ಸಮಾಧಾನ | ಪದೇಪದೇ ಪ್ರಜ್ಞೆತಪ್ಪಿ ಬೀಳುತ್ತಿದ್ದ ಸಂಯುಕ್ತಳನ್ನು ಕಾಡಿದ್ದೇನು?

“ಇದ್ದಕ್ಕಿದ್ದ ಹಾಗೆ ಭಯ ಆಗುತ್ತೆ. ಯಾರೋ ನನ್ನ ಹಿಡಿದುಕೊಂಡ ಹಾಗೆ ಆಗುತ್ತೆ. ತಲೆ ಸುತ್ತಿದ ಹಾಗೆ ಅಗತ್ತೆ. ಆಮೇಲೆ ನನಗೆ ಪ್ರಜ್ಞೆ ಇರೋಲ್ಲ. ಯಾರು ಏನು ಮಾಡಿದರು ಅಂತ ತಿಳಿಯೋಲ್ಲ. ಪ್ರಜ್ಞೆ ಬಂದಮೇಲೆ, ಒಂದು ಥರಾ ಸುಸ್ತಾಗತ್ತೆ ಅಷ್ಟೆ,” ಎಂದಿದ್ದ ಸಂಯುಕ್ತ ಕೊನೆಗೂ ಗುಣಮುಖ ಆದಳು

“ಇವಳು ಸಂಯುಕ್ತ. ನಮ್ಮ ಕೊನೆಯ ಮಗಳು. ಕೇಂದ್ರೀಯ ವಿದ್ಯಾಲಯದಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದಾಳೆ. ಎವರೇಜ್ ಸ್ಟೂಡೆಂಟು. ಸ್ಪೋರ್ಟ್ಸ್‌ನಲ್ಲಿ ಆಸಕ್ತಿ. ಅಥ್ಲೆಟಿಕ್ಸ್‌ನಲ್ಲಿ ಬಹುಮಾನಗಳನ್ನು ಪಡೆದಿದ್ದಾಳೆ. ಆರೋಗ್ಯವಂತ ಹುಡುಗಿ. ಕಳೆದ ಎರಡು ತಿಂಗಳಿಂದ ಆಗಾಗ ಪ್ರಜ್ಞೆತಪ್ಪಿ ಬೀಳುತ್ತಾಳೆ. ಮೊದಲ ಸಲ ಬಿದ್ದದ್ದು ಸ್ಕೂಲ್‌ನಲ್ಲೇ. ಕ್ಲಾಸ್ ರೂಂನಲ್ಲಿದ್ದಾಗ ‘ತಲೆಸುತ್ತು ಹೆಂಗೆಗೋ ಆಗ್ತಿದೆ’ ಅಂದಳಂತೆ. ಸ್ಟಾಫ್‌ರೂಮಿಗೆ ಅವಳನ್ನು ಕರೆದೊಯ್ದು ಮಲಗಿಸಿದ್ದಾರೆ. ಮಾತಾಡಲಿಲ್ಲ, ಪ್ರಜ್ಞೆ ಇರಲಿಲ್ಲವಂತೆ. ಡಾಕ್ಟರಿಗೆ ಫೋನ್ ಮಾಡಿ, ನಮಗೂ ಫೋನ್ ಮಾಡಿದರು. ನಾವು ಹೋಗುವಷ್ಟರಲ್ಲಿ ಡಾಕ್ಟರು ಬಂದು ನೋಡಿ, ಒಂದು ಇಂಜೆಕ್ಷನ್ ಕೊಟ್ರಂತೆ. ಇಂಜೆಕ್ಷನ್ ಕೊಡುವಾಗ ನೋವು ಅಂತ ನರಳಿದಳಂತೆ. ನಮ್ಮನ್ನು ನೋಡಿದ ಡಾಕ್ಟರು ‘ಈ ರೀತಿ ಹಿಂದೆ ಯಾವಾಗಲಾದರೂ ಆಗಿತ್ತಾ? ಚಿಕ್ಕಂದಿನಲ್ಲಿ ಅವಳಿಗೆ ಪಿಟ್ಸ್‌ ಬಂದಿತ್ತಾ?’ ಅಂತ ಕೇಳಿದರು. ನಾವು ಇಲ್ಲ ಎಂದೆವು. ‘ಜ್ವರ ಇಲ್ಲ, ಬೇರಾವ ರೋಗ ಲಕ್ಷಣಕಾಣ್ತಿಲ್ಲ, ಹೆದರಿಕೋಬೇಡಿ,’ ಎಂದು ನಾಲ್ಕು ಮಾತ್ರೆ ಕೊಟ್ಟು, ‘ಪ್ರತಿದಿನ ಒಂದು ಮಾತ್ರೆ ಕೊಡಿ. ಇನ್ನೊಂದು ಸಲ ಹೀಗೇನಾದರೂ ಬಂದರೆ ನನ್ನನ್ನೋ ಅಥವಾ ನಿಮ್ಮ ಪರಿಚಯದ ವೈದ್ಯರನ್ನೋ ಕಾಣಿ’ ಎಂದರು.”

“ಇವಳನ್ನು ಮನೆಗೆ ಕರೆತಂದೆವು. ಆ ದಿನವೆಲ್ಲ ನೋವು, ಸುಸ್ತು ಅಂತ ಹೇಳಿ ಮಲಗಿ ನಿದ್ರೆ ಮಾಡಿದಳು. ಮೂರು ದಿನ ಚೆನ್ನಾಗಿದ್ದಳು. ಆಮೇಲೆ ಮತ್ತೊಂದು ಸಲ ಪ್ರಜ್ಞೆತಪ್ಪಿ ಬಿದ್ದಳು. ಆಟದ ಮೈದಾನದಲ್ಲಿ ಸ್ನೇಹಿತೆಯರು ಆಡೋದನ್ನು ನೋಡಿಕೊಂಡು ಕೂತಿದ್ದದಳು, ಕಣ್ಣು ತೇಲಿಸಿ ಪಕ್ಕಕ್ಕೆ ಉರುಳಿಕೊಂಡಳಂತೆ. ಅವಳ ಜೊತೆಯವರು ಇವಳ ಕ್ಲಾಸ್ ಟೀಚರನ್ನು ಕರೆದಿದ್ದಾರೆ. ಅವರು ನಮಗೆ ಫೋನ್ ಮಾಡಿದರು. ನಾವು ಹೋಗುವ ವೇಳೆಗೆ ಎದ್ದು ಕುಳಿತಿದ್ದಳು. ಟೀಚರ್‌ ತರಿಸಿಕೊಟ್ಟ ಕಾಫಿ ಕುಡಿದಿದ್ದಳು. ‘ಸುಸ್ತು, ತಲೆ ಚಕ್ಕರ್‌’ ಎಂದಳು. ಅವಳನ್ನು ನೇರವಾಗಿ ನಮ್ಮ ಪ್ಯಾಮಿಲಿ ಡಾಕ್ಟರ್ ಬಳಿಗೆ ಕರೆದೊಯ್ದೆವು. ಅವರು ಪರೀಕ್ಷೆ ಮಾಡಿ, ‘ಏನೂ ತೊಂದರೆ ಕಾಣ್ತಿಲ್ಲ. ಎರಡನೇ ಸಲ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ. ನ್ಯೂರಾಲಜಿ ಡಾಕ್ಟರನ್ನು ಕಾಣಿ’ ಅಂತ ಡಾ.ಸಂಜೀವ್ ಎನ್ನೋ ನ್ಯೂರಾಲಜಿಸ್ಟ್‌ಗೆ ಬರೆದುಕೊಟ್ಟರು. ಅಪಾಯಿಂಟ್‌ಮೆಂಟ್‌ ತೆಗೆದುಕೊಂಡು ಅವರನ್ನು ಕಂಡೆವು. ಅವರು ಸ್ಕ್ಯಾನಿಂಗ್‌ ಮಾಡಿಸಿ ಎಂದರು. ನಾರ್ಮಲ್ ಎಂದಾಯಿತು. ‘ಇದು ಫಿಟ್ಸ್‌ ರೀತಿ ಕಾಣೋಲ್ಲ. ಮತ್ತೊಂದು ಸಲ ಬಂದರೆ, ಬನ್ನಿ’ ಎಂದರು. ಮತ್ತೆ ಒಂದು ವಾರ ಚೆನ್ನಾಗಿದ್ದಳು. ಆಮೇಲೆ ಒಂದು ದಿನ ಶಾಲೆಗೆ ಹೋಗುವ ಸಮಯಕ್ಕೆ ಹಾಗೇ ಆಯಿತು. ಸ್ಕೂಲ್ ವ್ಯಾನ್ ಕಾಯುತ್ತ ಕುಳಿತವಳು ಇದ್ದಕ್ಕಿದ್ದಂತೆ ಒಳಬಂದು, ‘ತಲೆ ಸುತ್ತುತಾ ಇದೆ’ ಎಂದಳು. ಮಲಗಿಸಿದೆವು. ಮಾತಿಲ್ಲ. ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡಿದ್ದಳು. ‘ಬಿಡು ಬಿಡು’ ಎಂದು ಕೂಗಿದ್ದಳು. ನಮ್ಮ ಪ್ರಶ್ನೆಗಳಿಗೆ ಅವಳು ಉತ್ತರಿಸಲಿಲ್ಲ. ಕೈಗಳನ್ನು ಬಿಗಿಯಾಗಿ ಮುಷ್ಟಿ ಹಿಡಿದಿದ್ದಳು. ಸ್ಪಲ್ಪ ಹೊತ್ತಿನ ನಂತರ ಎದ್ದು ಕುಳಿತಳು,”

“ನನಗೇನಾಯಿತು? ನಾನೇಕೆ ಇನ್ನೂ ಮನೆಯಲ್ಲಿದ್ದೇನೆ?’ ಎಂದು ಕೇಳಿದಳು. ಡಾ.ಸಂಜೀವ್ ಅವರ ಅಪಾಯಿಂಟ್‌ಮೆಂಟ್ ಮೂರನೇ ದಿನ ಸಿಕ್ಕಿತು. ವಿವರಗಳನ್ನು ತಿಳಿದ ಅವರು, ‘ಇದು ಖಂಡಿತ ಫಿಟ್ಸ್‌ ಅಲ್ಲ. ನೀವು ಇವಳನ್ನು ಮನೋವೈದ್ಯರಲ್ಲಿಗೆ ಕರೆದೊಯ್ಯಿರಿ’ ಎಂದರು. ‘ಏಕೆ, ಇದೇನು ಹುಚ್ಚು ಕಾಯಿಲೆಯೇ?’ ಎಂದೆವು. ಅವರು ನಕ್ಕು, ‘ಹುಚ್ಚಲ್ಲಮ್ಮ. ಏನೋ ಟೆನ್‌ಶನ್. ಕಹಿ ಅನುಭವದಿಂದ ಈ ರೀತಿ ಅಟ್ಯಾಕ್ ಬರುತ್ತೆ. ಮನೋವೈದ್ಯರು ವಿಚಾರಿಸಿ ಪತ್ತೆ ಮಾಡುತ್ತಾರೆ’ ಎಂದರು. ನಮಗೇಕೋ ಮನೋವೈದ್ಯರ ಬಳಿಗೆ ಹೋಗಲು ಮನಸ್ಸಾಗಲಿಲ್ಲ. ಅವರಿವರ ಮಾತು ಕೇಳಿಕೊಂಡು ಆಯುರ್ವೇದ, ಹೋಮಿಯೋಪತಿ ವೈದ್ಯರನ್ನೂ ಕಂಡೆವು. ಅಟ್ಯಾಕ್ಸ್ ಬರೋದು ನಿಲ್ಲೋದು, ಮತ್ತೆ ಬರೋದು ವಾರಕ್ಕೆ ಒಂದು ಅಥವಾ ಎರಡು ಸಲ ಆಗೋಕೆ ಶುರುವಾಯ್ತು. ಯಾರೋ ‘ಇದು ದುಷ್ಟ ಶಕ್ತಿ, ನೆಗೆಟಿವ್ ಎನರ್ಜಿ ಕಾಟ ಇರಬೇಕು’ ಎಂದರು. ಆಂಜನೇಯನ ದೇವಸ್ಥಾನದ ಪೂಜಾರರಿಂದ ತಾಯಿತ ಕಟ್ಟಿಸಿದೆವು. ಅಣ್ಣಮ್ಮದೇವಿಗೆ ಹರಕೆ ಹೊತ್ತೆವು. ಅಟ್ಯಾಕ್ ನಿಂತಿಲ್ಲ. ಮೊನ್ನೆ ಕೂಡ ಆಯಿತು. ಈ ಎರಡು ತಿಂಗಳಿಂದ ಅವಳು ಸ್ಕೂಲಿಗೆ ಸರಿಯಾಗಿ ಹೋಗಿಲ್ಲ. ಚಿಂತೆ ಮಾಡ್ತಾಳೆ. ‘ಅವಳು ಗುಣವಾದ ಮೇಲೆ ಕಳುಹಿಸಿ. ಬೇರೆ ಹುಡುಗಿಯರಿಗೆ ಹೆದರಿಕೆ ಆಗತ್ತೆ’ ಅಂತಾರೆ ಟೀಚರ್ಸ್‌. ಕೊನೆಗೆ ನಿಮ್ಮನ್ನು ನೋಡಲು ನಮ್ಮ ಚಿಕ್ಕಪ್ಪ ಹೇಳಿದರು...” ಎಂದರು ಕಾತ್ಯಾಯಿನಿ.

“ಸಂಯುಕ್ತ, ನಿನಗೆ ಏನೋ ಒಂದು ರೀತಿಯ ಅಟ್ಯಾಕ್ ಬರುತ್ತೆ. ಆಗ ನಿನಗೆ ಪ್ರಜ್ಞೆ ಇರುವುದಿಲ್ಲವಂತೆ ಹೌದಾ?”

“ಹೌದು ಸಾರ್, ಇದ್ದಕ್ಕಿದ್ದ ಹಾಗೆ ಏನೋ ಒಂದು ಥರ ಭಯ ಆಗುತ್ತೆ. ಯಾರೋ ನನ್ನ ಹಿಡಿದುಕೊಂಡ ಹಾಗೆ ಆಗುತ್ತೆ. ತಲೆ ಸುತ್ತಿದ ಹಾಗೆ ಅಗತ್ತೆ. ಆಮೇಲೆ ನನಗೆ ಪ್ರಜ್ಞೆ ಇರೋಲ್ಲ. ಯಾರು ಏನು ಮಾಡಿದರು ಅಂತ ತಿಳಿಯೋಲ್ಲ. ಪ್ರಜ್ಞೆ ಬಂದಮೇಲೆ, ಒಂದು ಥರಾ ಸುಸ್ತಾಗತ್ತೆ ಅಷ್ಟೆ. ಅಮೇಲೆ ಚೆನ್ನಾಗಿರ್ತೇನೆ.”

“ನಿನ್ನ ಸ್ಕೂಲ್‌ ಹೇಗಿದೆ? ನಿನ್ನ ಜೊತೆ ಹುಡುಗ-ಹುಡುಗಿಯರು ಹೇಗೆ? ಟೀಚರ್ಸ್‌ ಹೇಗೆ?”

“ಸ್ಕೂಲ್‌ ಚೆನ್ನಾಗಿದೆ. ಎಲ್ಲ ಟೀಚರ್ಸ್‌ ಚೆನ್ನಾಗಿ ಪಾಠ ಹೇಳ್ತಾರೆ. ಡೌಟ್ಸ್‌ ಕೇಳಿದರೆ ಬೇಜಾರು ಮಾಡಿಕೊಳ್ಳದೆ ಉತ್ತರಿಸ್ತಾರೆ- ಒಬ್ಬರನ್ನು ಬಿಟ್ಟು.”

“ಯಾರವರು?”

“ಸೈನ್ಸ್‌ ಟೀಚರ್‌. ಯಾವಾಗಲೂ ಮುಖ ಗಂಟು ಹಾಕಿಕೊಂಡಿರ್ತಾರೆ. ಸ್ಟೂಡೆಂಟ್ಸ್‌ಗಳಿಗೆ ಅವರನ್ನು ಕಂಡರೆ ಆಗೋಲ್ಲ. ಡೌಟ್ಸ್‌ ಕೇಳಿದರೆ ಹೋಗಿಬಿಡ್ತಾರೆ.”

“ಹೋಗ್ಲಿ ಬಿಡು, ಪಾಪ, ಆ ಟೀಚರ್‌ಗೆ ಏನೋ ಕಷ್ಟ ಇರಬೇಕು.”

“ಹೌದು ಸಾರ್, ಅವರಿಗೂ ಅವರ ಹಸ್ಬೆಂಡ್‌ಗೂ ಜಗಳ ಅಂತೆ. ಕೋರ್ಟ್‌ಗೆ ಹೋಗಿದ್ದಾರಂತೆ...”

“ನಿಮ್ಮ ಶಾಲೆಯಲ್ಲಿ ನಿನಗೇನಾದರೂ ಮನಸ್ಸಿಗೆ ನೋವಾಗೋ ಘಟನೆ ಅಥವಾ ಸಂದರ್ಭ ಆಯಿತೇ? ಹೇಳು, ಮನಸ್ಸಿನಲ್ಲಿ ಕಹಿ ಅನುಭವವನ್ನು ಮುಚ್ಚಿಟ್ಟುಕೊಂಡರೆ ಮನಸ್ಸಿನೊಳಗೆ ಟೆನ್‌ಶನ್ ಸೃಷ್ಟಿಯಾಗುತ್ತೆ. ಟೆನ್‌ಶನ್‌ನಿಂದ ಕಾಯಿಲೆ ಬರತ್ತೆ. ಏಕಾಗ್ರತೆ ಇಲ್ಲದೆ ಸ್ಟಡೀಸ್‌ ಕಷ್ಟವಾಗುತ್ತೆ.”

“ನಾನು ಹೇಳೋ ವಿಷಯ ನಿಮ್ಮಲ್ಲೇ ಇರಲಿ. ಇದನ್ನು ನನ್ನ ಅಪ್ಪ-ಅಮ್ಮನಿಗೆ ಹೇಳಬಾರದು. ಬೇರೆಯವರಿಗೆ ಗೊತ್ತಾದರೆ, ನನ್ನನ್ನು ಕೊಂದುಬಿಡ್ತಾನೆ...”

“ಖಂಡಿತ ಹೇಳೋಲ್ಲ ಪ್ರಾಮಿಸ್‌. ಯಾರು ನಿನ್ನನ್ನು ಕೊಲ್ಲೋದಕ್ಕೆ ಧಮಕಿ ಹಾಕಿರೋ ಹುಡುಗ?”

“ರವಿ ಅಂತ. ನನ್ನ ಕ್ಲಾಸ್‌ಮೇಟ್‌. ಸ್ಮಾರ್ಟ್‌ ಆಗಿದ್ದಾನೆ. ಒಳ್ಳೇ ಸಿಂಗರ್.”

“ಅವನು ನಿನ್ನ ಯಾಕೆ ಕೊಲ್ತಾನಂತೆ?”

“ಅವನು… ಅವನು ಒಂದು ದಿನ… ಲೈಬ್ರರಿ ಹತ್ತಿರ… ಸುತ್ತಮುತ್ತ ಯಾರೂ ಇರಲಿಲ್ಲ. ನನ್ನನ್ನು ತಬ್ಬಿ ಮುತ್ತು ಕೊಟ್ಟ. ‘ಐ ಲವ್ ಯು’ ಅಂತ ಹೇಳ್ದ. ಭಯ ಆಯ್ತು. ಯಾರಿಗೂ ಹೇಳಬೇಡ ಎಂದು ಹೆದರಿಸಿದ.”

“ಭಯ ಏಕೆ ಆಯ್ತು? ಯಾರಾದರೂ ನೋಡಿರ್ತಾರೆ ಅಂತಾನಾ?”

“ಅದೂ ಒಂದು ಭಯ. ಜೊತೆಗೆ ಅವನು ಮುತ್ತು ಕೊಟ್ಟಿದ್ದರಿಂದ ನನಗೆ ಕಾಯಿಲೆ ಬರಬಹುದು, ಏಡ್ಸ್‌ ಬರಬಹುದು ಅಂತಾನೂ ಭಯ...”

“ಮುತ್ತು ಕೊಟ್ರೆ ಏಡ್ಸ್‌ ಬರುತ್ತೆ ಅಂತ ಯಾರು ಹೇಳಿದರು?”

ಇದನ್ನೂ ಓದಿ : ಸಮಾಧಾನ | ಅಕ್ಷರಗಳನ್ನು ಸರಿಯಾಗಿ ಗುರುತಿಸದ ಮಕ್ಕಳ ಬಗ್ಗೆ ಚಿಂತೆ ಬೇಡ

“ಏಡ್ಸ್ ರೋಗದ ಬಗ್ಗೆ ಓದಿದೆ. ಅದರಲ್ಲಿ ಬರೆದಿದೆ. ಮುತ್ತು ಕೊಡುವುದರಿಂದಲೂ ಏಡ್ಸ್‌ ಬರಬಹುದು ಅಂತ. ಅದನ್ನು ನೆನೆಸಿಕೊಂಡರೆ ಸಾಕು, ತಲೆಸುತ್ತು ಬರುತ್ತೆ. ಕಣ್ಣು ಕತ್ತಲಾಗತ್ತೆ. ಪ್ರಜ್ಞೆ ತಪ್ಪತ್ತೆ. ಏಡ್ಸ್ ಬರೋದು ನಿಜಾನಾ ಸಾರ್‌? ರಕ್ತಪರೀಕ್ಷೆ ಮಾಡಿಸಿದರೆ ಏಡ್ಸ್‌ ಬಂದಿರುವುದು ತಿಳಿಯುತ್ತಂತೆ. ಆದರೆ, ಎಲ್ಲಿ ಮಾಡ್ಸೋದು? ಆಸ್ಪತ್ರೆಗೆ ಹೋಗಿ ಕೇಳೋಕೆ ಭಯ, ನಾಚಿಕೆ ಆಗತ್ತೆ...”

ಸಂಯುಕ್ತ ಮಾನಸಿಕಜನ್ಯ ರೋಗಕ್ಕೆ ಒಳಗಾಗಿದ್ದಳು. ಅವಳ ಭಯವನ್ನು ನಿವಾರಿಸಲಾಯಿತು. ಏಡ್ಸ್‌ ರೋಗ ಹೇಗೆ ಹರಡುತ್ತದೆ ಎಂದು ವಿವರಿಸಲಾಯಿತು. ಆಪ್ತ ಸಮಾಲೋಚನೆಯಿಂದ ಆಕೆಗೆ ಅಟ್ಯಾಕ್ ಬರುವುದು ನಿಂತಿತು.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More