ಕವಿ ರವೀಂದ್ರರ ಜನುಮದಿನ | ಮಿತಿಯು ಅನಂತತೆಯನ್ನು ಮೀರುವ ಅಭಿವ್ಯಕ್ತಿ

ವಿಶ್ವಕವಿ, ರವೀಂದ್ರನಾಥ ಟ್ಯಾಗೋರರ ಜನ್ಮದಿನವಿಂದು. ಸಂಕಟಗಳನ್ನೇ ಮುಂದಿಟ್ಟುಕೊಂಡು ಅಳುಕುವ ಮನಸ್ಸಿಗೆ ಅವುಗಳ ಹಿಂದೆಯೇ ಅನಂತ ಶಕ್ತಿ , ಪ್ರೇರಣೆಯನ್ನು ಹೆಕ್ಕಿ ಕೊಡುತ್ತಾರೆ ಟ್ಯಾಗೋರ್‌. ಅಂಥದ್ದೇ ಕೆಲವು ವಿಚಾರಗಳನ್ನು ಈ ಲೇಖನ ನೆನಪಿಸುತ್ತದೆ

ಇತ್ತೀಚೆಗೆ ನಾನು ರವೀಂದ್ರನಾಥ ಟ್ಯಾಗೋರರ ಸಾಹಿತ್ಯ ಕೃತಿಗಳ ಮೇಲೆ ಕಣ್ಣಾಡಿಸುತ್ತಿದ್ದೆ. ಅದರಲ್ಲೆಲ್ಲ ಇವೇ ಪ್ರಶ್ನೆಗಳು; ಈ ಸೃಷ್ಟಿ, ಅದರ ಹಿಂದೆ ಅಡಗಿರಬಹುದಾದ ರಹಸ್ಯ, ಈ ಬದುಕು ,ಬದುಕಿನ ಸಾರ್ಥಕ್ಯ ಮತ್ತು ತನ್ನ ಈ ಸೃ‍ಷ್ಟಿಯೊಂದಿಗೆ ಸಾಗಿಬರುತ್ತಿರುವ ಆ ಸೃಷ್ಟಿಕರ್ತನ ಅಸ್ತಿತ್ವ..

ರವೀಂದ್ರರು ಸಾಧನಾದಲ್ಲಿ ಹೀಗೆ ಹೇಳ್ತಾರೆ, "have you not heard his silent steps?”

ಮುಂದುವರಿದು, ''he comes comes,ever comes.'' ಆ ಸೃಷ್ಟಿಕರ್ತನ ಮೇಲೆ ರವೀಂದ್ರರಿಗೆ ಎ‍‍‍ಷ್ಟೊಂದು ಅದಮ್ಯ ವಿಶ್ವಾಸವಿದೆ. ಈ ಅಗಾಧ ಪ್ರಕೃತಿಯಲ್ಲಿ ಅಸಂಖ್ಯ ಜೀವಸೃಷ್ಟಿಗಳನ್ನು ನಾವು ಕಾಣ್ತೇವೆ. ಒಂದೊಂದೂ ಅಪರೂಪದ ಗುಣ, ಆಕಾರ, ರೂಪ ಮತ್ತು ಅಷ್ಟೇ ವಿಭಿನ್ನವಾದ ಜೀವನಶೈಲಿ, ಸ್ಥಿತಿ ಇರುವುದನ್ನು ಕಾಣುತ್ತೇವೆ. ಆದರೆ, are we the only finite expressions? ಅಲ್ಲ ಅಂತಾರೆ ರವೀಂದ್ರರು. ಬರೀ ಬದುಕಿ ನಶಿಸಿ ಹೋಗೋದೆ ಈ ಒಟ್ಟಾರೆ ಸೃಷ್ಟಿಯ ಉದ್ದೇಶವಲ್ಲ. ಸೃಷ್ಟಿಯೂ ಒಂದು ಕವಿತೆ, ಒಂದು ಅನಂತಗಾನ. ಇಲ್ಲಿ ನಾವು, ಮರ ಗಿಡ ಅನ್ನೋ ವಿಭಿನ್ನ ಆಕಾರದ ಸೃಷ್ಟಿ ಆ ಅನಂತಗಾನವನ್ನ ನಿತ್ಯ ನಿರಂತರವಾಗಿ ನುಡಿಯುವಂತೆ ಮಾಡುವ ಶಬ್ದ ಪುಂಜಗಳು, ಅವುಗಳಿಂದ ಸೃಷ್ಟಿಯಾಗುವ ಸೃಷ್ಟಿಕರ್ತನ ಈ ಅನಂತಗಾನ ಎನ್ನುತ್ತಾರೆ ಟ್ಯಾಗೋರ್. ಆ ಗಾನದ ಮೂಲವೇ ಅವನ ಓತಃಪ್ರೋತವಾದ ಆನಂದ, ಒಟ್ಟಾರೆ ಈ ಸೃಷ್ಟಿಯ ಉದ್ದೇಶ. ಈ ಕಾರಣಕ್ಕೆ ರವೀಂದ್ರರು ಉಪನಿ‍ಷತ್ತಿನ ಒಂದು ಮಾತನ್ನ ಹೇಳ್ತಾರೆ "ಆನಂದಾಧ್ಯೇವಾ ಖಲ್ವಿಮಾನಿ ಭೂತಾನಿ ಜಾಯಂತೆ.” ಅಂದರೆ ಆನಂದವೇ ಈ ಸಮಗ್ರ ಸೃಷ್ಟಿಯ ಮೂಲ ಅಂತ, ಅಂತಹ ಸೃಷ್ಟಿಯ ಅಭಿವ್ಯಕ್ತಿಗಳೆ ಪ್ರಕೃತಿ, ನಾವೂ , ಈ ಎಲ್ಲ ಎಂದು ಹೇಳುತ್ತಾರೆ.

ಟಾಗೋರರ ಸಾಧನಾದ ಇಂಗ್ಲಿಷ್‌ ಅನುವಾದದ ಆಡಿಯೋ ಬುಕ್‌

***

ಒಂದು ಹಕ್ಕಿ ಹಾರಬೇಕಾದರೆ ಅದಕ್ಕೆ ತಾನೆಂದೂ ಕ್ರಮಿಸಲಿಕ್ಕೆ ಸಾಧ್ಯವಾಗದ ಅನಂತ ಆಕಾಶ ದ ಅರಿವಾಗಿರತ್ತೆ, ಆದರೆ ಅದರಲ್ಲಿಯೇ ಆನಂದವಿರೋದು. ಇಲ್ಲವಾದರೆ ಒಂದು ಪಂಜರ, ಅದರ ಜೀವನದ ಎಲ್ಲ ಅವಶ್ಯಕತೆಗಳನ್ನ ಪೂರೈಸಿಬಿಡಬಹುದಿತ್ತು.

ಒಂದು ಮರಿ ಹಕ್ಕಿ ಹಾರಲಿಕ್ಕೆ ಪ್ರಯತ್ನಪಡುತ್ತಿದೆ ಅಂದು ಕೊಳ್ಳೋಣ. ಮೊದಲು ಅದು ಒಂದು ಕೊಂಬೆಯಿಂದ ಇನ್ನೊಂದು ಕೊಂಬೆಗೆ ಜಿಗಿಯತ್ತೆ, ಹಾಗೆ ಮುಂದೆ ಆ ಮರದ ಅಂಚಿನಿಂದ ಇನ್ನೊಂದು ಅಂಚಿಗೆ ಹಾರುತ್ತೆ ಅಥವಾ ಆ ರೀತಿ ಹಾರಲಿಕ್ಕೆ ಹೋಗಿ ಆಯತಪ್ಪಿ ನೆಲಕ್ಕೆ ಬಿದ್ದು ಮತ್ತೆ ಎದ್ದು ಜಿಗಿದು ಹಾರೋಕೆ ಪ್ರಯತ್ನ ಪಡುತ್ತದೆ. ಹೀಗೆ ಆ ಹಕ್ಕಿಯ ದೇಹ ಹಾರಾಟಕ್ಕೆ ಯೋಗ್ಯವಾಗೋತನಕ ಅಥವಾ ಆ ಹಕ್ಕಿ ಹಾರಾಟಕ್ಕೆ ಒಗ್ಗಿಕೊಳ್ಳೊತನಕ ಆ ಪ್ರಯತ್ನ ಮಾಡುತ್ತಲೇ ಇರುತ್ತದೆ. ಅದು ಆ ಹಾರಾಟಕ್ಕೆ ಬೇಕಾಗೋ ಶಿಸ್ತು ಅಥವಾ ಪ್ರಕೃತಿಯ ನಿಯಮ. ಆ ಶಿಸ್ತು ನಿಯಮ ಅದರ ಹೆಬ್ಬಯಕೆ ಕಡೆ ಇಡೋ ಮೊದಲ ಹೆಜ್ಜೆ, ಅದಕ್ಕೆ ರವೀಂದ್ರರು

Law is the first step towrds freedom ಎಂದು ಹೇಳ್ತಾರೆ. ಉದಾಹರಣಿಗೆ: ಒಂದು

ನದಿ ಅಂದ ತಕ್ಷಣ ನಮಗೆ ನೆನಪಿಗೆ ಬರೋದು ಅದರ ನೀರು, ಪ್ರವಾಹ ಮತ್ತು ದಡ. ಇಲ್ಲಿ ದಂಡೆ ಅಥವಾ ದಡ ನದಿಯನ್ನು ತಡೆಯತ್ತೆ ಹೌದು, ಆದರೆ ಅದಕ್ಕೆ ಹರಿವಿನ ರಭಸವನ್ನೂ ಕೊಡುವುದೂ ಅದೇ ದಂಡೆಯೇ. ಹೀಗೇ ಈ ಜಗತ್ತಿನ ಪ್ರವಾಹಕ್ಕೂ ಎಲ್ಲೆಗಳಿವೆ, ಸೀಮೆಗಳಿವೆ ಅವುಗಳಿಲ್ಲದೆ ಈ ಅಸ್ತಿತ್ವವೇ ಇರುತ್ತಿರಲಿಲ್ಲ ಎಂಬ ಸತ್ಯವನ್ನು ಹೊಳೆಸುತ್ತಾರೆ.

ಒಂದು ಪುಟ್ಟ ಮಗುವನ್ನೇ ನೋಡಿ. ಅದು ಒಂದು ಸರತಿ ಎದ್ದು ನಿಲ್ಲುವ ಪ್ರಯತ್ನದಲ್ಲಿ, ಹತ್ತು ಸಲ ಬಿದ್ದಿರುತ್ತದೆ ಮತ್ತು ನೋವುಂಡಿರುತ್ತದೆ. ಆದರೆ ಒಂದು ಸರತಿ ಎದ್ದು ನಿಂತಾಗ ಅನುಭವಿಸುವ ಆನಂದ ಎಲ್ಲವನ್ನೂ ಮೀರಿದ್ದಾಗಿರುತ್ತದೆ. ಹೀಗಾಗಿ ನಾವು ಬೀಳುತ್ತೆವೆಂದೇ ಬಹುಶಃ ನಾವು ಮುಂದೆ ಸಾಗುವುದು ಸಾಧ್ಯವೇ ಇಲ್ಲ. ನಡಿಗೆಯನ್ನಷ್ಟೇ ಬದುಕು ಅಂದುಕೊಂಡು ಬಿಟ್ಟರೆ ಕುಣಿಯಲಿಕ್ಕೂ ಸಾಧ್ಯವಿಲ್ಲ. ಈ ನೋವು, ನಲಿವು ಕುರಿತು ರವೀಂದ್ರರ stray birds ನ ಸಾಲು ಗಳು ನೆನಪಿಗೆ

God says to man

“I heal you therefore I hurt

Love you therefore punish”

“ನಾನು ನಿನ್ನನ್ನ ಗುಣಪಡಿಸುತ್ತೇನೆ, ಅದಕ್ಕೆ ನೋಯಿಸುತ್ತೇನೆ

ಪ್ರೀತಿಸುತ್ತೇನೆ, ಹಾಗೆ ಶಿಕ್ಷಿಸುತ್ತೇನೆ ಎನ್ನುತ್ತವೆ ಈ ಮೇಲಿನ ಸಾಲುಗಳು.

ಬದುಕನ್ನು, ಈ ಸೃಷ್ಟಿಯನ್ನು ವಿಶಾಲವಾದ ದೃಷ್ಟಿಯಿಂದ ನೋಡಿದಾಗಲೇ ಆ ವಿವಿಧ ಹಂತಗಳಲ್ಲೂ ಕಂಡುಬರುವ ಸಾಮರಸ್ಯದ ಅರಿವಾಗೋದು. ಒಂದು ಮೊಗ್ಗಿನಿಂದ ಹೂವು ಎನ್ನುವುದಕ್ಕೂ ಮರದಿಂದ ಮೊಗ್ಗು, ಮೊಗ್ಗಿನಿಂದ ಹೂವು, ಹೂವಿನಿಂದ ಹಣ್ಣು, ಹಣ್ಣಿಂದ ಬೀಜ ಎನ್ನುವುದಕ್ಕೂ ಬಹಳ ವ್ಯತ್ಯಾಸವಿದೆ.

***

ಸಂಗೀತದಲ್ಲಿ ನಾವು ತಲ್ಲೀನರಾಗಿ ಬಿಟ್ಟರೆ ಅದರಲ್ಲಿ ಸಿಗುವ ಆನಂದ ಅದೆಷ್ಟು ಅಗಾಧ. ಉದಾಹರಣೆಗೆ ಒಂದು ಪಿಟೀಲು ಕೂಡ ನಮ್ಮ ಜೀವನದ ಮೂಲ ತಥ್ಯವನ್ನೆ ಹೇಳಿಕೊಡುತ್ತದೆ. ಪಿಟೀಲು ಇಂಪಾದ ಸ್ವರಗಳನ್ನಷ್ಟೇ ಹೊರಡಸುತ್ತದೆಯೇ? ಅದು ಹೊರಡಿಸಬಹುದಾದ ಕರ್ಕಶ ಅಪಸ್ವರಗಳನ್ನು ಅದರ ವಾದಕ ನಿಯಂತ್ರಿಸಿ, ತಂತಿಗಳನ್ನು ತೀಡಿ, ನಮಗೆ ಇಂಪಾದ ಸ್ವರಗಳನ್ನಷ್ಟೇ ಕೇಳಿಸುವಂತೆ ಮಾಡುತ್ತಾನೆ. ತಂತಿಯನ್ನು ತೀಡಿದಾಗ ಹೊರಹೊಮ್ಮುವುದು ಒಂದು ಧ್ವನಿಯಷ್ಟೇ ಅಥವಾ ನಾವು ಅರ್ಥೈಸುವಂತೆ ಸ್ವರ ಮತ್ತು ಅಪಸ್ವರ. ಹಾಗಾಗಿ ಇಲ್ಲಿ ಹುಟ್ಟೋ ಸ್ವರ ಅಪಸ್ವರ ಒಂದಕ್ಕೊಂದು ವಿರುದ್ಧವಲ್ಲ, ಪೂರಕವಾಗಿರುತ್ತವೆ. ಅದಕ್ಕೆ ರವೀಂದ್ರರು

“Imperfection is not a negation of perfection,” ಎನ್ನುತ್ತಾರೆ. ಅಂದರೆ, ಇಲ್ಲಿ ಸ್ವರ ಅಪಸ್ವರ ಬೆರತಾಗಲೇ ಒಂದು ಪಿಟೀಲಾಗೋದು. ಆದರೆ ನಮ್ಮ ಉದ್ದೇಶ ಪಿಟೀಲಿನಲ್ಲಿರುವ ಇಂಪು, ಸ್ವರ, ಆನಂದವನ್ನು ಆಸ್ವಾದಿಸುವುದು ಆಗಿರುವುದರಿಂದ, ಅದರ ಹಿಂದೆ ಅಡಗಿರುವ ಅಪಸ್ವರ, ಕರ್ಕಶತೆ ಗೌಣವಾಗುತ್ತವೆ. ಅಂತಹ ಸಂಗೀತದ ಆನಂದವೇ ಈ ಜೀವನದ ಉದ್ದೇಶ. ಇದನ್ನೇ ನಮ್ಮ ಬದುಕಿಗೂ ಅನ್ವಯಿಸಬೇಕು. ನೋಡಬೇಕು. ನಮ್ಮ ಬದುಕಿನಲ್ಲೂ ನೋವು ಅಪಸ್ವರಗಳು ಇವೆ, ಅವುಗಳನ್ನ ಅರಿತು, ಹೆಕ್ಕಿ, ತೆಗೆದು ಸ್ವರವನ್ನಾಗಿ ಇಂಪನ್ನಾಗಿ ಮಾಡಿಕೊಂಡಾಗಲೇ ನಾವು ಸಂಗೀತದಂತೆ ಮೀರಿ ಬೆಳೆಯಬಹುದು.

Life of soul is finite in its expression and infinte in its idea ಎನ್ನುತ್ತಾರಲ್ಲ ಹಾಗೇ.

ಮಿತಿ ಎಂಬುದೂ ಅಭಿವ್ಯಕ್ತಿ. ಅನಂತತೆ ಅದರ ಉದ್ದೇಶ. ರವೀಂದ್ರರು ತಮ್ಮ PERSONALITY ಯಲ್ಲಿ ಹೇಳುವಂತೆ, only by living fully can you outgrow it. ಜೀವನವನ್ನು ಪೂರ್ಣವಾಗಿ ಅನುಭವಿಸಿದ ಮೇಲೆಯೇ, ನೀನು ಅದನ್ನ ದಾಟಿ ಬೆಳೆಯಬಹುದು ಅಂತ. ಯಾವಾಗ ಒಂದು ಹಣ್ಣು ರಸತುಂಬಿಕೊಂಡು ಗಾಳಿಯಲ್ಲಿ ಓಲಾಡಿ, ಸೂರ್ಯನ ಬಿಸಿಲಲ್ಲಿ ಬೆಂದು ಮಾಗಿ ಪಕ್ವವಾಗುವುದೋ ಆಗಲೇ ಅದರ ಆಂತರ್ಯದಲ್ಲಿ ಮೀರಿ ಬೆಳೆಯುವ ಕೂಗೊಂದು ಕೇಳಿಬರುವುದು. ಆಗಲೇ ಆ ಪಕ್ವವಾದ ಹಣ್ಣು ಮರದಿಂದ ಬೇರೆಯಾಗುವುದು. ಇಲ್ಲಿ ಕಂಡು ಬರುವ ಆ ಅಗಲುವಿಕೆ ಬಾಹ್ಯವಾದದ್ದಷ್ಟೇ. ಆದರೆ ಆ ಅಗಲುವಿಕೆಯ ಆಂತರ್ಯದಲ್ಲಿ ಅಡಗಿರೋದು ಮಾತ್ರ ಮತ್ತೆ ಒಂದಾಗಬೇಕು ಎಂಬ ಭಾವ. ಒಮ್ಮೆ ಪ್ರೇಮದಲ್ಲಿ ಬೇರ್ಪಟ್ಟ ತಾನು, ಪ್ರೇಮದಲ್ಲೇ ಒಂದಾಗಬೇಕು ಎಂದು. ಇಂತಹ ಆಂತರ್ಯದ ಕೂಗು ಈ ಸೃಷ್ಟಿಯ ಉಸಿರು ಉಸಿರಿನಲ್ಲಿದೆ.

ಈ ಸೃಷ್ಟಿಯಲ್ಲಿ, ಬದುಕಿನಲ್ಲಿ ಚಾಲನೆ, ಜೀವಂತಿಕೆ, ಹೊಸತನವಿರುವುದು ಸಾವಿನಿಂದಾಗಿ. ಇಲ್ಲವಾಗಿದ್ದರೆ, ಸೃಷ್ಟಿ ನಿಶ್ಚಲವಾಗಿರುತ್ತಿತ್ತು. ಹಾಗಾಗಿಯೇ ಈ ಜೀವಕ್ಕೆ ಎರಡು ಮುಖವಿರುವುದು. ಒಂದು ಜೀವ, ಇನ್ನೊಂದು ಬದಲಾವಣೆ ಎಂಬ ನಿರಂತರ ಸಾವೂ. ಆದರೆ ಸಾವಿಗೆ ಒಂದೇ ಮುಖವಿರುವುದು. ಯಾಕೆಂದರೆ ಸಾವಿನಲ್ಲಿ ಜೀವ ಇರುವುದಿಲ್ಲ. ಇಂತಹ ಸಾವೂ ಬಂದು ಒಂದುದಿನ ನಮ್ಮ ಬಾಗಿಲನ್ನೂ ಬಡಿಯತ್ತದೆ. ಆಗ ನಾವು ಅವನಿಗೆ ಏನನ್ನು ಕೊಡಬಹುದು ಅಥವಾ ಏನನ್ನು ಕೊಡುತ್ತೇವೆ? ಹೂವು ಸುಗಂಧವನ್ನು ಕೊಡುವುದು ಹಣ್ಣು, ಸಿಹಿಯನ್ನ ಕೊಡುವುದು, "ಆ ಭಗವಂತ ತಾನಿತ್ತ ಹೂಗಳನ್ನ ಮನುಷ್ಯನಿಂದ ಮತ್ತೆ ಮರಳಿ ಕಾಣಿಕೆಯಾಗಿ ಪಡೆಯೋದಕ್ಕೆ ಬಯಸ್ತಾನಂತೆ” ಅವನ ಆ ಅನಂದವನ್ನು ಅವನಿಗೆ ಮರಳಿ ಕೊಟ್ಟಂತಹ ಸಾರ್ಥಕ್ಯ ನಮ್ಮಲ್ಲಿದ್ದರೆ, ಬಹುಶಃ ಆಗ ಬಂದ ಅತಿಥಿಗೆ ನಮ್ಮನ್ನ ನಾವೇ ಆನಂದದಿಂದ ಒಪ್ಪಿಸಿಕೊಂಡು ಬಿಡಬಹುದು. "I WILL set before my guest the full vessel of my life and I will never let him go with empty hands" ರವೀಂದ್ರರು ಹೇಳ್ತಾರೆ” ನಾನು ನನ್ನ ಜೀವನದ ಪೂರ್ಣಪಾತ್ರೆಯನ್ನ ನನ್ನ ಅತಿಥಿಯ ಮುಂದೆ ಓರಣವಾಗಿಸುತ್ತೇನೆ. ಅವನನ್ನು ಬರಿಗೈಯಿಂದ ಮಾತ್ರ ನಾನು ಕಳಿಸೋದಿಲ್ಲ ಅಂತ” ಹೀಗೆ ಯಾರು ಈ ಸಾವಿರಾರು ಎಳೆಗಳ ಸೆಳೆತದಲ್ಲೂ ಸ್ವಾತಂತ್ರ್ಯದ ಅಪ್ಪುಗೆಯನ್ನು ಅನುಭವಿಸುತ್ತಾರೋ, ಮುಕ್ತಿಯನ್ನ ಕಂಡು ಕೊಳ್ಳುತ್ತಾರೋ ಅಂಥವರಿಗೆ ಹುಟ್ಟೇನು ಸಾವೇನು? ಎಲ್ಲವೂ ಒಂದೊಂದು ಹಂತ, ಆಟ, ಆನಂದ. ಅಂತಹ ಪಕ್ವತೆಯನ್ನು ಪಡೆದು ಒಬ್ಬ ಮನುಷ್ಯ ಅಗಾಧವಾಗಿ ಮೀರಿ ಬೆಳೆದು ನಿಂತಾಗ ಬಹುಶಃ ಅವನ ಮನೆಗೆ ಬಂದ ಸಾವೂ ಕೂಡ ಅವನನ್ನ ನೋಡಿ ಒಂದು ಕ್ಷಣ ನಿಶ್ಚಲವಾಗಿಬಿಡಬಹುದು..

“Stand still oh beautiful end for a moment and say your last words in silence

I bow to you and holdup my lamp to light you on your way..”

ಓಹ್ ಸುಂದರ ಅಂತ್ಯವೇ ಒಂದು ಕ್ಷಣ ನಿಶ್ಚಲನಾಗಿಬಿಡು, ನಿಶ್ಯಬ್ದದಲ್ಲಿ ನಿನ್ನ ಕೊನೆಯ ಮಾತುಗಳನ್ನ ಹೇಳು, ನಾನು ನಿನಗೆ ಬಾಗುತ್ತೇನೇ,ನಿನ್ನ ಹಾದಿಗೆ ಬೆಳಕಾಗಿ ನನ್ನ ದೀಪವನ್ನ ಹಿಡಿದು ನಿಲ್ಲುತ್ತೇನೆ…”

ಸತ್ಯಜಿತ್‌ ರೇ ನಿರ್ದೇಶನದಲ್ಲಿ ಸಿದ್ಧವಾದ ಟಾಗೋರ್ ಕುರಿತ ಸಾಕ್ಷ್ಯಚಿತ್ರ

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More