ಬಿಜೆಪಿಯ ಮಹಿಳಾ ರಾಜಕಾರಣಿಗಳೂ ಸಂವೇದನೆ ಕಳೆದುಕೊಂಡರೇ?

ಮಹಿಳಾ ರಾಜಕಾರಣಿಗಳು ಮಹಿಳೆಯರ ನೋವಿಗೆ ಸ್ಪಂದಿಸುತ್ತಾರೆ ಎನ್ನುವ ನಿರೀಕ್ಷೆ ಈ ಬಾರಿ ಹುಸಿಯಾಗಿದೆ. ಹೆಚ್ಚು ಮಹಿಳೆಯರಿಗೆ ಉನ್ನತ ಸ್ಥಾನಗಳನ್ನು ಕಲ್ಪಿಸಿದ ಹೆಮ್ಮೆ ಪ್ರಕಟಿಸುವ ಬಿಜೆಪಿಯೇ ಈಗ ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳನ್ನು ಪೋಷಿಸುವ ಆರೋಪ ಎದುರಿಸುತ್ತಿರುವುದು ವಿಪರ್ಯಾಸ

ಕಟುವಾ ಮತ್ತು ಉನ್ನಾವ್‌ನ ಅತ್ಯಾಚಾರ ಪ್ರಕರಣಗಳು ಕಳೆದೊಂದು ವಾರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬಹಳ ಸುದ್ದಿ ಮಾಡಿದ ವಿಚಾರಗಳು. ಪ್ರಕರಣದ ಸಂತ್ರಸ್ಥರಾಗಿರುವ ಯುವತಿ ಹಾಗೂ ಬಾಲಕಿ ಬಗ್ಗೆ ಸಂವೇದನಾರಾಹಿತ್ಯವಾಗಿ ನಡೆದುಕೊಂಡಿರುವ ಬಿಜೆಪಿಯ ಸಂಸದರ ಬಗ್ಗೆ ಪುಟಗಟ್ಟಲೆ ವರದಿ ಆಗಿಹೋಗಿದೆ. ಪ್ರಮುಖ ಪಕ್ಷಗಳ ನಾಯಕರು- ಅದು ರಾಹುಲ್ ಗಾಂಧಿ ಅವರಾಗಲೀ ಅಥವಾ ನರೇಂದ್ರ ಮೋದಿಯೇ ಆಗಿರಲಿ- ಈ ಪ್ರಕರಣದಲ್ಲಿ ಪ್ರತಿಕ್ರಿಯೆ ನೀಡಲು ತಡ ಮಾಡಿರುವುದು ಮತ್ತು ಮೌನ ವಹಿಸಿರುವ ಬಗ್ಗೆಯೂ ಬರೆಯಲಾಗಿದೆ. ಆದರೆ, ಈ ಸಂಪೂರ್ಣ ಪ್ರಕರಣದಲ್ಲಿ ನಿಜಕ್ಕೂ ವೇದನೆ ಪಡಬೇಕಾದ ಒಂದು ವಿಚಾರವೆಂದರೆ, ಮಹಿಳಾ ಜನಪ್ರತಿನಿಧಿಗಳು ತೋರಿಸಿರುವ ನೀರವ ಮೌನ.

ಕೆಲ ವರ್ಷಗಳ ಹಿಂದೆ ದೇಶ ನಿರ್ಭಯಾ ಎನ್ನುವ ಯುವತಿಯ ಕ್ರೂರ ಅತ್ಯಾಚಾರಕ್ಕೆ ಮರುಗಿದಾಗ ಸೋನಿಯಾ ಗಾಂಧಿ ಸ್ವತಃ ಆ ಯುವತಿಯ ಹೆತ್ತವರಿಗೆ ಸಾಂತ್ವನ ಹೇಳಿದ್ದರು. ಮಹಿಳೆಯರ ಮೇಲಿನ ಅತ್ಯಾಚಾರದ ವಿರುದ್ಧ ಇಂದು ನಿರ್ಭಯರ ತಾಯಿ ಧ್ವನಿ ಎತ್ತಲು ಧೈರ್ಯ ಕೊಟ್ಟಿದ್ದೇ ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳು ನೀಡುವ ಅಂತಹ ಧೈರ್ಯ. ಆಗ ಬಿಜೆಪಿಯ ಬಹಳಷ್ಟು ಮಹಿಳಾ ರಾಜಕಾರಣಿಗಳು ಸಂತ್ರಸ್ತೆಯ ಪರವಾಗಿ ಧ್ವನಿ ಎತ್ತಿದ್ದರು. ಪಕ್ಷಾತೀತವಾಗಿ ಮಹಿಳಾ ರಾಜಕಾರಣಿಗಳು, ದೇಶದಲ್ಲಿ ಮಹಿಳಾ ಸುಭದ್ರತೆಗಾಗಿ ಕರೆ ಕೊಟ್ಟು ಸಂಸತ್ತಿನಲ್ಲಿ ಬಾಷಣಗಳನ್ನು ಮಾಡಿ, ಅತ್ಯಾಚಾರಕ್ಕೆ ಸಂಬಂಧಿಸಿ ಹೊಸ ಕಾಯ್ದೆಯನ್ನೇ ತರಲು ಸರ್ಕಾರದ ಮೇಲೆ ಒತ್ತಡ ಹೇರಿದರು. ಹಾಗೆಯೇ ಉನ್ನಾವ್ ಮತ್ತು ಕಟುವಾದ ಯುವತಿ ಮತ್ತು ಬಾಲಕಿ ಕುಟುಂಬಕ್ಕೂ ಇದೇ ರೀತಿಯ ಸಾಂತ್ವನ ಆಡಳಿತ ಪಕ್ಷಗಳಿಂದ ಅಗತ್ಯವಿತ್ತು. ಆದರೆ, ಅವರಿಗೆ ಅದು ಸಿಗಲಿಲ್ಲ. ಬದಲಾಗಿ, ಉನ್ನಾವ್‌ನ ಯುವತಿಯ ತಂದೆ ಸಾವನ್ನಪ್ಪಿದರು ಮತ್ತು ಕಟುವಾದ ಬಾಲಕಿಯ ಶವಸಂಸ್ಕಾರಕ್ಕೆ ಭೂಮಿ ಕೊಡಲೂ ಪ್ರಭಾವಿಗಳು ನಿರಾಕರಿಸಿದರು. ನಿರ್ಭಯಾ ಪ್ರಕರಣ ಅಥವಾ ನಂತರ ದಾಖಲಾದ ಹಲವು ಲೈಂಗಿಕ ಹಲ್ಲೆಗಳು ಮತ್ತು ಕೊಲೆಗಳಲ್ಲಿ ಸುಮ್ಮನಿದ್ದು, ಈ ಬಾರಿ ಮಾತ್ರ ತೀವ್ರವಾದ ಧ್ವನಿಯಲ್ಲಿ ದೇಶದ ಪತ್ರಕರ್ತರು, ಮಾಧ್ಯಮಗಳು, ಮಹಿಳೆಯರು ಧ್ವನಿ ಎತ್ತುತ್ತಿದ್ದಾರೆ ಎಂದರೆ, ಆಡಳಿತ ಪಕ್ಷ ಈ ಸಂತ್ರಸ್ತರ ಮೇಲೆ ತೋರಿಸಿದ ಅತೀವ ನಿರಾಕರಣೆಯ ನೋಟವೇ ಮುಖ್ಯ ಕಾರಣ.

ರಾಜಕೀಯದಲ್ಲಿ ಮಹಿಳೆಯರಿಗೆ ಧ್ವನಿ ಇದ್ದರೂ ಅದು ಆದೇಶ ಪಾಲನೆಯನ್ನು ಜನರಿಗೆ ತಿಳಿಸಲಷ್ಟೇ ಸೀಮಿತವಾಗಿರುತ್ತದೆ ಎನ್ನುವುದು ಉನ್ನಾವ್ ಮತ್ತು ಕಟುವಾ ಪ್ರಕರಣಗಳಲ್ಲಿ ನಿಜವಾಗಿದೆ. ರಾಜಕೀಯದಲ್ಲಿ ಮಹಿಳೆಯರು ಅತಿ ಕಡಿಮೆ ಸಂಖ್ಯೆಯಲ್ಲಿದ್ದಾರೆ ಮತ್ತು ಅವರಿಗೆ ಶೇ.೩೩ರಷ್ಟು ಮೀಸಲಾತಿ ಸಿಗಬೇಕು ಎಂದು ಬಹಳ ವರ್ಷಗಳ ಕೂಗನ್ನು ಇಂದಿಗೂ ಕೇಂದ್ರದ ಆಡಳಿತ ಪಕ್ಷಗಳು ನೆರವೇರಿಸಿಲ್ಲ. ಕಾಂಗ್ರೆಸ್ ಪಕ್ಷದ ಮುಖ್ಯಸ್ಥರು ವಿರೋಧ ಪಕ್ಷದಲ್ಲಿರುವಾಗ ಶೇ.೩೩ ಮೀಸಲಾತಿಗಾಗಿ ಹೋರಾಡಿದ್ದರು; ಆದರೆ ಯುಪಿಎ ಅಧಿಕಾರದಲ್ಲಿದ್ದಾಗ ಇದು ಮಸೂದೆಯಾಗಲಿಲ್ಲ! ರಾಜಕೀಯ ಪಕ್ಷಗಳಲ್ಲಿರುವ ಬೆರಳೆಣಿಕೆಯ ಮಹಿಳೆಯರೂ ತಮ್ಮ ನಾಯಕರ ಧ್ವನಿಯನ್ನು ಕೇಳಿದ ನಂತರವೇ ತಾವು ಧ್ವನಿ ಎತ್ತಬೇಕು ಎನ್ನುವ ಮೊದಲ ಪಾಠವನ್ನು ಚೆನ್ನಾಗಿಯೇ ಕಲಿತಿರುತ್ತಾರೆ.

ಅಲ್ಲವೇ ಮತ್ತೆ? ಕಟುವಾ ಮತ್ತು ಉನ್ನಾವ್ ಬಗ್ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ ಅವರು ಈ ವಿಷಯವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂದೇ ಅಭಿಪ್ರಾಯಪಟ್ಟರು. ದೇಶದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಅವರು ತಮ್ಮ ಇಲಾಖೆಗೆ ಸಂಬಂಧಪಡದ ವಿಚಾರಗಳಲ್ಲಿಯೂ ಪಕ್ಷ ಆದೇಶಿಸಿದಾಗ ಟ್ವೀಟ್ ಮಾಡುತ್ತಾರೆ ಮತ್ತು ಪತ್ರಿಕಾಗೋಷ್ಠಿಗಳನ್ನೂ ಮಾಡುತ್ತಾರೆ. ಆದರೆ ಇತ್ತೀಚೆಗಿನ ಅತ್ಯಾಚಾರ ಪ್ರಕರಣಗಳ ಬಗ್ಗೆ ದೇಶವೇ ಮಾತನಾಡುತ್ತಿದ್ದರೂ ಅವರು ಮೌನವಾಗಿದ್ದಾರೆ. ನಿರ್ಭಯ ಪ್ರಕರಣದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಗಳು, ಪ್ರತಿಭಟನೆಗಳ ಮೂಲಕ ವಿರೋಧಿಸಿದ್ದ ಮತ್ತು ಸಂಸತ್ತಿನಲ್ಲಿ ಪ್ರಬಲ ಭಾಷಣವನ್ನು ಮಾಡಿದ ಬಹಳ ಮಾತೃ ಹೃದಯದವರು ಎಂದೇ ಜನಪ್ರಿಯವಾಗಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಈ ಬಾರಿ ಮಾತ್ರ ಅದೇಕೋ ಮೌನ ವ್ರತವೇ ಉತ್ತಮ ಎಂದುಕೊಂಡಿದ್ದಾರೆ. ಪ್ರತಿಯೊಂದು ವಿಷಯಗಳಲ್ಲೂ ಬಹಳ ಪ್ರತಿರೋಧದಲ್ಲಿ ಮಾತನಾಡುವ ಬಿಜೆಪಿ ವಕ್ತಾರರಾಗಿರುವ ಮೀನಾಕ್ಷಿ ಲೇಖಿ, ವಿರೋಧ ಪಕ್ಷಗಳು ಅತ್ಯಾಚಾರ ಪ್ರಕರಣವನ್ನು ರಾಜಕೀಯಗೊಳಿಸುತ್ತಿವೆ ಎಂದು ದೂರಿದರೇ ವಿನಾ, ಸಂತ್ರಸ್ತರ ಅಳಲನ್ನು ಕೇಳಲು ಪ್ರಯತ್ನಿಸಲಿಲ್ಲ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ದೇಶದ ಸಾಕ್ಷಿಪ್ರಜ್ಞೆಯನ್ನು ಮತ್ತೊಮ್ಮೆ ಬಡಿದೆಬ್ಬಿಸಿದ ಆಸಿಫಾ

ಪ್ರಧಾನಿ ನರೇಂದ್ರ ಮೋದಿಯವರು ಬಹಳ ಒತ್ತಡದ ಬಳಿಕ ಈ ಅತ್ಯಾಚಾರ ಪ್ರಕರಣಗಳನ್ನು ವಿರೋಧಿಸಿದ ಮೇಲೆ ಬಿಜೆಪಿಯ ಇಬ್ಬರು ಮಹಿಳೆಯರು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದು; ಮನೇಕಾ ಗಾಂಧಿ ಮತ್ತು ಹೇಮಾಮಾಲಿನಿ ಕಟುವಾದ ಅತ್ಯಾಚಾರಿಗಳಿಗೆ ನೇಣು ಶಿಕ್ಷೆಯಾಗಬೇಕು ಎಂದಿದ್ದಾರೆ. ಅಲ್ಲದೆ, ಬಾಲಕಿಯ ಮೇಲೆ ಅತ್ಯಾಚಾರ ನಡೆಸುವಂತಹ ಕ್ರೂರಿಗಳು ನೇಣಿಗೆ ಅರ್ಹರಾಗಿರುವ ಕಾರಣ ಕಾನೂನು ಬದಲಾಗಬೇಕು ಎಂದಿದ್ದಾರೆ. ಆದರೆ, ಇದೇ ಮಾತು ಎರಡು ದಿನಗಳ ಹಿಂದೆ ಯಾಕೆ ಇವರಿಂದ ಬಂದಿಲ್ಲ? ಬಿಜೆಪಿಯ ಮಹಿಳಾ ಸಂಸದರು ಇಷ್ಟೊಂದು ಕಟುಹೃದಯದವರೇ? ಒಬ್ಬ ಬಾಲಕಿಯ ಕ್ರೂರ ಸಾವಿಗೆ ಅವರ ಹೃದಯ ಕರಗಿಲ್ಲವೇ? ಅಥವಾ ರಾಜಕೀಯದ ಕಟು ಧೋರಣೆಗಳು ಮೃದು ಹೃದಯವನ್ನೂ ಕಠೋರವಾಗಿಸಿಬಿಡುತ್ತದೆಯೇ?

ಹೀಗೆ ರಾಜಕೀಯ ಪಕ್ಷಗಳ ಮಹಿಳೆಯರು ತಮ್ಮ ಸ್ವಂತ ಅಭಿಪ್ರಾಯವನ್ನು ಬದಿಗಿಟ್ಟು ತಮ್ಮ ಪಕ್ಷದ ಆದೇಶವನ್ನು ಮಾತ್ರ ಪಾಲಿಸುವುದಾದಲ್ಲಿ ರಾಜಕೀಯದಲ್ಲಿ ಶೇ.೩೩ ಮೀಸಲಾತಿ ಇರುವುದು ಅಥವಾ ನಾಲ್ವರು ಮಹಿಳೆಯರು ಮಾತ್ರ ರಾಜಕೀಯದಲ್ಲಿರುವುದರ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ. ಸ್ವಂತಿಕೆ ಇಲ್ಲದೆ, ತಮ್ಮ ಮೇಲಿನ ಸ್ಥಾನದಲ್ಲಿರುವವರು ತೋರಿಸುವ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವ ವ್ಯಕ್ತಿಗಳು ಯಾವ ಕ್ಷೇತ್ರದಲ್ಲಿದ್ದರೂ ಅಭಿಪ್ರಾಯಶೂನ್ಯರಾಗಿಯೇ ಇರುತ್ತಾರೆ. ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ಕೊಟ್ಟು ‘ಬೇಟಿ ಬಚಾವೋ’ ಆಂದೋಲನದಿಂದ ಬದಲಾವಣೆ ತರುವ ಭರವಸೆ ನೀಡಿದ ಪಕ್ಷವೇ ಇಂದು ಅತ್ಯಾಚಾರಿಗಳನ್ನು ಪೋಷಿಸುವ ಆರೋಪವನ್ನು ಎದುರಿಸುತ್ತಿದೆ. ಮಹಿಳಾ ಭದ್ರತೆಗೆ, ಮಹಿಳೆಗೆ ಅನ್ಯಾಯವಾದಾಗ ನೆರವಾಗಬೇಕಿದ್ದ ಆ ಪಕ್ಷದ ಮಹಿಳೆಯರು ಇದನ್ನು ಕಂಡೂ ಮೌನವಾಗಿದ್ದಾರೆ. ಇಂತಹ ಮಹಿಳಾ ಸ್ವಾವಲಂಬನೆಯಿಂದ ಏನು ಪ್ರಯೋಜನ? ಇಂತಹ ಮಹಿಳೆಯರು ಸಂಸತ್ತಿನಲ್ಲಿ ಕೂರುವುದರಿಂದ ಮಹಿಳಾ ಸಬಲೀಕರಣ ಆಗುತ್ತದೆ ಎಂದು ನಂಬುವುದು ಕಷ್ಟ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More