ಉತ್ತರ ಭಾರತದಲ್ಲಿ ದಿಢೀರ್ ಕಾಣಿಸಿಕೊಂಡ ಧೂಳು, ಮಳೆಯ ಅಬ್ಬರಕ್ಕೆ ಏನು ಕಾರಣ?

ದೆಹಲಿಯಲ್ಲಿ ಬಿರುಗಾಳಿ, ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆ. ಒಟ್ಟಾರೆ, ಉತ್ತರ ಭಾರತದಲ್ಲೀಗ ಪ್ರಕೃತಿ ವಿಕೋಪದ ವಿದ್ಯಮಾನಗಳೇ ಸದ್ದು ಮಾಡುತ್ತಿವೆ. ಅಕಾಲಿಕವಾದ ಈ ವಿದ್ಯಮಾನಗಳು ಜನಜೀವನವನ್ನು ಕಂಗಾಲಾಗಿಸಿವೆ. ಈ ದಿಢೀರ್ ಬೆಳವಣಿಗೆ ಆಗುತ್ತಿರುವುದು ಏಕೆ? ಇಲ್ಲಿದೆ ಕಾರಣ

ರಾಜಧಾನಿ ಆಗಿರುವುದರಿಂದಲೋ ಏನೋ ದೆಹಲಿ ಸದಾ ಸುದ್ದಿಯಲ್ಲಿರುತ್ತದೆ. ಮೊನ್ನೆ ಭಾನುವಾರ ದೆಹಲಿ ಸುದ್ದಿ ಮಾಡಿದ್ದು ಬೇರೆಯ ಕಾರಣಕ್ಕೆ. ಮಳೆ ಹೊತ್ತ ಬಿರುಗಾಳಿ ಸಂಜೆ ಐದು ಗಂಟೆಗೆ ಏಕಾಏಕಿ ರಾಜಧಾನಿ ಮೇಲೆ ಎರಗಿದಾಗ ವಸ್ತುಶಃ ಪಂಜಾಬ್‌, ಹರಿಯಾಣ, ದೆಹಲಿ ಕಂಗಾಲಾದವು. ಅದು ಸಾಧಾರಣ ಬಿರುಗಾಳಿ ಆಗಿರಲಿಲ್ಲ, ಗಂಟೆಗೆ ೧೦೯ ಕಿಮೀ ವೇಗದ್ದು. ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ೪೦ ನಿಮಿಷಗಳ ಕಾಲ ವಿಮಾನಗಳು ಇಳಿಯಲಾಗಲಿಲ್ಲ. ಹತ್ತು ದಿನಗಳ ಹಿಂದಷ್ಟೇ ಧೂಳಿನ ಬಿರುಗಾಳಿ ದೆಹಲಿ, ರಾಜಸ್ಥಾನ, ತೆಲಂಗಾಣ, ಉತ್ತರಾಖಂಡ, ಪಂಜಾಬ್‌ ಮೇಲೆ ಆಕ್ರಮಣ ಮಾಡಿ ೪೦೦ ಮಂದಿಯನ್ನು ಕೊಂದಿತ್ತು. ಆಗ್ರಾವೊಂದರಲ್ಲೇ ೨೦ ಜನ ಧೂಳಿನ ಮಾರುತಕ್ಕೆ ಬಲಿಯಾಗಿದ್ದರು.

ಭಾನುವಾರದ ಮಳೆ ಸಹಿತ ಬಿರುಗಾಳಿ ಉತ್ತರ ಪ್ರದೇಶಕ್ಕೆ ತನ್ನ ಕಬಂಧ ಬಾಹುಚಾಚಿ ೧೮ ಜನರ ಜೀವಕ್ಕೆ ಎರವಾಯಿತು. ಆಂಧ್ರಪ್ರದೇಶಕ್ಕೂ ನುಗ್ಗಿ ೮ ಜನರನ್ನು ಬಲಿ ತೆಗೆದುಕೊಂಡಿತು. ಪಶ್ಚಿಮ ಬಂಗಾಳದಲ್ಲಿ ಸಿಡಿಲು ಎರಗಿತು. ದೆಹಲಿಯಲ್ಲಿ ಇನ್ನೂ ಫಜೀತಿ ಮುಂದುವರಿದಿದೆ. ಎಪ್ಪತ್ತು ವಿಮಾನ ಮಾರ್ಗ ಬದಲಾಯಿಸಬೇಕಾಯಿತು. ಮೆಟ್ರೋ ನಿರಾಶ್ರಿತರ ತಾಣವಾಯಿತು.

ಹೌದು, ಪ್ರಕೃತಿಯ ಅನೇಕ ವಿಕೋಪಗಳನ್ನು ಪೂರ್ವಭಾವಿಯಾಗಿ ಅರಿಯುವ ಸವಲತ್ತನ್ನು ವಿಜ್ಞಾನ-ತಂತ್ರಜ್ಞಾನಗಳು ನೀಡಿವೆ. ಅಷ್ಟರಮಟ್ಟಿಗೆ ಭೇಷ್‌ ಎನ್ನಬಹುದು. ಆದರೆ, ಎಲ್ಲ ಸಂದರ್ಭದಲ್ಲೂ ಅಲ್ಲ. ಬಿರುಗಾಳಿ ಬೀಸುತ್ತದೆಂದು ಏಕಾಏಕಿ ಜನವಸತಿ ಸ್ಥಳಾಂತರ ಮಾಡುವುದು ಸಾಧ್ಯವೇ? ಯಾವುದು ಸುರಕ್ಷಿತ ಜಾಗ? ಸುನಾಮಿ ಅಪ್ಪಳಿಸುತ್ತದೆಂದು ಈಗ ಮೂವತ್ತು ನಿಮಿಷಗಳಿಗೆ ಮೊದಲೇ ಎಚ್ಚರಿಕೆ ಕೊಡಲು ಸಾಧ್ಯ. ಸಮುದ್ರ ತೀರದಲ್ಲಿ ಇರುವವರನ್ನು ಖಾಲಿ ಮಾಡಿಸಬಹುದು. ಆದರೆ ಜನವಸತಿಗಳನ್ನು? ಭಾರತದ ಹವಾಮಾನ ಇಲಾಖೆ ಮುಂಬರಲಿರುವ ಹವಾ ವೈಪರೀತ್ಯಗಳ ಬಗ್ಗೆ ಮುನ್ಸೂಚನೆ ಕೊಡುತ್ತಲೇ ಬಂದಿದೆ. ಆದರೆ ಭಾನುವಾರದ ಈ ನೈಸರ್ಗಿಕ ಬೆಳವಣಿಗೆ ಇಷ್ಟು ಬಿರುಸಾಗಿರುತ್ತದೆಂದು ಊಹಿಸಿರಲಿಲ್ಲ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಬಿರುಕು ದೊಡ್ಡದಾಗಿ ಎರಡು ಹೋಳಾಗಲಿದೆಯೇ ಆಫ್ರಿಕಾ?

ನಿಸರ್ಗದಲ್ಲಿ ಯಾವ ಪ್ರಕ್ರಿಯೆಯಾದರೂ ಸರಿಯೇ, ಕಾರ್ಯಕಾರಣ ಸಂಬಂಧ ಇದ್ದೇ ಇರುತ್ತದೆ. ಈ ಸಂದರ್ಭದಲ್ಲಿ ಹವಾಮಾನ ತಜ್ಞರೂ ತಲೆಕೆಡಿಸಿಕೊಂಡರು; ವಾಯುಗೋಳದಲ್ಲಿ ಏನೇನು ಬದಲಾವಣೆಗಳಾದವು? ಇದು ಶುರುವಾದದ್ದು ಕಾಶ್ಮೀರ ಭಾಗದಲ್ಲಿ, ಹಿಮಾಲಯ ಕಣಿವೆಯಲ್ಲಿ. ಹವಾಮಾನ ತಜ್ಞರು ಸರಿಯಾಗಿಯೇ ಗುರುತಿಸಿದ್ದರು; ಹರಿಯಾಣದ ಮೇಲೆ ವಾಯುಭಾರ ಕುಸಿತವಾಗಿ ಚಂಡಮಾರುತ ಹುಟ್ಟಿತ್ತು. ಎಲ್ಲಿವರೆಗೆ ಇದರ ರಾಜಮಾರ್ಗ? ಹರಿಯಾಣದಿಂದ ತೊಡಗಿ ಅತ್ತ ನಾಗಲ್ಯಾಂಡ್‌ವರೆಗೆ. ಇದರ ಜೊತೆಗೆ ಬಂಗಾಳಕೊಲ್ಲಿಯಿಂದ ಬೀಸಿದ ಪೂರ್ವ ಬಿರುಗಾಳಿ ಅದರ ಜೊತೆ ಸೇರಿಕೊಂಡಿತು, ಇಂತಿಂಥ ಮಾರ್ಗದಲ್ಲಿ ಉಪಟಳ ಮಾಡಬೇಕೆಂದು ಸ್ಕೆಚ್‌ ಹಾಕಿದ ಹಾಗೆ. ಮಾಡಬೇಕಾದ ಹಾವಳಿಯನ್ನೂ ಮಾಡೇ ತೀರಿತು.

ಈ ಪ್ರಶ್ನೆ ಏಳುತ್ತದೆ- ಕಳೆದ ಕೆಲವು ವರ್ಷಗಳಿಂದ ಮಳೆಗಾಲ ತನ್ನ ದಿನಚರಿಯನ್ನು ಬದಲಿಸಿತೇ? ಏಕೆ ಋತುಮಾನಗಳೇ ಅದಲುಬದಲಾಗುತ್ತಿವೆ? ಕರ್ನಾಟಕದ ಉತ್ತರ ಭಾಗದ ಜಿಲ್ಲೆಗಳು ಬರದಿಂದ ಪ್ರತಿ ವರ್ಷವೂ ನರಳುತ್ತವೆ. ಅಕಾಲಿಕ ಮಳೆಯ ಹಿಂದೆ ಯಾವುದರ ಕೈವಾಡವಿದೆ?

ನಿಜ, ಪ್ರಕೃತಿಯ ಬದಲಾವಣಗೆರೆ ಲಾಗಾಯ್ತಿನಿಂದ ಅದನ್ನೇ ದೂಷಿಸುತ್ತಿದ್ದೇವೆ. ಇದರಲ್ಲಿ ನಮ್ಮ ಪಾತ್ರ ಏನೂ ಇಲ್ಲವೇ? ಈ ಪ್ರಶ್ನೆಗೆ ಉತ್ತರ ಸುಲಭವಲ್ಲ. ಕಳೆದ ಸುಮಾರು ೨೦ ವರ್ಷಗಳಿಂದ ವಿಶ್ವಸಂಸ್ಥೆ ಹಾಗೆಯೇ ಜಗತ್ತಿನ ಬಹುತೇಕ ವಿಜ್ಞಾನಿಗಳು ಹೇಳುತ್ತಲೇ ಬಂದಿದ್ದಾರೆ. ವಾಯುಗೋಳದಲ್ಲಿ ಸಹಜ ಪ್ರಕ್ರಿಯೆಗಳನ್ನು ನಾವು ಬದಲಾಯಿಸಲು ಹೊರಟಿದ್ದೇವೆ- ಎಲ್ಲರೂ ಬೆರಳು ಮಾಡುತ್ತಿರುವುದು ಭೂತಾಪ ಏರಿಗೆಯ ಬಗ್ಗೆ. ಇದರ ಮೂಲ ಹುಡುಕಲು ಹೊರಟರೆ ನಾವು ೧೮-೧೯ನೇ ಶತಮಾನದಲ್ಲಾದ ಕೈಗಾರಿಕಾ ಕ್ರಾಂತಿಯತ್ತಲೇ ಬೆರಳು ತೋರಿಸಬೇಕಾಗುತ್ತದೆ. ವಾಯುಗೋಳದಲ್ಲಿ ಕೈಗಾರಿಕೆಯ ಉತ್ಸರ್ಜನೆಯಿಂದ ಕಾರ್ಬನ್‌ ಡೈ ಆಕ್ಸೈಡ್‌ ಪ್ರಮಾಣವನ್ನು ಹೆಚ್ಚಿಸುತ್ತಿದ್ದೇವೆ. ಭೂಮಿ-ಸಾಗರ ಈ ಹೆಚ್ಚಿದ ಉಷ್ಣತೆಯನ್ನು ಸಹಿಸುವ ತ್ರಾಣವನ್ನು ನಿಧಾನವಾಗಿ ಕಳೆದುಕೊಳ್ಳುತ್ತಿವೆ. ಭೂಮಿ-ಸಾಗರಗಳ ನಡುವೆ ಆಗುವ ಉಷ್ಣ ವಿನಿಮಯದ ಪ್ರಕ್ರಿಯೆಯಲ್ಲಿ ಮನುಷ್ಯ ಮೂಗು ತೂರಿಸುತ್ತಿದ್ದಾನೆ. ನಾವು ವಾಯುಗೋಳದಲ್ಲಿ ಅಸಮತೆ ಸೃಷ್ಟಿಸುತ್ತಿದ್ದೇವೆ. ಇವೆಲ್ಲದರ ಫಲವೇ ಅತಿವೃಷ್ಟಿ-ಅನಾವೃಷ್ಟಿ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More