ಮುಂಗಾರು ವಿಶೇಷ | ನೆಲಮುಗಿಲು ಒಂದುಮಾಡಿದ ಮಾಂದಲಪಟ್ಟಿಯ ಮಳೆಗಾಳಿ ಆರ್ಭಟ

ಮಾಂದಲಪಟ್ಟಿಯನ್ನು ಚಳಿಗಾಲದಲ್ಲಿ ನೋಡಬೇಕು ಎಂದು ಹೇಳುತ್ತಾರೆ. ಹಾಲ್ನೊರೆಯಂತಹ ಮೋಡಗಳ ವೈಭವ ಆಗ ಚೆನ್ನಾಗಿರುತ್ತದೆ. ಆದರೆ, ಈ ಗುಡ್ಡಗಳಲ್ಲಿ ಮುಂಗಾರು ವೈಭವವನ್ನು ನೋಡಬೇಕೆಂದರೆ, ನೆಲಮುಗಿಲು ಒಂದಾಗಿ ಮೋಡಗಳ ನಾಡಾಗಿದ್ದನ್ನು ಕಾಣಬೇಕೆಂದರೆ ಈಗಲೇ ಭೇಟಿ ಕೊಡಿ

ಮಡಿಕೇರಿಯಿಂದ ೧೫ ಕಿಮೀ ದೂರದಲ್ಲಿರುವ ಮಾಂದಲಪಟ್ಟಿ ಕೊಡಗಿನ ಪ್ರಕೃತಿ ಸೌಂದರ್ಯದ ಕಳಶಪ್ರಾಯವೆನಿಸುವ ಪ್ರದೇಶ. ಮಾಂದಲಪಟ್ಟಿಯ ತುತ್ತತುದಿಗೆ ತಲುಪಿದರೆ ಸ್ವರ್ಗದ ಬಾಗಿಲು ತೆರೆದ ಅನುಭವ. ಸುತ್ತಲೂ ಹರಡಿಕೊಂಡಿರುವ ಹಸಿರು ಗುಡ್ಡಗಳನ್ನು ಮರೆಮಾಚುವ ಪ್ರಯತ್ನದಲ್ಲಿರುವ ಬಿಳಿಮೋಡಗಳ ಸೌಂದರ್ಯ. ಆದರೆ ಈ ಸೌಂದರ್ಯವನ್ನು ಮಳೆಗಾಲದಲ್ಲಿ ನೋಡುವುದೆಂದರೆ?

ಮಡಿಕೇರಿಯಿಂದ ಆರಂಭವಾದ ನಮ್ಮ ಪ್ರಯಾಣ, ಹಳ್ಳಗಳೇ ತುಂಬಿಕೊಂಡ ದಾರಿಯಲ್ಲಿ ಏರು-ತಗ್ಗುಗಳ ನಡುವೆ ರೋಮಾಂಚಕಾರಿಯಾಗಿತ್ತು. ಮಾಂದಲಪಟ್ಟಿಗೆ ನಾಜೂಕಾದ ವಾಹನ ನಡೆಯದು. ಲೋಕಲ್ ಜೀಪ್ ಇದ್ದರೆ ಡಾಂಬರು ಹಾಕಿದ ಗುರುತೇ ಇಲ್ಲದ ರಸ್ತೆಯಲ್ಲಿ ನೀರು ತುಂಬಿನಿಂತ ಹಳ್ಳಗಳನ್ನು ದಾಟುತ್ತ, ಓಲಾಡುತ್ತ ತುತ್ತತುದಿಯಲ್ಲಿರುವ ಮಂಟಪದ ಬಳಿಗೆ ತಲುಪಬಹುದು. ಈ ಓಲಾಟದ ನಡುವೆಯೂ ಮುದ ನೀಡುವುದು ದಾರಿಯುದ್ದಕ್ಕೂ ಹರಡಿರುವ ಹಸಿರು ಪರಿಸರ. ಆಗಷ್ಟೇ ಮೊಳಕೆಯೊಡೆಯುತ್ತಿರುವ ಹಸಿರು ಹುಲ್ಲುಗಳನ್ನು ಆವರಿಸಿಕೊಂಡ ಬೋಳುಗುಡ್ಡಗಳು ಮನಮೋಹಕ. ಸಾಗಿದಷ್ಟು ಮುಗಿಯದ ದಾರಿ. ಆದರೆ, ಮಾಂದಲಪಟ್ಟಿಯ ತುತ್ತತುದಿಯ ಮಂಟಪ ತಲುಪುತ್ತಲೇ ಧೋ ಎಂದು ಗಾಳಿ ಮಳೆ. ಗಾಳಿಗೆ ಕೈಯಲ್ಲಿದ್ದ ಕೊಡೆಗಳು ಹಾರಿಹೋಗುವ ಭಯ. ಮಳೆಯಲ್ಲಿ ಒದ್ದೆಯಾಗಿ ಚಳಿ. ಚಳಿಯಲ್ಲಿ ನಡುಗುತ್ತಲೇ ಮಳೆಯ ನಡುವೆಯೇ ಬೆಟ್ಟದಿಂದ ಕೆಳಗಿಳಿದೆವು.

ಮಾಂದಲಪಟ್ಟಿ ಆರಂಭಿಕ ಸ್ಥಳ ಬಂದ ಕೂಡಲೇ ಬಹಳಷ್ಟು ಮಂದಿ ಉತ್ಸಾಹದಿಂದ ಚಾರಣ ಮಾಡಿಯೇ ತುದಿ ತಲುಪುವ ಪ್ರಯತ್ನ ಮಾಡುತ್ತಾರೆ. ಬಹಳಷ್ಟು ಮಂದಿ ಅರ್ಧದಾರಿಯಲ್ಲೇ ವಾಪಸಾಗುತ್ತಾರೆ. ದಾರಿ ಮಧ್ಯೆ ಸಿಗುವ ಒಂದೆರಡು ಗುಡ್ಡ ಹತ್ತಿ ನೋಡಿ ಖುಷಿಪಡುತ್ತಾರೆ. ಆದರೆ, ತುತ್ತತುದಿಯಲ್ಲಿರುವ ಮಂಟಪವನ್ನು ತಲುಪಬೇಕೆಂದರೆ ಕನಿಷ್ಠವೆಂದರೂ ಆರು ಕಿಮೀನಷ್ಟು ನಡೆಯಬೇಕು. ಮಳೆ ಮತ್ತು ಗಾಳಿಯನ್ನು ಎದುರಿಸುತ್ತ ನಡೆಯುವ ಅನುಭವ ಅದ್ಭುತ. ಲೋಕಲ್ ಜೀಪ್ ಹಿಡಿದರೆ ಸ್ವಲ್ಪ ಬೇಗನೇ ತಲುಪಬಹುದು. ಮಳೆಗಾಲದಲ್ಲಿ ಮೋಡಗಳ ನಡುವೆ ಅವಿತುಹೋಗುವ ಬೆಟ್ಟಗಳ ನಿಜ ಸೌಂದರ್ಯ ಕಾಣುವುದಿಲ್ಲ. ಸುತ್ತಲೂ ಮಂಜು ಮುಸುಕಿದ ಬಿಳಿ ಆಗಸವಷ್ಟೇ ಕಾಣಿಸುತ್ತದೆ. ಮಳೆಯ ನಡುವೆಯೇ ಬಿಸಿಲು ಕಂಡರೆ ಬೆಟ್ಟಗಳ ನಿಜವಾದ ಸೌಂದರ್ಯ ಕಂಡೀತು.

ವಾಸ್ತವದಲ್ಲಿ ಸೆಪ್ಟೆಂಬರ್ ನಂತರ ಜನವರಿವರೆಗೆ ಮಾಂದಲಪಟ್ಟಿ ಹಸಿರು ತುಂಬಿಕೊಂಡು ನಳನಳಿಸುತ್ತಿರುತ್ತದೆ. ಕೈಗೆಟುಕುತ್ತವೋ ಎನ್ನುವಂತೆ ಮೋಡಗಳು ಅತ್ತಿಂದಿತ್ತ ಅಡ್ಡಾಡುವುದನ್ನು ನೋಡುವುದೇ ಚಂದ. ಈ ವೈಭವವನ್ನು ಅದ್ಭುತವಾಗಿ ಸವಿಯಲು ಚಳಿಗಾಲದ ಋತು ಅತ್ಯುತ್ತಮ ಅವಧಿ. ಅದರಲ್ಲೂ ಸೂರ್ಯಾಸ್ತದ ದೃಶ್ಯಗಳಂತೂ ವರ್ಣನಾತೀತ. ನಡುಬೇಸಿಗೆಯಲ್ಲೂ ತಂಪಾದ ಹವೆ, ಮುಂಜಾನೆಯಾದರೆ ಇಬ್ಬನಿಯ ಸಿಂಚನ, ಸಂಜೆ ಮಂಜು ಮುಸುಕಿನಲ್ಲಿ ಸೂರ್ಯ ಬೆಟ್ಟಗಳ ನಡುವೆ ಲೀನವಾಗುವ ದೃಶ್ಯ ಮನಮೋಹಕ.

ಚಾರಣಿಗರು ಬೆಳಗ್ಗೆ ಬೇಗನೇ ಮಾಂದಲಪಟ್ಟಿಯ ಕಡೆಗೆ ಹೋಗಿ ಮಧ್ಯಾಹ್ನ ೧೨ ಗಂಟೆಯ ಮೊದಲು ವಾಪಸ್ ಬರುವುದು ಒಳಿತು. ಏಕೆಂದರೆ, ಈ ಸಮಯದಲ್ಲಿ ವಾತಾವರಣವು ತಂಪಾಗಿದ್ದು, ಮಂಜಿನಧಾರೆಯಲ್ಲಿ ಮಿಂದು ಕುಣಿದು ಕುಪ್ಪಳಿಸಬಹುದು. ಕೊಡಗು ಜಿಲ್ಲೆಯ ಮಡಿಕೇರಿಯಿಂದ ೧೫ ಕಿಮೀ ದೂರದಲ್ಲಿ ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯಲ್ಲಿ ಮಾಂದಲಪಟ್ಟಿ ಬರುತ್ತದೆ. ಚಾರಣಿಗರು ಮತ್ತು ಪ್ರವಾಸಿಗರಿಗೆ ಬೆಟ್ಟದ ತುದಿಯ ವ್ಯೂ ಪಾಯಿಂಟ್ ಅಥವಾ ಮಂಟಪ ವೀಕ್ಷಿಸಲು ಪ್ರವೇಶ ಶುಲ್ಕವಿದೆ. ಪ್ರಯಾಣಿಕರಿಗೆ ಮಾಂದಲಪಟ್ಟಿಯಲ್ಲಿ ವಸತಿ ಸೌಲಭ್ಯ ಇಲ್ಲ. ಸಮೀಪದ ನಗರಗಳಲ್ಲಿ ವಸತಿ ಸೌಕರ್ಯಗಳಿವೆ. ಮಡಿಕೇರಿ ಅಥವಾ ಸೋಮವಾರಪೇಟೆ ವಸತಿಗೃಹಗಳಲ್ಲಿ ಇಳಿದುಕೊಳ್ಳಬಹುದು. ಆದರೆ, ಆಹಾರ ಮತ್ತು ನೀರು ಜೊತೆಯಲ್ಲಿಯೇ ಒಯ್ಯಬೇಕು.

ಇದನ್ನೂ ಓದಿ : ಮುಂಗಾರು ವಿಶೇಷ | ಮಳೆಯಲ್ಲಿ ಒದ್ದೆಯಾಗುವ ಮುನ್ನ ಈ ಎರಡು ವಿಡಿಯೋ ನೋಡಿಬಿಡಿ

ಮಡಿಕೇರಿಯಿಂದ ಅಬ್ಬಿ ಫಾಲ್ಸ್ ಮಾರ್ಗವಾಗಿ ಹೋದರೆ ಮಾಂದಲಪಟ್ಟಿ ತಲುಪಬಹುದು. ಬೆಂಗಳೂರಿನ ಕಡೆಯಿಂದ ಮಾಂದಲಪಟ್ಟಿ ಬರುವ ಪ್ರವಾಸಿಗರು, ಚಾರಣಿಗರು ಬಸ್ಸೇ ಹಿಡಿಯಬೇಕು. ಬೆಂಗಳೂರು, ಚನ್ನಪಟ್ಟಣ, ಮಂಡ್ಯ, ಮೈಸೂರು, ಕುಶಾಲನಗರ, ಮಡಿಕೇರಿ ಮಾರ್ಗವಾಗಿ ಮಾಂದಲಪಟ್ಟಿ ತಲುಪಬಹುದು. ಮಡಿಕೇರಿಯಿಂದ ಬಾಡಿಗೆ ವಾಹನಗಳು ಸಿಗುತ್ತವೆ. ದ್ವಿಚಕ್ರ ವಾಹನಗಳಲ್ಲಿ ಮಾಂದಲಪಟ್ಟಿಯ ತುತ್ತತುದಿಗೆ ಹೋಗುವ ಪ್ರಯತ್ನ ಹರಸಾಹಸವಾದೀತು.

ದಶಕಗಳ ಹಿಂದೆ ಮಾಂದಲಪಟ್ಟಿಯಲ್ಲಿ ಸಿಗುತ್ತಿದ್ದ ನೀರವ ಮೌನ ಮತ್ತು ಶಾಂತ ಪ್ರಕೃತಿ ಸೌಂದರ್ಯವನ್ನು ಈಗ ನೋಡಲು ಸಾಧ್ಯವಿಲ್ಲ. ‘ಗಾಳಿಪಟ’ ಕನ್ನಡ ಸಿನಿಮಾದಲ್ಲಿ ‘ಮುಗಿಲುಪೇಟೆ’ ಎನ್ನುವ ಹೆಸರಿನಲ್ಲಿ ಮಾಂದಲಪಟ್ಟಿಯ ಸೌಂದರ್ಯವನ್ನು ಪ್ರದರ್ಶಿಸಿದ ನಂತರ ಇಲ್ಲಿಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಯಾವ ಋತುವಿನಲ್ಲಿ ಹೋದರೂ ಪ್ರವಾಸಿಗರು ತುಂಬಿರುತ್ತಾರೆ. ಜನಜಂಗುಳಿಯನ್ನು ಇಷ್ಟಪಡದವರಿಗೆ ಮಾಂದಲಪಟ್ಟಿ ಸ್ವಲ್ಪಮಟ್ಟಿಗೆ ನಿರಾಸೆ ತರಬಹುದು.

ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
#MeToo | ಟಿವಿ ವೃತ್ತಿಪರರ ಮಾತಿನಲ್ಲಿ ಧಾರಾವಾಹಿ ಲೋಕದತ್ತ ಒಂದು ನೋಟ
Editor’s Pick More