ಮಧ್ಯಮ ಮಾರ್ಗದ ಪ್ರತಿಪಾದಕ ಕಥೆಗಾರ, ವಿಮರ್ಶಕ ಗಿರಡ್ಡಿ ಗೋವಿಂದರಾಜು

ಗಿರಡ್ಡಿ ಗೋವಿಂದರಾಜ್. ಶುಕ್ರವಾರ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದ್ದಾರೆ

ಉತ್ತರ ಕರ್ನಾಟಕದ ಸೊಗಡನ್ನು ತಮ್ಮ ಕಥೆಗಳಲ್ಲಿ ಕಟ್ಟಿಕೊಟ್ಟ, ಭಿನ್ನ ಛಾಪಿನ ವಿಮರ್ಶೆಯನ್ನು ಕೊಟ್ಟವರು ಗಿರಡ್ಡಿ ಗೋವಿಂದರಾಜು. ಸಾಹಿತ್ಯ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಗಿರಡ್ಡಿಯವರು ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ತಮ್ಮ ಕಡೆಯ ದಿನಗಳವರೆಗೂ ಹಲವು ಸಾಹಿತ್ಯಕ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.

ಸದಾ ಗಂಭೀರ ವದನರಾಗಿರುತ್ತಿದ್ದ ಗಿರಡ್ಡಿ ಗೋವಿಂದರಾಜ ಅವರನ್ನು ಪಿ. ಲಂಕೇಶ, 'ರಜೆಯಲ್ಲಿ ಮನೆಗೆ ಬಂದ ಸೈನಿಕ' ಎಂದು ಕರೆಯುತ್ತಿದ್ದರು. ಎಡ ಮತ್ತು ಬಲ ಪಂಥೀಯ ಸಿದ್ಧಾಂತವನ್ನು ಕಟು ವಿಮರ್ಶೆಗೆ ಒಳಪಡಿಸಿದ ಅವರು ನಡು ಪಂಥೀಯ ಎಂದು ತಮ್ಮ ಕರೆದುಕೊಳ್ಳುತ್ತಿದ್ದರು. ಅದಕ್ಕಾಗಿ ತೀವ್ರ ಟೀಕೆಗಳನ್ನು ಎದುರಿಸಿದ್ದರು.

ನವ್ಯ ಸಾಹಿತ್ಯ ಯುಗದ ಪ್ರಥಮ ಪಂಕ್ತಿಗೆ ಸೇರುವ ವಿಮರ್ಶಕರಾಗಿದ್ದ ಗಿರಡ್ಡಿ ಅವರು 1939ರ ಸೆ. 22ರಂದು ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ ಜನಿಸಿದ್ದರು.

ಕನ್ನಡ ಸಾರಸ್ವತ ಲೋಕದಲ್ಲಿ ವಿಮರ್ಶೆಗೆ ವಿಭಿನ್ನ ಸ್ವೂರಪನ್ನು ಕೊಡುಗೆಯಾಗಿ ನೀಡಿದ ಡಾ. ಗಿರಡ್ಡಿ, ಧಾರವಾಡದಲ್ಲಿ ಸಾಹಿತ್ಯದ ಸಂಕ್ರಮಣ ಕಾಲದಲ್ಲಿ ಡಾ. ಗಿರಡ್ಡಿ, ಪ್ರೊ. ಚಂಪಾ, ಡಾ. ಚಂದ್ರಶೇಖರ ಕಂಬಾರ, ಡಾ. ಎಂ.ಎಂ. ಕಲಬುರ್ಗಿ ಹಾಗೂ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರೊಂದಿಗೆ ಬೆರೆತಿದ್ದರು. ಹೀಗಾಗಿ ಸಾರಸ್ವತ ಲೋಕ ಈ ಐವರು ಸಾಹಿತಿಗಳನ್ನು ಪಾಂಡವರು ಎಂದೇ ಕರೆಯುತ್ತಿದ್ದರು. ವಿಮರ್ಶೆಯ ಕನಸನ್ನೂ ಕಾಣದ ಅವರು, ಸೃಜನಶೀಲ ಬರಹಗಾರನಾಗಬೇಕೆಂಬ ಕನಸು ಕಂಡವರು. ಆದರೆ, ಸಂಕ್ರಮಣ ಪತ್ರಿಕೆ ಅವರನ್ನು ವಿಮರ್ಶಕನನ್ನಾಗಿ ಮಾಡಿತು. ಈ ರೀತಿ ಸೃಜನಶೀಲತೆಯ ಕನಸಿನಿಂದ ವಿಮರ್ಶೆಯಡೆಗೆ ನಡೆದು ಬಂದುವರು ಅವರು.

"ಗಿರಡ್ಡಿ ಅವರ ವಿಮರ್ಶಾ ಬರಹಗಳನ್ನು ಓದಿದ್ದ ನಾನು ಅವರನ್ನು ಗಂಡು ಮುಖದ, ಬಿಗಿ ಹುಬ್ಬಿನ ಮನುಷ್ಯನೆಂದು ಕಲ್ಪಿಸಿಕೊಂಡಿದ್ದೆ. ಅವರ ಒಡನಾಟಕದ ನಂತರ ಅವರು ಗೆಳೆಯರ ಬಳಿ ಹರಟೆ ಹೊಡೆಯುವಾಗ ಅವರ ತುಂಟತನ, ಹಾಸ್ಯ ಪ್ರಜ್ಞೆ ಅವರ ಬರವಣಿಗೆಯಲ್ಲಿ ಏಕೆ ಕಾಣಲಿಲ್ಲ ಎಂದು ಅನ್ನಿಸುತ್ತದೆ’’ ಎಂದು ವಿಮರ್ಶಕ ಟಿ.ಪಿ. ಅಶೋಕ ತಮ್ಮ ಬರಹವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.

ಕನ್ನಡ ಸಾಹಿತ್ಯ ಓದಿದ್ದಕ್ಕಿಂತಲೂ ಇಂಗ್ಲಿಷ್ ಸಾಹಿತ್ಯ ಓದಿದ್ದೇ ಹೆಚ್ಚು ಎನ್ನುತ್ತಿದ್ದ ಗಿರಡ್ಡಿ ಅವರು, ಇಂಗ್ಲಿಷ್ ಅಧ್ಯಾಪಕ ವೃತ್ತಿಯಿಂದ ನಿವೃತ್ತರಾದ ಬಳಿಕವೇ ಕನ್ನಡ ಸಾಹಿತ್ಯವನ್ನು ಹೆಚ್ಚು ಓದಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದರು.

ಸೃಜನಶೀಲ ಬರಹಗಾರನ ಕನಸು ಕಾಣುವಾಗ ಅನಕೃ ಪ್ರಭಾವ ಇತ್ತು. ಕಾಲೇಜು ದಿನಗಳಲ್ಲಿ ಅನಕೃ ಅವರ ಪ್ರಭಾವದಿಂದ ದೂರವಾದ ಅವರು, ನಂತರ ಕೀರ್ತಿನಾಥ ಕುರ್ತಕೋಟಿ, ಟಿ.ಎಸ್. ಎಲಿಯಟ್ ಪ್ರಭಾವಕ್ಕೆ ಒಳಗಾಗಿದ್ದೆ ಎಂದು ಅವರೇ ಹೇಳಿಕೊಂಡಿದ್ದರು.

ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗ ಚಂಪಾ, ಪಟ್ಟಣಶೆಟ್ಟಿ ಅವರೊಂದಿಗೆ ಸೇರಿಕೊಂಡು ಸಂಕ್ರಮಣ ದ್ವೈಮಾಸಿಕ ಪತ್ರಿಕೆ ತಂದರು. ಈ ಪತ್ರಿಕೆ ಸಾಹಿತ್ಯ ಲೋಕದಲ್ಲಿ ಹೊಸ ಛಾಪು ಮೂಡಿಸಿತು.

ನನ್ನ ಆಪ್ತ ಸ್ನೇಹಿತನ ಸಾವಿನ ಸುದ್ದಿ ಕೇಳಿ ಒಂದು ಕ್ಷಣ ಮುಗಿಲು ಕಳಚಿ ಬಿದ್ದಂಗಾಯಿತು. ಸಾಹಿತ್ಯ ಸಂಭ್ರಮವನ್ನು ಯಶಸ್ವಿಯಾಗಿ ನಡೆಸಿದ ಶ್ರೇಯಸ್ಸು ಗಿರಡ್ಡಿ ಗೋವಿಂದರಾಜ ಗೆ ಸಲ್ಲುತ್ತದೆ. ಸಾಹಿತ್ಯ ಲೋಕ ಉತ್ತಮ ವಿಮರ್ಶಕನನ್ನು ಕಳೆದುಕೊಂಡಿತು.
ಸಿದ್ಧಲಿಂಗ ಪಟ್ಟಣಶೆಟ್ಟಿ

ಸಣ್ಣವರಿದ್ದಾಗಲೇ ಕನ್ನಡದ ಸಾಹಿತ್ಯ ಲೋಕಕ್ಕೆ ಆಕರ್ಷಿತರಾಗಿದ್ದ ಅವರು ಕಥೆ, ಕವನಗಳನ್ನು ಓದುತ್ತಿದ್ದರು. ಅಲ್ಲಿಯೇ ಸೃಜನಶೀಲ ಬರಹಗಾರನಾಗಬೇಕೆಂಬ ಆಸೆ ಚಿಗುರಿತ್ತು. ಆದರೆ, ಆದದ್ದು ಹಾಗೂ ಸಾಹಿತ್ಯ ಲೋಕ ಗುರುತಿಸಿದ್ದು ಮಾತ್ರ ಕನ್ನಡದ ಗಂಭೀರ ವಿಮರ್ಶಕನೆಂದೇ!

ಸಂಶೋಧಕ ಎಂ.ಎಂ. ಕಲಬುರ್ಗಿ ಹಂತಕರನ್ನು ಸರ್ಕಾರ ಪತ್ತೆ ಮಾಡದ ಬಗ್ಗೆಯೂ ಅವರಲ್ಲಿ ಬೇಸರವಿತ್ತು. ಅದೇ ರೀತಿ ಕಲಬುರ್ಗಿ ಅವರ ಹೆಸರಿನಲ್ಲಿ ಧಾರವಾಡದಲ್ಲಿ ಸ್ವತಂತ್ರ ಸಂಶೋಥನಾ ಸಂಸ್ಥೆ ಆರಂಭಿಸಬೇಕೆಂಬ ಅವರ ಆಸೆಯೂ ಈಡೇರಲಿಲ್ಲ.

ಜೈಪುರ ಸಾಹಿತ್ಯ ಹಬ್ಬದ ಮಾದರಿಯಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಆರಂಭಿಸಿ ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದರು. 2013ರಲ್ಲಿ ಮೊದಲ ಧಾರವಾಡ ಸಾಹಿತ್ಯ ಸಂಭ್ರಮವನ್ನು ಸಂಘಟಿಸಿದರು. 2018ರವರೆಗೂ ಸಾಹಿತ್ಯ ಸಂಭ್ರಮದವರೆಗೂ ಗಿರಡ್ಡಿ ಅವರು, ವಿಭಿನ್ನ ಸಾಹಿತ್ಯಿಕ ವಿಚಾರಗಳನ್ನು ಸಂಭ್ರಮದ ಮೂಲಕ ಕನ್ನಡಿಗರ ಮನೆ ಮತ್ತು ಮನ ತಲುಪುವಂತೆ ಮಾಡಿ ತಾವೊಬ್ಬ ಸಾಹಿತ್ಯ ಸಂಘಟಕ ಎಂಬುವುದನ್ನು ಸಾಬೀತುಪಡಿಸಿದರು.

ನಾಡಿನ ನೆಲ, ಜಲ, ಭಾಷೆ, ಸಾಂಸ್ಕೃತಿ, ಶಿಕ್ಷಣ, ಕೃಷಿ ಸೇರಿದಂತೆ ಎಲ್ಲ ಸಮಸ್ಯೆಗಳ ಚರ್ಚೆಗೂ ಅವಕಾಶ ನೀಡಿ ಸಾಹಿತ್ಯ ಸಂಭ್ರಮವನ್ನು ಕನ್ನಡ ಏಳ್ಗೆಗೆ ವೇದಿಕೆಯನ್ನಾಗಿ ಮಾಡಿದರು. ಕನ್ನಡ ಸಂಸ್ಕೃತ ಲೋಕದಲ್ಲಿ ಒಟ್ಟೊಟ್ಟಿಗೆ ಮಿಂಟಿದ ಸಂಶೋದಕ ಡಾ. ಎಂ.ಎಂ. ಕಲಬುರ್ಗಿ ಹಾಗೂ ಡಾ. ಗಿರಡ್ಡಿ ಆತ್ಮೀಯ ಸ್ನೇಹಿತರಾಗಿದ್ದರು. ಕಲಬುರ್ಗಿ ಅವರ ಹತ್ಯೆಯಾದಾಗ ಬೀದಿಗಿಳಿದು ಅಸಹಿಷ್ಣುತೆ ಕುರಿತು ಮಾತನಾಡಲು ಪ್ರಾರಂಭಿಸಿದ್ದರು. ಎಷ್ಟೊ ಬಾರಿ ವೇದಿಕೆಯ ಮೇಲೆ ಕುಳಿತಿದ್ದ ರಾಜಕಾರಣಿಗಳನ್ನು ಹಿರಿಯು ಸಾಹಿತಿಗಗಳನ್ನು ಕೂಡ ತರಾಟೆಗೆ ತೆಗೆದುಕೊಂಡಿದ್ದರು.

ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
#MeToo | ಟಿವಿ ವೃತ್ತಿಪರರ ಮಾತಿನಲ್ಲಿ ಧಾರಾವಾಹಿ ಲೋಕದತ್ತ ಒಂದು ನೋಟ
Editor’s Pick More