ಸಮಾಧಾನ | ಮಂಜುಭಾಷಿಣಿಯ ಆತಂಕದ ಹಿಂದಿನ ನಿಜವಾದ ಕಾರಣವೇನು ಗೊತ್ತೇ?

ಹರೆಯದ ಹುಡುಗಿ ಮಂಜುಭಾಷಿಣಿ ತೀವ್ರ ಭಯಕ್ಕೆ ಒಳಗಾಗಿದ್ದಳು. ಅವಳು ರಾತ್ರಿ ವೇಳೆ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಿದ್ದಳು. ಈ ಹಿನ್ನೆಲೆಯಲ್ಲಿ ಅವಳ ತಂದೆ-ತಾಯಿ ಚಿಂತೆಗೀಡಾಗಿದ್ದರು. ಆಕೆಯ ಈ ವರ್ತನೆಗೆ ಕಾರಣವೇನು ಎಂಬುದನ್ನು ಕಂಡುಕೊಂಡು ಚಿಕಿತ್ಸೆ ನೀಡಲಾಯಿತು

“ಇವಳು ನನ್ನ ಮಗಳು. ಮಂಜುಭಾಷಣಿ. 15 ವರ್ಷ ವಯಸ್ಸು. ಧರ್ಮಸ್ಥಳದ ಮಂಜುನಾಥನ ಕೃಪೆಯಿಂದ ಹುಟ್ಟಿದವಳು. ಮದುವೆಯಾಗಿ ಆರು ವರ್ಷಗಳಾದರೂ ನಾನು ಗರ್ಭ ಧರಿಸಲಿಲ್ಲ. ಮೂರು ನಾಲ್ಕು ಡಾಕ್ಟರುಗಳಿಂದ ಚಿಕಿತ್ಸೆ ಪಡೆದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಮಂಜುನಾಥನ ಮೊರೆಹೋದೆವು. ವಿಶೇಷ ಪೂಜೆ ಮಾಡಿಸಿದೆವು. ಮೂರು ತಿಂಗಳಲ್ಲೇ ಗರ್ಭ ಧರಿಸಿದೆ. ಇವಳು ಹುಟ್ಟಿದಳು. ಇವಳಾದ ಮೇಲೆ ಮೂರು ವರ್ಷದ ಮೇಲೆ ಮಗ ಹುಟ್ಟಿದ. ಅವನಿಗೆ ಮಂಜುನಾಥ ಎಂದೇ ಹೆಸರಿಟ್ಟಿದ್ದೇವೆ...”

“ ಆಯಿತಮ್ಮ ಸಂತೋಷ. ಈಗ ನೀವೇಕೆ ಬಂದಿರಿ? ಅದನ್ನು ಹೇಳಿ,” ಎಂದೆ ನಗುತ್ತ.

“ಸಾರಿ ಡಾಕ್ಟರೇ, ಹೆಚ್ಚಿಗೆ ಮಾತಾಡಿಬಿಟ್ಟೆ. ಮಂಜುಭಾಷಿಣಿ ರಾತ್ರಿ ಬಟ್ಟೆ-ಹಾಸಿಗೆಯಲ್ಲೇ ಮೂತ್ರ ಮಾಡಿಕೊಳ್ಳುತ್ತಾಳೆ...”

“ವಾರಕ್ಕೆ ಎಷ್ಟು ಸಲ ಮಾಡಿಕೊಳ್ಳುತ್ತಾಳೆ. ಪ್ರತಿದಿನ ಮಾಡಿಕೊಳ್ಳುತ್ತಾಳೆಯೇ?”

“ಪ್ರತಿದಿನ ಮಾಡಿಕೊಳ್ಳಲ್ಲ. 2 ದಿನಕ್ಕೊಮ್ಮೆ ನಾಲ್ಕು ದಿನಕ್ಕೊಮ್ಮೆ ಮಾಡಿಕೊಳ್ತಾಳೆ...”

“ಯಾವಾಗಿನಿಂದ?”

“ಆಗಲೇ ಒಂದು ವರ್ಷವಾಯಿತು ಡಾಕ್ಷರೇ...”

“ಡಾಕ್ಟರಿಗೆ ತೋರಿಸಿದಿರಾ?”

“ಹೂಂ ಸಾರ್‌, ನಮ್ಮ ಪರಿಚಯದ ಡಾಕ್ಟರಿಗೆ ಹೇಳಿದೆವು. ಅವ್ರು ಮೂತ್ರ ಪರೀಕ್ಷೆ ಮಾಡಿಸಿ, ಸೋಂಕು-ಇನ್‌ಫೆಕ್ಷನ್‌ ಏನಿಲ್ಲ. ರಾತ್ರಿ ಊಟದಲ್ಲಿ ಹೆಚ್ಚು ನೀರು ಪದಾರ್ಥ ಕೊಡಬೇಡಿ. ಕಾಫಿ, ಹಾಲು, ಮಜ್ಜಿಗೆ ಬೇಡಿ ಮೂತ್ರ ಮಾಡಿಸಿ ಮಲಗಿಸಿ ಸರಿ ಹೋಗುತ್ತೆ ಎಂದರು. ಹಾಗೇ ಮಾಡಿದೆವು. ಸ್ಪಲ್ಪ ದಿವಸ ಸರಿ ಹೋಯ್ತು. ಮತ್ತೆ ಶುರುವಾಯಿತು. ಆಗ ಅವರು ನಿಮ್ಮನ್ನು ಕಾಣಲು ಹೇಳಿದರು. ಇದು ನರಗಳ ವೀಕ್‌ನೆಸ್ಸೇ. ಬೆಳೆಯುತ್ತಿರುವ ಹುಡುಗಿ. ಇದು ಹೀಗೆ ಮುಂದುವರಿದರೆ, ಮದುವೆ ಸಮಯದಲ್ಲಿ ಏನು ಗತಿ?” ಎಂದು ಅವಲತ್ತುಕೊಂಡರು ಮಂಜುಭಾಷಿಣಿಯ ತಾಯಿ.

“ಹೇಳು ಮಂಜುಭಾಷಿಣಿ. ಏನಾಗುತ್ತದೆ ನಿಂಗೆ?”

“ನಿದ್ರೆಯಲ್ಲಿ ಮೂತ್ರ ಮಾಡಿಕೊಂಡುಬಿಡುತ್ತೇನೆ. ನನಗೆ ಗೊತ್ತಾಗುವುದಿಲ್ಲ. ಬೆಳಿಗ್ಗೆ ಎದ್ದಾಗ ಒದ್ದೆಯಾದ ಹಾಸಿಗೆ ಬಟ್ಟೆಯನ್ನು ಕಂಡರೆ ನನಗೇ ನಾಚಿಕೆಯಾಗುತ್ತದೆ. ನನ್ನನ್ನು ನಾನೇ ಶಪಿಸಿ ಕೊಳ್ಳುತ್ತೇನೆ. ಅಮ್ಮನೂ ಬೈಯುತ್ತಾಳೆ...”

“ಈ ತೊಂದರೆಗೆ ನೀನು ನಿನ್ನನ್ನು ಶಪಿಸಿಕೊಳ್ಳಬೇಡ. ಯಾವುದೋ ಭಯ, ಟೆನ್ಶನ್‌ ನಿನ್ನನ್ನು ಕಾಡ್ತಿದೆ. ಅದಕ್ಕೇ ಈ ತೊಂದರೆ ಬಂದಿರೋದು. ನಿನ್ನ ಮನಸ್ಸು ಬಿಚ್ಚಿ ನನ್ನ ಜೊತೇಲಿ ಮಾತಾಡು. ಒಂದು ವರ್ಷದ ಹಿಂದೆ ಇದು ಹೇಗೆ ಶುರುವಾಯಿತು? ಆಗ ಮನೇಲಿ ಏನಾದರೂ ಆಯಿತಾ? ಸ್ಕೂಲಿನಲ್ಲಿ ಏನಾದರೂ ಸಮಸ್ಯೆ ಇದೆಯೇ? ಆಗ ಮನೇಲಿ ಏನಾದರೂ ನಿನ್ನನ್ನು ಬೈದದ್ದು ಉಂಟಾ?”

“ಸ್ಕೂಲಿನಲ್ಲಿ ಏನೂ ಸಮಸ್ಯೆ ಇಲ್ಲ. ಟೀಚರ್ಸ್‌, ಕ್ಲಾಸ್‌ಮೇಟ್ಸ್‌ ಎಲ್ಲ ಒಳ್ಳೆಯವರು... ಅಮ್ಮ ನೀನು ಸ್ವಲ್ಪ ಹೊರಗಿರು… ಡಾಕ್ಟರ ಜೊತೇಲಿ ನಾನೊಬ್ಬಳೇ ಮಾತನಾಡಬೇಕು,” ಎಂದಳು.

“ಆಯಿತು. ನಾನು ಹೊರಗಿರ್ತೇನೆ. ನೀನು ಮುಕ್ತವಾಗಿ ಮಾತನಾಡು,” ಎಂದು ಅವಳಮ್ಮ ಹೊರಗೆ ಹೋದರು.

“ಹೇಳಮ್ಮ...”

“ನನ್ನ ಅಮ್ಮ ಸ್ಪಲ್ಪ ಘಾಟಿ ಸರ್‌. ನನ್ನ ಅಜ್ಜಿ, ತಾತ ವಯಸ್ಸಾದವರು. ಅವರನ್ನು ಸರಿಯಾಗಿ ನೋಡಿಕೊಳ್ಳದೆ, ಟೈಮಿಗೆ ಸರಿಯಾಗಿ ಊಟ ಕೊಡದೆ, ಜಗಳ ಮಾಡಿ, ನಮ್ಮ ಮನೆಯಿಂದ ಓಡಿಸಿಬಿಟ್ಟರು...”

“ಓಡಿಸಿಬಿಟ್ಟರು ಅಂದ್ರೆ ಎಲ್ಲಿಗೆ ಕಳುಹಿಸಿದರು?”

“ನಮ್ಮ ಚಿಕ್ಕಪ್ಪನ ಮನೆಗೆ ಹೋಗುವಂತೆ ಮಾಡಿದಳು. ಕೆಟ್ಟ ಅಮ್ಮ. ಅಜ್ಜಿಗೆ ನನ್ನನ್ನು ಕಂಡ್ರೆ ಬಹಳ ಪ್ರೀತಿ, ನನಗೂ ಅಷ್ಟೆ. ನನಗೇನು ಬೇಕಾದರೂ ಅಜ್ಜಿಗೆ ಹೇಳ್ತಿದ್ದೆ. ಅವರು ಅದನ್ನು ರೆಕಮಂಡ್‌ ಮಾಡಿ ಅಪ್ಪನಿಗೆ ಹೇಳಿ ಕೊಡಿಸುತ್ತಿದ್ದರು. ಅಮ್ಮ ಜಿಪುಣಿ ಸಾರ್‌. ಹತ್ತು ರುಪಾಯಿ ಬೆಲೆಯ ಸಾಮಾನನ್ನು ಕೇಳಲಿ. ಏಕೆ ಬೇಕದು ಸುಮ್ನೆ ಹಣ ವ್ಯರ್ಥ ಮಾಡಬಾರದು ಎಂತಲೋ, ಮುಂದಿನ ತಿಂಗಳು ತೆಗೆದುಕೊಳ್ಳುವಿಯಂತೆ ಅಂತಲೋ ಹೇಳಿಬಿಡ್ತಾಳೆ. ನಾನು ಮದುವೆಯಾಗಿ ಗಂಡನ ಮನೆಗೆ ಹೋಗೋಳು ದುಡ್ಡು ಕಾಸಿನ ವಿಚಾರದಲ್ಲಿ ಉಷಾರಾಗಿರಬೇಕು; ಹಣವನ್ನು ಖರ್ಚು ಉಳಿತಾಯ ಮಾಡಬೇಕು ಅಂತ ಉಪದೇಶ ಮಾಡ್ತಾಳೆ. ಆದರೆ, ನನ್ನ ತಮ್ಮ ಏನೇ ಕೇಳಲಿ ಕೊಡಿಸ್ತಾಳೆ. ಅವನನ್ನು ಕಂಡ್ರೆ ಬಲು ಪ್ರೀತಿ ಅವಳಿಗೆ. ಬಂದವರ ಮುಂದೆ, ‘ಹೆಣ್ಣುಮಕ್ಕಳು ಮದುವೆಯಾಗಿ ಗಂಡನ ಮನೆ ಸೇರ್ಕೊಳ್ತಾರೆ. ಗಂಡುಮಕ್ಕಳು ಅಪ್ಪ-ಅಮ್ಮನ ಹತ್ತಿರ ಇದ್ದು ನೋಡ್ಕೊಳ್ತಾರೆ. ಮಗಳ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವುದರಲ್ಲಿ ಅಪ್ಪ ಅಮ್ಮನ ಹೆಣ ಬಿದ್ದುಹೋಗುತ್ತೆ’ ಅಂತಿರ್ತಾಳೆ. ‘ನಿನ್ನ ಅಪ್ಪ-ಅಮ್ಮ ನಿನ್ನ ಮದುವೆಗೆ ಎಷ್ಟು ಖರ್ಚು ಮಾಡಿದರಮ್ಮ?’ ಅಂತ ಒಂದು ದಿನ ಕೇಳ್ದೆ. ‘ಅಯ್ಯೋ ಅದನ್ಯಾಕೆ ಕೇಳ್ತಿ! ನಮ್ಮ ಕುಟುಂಬಕ್ಕೆ ಆಧಾರವಾಗಿದ್ದ ಒಂದು ಎಕರೆ ತೋಟವನ್ನು ಮಾರಿ ನನ್ನ ಮದುವೆ ಮಾಡಿದರು. ನಿಮ್ಮ ಅಜ್ಜಿ-ತಾತನಿಗೆ ಇನ್ನಷ್ಟು ಹಣ, ಒಡವೆ ಬೇಕಿತ್ತಂತೆ. ಮದುವೆ ಮನೇಲಿ ತಗಾದೆ ತೆಗೆದಿದ್ದರು. ಆಗ ಹಿರಿಯರು ಕೆಲವರು ಅವರ ಬಾಯಿ ಮುಚ್ಚಿಸಿದ್ದರು. ನಿಮ್ಮಪ್ಪ ಕೊಟ್ಟ ಉಂಗುರ, ಬ್ರೇಸ್‌ಲೇಟ್‌ ಶುದ್ಧ ಚಿನ್ನವಲ್ಲ’ ಅಂತ ನನ್ನನ್ನು ಹಲವಾರು ವರ್ಷ ನನ್ನ ಹಂಗಿಸ್ತಿದ್ದರು. ಅಜ್ಜಿ-ಅಜ್ಜನ ಮೇಲೆ ಕೋಪಕ್ಕೆ ಇದೂ ಒಂದು ಕಾರಣ ಸರ್‌”

“ಅಜ್ಜಿಯನ್ನು ನೀನು ಬಹಳ ಮಿಸ್‌ ಮಾಡಿಕೊಳ್ತಿದ್ದೀಯಾ?”

“ಹೂಂ ಸರ್‌... ನಾನು ಅವರ ಪಕ್ಕದಲ್ಲೇ ಮಲಗಿಕೊಳ್ತಿದ್ದೆ. ದೈರ್ಯದಿಂದ ಇರ್ತಿದ್ದೆ. ನಿದ್ರೆ ಮಾಡ್ತಿದ್ದೆ. ಅವರು ಹೋದ ಮೇಲೆ ಒಂದು ದಿನ ಏನಾಯ್ತು ಗೊತ್ತಾ… ಇದನ್ನು ನೀವು ಯಾರಿಗೂ ಹೇಳಬಾರದು. ಪ್ರಾಮಿಸ್‌? ಅಮ್ಮನಿಗೆ ಇದು ಗೊತ್ತಾಗಲೇಬಾರದು...”

“ಪ್ರಾಮಿಸ್ ಹೇಳು. ಒಂದು ದಿನ ಏನಾಯ್ತು?”

“ನನ್ನ ತಾಯಿಯ ತಮ್ಮ ಶಶಿಧರ ಅಂತ ಆಗಾಗ್ಗೆ ಬರ್ತಿರ್ತಾರೆ. ಒಳ್ಳೆಯವರಲ್ಲ. 30 ವರ್ಷವಾಗಿದ್ದರೂ ಮದುವೆಯಾಗಿಲ್ಲ. ಏನೂ ಉದ್ಯೋಗ ಮಾಡೊಲ್ಲ. ಸಂಪಾದನೆ ಇಲ್ಲ. ಬಿಸಿನೆಸ್‌ ಮಾಡ್ತೀನಿ ಅಂತ ಹೇಳ್ಕೊಂಡು ಓಡಾಡ್ತಿರ್ತಾರೆ. ತಿಂಗಳಿಗೊಮ್ಮೆ ನಮ್ಮ ಮನೆಗೆ ಬರೋದು, ಖರ್ಚಿಗೆ ಸ್ಪಲ್ಪ ಹಣ ಬೇಕು ಕೊಡು ಭಾವ ಅಂತ. ಅಪ್ಪ-ಅಮ್ಮನ ಹತ್ರ ಇಸಿದುಕೊಂಡು ಹೋಗ್ತಾರೆ. ಅವರು ಸರಿ ಇಲ್ಲ. ಒಂದು ವರ್ಷದ ಹಿಂದೆ, ಅವರು ಒಂದು ದಿನ ನಮ್ಮ ಮನೆಯಲ್ಲೇ ಮಲಗಿದ್ದರು. ನಾನು ಅವರಿಂದ ಸ್ಪಲ್ಪ ದೂರದಲ್ಲೇ ಮಲಗಿದ್ದೆ. ಮಧ್ಯರಾತ್ರಿ ಎಚ್ಚರ ಆಯ್ತು. ನನ್ನ ಹೊಟ್ಟೆ-ತೊಡೆಗಳನ್ನು ಯಾರೋ ಮುಟ್ಟಿದ ಹಾಗಾಯ್ತು. ಕಣ್ಣು ಬಿಟ್ಟು ನೋಡ್ತೇನೆ; ಆ ಕೆಲಸ ಮಾಡ್ತಿದ್ದೋರು ಚಿಕ್ಕಪ್ಪ. ‘ಏನು ಮಾಡ್ತಿದ್ದೀರಿ ಚಿಕ್ಕಪ್ಪ!’ ಎಂದೆ. ‘ಏನೂ ಇಲ್ಲ ಕಣೇ, ನಿನ್ನ ಮುಟ್ಟುಬೇಕು, ಸವರಬೇಕು ಅಂತ ಅನಿಸ್ತು. ಮುಟ್ಟಿದೆ. ನೋವಾಯ್ತಾ?’ ಎಂದರು. ಆದರೂ ಇಲ್ಲ ಎಂದೆ. ‘ಹಾಗಾದ್ರೆ ನಾನು ಮುಟ್ಟಿದ್ದನ್ನೂ ಯಾರಿಗೂ ಹೇಳಬೇಡ ನೀನು ಜಾಣೆ’ ಎಂದರು...”

ಇದನ್ನೂ ಓದಿ : ಸಮಾಧಾನ | ಪದೇಪದೇ ಪ್ರಜ್ಞೆತಪ್ಪಿ ಬೀಳುತ್ತಿದ್ದ ಸಂಯುಕ್ತಳನ್ನು ಕಾಡಿದ್ದೇನು?

“ಅವರ ಮೈಯಿಂದ ಸಿಗರೇಟು ವಾಸನೆ ಬರುತ್ತಿತ್ತು. ಒಂದು ರೀತಿ ಅಸಹ್ಯ ಆಯ್ತು. ಮತ್ತೆ ಈ ರೀತಿ ಮಾಡಬೇಡಿ ಎಂದೆ. ಅವರಿಂದ ಇನ್ನಿಷ್ಟು ದೂರ ಹೋಗಿ ಮಲಗಿಕೊಂಡೆ. ರಾತ್ರಿ ಇಡೀ ನಿದ್ರೆ ಬರಲಿಲ್ಲ. ಭಯ ಆಯ್ತು. ಮೂರು ನಾಲ್ಕು ಸಲ ಬಾತ್‌ರೂಮಿಗೆ ಹೋಗಿ ಬಂದೆ. ಇದಾದ ಮೇಲೆ, ಅದೇ ರೀತಿಯ ಕನಸು ಬೀಳತ್ತೆ- ಯಾರೋ ನನ್ನ ಹೊಟ್ಟೆ, ತೊಡೆ, ಗುಪ್ತಾಂಗ ಮುಟ್ಟಿದ ಹಾಗೆ… ಭಯ ಆಗುತ್ತೆ. ಮೂತ್ರ ಮಾಡಿಕೊಂಡುಬಿಡ್ತೇನೆ. ಈ ರೀತಿ ಕನಸು ಬೀಳದೆ ಇರೋ ಹಾಗೆ ಮಾಡಿ. ಅವರು ಮುಟ್ಟಿದ್ದರಿಂದ ಏನೂ ತೊಂದರೆ ಇಲ್ವಾ? ಗಂಡಸರು ಮೈಮುಟ್ಟಿದರೆ, ಹೆಣ್ಣುಮಕ್ಕಳಿಗೆ ಅಪಾಯ. ಯಾರೂ ನಿನ್ನ ಮೈಮುಟ್ಟಿದ ಹಾಗೆ ನೋಡ್ಕೋ ಅಂತ ಹೇಳಿದ್ದಾರೆ ನನ್ನ ಅಜ್ಜಿ. ಏನೂ ತೊಂದರೆ ಇಲ್ವಾ?” ಎಂದಳು.

ಆಪ್ತ ಸಮಾಲೋಚನಾ ಸೆಶನ್ಸ್‌ಗಳಲ್ಲಿ ಅವಳಿಗೆ ಧೈರ್ಯ ಹೇಳಲಾಯಿತು. ಭಯ ಕಡಿಮೆ ಆಗೋ ಹಾಗೆ ಮಾತ್ರೆ ನೀಡಲಾಯಿತು. ಆಕೆಯ ತಂದೆ-ತಾಯಿಗೆ ಪ್ರತ್ಯೇಕವಾಗಿ ಕೌನ್ಸೆಲಿಂಗ್‌ ಮಾಡಲಾಯಿತು. ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ತಂದೆ-ತಾಯಿ ಪರಸ್ಪರ ಪ್ರೀತಿ ಗೌರವದಿಂದ ವರ್ತಿಸಬೇಕೇ ವಿನಾ ಜಗಳವಾಡಬಾರದೆಂದು ಮನವರಿಕೆ ಮಾಡಲಾಯಿತು.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More