ಮಾತು ಕೇಳದ ಪತ್ನಿ ಪಳಗಿಸಲು ವಿಡಿಯೋ ಸಲಹೆ ಕೊಟ್ಟು ಪೇಚಿಗೆ ಸಿಲುಕಿದ ಗುರೂಜಿ

ಪುರುಷಪ್ರಧಾನ ವ್ಯವಸ್ಥೆಯಲ್ಲಿ ಭಾರತೀಯ ನಾರಿ ಕುರಿತ ಲಿಂಗ ತಾರತಮ್ಯದ ಕಲ್ಪನೆಯನ್ನು ಶಿಷ್ಯರಿಗೆ ವಿವರಿಸಲು ಮುಂದಾದ ರವಿಶಂಕರ್ ಗುರೂಜಿ ಈಗ ಪೇಚಿಗೆ ಸಿಲುಕಿದ್ದಾರೆ. ಗುರೂಜಿ ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹಾಕಿರುವ ಪೋಸ್ಟ್ ಮಹಿಳೆಯರಿಂದ ತೀವ್ರ ಟೀಕೆಗೆ ಗುರಿಯಾಗಿದೆ

ಇತ್ತೀಚೆಗೆ ರವಿಶಂಕರ್ ಗುರೂಜಿ ತಮ್ಮ ಫೇಸ್‌ಬುಕ್ ಪುಟದಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ೨೧ನೇ ಶತಮಾನದಲ್ಲಿ ರವಿಶಂಕರ್ ಗುರೂಜಿ ಅವರು ತಮ್ಮ ‘ಭಾರತೀಯ ನಾರಿ’ಯ ಕಲ್ಪನೆಯನ್ನು ಮುಂದಿಟ್ಟು, ಆಕೆಯನ್ನು ನಿಭಾಯಿಸುವುದು ಹೇಗೆ ಎಂದು ಪತಿಯಂದಿರಿಗೆ ಸಲಹೆ ನೀಡಿದ್ದಾರೆ. ಈ ವಿಡಿಯೋ ರವಿಶಂಕರ್ ಗುರೂಜಿ ಪುಟದಲ್ಲಿ ೮೦೦೦ಕ್ಕೂ ಅಧಿಕ ಸಲ ಶೇರ್ ಆಗಿದೆ ಮತ್ತು ೨೧ ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಆದರೆ, ಮಹಿಳೆಯನ್ನು ಬಹಳ ಕೀಳಾಗಿ ಕಾಣುತ್ತಿರುವ ಬಗ್ಗೆ ಅದೇ ಫೇಸ್‌ಬುಕ್ ಪುಟದಲ್ಲಿ ಮಹಿಳೆಯರು ಮತ್ತು ಕೆಲವು ಪುರುಷರೂ ಕಮೆಂಟ್‌ ಮಾಡಿ, ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋದಲ್ಲಿ, ಆಗಷ್ಟೇ ಮದುವೆಯಾದ ಪುರುಷನೊಬ್ಬ ಗುರೂಜಿ ಬಳಿ ತನ್ನ ಕಷ್ಟ ಹೇಳಿಕೊಳ್ಳುತ್ತಾನೆ. “ಇಡ್ಲಿ ನನಗೆ ಇಷ್ಟವಿಲ್ಲ ಎಂದರೂ ನನ್ನ ಪತ್ನಿ ಅದನ್ನೇ ಮಾಡುತ್ತಾಳೆ. ನನಗೆ ಹಸಿರು ಅಂಗಿ ಇಷ್ಟವಿಲ್ಲ ಎಂದರೂ ಅದೇ ಬಣ್ಣದ ಉಡುಪನ್ನು ಹಾಕಲು ನನಗಾಗಿ ತೆಗೆದಿಡುತ್ತಾಳೆ. ನನ್ನ ಪತ್ನಿ ನಾನು ಹೇಳುವುದನ್ನು ಕೇಳುವುದೇ ಇಲ್ಲ,” ಎನ್ನುವುದು ಪತ್ನಿಯ ಮೇಲೆ ಆತನ ಆರೋಪ. ಗುರೂಜಿ ಆತನಿಗೆ ಕಿವಿಮಾತು ಹೇಳುತ್ತಾರೆ: “ನೀನು ಪತ್ನಿಗೆ ಇಂದು ಇಡ್ಲಿ ಮಾಡು ಎಂದು ಹೇಳು, ಆಕೆ ನಿನಗೆ ದೋಸೆ ಮಾಡಿಕೊಡುತ್ತಾಳೆ. ಹಸಿರು ಅಂಗಿ ಬೇಕು ಎಂದು ಹೇಳು, ಆಗ ಬೇರೆ ಬಟ್ಟೆ ತೆಗೆದಿಡುತ್ತಾಳೆ,” ಎನ್ನುವುದು ಗುರೂಜಿ ಸಲಹೆ!

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ರವಿಶಂಕರ್ ಹೇಳಿಕೆಗೆ ನೊಬೆಲ್ ಸಿಗುವುದಿಲ್ಲ ಎಂದು ಅಣಕಿಸಿದ ಟ್ವೀಟಿಗರು

ಈ ವಿಡಿಯೋ ಸಾವಿರಗಟ್ಟಲೆ ಲೈಕ್‌ಗಳು ಮತ್ತು ಶೇರ್‌ಗಳನ್ನು ಪಡೆದದ್ದು ನೋಡಿದರೆ ನವಭಾರತದಲ್ಲಿ ಮಹಿಳೆಯನ್ನು ನೋಡುವ ದೃಷ್ಟಿಕೋನ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ಊಹಿಸಬಹುದು. ೨೧ನೇ ಶತಮಾನದಲ್ಲಿ ಪತಿಗೆ ಪತ್ನಿ ಅಡುಗೆ ಮಾಡಿ ಬಡಿಸಬೇಕು, ಆತನಿಗೆ ಬೇಕಾದ ಬಟ್ಟೆಯನ್ನು ತೆಗೆದುಕೊಡಬೇಕು ಎನ್ನುವ ನಿರೀಕ್ಷೆಯೇ ಆಧುನಿಕ ಕಾಲಕ್ಕೆ ಒಗ್ಗದ ಕಲ್ಪನೆ ಮತ್ತು ಭಾರತೀಯ ಮಹಿಳೆಯರಿಗೆ ಮಾಡಿರುವ ಅವಮಾನ. ವಿದೇಶಗಳಲ್ಲೂ ಭಾರತೀಯ ಸಂಸ್ಕೃತಿಯನ್ನು ಹರಡುತ್ತಿದ್ದೇನೆ ಎಂದು ಹೇಳಿಕೊಳ್ಳುವ ರವಿಶಂಕರ್ ಗುರೂಜಿ ಅವರು ತಮ್ಮ ಭಕ್ತರಿಗೆ ಇಂತಹ ಉಪದೇಶವನ್ನು ನೀಡುತ್ತಾರೆಯೇ?

ಗುರೂಜಿ ಮಾತ್ರವಲ್ಲ, ಭಾರತದಲ್ಲಿ ಬಹಳಷ್ಟು ಪುರುಷರು ಇದೇ ರೀತಿಯ ಅಭಿಪ್ರಾಯ ಹೊಂದಿದ್ದಾರೆ. ಸಹೋದ್ಯೋಗಿಯೊಬ್ಬರು ಕೆಲ ವರ್ಷಗಳ ಹಿಂದೆ ಮದುವೆಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ತಮ್ಮ ಪತ್ನಿಯ ಜೊತೆಗೆ ಸಂಬಂಧ ನಿಭಾಯಿಸಲು ಸಾಧ್ಯವಾಗದೆ ಇದ್ದುದಕ್ಕೆ ಅವರು ಸಾಕಷ್ಟು ಕಾರಣಗಳನ್ನು ಹೇಳಿದ್ದರು. ಅವರು ನೀಡಿದ ಕಾರಣ ನಿಜವೂ ಇದ್ದಿರಬಹುದು. “ಮದುವೆ, ಸಂಸಾರ ಎಂದಕೂಡಲೇ ಇಂತಹದ್ದೆಲ್ಲ ಅನುಭವಿಸಬೇಕು,” ಎಂದು ಬೇಸರದಿಂದ ನೊಂದುಕೊಂಡರು. ನಂತರ ಆರು ತಿಂಗಳ ನಂತರ ಮತ್ತೆ ಅದೇ ಸಹೋದ್ಯೋಗಿ ಮದುವೆಗಾಗಿ ಹುಡುಗಿ ಹುಡುಕಲು ಆರಂಭಿಸಿದ್ದರು. “ನೀವು ಮತ್ತೆ ಯಾಕೆ ಅದೇ ಮದುವೆಯ ಬಂಧನಕ್ಕೆ ಒಳಗಾಗುತ್ತೀರಿ?” ಎಂದು ಪ್ರಶ್ನಿಸಿದರೆ, “ನನಗೆ ಸಂಜೆ ಮನೆಗೆ ಹೋದಾಗ ಅಡುಗೆ ಮಾಡಿಡುವವರು ಮತ್ತು ನಗುಮೊಗದಿಂದ ಎದುರುಗೊಳ್ಳುವವರು ಬೇಕು,” ಮೊದಲಾಗಿ ಹಲವು ಕಾರಣಗಳನ್ನು ಹೇಳಿದರು. ಹಿಂದೆ ಅವರು ವೃತ್ತಿಪರ ಮಹಿಳೆಯನ್ನು ಮದುವೆಯಾಗಿದ್ದರು. ಈಗ ಉದ್ಯೋಗಕ್ಕೆ ಹೋಗದ ಯುವತಿಯನ್ನು ಮದುವೆಯಾಗಿದ್ದಾರೆ. ಇಂತಹ ಪತಿಯಂದಿರೆಲ್ಲರೂ ಗುರೂಜಿ ಅವರ ಶಿಷ್ಯರಾಗಲು ಖಂಡಿತ ಅರ್ಹರು ಎಂದಾಯಿತು.

“ಮಹಿಳೆ ಎಂದಕೂಡಲೇ ಅಡುಗೆಮನೆ, ಮನೆಗೆಲಸಗಳನ್ನು ಮಾಡಿಕೊಂಡು ತನ್ನ ಬದುಕನ್ನು ಸುಗಮಗೊಳಿಸಲು ಇರುವ ವ್ಯಕ್ತಿ,” ಎನ್ನುವ ಭಾವನೆ ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ. ಇಂದಿಗೂ ಭಾರತದಲ್ಲಿ ಬಹಳಷ್ಟು ಮಹಿಳೆಯರು ಬೆಳಗ್ಗೆ ಬೇಗನೆ ಎದ್ದು ಅಡುಗೆ ಮಾಡಿಟ್ಟು, ನಂತರ ಕಚೇರಿಗೆ ಹೋಗಿ, ರಾತ್ರಿ ಮನೆಗೆ ಬಂದು ಮತ್ತೆ ಅಡುಗೆ ಮನೆಗೆ ನುಗ್ಗುವುದನ್ನು ನೋಡಿದ್ದೇವೆ. ಜೊತೆಯಲ್ಲಿ ಮಕ್ಕಳ ಓದು-ಬರಹ ಮೊದಲಾದ ಹೊರೆಯೂ ಅವರ ಮೇಲಿರುತ್ತದೆ. ಹಾಗೆಂದು ಎಲ್ಲ ಪತಿಯಂದಿರು ಅಡುಗೆ ಮನೆಯಿಂದ ದೂರವಿರುತ್ತಾರೆ ಎಂದಲ್ಲ. ಆದರೆ, ಆಧುನಿಕ ಸಂಸಾರದಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ವೃತ್ತಿಯ ಜವಾಬ್ದಾರಿಯನ್ನು ಹೊರಬೇಕೆಂದಾದಾಗ ಮನೆಯ ಕೆಲಸಗಳನ್ನು ಹಂಚಿಕೊಳ್ಳದೆ ಇದ್ದರೆ ವಿಚ್ಛೇದನದವರೆಗೂ ಸಮಸ್ಯೆ ಹೋಗುವುದು ಸಾಮಾನ್ಯ ಬೆಳವಣಿಗೆ. ವಾಸ್ತವದಲ್ಲಿ ಉದ್ಯೋಗಸ್ಥರಲ್ಲದ ಮಹಿಳೆಯರಿಗೂ ಮನೆಯ ಒಟ್ಟಾರೆ ಜವಾಬ್ದಾರಿ, ಮಕ್ಕಳ ಹೊರೆಯನ್ನು ನಿಭಾಯಿಸುವುದು ಕಷ್ಟ. ಹೀಗಿರುವಾಗ, ವೃತ್ತಿ ಮತ್ತು ಮನೆಯ ಜವಾಬ್ದಾರಿ ಎರಡನ್ನೂ ಅವರಿಂದ ನಿರೀಕ್ಷಿಸಿದಲ್ಲಿ ಮಹಿಳೆಗೆ ಸ್ವಂತದ ಬದುಕು ಎಂಬುದೇ ಇಲ್ಲವಾಗಬಹುದು.

ಮುಖ್ಯವಾಗಿ, ಮದುವೆಯ ನಂತರ ಮಹಿಳೆಯ ಉತ್ಪಾದಕ ಶಕ್ತಿ ವೃತ್ತಿಪರಿಸರದಲ್ಲಿ ಕಡಿಮೆಯಾಗಲು ಕಾರಣ ಆಕೆಯ ಮನೆಯ ಕಡೆಗಿನ ಹೊರೆಯೇ ಆಗಿರುತ್ತದೆ. ಪುರುಷರು ಮದುವೆ ನಂತರ ಮನೆ-ಉದ್ಯೋಗ ಎಂದು ಒತ್ತಡ ಅನುಭವಿಸುವುದು ಅಪರೂಪ. ಆದರೆ, ಬಹಳಷ್ಟು ಮಹಿಳೆಯರು ಎರಡೂ ಕಡೆ ನಿಭಾಯಿಸಲು ಸಾಧ್ಯವಾಗದೆ ಯಾವುದೋ ಒಂದನ್ನು ತ್ಯಾಗ ಮಾಡಿರುವ ಉದಾಹರಣೆ ಸಾಕಷ್ಟಿದೆ. ಗುರೂಜಿ ಅವರ ಸಲಹೆಯಂತೆ ಪುರುಷರು ಅಡುಗೆಯಿಂದ ತೊಡಗಿ ತನ್ನ ಬಟ್ಟೆಯನ್ನು ಹುಡುಕಿಕೊಡುವವರೆಗೆ ಮಹಿಳೆಯರನ್ನು ಆಶ್ರಯಿಸಿದರೆ ಉದ್ಯೋಗ ತೊರೆದು ಕೇವಲ ಗೃಹಿಣಿಯಾಗಿ ಇರುವುದೂ ಮಹಿಳೆಗೆ ಬಹಳ ಕಷ್ಟ. ಮಹಿಳೆಯರಿಂದ ಈ ಪರಿ ಸೇವೆಯನ್ನು ಬಯಸುವವರು ಮನೆಗೆಲಸಕ್ಕೆ ಆಳುಗಳನ್ನು ನೇಮಿಸಿಕೊಳ್ಳುವುದು ಉಚಿತ. ಹೀಗಾಗಿ, ಗುರೂಜಿ ಅವರ ಫೇಸ್‌ಬುಕ್ ಪೋಸ್ಟನ್ನು ವಿರೋಧಿಸಿ ಬಹಳಷ್ಟು ಮಹಿಳೆಯರು ಕಮೆಂಟ್ ಹಾಕಿರುವುದರಲ್ಲಿ ಅಚ್ಚರಿಯೇನಿಲ್ಲ. ಅದೇ ಸಂದರ್ಭದಲ್ಲಿ, “ಪುರುಷರು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವಂತೆ ಗುರೂಜಿ ಸಲಹೆ ನೀಡಬೇಕು,” ಎಂದು ಕೆಲವು ಪುರುಷರೂ ಕಮೆಂಟ್‌ಗಳ ಮೂಲಕ ಗುರೂಜಿ ಅವರ ‘ಭಾರತೀಯ ನಾರಿ’ ಕಲ್ಪನೆಯನ್ನು ತಿದ್ದಿರುವುದು ಒಂದು ರೀತಿಯಲ್ಲಿ ಸಕಾರಾತ್ಮಕ ಬೆಳವಣಿಗೆ ಎನ್ನಬಹುದು.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More