ಸಿಎಂ ಕುಮಾರಸ್ವಾಮಿ ಅವರಿಗೆ ಎಚ್‌ ನರಸಿಂಹಯ್ಯ ಹೀಗೆ ದಾರಿದೀಪ ಆಗಬಲ್ಲರು!

ತಾವು ಓದಿದ ನ್ಯಾಷನಲ್‌ ಕಾಲೇಜಿಗೆ ಸೋಮವಾರ ಭೇಟಿ ನೀಡಿದ್ದ ಸಿಎಂ ಕುಮಾರಸ್ವಾಮಿ ಅವರು ಎಚ್‌ ನರಸಿಂಹಯ್ಯನವರನ್ನು ತಮ್ಮ ಬದುಕಿನ ದಾರಿದೀಪ ಎಂದು ನೆನೆದಿದ್ದಾರೆ. ಎಚ್‌ಎನ್‌ ಜೀವನ ತತ್ವಗಳು ಕುಮಾರಸ್ವಾಮಿ ಅವರ ಆಡಳಿತದಲ್ಲಿ ನಿಜಕ್ಕೂ ದಾರಿ ತೋರುವ ದೀಪವಾಗಬಹುದು

ಚುನಾವಣಾ ಫಲಿತಾಂಶ ಹೊರಬಿದ್ದ ಸಂದರ್ಭ. ಸರ್ಕಾರ ರಚನೆಯ ಕಸರತ್ತು ಮುಗಿದು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ನಿಯೋಜಿತರಾಗಿದ್ದರು. ಈ ವೇಳೆ, ಒಂದು ವಾರದ ಅವಧಿಯಲ್ಲಿ ಕುಮಾರಸ್ವಾಮಿಯವರು ರಾಜ್ಯದ ವಿವಿಧ ಭಾಗಗಳಲ್ಲಿರುವ ಪ್ರಮುಖ ೧೧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದರು.

ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುವ ಮುನ್ನ ಮೈಸೂರಿನ ಚಾಮುಂಡಿ ಕ್ಷೇತ್ರ, ರಾಮನಗರದ ಚಾಮುಂಡೇಶ್ವರಿ ದೇಗುಲ, ಅಲ್ಲದೆ ದರ್ಗಾ ಮತ್ತು ಚರ್ಚ್‌ಗಳಿಗೂ ಭೇಟಿ ನೀಡಿ ಬಂದರು. ಇದಾಗಿ ಕೆಲವೇ ದಿನಗಳಾಗಿವೆ. ಕುಮಾರಸ್ವಾಮಿಯವರು ಸೋಮವಾರ ನ್ಯಾಷನಲ್‌ ಕಾಲೇಜಿನ ಕಾರ್ಯಕ್ರಮದಲ್ಲಿ ಪ್ರಖರ ವಿಚಾರವಾದಿ ಎಚ್‌ ನರಸಿಂಹಯ್ಯನವರನ್ನು ನೆನೆದರು.

ಆದರೆ, ಕುಮಾರಸ್ವಾಮಿ ಅವರು ನೆನಪಿಸಿಕೊಳ್ಳದೆ ಹೋಗಿದ್ದು, ಎಚ್‌ಎನ್‌ ಅವರ ವೈಚಾರಿಕ ವ್ಯಕ್ತಿತ್ವವನ್ನು. ಮೂಢನಂಬಿಕೆಗಳ ಬಗೆಗಿದ್ದ ಅವರ ವಿರೋಧ, ಡಂಬಾಚಾರಗಳ ಬಗ್ಗೆ ನಿಷ್ಠುರ ವಿಮರ್ಶೆ ಮತ್ತು ವೈಜ್ಞಾನಿಕ ಮನೋಭಾವದ ಅಗತ್ಯತೆಯನ್ನು ಕುಮಾರಸ್ವಾಮಿ ಸ್ಮರಿಸಿಕೊಳ್ಳದೆ ಹೋದರು.

ಎಚ್‌ಎನ್‌ ನಾಸ್ತಿಕರೇ ಆಗಿದ್ದರೂ, ಕುರುಡಾಗಿ ವಿರೋಧಿಸುತ್ತಿರಲಿಲ್ಲ. ಅವರದೇ ಮಾತನ್ನು ಇಲ್ಲಿ ಉಲ್ಲೇಖಿಸುವುದಾದರೆ, "ನಾನು ನಾಸ್ತಿಕನಾದರೂ ಅಂಧ ಮೂರ್ತಿಭಂಜಕನಲ್ಲ. ಮಾನವ ಕೇಂದ್ರಿತ ಧರ್ಮದಲ್ಲಿ ನನಗೆ ನಂಬಿಕೆ. ಧರ್ಮ ಆಚರಣಾವಾದಿಯಾಗಬಾರದು, ನೀತಿವಾದಿ ಆಗಿರಬೇಕು. ಮಾನವೀಯ ಮೌಲ್ಯಗಳಲ್ಲಿ ನಂಬಿಕೆಯಿರುವ ಸ್ವಾರ್ಥರಹಿತ ಪ್ರಾಮಾಣಿಕನಾದ ಆಸ್ತಿಕನನ್ನು- ಅಮಾನವೀಯ, ಅಪ್ರಾಮಾಣಿಕ, ಆತ್ಮ ಕೇಂದ್ರಿತ ವಿಚಾರವಾದಿ ಅಥವಾ ನಾಸ್ತಿಕನಗಿಂಥ ಉತ್ತಮನೆಂದು ಪರಿಗಣಿಸುತ್ತೇನೆ.’’

ನರಸಿಂಹಯ್ಯನವರ ಈ ವ್ಯಕ್ತಿತ್ವ ಎಷ್ಟರಮಟ್ಟಿಗೆ ಕುಮಾರಸ್ವಾಮಿಯನ್ನು ಪ್ರಭಾವಿಸಿತು ಎಂಬ ಕುತೂಹಲಕ್ಕೆ ಉತ್ತರವಿಲ್ಲ.

ಮುಖ್ಯಮಂತ್ರಿ ಕುಮಾರಸ್ವಾಮಿ, ಎಚ್‌ ನರಸಿಂಹಯ್ಯನವರು ಸ್ಥಾಪಿಸಿದ ಬೆಂಗಳೂರಿನ ಜಯನಗರ ನ್ಯಾಷನಲ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡಿದವರು. ಸನ್ಮಾನ ಸ್ವೀಕರಿಸುತ್ತ, ಆ ದಿನಗಳನ್ನು ನೆನದ ಅವರು, ಎಚ್‌ ಎನ್‌ ನನ್ನ ಬದುಕಿಗೆ ದಾರಿದೀಪ ಎಂದೂ, ಅವರು ಖ್ಯಾತ ಗಾಂಧಿವಾದಿ ಎಂದು ಮಾತ್ರ ಸ್ಮರಿಸಿದರು. ಎಚ್‌ ಎನ್‌ ಅವರ ಸರಳತೆ, ಹೃದಯವಂತಿಕೆ ಕುಮಾರಸ್ವಾಮಿಯಲ್ಲಿದೆ ಎಂದು ಅನೇಕರು ಶ್ಲಾಘಿಸುತ್ತಾರೆ. ಇದು ಎಚ್‌ ಎನ್‌ ಅವರ ಪ್ರಭಾವವೇ ಇರಬಹುದು.

ಆದರೆ, ಎಚ್‌ಎನ್‌ ಎಷ್ಟು ಕಟ್ಟರ್‌ ಗಾಂಧಿವಾದಿಯಾಗಿದ್ದರೋ, ಅಷ್ಟೇ ಪ್ರಖರವಾದ ವಿಚಾರವಾದಿಯೂ ಆಗಿದ್ದರು. ವೈಜ್ಞಾನಿಕ ಮನೋಭಾವದ ಪ್ರತಿಪಾದಕರಾಗಿದ್ದರು. ವಿದ್ಯಾಭ್ಯಾಸದ ದಿನಗಳಲ್ಲಿ ಹತ್ತಿರದಿಂದ ಬಲ್ಲ ಕುಮಾರಸ್ವಾಮಿಯವರಿಗೆ ಎಚ್‌ಎನ್‌ ಅವರ ವಿಚಾರಪರ ನಿಲುವು ಮುಖ್ಯವಾಗಲಿಲ್ಲವೇ ಎಂಬುದು ಪ್ರಶ್ನೆ.

ಹಾಗಾಗಿ, ಎಚ್‌ಎನ್‌ ನೆನಪಿಸಿಕೊಂಡ ಕುಮಾರಸ್ವಾಮಿ, ಅವರಿಗೆ ಅವರ ಚಿಂತನೆಗಳನ್ನು ನೆನಪಿಸುವ ಪ್ರಯತ್ನವಿದು. ಇವು ಕುಮಾರಸ್ವಾಮಿ, ಆಡಳಿತಾತ್ಮಕ ನಿರ್ಧಾರ, ಸಮಾಜಮುಖಿ ಚಟುವಟಿಕೆಗಳಿಗೆ ದಾರಿದೀಪವಾಗಬಹುದು ಎಂಬ ಆಶಯ.

⦁ ಪ್ರಶ್ನೆ ಮಾಡದೆ ಏನನ್ನೂ ಒಪ್ಪಿಕೊಳ್ಳಬಾರದು ಎಂದು ಪ್ರತಿಪಾದಿಸಿದವರು ಎಚ್ ಎನ್‌. ಸರ್ಕಾರದ ಪರಿಧಿಗೆ ಬರುವ ಹಲವು ನಿರ್ಧಾರಗಳನ್ನು ಕೈಗೊಳ್ಳುವಾಗ ಸ್ಥಾನದ ಕಾರಣಕ್ಕೆ ವಿವಿಧ ರೀತಿಯ ಒತ್ತಡಗಳನ್ನು ಮುಖ್ಯಮಂತ್ರಿಗಳು ಎದುರಿಸಲೇಬೇಕಾಗುತ್ತದೆ. ಮಠಮಾನ್ಯಗಳು, ಧಾರ್ಮಿಕ ಮುಖಂಡರುಗಳಿಂದ ಒತ್ತಡಗಳು ಬರಬಹುದು. ಜನಪರವಾಗಿರುವುದೇನು, ತರ್ಕಬದ್ಧವಾಗಿರುವುದೇನು ಎಂಬುದನ್ನು ಪ್ರಶ್ನಿಸದೆ, ಮನವರಿಕೆಯಾಗದೆ ಯಾವುದೇ ಒತ್ತಡಕ್ಕೆ ಮಣಿಯದಂತೆ ಇರಬೇಕು.

⦁ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಆರಂಭಿಸಿದವರು ಎಚ್‌ ಎನ್‌. ಈ ಮೂಲಕ ರಾಜ್ಯದ ಮೂಲೆಮೂಲೆಯಲ್ಲಿ ವಿಜ್ಞಾನ ಕುರಿತ ತಿಳಿವಳಿಕೆ ಹೆಚ್ಚಿಸಿ, ವಿಚಾರವಂತಿಕೆಯನ್ನು ಬೆಳೆಸಲು ಯತ್ನಿಸಿದರು. ಮೌಢ್ಯವೇ ತಾಂಡವವಾಡುತ್ತಿರುವ ಕಾಲದಲ್ಲಿ ಇಂಥ ಪ್ರಯತ್ನಗಳನ್ನು ಮುಂದುವರಿಸಬೇಕು. ವೈಜ್ಞಾನಿಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸಬೇಕು. ಸಂವಿಧಾನವು, ಪ್ರತಿಯೊಬ್ಬ ಪ್ರಜೆಯ ಮೂಲಭೂತವಾದ ಹತ್ತು ಕರ್ತವ್ಯಗಳನ್ನು ಸೂಚಿಸಿದೆ. ಅವುಗಳಲ್ಲಿ ಎಂಟನೆಯ ಕರ್ತವ್ಯವು ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದೂ ಸೇರಿದೆ. ವೈಚಾರಿಕತೆ ಎಲ್ಲ ಕ್ಷೇತ್ರದಲ್ಲೂ ವ್ಯಾಪಿಸಬೇಕೆಂಬುದು ಎಚ್‌ಎನ್‌ ಹಂಬಲವನ್ನು ಈ ಮೂಲಕ ಎತ್ತಿಹಿಡಿಯಬಹುದು.

⦁ ನರಸಿಂಹಯ್ಯನವರು ಶಿಕ್ಷಣ ಮಾಧ್ಯಮದ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದರು. ಮಾತೃಭಾ‍ಷೆಯಲ್ಲೇ ಶಿಕ್ಷಣ ಲಭ್ಯವಾಗಬೇಕೆಂದು ಒತ್ತಾಯಪಡಿಸುತ್ತಿದ್ದರು. ಈಗ ಪೋಷಕರ ನಿರ್ಧಾರದಂತೆ ಮಕ್ಕಳ ಶಿಕ್ಷಣ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದಿದೆ. ಆದರೆ, ಎಚ್‌ಎನ್‌ ತಾಯಿ ಭಾಷೆಯಲ್ಲೇ ಶಿಕ್ಷಣ ಕೊಡುವುದು ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ನೆರವಾಗುತ್ತದೆ ಎಂದು ನಂಬಿದ್ದರು. ಮುಖ್ಯಮಂತ್ರಿಗಳು ಇದನ್ನು ಗಮನಿಸಬೇಕು.

⦁ ಸರ್ಕಾರಿ ಶಾಲೆಗಳು ಭದ್ರಪಡಿಸದೆ ಆರ್‌ಟಿಇ ಹೆಸರಲ್ಲಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸುತ್ತಿದ್ದೇವೆ. ಇದನ್ನು ಎಚ್‌ ಎನ್‌ ಖಂಡಿತವಾಗಿ ವಿರೋಧಿಸುತ್ತಿದ್ದರು. ಯಾಕೆಂದರೆ, ಮಕ್ಕಳು ಅಂಥ ಸಂಸ್ಥೆಗಳಲ್ಲಿ ತಾರತಮ್ಯಕ್ಕೆ ಗುರಿಯಾಗುತ್ತಾರೆ. ಅವಮಾನಕ್ಕೆ ಗುರಿಯಾಗುವ ಸಾಧ್ಯತೆಗಳಿರುತ್ತವೆ. ಈ ಬಗ್ಗೆ ಎಚ್‌ ಎನ್‌ ನಿಲುವನ್ನು ಮುಖ್ಯಮಂತ್ರಿಗಳು ಅರ್ಥಮಾಡಿಕೊಳ್ಳುವಂತಾಗಬೇಕು.

⦁ ಸಮಾಜ ಕಲ್ಯಾಣ ವಿಶ್ವಶಾಂತಿಯನ್ನು ಪ್ರಾರ್ಥನೆ, ಯಜ್ಞ ಯಾಗಾದಿಗಳ ಮೂಲಕ ಸಾಧಿಸಬಹುದೆಂಬ ನಂಬಿಕೆಯೂ ಅಷ್ಟೇ ಬಲವಾಗಿದೆ. ಪ್ರಾರ್ಥನೆ ವೈಯುಕ್ತಿಕವಾಗಬಹುದು ಅಥವಾ ಸಾಮೂಹಿಕವಾಗಬಹುದು, ಮೌನದ ಧ್ಯಾನವಾಗಬಹುದು; ಆರ್ಭಟದ ಸಂಕೀರ್ಥನವಾಗಬಹುದು. ಇವೆಲ್ಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಕಷ್ಟಗಳು ಪರಿಹಾರಕ್ಕೆ ಸಾಮಾನ್ಯವಾಗಿ ಎಲ್ಲ ಧರ್ಮಗಳ ಜನರೂ ದೇವರಿಗೆ ಮೊರೆಹೋಗುತ್ತಾರೆ. ಅವರವರ ಕಷ್ಟಗಳು, ಸಮಸ್ಯೆಗಳು, ಸಾಧನೆಗಳಿಗಾಗಿ ಪ್ರಾರ್ಥನೆಯನ್ನೇ ಅವಲಂಬಿಸುತ್ತಾರೆ. ಆದರೆ, ಸ್ವಪ್ರಯತ್ನ ದೃಢ ಮನಸ್ಸು, ಆತ್ಮ ವಿಶ್ವಾಸಗಳಿಂದ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ನಮ್ಮ ಯಾವುದೇ ಯಶಸ್ಸಿಗೂ ಪ್ರಾರ್ಥನೆಗೂ ಸಂಬಂಧವಿಲ್ಲ. ಪ್ರಪಂಚದಲ್ಲಿ ಲಕ್ಷಾಂತರ ಮಂದಿ ಪಂಡಿತರು, ವಿಜ್ಞಾನಿಗಳು, ದಾರ್ಶಿಕರು, ರಾಜಕಾರಣಿಗಳು ಪೂಜಾದಿಗಳ ಸೋಂಕಿಲ್ಲದೆ ಗಣನೀಯ ಸ್ಥಾನಗಳನ್ನು ಗಳಿಸಿದ್ದಾರೆ ಎಂದಿದ್ದರು ಎಚ್‌ ಎನ್‌.

⦁ ಮುಖ್ಯವಾಗಿ, ಪ್ರಾರ್ಥನೆ ಪೂಜಾದಿಗಳು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಕಾರ್ಯಗತ ಮಾಡುವ ಸಾಧನಗಳಾಗಬೇಕು ಎನ್ನುತ್ತಿದ್ದರು ಎಚ್‌ ಎನ್‌. ಅವೇ ಅಂತಿಮ ಧ್ಯೇಯಗಳಾಗಬಾರದು. ಪ್ರತಿಯೊಬ್ಬನೂ ದಯೆ, ಅನುಕಂಪ, ಸೇವಾ ಮನೋಭಾವ, ಸರಳ ಜೀವನ ಇವುಗಳನ್ನು ಜೀವನದ ಮನೋಧರ್ಮಗಳನ್ನಾಗಿ ಮಾಡಿಕೊಂಡರೆ ವ್ಯಕ್ತಿಗೆ ಶಾಂತಿ, ತೃಪ್ತಿ, ಸಮಾಧಾನ ಸಿಗುವುದರ ಜೊತೆಗೆ ಸಮಾಜಕಲ್ಯಾಣವೂ ಆಗುತ್ತದೆ. ಇದಕ್ಕಿಂತ ಹೆಚ್ಚಿನ ಪ್ರಾರ್ಥನೆಯಾಗಲೀ, ಪೂಜೆಯಾಗಲಿ ಅಥವಾ ಧರ್ಮವಾಗಲೀ ಯಾವುದೂ ಇಲ್ಲ ಎಂದು ಪ್ರಬಲವಾಗಿ ನಂಬಿದ್ದರು.

ಇದನ್ನೂ ಓದಿ : ಏಳು ದಿನದಲ್ಲಿ ಒಂಬತ್ತು ದೇವಸ್ಥಾನಕ್ಕೆ ಭೇಟಿ ಕೊಟ್ಟ ಎಚ್‌ ಡಿ ಕುಮಾರಸ್ವಾಮಿ

ಕುಮಾರಸ್ವಾಮಿಯವರು ಈ ಅರ್ಥದಲ್ಲಿ ನರಸಿಂಹಯ್ಯನವರನ್ನು ನೆನಪಿಸಿಕೊಂಡರೆ, ತಮ್ಮ ಆಡಳಿತದಲ್ಲಿ ಅವರ ವಿಚಾರಗಳ ನೆರಳಿನಲ್ಲಿ ನಡೆಸಲು ಸಾಧ್ಯವಾದರೆ, ಅದು ನಿಜವಾದ ಅರ್ಥದಲ್ಲಿ ಗೌರವ ಸಲ್ಲಿಸಿದಂತೆ. ವಿಚಾರವಾದಿ, ನಾಸ್ತಿಕನೆಂದ ಮಾತ್ರಕ್ಕೆ ಸಮಾಜದಲ್ಲಿ ಒಂದು ರೀತಿ ಅಸಹನೆಯ ಭಾವನೆ ಇರುತ್ತದೆ. ಆದರೆ ಸ್ವತಃ ಎಚ್‌ ಎನ್‌ ಅವರ ಈ ಮಾತುಗಳು ತಮ್ಮ ವೈಚಾರಿಕತೆ ಮತ್ತು ಮೂಢನಂಬಿಕೆಯ ಸ್ಪಷ್ಟತೆಯನ್ನು ನೀಡುತ್ತದೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More