ಕನ್ನಡದ ಮನೆ, ಮನಕ್ಕೆ ವಿಜ್ಞಾನವನ್ನು ಒಯ್ಯಲು ಸಿದ್ಧವಾಗಿದೆ ‘ಮಂಡ್ರಮ್‌’

ವಿಜ್ಞಾನವನ್ನು ಜನಪ್ರಿಯಗೊಳಿಸುವ ಪ್ರಯತ್ನ ವಿವಿಧ ರೀತಿಯಲ್ಲಿ ನಡೆಯುತ್ತ ಬಂದಿದೆ. ತಂತ್ರಜ್ಞಾನವೇ ಎಲ್ಲವೂ ಆಗಿರುವ ಈ ಕಾಲದಲ್ಲಿ ಅದೇ ಮಾಧ್ಯಮಗಳನ್ನು ಬಳಸಿಕೊಂಡು ಸಾಮಾನ್ಯರಿಗೂ ವಿಜ್ಞಾನವನ್ನು ತಲುಪಿಸುವ ಪ್ರಯತ್ನವನ್ನು ಉತ್ಸಾಹಿಗಳ ಸಂಘಟನೆಯೊಂದು ಮಾಡುತ್ತಿದೆ

ವಿಜ್ಞಾನ ಸ್ವತಃ ಒಂದು ಭಾಷೆ. ಅದನ್ನು ಪ್ರತಿಯೊಂದು ಭಾಷೆ ತನ್ನದೇ ಆದ ರೀತಿಯಲ್ಲಿ ಅರ್ಥ ಮಾಡಿಕೊಂಡು ತನ್ನ ಭಾಷಿಕ ಸಮುದಾಯದೊಂದಿಗೆ ಹಂಚಿಕೊಳ್ಳುತ್ತದೆ ಮತ್ತು ಸಂವಾದ ನಡೆಸುತ್ತದೆ. ವಿಜ್ಞಾನ ಹರಡಬೇಕಾದ್ದು ಇದೇ ರೀತಿ. ಆದರೆ, ಆಗಿರುವುದು ಬೇರೆ. ವಿಜ್ಞಾನ ಮತ್ತು ತಂತ್ರಜ್ಞಾನದ ಭಾಷೆ, ಇಂಗ್ಲಿಷ್‌ ಅಷ್ಟೇ ಎಂಬುದು ಒಂದೆಡೆ; ಇನ್ನೊಂದೆಡೆ, ತುಂಬಾ ಸಂಕೀರ್ಣ ವಿಷಯಗಳನ್ನು ಸರಳವಾಗಿ ಸಂವಹನ ನಡೆಸಲಾಗದ ಮಿತಿಯಿಂದ ವಿಜ್ಞಾನ ಸಾಮಾನ್ಯರಿಂದ ದೂರವೇ ಉಳಿದಿದೆ. ಯಾವುದೇ ವೈಜ್ಞಾನಿಕ ಸಂಶೋಧನೆ, ಸಾಧನೆಗಳು ಹೀಗೆ ಸಾಮಾನ್ಯರಿಂದ ದೂರ ಉಳಿದು ಬೆಳೆಯಲು ಸಾಧ್ಯವಿಲ್ಲ.

ತಂತ್ರಜ್ಞಾನ, ಅಂದರೆ ಅನ್ವಯಿಕ ವಿಜ್ಞಾನವು, ಮೂಲವಿಜ್ಞಾನಕ್ಕಿಂತ ಹೆಚ್ಚಿನ ಆದ್ಯತೆ ಮತ್ತು ಪ್ರಾಶಸ್ತ್ಯವನ್ನು ಪಡೆಯುತ್ತಿರುವುದೂ ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ವಿಜ್ಞಾನವನ್ನು ಎಲ್ಲ ಪ್ರಾದೇಶಿಕ ಭಾಷಿಕರ ಮನೆ ಮತ್ತು ಮನಕ್ಕೆ ಒಯ್ಯಲು ಉತ್ಸಾಹಿಗಳ ತಂಡವೊಂದು ಪಣತೊಟ್ಟು ನಿಂತಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಮಹತ್ವದ ಪ್ರಯತ್ನಕ್ಕೆ ಈ ತಂಡ ಕೈಹಾಕಿದೆ.

ಇಪ್ಪತ್ತು ವರ್ಷಗಳ ಕಾಲ ಐಟಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿ, AnitaB.org ಹೆಸರಿನ ಮಹಿಳಾ ಪರ ಸಂಘಟನೆಯನ್ನು ನಡೆಸುತ್ತಿರುವ ಮರಗತವಲ್ಲಿ ಇನ್ಬಮುತ್ತು ವಿಜ್ಞಾನದ ಬಗ್ಗೆ ಆಸಕ್ತಿಯುಳ್ಳವರು. ವಿಜ್ಞಾನವನ್ನು ಜನರ ಭಾಷೆಯಲ್ಲಿ, ಜನರ ಬಳಿಗೆ ಒಯ್ಯಬೇಕೆಂದು ಬಯಸಿದವರು. ಮೂಲತಃ ತಮಿಳು ಭಾಷಿಗರಾದ ಇವರು ತಮ್ಮ ಇಬ್ಬರು ಸ್ನೇಹಿತರಾದ ವೆಂಕಟರಮಣನ್‌ ರಾಮಚಂದ್ರನ್‌ ಮತ್ತು ರವಿಶಂಕರ್‌ ವೆಂಕಟೇಶ್ವರನ್‌ ಅವರ ನೆರವಿನೊಂದಿಗೆ ಮೊದಲ ಬಾರಿಗೆ ಚೆನ್ನೈನಲ್ಲಿ ಇದೇ ವರ್ಷದ ಜನವರಿಯಲ್ಲಿ ವಿಜ್ಞಾನ ಭಾಷಣಗಳನ್ನು ಏರ್ಪಡಿಸಿದರು. ಈ ಭಾಷಣಗಳಿಗೆ ಅಪಾರ ಮೆಚ್ಚುಗೆ ವ್ಯಕ್ತವಾಯಿತು.

ಇತ್ತ, ಬೆಂಗಳೂರಿನಲ್ಲಿರುವ ರಾಷ್ಟ್ರಮಟ್ಟದ ವಿಜ್ಞಾನ ಸಂಸ್ಥೆ, ನ್ಯಾಷನಲ್‌ ಸೆಂಟರ್‌ ಫಾರ್‌ ಬಯೋಲಜಿಕಲ್‌ ಸೈನ್ಸ್‌ ಕೂಡ ಇಂಥದ್ದೇ ಕಾರ್ಯಕ್ರಮ ರೂಪಿಸಬೇಕೆಂದು ಹಂಬಲಿಸಿತು. ಈ ಇಂಗಿತ ಅರಿತ ಮಂಡ್ರಮ್‌ ತಂಡ ಎನ್‌ಸಿಬಿಎಸ್‌ ಸಂಪರ್ಕಿಸಿ ಕನ್ನಡದಲ್ಲೂ ವಿಜ್ಞಾನ ಭಾಷಣಗಳ ಕಾರ್ಯಕ್ರಮ ಆಯೋಜಿಸುವ ಪ್ರಸ್ತಾವನೆ ಇಟ್ಟಿತು. ಅದರ ಫಲವಾಗಿ 'ಜಿಜ್ಞಾಸಾ' ಹೆಸರಿನ ವಿಜ್ಞಾನ ಭಾಷಣಗಳ ಸರಣಿಗೆ ಚಾಲನೆ ದೊರೆತಿದೆ.

ಇದನ್ನೂ ಓದಿ : ಸ್ಟೀಫೆನ್‌ ಹಾಕಿಂಗ್‌ ನೆನಪು | ಸಂಘರ್ಷದ ಬದುಕಿನ ವಿಜ್ಞಾನ ಸಾಧಕ
ಮೊದಲ ಬಾರಿಗೆ ಕನ್ನಡದ ವಿಜ್ಞಾನ ಭಾಷಣ ಕಾರ್ಯಕ್ರಮವನ್ನು ಜೂ.೯ರಂದು ಬೆಂಗಳೂರಿನ ಎನ್‌ಸಿಬಿಎಸ್ ಕ್ಯಾಂಪಸ್‌ನಲ್ಲೇ ಆಯೋಜಿಸಿದ್ದೇವೆ. ಪ್ರಾದೇಶಿಕ ಭಾಷೆಗಳಲ್ಲಿ ವಿಜ್ಞಾನವನ್ನು ಹರಡುವುದಕ್ಕೆ ಎನ್‌ಸಿಬಿಎಸ್‌ ಸಲಹೆ, ಬೆಂಬಲ, ಆರ್ಥಿಕ ನೆರವನ್ನೂ ನೀಡುತ್ತಿದೆ. ಈ ಪ್ರಯತ್ನಕ್ಕೆ ಮುಂದಿನ ದಿನಗಳಲ್ಲಿ ಒಂದು ಸಾಂಸ್ಥಿಕ ರೂಪ ನೀಡಿ, ಎಲ್ಲ ರೀತಿಯ ಸಾಮಾಜಿಕ ಮಾಧ್ಯಮಗಳ ಮೂಲಕ ಕನ್ನಡದ ವಿಜ್ಞಾನಾಸಕ್ತರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇವೆ.
ಮರಗತವಲ್ಲಿ ಇನ್ಬಮುತ್ತು
ರವಿಶಂಕರ್ ವೆಂಕಟೇಶ್ವರನ್
ವೆಂಕಟರಮಣನ್ ರಾಮಚಂದ್ರನ್

ಜೂ.೯ರಂದು ಎನ್‌ಸಿಬಿಸಿ ಆವರಣದಲ್ಲಿರುವ ದಶೇರಿ ಸಭಾಂಗಣದಲ್ಲಿ ಮಧ್ಯಾಹ್ನ ೩ ಗಂಟೆಯಿಂದ ಸಂಜೆ ೫.೩೦ರವರೆಗೆ ತಮಿಳು ಮತ್ತು ಕನ್ನಡದಲ್ಲಿ ಭಾಷಣಗಳಲ್ಲಿ ಆಯೋಜಿಸಲಾಗಿದೆ. ವಿಜ್ಞಾನ ಲೇಖಕರಾದ ಕೊಳ್ಳೇಗಾಲ ಶರ್ಮಾ, 'ವಿಜ್ಞಾನ ಮತ್ತು ಭಾಷೆ' ಕುರಿತು, ಹಿರಿಯ ಸಂಶೋಧಕ ರವಿ ಮುದ್ದಶೆಟ್ಟಿ, 'ಕಲಿಯುವುದು ಹೇಗೆ? ಮರೆಯುವುದು ಹೇಗೆ?' ಹಾಗೂ ಎಂಜಿನಿಯರ್‌ ಹಾಗೂ ಸಮಾಲೋಚಕರಾದ ಅನಿಲ್‌ ಜಗಲೂರ್‌ ಅವರು, 'ಬೌದ್ಧಿಕ ಸಂಪದ ಮತ್ತು ಸಮಾಜ' ಕುರಿತು ಮಾತನಾಡಲಿದ್ದಾರೆ. ಜಿಜ್ಞಾಸ, ಈ ಭಾಷಣಗಳ ವಿಡಿಯೋಗಳನ್ನು ಯೂಟ್ಯೂಬ್‌ನಲ್ಲಿ ಪ್ರಕಟಿಸಲಿದೆ.

ಚಿತ್ರ: ಮರಗತವಲ್ಲಿ ಇನ್ಬಮುತ್ತು

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More