ದಮಯಂತಿ ಗುಪ್ತಾ ಭಾರತದ ಮೊದಲ ಮಹಿಳಾ ಎಂಜಿನಿಯರ್ ಆದದ್ದು ಹೇಗೆ ಗೊತ್ತೇ?

ಭಾರತ-ಪಾಕ್ ವಿಭಜನೆಯಾದಾಗ ನಿರಾಶ್ರಿತರಾಗಿ ಕರಾಚಿಯಿಂದ ಭಾರತಕ್ಕೆ ಬಂದ ದಮಯಂತಿ ಗುಪ್ತಾ, ಭಾರತದ ಮೊದಲ ಎಂಜಿನಿಯರ್ ಆಗಿದ್ದಲ್ಲದೆ, ಫೋರ್ಡ್ ಕಂಪನಿಯ ಮೊದಲ ಮಹಿಳಾ ಉದ್ಯೋಗಿಯೂ ಆದರು. ಅವರು ‘ಟೈಮ್’ನಲ್ಲಿ ಹಂಚಿಕೊಂಡ ಅನುಭವ ಕಥನದ ಭಾವಾನುವಾದ ಇಲ್ಲಿದೆ

ನಾನು ಬ್ರಿಟಿಷ್ ಭಾರತದಲ್ಲಿ ಸಣ್ಣ ಪಟ್ಟಣದಲ್ಲಿ ಹುಟ್ಟಿದ್ದೆ. ವಿಶ್ವ ಇತಿಹಾಸದ ಅತೀ ಕ್ರೂರ ವಿಭಜನೆ ನಮ್ಮ ದೇಶದಲ್ಲಿ ಆದಾಗ ನಾನು ಸಾಕ್ಷಿಯಾಗಿದ್ದೆ. ೧೯೪೭ರಲ್ಲಿ ಬ್ರಿಟಿಷರು ಕೊನೆಗೂ ಭಾರತವನ್ನು ಬಿಟ್ಟು ತೊಲಗಿದರು. ಅದರ ಬೆನ್ನಲ್ಲೇ ದೇಶ ಭಾರತ ಮತ್ತು ಪಾಕಿಸ್ತಾನ ಎಂದು ವಿಭಜನೆಯಾಯಿತು. ನಾನು ನೆಲೆಸಿದ್ದ ಜಾಗ ಪಾಕಿಸ್ತಾನದ ಭಾಗವಾಗಿ ಹೋಯಿತು. ಆದರೆ ಅದು ಸರಳವಾದ ಪ್ರಕ್ರಿಯೆಯೇನೂ ಆಗಿರಲಿಲ್ಲ. ಎಲ್ಲಾ ಕಡೆಯೂ ಗಲಭೆಗಳು. ನಾನು ಐದರ ವಯಸ್ಸಿನಲ್ಲಿದ್ದಾಗ ಮಧ್ಯರಾತ್ರಿಯಲ್ಲಿ ಕರಾವಳಿ ನಗರ ಕರಾಚಿಯನ್ನು ತೊರೆದು ಹಡಗೊಂದನ್ನು ಹತ್ತಿ ಮುಂಬೈಗೆ ಬಂದೆವು.

ನನ್ನ ಹೆತ್ತವರು ಭೂಮಿ ಮತ್ತು ವ್ಯಾಪಾರಿ ಮಳಿಗೆಗಳನ್ನು ಹೊಂದಿದ್ದ ಶ್ರೀಮಂತರು. ಆದರೆ ಅದೆಲ್ಲವನ್ನೂ ಕೆಲವೇ ದಿನಗಳ ಅಂತರದೊಳಗೆ ಬಿಟ್ಟು ಬರಬೇಕಾಯಿತು. ಸ್ವತಃ ಕೇವಲ ನಾಲ್ಕನೇ ತರಗತಿ ಓದಿದ್ದ ನನ್ನ ತಾಯಿ ಗೋಪಿಬಾಯಿ ಹಿಂಗೊರಣಿ ಅವರು ನನಗೆ ಧೈರ್ಯ ಹೇಳಿದ್ದರು. ಯಾರೂ ನನ್ನಿಂದ ಕಿತ್ತುಕೊಳ್ಳಲು ಸಾಧ್ಯವೇ ಇಲ್ಲದ ಶಿಕ್ಷಣವನ್ನು ನನಗೆ ಕೊಡುತ್ತೇನೆ ಎಂದು ಅವರು ಅಭಯ ನೀಡಿದ್ದರು. ಮುಂದಿನ ದಶಕವನ್ನು ನಾವು ನಿರಾಶ್ರಿತರಾಗಿ ಕಳೆದರೂ ನನ್ನ ತಾಯಿ ಆಕೆಯ ಆಶ್ವಾಸನೆಯನ್ನು ಈಡೇರಿಸಿದ್ದರು.

ನಾನು ೧೩ನೇ ವಯಸ್ಸಿನವರೆಗೂ ಎಂಜಿನಿಯರ್ ಎನ್ನುವ ಪದವನ್ನೇ ಕೇಳಿರಲಿಲ್ಲ. ಭಾರತದ ಪ್ರಧಾನಿ ಜವಹರಲಾಲ್ ನೆಹರು ನನ್ನ ಸಣ್ಣ ಪಟ್ಟಣಕ್ಕೆ ಭೇಟಿ ನೀಡಿದ್ದರು. “೨೦೦ ವರ್ಷಗಳ ಬ್ರಿಟಿಷ್ ಆಡಳಿತದ ನಂತರ ಭಾರತದಲ್ಲಿ ಯಾವುದೇ ಕೈಗಾರಿಕೆಗಳಿಲ್ಲ ಮತ್ತು ನಮಗೆ ಇಂಜಿನಿಯರ್‌ಗಳ ಅಗತ್ಯವಿದೆ. ನಾನು ಕೇವಲ ಹುಡುಗರ ಬಗ್ಗೆ ಮಾತನಾಡುತ್ತಿಲ್ಲ. ನಾನು ಯುವತಿಯರ ಬಗ್ಗೆಯೂ ಮಾತನಾಡುತ್ತಿದ್ದೇನೆ,” ಎಂಬ ನೆಹರು ಅವರ ಮಾತು ನನಗೆ ನೀಡಿದ ಕರೆಯಾಗಿತ್ತು. ಅಂದು ನಾನು ಮನೆಗೆ ಬಂದು ಅಮ್ಮನ ಬಳಿ ದೇಶದ ಮೊದಲ ಮಹಿಳಾ ಇಂಜಿನಿಯರ್ ಆಗಬೇಕು ಎನ್ನುವ ಕನಸನ್ನು ಬಿತ್ತಿದೆ.

ಭಾರತದಲ್ಲಿ ನಾನು ಸೇರಿದ ಇಂಜಿನಿಯರ್‌ ಕಾಲೇಜಿನ ಪ್ರಥಮ ಮಹಿಳಾ ಸದಸ್ಯೆಯಾಗಿದ್ದೆ. ಇದರ ಬೆನ್ನಲ್ಲೇ ಸವಾಲುಗಳೂ ಬಂದದ್ದು ಅಚ್ಚರಿಯ ವಿಚಾರವೇನಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಕಾಲೇಜು ಕ್ಯಾಂಪಸ್ ಒಳಗೆ ಪ್ರತ್ಯೇಕ ಮಹಿಳಾ ಶೌಚಾಲಯಗಳೂ ಇರಲಿಲ್ಲ. ನನಗೆ ಶೌಚಾಲಯ ಬಳಸಬೇಕೆಂದರೆ ಪ್ರತೀ ಬಾರಿಯೂ ಒಂದೂವರೆ ಮೈಲಿ ದೂರವಿದ್ದ ಸ್ಥಳಕ್ಕೆ ಬೈಕ್‌ನಲ್ಲಿ ಹೋಗಬೇಕಾಗಿತ್ತು. ಕೆಲವೇ ತಿಂಗಳಲ್ಲಿ ನಾನು ಕಾಲೇಜು ಬಿಡುವ ಯುವತಿಯಲ್ಲ ಎನ್ನುವುದು ನಮ್ಮ ಡೀನ್‌ಗೆ ಮನವರಿಕೆಯಾಗಿ ನನಗಾಗಿ ಪ್ರತ್ಯೇಕ ಲೇಡೀಸ್ ರೂಂ ಒಂದನ್ನು ಕಟ್ಟಿಸಿದರು.

೧೯ನೇ ವಯಸ್ಸಿನಲ್ಲಿ ನಾನು ಹೆನ್ರಿ ಫೋರ್ಡ್ ಅವರ ಜೀವನಚರಿತ್ರೆಯನ್ನು ಓದಿದ್ದೆ. ಅವರು ಕಟ್ಟಿದ ಕಂಪನಿಗೆ ಕೆಲಸ ಮಾಡಬೇಕು ಎನ್ನುವ ಕನಸು ನನಗೆ ಅಂದಿನಿಂದಲೇ ಬಂತು. ಭಾರತದಲ್ಲಿ ಕಾಲೇಜು ಶಿಕ್ಷಣ ಮುಗಿಸಿದ ನಂತರ ನನ್ನ ಹೆತ್ತವರು ತಮ್ಮ ಜೀವನಪೂರ್ತಿ ಕೂಡಿಟ್ಟ ಆದಾಯವನ್ನು ನನ್ನ ಈ ಕನಸನ್ನು ನನಸಾಗಿಸಲೆಂದೇ ಅರ್ಪಿಸಿದರು. ನನ್ನ ಕುಟುಂಬಕ್ಕೆ ಇದು ಬಹಳ ಕಷ್ಟದ ಕೆಲಸವಾಗಿದ್ದರೂ, ನನ್ನ ಮಹಾತ್ವಾಕಾಂಕ್ಷೆಗೆ ಅಮ್ಮ ಪ್ರೋತ್ಸಾಹ ನೀಡಿದರು. ಒಬ್ಬ ಮಗಳು ಶಿಕ್ಷಣ ಪಡೆದರೆ ಇಡೀ ಕುಟುಂಬದ ಭವಿಷ್ಯವೇ ಬದಲಾಗಬಹುದು ಎಂದು ಅವರ ದೃಷ್ಟಿಕೋನವಾಗಿತ್ತು. ಆಕೆಯ ಯೋಚನೆ ಸರಿಯಾಗಿತ್ತು. ನಂತರ ನಾನು ನನ್ನ ಮೂವರು ಸಹೋದರರು ಮತ್ತು ಹೆತ್ತವರು ಅಮೆರಿಕಕ್ಕೆ ಬರಲು ನೆರವಾದೆ.

ನಾನು ೧೯೬೭ ಜನವರಿಯಲ್ಲಿ ಮೋಟಾರ್ ನಗರ ಡೆಟ್ರಾಯಿಟ್‌ಗೆ ಆಗಮಿಸಿದೆ. ಸ್ನೋ ಬೂಟ್‌ಗಳಿಲ್ಲದೆ, ಬಿಸಿ ಜಾಕೆಟ್ ಅಥವಾ ಕಾರೂ ಇಲ್ಲದೆ ಬಂದಿದ್ದೆ. ನಾನು ಮೊದಲ ಬಾರಿ ಫೋರ್ಡ್‌ ಸಂಸ್ಥೆಯಲ್ಲಿ ಕೆಲಸಕ್ಕೆ ಅರ್ಜಿ ಹಾಕಿದಾಗ ಕೆಲಸ ಸಿಗಲಿಲ್ಲ. ಆದರೆ ನಾನು ಹಿಂದೆ ಸರಿಯಲಿಲ್ಲ. ಕೆಲವು ತಿಂಗಳ ನಂತರ ಮತ್ತೆ ಪ್ರಯತ್ನಿಸಿದೆ. ಮಾನವ ಸಂಪನ್ಮೂಲ ಅಧಿಕಾರಿ ಗೊಂದಲಕ್ಕೆ ಬಿದ್ದರು. ನನ್ನ ಕೆಲಸದ ಅರ್ಜಿಯನ್ನು ಒಮ್ಮೆ ನೋಡಿ, “ನೀನು ಇಂಜಿನಿಯರಿಂಗ್ ಉದ್ಯೋಗಕ್ಕೆ ಅರ್ಜಿ ಹಾಕುತ್ತಿದ್ದೀಯ. ಆದರೆ ನಮ್ಮಲ್ಲಿ ಮಹಿಳಾ ಉದ್ಯೋಗಿಗಳು ಇಲ್ಲ,” ಎಂದರು. “ನಾನು ಇಲ್ಲಿದ್ದೇನೆ. ನನ್ನನ್ನು ಉದ್ಯೋಗಕ್ಕೆ ತೆಗೆದುಕೊಳ್ಳದ ಹೊರತಾಗಿ ನಿಮ್ಮ ಬಳಿ ಮಹಿಳಾ ಉದ್ಯೋಗಿಗಳೇ ಇರುವುದಿಲ್ಲ,” ಎಂದು ನಾನು ಉತ್ತರಿಸಿದೆ. ಅದು ಕೆಲಸ ಮಾಡಿತು. ನಾನು ಫೋರ್ಡ್ ಮೋಟಾರ್ ಕಂಪನಿ ಉದ್ಯೋಗಕ್ಕೆ ತೆಗೆದುಕೊಂಡ ಮೊದಲ ಮಹಿಳಾ ಇಂಜಿನಿಯರ್ ಆದೆ.

ಇದನ್ನೂ ಓದಿ : ದುರ್ಗಮ ಹಾದಿಯಲಿ ಮಹಿಳಾ ನೌಕಾ ತಂಡ ೨೪೫ ದಿನಗಳ ವಿಶ್ವ ಪರ್ಯಟನೆ

ಆ ಸಮಯದಲ್ಲಿ ಹಿರಿಯರು ನಿಶ್ಚಯಿಸಿಯೇ ಮದುವೆಯಾಗುವುದು ಸಾಮಾನ್ಯವಾಗಿತ್ತು. ಆದರೆ ನಾನು ನನ್ನ ಭಾವೀ ಪತಿ ಸುಭಾಷ್ ಅವರನ್ನು ಅಮೆರಿಕದಲ್ಲಿ ಭೇಟಿಯಾದೆ. ನಾವು ಅದನ್ನು ಪ್ರೇಮಿಸಿ ಆದ ಮದುವೆ ಎಂದು ಹೇಳುತ್ತೇವೆ. ನಾನು ನನ್ನ ಕನಸಿನ ಉದ್ಯೋಗಕ್ಕೆ ಸೇರಿದ ನಂತರ ಆದ ಬೆಳವಣಿಗೆಯದು. ಮೊದಲ ಮಗುವಿಗೆ ಗರ್ಭ ಧರಿಸಿದ ಸಂದರ್ಭದಲ್ಲಿ ಸ್ವಲ್ಪದಿನ ಉದ್ಯೋಗದಿಂದ ದೂರವಿದ್ದ ನಾನು, ಮಗುವಿಗೆ ಜನ್ಮ ನೀಡಿದ ಮೂರು ತಿಂಗಳ ನಂತರ ಮತ್ತೊಂದು ಸ್ಥಾನದಲ್ಲಿ ಕೆಲಸ ಆರಂಭಿಸಿದೆ. ನಮಗೆ ಇಬ್ಬರು ಗಂಡುಮಕ್ಕಳು. ಸಂಜಯ್ ಮತ್ತು ಸುನೀಲ್ ತಮ್ಮದೇ ಆದ ಸಾಧನೆಯನ್ನು ಮಾಡಿದ್ದಾರೆ. ಸಂಜಯ್ ಸಿಎನ್‌ಎನ್‌ಗೆ ಮುಖ್ಯ ವೈದ್ಯಕೀಯ ಬರಹಗಾರರಾಗಿರುವ ಜೊತೆಗೆ ನ್ಯೂರೋಸರ್ಜನ್ ಕೂಡ. ಸುನೀಲ್ ವಕೀಲರು ಮತ್ತು ಎಂಬಿಎ ಪದವೀಧರ. ಈಗ ಸುನೀಲ್ ಅಮೆರಿಕದ ಕಾಂಗ್ರೆಸ್‌ಗೆ ಸ್ಪರ್ಧಿಸುತ್ತಿದ್ದಾರೆ. ಸುಭಾಷ್ ಮತ್ತು ನನಗೆ ಐವರು ಮೊಮ್ಮಕ್ಕಳಿದ್ದಾರೆ. ಮಕ್ಕಳು ಏನು ಮಾಡಬೇಕು ಎಂದು ಆದೇಶ ನೀಡುವ ತಾಯಿ ನಾನಲ್ಲ. ಅವರು ಕಠೀಣ ಶ್ರಮ ಪಡಬೇಕು ಮತ್ತು ತಮಗಿಷ್ಟ ಬಂದ ವೃತ್ತಿ, ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಮತ್ತು ಪ್ರತಿ ಕ್ಷೇತ್ರದಲ್ಲಿ ಮೊದಲಿಗರಾಗಬೇಕು ಎನ್ನುವುದು ನನ್ನ ಆಶಯ.

ಫೋರ್ಡ್‌ನ ನಿವೃತ್ತ ಅಧಿಕಾರಿಯಾಗಿರುವ ದಮಯಂತಿ ಗುಪ್ತಾ ಈಗ ಫ್ಲೋರಿಡಾದ ಫೋರ್ಟ್ ಮೇಯರ್ಸ್‌ನಲ್ಲಿ ನೆಲೆಸಿದ್ದಾರೆ. ಪತಿಯ ಜೊತೆಗೆ ಪ್ರವಾಸದಲ್ಲಿ ಕಾಲ ಕಳೆಯುತ್ತ ನಿವೃತ್ತ ಜೀವನದ ಸವಿ ಅನುಭವಿಸುತ್ತಿದ್ದಾರೆ.

ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
#MeToo | ಟಿವಿ ವೃತ್ತಿಪರರ ಮಾತಿನಲ್ಲಿ ಧಾರಾವಾಹಿ ಲೋಕದತ್ತ ಒಂದು ನೋಟ
Editor’s Pick More