು ಎತ್ತರದಲ್ಲಿ ಸ್ವಾಭಿಮಾನಿಗಳಾಗಿ ನಡೆದುಕೊಳ್ಳಲು ಈ ವ್ಯವಸ್ಥೆ ಬಿಟ್ಟುಕೊಡುತ್ತಿದೆಯೆ? ಒಬ್ಬ ಪ್ರಜ್ಞಾವಂತ ದಲಿತ ಅಂಬೇಡ್ಕರ್ ವಿಚಾರಧಾರೆಗಳಿಂದ ತಾನು ಬದಲಾಗಿ, ತನ್ನ ನೆರೆಯನ್ನು ಬದಲಾಯಿಸಲು ಎಷ್ಟು ಶ್ರಮಿಸಿದ್ದಾನೆ ಎಂದು ಕೇಳಿ ಕೊಳ್ಳುವಂತಾಗುತ್ತದೆ. ಇಂಥ ಆತ್ಮ ವಿಮರ್ಶೆಯ ಕಾಲ ಘಟ್ಟದಲ್ಲಿ ಇಂದು ನಾವಿದ್ದೇವೆಯಾದ್ದರಿಂದ ಈ ಪ್ರಶ್ನೆ ನನಗೆ ಮುಖ್ಯವಾಗಿ ಕಾಡುತ್ತಿದೆ.

ಅಂಬೇಡ್ಕರ್ ನೀಡಿದ ಸಾಂವಿಧಾನಿಕ ಅವಕಾಶಗಳ ಬೆಳಕಲ್ಲಿ ಅವಕಾಶಗಳನ್ನು ಎಟುಕಿಸಿಕೊಳ್ಳುವಷ್ಟು ದಲಿತರು ಶಕ್ತರಾಗುತ್ತಿರುವಂತೆ ತೋರುತ್ತಿದೆ. ಇದೊಂದು ಕಡೆ. ಇನ್ನೊಂದು ಕಡೆ, ಸಂವಿಧಾನದಲ್ಲಿ ಅವಕಾಶ ಸೃಷ್ಟಿಸಿದ್ದರಿಂದ ರಾಜಕೀಯ ಅಧಿಕಾರವನ್ನು ಚುನಾವಣಾ ಪ್ರಕ್ರಿಯೆಯ ಮೂಲಕ ಪಡೆಯುತ್ತಾ ಬರಲಾಗಿದೆ.

ಈ ಎಲ್ಲಾ ಏಳಿಗೆಯ ಭಾಗದಲ್ಲಿ ಅಂಬೇಡ್ಕರ್‌ ಅವರ ಕೊಡುಗೆಯೂ ಅಡಗಿದೆ ಎಂಬುದು ನಿಸ್ಸಂಶಯ. ಈ ಏಳಿಗೆಯ ಭಾಗದಲ್ಲಿ ಹೆಚ್ಚಾಗಿ ಬೆಳಕು ಕಂಡವರು ದಲಿತರಾದರೂ ಇವರು ತಮ್ಮ ಏಳಿಗೆಗಾಗಿ ದುಡಿದ ಅಂಬೇಡ್ಕರ್‍ರ ಬಗ್ಗೆ ಪೂರ್ಣವಾದ ಅರಿವು ಹೊಂದಿ, ಅವರನ್ನು ಅವರ ವ್ಯಕ್ತಿತ್ವ ಮತ್ತು ಸಿದ್ಧಾಂತವನ್ನು ತನಗೂ ತನ್ನ ಸಮುದಾಯದ ಏಳಿಗೆಗೂ, ನೆರೆಹೊರೆಯವರ ವಿಚಾರ ಪ್ರಜ್ಞೆಗೂ ವಿಸ್ತರಿಸಿರುವರೆ ಎಂಬುದು ಸದಾ ಕಾಡುವ ಪ್ರಶ್ನೆ. ಆದರೆ ಭಾವನಾತ್ಮಕ ನೆಲೆಗಟ್ಟಿನಲ್ಲಿ ದಲಿತರೆಲ್ಲರೂ ಅಂಬೇಡ್ಕರ್‌ ಅವರನ್ನು ಗ್ರಹಿಸಿಕೊಂಡು ಅವರನ್ನು ದೈವತ್ವಕ್ಕೆ ಹೊತ್ತೊಯ್ದು ನಿಲ್ಲಿಸಿರುವುದು ಮಾತ್ರ ಹೆಚ್ಚು ಹೆಚ್ಚು ಕಾಣುತ್ತಿದೆ. ಅವೇ ಹೆಚ್ಚಾಗುತ್ತಲೂ ಇವೆ. ಇದರಿಂದಾಗಿ ಸಹಜವಾಗೇ ದಲಿತ ಸಮೂಹದ ಒಳಗೆ ಅಂಬೇಡ್ಕರ್‍ರ ಕುರಿತು ಭಕ್ತಿ, ಭಾವಗಳ ಹೆಚ್ಚಳವಾಗುತ್ತಿರುವುದು ಎಷ್ಟು ನಿಜವೋ, ದಲಿತೇತರ ನಡುವೆ ಅವರ ಚಿಂತನೆಗಳು ವಿಸ್ತಾರಗೊಳ್ಳದಿರುವುದು ಅಷ್ಟೇ ನಿಜ.

ಅದೇನೆ ಇರಲಿ ಅಂಬೇಡ್ಕರ್‌ ಅವರಿಂದ ದಲಿತ ಸಮೂಹದಲ್ಲಿ ಒಂದು ಬಗೆಯ ಗೌರವ-ಘನತೆಯ ಬದುಕಂತೂ ತೆರೆಯಿತು. ಇದರಿಂದಾಗಿಯೇ ಅಂಬೇಡ್ಕರ್ ಎಂಬುದು ಶೋಷಿತ ಜನಾಂಗದ ಒಂದು ದಿಟ್ಟ ‘ವಾಯ್ಸ್’ ಎನಿಸಿಕೊಂಡಿತು. ಈ ವಾಯ್ಸ್ ದಲಿತರಲ್ಲಿ ಮೂಡಿಸಿದ ಪರಿಣಾಮ ಮತ್ತು ದಲಿತೇತರ ಸಮೂಹದಲ್ಲಿ ಮಾಡಿದ ಪರಿಣಾಮವನ್ನು ಖಚಿತವಾಗಿ ಕಂಡುಕೊಳ್ಳಬೇಕಾಗಿದೆ. ಈ ಪರಿಣಾಮವನ್ನು ಯುವ ಜನತೆ ತಮ್ಮ ವರ್ತಮಾನದಲ್ಲಿ ಬಹಳಮುಖ್ಯವಾಗಿ ಗಮನಿಸಬೇಕಾಗಿದೆ. ಇಂದಿನ ವರ್ತಮಾನಕ್ಕೆ ಜಾಗತೀಕರಣ ಒಡ್ಡುತ್ತಿರುವ ಸವಾಲುಗಳಲ್ಲಿ ಈ ವಾಯ್ಸನ್ನು ಅರ್ಥಪೂರ್ಣವಾಗಿ ಬಳಸಿಕೊಂಡು, ನಿಭಾಯಿಸಿಕೊಳ್ಳಬೇಕಾದ ಸಂದರ್ಭದಲ್ಲಿ ಇಂದು ನಾವಿದ್ದೇವೆ.

ಅಂಬೇಡ್ಕರ್‌ ವಾಯ್ಸ್‌ಗೆ ಇರುವ ಸುಧೀರ್ಘ ಚರಿತ್ರೆಯೇ ಶೋಷಿತ ಸಮುದಾಯದ ಚರಿತ್ರೆಯಾಗುತ್ತದೆ. ಈ ಚರಿತ್ರೆ ಒಂದು ನೋವಿನ ಚರಿತ್ರೆಯಾಗಿ ತೋರುತ್ತದೆ. ಈ ನೋವಿನ ಚರಿತ್ರೆ ಬೆಂಕಿಯಾಗುತ್ತದೆ. ಈ ಬೆಂಕಿಯೋ ನೊಂದವರಿಗೆ ಬೆಳಕಾಗಿರುತ್ತದೆ. ಬಿಡುಗಡೆಗೆ ಕಾಣ್ಕೆ ನೀಡಿದ ಚರಿತ್ರೆಯಾಗಿ ಕಾಣುತ್ತದೆ ಎಂದೆಲ್ಲ ವ್ಯಾಖ್ಯಾನಗಳು ಆಗುತ್ತವೆ. ಆದರೆ ದುರಂತವಿರುವುದು ಈ ಚರಿತ್ರೆಯನ್ನು, ತನ್ನ ವಾಯ್ಸ್‍ನಿಂದಲೇ ನಿರ್ಮಿಸಿದ ಚರಿತ್ರೆಯನ್ನು ಭಾರತದ ಆಳುವ ವರ್ಗ ಆಲಿಸದೇ ಹೋದದ್ದು. ಹಾಗೇ ನೋಡಿ ದರೆ ನಾವು ಯಾವಾಗಲೂ ದೊಡ್ಡವರ ಮಾತನ್ನು ಕೇಳಿಸಿಕೊಳ್ಳಲಿಲ್ಲ. ಅಂಬೇಡ್ಕರ್ voiceಅನ್ನು ಕೇವಲ ಸೀಮಿತ ಅರ್ಥದಲ್ಲಿ ಈ ಸಮಾಜ ನೋಡಿದ್ದರಿಂದ ಅವರ ವಾಯ್ಸ್‌ಗಿರುವ ಮಹತ್ವ ತಿಳಿಯಲೇ ಇಲ್ಲ. ಆದರೆ ಅಂಬೇಡ್ಕರ್ ಅವರ ಚಿಂತನೆಗಳು ಕೇವಲ ದಲಿತ ಸಮೂಹವನ್ನು ಪ್ರತಿನಿಧಿಸುವ ‘ವಾಯ್ಸ್’ ಆಗಿರಲಿಲ್ಲ. ಒಟ್ಟು ಸಮಾಜದ ಸಾಮಾಜಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವ ವಾಯ್ಸ್ ಆಗಿತ್ತು. ಆದರೆ ನಮ್ಮ ಆಳುವ ಸಮಾಜ ಇದನ್ನು ಮನಗಾಣಲಿಲ್ಲ!

ಇನ್ನೂ ವಿಚಿತ್ರವೆಂದರೆ ಈಗಾಗಲೇ ಅನಕ್ಷರತೆ ಮತ್ತು ಅರಿವಿನ ಕೊರತೆಯಿಂದ ದಲಿತ ಸಮೂಹ ಈ ವಾಯ್ಸ್‍ನ್ನು ಗ್ರಹಿಸುವುದು ಸಹ ಸಾಧ್ಯವಾಗಲಿಲ್ಲ ಅಥವಾ ವಿಳಂಬವಾಗಿ ಹೋಯಿತು! ಅದೇ ವೇಳೆ ಶೋಷಕ ವರ್ಗಗಳು, ಬಂಡವಾಳಷಾಹಿಗಳು ಪ್ರಜ್ಞಾಪೂರ್ವಕವಾಗೇ ಸಮಾನತೆಯ ಬಗೆಗಿನ ಇವರ ‘ವಾಯ್ಸ್’ನ್ನು ಕೇಳಿಸಿಕೊಳ್ಳುವುದಕ್ಕೆ ಎಂದು ಪ್ರಯತ್ನಿಸಿಯೇ ಇಲ್ಲ. ಅಥವಾ ಕೇಳಿಸಿಕೊಳ್ಳುವ ಇಚ್ಛೆ ತೋರಿಲ್ಲವೆನಿಸುತ್ತೆ. ಹೀಗಾಗಿ ಅಸ್ಪೃಶ್ಯತೆ ನೋವು, ಅಸಮಾನತೆಯ ಕಹಿ, ಹಿಂಸೆ, ನೋವುಂಟು ಮಾಡುತ್ತಿದ್ದ ಸಮಾಜಕ್ಕೆ ತಿಳಿಯಲೇ ಇಲ್ಲ. ಅಸ್ಪೃಶ್ಯತೆಯ ಸಂಕಟಗಳು ಅದಕ್ಕೆ ಒಡ್ಡುವ ಪ್ರತಿರೋಧಗಳು ದಲಿತೇತರ ಸಮಾಜಕ್ಕೆ ಕೇವಲ ಉಪದ್ರವವಾಗೇ ತೋರುತ್ತಿದೆ.

ಇದು ಅಂಬೇಡ್ಕರ್ ಅವರ ಬಗ್ಗೆ ಇದ್ದ ಪೂರ್ವಾಗ್ರಹವನ್ನು ಹೆಚ್ಚಿಸಿದೇ ವಿನಃ ಅವರ ಚಿಂತನೆಗಳನ್ನು ಅರಿಯುವುದಕ್ಕೆ ಒಂದು ಬಗೆಯಲ್ಲಿ ಅವಕಾಶ ನೀಡಲಿಲ್ಲ. ಈ ಮಾತಿನಿಂದ ವರ್ತಮಾನದಲ್ಲಿ ತಿಳಿಯಬೇಕಾದ ಒಂದು ಸಂಗತಿ ಇದೆ. ಅದೇನೆಂದರೆ ಅಂಬೇಡ್ಕರ್ ತನ್ನ ಜಾತಿಯ ಕಾರಣಕ್ಕಾಗೇ ಅನುಭವಿಸಿದ ನೋವುಗಳನ್ನು ಎದುರಿಸಿದ ಬಗೆ ಅಥವಾ ವಿಧಾನ. ಅವರು ತಮ್ಮ ಯಾವುದೇ ಬಗೆಯ ಅವಮಾನ ಮತ್ತು ಸಂಕಟಗಳನ್ನು ಎದುರಿಸಿದ್ದು ತನ್ನ ವಿದ್ವತ್‍ನಿಂದ. ತಾನು ಪ್ರತಿ ವಿಷಯದಲ್ಲಿ ಗಳಿಸಿಕೊಂಡಿದ್ದ ವಿದ್ವತ್‍ನಿಂದ ಮಾತ್ರ. ಕೇವಲ ಧ್ವನಿ ಎತ್ತರಿಸಿ ಮಾತಾಡುವುದರಿಂದಲ್ಲ! ವರ್ತಮಾನದಲ್ಲಿ ಬದುಕುತ್ತಿರುವ ದಲಿತ ಮತ್ತು ದಲಿತೇತರ ಸಮುದಾಯಕ್ಕೆ ಇದು ತಿಳಿಯಬೇಕಿದೆ. ಬಹಳ ಸರಳವಾಗಿ ಹೇಳಿಬೇಕೆಂದರೆ ತತ್ವಶಾಸ್ತ್ರ ಓದಿಕೊಂಡು ತಾತ್ವಿಕ ವಿಚಾರಗಳಲ್ಲಿ ಬರುತ್ತಿದ್ದ ಸವಾಲುಗಳನ್ನು ಪ್ರಶ್ನಿಸುತ್ತಿದ್ದರು. ಧರ್ಮಗ್ರಂಥಗಳನ್ನು ಓದಿ, ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ದೌರ್ಜನ್ಯಗಳನ್ನು ಎದುರಿಸುತ್ತಿದ್ದರು. ‘ಕೆರೆ’ ನೀರನ್ನು ಒಂದು ‘ಬೊಗಸೆ’ಯಲ್ಲಿ ಎತ್ತಿಕೊಳ್ಳುವ ಮೂಲಕವೇ ಪ್ರಕೃತಿದತ್ತವಾಗಿ ದೊರಕುವ ನೀರು ಮತ್ತು ನಿಸರ್ಗ ನಿರ್ಮಿತ ಕೆರೆ-ಕಟ್ಟೆಗಳು ಪ್ರತಿ ಜೀವಗಳದ್ದು ಎಂದು ತೋರಿಸಿಕೊಡುತ್ತಿದ್ದರು. ಈ ಜಗತ್ತು ಯಾವ ವಿಷಯದಲ್ಲಿ ಅವರನ್ನು ಮಣಿಸಲು ನೋಡುತ್ತಿತ್ತೋ ಆ ಎಲ್ಲಾ ವಿಚಾರಗಳಲ್ಲಿ ತಾನು ಪ್ರವೇಶ ಪಡೆದು, ‘ಜ್ಞಾನ’ ಸಂಪಾದಿಸಿ, ಮರು ಸವಾಲು ಎಸೆಯುತ್ತಿದ್ದರು. ಇದಕ್ಕೆ ಅರ್ಥಶಾಸ್ತ್ರ, ನ್ಯಾಯ ಶಾಸ್ತ್ರ, ಸಮಾಜ ಶಾಸ್ತ್ರ, ಯಾವುದೂ ಅವರಿಗೆ ಹೊರತಾಗಿರಲಿಲ್ಲ. ಇದು ಅಂಬೇಡ್ಕರ್‍ರವರಿಗಿದ್ದ ಶಕ್ತಿ ಮತ್ತು ದೃಢತೆ. ಇಂದಿನ ವಿದ್ಯಾವಂತ ದಲಿತ ಸಮೂಹ ಕಂಡುಕೊಳ್ಳಬೇಕಾದ್ದು ಮತ್ತು ಅನುಸರಿಸಬೇಕಾದ್ದು ಇದನ್ನೇ.

ಇದು ಸಾಧ್ಯವಾಗಿದ್ದು ಅವರು ಗಳಿಸಿದ ಅಪಾರ ವಿದ್ವತ್ತಿನಿಂದ ಮತ್ತು ತಮ್ಮ ಸುದೀರ್ಘ ಅಧ್ಯಯನದಿಂದ ಹಾಗೂ ಅಂತರಾತ್ಮಕ್ಕೆ ತಂದುಕೊಂಡಿದ್ದ ‘ಬುದ್ಧ’ ಗುರುವಿನ ತತ್ವಗಳಿಂದ. ಬುದ್ಧ ತನ್ನನ್ನು ತಾನೇ ಬಿಡುಗಡೆ ಮಾಡಿಕೊಂಡಂತೆ, ಅಂಬೇಡ್ಕರ್ ಕೂಡ ಮೊದಲು ತನ್ನನ್ನು ತಾನು ಬಿಡುಗಡೆಗೊಳಿಸಿಕೊಳ್ಳುತ್ತಾ ಹೋದರು. ಬುದ್ಧ ಪಾರಾಗುವ ಬಗೆಯನ್ನು ತಾನು ಮೊದಲು ಕಂಡುಕೊಂಡಂತೆ ಅದರಿಂದ ‘ಭವ’ದ ನರಕದಿಂದ ಪಾರಾಗುವ ಬಗೆಯನ್ನು ಇತರರಿಗೂ ಅದು ಅರಿಯುವಂತೆ ಮಾಡಿದ್ದು. ಇದೇ ಅಂಬೇಡ್ಕರ್‍ರವರಿಗೆ ಬೆಳಕಿನಂತೆ ತೋರಿರಬಹುದು. ದೊಡ್ಡವರೇ ಹೀಗೆ; ಬದಲಾವಣೆಗಳನ್ನು ತಂದುಕೊಳ್ಳುವುದು ಮೊದಲು ತಮ್ಮೊಳಗೆ. ಅದರಿಂದ ಅವರು ಇತರರು ಬದಲಾಗಲು ಕಾರಣರಾಗುತ್ತಾರೆ. ಬಹುಶಃ ಅಂಬೇಡ್ಕರ್‍ರಿಗೆ ಬುದ್ಧನ ಈ ಮಾರ್ಗ ಮಾದರಿಯಾಗಿ ತೋರಿರಲೇಬೇಕು. ಇನ್ನೊಂದು ಅಂಬೇಡ್ಕರ್‍ರಿಗೆ ಪ್ರಿಯವಾದದ್ದು ಬುದ್ಧನ ಹೇಳಿಕೆ. “ತಾನು ಬೋಧಿಸಿದೆ ಎಂಬ ಕಾರಣಕ್ಕೆ ಒಪ್ಪಿಕೊಳ್ಳದೆ ತನ್ನ ಅನುಭವದ ಮೂಲಕ ಒಪ್ಪಿಕೊಳ್ಳಬೇಕು” ಎಂಬ ನುಡಿ. ಎಂದರೆ ಬುದ್ಧನ ಧರ್ಮ ಒತ್ತಾಯಿಸುವುದಿಲ್ಲ. ಪ್ರತಿಯೊಬ್ಬ ಜೀವಿಗೂ ತನ್ನನ್ನು ತಾನು ಅರಿಯಲು, ತನ್ನನ್ನು ತಾನು ನೋಡಿಕೊಳ್ಳಲು, ತನ್ನ ಅನುಭವದಿಂದಲೇ ತಾನು ಬಿಡುಗಡೆ ಮಾಡಿಕೊಳ್ಳುವ ಕಲೆಯನ್ನು ತೋರಿಸಿದೆ, ಕಲಿಸಿದೆ. ‘ನಿನಗೆ ನೀನೇ ಬೆಳಕು’ ಎಂಬ ನುಡಿ ಅಂಬೇಡ್ಕರ್‍ರಿಗೆ ಮಹಾ ಬೆಳಕಾಗಿ ತೋರಿಸಿದೆ. ಬಹುಷಃ ಜಗತ್ತಿನ ಇತರೇ ಯಾವುದೇ ಧರ್ಮಗಳಲ್ಲಿ ಕಾಣಿಸದಿದ್ದ, ಅಥವಾ ತನಗೇ ಒಂದು ಧರ್ಮಬೇಕೆಂದು ಕನಸುತ್ತಿದ್ದಾಗ ಅಂತಿಮವಾಗಿ ಬುದ್ಧಧರ್ಮ ಅಂಬೇಡ್ಕರರಿಗೆ ಸಿಕ್ಕಿದೆ. ಅಂಥ ಮಹಾ ಬೆಳಕನ್ನು ಮೊದಲು ತನ್ನ ಅಂತರಾತ್ಮಕ್ಕೆ ಒಪ್ಪಿಸಿಕೊಂಡರು. ಆದ್ದರಿಂದಲೇ ಎಲ್ಲಾ ಬಗೆಯ ದಮನಿತರು ತಮ್ಮ ವಿಮೋಚನೆಗೆ ಬುದ್ಧ ಗುರುವಿನ ಮಾರ್ಗ ಅನುಸರಿಸಬೇಕೆಂದು ಆಸೆಪಟ್ಟರು. ಜಗತ್ತಿನ ಒಂದು ಮಹಾಚೇತನದ ಮಾರ್ಗದಲ್ಲೇ ಈ ಜಗತ್ತು ಮುನ್ನಡೆಯಬೇಕೆಂಬ ನಿರೀಕ್ಷೆ ಸಹಜವಾಗೇ ಅಂಬೇಡ್ಕರರಿಗೆ ಬಂದಿತ್ತು. ಆದರೂ ಇವರ ಮಾತನ್ನು ನಮ್ಮ ‘ಮೇರಾ ಭಾರತ್ ಮಹಾನ್’ ಎಂದ ಜನ ಕೇಳಿಸಿಕೊಳ್ಳಲೇ ಇಲ್ಲವೇನೋ. ಇಂದಿಗೂ ಜಾತೀಯತೆಯಲ್ಲಿ ನಾವೆಲ್ಲ ಮುಳುಗಿ ಕುಬ್ಜರಾಗುತ್ತಿರುವುದಕ್ಕೆ ಇಂಥವರ ಮಾತು ಕೇಳಿಸಿಕೊಳ್ಳದಿರುವುದೇ ಕಾರಣವಾಗಿದೆ. ಇವತ್ತಿನ ಸಾಮಾಜಿಕ ಕಷ್ಟಗಳಿಗೆ ಇದೇ ಕಾರಣವೂ ಇರಬಹುದು. ಅಂದರೆ ನಮ್ಮೊಳಗೆ ಬುದ್ಧನ ಮಾತು ಕೇಳದ ಭಾರತವೊಂದು ನಮ್ಮ ನಡುವೆ ಇರಬಹುದೇ?

‘ಅಸ್ಪೃಶ್ಯತೆ ಕ್ರೌರ್ಯ’ ಎಂದರು ಅಂಬೇಡ್ಕರ್. ‘ಅಸ್ಪೃಶ್ಯತೆ ಮಾನವ ಕುಲಕ್ಕೆ ಕಳಂಕ’ ಎಂದರು ಗಾಂಧಿ. ಆದರೆ ಅವರ ಮಾತನ್ನು ನಾವು ಕೇಳಿಸಿಕೊಳ್ಳಲೇ ಇಲ್ಲ. ಹೃದಯಕ್ಕೂ ತಂದುಕೊಳ್ಳಲೇ ಇಲ್ಲ. ಜಾಗತೀಕರಣದ ಹೆಸರಿನಲ್ಲಿ ಆಗುತ್ತಿರುವ ಬದಲಾವಣೆಗಳಲ್ಲಿ ಜಾತಿಯೂ ತನ್ನ ವರಸೆ ಬದಲಿಸಿಕೊಂಡು ಅಂತರ್ಗತವಾಗಿ ಕೆಲಸ ಮಾಡುತ್ತಿರುವುದನ್ನು ಅನೇಕ ಘಟನೆಗಳು ದೃಢಪಡಿಸುತ್ತಿವೆ. ಇಂಥ ಹೊತ್ತಿನಲ್ಲಿ ಯಾವುದು ಭರವಸೆ?

ಇದನ್ನೂ ಓದಿ : ನುಡಿನಮನ | ರೈತರ ಪರವಾಗಿಯೂ ದನಿ ಎತ್ತಿದ್ದರು ಭೀಮರಾವ್‌ ಅಂಬೇಡ್ಕರ್‌

ಸಂವಿಧಾನದ ಎಷ್ಟೊಂದು ಫಲಗಳು ನಮ್ಮನ್ನು ಇಂದು ಸಲುಹಿದೆ. ಆದರೆ ನಾವು ಮಾತ್ರ ಜಾತಿ-ಮತ-ಧರ್ಮಗಳ ಹೆಸರಿನಲ್ಲಿ ಇಬ್ಭಾಗವಾಗುತ್ತಲೇ ಇದ್ದೇವೆ. ದೊಡ್ಡವರು ಕಟ್ಟಿದ್ದನ್ನು ನಾವು ಕೆಡವುತ್ತೇವೆ. ಇದು ನಾವು ದೊಡ್ಡವರಿಗೆ ಮಾಡುತ್ತಾ ಬಂದಿರುವ ಅವಮಾನ! ಇಂದು ಇಬ್ಬರೂ ಬದಲಾಗಬೇಕಿದೆ. ಅವಮಾನ ಮಾಡಿದವರು ಗಾಂಧಿ ತೋರಿದ ದಾರಿಯಲ್ಲಿ ನಡೆದು ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾ ಪರಿಶುದ್ಧ ವಾಗಬೇಕು. ಅವಮಾನ ಉಂಡವನು ಅಂಬೇಡ್ಕರ್ ತೋರಿದ ದಾರಿಯಲ್ಲಿ ನಡೆಯಬೇಕು. ಅವಮಾನಿಸಿದವರ ಪ್ರತಿನಿಧಿಯಾಗಿ ಜೀವನದುದ್ದಕ್ಕೂ ಅಸ್ಪೃಶ್ಯತೆ ವಿಮೋಚನೆಗೆ ಗಾಂಧಿ ತೋರಿದ ಹೃದಯ ಪರಿವರ್ತನೆಯ ದಾರಿಯಲ್ಲಿ ನಡೆದ ಕುದ್ಮಲ್ ರಂಗರಾಯರು ಇದಕ್ಕೆ ಶ್ರೇಷ್ಠ ಉದಾಹರಣೆಯಾಗಿ ಕಣ್ಮುಂದಿದ್ದಾರೆ. 40-50ರ ದಶಕದಲ್ಲಿ ಆರ್. ಗೋಪಾಲಸ್ವಾಮಿ ಅಯ್ಯರ್ ಮಾಡಿದ ಕೆಲಸಗಳು ಅಷ್ಠೇ ಶ್ರೇಷ್ಠವಾದವು.

ಅಂಬೇಡ್ಕರ್‌ ನೀಡಿರುವ ಒಂದು ಉದಾಹರಣೆ ಗಮನಿಸಬಹುದು: “ಗಾಢ ಪ್ರೀತಿ ಮತ್ತು ಕಡು ಕೋಪವನ್ನು ಹೊಂದದವರು ತಮ್ಮ ಕಾಲದ ಮೇಲೆ ಯಾವುದೇ ಪ್ರಭಾವವನ್ನು ಬೀರಲಾರರು ಮತ್ತು ಯಾವುದೇ ಘನ ತತ್ವಗಳಿಗೆ ಅಥವಾ ಹೋರಾಟ ಯೋಗ್ಯವಾದ ಧ್ಯೇಯಗಳಿಗೆ, ಪರಿಣಾಮಕಾರಿ ಮಾರ್ಗದರ್ಶನ ಮಾಡಲಾರರು. ನಾನು ಅನ್ಯಾಯ, ದಬ್ಬಾಳಿಕೆ, ಆಡಂಬರ, ವಂಚನೆಯನ್ನು ದ್ವೇಷಿಸುತ್ತೇನೆ. ಮತ್ತು ಯಾರು ಇವುಗಳನ್ನು ಆಚರಿಸುತ್ತಾರೋ ಅವರನ್ನು ಪ್ರಶ್ನಿಸುತ್ತೇನೆ. ಇಂತಹ ಭಾವನೆಯಲ್ಲಿಯೇ ನನ್ನ ಶಕ್ತಿ ಅಡಗಿದೆ ಎಂದು ನನ್ನನ್ನು ಟೀಕಿಸುವವರಿಗೆ ತಿಳಿಸಬಯಸುತ್ತೇನೆ. ಇದೇ ನಾನು ಬಲವಾಗಿ ನಂಬಿರುವ ತತ್ವ ಮತ್ತು ಧ್ಯೇಯ, ನಾನು ಹೊಂದಿರುವ ಪ್ರೀತಿಯ ಪ್ರತಿಬಿಂಬವಾಗಿದೆ”. ಎಂದರು. ಈ ಮಾತುಗಳನ್ನು ಸರಿಯಾಗಿ ಗ್ರಹಿಸದೇ ಹೋದರೂ ಅವರ ಕನಸುಗಳು ಮುಂದುವರಿಸುವುದು ಕಷ್ಟ.

ಅಂಬೇಡ್ಕರ್ ನಮಗೆ ಸಂವಿಧಾನ ಕೊಟ್ಟಿದ್ದಾರೆ. ಅದನ್ನು ಗೌರವಿಸುತ್ತಾ ಬಾಳಬೇಕು. ಬುದ್ಧನನ್ನು ತೋರಿಸಿದ್ದಾರೆ. ಅದರಲ್ಲಿನ ಬೆಳಕನ್ನು ಭವಿಷ್ಯಕ್ಕೆ ಬಳಸಿಕೊಳ್ಳಬೇಕು. ನಮ್ಮ ವರ್ತಮಾನದಲ್ಲಿ ಮತ್ತು ಭವಿಷ್ಯಕ್ಕೆ ನೆಮ್ಮದಿಯ ಜಗತ್ತು ಬಯಸುವುದಾದರೆ ನಾವು ಅವರ ಮಾರ್ಗದಲ್ಲಿ ಕಿಂಚಿತ್ತಾದರೂ ನಡೆಯಲೇ ಬೇಕು. ಅಂಥವನೇ ನಿಜವಾದ ಭಾರತೀಯನೆನಿಸಿಕೊಳ್ಳಲು ಸಾಧ್ಯ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More