ಮನೆ ಕಟ್ಟುವ ಕನಸಿನೊಡನೆ ಪತಿಯೊಂದಿಗೆ ಮಸ್ಕತ್‌ಗೆ ಹಾರಿದ ಶೀಜಾಗೆ ಆಗಿದ್ದೇನು?

ಪತಿಯೊಂದಿಗೆ ಉದ್ಯೋಗ ಅರಸಿ ಮಸ್ಕತ್‌ಗೆ ತೆರಳಿದ ಕೇರಳದ ಶಿಜಾ ಪ್ರಕರಣವು, ವಿದೇಶದಲ್ಲಿ ಮನೆಗೆಲಸ ಮಾಡುವ ಭಾರತೀಯರ ಸುರಕ್ಷತೆ ಬಗ್ಗೆ ಚರ್ಚೆಗೆ ಇಂಬು ನೀಡಿದೆ. ಸದ್ಯ ಸ್ವಾಧೀನ ಕಳೆದುಕೊಂಡ ಕಾಲುಗಳೊಂದಿಗೆ ಹಾಸಿಯಲ್ಲಿರುವ ಶೀಜಾ ಕತೆಯ ‘ಸ್ಕ್ರಾಲ್’ ವರದಿಯ ಭಾವಾನುವಾದ ಇಲ್ಲಿದೆ

ಮನೆ ಕಟ್ಟುವ ಕನಸು ನನಸು ಮಾಡುವ ಸಲುವಾಗಿ ಪತಗೆ ನೆರವು ನೀಡುವ ಉದ್ದೇಶದಿಂದಾಗಿ ಉದ್ಯೋಗಕ್ಕಾಗಿ ಪತಿಯೊಂದಿಗೆ ಮಸ್ಕತ್‌ಗೆ ತೆರಳಿದ್ದರು ಕೇರಳದ ಶೀಜಾ ದಾಸ್. ಆದರೆ, ಕಳೆದ ಮೇ 4ರಂದು ಒಮನ್‌ನ ಮಸ್ಕತ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೇಲಿನಿಂದ ಬಿದ್ದರೂ ಜೀವ ಉಳಿದಿದೆ. ಆದರೆ, ಕಾಲು ಸ್ವಾಧೀನ ಕಳೆದುಕೊಂಡ ಶೀಜಾ ದಾಸ್‌ಗೆ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ. ಸೊಂಟದ ಕೆಳಗಿನ ಭಾಗ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದ್ದರಿಂದ 36ರ ಹರೆಯದ ಶೀಜಾ ಇದೀಗ ಹಾಸಿಗೆ ಹಿಡಿದಿದ್ದಾರೆ.

ತಿರುವನಂತಪುರಂ ಜಿಲ್ಲೆಯ ಚಿರೈಂಕೀಝುದಲ್ಲಿನ ಚಿಕ್ಕ ಮನೆಯಲ್ಲಿ ಹಾಸಿಗೆಯ ಮೇಲೆ ಮಲಗಿರುವ ಶೀಜಾ ಕಣ್ಣುಗಳಲ್ಲಿ ಅಸಹಾಯಕ ನೋವು ಹಾಗೂ ಮುಂದೇನು ಎಂಬ ಪ್ರಶ್ನೆ ಕಾಡುತ್ತಿತ್ತು. ನೋವು ತುಂಬಿದ ಧ್ವನಿಗಳಲ್ಲಿ ಮಾತನಾಡಿದ ಶೀಜಾ, ತಾನು ಮತ್ತೆ ಮೊದಲಿನಂತಾಗುವುದು ಅಸಾಧ್ಯ ಎಂದು ಹೇಳುವಾಗ ಕಣ್ಣಾಲಿಗಳು ತುಂಬಿಬಂದವು. ಆಕೆಯ ಪಕ್ಕದಲ್ಲೇ ಕುಳಿತು ಪತ್ನಿಗೆ ನೋವುನಿವಾಕರ ಮಾತ್ರೆ ನೀಡುತ್ತಿದ್ದ ಶೀಜಾ ಪತಿಯೂ ಚಿಂತಾಮಗ್ನರಾಗಿದ್ದರು.

ಇದು ಶೀಜಾ ಒಬ್ಬರ ಕತೆಯಲ್ಲ. 2015ರ ಅ.8ರಂದು ವರದಿಯಾದ ಸುದ್ದಿಯೊಂದು ದೇಶದ ಗಮನ ಸೆಳೆದಿತ್ತು. ಅಷ್ಟೇ ಅಲ್ಲದೆ, ಅರಬ್ ರಾಷ್ಟ್ರಗಳಲ್ಲಿ ಕೆಲಸ ಅರಸಿಹೋಗುವ ಮಂದಿ ಅದೆಷ್ಟು ಸುರಕ್ಷಿತ ಎನ್ನುವ ಪ್ರಶ್ನೆಯನ್ನೂ ಅದು ಮುಂದಿಟ್ಟಿತ್ತು. ದುಬೈನಲ್ಲಿ ಕೆಲಸ ಮಾಡುತ್ತಿದ್ದ 58ರ ಹರೆಯದ ಕಸ್ತೂರಿ ಮುನಿರತ್ನಂ, ಮಾಲೀಕರ ಕಿರುಕುಳ ತಾಳಲಾರದೆ ಮನೆಯಿಂದ ಓಡಿಹೋಗಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ, ಆತ ಆಕೆಯ ಬಲಗೈ ಕತ್ತರಿಸಿದ್ದ. ಈ ವಿಚಾರ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾದಾಗ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಈ ಕುರಿತು ಪ್ರತಿಕ್ರಿಯಿಸಿ, “ಈ ಪೈಶಾಚಿಕ ಕೃತ್ಯವನ್ನು ಒಪ್ಪಲು ಸಾಧ್ಯವಿಲ್ಲ. ಸೌದಿ ಅಧಿಕಾರಿಗಳ ಜೊತೆ ಈ ಕುರಿತು ಮಾತನಾಡಿದ್ದೇನೆ. ಭಾರತೀಯ ರಾಯಭಾರಿ ಅಧಿಕಾರಿಗಳು ಸಂತ್ರಸ್ತ ಮಹಿಳೆಯ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಆಕೆಯನ್ನು ಸ್ವದೇಶಕ್ಕೆ ಕರೆತರಲು ವ್ಯವಸ್ಥೆ ಮಾಡಲಾಗಿದೆ,” ಎಂದಿದ್ದರು.

ಒಂದು ವರದಿಯನ್ವಯ ಗಲ್ಫ್ ಕೋಆಪರೇಟಿವ್ ಕೌನ್ಸಿಲ್ ದೇಶಗಳಾದ ಒಮನ್, ಸೌದಿ ಅರೇಬಿಯಾ, ಕುವೈತ್, ಕತಾರ್, ಬಹರೇನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳಲ್ಲಿ ಅಂದಾಜು 50,00,000 ಭಾರತೀಯ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಆದರೆ, ದೌರ್ಜನ್ಯದ ಕುರಿತ ಪ್ರಕರಣಗಳು ದಾಖಲಾಗುವುದು ಬೆರಳೆಣಿಕೆಯಷ್ಟು ಮಾತ್ರ. ಇದಕ್ಕೆ ಉದ್ಯೋಗ ಕಳೆದುಕೊಳ್ಳುವ ಭೀತಿ ಮತ್ತು ಜೀವ ಭಯವೇ ಕಾರಣ ಎನ್ನುವುದು ವಿಶ್ಲೇಷಕರು ಹಾಗೂ ಸಾಮಾಜಿಕ ಕಾರ್ಯಕರ್ತರ ಆರೋಪ.

ಮನೆ ಕಟ್ಟಬೇಕು ಎಂಬ ಕನಸನ್ನು ನನಸು ಮಾಡಲು ಮುಂದಾದ ಶೀಜಾ, ಮಸ್ಕತ್‌ನ ಪೊಲೀಸ್ ಅಧಿಕಾರಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪತಿ ಬಿಜುಮೋನ್‌ನೊಂದಿಗೆ ತಾನೂ ಕೆಲಸಕ್ಕೆ ಸೇರುತ್ತಾರೆ. ಹೀಗಾಗಿ ಕಳೆದ ಮೇನಲ್ಲಿ ಬೇಸಿಗೆ ರಜೆ ಆರಂಭವಾದ ಬಳಿಕ, ತಮ್ಮ ಇಬ್ಬರು ಮಕ್ಕಳೊಂದಿಗೆ ಮಸ್ಕತ್ ತೆರಳುತ್ತಾರೆ. ಶೀಜಾಗೆ 8,750 ರೂಪಾಯಿ ನೀಡುವುದಾಗಿ ಮನೆ ಯಜಮಾನ ಭರವಸೆ ನೀಡಿದ್ದರೂ, ವೇತನ ಪಾವತಿ ಮಾಡಿರಲಿಲ್ಲ. ಈ ಕುರಿತಂತೆ ಶೀಜಾ ಮನೆಗೆ ಭೇಟಿ ನೀಡಿದ ‘ಸ್ಕ್ರೋಲ್’ ಪತ್ರಕರ್ತರೊಂದಿಗೆ ತಮ್ಮ ನೋವನ್ನು ಹಂಚಿಕೊಂಡ ಬಿಜುಮೋನ್, “ಶೀಜಾಗೆ ಮನೆಯಲ್ಲಿದ್ದ ಮಹಿಳೆಯೊಬ್ಬರು ಚಿತ್ರಹಿಂಸೆ ನೀಡುತ್ತಿದ್ದರು. ಆಕೆಗೆ ಆಹಾರ, ನೀರು ಕೂಡ ಒದಗಿಸುತ್ತಿರಲಿಲ್ಲ. ಮಸ್ಕತ್ ತೆರಳುವಾಗ 48 ಕೆಜಿ ಇದ್ದ ಆಕೆ ಇದೀಗ 30 ಕೆಜಿಗೆ ಇಳಿದಿದ್ದಾಳೆ. ಮೇ 4ರಂದು, ಅರಬ್ ಮಹಿಳೆ ಶೀಜಾ ಮೇಲೆ ಹಲ್ಲೆ ನಡೆಸುತ್ತಿದ್ದಳು, ಆಕೆಯ ಕೈಯಿಂದ ತಪ್ಪಿಸಿಕೊಳ್ಳಲು ಶೀಜಾ ಎರಡನೇ ಮಹಡಿಗೆ ಓಡಿದ್ದಾಳೆ.ಇಷ್ಟಾದರೂ ಆಕೆ ಬೆನ್ನತ್ತಿದ್ದರಿಂದ ಬೇರೆ ದಾರಿ ಕಾಣದೆ ಅಪಾರ್ಟ್‌ಮೆಂಟ್‌ನಿಂದ ಕೆಳಗೆ ಬಿದ್ದಿದ್ದಾಳೆ,” ಎಂದು ವಿವರ ನೀಡಿದರು.

ಒಮನ್‌ನಲ್ಲಿರುವ ಭಾರತೀಯರ ಸಾಮಾಜಿಕ-ಸಾಂಸ್ಕೃತಿಕ ರಕ್ಷಣಾ ವೇದಿಕೆ ನಿರ್ದೇಶಕ ಜಬೀರ್, "ಶೀಜಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದರೂ ಉದ್ಯೋಗ ಸ್ಥಳದವರು ಗಮನ ಹರಿಸಲಿಲ್ಲ. ಪರಿಹಾರವನ್ನು ಕೂಡ ನೀಡದೆ ಆತುರಾತುರವಾಗಿ ಕುಟುಂಬವನ್ನು ಭಾರತಕ್ಕೆ ವಾಪಸು ಕಳುಹಿಸಿದ್ದಾರೆ. ಆಕೆಯ ಪತಿ ಹಾಗೂ ಮಕ್ಕಳಿಗೂ ವಿಮಾನದ ಟಿಕೆಟ್ ಬುಕ್ ಮಾಡಿರಲಿಲ್ಲ. ಹೀಗಾಗಿ, ಟ್ಟಿಟರ್ ಮೂಲಕ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿದ ದಂಪತಿ ಭಾರತೀಯ ರಾಯಭಾರಿ ಕಚೇರಿಯ ನೆರವು ಪಡೆದರು. ನಂತರ ಇಬ್ಬರು ಮಕ್ಕಳು ಹಾಗೂ ಬಿಜುಮೋನ್‌ಗೆ ಟಿಕೆಟ್ ವ್ಯವಸ್ಥೆಯಾಗಿತ್ತು. ಶೀಜಾಗೆ ಪರಿಹಾರ ನೀಡುವ ಕುರಿತಂತೆ ನಮ್ಮ ಪ್ರಯತ್ನ ಮುಂದುವರಿದಿದೆ,” ಎನ್ನುತ್ತಾರೆ.

ಶೀಜಾ ಪ್ರಕರಣದಿಂದ ಇದೀಗ ಗಲ್ಫ್ ಸೇರಿದಂತೆ ವಿದೇಶಗಳಲ್ಲಿ ಮನೆಕೆಲಸಕ್ಕೆ ಹೋಗುವ ಭಾರತೀಯರ ಸುರಕ್ಷತೆಗೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮ ಹಾಗೂ ರೂಪಿಸಿರುವ ನಿಯಮಗಳ ಪ್ರಶ್ನೆ ಎದ್ದಿದೆ. ಗಲ್ಫ್ ಸೇರಿದಂತೆ ವಿದೇಶದಲ್ಲಿ ಮನೆ ಕೆಲಸ ನಿರ್ವಹಿಸುವ ಮಹಿಳೆಯರ ರಕ್ಷಣೆಗಾಗಿ 2011ರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೆಲವೊಂದು ಮಾರ್ಗಸೂಚಿಗಳನ್ನು ಮುಂದಿಟ್ಟಿತ್ತು. ಇದರನ್ವಯ ಪ್ರತಿ ತಿಂಗಳು ಬ್ಯಾಂಕ್ ಗ್ಯಾರಂಟಿಯೊಂದಿಗೆ, ಉದ್ಯೋಗಿಯ ಖಾತೆಗೆ ನಿಗದಿತ ವೇತನ ಪಾವತಿಯಾಗಬೇಕು. ಅಷ್ಟೇ ಅಲ್ಲದೆ, ಭಾರತೀಯ ರುಪಾಯಿ ಮೌಲ್ಯದಲ್ಲಿ ತಿಂಗಳಿಗೆ ಕನಿಷ್ಠ 18 ಸಾವಿರ ಪಾವತಿಯಾಗಬೇಕು. ಊಟ, ವಸತಿ ಮತ್ತು ಪ್ರೀಪೇಯ್ಟ್ ಸಿಮ್ ಕಾರ್ಡ್ ಜೊತೆಗೆ ಮೊಬೈಲ್ ಫೋನ್ ನೀಡಬೇಕು ಎಂಬ ಷರತ್ತಿದೆ. 2015ರಲ್ಲಿ ಸರ್ಕಾರ ಇ-ಮೈಗ್ರೇಟ್ ವೆಬ್‌ಸೈಟ್ ಪರಿಚಯಿಸುವ ಮೂಲಕ, ಮನೆಗೆಲಸಕ್ಕಾಗಿ ಹೋಗುವವರ ಅನುಮತಿ ಹಾಗೂ ವೀಸಾಗಳು ಈ ವೆಬ್‌ಸೈಟ್‌ನಲ್ಲಿ ದಾಖಲಾಗಬೇಕು ಎಂದು ಸೂಚಿಸಿತ್ತು.

ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರಿಂದ ಅಲ್ಲಿನ ದೂತಾವಾಸ ಕಚೇರಿಗಳಿಗೆ ಸಲ್ಲಿಕೆಯಾದ ದೂರುಗಳ ಸಂಖ್ಯೆ

ಸರ್ಕಾರಿ ದಾಖಲೆಗಳ ಪ್ರಕಾರ ಇದುವರೆಗೂ ಬಂದ ದೂರುಗಳು

 • ಆಹಾರ ಪೂರೈಸುವುದಿಲ್ಲ: ಗಲ್ಫ್‌ನ 6 ದೇಶಗಳು ಸೇರಿದಂತೆ 9 ದೇಶಗಳಿಗೆ ಕೆಲಸ ಅರಸಿ ಹೋಗುವ ಭಾರತೀಯರಲ್ಲಿ ಶೇಕಡ 87ರಷ್ಟು ಮಂದಿಯ ಆರೋಪವಿದು.
 • ದೌರ್ಜನ್ಯ ಹಾಗೂ ಕೆಟ್ಟದಾಗಿ ನಡೆಸಿಕೊಳ್ಳುವುದು: 2016ರ ಜುಲೈ 20ರಂದು ವಿದೇಶಾಂಗ ಸಚಿವಾಲಯ ಲೋಕಸಭೆಯಲ್ಲಿ ಮಂಡಿಸಿದ ದಾಖಲೆಯನ್ವಯ, 9 ದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರಿಂದ ಬಂದ 55,119 ದೂರುಗಳು. ಈ 55,119 ದೂರುಗಳ ಪೈಕಿ, ಸೌದಿ ಅರೇಬಿಯಾ 11,195, ಕುವೈತ್‌ನಿಂದ 11,103 ಮತ್ತು ಮಲೇಷಿಯಾದಲ್ಲಿ 6,346 ಪ್ರಕರಣಗಳಾಗಿವೆ.
 • ವೇತನ ಪಾವತಿ ಮಾಡುತ್ತಿಲ್ಲ / ನಿಗದಿತ ಮೊತ್ತಕ್ಕಿಂತ ಕಡಿಮೆ ವೇತನ/ ಅತಿಯಾದ ಕೆಲಸದ ಅವಧಿ.
 • ಕೆಲಸದ ಸಮಯದಲ್ಲಿನ ಅವ್ಯವಸ್ಥೆ
 • ದೈಹಿಕ ಹಲ್ಲೆ
 • ವೀಸಾ ನವೀಕರಣ ಮಾಡದೆ ಇರುವುದು
 • ವೈದ್ಯಕೀಯ ವೇತನ ನಿರಾಕರಣೆ
 • ರಜೆ ನಿರಾಕರಣೆ
 • ದೇಶಕ್ಕೆ ವಾಪಸಾಗಲು ವಿಮಾನ ಟಿಕೆಟ್ ನಿರಾಕರಣೆ
 • ಪಾಸ್‌ಪೋರ್ಟ್ ಮತ್ತು ವಿಸಾ ವಶಕ್ಕೆ ಪಡೆದಿಟ್ಟುಕೊಳ್ಳುವುದು
 • ಕಾಂಟ್ರಾಕ್ಟ್ ಅವಧಿ ಮುಗಿದರೂ ಕೆಲಸ ಮುಂದುವರಿಸುವುದು

ಇನ್ನು, 2016ರ ಏಪ್ರಿಲ್ 27ರಂದು, ವಿದೇಶಾಂಗ ಸಚಿವಾಲಯ ಲೋಕಸಭೆಗೆ ಸಲ್ಲಿಸಿದ ವರದಿಯನ್ವಯ, ಜೈಲಿನಲ್ಲಿರುವ ಗಲ್ಫ್‌ನ 7,213 ಕೈದಿಗಳ ಪೈಕಿ 1,697 ಖೈದಿಗಳು ಭಾರತೀಯರಾಗಿದ್ದಾರೆ. ಸೌದಿ ಅರೇಬಿಯಾ, ಯುಎಇ, ಕುವೈತ್, ಒಮನ್, ಕತಾರ್ ಮತ್ತು ಬಹರೇನ್ ಸೇರಿದಂತೆ 6 ಗಲ್ಫ್ ಕಾರ್ಪೋರೇಷನ್ ಕೌನ್ಸಿಲ್ ದೇಶಗಳಲ್ಲಿ ಇದರ ಅರ್ಧದಷ್ಟು ಮಂದಿ ಜೈಲಿನಲ್ಲಿದ್ದಾರೆ. ಒಟ್ಟಾರೆ, ಶೇಕಡ 87ರಷ್ಟು ಭಾರತೀಯ ಉದ್ಯೋಗಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬ ದೂರುಗಳು ದಾಖಲಾಗಿವೆ.

ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
#MeToo | ಟಿವಿ ವೃತ್ತಿಪರರ ಮಾತಿನಲ್ಲಿ ಧಾರಾವಾಹಿ ಲೋಕದತ್ತ ಒಂದು ನೋಟ
Editor’s Pick More