ಅಪಾಯಕಾರಿಯಾಗುತ್ತಿರುವ ಮುಚ್ಚಿದ ಬಾಗಿಲ ಮಾತಿನ ಮನೆ ವಾಟ್ಸಾಪ್‌

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜನಾಭಿಪ್ರಾಯ ರೂಪಿಸುವಲ್ಲಿ ಜನನಾಯಕರು ಎಷ್ಟು ಯಶಸ್ವಿಯಾದರೋ ಗೊತ್ತಿಲ್ಲ, ಆದರೆ ಮತದಾರರನ ಮನಸ್ಸನ್ನು ಆವರಿಸುವಲ್ಲಿ ವಾಟ್ಸಾಪ್‌ ಮಾಡಿರುವ ಕೆಲಸ ಕಲ್ಪನೆಗೂ ಮೀರಿದ್ದು. ಒಂದು ಅಪಾಯಕಾರಿ ರಾಜಕೀಯ ಅಸ್ತ್ರವಾಗಿ ವಾಟ್ಸಾಪ್‌ ಬಳಕೆಯಾಗುತ್ತಿದೆ

ಪಕ್ಷವೊಂದರ ವಾಟ್ಸ್‌ಆಪ್‌ ಮೆಸೇಜ್‌; ಸುದೀರ್ಘ ಮೂರು ನಿಮಿಷಗಳ ಈ ವಿಡಿಯೋ ಸಂದೇಶದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥದ್ದನ್ನುಅಧಿಕಾರದಲ್ಲಿರುವ ಪಕ್ಷ ಮಾಡಲು ಹೊರಟಿದೆ. ಆ ಪಕ್ಷವನ್ನು ಗೆಲ್ಲಿಸಬೇಡಿ ಎಂದು ಹೇಳುವ ಸಂದೇಶವಿದೆ. ಭಾವನಾತ್ಮಕ ವಿಚಾರಗಳೇ ಪ್ರಧಾನವಾಗಿರುವ ಈ ವಾಟ್ಸಾಪ್‌ ವಿಡಿಯೋ ನೋಡಿ ಯಾರನ್ನಾದರೂ ಅದೇ ಸರಿ ಎಂದು ಯೋಚಿಸುವಂತೆ ಮಾಡಿಬಿಡುತ್ತದೆ.

ಇಂಥ ನೂರಾರು ಸಂದೇಶಗಳು ಈ ಬಾರಿ ಚುನಾವಣೆ ಸಂದರ್ಭದಲ್ಲಿ ಸಾವಿರಾರು ವಾಟ್ಸ್‌ಆಪ್‌ ಗ್ರೂಪ್‌ಗಳಲ್ಲಿ ಹರಿದಾಡಿವೆ. ಕರ್ನಾಟಕ ವಿಧಾನಸಭಾ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ವಿಷಯವಾಗಿತ್ತು. ಕಾಂಗ್ರೆಸ್‌ ಮುಕ್ತ ಭಾರತ ಮಾಡುವ ಮಹತ್ವಕಾಂಕ್ಷೆ ಬಿಜೆಪಿಯದ್ದಾದರೆ, ಕೋಮುವಾದಿ ಬಿಜೆಪಿಯನ್ನು ತಡೆಯುವುದು ಕಾಂಗ್ರೆಸ್‌ನ ಉದ್ದೇಶ. ಇವರ ನಡುವೆ ತಾವೂ ಅಧಿಕಾರ ಹಿಡಿಯುವ ಆಸೆಯೊಂದಿಗೆ ಪ್ರಾದೇಶಿಕ ಪಕ್ಷ ಹೋರಾಟ ನಡೆಸಲಾರಂಭಿಸಿತ್ತು.

ಹೀಗೆ ಸಜ್ಜುಗೊಂಡ ರಣಾಂಗಣದಲ್ಲಿ ಜನಾಭಿಪ್ರಾಯ ರೂಪಿಸುವ, ಜನರನ್ನು ಪ್ರಭಾವಿಸುವುದಕ್ಕೆ ಅನುಸರಿಸಿದ ತಂತ್ರಗಳು ಹಲವು. ಸಾಂಪ್ರದಾಯಿಕ ಪ್ರಚಾರ ಸಭೆಗಳು, ರ್ಯಾಲಿಗಳು, ಕಾರ್ಯಕರ್ತರ ಪ್ರಚಾರ ಕಾರ್ಯಗಳು ಒಂದೆಡೆ. ಈ ಮಾದರಿಯ ಪ್ರಚಾರ ಎಷ್ಟೇ ಆದರೂ ಸಾಮೂಹಿಕವಾಗಿ ಮತದಾರರನ್ನು ಮನವಿ ಮಾಡಿಕೊಳ್ಳುವಂಥವು. ಸಭೆಗಳಲ್ಲಿ ಸೇರಿದ ಎಲ್ಲರನ್ನೂ ಪ್ರಭಾವಿಸಲು ಸಾಧ್ಯವಾಗುತ್ತದೆ ಎಂದ ಹೇಳಲಾಗದು. ಹಾಗಾಗಿ ನಿರ್ದಿಷ್ಟ ಗುಂಪನ್ನು ಮತ್ತು ಅದರ ಸದಸ್ಯರನ್ನು ಪ್ರಭಾವಿಸುವುದಕ್ಕೆ ಸಾಧ್ಯವಿರುವ ಮಾರ್ಗಗಳನ್ನು ರಾಜಕೀಯ ಪಕ್ಷಗಳು ಹುಡುಕುತ್ತಿದ್ದವು. ವಾಟ್ಸಾಪ್‌ ಅವರಿಗೆ ವರದಂತೆ ಸಿಕ್ಕಿತು.

ಜಗತ್ತಿನಲ್ಲೇ ಅತಿ ಹೆಚ್ಚು ವಾಟ್ಸಾಪ್‌ ಬಳಕೆದಾರರು ಭಾರತದಲ್ಲಿದ್ದಾರೆ. ಈ ಮಾಧ್ಯಮವು ಗುಪ್ತವಾಗಿರುವುದರಿಂದ ಯಾರಿಗೆ ಯಾವ ಸಂದೇಶ ಹೋಯಿತು ಎಂಬುದು ತಿಳಿಯುವುದಿಲ್ಲ. ವ್ಯಕ್ತಿ ಮತ್ತು ವ್ಯಕ್ತಿ ನಡುವಿನ ಸಂಭಾಷಣೆಯಾದ್ದರಿಂದ, ಅಲ್ಲಿ ಸರಿ ತಪ್ಪುಗಳು ಸಮಾನವಾಗಿ ಹಂಚಿಯಾಗುತ್ತವೆ. ಸಂವಾದ ನಡೆಸುತ್ತಿರುವ ವ್ಯಕ್ತಿಗಳ ನಡುವೆ ವಿವೇಚನಾರಹಿತ ಸಂವಾದ ನಡೆಯುವ ಸಾಧ್ಯತೆಯೂ ಇರುತ್ತದೆ. ಇದು ಅಪಾಯಕಾರಿ.

ವಾಟ್ಸಾಪ್‌ ಗ್ರೂಪ್‌ಗಳೂ ಕೂಡ ಗೌಪ್ಯವಾಗಿರುವುದರಿಂದ ಅಲ್ಲಿ ನಡೆಯುವ ಚರ್ಚೆಗಳು, ಅಲ್ಲಿ ಹಂಚಿಕೆಯಾಗುವ ವಿಷಯಗಳು ಬಹಿರಂಗವಾಗುವುದಿಲ್ಲ. ಇಲ್ಲಿ ನಡೆಯುವ ಚರ್ಚೆಗಳು ನಿಯಂತ್ರಿಸಲೂ ಆಗುವುದಿಲ್ಲ. ವಿನಿಮಯವಾಗುವ ತಪ್ಪು ಮಾಹಿತಿ, ದ್ವೇಷ ಹರಡುವ ವಿಚಾರಗಳನ್ನೂ ನಿಯಂತ್ರಿಸಲಾಗುವುದಿಲ್ಲ. ಟ್ವಿಟರ್‌ ಅಥವಾ ಫೇಸ್‌ಬುಕ್‌ನಲ್ಲಿ ದೂರು ನೀಡುವ ವ್ಯವಸ್ಥೆ ಇದೆ. ಆದರೆ ವಾಟ್ಸಾಪ್‌ನಲ್ಲಿ ಈ ಅವಕಾಶವಿಲ್ಲ. ಈ ಗೌಪ್ಯತೆಯ ಅವಕಾಶವನ್ನು ಸುಲಭವಾಗಿ ತಮ್ಮ ಉದ್ದೇಶಗಳಿಗೆ ಬಳಸಿಕೊಂಡ ರಾಜಕೀಯ ಪಕ್ಷಗಳು ಪರಸ್ಪರ ಆರೋಪಿಸುವ, ಪರಸ್ಪರ ಬಗ್ಗೆ ಅಪಪ್ರಚಾರ ಮಾಡುವುದಕ್ಕೆ ಬಳಸಿಕೊಂಡಿವೆ.

ಈಗಾಗಲೇ ೨೦೧೪ರಲ್ಲಿ ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಬಳಸಿಕೊಂಡು ಮತದಾರರನ್ನು ಪ್ರಭಾವಿಸಿದ ಪಕ್ಷಗಳು, ಈ ಬಾರಿ ವಾಟ್ಸ್‌ಆಪ್‌ ಅನ್ನು ಹೆಚ್ಚು ನೆಚ್ಚಿಕೊಂಡರು. ಒಂದು ಮಾಹಿತಿ ಪ್ರಕಾರ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳಿಂದ ೫೦ಸಾವಿರಕ್ಕೂ ಹೆಚ್ಚು ವಾಟ್ಸಾಪ್‌ ಗ್ರೂಪ್‌ಗಳನ್ನು ಚುನಾವಣೆಯ ಹಿನ್ನೆಲೆಯಲ್ಲಿ ಸೃಷ್ಟಿ ಮಾಡಲಾಗಿತ್ತು. ಈ ಗ್ರೂಪ್‌ಗಳ ಪಕ್ಷಗಳು ಮೂಲಕ ಕನಿಷ್ಟ ೧೫ ಲಕ್ಷ ಮತದಾರರನ್ನು ನೇರವಾಗಿ ತಲುಪಿವೆ.

ಚುನಾವಣೆಯಲ್ಲಿ ತೀರ ತಳಮಟ್ಟದಲ್ಲಿ ಅಂದರೆ ಬೂತ್ ಮಟ್ಟದಲ್ಲಿ ಯುವ ಉತ್ಸಾಹಿಗಳ ಮೂಲಕ ವಾಟ್ಸಾಪ್‌ ಗ್ರೂಪ್‌ಗಳನ್ನು ಕಟ್ಟುವ ಮೂಲಕ ರಾಜಕೀಯ ಪಕ್ಷಗಳು ಸುದ್ದಿ, ಸುಳ್ಳುಸುದ್ದಿಗಳನ್ನು ಹರಡಿವೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಅವಧಿಯಲ್ಲಿ ಬಿಜೆಪಿಗೆ ಅಧಿಕ ಸೀಟುಗಳು ಲಭ್ಯವಾಗುವುದು ಎಂಬ ಸಮೀಕ್ಷೆಯ ಅಂಕಿಅಂಶಗಳು ವಾಸ್ತವದಲ್ಲಿ ಸುಳ್ಳು ಸಮೀಕ್ಷೆಯಾಗಿತ್ತು. ಈ ಮಾಹಿತಿ ವಾಟ್ಸಾಪ್‌ನಲ್ಲಿ ವೇಗವಾಗಿ ಹರಿದಾಡುತ್ತಿತ್ತು.

ಇದೇ ರೀತಿ ಕಾಂಗ್ರೆಸ್‌ ಪಾಳೆಯದಲ್ಲೂ ಬಿಜೆಪಿ ವಿರುದ್ಧ ಅನೇಕ ವಿಡಿಯೋಗಳು ವಾಟ್ಸಾಪ್‌ ಮೂಲಕ ಹರಿದಾಡಿದವು. ಬೀಫ್‌ ಜನತಾ ಪಾರ್ಟಿ ಎಂದೂ, ಯೋಗಿ ಆದಿತ್ಯನಾಥ ಹೆಸರಿನ ವಿಡಿಯೋಗಳು ಹರಿದಾಡಿದವು. ಬಿಜೆಪಿ ಒಂದು ಕೈ ಹೆಚ್ಚ ಎನ್ನುವಂತೆ ಅನೇಕ ಭಾವನಾತ್ಮಕ ವಿಷಯಗಳನ್ನು ವಾಟ್ಸ್‌ ಆಪ್‌ ಗ್ರೂಪ್‌ಗಳಲ್ಲಿ ಹರಿದಾಡಿದವು. ಚುನಾವಣಾ ಆಯೋಗದಿಂದ ಪ್ರಮಾಣೀಕೃತವಲ್ಲದ ಅನೇಕ ವಿಡಿಯೋಗಳು ಖಾಸಗಿಯಾದ, ಮುಕ್ತವಲ್ಲದ ವಾಟ್ಸ್‌ಆಪ್‌ ಗ್ರೂಪ್‌ಗಳಲ್ಲಿ ಹರಿದಾಡಿದವು.

ಮೇಲ್ಮಟ್ಟಕ್ಕೆ ಹೆಚ್ಚೇನು ಅಪಾಯಕಾರಿಯಾಗಿ ಕಾಣಿಸದ ಈ ವಾಟ್ಸಾಪ್‌ ಸಂವಾದ, ಹಲವು ತಪ್ಪು, ಸುಳ್ಳು ಸುದ್ದಿಗಳನ್ನು ಹರಿಬಿಡುವುದಕ್ಕೆ ಸುಲಭವಾದ ಮಾಧ್ಯಮವಾಯಿತು. ಸಮೀಕ್ಷೆಗಳು, ದ್ವೇಷ ಹರಡುವ ಸುಳ್ಳು ಸಂದರ್ಭಗಳು. ಎಲ್ಲಿಯೋ ನಡೆದ ಘಟನೆಯ ವಿಡಿಯೋಗಳಿಗೆ ಸ್ಥಳೀಯ ವಿಚಾರ-ಧರ್ಮದ ಬಣ್ಣವನ್ನು ಆರೋಪಿಸಿ ಹರಿಯಬಿಟ್ಟಿದ್ದು ಸಾಮಾನ್ಯವಾಗಿ ಕಂಡಿತು. ಈ ರೀತಿಯಲ್ಲಿ ತರ್ಕಕ್ಕೆ ನಿಲುಕದ, ಭಾವನಾತ್ಮಕವಾದ ಸಂಗತಿಗಳನ್ನು ವ್ಯಕ್ತಿಯನ್ನು ಗುರಿಯಾಗಿಟ್ಟುಕೊಂಡು ನಿರಂತರವಾಗಿ ಅಂಥದ್ದೇ ಸುದ್ದಿಗಳನ್ನು ಹಂಚುವುದಕ್ಕೆ ವೇದಿಕೆಯೂ ಆಯಿತು.

ಈ ಗ್ರೂಪ್‌ಗಳು ಹೆಚ್ಚು ಸಕ್ರಿಯವಾಗಿದ್ದು ಗ್ರಾಮಾಂತರ ಪ್ರದೇಶದಲ್ಲಿ. ಸಾಮಾನ್ಯವಾಗಿ ಈ ಪ್ರದೇಶಗಳ ಬಳಕೆದಾರರು ಬಂದ ಸುದ್ದಿಗಳನ್ನು ಅದರ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚುವ ಸಾಧ್ಯತೆಗಳು ಕಡಿಮೆ ಇರುವಂಥವರು. ಇಂಥವರನ್ನು ಗುರುತಿಸಿಯೇ ಅಭಿಮತ ರೂಪಿಸುವ ಮತ್ತು ತಮಗೆ ಬರುವ ಸಂದೇಶಗಳನ್ನು ಇನ್ನಷ್ಟು ಜನರಿಗೆ ಹರಡುವುದಕ್ಕೆ ರಾಜಕೀಯ ಪಕ್ಷಗಳು ಬಳಸಿಕೊಂಡಿವೆ.

ಇದನ್ನೂ ಓದಿ : ಅರ್ಧ ಗಂಟೆ ಫೇಸ್‌ಬುಕ್‌, ವಾಟ್ಸಾಪ್‌, ಇನ್‌ಸ್ಟಾಗ್ರಾಮ್‌ ಡೌನ್‌!

ಈ ಜಾಲದಲ್ಲಿ ಮಾಹಿತಿ ಒಬ್ಬ ವ್ಯಕ್ತಿಯಿಂದ ಅಥವಾ ಒಂದು ಗುಂಪಿನಿಂದ, ಮತ್ತೊಬ್ಬ ವ್ಯಕ್ತಿ ಅಥವಾ ಮತ್ತೊಂದು ಗುಂಪಿಗೆ ನೇರ ಜಿಗಿಯುತ್ತದೆ. ಸಾರ್ವಜನಿಕಗೊಳ್ಳುವುದಿಲ್ಲ. ಅಂದ ಮೇಲೆ ಆ ವಿಷಯ, ಸಂಗತಿ ಪರಾಮರ್ಶೆಗೆ ಒಳಗಾಗುವ ಅವಕಾಶವೇ ಇರುವುದಿಲ್ಲ. ಗುಂಪಿನಲ್ಲಿನಲ್ಲಿರುವವರು ಅದನ್ನು ವಿಮರ್ಶಿಸುವ ಅವಕಾಶ ಇಲ್ಲದೇ ಹೋದರೆ, ಅದೇ ಸತ್ಯವಾಗಿ ಹಬ್ಬುತ್ತದೆ. ಇದೇ ರಾಜಕೀಯ ಪಕ್ಷಗಳಿಗೆ ಬಲವಾಗಿ ಪರಿಣಮಿಸಿದ್ದು, ರಾಜಕೀಯ ಅಸ್ತ್ರವನ್ನಾಗಿ ಬಳಸುತ್ತಿವೆ. ಪ್ರಜಾಸತ್ತಾತ್ಮಕ ಹಾಗೂ ಪ್ರಜ್ಞಾವಂತ ಸಮಾಜಕ್ಕೆ ಇದಕ್ಕಿಂತ ಅಪಾಯಕಾರಿಯಾದದ್ದು.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More