ನುಡಿನಮನ | ಅಂಬೇಡ್ಕರ್‌ತನ ವೈರುಧ್ಯ ಆಗದಿರಲೆಂಬ ಕನಸಿನಲ್ಲಿ

ಅಂಬೇಡ್ಕರ್ ಜಯಂತಿಯ ಹಬ್ಬದಂತಹ ಸಂದರ್ಭದಲ್ಲಿ ಹುಮ್ಮಸ್ಸಿನಿಂದ ಸೇರುವ ದಲಿತ ಯುವ ಸಮುದಾಯ ಇನ್ನೆಲ್ಲೋ ದಲಿತರ ಮೇಲೆ ದಬ್ಬಾಳಿಕೆ, ಅನ್ಯಾಯ, ಅತ್ಯಾಚಾರ ಆದಾಗ ಪ್ರತಿಭಟನಾತ್ಮಕವಾಗಿ ಹೀಗೆ ಒಟ್ಟೊಟ್ಟಿಗೆ ಸೇರುವುದು ಯಾಕೆ ಕಡಿಮೆಯಾಗುತ್ತಿದೆ? ಯೋಚಿಸಬೇಕಲ್ಲವೇ?

ಈ ‘ಅಂಬೇಡ್ಕರ್‌ತನ’ ಎನ್ನುವುದನ್ನು ಅರ್ಥೈಸುವುದು ಹೇಗೆಂಬುದು ತಕ್ಷಣಕ್ಕೆ ಹೊಳೆಯುತ್ತಿಲ್ಲ. ಹಾಗಿದ್ದೂ ಅಂಬೇಡ್ಕರ್ ತಮ್ಮ ಇಡೀ ಬದುಕಿನುದ್ದಕ್ಕೂ ತಮಗಾಗಿ, ತಮ್ಮ ಸಮುದಾಯಗಳಿಗಾಗಿ ರೂಪಿಸಿಕೊಳ್ಳುತ್ತ ಹೋದ ಹೋರಾಟದ ಹಾದಿ, ಕಟ್ಟಿಕೊಂಡ ಸ್ವಾಭಿಮಾನದ ಬದುಕು, ಅನುಭವಿಸಿದ ಅವಮಾನ, ಪಡೆದ ಶಿಕ್ಷಣ; ಆ ಮೂಲಕ ಭಾರತೀಯ ಸಮಾಜದಲ್ಲಿ ಪಡೆದ ದಾರ್ಶನಿಕ ವ್ಯಕ್ತಿತ್ವ, ಬಿಟ್ಟು ಹೋದ ಪರ್ಯಾಯ ಚಿಂತನಾಕ್ರಮ- ಹೀಗೆ ಇವೆಲ್ಲವನ್ನೂ ನನ್ನ ಮಟ್ಟಿಗೆ ‘ಅಂಬೇಡ್ಕರ್‌ತನ’ ಎಂದು ಈ ಕ್ಷಣಕ್ಕೆ ಅರ್ಥೈಸಿಕೊಂಡಿದ್ದೇನೆ.

ಈ ಅಂಬೇಡ್ಕರ್‌ತನ ಎನ್ನುವುದು ಅಂಬೇಡ್ಕರ್ ಭೌತಿಕವಾಗಿ ನಮ್ಮನ್ನೆಲ್ಲ ಬಿಟ್ಟು ಹೋದ ಇಷ್ಟು ವರ್ಷಗಳ ನಂತರ ಅವರು ಕನಸು ಕಂಡ ಸಮುದಾಯಗಳಲ್ಲಿ ಹೇಗೆ ಮರುರೂಪ ಪಡೆಯುತ್ತಿದೆ; ಜೊತೆಯಲ್ಲಿಯೇ ಹೊಸ ರೂಪದೊಂದಿಗೆ ಬೆಳೆಯುತ್ತಿದೆ ಎಂಬುದು ‘ಅಂಬೇಡ್ಕರ್ ಜಯಂತಿ’ಯ ಸಂದರ್ಭದಲ್ಲಿ ನಾನು ಕಂಡ ದೃಶ್ಯಾವಳಿಗಳ ಮೂಲಕ ಕಣ್ಣ ಮುಂದೆ ಬರುತ್ತಿದೆ.

* * *

ಏಪ್ರಿಲ್ ಹದಿನಾಲ್ಕನೇ ತಾರೀಖಿನಂದು ಮೈಸೂರಿನ ಕೆ ಆರ್ ಸರ್ಕಲ್ಲಿನ ಸುತ್ತಮುತ್ತ ಎಲ್ಲೆಡೆ ಟ್ರಾಫಿಕ್ ಜಾಮ್. ಎಲ್ಲ ಮುಖ್ಯರಸ್ತೆಗಳೂ ಮುಚ್ಚಿಕೊಂಡು ಗಲ್ಲಿಗಲ್ಲಿಗಳು ತೆರೆದುಕೊಂಡು ವಾಹನಗಳಿಂದ ಕಿಕ್ಕಿರಿದು ಮೊರೆಯುತ್ತಿದ್ದವು. ಇದಕ್ಕೆ ಕಾರಣ ಅಂದು ವಿವಿಧ ದಲಿತ ಸಂಘಟನೆಗಳು ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿಯ ಸಂದರ್ಭದ ಮೆರವಣಿಗೆ; ಅದರಲ್ಲಿ ಅಂಬೇಡ್ಕರ್ ಭಾವಚಿತ್ರ, ಪ್ರತಿಮೆ ಇತ್ಯಾದಿಗಳೆಲ್ಲ ಇದ್ದವು. ಮುಖ್ಯರಸ್ತೆಗಳೆಲ್ಲ ವಾಹನಗಳಿಂದ ಸಾಲುಗಟ್ಟಿದ್ದವು. ಮೈಸೂರು ನಗರದ ಸಾವಿರಾರು ಸಂಖ್ಯೆಯ ದಲಿತ ಸಂಘಟನೆಗಳ ಕಾರ್ಯಕರ್ತರು, ಯುವಕರು, ವಿದ್ಯಾರ್ಥಿಗಳು, ಸಾರ್ವಜನಿಕರು, ಅಂಬೇಡ್ಕರ್ ಅಭಿಮಾನಿಗಳು ಎಲ್ಲರೂ ಸಯ್ಯಾಜಿರಾವ್ ರಸ್ತೆಯ ಮೂಲಕ ಕೆ ಆರ್ ವೃತ್ತವನ್ನು ಮುಟ್ಟುವ ಸಂದರ್ಭದಲ್ಲಿ ಹರ್ಷೋದ್ಗಾರ ಮುಗಿಲು ಮುಟ್ಟತೊಡಗಿತ್ತು. ಅಂಬೇಡ್ಕರ್ ಅವರನ್ನು ತಮ್ಮ ದೇವರನ್ನಾಗಿಸಿಕೊಂಡಿರುವ, ತಮ್ಮ ಭವಿಷ್ಯದ ಹರಿಕಾರನನ್ನಾಗಿಸಿಕೊಂಡಿರುವ ಯುವಕರು ಇನ್ನಿಲ್ಲದಷ್ಟು ಉದ್ಗಾರಗಳೊಂದಿಗೆ ಕಿರುಚುತ್ತಿದ್ದರು. ಎಲ್ಲರೂ ಹೋಳಿಯ ಹಬ್ಬದಂದು, ಬಣ್ಣ ಬಳಿದುಕೊಳ್ಳುವವರಂತೆ ತಮ್ಮ ಮುಖಗಳಿಗೆಲ್ಲ ರಂಗು ಬಳಿದುಕೊಂಡಿದ್ದರು, ಸಿಕ್ಕಸಿಕ್ಕ ಗೆಳೆಯರಿಗೆಲ್ಲ ಬಳಿಯುತ್ತಿದ್ದರು. ಕೆಲವರು ಧಾರ್ಮಿಕ ಉತ್ಸವಗಳಲ್ಲಿ, ಗಣೇಶೋತ್ಸವದಂದು ಹಣೆಗೆ ಉದ್ದನೆಯ ಕೆಂಪು ಕುಂಕುಮಗಳನ್ನು ಬಳಿದುಕೊಳ್ಳುವವರಂತೆ ಕೆಂಪು ನಾಮಗಳನ್ನು ಹಾಕಿಕೊಂಡಿದ್ದರು. ಆಗಾಗ್ಗೆ ಪಟಾಕಿಗಳನ್ನು ಸಿಡಿಸುತ್ತಿದ್ದರು. ಅಲ್ಲೆಲ್ಲ ಬಹುದೊಡ್ಡ ಹಬ್ಬದ ಸಡಗರ, ಉತ್ಸಾಹಗಳು ಚೆಲ್ಲಾಡುತ್ತಿದ್ದವು.

* * *

ನಾನು ಅದೇ ವೇಳೆಯಲ್ಲಿ ವೈನ್‍ಶಾಪ್ ಅನ್ನು ಹುಡುಕಿಕೊಂಡು ಅಲೆಯುತ್ತಿದ್ದೆ. ವಿಚಿತ್ರವೆಂದರೆ ಕೆ ಆರ್ ಸರ್ಕಲ್‍ನ ಸುತ್ತಮುತ್ತಲ ಎಲ್ಲ ವೈನ್‌ಶಾಪ್‍ಗಳೂ, ಬಾರ್‌ಗಳೂ ಮುಚ್ಚಿದ್ದವು. ಮೆರವಣಿಗೆ ಸರ್ಕಲ್ ಅನ್ನು ಮುಟ್ಟುತ್ತಿದೆ ಎನ್ನುವಾಗ ಇನ್ನುಳಿದ ವೈನ್ ಅಂಗಡಿಗಳು ಬಾಗಿಲು ಮುಚ್ಚುವ ತರಾತುರಿಯಲ್ಲಿದ್ದವು. ಅವರು ಅವಸರವಸರವಾಗಿ ಬಾಗಿಲು ಮುಚ್ಚುತ್ತಿದ್ದುದನ್ನು ಕಂಡು ಗಾಬರಿಯಾದ ನಾನು ಏನೋ ಗಲಾಟೆ ನಡೆಯುತ್ತಿರಬಹುದೆಂದುಕೊಂಡು ಅಂಗಡಿಯವನನ್ನು ಏನೆಂದು ಕೇಳಿದೆ. "ಸಾರ್ ಆ ಮೆರವಣಿಗೆಯಲ್ಲಿರೋರೆಲ್ಲ ಅಂಗಡಿಗೆ ಬಂದು ಮುತ್ತಿಕೊಳ್ತಾರೆ. ಯಾರೊಬ್ಬರೂ ಸರಿಯಾಗಿ ಕಾಸು ಕೊಡಲ್ಲ. ಕೇಳೋಕೆ ಹೋದ್ರೆ ಜಗಳಕ್ಕೇ ಬರ್ತಾರೆ ಸಾರ್. ಅದಕ್ಕೇ ಇವೆಲ್ಲ ತಂಟೇನೇ ಬೇಡ. ಒಟ್ಟಿಗೇ ಸಂಜೆ ಓಪನ್ ಮಾಡ್ತೀವಿ,” ಎಂದ.

“ಯಾರು? ಅಲ್ಲಿ ಬರುತ್ತಿರೋ ಮೆರವಣಿಗೆಯವರ ಹಾಗೆ ಮಾಡೋದು? ಇಲ್ಲಿ ಪ್ರತಿದಿನ ಯಾವಯಾವುದೋ ಮೆರವಣಿಗೆಗಳು ನಡೆಯುತ್ತವೆ. ಆಗಲೂ ಹೀಗೇ ಅಂಗಡಿ ಬಂದ್ ಮಾಡ್ತೀರಾ?” ಎಂದೆ ನಾನು.

“ಅಯ್ಯೋ ಇದು ಬೇರೇನೇ ಕೇಸು ಸಾರ್... ಇವರ ಜೊತೆ ನಾವು ಏಗೋಕಾಗಲ್ಲ!’ ಅಂದ ಅವನು, ಅಲ್ಲಿಂದ ಹೊರಡಲು ಅವಸರಿಸಿದ.

ಅಷ್ಟು ಹೊತ್ತಿಗಾಗಲೇ ನನಗೆ ಹಸಿವಾಗತೊಡಗಿತ್ತು. ಏನಾದರೂ ತಿನ್ನೋಣ ಅಂದುಕೊಂಡು ಅಲ್ಲಿಯೇ ಪಕ್ಕದಲ್ಲಿದ್ದ, ನಾನು ಯಾವಾಗಲಾದರೂ ದನದ ಮಾಂಸ ತಿನ್ನಲು ಹೋಗುತ್ತಿದ್ದ ಹೋಟೆಲ್‍ನತ್ತ ಹೊರಟರೆ, ಅದಾಗಲೇ ಬಾಗಿಲು ಮುಚ್ಚಿತ್ತು! ಕೆ ಆರ್ ಸರ್ಕಲ್ಲಿನ ಸುತ್ತಮುತ್ತಲಿಗೆಲ್ಲ ಬಹಳ ಕಡಿಮೆ ದರದಲ್ಲಿ ಮಾಂಸಾಹಾರವನ್ನು ನೀಡುವ, ದನದ ಮಾಂಸದ ಖಾದ್ಯಗಳಿಗೆ ಬಹಳ ಪ್ರಸಿದ್ಧವಾಗಿರುವ, ದಿನನಿತ್ಯ ನೂರಾರು ಮಂದಿ ದಲಿತರು, ಶೂದ್ರರು, ಅಲ್ಪಸಂಖ್ಯಾತ ಬಡವರಿಂದ ಕಿಕ್ಕಿರಿಯುತ್ತಿದ್ದ ಆ ಹೋಟೆಲ್ ಆ ವೇಳೆಯಲ್ಲಿ ಮುಚ್ಚಿತ್ತು. ಅಲ್ಲಿ ಯಾರನ್ನಾದರೂ ಕೇಳಿದರೆ, ಆ ವೈನ್‍ಶಾಪ್‍ನವನು ಹೇಳಿದಂತೆಯೇ ಅವರೂ ಹೇಳುತ್ತಾರೆನ್ನುವುದು ನನಗೆ ಖಚಿತವೆನ್ನಿಸಿತು.

* * *

ಆ ಮೆರವಣಿಗೆಯಲ್ಲಿ ಅಬ್ಬರಿಸುತ್ತಿರುವ, ಉತ್ಸಾಹಿಸುತ್ತಿರುವ, ಸಂಭ್ರಮಿಸುತ್ತಿರುವ ಜನರೆಲ್ಲ ಅಷ್ಟೊಂದು ಕೆಟ್ಟವರೇ? ಅಂಬೇಡ್ಕರ್ ಅವರನ್ನು ತಮ್ಮ ಆದರ್ಶವಾಗಿಸಿಕೊಂಡಿರುವ ದೊಡ್ಡದಾದ ದಲಿತ ಸಮೂಹ ಸಮಾಜದ ಕಣ್ಣಿಗೆ ಹೀಗೆ ಕಾಣುತ್ತಿದೆಯೇ? ಅಂಬೇಡ್ಕರ್ ನೆನಪು ಎನ್ನುವುದು ಇಂದು ಕೇವಲ ಫೋಟೋ, ಪ್ರತಿಮೆಗಳ ಮೆರವಣಿಗೆಯ ಸಂಭ್ರಮಕ್ಕಷ್ಟೇ ಸೀಮಿತವಾಗಿಬಿಟ್ಟಿತೇ ಎಂದೆಲ್ಲ ಕ್ಷಣ ಹೊತ್ತು ಯೋಚಿಸಿದೆ. ಮೆರವಣಿಗೆಯ ಸಂದರ್ಭದಲ್ಲಿ ಸಮಾಜಕ್ಕೆ ಕಂಟಕರಾಗಿ ಕಾಣುವಂತೆ, ಪುಂಡರಂತೆ ಅಂಗಡಿ ಮುಂಗಟ್ಟುಗಳಲ್ಲಿ ಕೀಟಲೆ ಮಾಡುವ ಯಾರೋ ನಾಕಾರು ಮಂದಿಯನ್ನು ನೆಪವಾಗಿಟ್ಟುಕೊಂಡು ಆ ಸುತ್ತಮುತ್ತಲಿನ ವ್ಯಾಪಾರಿಗಳೆಲ್ಲ ಇಡೀ ಒಂದು ಸಮುದಾಯವನ್ನೇ ಅನುಮಾನಿಸುವ ಸಾಮಾಜಿಕ ಸ್ಥಿತಿಯ ಬಗ್ಗೆ ಹೇಸಿಗೆ ಎನಿಸತೊಡಗಿತು.

ನಾನೇ ಖುದ್ದಾಗಿ ಬಲ್ಲಂತೆ ಇಂತಹ ಮೆರವಣಿಗೆ, ಹಬ್ಬ, ಸಂಭ್ರಮದ ದಿನಗಳಲ್ಲಿ ದಲಿತ ಸಮುದಾಯದ ಭಾವಾವೇಶದ ಹುಡುಗರು ಇಷ್ಟಬಂದಂತೆ ಕುಣಿಯುವುದು, ಅಂಗಡಿಗಳಿಗೆ ನುಗ್ಗಿ ತರಾಟೆಗೆ ತೆಗೆದುಕೊಳ್ಳುವುದು ನಡೆದಿವೆ; ಈಗಲೂ ನಡೆಯುತ್ತಿವೆ. ನಮ್ಮ ದೇಶದ ಅನೇಕ ಹಳ್ಳಿಗಳಲ್ಲಿ ಈಗಲೂ ಹಬ್ಬ, ಮೆರವಣಿಗೆಗಳ ಸಂದರ್ಭಗಳಲ್ಲಿ ಇಂತಹ ಒಬ್ಬರೋ ಇಬ್ಬರೋ ಹುಡುಗರು ಹದಿಹರೆಯದ ಹುಮ್ಮಸ್ಸಿನಲ್ಲಿ ಮಾಡುವ ಸಣ್ಣ ಕೀಟಲೆಯಿಂದ ಇಡೀ ದಲಿತ ಸಮುದಾಯದವರ ಮೇಲೆ ಹಲ್ಲೆ, ಕೊಲೆ, ಬೆಂಕಿ ಹಚ್ಚುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದು ಕೇವಲ ಹುಡುಗರ ಕೀಟಲೆತನದ ಪ್ರಶ್ನೆಯಲ್ಲ. ಮೇಲ್ಜಾತಿಯ ಜನರಲ್ಲಿ ಸುಪ್ತವಾಗಿರುವ ದಲಿತರ ಮೇಲಿನ ವಿನಾಕಾರಣ ಅಸಹನೆ, ಜಾತೀಯತೆಯ ವಿಷವೇ ಅಂತಹ ಸಂದರ್ಭಗಳನ್ನು ಬಳಸಿಕೊಂಡು ದಲಿತರನ್ನು ಸಾಧ್ಯವಾದಷ್ಟೂ ಶೋಷಿಸಲು ಕಾರಣವಾಗುತ್ತಿದೆ.

ಇದೆಲ್ಲವನ್ನೂ ಯೋಚಿಸುತ್ತ ಹೋದಂತೆಯೇ, ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆಯಲ್ಲಿ ಸೇರಿದ ಅಪಾರ ಜನಸ್ತೋಮ, ಯುವ ಸಮುದಾಯವನ್ನು ಕಂಡು ಅನೇಕ ಪ್ರಶ್ನೆಗಳು ಕಾಡತೊಡಗಿದವು. ಅಂಬೇಡ್ಕರ್ ಜಯಂತಿಯ ಹಬ್ಬದಂತಹ ಸಂದರ್ಭದಲ್ಲಿ ಹೀಗೆ ಹುಮ್ಮಸ್ಸಿನಿಂದ ಸೇರುವ ದಲಿತರ ಯುವಸಮುದಾಯ ಇನ್ನೆಲ್ಲೋ ದಲಿತರ ಮೇಲೆ ದಬ್ಬಾಳಿಕೆ, ಅನ್ಯಾಯ, ಅತ್ಯಾಚಾರ ಆದಾಗ ಪ್ರತಿಭಟನಾತ್ಮಕವಾಗಿ ಹೀಗೆ ಒಟ್ಟೊಟ್ಟಿಗೆ ಸೇರುವುದು ಯಾಕೆ ಕಡಿಮೆಯಾಗುತ್ತಿದೆ? ಅಂಬೇಡ್ಕರ್ ಜಯಂತಿಯನ್ನು ಉತ್ಸಾಹದಿಂದ ಆಚರಿಸುವಾಗ ಇರುವ ಹುಮ್ಮಸ್ಸು ಅನ್ಯಾಯದ ವಿರುದ್ಧ ಪ್ರತಿಭಟಿಸುವ ಸಂದರ್ಭ ಬಂದಾಗ ಯಾಕೆ ಕುಗ್ಗುತ್ತಿದೆ? ತಮ್ಮ ಬದುಕಿನುದ್ದಕ್ಕೂ ಕಟ್ಟಿಕೊಳ್ಳುತ್ತ, ರೂಪಿಸಿಕೊಳ್ಳುತ್ತ ಹೋದ ಹೋರಾಟದ ಛಲ, ವೈಚಾರಿಕ ಬಲ ಎಲ್ಲವನ್ನೂ ಕೇವಲ ಅಂಬೇಡ್ಕರ್ ಅವರನ್ನು ಜಯಂತಿಗೆ ಸೀಮಿತಗೊಳಿಸುವಷ್ಟರ ಮಟ್ಟಿಗೆ ನಮ್ಮ ದಲಿತ ಸಮುದಾಯದ ಎಚ್ಚರ ನಿಂತುಬಿಟ್ಟಿದೆಯೇ? ‘ಅಂಬೇಡ್ಕರ್‌ತನ’ ಎನ್ನುವುದು ನಮ್ಮ ದಲಿತ ಸಮುದಾಯದ ಹೊಸ ಪೀಳಿಗೆಯ ಹುಡುಗರಿಗೆ ಕೇವಲ ‘ಅಂಬೇಡ್ಕರ್ ಜಯಂತಿಯ ಭಾವಾವೇಶ’ವಾಗಿ ಮಾತ್ರ ಪ್ರಕಟಗೊಳ್ಳುತ್ತಿದೆಯೇ?

ಇದನ್ನೂ ಓದಿ : ನುಡಿನಮನ | ತನ್ನದೇ ಆದ ನಾಯಕರಿಂದ ಮಿಂಚುತ್ತಿದೆ ದಕ್ಷಿಣದ ಶೋಷಿತ ಸಮುದಾಯ

ಇಂತಹ ಪ್ರಶ್ನೆಗಳು ಕಾಡುತ್ತಲೇ ಎಪ್ಪತ್ತು-ಎಂಬತ್ತರ ದಶಕದ ಕರ್ನಾಟಕದ ದಲಿತ ಚಳವಳಿಯ ಕಾವು ನೆನಪಾಗತೊಡಗಿತು. ಎಲ್ಲೋ ದೂರದ ದಲಿತರ ಮೇಲಿನ ಶೋಷಣೆ-ಕೊಲೆ-ಅತ್ಯಾಚಾರದ ವಿರುದ್ಧ ಸಾವಿರಾರು ಸಂಖ್ಯೆಯಲ್ಲಿ ನೂರಾರು ಮೈಲಿಯವರೆಗೆ ಕಾಲ್ನಡಿಗೆಯಲ್ಲಿ ಹೊರಡುತ್ತಿದ್ದ ಜಾಥಾಗಳು, ರ್ಯಾಲಿಗಳು ನೆನಪಾದವು. ದಲಿತ ಚಳವಳಿಯನ್ನು ಕಟ್ಟಿದ ಅನೇಕ ನಾಯಕರು ಹಗಲು-ರಾತ್ರಿಯೆನ್ನದೆ, ಹಸಿವು-ನಿದ್ರೆಯೆನ್ನದೆ ಅನ್ಯಾಯಗಳ ವಿರುದ್ಧ ಬಿರುಬಿಸಿಲಿನಲ್ಲಿ ದಣಿದದ್ದು ನೆನಪಾಯಿತು...

ಹಾಗೆಯೇ ವಿವಿಧ ರೀತಿಯಲ್ಲಿ, ವಿವಿಧ ದಿಕ್ಕಿನಲ್ಲಿ ಹರಿದು-ಹಂಚಿಹೋಗುತ್ತಿರುವ ದಲಿತ ಚಳವಳಿಗಳ ಸ್ಥಿತಿಯ ಬಗ್ಗೆಯೂ, ಅಂಬೇಡ್ಕರ್ ಅವರನ್ನೂ ತಮ್ಮತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸತೊಡಗಿರುವ ನಮ್ಮ ಸಮಾಜದ ಮನೋವ್ಯಾಪಾರದ ಬಗ್ಗೆಯೂ ವಿಷಾದವೆನ್ನಿಸತೊಡಗಿತು.

ಆಸಿಫಾಳ ಅಳು | ಕವಯಿತ್ರಿ ಸಂಧ್ಯಾ ದೇವಿ ಕವಿತೆ
ಕಾಲುದಾರಿ | ದೆಹಲಿ ಆಗಲಿ, ಕಟುವಾ ಆಗಲಿ, ನಮ್ಮ ಕಾಳಜಿಗೆ ಸೋಂಕು ತಗುಲದಿರಲಿ
ನಗರಗಳಲ್ಲಿ ಏರಿಕೆ ಕಂಡ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಮಾಣ
Editor’s Pick More