ಚೆ ಗೆವಾರ ನೆನಪು| ಕಾವ್ಯದ ಕಡು ಮೋಹಿಯೊಳಗಿದ್ದ ಮಹಾಕ್ರಾಂತಿಕಾರಿ ನಾಯಕ

ಕ್ಯೂಬಾ ಎಂದರೆ ನೆನಪಾಗುವ ಎರಡು ಹೆಸರು; ಕ್ಯಾಸ್ಟ್ರೊ, ಚೆ ಗೆವಾರ. ಲೋಕದ ಎಲ್ಲ ಕಾಲದ ತರುಣರನ್ನು ಪ್ರಭಾವಿಸಿದ, ಇಂದಿಗೂ ಚುಂಬಕದಂತೆ ಸೆಳೆಯುವ ವ್ಯಕ್ತಿತ್ವ ಚೆ ಗುವೆರಾನದ್ದು. ಜೂನ್ ೧೪, ಈತನ ಜನ್ಮದಿನ. ಜಗತ್ತಿನ ಮರೆಯಲಾಗದ ಐಕಾನ್‌ ಆಗಿರುವ ಚೆ ಬದುಕನ್ನು ಮೆಲುಕು ಹಾಕುವ ಬರಹ ಇಲ್ಲಿದೆ

ನೋಡಲು ಕಿಲಾಡಿ ಹುಡುಗನಂತೆ ಕಾಣುವ ಹೊಳೆವ ಕಣ್ಣುಗಳ ತೇಜೋಮಯ ತರುಣ; ಬಡರೋಗಿಗಳನ್ನು, ಕೃಷಿಕರನ್ನು, ಗಣಿ ಕೆಲಸಗಾರರನ್ನು ಕಂಡು ಅವರಿಗಾಗಿ ಏನಾದರೂ ಮಾಡಲೇಬೇಕೆಂದು ಪಣತೊಟ್ಟ ವೈದ್ಯ; ಬದುಕಿನ ಕೊನೆಯ ಕ್ಷಣಗಳಲ್ಲಿ ಬೊಲಿವಿಯನ್ ಪರ್ವತಗಳಲ್ಲಿ ಅಲೆದಾಡುವಾಗ ತನ್ನ ಒರಟು ಉಣ್ಣೆಯ ಬ್ಯಾಗಿನಲ್ಲಿ ಆಯುಧಗಳ ಜೊತೆ ನೆರೂಡನ ಕ್ಯಾಂಟೋ ಜನರಲ್ ಕವಿತೆ ಪುಸ್ತಕ ಇಟ್ಟುಕೊಂಡ ಕಾವ್ಯಪ್ರೇಮಿ; ಒಂದು ದೇಶದಲ್ಲಿ ಹುಟ್ಟಿ, ಮತ್ತೊಂದು ದೇಶಕ್ಕಾಗಿ ಹೋರಾಡಿ, ಮಗದೊಂದು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವೊಪ್ಪಿಸಿದ ಹೋರಾಟಗಾರ: ಬದುಕಿದ 39 ವರ್ಷಗಳಲ್ಲಿ ವಿಶ್ವದ ಮುಕ್ಕಾಲು ದೇಶಗಳ ಸಂದರ್ಶಿಸಿದ ಜಂಗಮ; ಜಗತ್ತಿನ ಅಸಂಖ್ಯ ಜನರ ಸ್ಫೂರ್ತಿ; ನನ್ನಲ್ಲಿ ನಿರಂತರ ಬೆಳೆಯುತ್ತಲಿರುವ ಮಗು..

ಅವ ಅರ್ನೆಸ್ಟೋ ಗೆವಾರಾ ಡಿ ಲಾ ಸೆರ್ನಾ. ಸಂಕ್ಷಿಪ್ತವಾಗಿ ಚೆಗೆವಾರ. ಪ್ರೀತಿಯಿಂದ ಚೆ..

ಆತನನ್ನು ಪ್ರಾಣಬಿಡುವಷ್ಟು ಪ್ರೀತಿಸುವವರಿದ್ದಾರೆ, ಕುರುಡು ಅಭಿಮಾನಿಗಳಾದವರಿದ್ದಾರೆ, ಕೊಲೆಗಡುಕನೆಂದು ದ್ವೇಷಿಸುವವರೂ ಇದ್ದಾರೆ. ತಟ್ಟೆ, ಲೋಟ, ಪೆನ್ನು, ಪುಸ್ತಕ, ಕವಿತೆ, ಟೀ ಶರ್ಟ್, ಬ್ಯಾಗ್, ನೋಟು, ನಾಣ್ಯ, ಟೋಪಿ, ಹಚ್ಚೆ, ಸ್ಮಾರಕ, ಸಿನಿಮಾ - ಹೀಗೆ ಎಲ್ಲೆಂದರಲ್ಲಿ ಕಾಣುವ ಚೆಗೆವಾರ ಜಗತ್ತಿನ ಅತ್ಯಂತ ಪ್ರಸಿದ್ಧ ಮುಖ. ಅತಿ ಹೆಚ್ಚು ಕಮರ್ಷಿಯಲೈಸ್ ಆದ ನಾಯಕ. ನಮ್ಮ ನೆಲದಿಂದ ಹದಿನೈದು ಸಾವಿರ ಕಿಲೋಮೀಟರು ದೂರದಲ್ಲಿದ್ದರೇನು, ಕನ್ನಡ ಮನಸುಗಳನ್ನು ಇನ್ನಿಲ್ಲದಂತೆ ಪ್ರಭಾವಿಸಿದವನು. ಚೆ ಕುರಿತ ಪುಸ್ತಕ ಇಟ್ಟರೆ ತಮ್ಮನ್ನು ನಕ್ಸಲೈಟ್ ಬೆಂಬಲಿಗರೆಂದುಕೊಂಡಾರು ಎಂದು ಹಿಂಜರಿವ ಪುಸ್ತಕದಂಗಡಿ ಮಾಲೀಕರು, ತನ್ನ ಮಗನಿಗೆ ಚೆಗೆವಾರ ಎಂದು ಹೆಸರಿಟ್ಟ ವಿ.ಆರ್.ಕಾರ್ಪೆಂಟರ್, ಮೋಟಾರ್ ಸೈಕಲ್ ಡೈರೀಸ್ ಓದಿ ಮೂರ್ನಾಲ್ಕು ಬಾರಿ ಕರ್ನಾಟಕ ಸುತ್ತಿಬಂದ ಮುರಳೀ ಮೋಹನ್ ಕಾಟಿ, ಚೆ ಬದುಕನ್ನು ನೆನಪಿಸುವ ಸಾಕೇತ್ ರಾಜನ್ ಸಾವು - ಹೀಗೆ ಕನ್ನಡದಲ್ಲಿ ಅವನು ಹಲವು ರೀತಿಗಳಲ್ಲಿ ಹಾಸುಹೊಕ್ಕಾಗಿದ್ದಾನೆ.

ನನ್ನ ಮಟ್ಟಿಗೆ ಕನಸು, ಕೆಚ್ಚು, ಚೆಲುವಾಂತ ನಗೆ, ತೀವ್ರತೆ, ದುಡುಕುಗಳ ಮೊತ್ತವಾಗಿ; ಸಫಲನೋ ವಿಫಲನೋ ಎಂದು ಅಳೆಯಬಾರದ ಕೌತುಕವಾಗಿ ಚೆ ಒಳಗಿನವನಾಗಿದ್ದಾನೆ. `ಜಗತ್ತಿನ ಯಾವುದೇ ಭಾಗದಲ್ಲಿರುವ ಶೋಷಿತನಿಗಾಗಿ ನಿನ್ನೆದೆ ಕಂಪಿಸುತ್ತಿದ್ದರೆ ನಾನು ನಿನ್ನ ಸಂಗಾತಿ’ ಎಂದವನನ್ನು ಕಮ್ಯುನಿಸ್ಟ್ ನಾಯಕ, ಗೆರಿಲ್ಲಾ ಹೋರಾಟಗಾರ ಎಂದಷ್ಟೇ ನೋಡಲು ಸಾಧ್ಯವಿಲ್ಲ. ಅವ ಹುಟ್ಟಿ ಅರೆ ಶತಮಾನದ ಬಳಿಕ ನಾ ಹುಟ್ಟಿದರೂ ಬಹುವಚನದಲ್ಲಿ ಸಂಬೋಧಿಸಲೂ ಸಾಧ್ಯವಿಲ್ಲ.

ಆತ ನನ್ನ ಸಂಗಾತಿ

ತನ್ನ ಬಳಿ ಚಿಕಿತ್ಸೆಗೆ ಬರುತ್ತಿದ್ದ ಬಟ್ಟೆ ತೊಳೆಯುವ ಮುದುಕಿಗೆ ಒಂದು ಕವಿತೆಯನ್ನು ಅರ್ಪಿಸಿದ ಹೆಂಗರುಳಿನ ಚೆ; ಮುಗುಳುನಗೆಯಿಲ್ಲದೆ ಮಾತಾಡದಿದ್ದ ಚೆ; ರಾತ್ರಿಯ ಹೊತ್ತು ನದಿನೀರಿನಲ್ಲಿ ಮುಳುಗಲು, ಬಾಗಿಲಿರದ ಕೋಣೆಯಲ್ಲಿ ಮಲಗಲು ಹೆದರುತ್ತಿದ್ದ ಚೆ ಕಡು ಕ್ರಾಂತಿಕಾರಿಯಾದದ್ದು ಹೇಗೆ? ತನ್ನ ಮನೆ ಲೈಬ್ರರಿಯ 3000 ಪುಸ್ತಕಗಳಲ್ಲಿ ಹೆಚ್ಚಿನವನ್ನು ಓದಿದ್ದ ವಿಚಾರಮಗ್ನ ವೈದ್ಯ ವಿದ್ಯಾರ್ಥಿ ಚೆ ಗೆರಿಲ್ಲಾ ಹೋರಾಟಗಾರನಾಗಿ ಬದಲಾದದ್ದು ಯಾವಾಗ ಎನ್ನುವುದು ನನ್ನನ್ನು ಸತತ ಕಾಡಿದೆ.

ಮೋಟಾರ್ ಸೈಕಲ್ ಡೈರೀಸ್

1928. ಅರ್ಜೆಂಟೀನಾದ ರೊಸಾರಿಯೋದಲ್ಲಿ ಅರ್ನೆಸ್ಟೋ ಗೆವಾರಾ ಲಿಂಚ್ ಹಾಗೂ ಸೆಲಿಯಾ ಡಿ ಲಾ ಸೆರ್ನಾ ಅವರ ಮೊದಲ ಮಗನಾಗಿ ಹುಟ್ಟಿದ ಅರ್ನೆಸ್ಟೋ ಸದಾ ಚಟುವಟಿಕೆಯ ಹುಡುಗ. ಅರೆ ಐರಿಶ್ ಮೂಲದ ಅವನ ಕುಟುಂಬದಲ್ಲಿ ಅಪ್ಪ ರಿಪಬ್ಲಿಕನ್ ಬೆಂಬಲಿಗ, ಸ್ಪ್ಯಾನಿಶ್ ಕ್ರಾಂತಿಕಾರಿಗಳ ಪರ. ಮಗನ ಅವಿಶ್ರಾಂತ ಚಟುವಟಿಕೆಗಳನ್ನು ನೋಡಿದ ತಂದೆ, `ಅವ ಹುಟ್ಟಿದ ಕೂಡಲೇ ನನಗೆ ಗೊತ್ತಾಯಿತು, ಅವನ ರಕ್ತದಲ್ಲಿ ಐರಿಶ್ ಕ್ರಾಂತಿಕಾರಿಗಳ ರಕ್ತ ಹರಿಯುತ್ತಿದೆ’ ಅಂದರಂತೆ. ಅಸ್ತಮಾ ಬಾಧಿಸುತ್ತಿದ್ದರೂ ಫುಟ್ಬಾಲ್, ರಗ್ಬಿ, ಈಜು, ಗಾಲ್ಫ್, ಸೈಕ್ಲಿಂಗ್, ಶೂಟಿಂಗ್ ಎಲ್ಲದರಲ್ಲೂ ಮುಂದಿದ್ದ ಆಟಗಾರ ಚೆ. ಯಾವುದೇ ಆಟವಿದ್ದರೂ ಆತನ ಅಗ್ರೆಸ್ಸಿವ್ ಶೈಲಿ ಎದ್ದು ಕಾಣುತ್ತಿತ್ತು. ನೆರೂಡ, ಕೀಟ್ಸ್, ಮಚಾಡೋ ಅಲ್ಲದೆ ಹಲವು ದೇಶೀ ಮತ್ತು ವಿದೇಶೀ ಕವಿಗಳನ್ನು ಕಂಠಪಾಠವಾಗುವಷ್ಟು ಓದಿಕೊಂಡಿದ್ದ. ವಿಜ್ಞಾನ, ಗಣಿತ, ಕವಿತೆ, ಕಾದಂಬರಿ, ವಿಚಾರ ಸಾಹಿತ್ಯ - ಹೀಗೆ ಜ್ಞಾನಕ್ಕೆ ಸಂಬಂಧಿಸಿದ ಹಲವು ಶಾಖೆಗಳ ಬಗೆಗೆ ಆಳ ತಿಳುವಳಿಕೆ ಹೊಂದಿದ್ದ.

ಚಟುವಟಿಕೆಯ ವ್ಯಕ್ತಿತ್ವ, ತೀವ್ರ ಭಾವುಕತನವೇ ಅವನನ್ನು ಅಲೆಮಾರಿಯನ್ನಾಗಿ ಮಾಡಿರಬಹುದು. ವಿದ್ಯಾರ್ಥಿ ಜೀವನದಲ್ಲೇ ತಿರುಗಾಟ ಶುರು ಮಾಡಿದ. 1950ರಲ್ಲಿ ಒಬ್ಬನೇ ಮೋಟರ್ ಅಳವಡಿಸಿದ ತನ್ನ ಸೈಕಲಿನಲ್ಲಿ ಉತ್ತರ ಅರ್ಜೆಂಟೀನಾದ ಹಳ್ಳಿಗಾಡುಗಳ 4,500 ಕಿಮೀ ಸಂಚರಿಸಿದ. 1951ರಲ್ಲಿ ಆಲ್ಬರ್ಟೋ ಗ್ರೆನಾಡೋ ಜೊತೆಗೂಡಿ 8,000 ಕಿಮೀ ದೂರವನ್ನು, 9 ತಿಂಗಳಲ್ಲಿ ಕ್ರಮಿಸಿದ. ಎಲ್ಲೆಲ್ಲೂ ಇದ್ದ ಬಡತನ, ಹಸಿವು, ರೋಗ, ಶೋಷಣೆ ಅವನ ಗಮನ ಸೆಳೆದಿದ್ದವು. ವೈದ್ಯ ಪದವಿ ಪಡೆದೊಡನೆ 1953ರಲ್ಲಿ ಮತ್ತೆ ತಿರುಗಾಟಕ್ಕೆ ಹೊರಟ.

`ಮೋಟಾರ್ ಸೈಕಲ್ ಡೈರೀಸ್’ ಅವನ ಎರಡನೆಯ ತಿರುಗಾಟದ ಅನುಭವವನ್ನು ಟಿಪ್ಪಣಿಯ ರೂಪದಲ್ಲಿ ಹೊಂದಿರುವಂಥದು. 1951ರ ಅಕ್ಟೋಬರಿನಿಂದ ಅರ್ಜೆಂಟೀನಾ, ಚಿಲಿ, ಪೆರು, ಈಕ್ವೆಡಾರ್, ಕೊಲಂಬಿಯಾ, ವೆನಿಜುವೆಲಾ, ಪನಾಮಾ ಮತ್ತು ಮಿಯಾಮಿಗಳಲ್ಲಿ ಸುತ್ತಾಡಿ ಅಲ್ಲಿಂದ ಮನೆಗೆ ವಾಪಸಾದ ಅವನ ತಿರುಗಾಟದ ಅನುಭವ ಈ ಪುಸ್ತಕ. ಅವರು ಭೇಟಿ ನೀಡಿದ ಸ್ಥಳಗಳ ಪಟ್ಟಿ ನೋಡಿದರೆ ಅದು ರಜಾ ಕಳೆಯಲು ಅಥವಾ ಅಧ್ಯಯನ ಕುತೂಹಲದಿಂದ ಕೈಗೊಳ್ಳುವ ಪೂರ್ವನಿಯೋಜಿತ ಐಷಾರಾಮಿ ಪ್ರವಾಸವಾಗಿರಲಿಲ್ಲ ಎಂದು ತಿಳಿಯುತ್ತದೆ. ಅಲ್ಲಿ ಪೂರ್ವ ನಿಶ್ಚಿತವಾಗಿದ್ದುದು ಹೋಗಬೇಕಾದ ಜಾಗವಷ್ಟೇ. ಅಮ್ಮನಿಗೆ ಬರೆದ ಪತ್ರದಲ್ಲಿ ಚೆ, ಹೋಟೆಲು-ಹಾಸ್ಟೆಲಿನಲ್ಲಿ ಉಳಿಯುವ ಪೂರ್ವ ನಿಯೋಜಿತ ಪ್ರವಾಸ `ಬೂಷ್ರ್ವಾ’ ಪ್ರವಾಸ; ನಿಜವಾದ ಸಾಹಸಿ ಪ್ರವಾಸಿಗೆ ಅವತ್ತಿನದು ಅವತ್ತೇ ನಿರ್ಧಾರವಾಗಬೇಕು ಎಂದಿದ್ದಾನೆ.

ಪ್ರಯಾಣಕ್ಕೆ, ಚಲನೆಗೆ ಏನೋ ಚೈತನ್ಯವಿದೆ. ಭೂತ-ಭವಿಷ್ಯಗಳ ನಡುವಿನ ವರ್ತಮಾನದಲ್ಲಿರುವ ನಮ್ಮನ್ನು ನಾವು ಹೆಚ್ಚೆಚ್ಚು ಅರಿಯಲು ಅದು ಸಹಾಯ ಮಾಡುತ್ತದೆ. ಈ ಪ್ರಯಾಣ ಅವನನ್ನು ಅವ ನೋಡಿಕೊಳ್ಳುವ ರೀತಿಯನ್ನು, ಲ್ಯಾಟಿನ್ ಅಮೆರಿಕವನ್ನು ಅವ ಅರ್ಥಮಾಡಿಕೊಂಡ ಬಗೆಯನ್ನು ಬದಲಾಯಿಸಿತು. ಹಲವು ದೇಶಗಳ ಸುತ್ತಿ ಚೆ ಮತ್ತು ಗ್ರೆನಾಡೋ ಜನರನ್ನು ಬಾಧಿಸುತ್ತಿರುವ ಕಾಯಿಲೆ ಮತ್ತದರ ಮೂಲ ಏನೆಂದು ಅರ್ಥ ಮಾಡಿಕೊಂಡರು. ತನ್ನ ಟಿಪ್ಪಣಿಗಳಲ್ಲಿ ಚೆ ಚಿಲಿಯ ಗಣಿ ಕಾರ್ಮಿಕರ ದುಸ್ಥಿತಿ ಬಗ್ಗೆ ಬರೆದಿದ್ದಾನೆ. ದಾರಿಯಲ್ಲಿ ಭೇಟಿಯಾದ ನಿರ್ಗತಿಕ ಕಮ್ಯುನಿಸ್ಟ್ ದಂಪತಿಗಳಿಗಾಗಿ ಮರುಗಿದ್ದಾನೆ. ಮಚುಪಿಚುವಿನಲ್ಲಿ ಮೂಲನಿವಾಸಿಗಳನ್ನು ವಸಾಹತುಶಾಹಿಗಳು ಹೇಗೆ ಹೊಸಕಿ ಹಾಕಿದರು ಎಂದು ಗುರುತಿಸಿದ್ದಾನೆ. ಕುಷ್ಠರೋಗ ಕಾಲನಿಗಳಲ್ಲಿ ರೋಗಿಗಳು ತೋರಿಸಿದ ಪ್ರೀತಿಗೆ ಮನಸೋತು `ಅತಿ ಹೆಚ್ಚು ವಿಶ್ವಾಸ ಮತ್ತು ಸಹಭಾಗಿತ್ವ ನಿಸ್ಸಹಾಯಕರು ಮತ್ತು ಏಕಾಂಗಿಗಳ ನಡುವೆಯೇ ಒದಗಿಬರುತ್ತದೆ’ ಎನ್ನುತ್ತಾನೆ.

ಲ್ಯಾಟಿನ್ ಅಮೆರಿಕದ ದೇಶಗಳು ಗಣಿ, ಕಾಡು, ಖನಿಜ ಮತ್ತಿತರ ಸಂಪನ್ಮೂಲಗಳ ಹೊರತಾಗಿಯೂ ಹಿಂದುಳಿದಿರುವುದಕ್ಕೆ ಒಂದಾನೊಂದು ಕಾಲದ ಸಾಮ್ರಾಜ್ಯಶಾಹಿಗಳ ಆಕ್ರಮಣ ಹಾಗೂ ವರ್ತಮಾನದ ನವವಸಾಹತುಶಾಹಿಗಳ ಬಂಡವಾಳ ಹಿತಾಸಕ್ತಿಯೇ ಪ್ರಮುಖ ಕಾರಣ ಎಂದು ಅವನಿಗೆ ಈ ಅಲೆದಾಟದಲ್ಲಿ ಅರ್ಥವಾಯಿತು. ಲ್ಯಾಟಿನ್ ಅಮೆರಿಕದ ಮೇಲೆ ಉತ್ತರ ಅಮೆರಿಕಾದ ಹಿಡಿತ, ಮೂಲ ನಿವಾಸಿಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ಪ್ರಯಾಣ ಜಾಗೃತಿ ಮೂಡಿಸಿತು. ದುಡ್ಡಿಲ್ಲ ಎಂದು ಚಿಕಿತ್ಸೆ ಪಡೆಯಲಾಗದ ಮಗು, ನಿರಂತರ ಹಸಿವು ಹುಟ್ಟಿಸುವ ಮೂಢನಂಬಿಕೆಗಳು, ಅಪಘಾತದಿಂದ ಮಗ ಸತ್ತದ್ದನ್ನೂ ವಿಧಿಯೆಂದು ಭಾವಿಸುವ ತಂದೆಯ ಅಸಹಾಯಕತೆ ಅವನನ್ನು ಅಲುಗಾಡಿಸಿದವು. ಈ ಪ್ರಯಾಣದ ಕೊನೆಯಲ್ಲಿ ಅವನಿಗೆ ಅಲ್ಲಿನ ಎಲ್ಲ ಸಮಸ್ಯೆಗಳಿಗೆ ಉತ್ತರ ಅಖಂಡ ಲ್ಯಾಟಿನ್ ಅಮೆರಿಕಾ, ಶ್ರಮಿಕರ ಅಂತರರಾಷ್ಟ್ರೀಯತೆ ಹಾಗೂ ವಿಶ್ವಕ್ರಾಂತಿಯಲ್ಲಿದೆ ಎಂದು ಮನದಟ್ಟಾಯಿತು. ಗಡಿಯಿಲ್ಲದ ಏಕೀಕೃತ ಹಿಸ್ಪ್ಯಾನಿಕ್ ಅಮೆರಿಕವನ್ನು ಕಲ್ಪಿಸಿಕೊಂಡು ಇದನ್ನೇ ಮುಂದೆಯೂ ಪ್ರತಿಪಾದಿಸುತ್ತ ಬಂದ.

ಈ ಟಿಪ್ಪಣಿಗಳು ರಸ್ತೆ ಮೇಲಿರುವ ಸೂಕ್ಷ್ಮ ಮನಸು ಸುತ್ತಮುತ್ತಲನ್ನು ಹೇಗೆ ಗ್ರಹಿಸಬಹುದು ಹಾಗೂ ದೇಶ ತಿರುಗಿದ ಅನುಭವ ಒಬ್ಬ ಹೋರಾಟಗಾರನನ್ನು ಹೇಗೆ ರೂಪಿಸಬಹುದು ಎಂಬ ಸುಳಿವು ನೀಡುತ್ತವೆ. ಜೊತೆಗೆ ಮುಂದಿನ ಊಟ ಎಲ್ಲಿ, ಡ್ರಿಂಕ್ಸ್ ಎಲ್ಲಿ ಸಿಕ್ಕೀತು ಎಂಬ ಯೋಚನೆಗಳೇ ಪ್ರಧಾನವಾಗಿದ್ದ ಹುಡುಗಾಟಿಕೆಯ ಮನಸ್ಸು ಒಂಭತ್ತು ತಿಂಗಳ ತಿರುಗಾಟದ ಕೊನೆಗೆ ಅಖಂಡ ಲ್ಯಾಟಿನ್ ಅಮೆರಿಕಕ್ಕಾಗಿ ತನ್ನ ಹುಟ್ಟುಹಬ್ಬದ ಕೇಕನ್ನು ಹಂಚಿಕೊಳ್ಳುವಷ್ಟು ಬದಲಾಗಿದ್ದು ಹೇಗೆ ಎಂದೂ ತಿಳಿಸುತ್ತವೆ.

ಮೆಟಮಾರ್ಫಸಿಸ್

ಚೆಗೆವಾರ ಸಶಸ್ತ್ರ ಹೋರಾಟ ಪ್ರತಿಪಾದಿಸಿದವ. ಕ್ರಾಂತಿಗೆ ಇನ್ನೊಂದು ಹೆಸರು. ಸಮಾನತೆಗೆ ತುಡಿವ ಹೋರಾಟಗಾರರ ಗುರು. ಆದರೆ ಬಂದೂಕುಧಾರಿಯಾಗಿದ್ದರೂ ಅವನು ರಕ್ತ ಪಿಪಾಸುವಲ್ಲ. ಅವನ ಭಾವತೀವ್ರತೆ ಅವನನ್ನು ತೀವ್ರಗಾಮಿಯನ್ನಾಗಿ ಮಾಡಿತು. ದುಡುಕುತನ ಧೈರ್ಯವಾಗಿ ಕ್ರಾಂತಿಕಾರಿ ಗುಣ ರೂಪುಗೊಂಡಿತು. ಅವನಿದ್ದ ಕಾಲಮಾನ, ಅಲೆದಾಟ, ದೊರೆತ ಸಂಪರ್ಕಗಳು ಅಖಂಡ ಲ್ಯಾಟಿನ್ ಅಮೆರಿಕಕ್ಕಾಗಿ ಕನಸುವಂತೆ ಮಾಡಿದವು. ಅದನ್ನು ಸಾಕಾರಗೊಳಿಸಲೋ ಎಂಬಂತೆ ಗಡಿ ಮರೆತು ದೇಶ ಸುತ್ತಿದ. ಆದರೆ ತನ್ನನ್ನು, ತನ್ನ ಕನಸುಗಳನ್ನು ಲೋಕ ಅರ್ಥಮಾಡಿಕೊಳ್ಳುತ್ತಿಲ್ಲ ಎನಿಸಿದಾಗ; ಅದರ ಸಾಕಾರಕ್ಕೆ ಸಶಸ್ತ್ರ ಮಾರ್ಗವಲ್ಲದೆ ಬೇರೆ ದಾರಿಯಿಲ್ಲ ಎನಿಸಿದಾಗ ಇಂಜೆಕ್ಷನ್ ಕೊಡುವ ಕೈ ಬಂದೂಕು ಹಿಡಿಯಿತು.

ಇಲ್ಲಿ ಒಂದು ಕುತೂಹಲಕರ ವಿಷಯ ಗಮನಿಸಬೇಕು: ಗಾಂಧಿ-ಅಂಬೇಡ್ಕರರಂಥ, ಮಂಡೇಲಾ-ಟುಟು-ಮಾರ್ಟಿನ್ ಲೂಥರ್ ಕಿಂಗ್ ಅವರಂಥ, ಸೂಕಿ-ವಂಗಾರಿ ಮಥಾಯಿಯಂತಹ ಅಹಿಂಸಾತ್ಮಕ ಹೋರಾಟಗಾರರನ್ನು ದಕ್ಷಿಣ ಅಮೆರಿಕಾ ಸೃಷ್ಟಿಸಲಿಲ್ಲ ಏಕೆ?

ಈ ಪ್ರಶ್ನೆಗೆ ಉತ್ತರ ಪಡೆಯಲು ಅಂದಿನ ದಕ್ಷಿಣ ಅಮೆರಿಕಾದ ಸಾಮಾಜಿಕ/ಆರ್ಥಿಕ ಪರಿಸ್ಥಿತಿ ಮತ್ತು ಎದುರಾಳಿಯ ಮನಸ್ಥಿತಿ ತಿಳಿಯಬೇಕು. ಆಗ ವೈದ್ಯನೊಬ್ಬ ಮಾಕ್ರ್ಸಿಸ್ಟ್ ಹ್ಯೂಮನಿಸ್ಟ್ ಹೋರಾಟಗಾರನಾಗುವಂತೆ; ಫಿಡೆಲ್ ಕ್ಯಾಸ್ಟ್ರೋನಂಥ ಮುತ್ಸದ್ದಿ-ಅಹಿಂಸಾವಾದಿ ಕೊನೆಗೆ ಕಮ್ಯುನಿಸ್ಟ್ ರಾಜಕಾರಣಿಯಾಗುವಂತೆ ಮಾಡಿದ್ದು ಯಾವುದೆಂದು ಅರ್ಥವಾಗುತ್ತದೆ.

ಕೊಲಂಬಸ್ ಅಮೆರಿಕಾ ಖಂಡವನ್ನು ಅನ್ವೇಷಿಸಿದ ಮೇಲೆ ಉತ್ತರ ಅಮೆರಿಕಾ ಬ್ರಿಟಿಷ್ ವಸಾಹತುಶಾಹಿಗಳಿಂದ, ಅವರ ಗುಲಾಮರಿಂದ ತುಂಬಿಹೋದರೆ; ಜನವಸತಿಯಿದ್ದ ಸಂಪದ್ಭರಿತ ದಕ್ಷಿಣ ಅಮೆರಿಕಾವನ್ನು ಯೂರೋಪಿನ ವಸಾಹತುಶಾಹಿ ದೇಶಗಳು ಪಾಲು ಮಾಡಿಕೊಂಡವು. ಪೂರ್ವದಲ್ಲಿ ಪೋರ್ಚುಗಲ್, ಪಶ್ಚಿಮದಲ್ಲಿ ಸ್ಪೇನ್, ಮೇಲ್ಭಾಗದಲ್ಲಿ ಫ್ರೆಂಚ್ ಕಾಲನಿಗಳಾಗಿ ನೆಲವನ್ನು ಹಂಚಿಕೊಳ್ಳಲಾಯಿತು. ಅಲ್ಲಿನ ಮೂಲ ನಿವಾಸಿಗಳಾದ ಅಜಟೆಕ್ ಮತ್ತು ಇಂಕಾಗಳು ನೇಪಥ್ಯಕ್ಕೆ ಸರಿದರು. ಆ ಹೊತ್ತಿಗೆ ವಸಾಹತುಶಾಹಿ ಬ್ರಿಟಿಷ್ ರಾಜಸತ್ತೆಯಿಂದ ಉತ್ತರ ಅಮೆರಿಕಾ ಬೇರೆಯಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನವಾಗಿ, ಹೊಸ ಮಹತ್ವಾಕಾಂಕ್ಷಿ ದೇಶವಾಗಿ ಉದಯವಾಗಿತ್ತು. ಯೂರೋಪಿನ ವಸಾಹತುಶಾಹಿಗಳಿಂದ ಆಕ್ರಮಣಕ್ಕೆ ಒಳಗಾಗಿದ್ದ ದಕ್ಷಿಣ ಅಮೆರಿಕದ ಮೇಲೆ ಉತ್ತರ ಅಮೆರಿಕದ ಬಂಡವಾಳಗಾರರ ಕಣ್ಣುಬಿತ್ತು. ಅಲ್ಲಿನ ಅತ್ಯಮೂಲ್ಯ ಖನಿಜ ಸಂಪತ್ತು, ಫಲವತ್ತಾದ ನೆಲ ಬಂಡವಾಳಗಾರರನ್ನು ಇನ್ನಿಲ್ಲದಂತೆ ಆಕರ್ಷಿಸಿದವು. ಬಹುರಾಷ್ಟ್ರೀಯ ವ್ಯಾಪಾರೀ-ಗಣಿ-ಕೈಗಾರಿಕಾ ಕಂಪನಿಗಳು ಆ ನೆಲವನ್ನು ಹಾಗೂ ಜನರನ್ನು ಕಂಡುಕೇಳರಿಯದ ಶೋಷಣೆಗೆ ದೂಡಿದವು. ಅಮೆರಿಕಾ ಸಂಯುಕ್ತ ಸಂಸ್ಥಾನವು ಲ್ಯಾಟಿನ್ ಅಮೆರಿಕಾದ ನೆಲ-ಜಲ-ಜನರನ್ನು ತನ್ನ ಕಚ್ಛಾವಸ್ತುಗಳಂತೆ, ಗ್ರಾಹಕರಂತೆ, ಉತ್ಪಾದಿಸುವ ಕೆಲಸಗಾರರಂತೆ ನೋಡಿತು. ಯೂರೋಪಿನ ವಸಾಹತುಶಾಹಿಗಳ ಪ್ರಾಬಲ್ಯ ಕಡಿಮೆಯಾಗಿ ಸ್ವತಂತ್ರ ದೇಶಗಳು ಉದಯವಾದಾಗ ಅಮೆರಿಕದ ವಾಣಿಜ್ಯ ಹಿತಾಸಕ್ತಿ ಅದೆಲ್ಲದರಲ್ಲೂ ಕೈಯಾಡಿಸುತ್ತ ಹೋಯಿತು.

ನಿರುದ್ಯೋಗ, ಬಡತನ, ಹಸಿವು, ಕಾಯಿಲೆ, ದಬ್ಬಾಳಿಕೆಗಳು ಮನುಷ್ಯನನ್ನು ದಂಗೆಯೇಳಲು ಪ್ರೇರೇಪಿಸುತ್ತವೆ. ಆ ಕಾಲಮಾನದ ಲ್ಯಾಟಿನ್ ಅಮೆರಿಕಾ ದೇಶಗಳಲ್ಲಿ ಒಂದೆಡೆ ಗಣಿ ಕೆಲಸಗಾರರ ದುಸ್ಥಿತಿ, ಕಡಿಮೆ ವೇತನ, ಬಡತನ, ಹಸಿವು, ನಿರುದ್ಯೋಗವಿದ್ದರೆ ಇನ್ನೊಂದೆಡೆ ರೈತರನ್ನು ಯುಫ್ಕೋ ಸುಲಿಯಿತು. ಇವೆಲ್ಲವೂ ನವವಸಾಹತುಶಾಹಿಗಳ ವಿರುದ್ಧ ಸಂಘಟನೆ, ಹೋರಾಟ ಶುರುವಾಗಲು ಕಾರಣವಾಯಿತು. ಕಮ್ಯುನಿಸಂ ಎಂದು ಕರೆಯದೇ ವರ್ಗ ಹೋರಾಟ ಶುರುವಾಯಿತು.

ಕೆಲವೆಡೆ ಚುನಾಯಿತ ಸರ್ಕಾರಗಳೂ ಅಸ್ತಿತ್ವಕ್ಕೆ ಬಂದವು. ಅವು ಭೂ ಸುಧಾರಣೆಯನ್ನು ಮೊದಲ ಆದ್ಯತೆಯನ್ನಾಗಿ ತೆಗೆದುಕೊಂಡು ಜನರಿಗೆ ಭೂಮಿ ಹಂಚುವುದನ್ನು ಮುಖ್ಯ ಕಾರ್ಯಕ್ರಮವಾಗಿ ಮಾಡಿಕೊಂಡವು. ಗಣಿ, ಬ್ಯಾಂಕು, ಕೈಗಾರಿಕೆಗಳ ರಾಷ್ಟ್ರೀಕರಣ ಮಾಡಿದವು. ಇಂಥ ಸಮಾಜ ಕಲ್ಯಾಣ ಕಾರ್ಯಕ್ರಮಗಳು ಮೊದಲು ಪೆಟ್ಟು ಕೊಟ್ಟಿದ್ದು ಬಾಳೆಹಣ್ಣು ಕಂಪನಿ ಮತ್ತು ಅದರಂಥ ವ್ಯಾಪಾರಿ ಮಾಲೀಕರಿಗೆ. ಆ ಬಂಡವಾಳಗಾರ ಹಿತಾಸಕ್ತಿಗಳು ಸುಮ್ಮನೆ ಕೂರಲಿಲ್ಲ. ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ವರ್ತಿಸುವವರೇ ಅಧಿಕಾರದ ಮುಖ್ಯಸ್ಥಾನಗಳಲ್ಲಿರುವಂತೆ ನೋಡಿಕೊಂಡವು. ಸರ್ಕಾರಗಳನ್ನು ಉರುಳಿಸಿದವು. ಕೈಗೊಂಬೆಗಳನ್ನು ಕೂರಿಸಿದವು. ಜನಪರ ನಾಯಕರನ್ನು ಅಪಘಾತಗಳಲ್ಲಿ ಕೊಂದವು. ಕ್ಯೂಬಾ, ಗ್ವಾಟೆಮಾಲಾ, ಬೊಲಿವಿಯಾ ದೇಶಗಳ ಹೋರಾಟಕ್ಕೆ ಇದೇ ಪರಿಸ್ಥಿತಿ ಕಾರಣವಾಯಿತು.

ಕಟ್ಟಿದ ಮುಷ್ಟಿ, ಕೊನೆಯುಸಿರಿರುವವರೆಗೆ..

ಎರಡು ವಿದ್ಯಾರ್ಥಿ ಜೀವನದ ಪ್ರವಾಸದ ನಂತರ ವೈದ್ಯಕೀಯ ಡಿಗ್ರಿ ಪಡೆದ ಚೆ ಆ ಹೊತ್ತಿಗಾಗಲೇ ರಾಜಕೀಯ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಸ್ಪಷ್ಟ ನಿಲುವು ಹೊಂದಿದ್ದ. ತಿರುಗಾಟದಲ್ಲಿ ಏರ್ಪಟ್ಟ ಸಂಪರ್ಕಗಳಿಂದ ಸಂಘರ್ಷದ ಪಾಲುದಾರನಾದ.

1953ರಲ್ಲಿ ಗ್ವಾಟೆಮಾಲಾದಲ್ಲಿದ್ದಾಗ ಚಿಕ್ಕಮ್ಮನಿಗೆ ಬರೆದ ಪತ್ರದಲ್ಲಿ ತಾನು ಯುನೈಟೆಡ್ ಫ್ರುಟ್ ಕಂಪನಿಯ ಬಾಳೆಹಣ್ಣಿನ ಸಾಮ್ರಾಜ್ಯದಲ್ಲಿ ಪ್ರಯಾಣ ಮಾಡುತ್ತಿರುವುದಾಗಿ, ಅಲ್ಲಿ `ಕ್ಯಾಪಿಟಲಿಸ್ಟ್ ಆಕ್ಟೋಪಸ್’ಗಳು ನೆಲವನ್ನು, ರೈತರನ್ನು ಹಿಡಿದಿಟ್ಟುಕೊಂಡಿವೆ ಎಂದು ವರ್ಣಿಸಿದ್ದ. ಅವನು ಅಲ್ಲಿದ್ದಾಗಲೇ ಚುನಾಯಿತ ಸರ್ಕಾರದ ಪ್ರತಿನಿಧಿಯಾಗಿ ಭೂಸುಧಾರಣೆ ತರಲು ಯತ್ನಿಸುತ್ತಿದ್ದ ಜೇಕಬೊ ಆರ್ಬೆಂಜ್ ಸರ್ಕಾರವನ್ನು ಅಮೆರಿಕದ ಸಿಐಎ ಬೆಂಬಲಿತ ಕಾರ್ಲೋಸ್ ಕ್ಯಾಸ್ಟಿಲೊ ಕ್ಷಿಪ್ರಕ್ರಾಂತಿ ನಡೆಸಿ ಉರುಳಿಸಿದ. ಯುನೈಟೆಡ್ ಫ್ರುಟ್ ಕಂಪನಿಯ 2.25 ಲಕ್ಷ ಎಕರೆಯನ್ನು ಭೂ ಸುಧಾರಣೆಗಾಗಿ ಅದಾಗಲೇ ಆರ್ಬೆಂಜ್ ಸರ್ಕಾರ ವಹಿಸಿಕೊಂಡಿತ್ತು. ಅದರಿಂದ ಕಂಗಾಲಾದ ಕಂಪನಿ ತನ್ನ ವ್ಯಾಪಾರೀ ಹಿತಾಸಕ್ತಿ ಕಾಯುವ ಸರ್ಕಾರವನ್ನು ಸ್ಥಾಪಿಸಲು ಸಿಐಎ ಜೊತೆ ಸೇರಿ ಸಂಚು ನಡೆಸಿತು. ಆ ಸಂಚಿನ ವಿರುದ್ಧ ಅಲ್ಲಿ ದಂಗೆಯೇಳಲು ಸೂಕ್ತ ವಾತಾವರಣವಿತ್ತು. ಆಗ ಆರ್ಬೆಂಜೊ ಬೆಂಬಲಿಗರನ್ನು ಚೆ ಸೇರಿದ. ಮುಂದೆ ಅವ ಮದುವೆಯಾದ ಹಿಲ್ಡಾ ಗಾಡಿಯಾ ಪರಿಚಯವಾದದ್ದು ಅಲ್ಲೇ. ಕ್ಷಿಪ್ರಕ್ರಾಂತಿ ಕೂಡಲೇ ನಡೆಯಬೇಕೆಂಬುದು ಚೆ ಅಭಿಪ್ರಾಯವಾಗಿದ್ದರೂ ಉಳಿದವರು ಅವನಷ್ಟು ವೇಗವಾಗಿ ಯೋಚಿಸಲು ವಿಫಲರಾದರು. ಜೀವಕ್ಕೆ ಕುತ್ತು ಬರುವ ಸಾಧ್ಯತೆ ಎದುರಾಗಿ ಚೆ ಗ್ವಾಟೆಮಾಲಾ ತೊರೆದು ಮೆಕ್ಸಿಕೋಗೆ ಹೋದ.

ಅಮೆರಿಕ ಕುರಿತ ಅವನ ಅಭಿಪ್ರಾಯ ಗ್ವಾಟೆಮಾಲಾದಲ್ಲಿ ಗಟ್ಟಿಯಾಯಿತು. ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಸರಿಪಡಿಸಲು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಎಲ್ಲ ಸರ್ಕಾರಗಳನ್ನೂ ಅದು ಬುಡಮೇಲು ಮಾಡುತ್ತದೆ ಎಂದು ತಿಳಿಯಿತು. `ಅಮೆರಿಕಕ್ಕೆ ಭೂ ಸುಧಾರಣೆ ಮಾತು ಬೇಡ, ಅವರು ಕುಡಿಯುವ ನೀರಿನ ಸಮಸ್ಯೆ ಕುರಿತು ಬೇಕಾದಷ್ಟು ಮಾತಾಡುತ್ತಾರೆ. ಬಹುಶಃ ಶೌಚ ಕ್ರಾಂತಿಗೆ ಜಗತ್ತನ್ನು ಸಿದ್ಧಮಾಡುತ್ತಿದ್ದಾರೆ’ ಎಂದು ಛೇಡಿಸಿದ. ಸಶಸ್ತ್ರ ಹೋರಾಟ, ಸಶಸ್ತ್ರ ಜನಸಮುದಾಯ ಮಾತ್ರ ನವವಸಾಹತುಶಾಹಿಗಳ ಹಗಲು ದರೋಡೆಯನ್ನು ತಡೆಗಟ್ಟಬಲ್ಲದು ಎಂಬ ಭಾವನೆ ಧೃಢವಾಯಿತು.

1955ರಲ್ಲಿ ಮೆಕ್ಸಿಕೋನಲ್ಲಿ ಕ್ಯೂಬಾದ ದೇಶಭ್ರಷ್ಟ ಕ್ರಾಂತಿಕಾರಿಗಳ ಪರಿಚಯವಾಯಿತು. ಫಿಡೆಲ್ ಕ್ಯಾಸ್ಟ್ರೋ ಮತ್ತು ಸಂಗಡಿಗರು ಸರ್ವಾಧಿಕಾರಿ ಬ್ಯಾಟಿಸ್ಟಾನ ಸರ್ಕಾರ ಕಿತ್ತೊಗೆಯಲು ಜನ ಹೋರಾಟ ಸಂಘಟಿಸತೊಡಗಿದ್ದರು. ಅವರ ಯೋಜನೆಯನ್ನು ಸಂಪೂರ್ಣ ಬೆಂಬಲಿಸಿದ ಚೆ ಕ್ಯೂಬಾ ಕ್ರಾಂತಿಯಲ್ಲಿ ಪಾಲ್ಗೊಳ್ಳಲು ತಕ್ಷಣ ನಿರ್ಧರಿಸಿದ. ಗೆರಿಲ್ಲಾ ತರಬೇತಿ ಪಡೆದ. ಹೊಸಬರನ್ನು ನೇಮಿಸಿಕೊಳ್ಳಲು ನೆರವಾಗಿ ಅವರಿಗೆ ತರಬೇತಿ, ತಿಳುವಳಿಕೆ ಕೊಟ್ಟ. ಶಸ್ತ್ರಾಸ್ತ್ರ ಫ್ಯಾಕ್ಟರಿಯನ್ನು ಶುರುಮಾಡುವಲ್ಲಿ ಅವನ ಪಾತ್ರ ಹಿರಿದು. ಅವರಿಗೆಲ್ಲ ವೈದ್ಯಕೀಯ ನೆರವನ್ನು ಕಲ್ಪಿಸುತ್ತಲೇ ಕ್ಷಿಪ್ರದಾಳಿ ನಡೆಸುವ ತುಕಡಿಯ ಕಮ್ಯಾಂಡರ್ ಆದ. ಆ ತಂಡದಲ್ಲಿ ವೈದ್ಯನಾಗಿ ಹೋಗಿದ್ದ ಚೆ ಮೊದಲ ಯತ್ನ ಸೋಲಿನಲ್ಲಿ ಕೊನೆಗೊಳ್ಳುವುದನ್ನು ನೋಡಬೇಕಾಯಿತು.

1959ರಲ್ಲಿ ತುಂಬ ಯೋಜಿತವಾಗಿ ನಡೆಸಿದ ಎರಡನೆಯ ಹೋರಾಟದಲ್ಲಿ ಕ್ಯಾಸ್ಟ್ರೋ ಬೆಂಬಲಿಗರಿಗೆ ಗೆಲುವಾಯಿತು. ಕ್ರಾಂತಿಕಾರಿಗಳ ನಾಯಕ ಕ್ಯಾಸ್ಟ್ರೋ ದೇಶದ ಅಧ್ಯಕ್ಷನಾದ. ಆಗ ಚೆಗೆ ಕ್ಯೂಬಾ ಪೌರತ್ವ ನೀಡಿ ಹಲವು ಜವಾಬ್ದಾರಿಗಳನ್ನು ವಹಿಸಲಾಯಿತು. ಕ್ಯೂಬಾ ಸರ್ಕಾರದ ಪ್ರತಿನಿಧಿಯಾಗಿ ಹಲವು ದೇಶಗಳಿಗೆ ಭೇಟಿಕೊಟ್ಟ. ಅಮೆರಿಕವನ್ನು ವಿರೋಧಿಸುತ್ತಿದ್ದ ಚೆ ಸೋವಿಯತ್ ಯೂನಿಯನ್ ಜೊತೆ ಕ್ಯೂಬಾ ಉತ್ತಮ ಸಂಬಂಧ ಹೊಂದಲಿ ಎಂದು ಆಶಿಸಿದ. ಅಮೆರಿಕ ಆರ್ಥಿಕ ದಿಗ್ಭಂಧನ ಹೇರಿದ್ದರಿಂದ ಈ ಕ್ರಮ ಅನಿವಾರ್ಯವಾಗಿತ್ತು. ಹಲವು ದೇಶಗಳ ಜೊತೆ ವ್ಯಾಪಾರ ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕಿದ. ಕ್ಯೂಬಾ ನ್ಯಾಷನಲ್ ಬ್ಯಾಂಕಿನ ಅಧ್ಯಕ್ಷನಾದ, ಕೈಗಾರಿಕಾ ಮಂತ್ರಿಯಾದ, ಕೃಷಿ ಸುಧಾರಣಾ ಸಮಿತಿಯ ಅಧ್ಯಕ್ಷನಾದ. ಭುಸುಧಾರಣೆಯತ್ತ ವಿಶೇಷ ಗಮನ ಕೊಟ್ಟ. ಅದಕ್ಕಾಗಿ ಒಂದು ಲಕ್ಷ ಕಾರ್ಯಕರ್ತರನ್ನು ನೇಮಿಸಿಕೊಳ್ಳಲಾಯಿತು. ಹೆಚ್ಚುವರಿ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಹಂಚಲಾಯಿತು. ಅಮೆರಿಕ ಕಂಪನಿಗಳ ವಶದಲ್ಲಿದ್ದ 4.8 ಲಕ್ಷ ಎಕರೆ ವಶಪಡಿಸಿಕೊಳ್ಳಲಾಯಿತು. ಜೊತೆಗೆ ಕೈಗಾರಿಕೆ, ಬ್ಯಾಂಕ್ ಹಾಗೂ ವ್ಯಾಪಾರ ವಹಿವಾಟು ರಾಷ್ಟ್ರೀಕರಣಗೊಂಡಿತು. ಉನ್ನತ ಶಿಕ್ಷಣದಲ್ಲಿ ಎಲ್ಲ ಸಮುದಾಯಗಳಿಗೂ ಸೂಕ್ತ ಪ್ರಾತಿನಿಧ್ಯ ಇರುವಂತೆ ನೋಡಿಕೊಳ್ಳಬೇಕೆಂದು ವಿಶ್ವವಿದ್ಯಾಲಯಗಳಿಗೆ ಸೂಚಿಸಲಾಯ್ತು. ಶಿಕ್ಷಣದ ಕಡೆ ಗಮನ ಕೊಟ್ಟು 1961ನ್ನು `ಶಿಕ್ಷಣ ವರ್ಷ’ ಎಂದು ಘೋಷಿಸಲಾಯ್ತು. ಹೀಗೆ ಹಲವು ಹುದ್ದೆ, ಅಧಿಕಾರ ವಹಿಸಿಕೊಂಡ ಚೆ ದಣಿವರಿಯದೆ ಕೆಲಸ ಮಾಡಿದ.

1964ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಚೆ ಅಮೆರಿಕವನ್ನು ತರಾಟೆಗೆ ತೆಗೆದುಕೊಂಡ. `ಚರ್ಮದ ಬಣ್ಣದ ಕಾರಣವಾಗಿ ತಮ್ಮದೇ ಮಕ್ಕಳಿಗೆ ತಾರತಮ್ಯ ತೋರಿಸಿ ಕೊಲ್ಲುವವರು; ಕರಿಯರ ಕೊಲೆಗಾರರನ್ನು ಶಿಕ್ಷಿಸದೆ ರಕ್ಷಿಸುವವರು; ಸ್ವತಂತ್ರ ಮನುಷ್ಯರಾಗಲು ನ್ಯಾಯಯುತ ಹಕ್ಕು ಪ್ರತಿಪಾದಿಸುವ ಕರಿಯರನ್ನು ದಮನಿಸುವವರು ಬೇರೆ ದೇಶಗಳ ಸ್ವಾತಂತ್ರ್ಯ ರಕ್ಷಕರೆಂದು ಹೇಗೆ ಹೇಳಿಕೊಳ್ಳುತ್ತಾರೆ?’ ಎಂದು ಪ್ರಶ್ನಿಸಿದ. ವರ್ಣಭೇಧವನ್ನು ತೀವ್ರವಾಗಿ ಖಂಡಿಸಿ ಅದನ್ನು ಕೊನೆಗೊಳಿಸುವ ಸಲುವಾಗಿ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಲೇಬೇಕು ಎಂದು ಹೇಳಿದ.

ತೀಕ್ಷ್ಣವಾದ ಹಾಗೂ ಸ್ಪಷ್ಟವಾದ ಮಾತುಗಳಲ್ಲಿ ಸೂಕ್ತ ವಾದ ಮಂಡಿಸುತ್ತಿದ್ದ ಕಾರಣ ಚೆ ತೃತೀಯ ಜಗತ್ತಿನ ರಾಷ್ಟ್ರಗಳ ಪ್ರತಿನಿಧಿಯಂತೆ ಮಾತನಾಡತೊಡಗಿದ. ಜೊತೆಗೆ ಕ್ರಾಂತಿ ಎಲ್ಲೆಲ್ಲೂ ಸಂಭವಿಸಬೇಕು, ಹಲವು ವಿಯೆಟ್ನಾಂಗಳು ಹುಟ್ಟಬೇಕು ಎನ್ನತೊಡಗಿದ. ಸಮಾನತೆಯ ಮಾತು ಕೇಳಿದೊಡನೆ ಬಂಡವಾಳಶಾಹಿಗಳಿಗೆ ಎದೆ ನಡುಕ ಹುಟ್ಟುತ್ತದೆ. ಎಂದೇ ಚೆಯ ಪ್ರಾಣ ತೆಗೆವ ಹಲವು ಪ್ರಯತ್ನಗಳು ನಡೆದವು.

ಬರಬರುತ್ತ ಅವನಿಗೆ ಸೋವಿಯತ್ ಯೂನಿಯನ್‍ನಲ್ಲಿ ಮಾಕ್ರ್ಸ್ ಇಲ್ಲ, ಕಮ್ಯುನಿಸಮ್ಮೂ ಇಲ್ಲ ಎನಿಸತೊಡಗಿತು. ಆಲ್ಜೀರಿಯಾದ ಒಂದು ಸಮ್ಮೇಳನದಲ್ಲಿ ಬಹಿರಂಗವಾಗಿಯೇ ಅಮೆರಿಕ ಮತ್ತು ಸೋವಿಯತ್ ಯೂನಿಯನ್ ಎರಡನ್ನೂ ಒಂದೇ ಉಸಿರಿನಲ್ಲಿ ಖಂಡಿಸಿದ. ಉತ್ತರ ಗೋಳದ ಪೂರ್ವ-ಪಶ್ಚಿಮದಲ್ಲಿರುವ ಈ ಎರಡು ದೇಶಗಳು ದಕ್ಷಿಣ ಗೋಳಾರ್ಧವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿವೆಯೆಂದು ದೂರಿದ. ಈ ವಿಮರ್ಶೆ ಕ್ಯೂಬಾಕ್ಕೆ ಬಿಸಿ ತುಪ್ಪವಾಯಿತು. ಆಗ ಸೋವಿಯತ್ ಮತ್ತು ಚೀನಾ ಸಂಬಂಧಗಳು ಬಿಗುವಾಗಿದ್ದವು. ಈ ಸಮ್ಮೇಳನದ ಮಾತುಗಳೇ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಅವನ ಕೊನೆಯ ಭಾಷಣ. ನಂತರ ಅವನು ಕ್ಯೂಬಾದಲ್ಲಿ ಕಾಣಿಸಿಕೊಳ್ಳಲಿಲ್ಲ. ಆತನ ಇರುವಿಕೆ ಬಗ್ಗೆ ಪ್ರಶ್ನೆಗಳೆದ್ದವು. ಕೊನೆಗೊಂದು ದಿನ ಕ್ಯಾಸ್ಟ್ರೋ ಚೆಯ ವಿದಾಯ ಪತ್ರ ಓದಿದ. ಚೆ ಕ್ಯೂಬಾದಲ್ಲಿ ತಾನು ವಹಿಸಿಕೊಂಡಿದ್ದ ಎಲ್ಲ ಜವಾಬ್ದಾರಿಯನ್ನೂ ತ್ಯಜಿಸಿ ಪೌರತ್ವವನ್ನೂ ಬಿಟ್ಟುಕೊಟ್ಟಿದ್ದ. ತಾನು ಕ್ರಾಂತಿಯನ್ನು ಹರಡಲು ಇತರ ದೇಶಗಳಲ್ಲೂ ಕೆಲಸ ಮಾಡುವೆನೆಂದು ತಿಳಿಸಿ ಕಾಂಗೋಗೆ ಕ್ರಾಂತಿಕಾರಿಗಳಿಗೆ ತರಬೇತಿ ನೀಡಲು ಹೋದ. ಆದರೆ ಅಲ್ಲಿ ಅವನ ಪ್ರಯತ್ನ ವಿಫಲವಾಯಿತು. ನಂತರ ಗುಟ್ಟಾಗಿ ಕ್ಯೂಬಾಗೆ ಬಂದು ಬೊಲಿವಿಯಾಗೆ ಹೋದ. ಅಲ್ಲಿ ಕ್ರಾಂತಿಕಾರರನ್ನು ಸೇರಿಕೊಂಡಾಗ ಅವನ ಪಡೆ ಇಬ್ಭಾಗವಾಯಿತು. ಕೇವಲ 17 ಜನರೊಂದಿಗೆ ಉಳಿದ ಚೆಯನ್ನು ಅಕ್ಟೋಬರ್ 8, 1967ರಲ್ಲಿ ಸೆರೆ ಹಿಡಿಯಲಾಯ್ತು. ಮರುದಿನ ವಾಷಿಂಗ್ಟನ್ನಿನ ಮಾರ್ಗದರ್ಶನದಂತೆ ಹತ್ಯೆ ಮಾಡಲಾಯಿತು. ಬೆರಳಚ್ಚು ಪರೀಕ್ಷೆಗಾಗಿ ಅವನ ಕೈ ಕತ್ತರಿಸಿ ಅರ್ಜೆಂಟೀನಾಗೆ ಕಳಿಸಿ, ಉಳಿದ ದೇಹಗಳ ಜೊತೆ ಎಲ್ಲೆಂದು ತಿಳಿಸದೇ ಹೂಳಲಾಯಿತು.

1997ರಲ್ಲಿ ಗುರುತಿಸದ ಗೋರಿಯಲ್ಲಿ ಬೊಲಿವಿಯಾದಲ್ಲಿದ್ದ ಅವನ ದೇಹವನ್ನು ಹೊರತೆಗೆದು ಕ್ಯೂಬಾಕ್ಕೆ ತಂದು ಸಂತ ಕ್ಲಾರಾದಲ್ಲಿ ಸ್ಮಾರಕ, ಸಮಾಧಿ ನಿರ್ಮಿಸಲಾಯಿತು.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More