ವಿಡಿಯೋ ಸ್ಟೋರಿ | ಧಾವಂತ ಬದುಕಿಗೆ ಸಂತಸದ ವಿರಾಮ ನೀಡಿದ ಬೆಂಗಳೂರು ಉತ್ಸವ

ಬೆಂಗಳೂರಿನಲ್ಲಿ ವಿವಿಧ ಹೆಸರಿನಲ್ಲಿ ಹಬ್ಬಗಳು ನಡೆಯುತ್ತಲೇ ಇರುತ್ತದೆ. ಇವುಗಳ ಉದ್ದೇಶ ಬೇರೆಬೇರೆ ಆಗಿದ್ದರೂ, ಜನರನ್ನು ಒಂದೇ ಸೂರಿನಲ್ಲಿ ಸೇರಿಸುವಲ್ಲಿ ಇವುಗಳು ಸಫಲವಾಗಿವೆ. ಇದೇ ಕಾರಣಕ್ಕೆ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಉತ್ಸವ ಜನರ ಗಮನ ಸೆಳೆಯಿತು

ಯಾಂತ್ರಿಕ ಬದುಕಿನ ಧಾವಂತಕ್ಕೆ ಕೊಂಚ ರಿಲ್ಯಾಕ್ಸ್ ನೀಡುವ ಸಲುವಾಗಿಯೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿವಿಧ ರೀತಿಯ ಹಬ್ಬಗಳನ್ನು ಆಚರಿಸಲಾಗುತ್ತದೆ. ಕೆರೆಗಳ ಕುರಿತಂತೆ ಜಾಗೃತಿ ಮೂಡಿಸುವ ಜೊತೆಜೊತೆಗೆ ಜನರಿಗೆ ಮನರಂಜನೆಯನ್ನು ನೀಡುವ ಕೆರೆ ಹಬ್ಬ, ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಬೆಂಗಳೂರು ಹಬ್ಬ ಹೀಗೆ ವಿವಿಧ ಹೆಸರಿನಲ್ಲಿ ಬೆಂಗಳೂರಿನಲ್ಲಿ ಹಬ್ಬಗಳು ನಡೆಯುತ್ತಲೇ ಇರುತ್ತದೆ. ಇವುಗಳ ಉದ್ದೇಶ ಬೇರೆಬೇರೆ ಆಗಿದ್ದರೂ, ಜನರನ್ನು ಒಂದೇ ಸೂರಿನಲ್ಲಿ ಸೇರಿಸುವಲ್ಲಿ ಇವುಗಳು ಸಫಲವಾಗಿವೆ. ಇದೀಗ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಉತ್ಸವ ಕೂಡ ಭಿನ್ನವಾಗಿ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಪರೀಕ್ಷೆಗಳನ್ನು ಮುಗಿಸಿ ಶಾಲಾ ಮಕ್ಕಳು ರಿಲ್ಯಾಕ್ಸ್ ಮೂಡ್‌ನಲ್ಲಿದ್ದರೆ, ಪೋಷಕರು ಕೂಡ ಕೊಂಚ ಬಿಡುವಾಗಿದ್ದಾರೆ. ಹೀಗಾಗಿ, ಮಕ್ಕಳೊಂದಿಗೆ ಸುತ್ತಾಡಲು ಹೇಳಿಮಾಡಿಸಿದಂತಿದೆ ಬೆಂಗಳೂರು ಉತ್ಸವ. ಮೂರು ದಿನಗಳ ಕಾಲ ನಡೆದ ಉತ್ಸವ ಜನರಿಗೆ ಹಬ್ಬವಾಗಿ ಪರಿಣಮಿಸಿದ್ದರೆ, ವ್ಯಾಪಾರಸ್ಥರಿಗೆ ಹಾಗೂ ಹೊಸ ಪ್ರತಿಭೆಗಳ ಕಲಾತ್ಮಕತೆಗೆ ಉತ್ತಮ ವೇದಿಕೆ ಒದಗಿಸಿಕೊಟ್ಟಿದೆ. ಬಿಸಿಲ ಬೇಗೆಯ ನಡುವೆಯೂ ಉತ್ಸವಕ್ಕೆ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಾರ್ಯಕ್ರಮ ಆಯೋಜಿಸಿದ ಗ್ರಾಂಡ್ ಫ್ಲೀ ಮಾರ್ಕೆಟ್ ಮತ್ತು ಇನ್ ಫಿನಿಟ್ ಸಂಸ್ಥೆ ಆಯೋಜಕರು ಉತ್ತಮ ಶಾಪಿಂಗ್ ಆಗಿರುವ ಸಂತೋಷವನ್ನು ‘ದಿ ಸ್ಟೇಟ್‌’ ಜೊತೆಗೆ ಹಂಚಿಕೊಂಡರು.

ನಾವು ಪೆಬಲ್ ಆರ್ಟ್‌ ಎನ್ನುವ ಕಲಾಕೃತಿಯನ್ನು ಇಲ್ಲಿ ಮಾರಾಟ ಮಾಡುತ್ತಿದ್ದೇವೆ. ಮೊದಲಿಗೆ ಹವ್ಯಾಸಕ್ಕಾಗಿ ಈ ಕಲೆಯನ್ನು ಮನೆಯಲ್ಲೇ ಮಾಡುತ್ತಿದ್ದೆ. ನನ್ನ ಸ್ನೇಹಿತೆ ಸಹನಾ ಕೂಡ ನನ್ನ ಜೊತೆಗಿದ್ದಳು. ನಾವಿಬ್ಬರೂ ಮಾಡಿದ ಕಲೆಯನ್ನು ಮನೆಯವರು ಬಹಳ ಇಷ್ಟಪಟ್ಟರು. ಈಗ ನಾವು ಇದನ್ನು ಇಲ್ಲಿ ಮೊದಲ ಬಾರಿಗೆ ಮಾರಾಟಕ್ಕೆ ಇಟ್ಟಾಗಲೂ ಗ್ರಾಹಕರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪ್ರಿಯಾಂಕ, ಕಲಾವಿದೆ

ಏಪ್ರಿಲ್ 13ರಿಂದ 15ರವರೆಗೆ ಬಸವನಗುಡಿಯ ಮರಾಠ ಹಾಸ್ಟೆಲ್ ಮೈದಾನದಲ್ಲಿ ನಡೆಯುತ್ತಿರುವ ಈ ಹಬ್ಬಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುತ್ತಾರೆ ಆಯೋಜಕರು. ಅಂದಹಾಗೆ, ಬೆಂಗಳೂರು ಉತ್ಸವದಲ್ಲಿ ಮನೆಯ ಅಲಂಕಾರಿಕ ವಸ್ತುಗಳು, ಸೌಂದರ್ಯವರ್ಧಕ ಸಾಧನಗಳು, ಸಾಂಪ್ರದಾಯಿಕ ವಸ್ತುಗಳು, ಆಭರಣಗಳ ಜೊತೆಗೆ ವರ್ಕ್‌ಶಾಪ್‌ಗಳು, ಮಕ್ಕಳಿಗಾಗಿ ಮನರಂಜನಾ ಕೇಂದ್ರಗಳು ಹೀಗೆ ಎಲ್ಲವೂ ಒಂದೇ ಸೂರಿನಡಿ ದೊರೆತವು. ಮೈದಾನದ ಒಂದು ಭಾಗದಲ್ಲಿ ಸಂಪ್ರದಾಯಿಕ ವಸ್ತುಗಳು, ಉಡುಪುಗಳು, ಆಭರಣಗಳು ದೊರೆತರೆ, ಮತ್ತೊಂದು ಭಾಗದಲ್ಲಿ ಆಹಾರ ಸಾಮಾಗ್ರಿಗಳ ಮಾರಾಟ ನಡೆಯಿತು.

ಬೆಂಗಳೂರು ಉತ್ಸವದ ಕುರಿತಂತೆ ‘ದಿ ಸ್ಟೇಟ್’ ಜೊತೆ ಮಾತನಾಡಿದ ದೀಪಾಲಿ, ತಾವು ತಯಾರಿಸಿದ ವಿಶೇಷ ವಿನ್ಯಾಸದ ಆಭರಣಗಳ ಕುರಿತಂತೆ ವಿವರಿಸಿದರು. “ಬೆಲೆ ಅಷ್ಟೇನೂ ಹೆಚ್ಚೂ ಅಲ್ಲದ, ಕಡಿಮೆಯೂ ಇಲ್ಲದ ನಮ್ಮ ಆಭರಣಗಳು ಜನಾಕರ್ಷಣೆಯ ಕೇಂದ್ರಬಿಂದುವಾಗಿದ್ದವು. ಮಾಮೂಲಿ ಕಿವಿಯೋಲೆ, ಕೈಬಳೆ, ಕತ್ತಿನ ಸರ ಹೀಗೆ ಸ್ಪಲ್ಪ ಡಿಫರೆಂಟಾಗಿರೋದು ಬೇಕು ಅನ್ನೋರು ನಮ್ಮಲ್ಲಿ ಹೆಚ್ಚು ಕೊಂಡರು,’’ ಎಂಬುದು ದೀಪಾಲಿಯವರ ಮಾತು.

ಇದನ್ನೂ ಓದಿ : ನಿಮಗಾಗಿ ಬಾಗಿಲು ತೆರೆದಿರುತ್ತದೆ ವಿಧಾನ ಸೌಧ; ತಪ್ಪದೇ ಭೇಟಿ ಕೊಡಿ!
ಫ್ಯಾಷನ್ ಕೋರ್ಸ್ ಕಲಿಕೆ ಸಂದರ್ಭ ನಾನು ಈ ಆಭರಣ ತಯಾರಿ ಕಲಿತಿದ್ದೇನೆ. ಈಗ ಆಭರಣ ತಯಾರಿಕೆಯಲ್ಲಿ ಪರಿಣತಿ ಪಡೆದಿದ್ದೇನೆ. ನಾವು ತಯಾರಿಸಿದ ಆಭರಣಗಳಿಗೆ ಒಳ್ಳೆ ಬೇಡಿಕೆ ಇದೆ. ಮೂರು ದಿನಗಳಿಂದ ನಾನೇ ತಯಾರಿಸಿದ ಆಭರಣಗಳಿಗೆ ಜನರಿಂದ ಉತ್ತಮವಾದ ಬೇಡಿಕೆ ದೊರೆತಿದೆ.
ದೀಪಾಲಿ, ಆಭರಣ ಕಲಾವಿದೆ

ಇನ್ನು, ಬಾಯಲ್ಲಿ ನೀರೂರುವಂತೆ ಮಾಡಿರುವ ಹೋಮ್ ಮೇಡ್ ಮೌತ್ ಫ್ರೆಶ್ನರ್ಸ್‌ಗಳ ಕುರಿತಂತೆ ಮಾತನಾಡಿದ ಮಹಾರಾಷ್ಟ್ರದ ವ್ಯಾಪಾರಿಯೊಬ್ಬರು, “ನಾವು ಹೆಚ್ಚಿನ ಪ್ರದರ್ಶನ ಹಾಗೂ ಉತ್ಸವಗಳಲ್ಲಿ ಪಾಲ್ಗೊಳ್ಳುತ್ತೇವೆ. ಬೆಂಗಳೂರಿನಲ್ಲೂ ನಮಗೆ ಮಾಮೂಲಿ ಗ್ರಾಹಕರಿದ್ದು, ನಮ್ಮಲ್ಲೇ ಖರೀದಿ ಮಾಡುತ್ತಾರೆ,” ಎಂದರು. ಸಾಂಪ್ರದಾಯಿಕ ಕಂಚಿನ ಮೂರ್ತಿಗಳು, ಗೃಹಾಲಂಕಾರಿಕ ವಸ್ತುಗಳ ಸಂಗ್ರಹವೂ ಇಲ್ಲಿ ಲಭ್ಯವಾಗಿದ್ದವು. ಈ ಕುರಿತಂತೆ ಮಾತನಾಡಿದ ವ್ಯಾಪಾರಿ, "ಕಂಚಿನ ವಸ್ತುಗಳಿಗೆ ಬೇಡಿಕೆ ಹೆಚ್ಚಿದೆ. ಬೆಂಗಳೂರು ಉತ್ಸವ ನಮಗೆ ಉತ್ತಮ ವೇದಿಕೆ ಒದಗಿಸಿಕೊಟ್ಟಿದೆ,” ಎಂದರು.

ಗ್ರಾಮೀಣ ಪ್ರದೇಶಗಳ ಜಾತ್ರೆಗಳಂತೆಯೇ ಇರುತ್ತವೆ ಬೆಂಗಳೂರಿನ ಈ ಹಬ್ಬಗಳು. ನಗರದ ಜನತೆಗೆ ಒಂದು ದಿನ ಆರಾಮಾಗಿ ಕಾಲ ಕಳೆದು ವಿಶಿಷ್ಟ ಕಲಾಕೃತಿಗಳ ಶಾಪಿಂಗ್ ಮಾಡಲು ಈ ಹಬ್ಬಗಳು ನೆರವಾಗುತ್ತಿವೆ. ಆಯೋಜಕರು ವ್ಯಾಪಾರದ ಉದ್ದೇಶದಿಂದ ಈ ಹಬ್ಬ ಆಚರಿಸಿದರೂ, ಕೆಲವು ಅಪರೂಪದ ಕಲಾವಿದರಿಗೆ ತಮ್ಮ ಕಲೆಯ ಪ್ರದರ್ಶನಕ್ಕೆ ವೇದಿಕೆಯಾಗಿಯೂ ಪರಿಣಮಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಚಿತ್ರ: ‘ಪೆಬಲ್ ಆರ್ಟ್‌’ ಕಲಾವಿದರಾದ ಪ್ರಿಯಾಂಕ ಮತ್ತು ಸಹನಾ

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More