ಗ್ರಾಮ ವಾಸ್ತವ್ಯ | ವಿಡಿಯೋ | ಮುಳುಗಿದ ನಂತರವೂ ಬದುಕಿದ ಶೆಟ್ಟಿಹಳ್ಳಿ

ಬೃಹತ್ ಯೋಜನೆಗಳ ಎತ್ತಂಗಡಿಯ ನೋವಿನ ಕಥನಗಳಲ್ಲಿ ಒಂದು ಶೆಟ್ಟಿಹಳ್ಳಿ. ಮಲೆನಾಡಿನ ಮೊದಲ ಜಲವಿದ್ಯುತ್ ಯೋಜನೆಯ ಜಲಾಶಯದಲ್ಲಿ ಮುಳುಗಡೆಯಾದ ಗ್ರಾಮಗಳ ಸುಮಾರು ೮೦ ಮನೆಗಳು ಇಲ್ಲಿವೆ. ‘ದಿ ಸ್ಟೇಟ್‌’ ಈ ಗ್ರಾಮದಲ್ಲಿ ಓಡಾಡಿದಾಗ ಕಂಡುಬಂದಿರುವ ದೃಶ್ಯಗಳಿವು

ಗಿರೀಶ್ ಕಾಸರವಳ್ಳಿ ನಿರ್ದೇಶನದ, ಸೌಂದರ್ಯ ಅವರ ನಟನೆಯ ಕೊನೆಯ ಸಿನಿಮಾ ‘ದ್ವೀಪ’ದ ಒಂದು ದೃಶ್ಯ; ನೋಡನೋಡುತ್ತಿದ್ದಂತೆಯೇ ಹಿನ್ನೀರು ಏರಿಬಂದುಬಿಡುತ್ತದೆ. ಮನೆಯೇ ದ್ವೀಪವಾಗಿ, ಮನೆಮಂದಿ ಮುಳುಗುವ ಭೀತಿ ಎದುರಾಗುತ್ತದೆ. ಲಿಂಗನಮಕ್ಕಿ ಜಲಾಶಯದಲ್ಲಿ ಮುಳುಗಡೆಯಾದವರ ಅಸಹಾಯಕತೆಯನ್ನು ನೋಡುಗರ ಎದೆ ಬಿರಿಯುವಂತೆ ಕಟ್ಟಿಕೊಟ್ಟ ಆ ಸಿನಿಮಾದ ದೃಶ್ಯಾವಳಿಗಿಂತ ಭೀಕರ ಎತ್ತಂಗಡಿಯ ಯಾತನೆ ಅನುಭವಿಸಿದವರು ಶಿವಮೊಗ್ಗ ಜಿಲ್ಲಾಕೇಂದ್ರದಿಂದ ಕೇವಲ ೧೮ ಕಿಮೀ ದೂರದ ಶೆಟ್ಟಿಹಳ್ಳಿಯ ಜನ.

ಅದು ದಟ್ಟ ಕಾಡಿನ ನಡುವಿನ ಕುಗ್ರಾಮ. ಬಹುಶಃ ಬೃಹತ್ ಯೋಜನೆಗಳ ಎತ್ತಂಗಡಿಯ ನೋವಿನ ಕಥನಗಳಲ್ಲೇ ಅತ್ಯಂತ ಕರಾಳ ಸಾಕ್ಷಿಯಾಗಿ ಈ ಸುಮಾರು ೮೦ ಮನೆಗಳ ಗ್ರಾಮ ಇದೆ. ಏಕೆಂದರೆ, ಇಲ್ಲಿನ ಬಹುತೇಕ ಕುಟುಂಬಗಳು ಕೇವಲ ೭೫ ವರ್ಷಗಳ ಅವಧಿಯಲ್ಲೇ ಎರಡೆರಡು ಬಾರಿ ಎತ್ತಂಗಡಿಯಾಗಿವೆ. ಹಿರಿಯ ಲೇಖಕ ನಾ ಡಿಸೋಜ ಅವರ ಕಾದಂಬರಿ ಆಧಾರಿತ ಚಲನಚಿತ್ರದ ಕತೆಗಿಂತ ಭೀಕರ ಕಟುವಾಸ್ತವನ್ನು ಎದುರಿಸಿದ ತಲೆಮಾರು ಈಗಲೂ ತಮ್ಮ ನಿಲ್ಲದ ಗೋಳುಗಳ ನಡುವೆ ಅಕ್ಷರಶಃ ದಿಕ್ಕೆಟ್ಟುಹೋಗಿದೆ.

೧೯೪೦ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಿರೇಭಾಸ್ಕರ ಅಥವಾ ಮಡೇನೂರು ಎಂಬಲ್ಲಿ ನಿರ್ಮಾಣವಾದ ಮಲೆನಾಡಿನ ಮೊದಲ ಜಲವಿದ್ಯುತ್ ಯೋಜನೆಯ ಜಲಾಶಯದಲ್ಲಿ ಮುಳುಗಡೆಯಾಗಿ ಜಮೀನು-ಮನೆ ಕಳೆದುಕೊಂಡು ನಿರ್ವಸತಿಗರಾದ ಈ ಜನ, ಬಳಿಕ ಶರಾವತಿ ನದಿಯಗುಂಟ ತಮ್ಮಷ್ಟಕ್ಕೆ ತಾವು ನೆಲೆ ಕಂಡುಕೊಂಡರು. ಆದರೆ, ೧೯೫೯-೬೦ರಲ್ಲಿ ಅದೇ ನದಿಗೆ ಲಿಂಗನಮಕ್ಕಿ ಜಲವಿದ್ಯುತ್ ಯೋಜನೆಯ ಬೃಹತ್ ಅಣೆಕಟ್ಟು ನಿರ್ಮಾಣವಾದಾಗ, ಮತ್ತೆ ಇವರ ಬದುಕು ಜಲಸಮಾಧಿಯಾಯಿತು. ಸಾವಿರಾರು ಕುಟುಂಬಗಳು ಇವರಂತೆಯೇ ಎತ್ತಂಗಡಿಯಾದರು.

ಹೊಲಗದ್ದೆ, ಮನೆಮಠ ತೊರೆದು ೧೯೬೨ರಲ್ಲಿ ಶೆಟ್ಟಿಹಳ್ಳಿ ಎಂಬ ದುರ್ಗಮ ಕಾಡಿನ ನಡುವಿನ ಈ ಜಾಗಕ್ಕೆ ಬಂದ ಸುಮಾರು ೨೫ ಕುಟುಂಬಗಳಿಗೆ ಸರ್ಕಾರ ಭೂಮಿ ಮಂಜೂರು ಮಾಡಿತು. ಆದರೆ, ಹಕ್ಕುಪತ್ರದ ಹೊರತಾಗಿ ಅವರಿಗೆ ಭೂಮಿಯ ಪಕ್ಕಾಪೋಡಿ ಮಾಡಿ ಖಾತೆ ಮಾಡಿಕೊಡಲಿಲ್ಲ. ಭೂಮಿಯ ಸಂಪೂರ್ಣ ಕಾನೂನುಬದ್ಧ ಹಕ್ಕುದಾರಿಕೆಯಷ್ಟೇ ಅಲ್ಲದೆ, ಇಲ್ಲಿನ ಜನರಿಗೆ, ಇಲ್ಲಿ ಬಂದು ನೆಲೆಸಿ ೫೫ ವರ್ಷಗಳ ಬಳಿಕವೂ ವಿದ್ಯುತ್, ಕುಡಿಯುವ ನೀರು, ರಸ್ತೆ ಮುಂತಾದ ಸೌಲಭ್ಯಗಳು ಇಂದಿಗೂ ಕಾಣದಾಗಿವೆ.

ಅದಕ್ಕೆ ಕಾರಣ, ಈ ಕುಟುಂಬಗಳು ಇಲ್ಲಿ ಬಂದು ನೆಲೆಸಿದ ೧೨ ವರ್ಷಗಳ ಬಳಿಕ ಜಾರಿಗೆ ಬಂದ ಶೆಟ್ಟಿಹಳ್ಳಿ ಅಭಯಾರಣ್ಯ ಯೋಜನೆ. ಈ ಕಾಡನ್ನು ಅಭಯಾರಣ್ಯ ಎಂದು ಘೋಷಿಸುವ ಮುನ್ನವೇ ಸರ್ಕಾರದ ಬೃಹತ್ ಯೋಜನೆಗಳಿಗಾಗಿ ಎರಡೆರಡು ಬಾರಿ ಎತ್ತಂಗಡಿಯಾಗಿ ಬಂದು ನೆಲೆಸಿದ ಕುಟುಂಬಗಳಿದ್ದರೂ, ಅವರ ದಯನೀಯ ಸ್ಥಿತಿಯನ್ನು ಪರಿಗಣಿಸದೆ ಅತ್ಯಂತ ಕಠಿಣ ಕಾನೂನುಗಳನ್ನು ಹೇರಲಾಯಿತು.

೧೯೮೦ರ ದಶಕದಲ್ಲಿ ವಿದ್ಯುತ್ ಮಾರ್ಗ ಕಾಮಗಾರಿ ಆರಂಭವಾಗುತ್ತಲೇ ೧೯೮೨ರ ಅರಣ್ಯ ಕಾಯ್ದೆಯನ್ನು ಬಳಸಿ ಪ್ರಹಾರ ಮಾಡಲಾಯಿತು. ಹಾಗಾಗಿ, ಕಾಡಿನ ದಾರಿಯಲ್ಲಿ ಅಂದು ನೆಟ್ಟ ವಿದ್ಯುತ್ ಕಂಬಗಳು ಈಗಲೂ ತಂತಿ ಕಾಣದೆ ಹಾಗೇ ನಿಂತಿವೆ. ಇನ್ನು ರಸ್ತೆ ನಿರ್ಮಾಣ, ಕುಡಿಯುವ ನೀರಿನ ಪೈಪ್‌ಲೈನಿಗೂ ಅರಣ್ಯ ಇಲಾಖೆ ಈವರೆಗೆ ಅವಕಾಶ ನೀಡಿರಲಿಲ್ಲ.

ಹೊಸ ಭರವಸೆ

ಆದರೆ, ಆರು ತಿಂಗಳ ಹಿಂದೆ ಕುಡಿಯುವ ನೀರಿನ ಪೈಪ್‌ಲೈನ್ ಹಾಕಲಾಗಿದೆ. ರಸ್ತೆ ದುರಸ್ತಿಗೆ ಇದೀಗ ಚಾಲನೆ ನೀಡಲಾಗಿದೆ. ವಿದ್ಯುತ್ ವಂಚಿತ ಗ್ರಾಮಸ್ಥರ ನೆರವಿಗೆ ಬಂದಿರುವ ಮೆಸ್ಕಾಂ, ಕಳೆದ ವರ್ಷವಷ್ಟೇ ಇಲ್ಲಿನ ಪ್ರತಿ ಮನೆಗೂ ಸೋಲಾರ್ ಫಲಕ ಹಾಗೂ ದೀಪ ಅಳವಡಿಸಿದೆ. ಐದೂವರೆ ದಶಕಗಳ ಕತ್ತಲ ಬದುಕಿಗೆ ಮೆಸ್ಕಾಂ ಬೆಳಕು ತೋರಿದೆ ಎಂಬುದನ್ನು ಇಲ್ಲಿನ ಜನ ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಈ ನಡುವೆ, ನೆಲದಡಿ ಕೇಬಲ್ ಅಳವಡಿಕೆ ಮೂಲಕ ಗ್ರಾಮಕ್ಕೆ ವಿದ್ಯುತ್ ಸರಬರಾಜು ಮಾಡಲು ಕೇಂದ್ರ ಪರಿಸರ ಸಚಿವಾಲಯದ ಉನ್ನತ ಮಟ್ಟದ ಸಮಿತಿ ತಾತ್ವಿಕ ಒಪ್ಪಿಗೆ ನೀಡಿದ್ದು, ಮೆಸ್ಕಾಂ ಕಾರ್ಯಾರಂಭಕ್ಕೆ ಅಧಿಕೃತ ಒಪ್ಪಿಗೆ ಕೋರಿದೆ. ಒಟ್ಟಾರೆ, ಇಲ್ಲಿನ ಜನರ ನಿರಂತರ ಹೋರಾಟದ ಫಲವಾಗಿ ಇದೀಗ ಒಂದೊಂದೇ ನಾಗರಿಕ ಸೌಲಭ್ಯಗಳು ಗ್ರಾಮ ತಲುಪತೊಡಗಿವೆ.

ಇದನ್ನೂ ಓದಿ : ಗ್ರಾಮ ವಾಸ್ತವ್ಯ | ಮನಸೂರು ಎಂಬ ಸಾಂಸ್ಕೃತಿಕ ಹಳ್ಳಿಯಲ್ಲೊಂದು ಸುತ್ತು

ಒಂದು ರೀತಿಯ ಶಾಪಮುಕ್ತಿಯ ನಿರಾಳತೆಯಲ್ಲಿ ಇಡೀ ಊರು ಈಗಿದೆ. ಮರಾಠರು, ಶೇರಿಗಾರರ ಒಂದೆರಡು ಕುಟುಂಬಗಳನ್ನು ಹೊರತುಪಡಿಸಿ, ಬಹುತೇಕ ದೀವರ ಸಮುದಾಯದವರೇ ಇರುವ ಇಲ್ಲಿನ ಜನ ಅತ್ಯಂತ ಶ್ರಮಜೀವಿಗಳು. ದುರ್ಗಮ ಕಾಡಿನ ನಡುವೆ ಆನೆ, ಕಾಡುಕೋಣ, ಹುಲಿ, ಚಿರತೆ, ಹಾವು- ಚೇಳುಗಳ ಭೀತಿಯ ನಡುವೆ ಈಗಲೂ ಶಿವಮೊಗ್ಗ ನಗರದಿಂದ ೧೮ ಕಿಮೀ ದೂರದ ಊರಿಗೆ ಓಡಾಡುವ ಇವರು, ಒಂದು ಬೆಂಕಿ ಪೊಟ್ಟಣ ಬೇಕಿದ್ದರೂ ದೂರದ ಶಿವಮೊಗ್ಗಕ್ಕೇ ಹೋಗಿಬರಬೇಕಿದೆ.

ಭತ್ತ, ಅಡಿಕೆ, ಮೆಕ್ಕೆಜೋಳ, ಶುಂಠಿ ಕೃಷಿ ಮಾಡುವ ಇಲ್ಲಿನ ಜನ, ಇತ್ತೀಚಿನ ವರ್ಷಗಳಲ್ಲಿ ಹೈನುಗಾರಿಕೆಯಲ್ಲೂ ತೊಡಗಿದ್ದು, ಮನೆಗೆ ಎರಡು-ಮೂರು ಜರ್ಸಿ ಆಕಳು ಕಟ್ಟಿಕೊಂಡು, ನಿತ್ಯ ಹಾಲು ಮಾರಾಟ ಮಾಡಿ, ಮನೆ ಕರ್ಚು ನಿಭಾಯಿಸುವ ಜಾಣ್ಮೆ ತೋರಿದ್ದಾರೆ.

ಅರ್ಧ ಶತಮಾನ ಕಾಲ ಸಕಲ ಸೌಲಭ್ಯವಂಚಿತರಾಗಿ ಕತ್ತಲ ಬದುಕು ದೂಡಿದ ಈ ಕುಟುಂಬಗಳ ಹಿರಿಯ ತಲೆಗಳು ತಮ್ಮ ಗೋಳಿನ ಕತೆಯನ್ನು ಹೇಳುವಾಗ, ನಮ್ಮ ಅಭಿವೃದ್ಧಿಯ ಚಕ್ರಕ್ಕೆ ಸಿಕ್ಕು ನಜ್ಜುಗುಜ್ಜಾದ ಜನಸಾಮಾನ್ಯರ ಕಣ್ಣೀರಗಾಥೆಯೇ ಬಿಚ್ಚಿದಂತೆನಿಸದೆ ಇರದು.

ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
#MeToo | ಟಿವಿ ವೃತ್ತಿಪರರ ಮಾತಿನಲ್ಲಿ ಧಾರಾವಾಹಿ ಲೋಕದತ್ತ ಒಂದು ನೋಟ
Editor’s Pick More