ಮೋಜಿಗಾಗಿ ಸೃಷ್ಟಿಸಿದ ವಾಟ್ಸಾಪ್ ಮೆಸೇಜು ಮೂವರ ಜೀವ ತೆಗೆಯಿತು!

ತಮಿಳುನಾಡಿನಲ್ಲಿ ವ್ಯಾಪಕ ಭೀತಿ ಹುಟ್ಟಿಸಿರುವ ಮಕ್ಕಳ ಕಳ್ಳರ ಕುರಿತ ಸುಳ್ಳು ಸುದ್ದಿ ಮೂವರು ಅಮಾಯಕರ ಜೀವ ತೆಗೆದಿದೆ. ಕಣ್ಣಿಗೆ ಕಂಡ ಅಪರಿಚಿತರನ್ನೆಲ್ಲ ಮಕ್ಕಳ ಕಳ್ಳರೆಂದು ಭಾವಿಸಿ ಜನ ಹಲ್ಲೆ ನಡೆಸತೊಡಗಿದ್ದಾರೆ. ಈಗ ಬೆಂಗಳೂರಿನಲ್ಲೂ ಅಂತಹ ಸುಳ್ಳು ವಾಟ್ಸಾಪ್ ಸಂದೇಶ ಹರಿದಾಡತೊಡಗಿದೆ!

ಆಕೆ ೬೫ರ ನಡುವಯಸ್ಸಿನ ಮಹಿಳೆ. ಕುಟುಂಬ ಸಹಿತರಾಗಿ ದೇವರ ದರ್ಶನಕ್ಕೆ ಹೋಗುತ್ತಿರುವಾಗ ಮಾರ್ಗಮಧ್ಯೆ ದಾರಿ ಕೇಳಲು ಒಂದು ಊರಿನ ಮೈದಾನದ ಬಳಿ ಕಾರು ನಿಲ್ಲಿಸುತ್ತಾರೆ. ಅಲ್ಲಿ ಆಡುತ್ತಿದ್ದ ಮಕ್ಕಳ ಬಳಿ ದಾರಿ ಕೇಳುತ್ತಿರುವಾಗ ಅವರಿಗೆ, ತಮ್ಮ ಬ್ಯಾಗಿನಲ್ಲಿರುವ ಚಾಕೊಲೆಟ್ ನೆನಪಾಗುತ್ತದೆ. ಆಡುವ ಮಕ್ಕಳಿಗೆ ಒಂದೆರಡು ಚಾಕೊಲೆಟ್ ಕೊಡುತ್ತಾರೆ. ಮಕ್ಕಳಿಗೆ ಚಾಕೊಲೆಟ್ ಎಂದರೆ ಪ್ರಾಣ ಎಂಬ ಕಾರಣಕ್ಕೋ, ದಾರಿ ಹೇಳಿದರು ಎಂಬ ಕೃತಜ್ಞತೆಗೋ ಆಕೆ ಹಾಗೆ ನೀಡಿದ ಚಾಕೊಲೆಟ್‌ಗಳೇ ಆಕೆಯ ಜೀವಕ್ಕೆ ಎರವಾಗುತ್ತವೆ ಎಂದು ಬಹುಶಃ ಆಕೆ ಕನಸಿನಲ್ಲಿಯೂ ಕಂಡಿರಲಿಕ್ಕಿಲ್ಲ!

ಆದರೆ, ಆಕೆ ನಿರೀಕ್ಷಿಸಿಯೇ ಇರದ ದುಃಸ್ವಪ್ನ ನಿಜವಾಗಿಯೇಬಿಟ್ಟಿತು. ಚಾಕೊಲೆಟ್ ಕೊಡುತ್ತಿರುವುದನ್ನು ಕಂಡು ಹತ್ತಿರದ ಮನೆಗಳ ಜನ ಏಕಾಏಕಿ ಆಕೆಯ ಮೇಲೆ ಕತ್ತಿ, ಕೊಡಲಿ, ದೊಣ್ಣೆಗಳಿಂದ ಎರಗಿದರು. ಅವರಿಂದ ಪಾರಾಗಲು ಕಾರು ಓಡಿಸಿದರೂ, ಬಿಡದೆ ಬೆಂಬತ್ತಿಬಂದ ಗುಂಪು ಕಾರಿನಲ್ಲಿದ್ದವರನ್ನು ಹಿಡಿದು ಚಚ್ಚಿತು. ಅದರಲ್ಲೂ ಚಾಕೊಲೆಟ್ ಕೊಟ್ಟ ಆ ಮಹಿಳೆಯನ್ನು ಸಾಯುವವರೆಗೆ ಹೊಡೆದು ನಡುರಸ್ತೆಯಲ್ಲಿ ಆಕೆಯನ್ನು ಬೀದಿಯ ಹೆಣವಾಗಿಸಿದರು.

ಈ ಘಟನೆ ನಡೆದದ್ದು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ. ಆ ನತದೃಷ್ಟ ಮಹಿಳೆಯ ಹೆಸರು ರುಕ್ಮಿಣಿ. ಮಕ್ಕಳಿಗೆ ಚಾಕೊಲೆಟ್ ಹಂಚಿದ ಆ ಮಹಿಳೆಯನ್ನು ಕಂಡು ಹಳ್ಳಿಯ ಜನ ರೊಚ್ಚಿಗೆದ್ದು ಹಾಗೆ ದಾಳಿ ಮಾಡಿ ಆಕೆಯನ್ನು ಸಾಯಿಸಲು ಕಾರಣ ಒಂದು ವಾಟ್ಸಪ್ ಮೆಸೇಜು!

ಹೌದು, ಸಾಮಾಜಿಕ ಜಾಲತಾಣಗಳು ಎಂತಹ ಅಪಾಯಕಾರಿ ಮಟ್ಟಕ್ಕೆ ಜನರನ್ನು ಪ್ರೇರೇಪಿಸಬಲ್ಲವು, ದಿಕ್ಕುತಪ್ಪಿಸಬಲ್ಲವು ಎಂಬುದಕ್ಕೆ ಈ ಘಟನೆ ಒಂದು ತಾಜಾ ನಿದರ್ಶನ. ಕಳೆದ ಮೂರು ದಿನಗಳಲ್ಲಿ ತಮಿಳುನಾಡಿನಲ್ಲಿ ಹೀಗೆ ಏಕಾಏಕಿ ಗುಂಪು ದಾಳಿ ನಡೆಸಿ ಅಮಾಯಕರನ್ನು ಹೊಡೆದು ಸಾಯಿಸಿದ ಮೂರು ಘಟನೆಗಳು ನಡೆದಿವೆ. ಪ್ರತಿ ಘಟನೆಯಲ್ಲಿಯೂ ಅಮಾಯಕರು ಮಕ್ಕಳೊಂದಿಗೆ ಮಾತನಾಡಿದ್ದನ್ನೇ ತಪ್ಪಾಗಿ ಭಾವಿಸಿ ಅವರ ಮೇಲೆ ಪೈಶಾಚಿಕ ದಾಳಿ ನಡೆಸಲಾಗಿದೆ; 0ಕಾನೂನು ಕೈಗೆತ್ತಿಕೊಂಡು, ಮನಸೋಇಚ್ಛೆ ಹೊಡೆದು ಅವರನ್ನು ಸಾಯಿಸಲಾಗಿದೆ. ಅದಕ್ಕೆ ಕಾರಣ; ಆ ಎಲ್ಲರನ್ನೂ ಮಕ್ಕಳ ಕಳ್ಳರು ಎಂದು ತಪ್ಪಾಗಿ ಭಾವಿಸಿದ್ದು. ಹಾಗೆ ಕಂಡಕಂಡವರನ್ನೆಲ್ಲ ಮಕ್ಕಳ ಕಳ್ಳರು ಎಂದು ಜನಸಾಮಾನ್ಯರು ಭಾವಿಸುವಂತೆ ಮಾಡಿದ್ದು ಇತ್ತೀಚಿನ ದಿನಗಳಲ್ಲಿ ತಮಿಳುನಾಡಿನಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ವಾಟ್ಸಪ್‌ ಮೆಸೇಜು.

“ಉತ್ತರ ಭಾರತದಿಂದ ೪೦೦ ಮಂದಿ ಮಕ್ಕಳ ಕಳ್ಳರು ತಮಿಳುನಾಡಿಗೆ ಬಂದಿದ್ದಾರೆ. ಹೊರಗೆ ಆಡುತ್ತಿರುವ ನಿಮ್ಮ ಮಗುವನ್ನು ಅವರು ಯಾವ ಕ್ಷಣದಲ್ಲಾದರೂ ಕಳವು ಮಾಡಲಿದ್ದಾರೆ. ಹಾಗಾಗಿ, ನಿಮ್ಮ ಮಕ್ಕಳ ಮೇಲೆ ಕಣ್ಣಿಟ್ಟಿರಿ. ಅಲ್ಲದೆ, ಈ ಮೆಸೇಜನ್ನು ನಿಮ್ಮ ಆಪ್ತರು, ಸ್ನೇಹಿತರು ಮತ್ತು ಇತರ ಎಲ್ಲ ಗುಂಪುಗಳಿಗೂ ಕಳುಹಿಸಿ, ನಿಮ್ಮ ಮಗುವಿನಂತೆಯೇ ಇತರ ಮಕ್ಕಳನ್ನೂ ರಕ್ಷಿಸಿ,” ಎಂಬ ಆ ವಾಟ್ಸಪ್ ಸಂದೇಶವೊಂದು ವಿಡಿಯೋ ತುಣುಕು ಸಹಿತ ತಮಿಳುನಾಡಿನಾದ್ಯಂತ ಕಳೆದ ಕೆಲವು ವಾರಗಳಿಂದ ಹರಿದಾಡುತ್ತಿದೆ.

ಆ ಮೆಸೇಜನ್ನು ಜನ ಸ್ವತಃ ಓದುವುದಲ್ಲದೆ, ತಾವೇನೋ ದೊಡ್ಡ ಸಮಾಜಸೇವೆ ಮಾಡುತ್ತಿದ್ದೇವೆ ಎಂಬ ಪ್ರಮಾಣಿಕ ಮುಗ್ಧತೆಯಲ್ಲಿ ತಮ್ಮ ಸಂಪರ್ಕದ ಇತರ ಗುಂಪು, ವ್ಯಕ್ತಿಗಳಿಗೂ ಹಬ್ಬಿಸುತ್ತಿದ್ದಾರೆ. ಹಾಗೆ, ಹಬ್ಬಿಸಿದ ಪರಿಣಾಮವೇ, ಇದೀಗ ಕಳೆದ ಮೂರು ದಿನಗಳಲ್ಲಿ ಮೂವರು ಅಮಾಯಕರ ಜೀವ ಬಲಿಯಾಗಿವೆ. ತಿರುವಣ್ಣಾಮಲೈನಲ್ಲಿ ೬೫ರ ವಯೋಮಾನದ ಮಹಿಳೆಯಾದರೆ, ಪುಲಿಕಾಡ್‌ನಲ್ಲಿ ೪೫ ವರ್ಷದ ಗಣೇಶ್ ಎಂಬ ಅನಾಥ ವ್ಯಕ್ತಿ ಜೀವ ಕಳೆದುಕೊಂಡಿದ್ದಾನೆ. ಮನೆ ಇಲ್ಲದ ಆತ, ಸೇತುವೆಯ ಮೇಲೆ ಮಲಗಿದ್ದಾಗ ಆತನ ಮೇಲೆ ದಾಳಿ ನಡೆಸಿರುವ ಗುಂಪು ತೀವ್ರವಾಗಿ ಹೊಡೆದು ಬಳಿಕ ಸೇತುವೆಗೆ ನೇಣುಬಿಗಿದು ಸಾಯಿಸಿದೆ. ಆತನನ್ನೂ ಮಕ್ಕಳ ಕಳ್ಳ ಎಂದೇ ಭಾವಿಸಿ ಹಾಗೆ ಮಾಡಿರುವುದಾಗಿ, ಪ್ರಕರಣ ಸಂಬಂಧ ಪೊಲೀಸರು ಬಂಧಿಸಿರುವ ೨೦ಕ್ಕೂ ಹೆಚ್ಚು ಮಂದಿ ತಪ್ಪೊಪ್ಪಿಕೊಂಡಿದ್ದಾರೆ.

ಅಲ್ಲದೆ, ವೆಲ್ಲೂರಿನಲ್ಲೂ ಇಂತಹದ್ದೇ ಒಂದು ಘಟನೆಯಲ್ಲಿ ೩೫ ವರ್ಷದ ಸಂಜಯ್ ಎಂಬ ಉತ್ತರ ಭಾರತೀಯ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಆತ ಹಿಂದಿಯಲ್ಲಿ ಮಕ್ಕಳೊಂದಿಗೆ ಮಾತನಾಡುತ್ತಿದ್ದಾಗ ಏಕಾಏಕಿ ದಾಳಿ ನಡೆಸಿದ ಗ್ರಾಮಸ್ಥರು ಆತನನ್ನು ಹೊಡೆದು ಸಾಯಿಸಿದ್ದಾರೆ. ಆತನನ್ನು ಬೀದಿದೀಪದ ಕಂಬಕ್ಕೆ ಕಟ್ಟಿ ಥಳಿಸಲಾಗಿತ್ತು.

ಹಾಗೇ, ಈ ಮೂರು ಘಟನೆಗಳಿಗೂ ಕೆಲವೇ ದಿನಗಳ ಮುನ್ನ ಕಾಂಚಿಪುರಂನಲ್ಲೂ ಇಂತಹದ್ದೇ ದಾಳಿಯೊಂದರಲ್ಲಿ ಆಟೋ ಚಾಲಕನೊಬ್ಬ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ. ಇದೀಗ ತಮಿಳುನಾಡಿನ ಹಲವು ಕಡೆ ಇಂತಹ ಚಿಕ್ಕಪುಟ್ಟ ಘಟನೆಗಳು ಮರುಕಳಿಸುತ್ತಿದ್ದು, ಸುಳ್ಳು ವದಂತಿಯ ವಾಟ್ಸಪ್‌ ಸಂದೇಶ ವ್ಯಾಪಕವಾದಂತೆಲ್ಲ ಇಂತಹ ಘಟನೆಗಳೂ ಆತಂಕಕಾರಿ ಪ್ರಮಾಣದಲ್ಲಿ ಸಾಂಕ್ರಾಮಿಕವಾಗುತ್ತಿರುವುದು ಅಲ್ಲಿನ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.

ವೆಲ್ಲೂರು ಘಟನೆಗೆ ಸಂಬಂಧಿಸಿದಂತೆ ವಾಟ್ಸಪ್ ಸಂದೇಶ ಹರಡಿದ್ದ ಅಲ್ಲಿನ ವೀರರಾಘವನ್ ಎಂಬ ಮೇಸ್ತ್ರಿಯೊಬ್ಬನನ್ನು ಬಂಧಿಸಿದ ಪೊಲೀಸರು ಆತನ ವಿಚಾರಣೆ ನಡೆಸಿದಾಗ, ಆತವೀಡಿಯೋ ಸಂದೇಶವನ್ನು ಫಾರ್ವರ್ಡ್ ಮಾಡಿದ್ದೇ ಅಲ್ಲದೆ, ತಾನೇ ಸ್ವತಃ ಆಡಿಯೋ ಸಂದೇಶವನ್ನು ಸೃಷ್ಟಿಸಿ ಹರಡಿದ್ದು, ಕೇವಲ ಜನಪ್ರಿಯತೆ ಮತ್ತು ಮೋಜಿಗಾಗಿ ಹಾಗೆ ಮಾಡಿದ್ದ ಎಂಬುದು ಗೊತ್ತಾಗಿದೆ.

ಇದೀಗ ತಮಿಳುನಾಡಿನ ವೆಲ್ಲೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರತಿ ಗ್ರಾಮದಲ್ಲೂ ಧ್ವನಿವರ್ಧಕದ ಮೂಲಕ ಇಂತಹ ಸುಳ್ಳು ಸುದ್ದಿಗಳನ್ನು ನಂಬದಿರುವಂತೆ ಮತ್ತು ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಜನಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದೆ.

ಇದನ್ನೂ ಓದಿ : ಸುಳ್ಳು ಸುದ್ದಿ ಹರಡುತ್ತಿರುವ ‘ಬೆಂಗಳೂರು ಹೆರಾಲ್ಡ್‌’ ವೆಬ್‌ಸೈಟ್‌ ಮೂಲವೇನು?

ಬೆಂಗಳೂರಿನಲ್ಲೂ ಹರಡುತ್ತಿದೆ ಸುಳ್ಳು ಸುದ್ದಿ!

ಆದರೆ, ತಮಿಳುನಾಡಿನಲ್ಲಿ ಮೂರು ಅಮಾಯಕರನ್ನು ಬಲಿ ತೆಗೆದುಕೊಂಡು ಮಕ್ಕಳ ಕಳ್ಳತನದ ಕುರಿತ ವಾಟ್ಸಪ್ ಸಂದೇಶದಲ್ಲಿರುವ ವೀಡಿಯೋ, ನಿಜವಾಗಿಯೂ ಪಾಕಿಸ್ತಾನದ ಮೂಲದ್ದು. ಕಳೆದ ವರ್ಷ ಕರಾಚಿಯಲ್ಲಿ ಮಕ್ಕಳ ಕಳವು ಪ್ರಕರಣಗಳು ಹೆಚ್ಚಿದ್ದ ಹಿನ್ನೆಲೆಯಲ್ಲಿ ಅಲ್ಲಿನ ಸ್ವಯಂಸೇವಾ ಸಂಸ್ಥೆಯೊಂದು ಜನಜಾಗೃತಿಯಾಗಿ ಮಕ್ಕಳ ಕಳವು ದೃಶ್ಯಗಳನ್ನು ಮರುಸೃಷ್ಟಿಸಿ ವಿಡಿಯೋ ತಯಾರಿಸಿತ್ತು. ಇದೀಗ ಅದೇ ವಿಡಿಯೋ ಎಡಿಟ್‌ ಮಾಡಿ, ತಮಿಳುನಾಡಿನಲ್ಲಿ ಭಯ ಸೃಷ್ಟಿಸಲು ಬಳಸಲಾಗುತ್ತಿದೆ. ಕಿಡಿಕೇಡಿಗಳ ಇಂತಹ ಕೃತ್ಯಗಳಿಗೆ ಅಮಾಯಕರು ಜೀವ ಕಳೆದುಕೊಳ್ಳುವಂತಾಗಿದೆ.

ಸಾಮಾಜಿಕ ಜಾಲತಾಣಗಳ ವಿವೇಕಹೀನ ಬಳಕೆ ಯಾವ ಮಟ್ಟಿಗಿನ ಅನಾಹುತ ಸೃಷ್ಟಿಸಬಹುದು ಎಂಬುದಕ್ಕೆ ಇದೊಂದು ತಾಜಾ ಉದಾಹರಣೆಯಾಗಿದ್ದು, ಕಳೆದ ವರ್ಷ ಜಾರ್ಖಂಡ್‌ನಲ್ಲಿ ಇದೇ ಪಾಕಿಸ್ತಾನದ ಕರಾಚಿ ಮೂಲದ ವಾಟ್ಸಪ್ ಸಂದೇಶವನ್ನು ಸ್ಥಳೀಯ ಯಾವುದೋ ಊರಿನ ದೃಶ್ಯ ಎಂದು ಹಬ್ಬಿಸಿ ದೊಡ್ಡ ಮಟ್ಟದ ಸಮೂಹಸನ್ನಿ ಸೃಷ್ಟಿಸಲಾಗಿತ್ತು. ಆ ಸಾಮೂಹಿಕ ಆತಂಕಕ್ಕೆ ಏಳು ಮಂದಿ ಅಪರಿಚಿತ ಅಮಾಯಕರು ಬಲಿಯಾಗಿದ್ದರು!

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More