ನಪುಂಸಕನೊಬ್ಬ ದಕ್ಷಿಣದ ಪ್ರಾಂತ್ಯವೊಂದನ್ನು ಅಲ್ಲಾವುದ್ದೀನ್ ಖಿಲ್ಜಿಗೆ ಗೆದ್ದುಕೊಟ್ಟದ್ದು

ಮನು ಎಸ್ ಪಿಳ್ಳೈ ಅವರ ರೆಬಲ್ ಸುಲ್ತಾನ್ಸ್ ಕೃತಿಯು ಈಗಿನ ದಕ್ಷಿಣ ಭಾರತದಲ್ಲಿ ಹಿಂದೆ ಆಳಿದ್ದ ರಾಜರ ಮತ್ತು ಅವರ ರಾಜ್ಯಗಳ ಚರಿತ್ರೆಯ ಚಿತ್ರಣವನ್ನು ಆಕರ್ಷಕವಾಗಿ ಕಟ್ಟಿಕೊಡುತ್ತದೆ. ದೇವಗಿರಿಯ ಯಾದವರು ‘ಖಿಲ್ಜಿ ಭೂಕಂಪದಲ್ಲಿ’ ಮಣ್ಣುಮುಕ್ಕಿದ ಬಗೆಗಿನ ಪಠ್ಯದ ಆಯ್ದವನ್ನು ಇಲ್ಲಿ ಕೊಡಲಾಗಿದೆ

ಫೆರಿಷ್ತಾ [ಹದಿನಾರನೇ ಶತಮಾನದ ಅಂತ್ಯಭಾಗದಲ್ಲಿ ಹಾಗೂ ಹದಿನೇಳನೇ ಶತಮಾನದ ಆರಂಭದಲ್ಲಿ ಬಿಜಾಪುರದಲ್ಲಿ ಸುದೀರ್ಘ ಕಾಲ ವಾಸವಿದ್ದ ಪರ್ಶಿಯನ್ ಇತಿಹಾಸಕಾರ ಮೊಹಮ್ಮದ್ ಖಾಸಿಂ ಫಿರಿಷ್ತಾ] ಅವರು ವಿವರಿಸುವಂತೆ, ಆ ಸಮಯದಲ್ಲಿ ದಕ್ಷಿಣವು ಮೂರು ಜನಸಮುದಾಯಗಳಿಗೆ ನೆಲೆಯಾಗಿತ್ತು: 'ಮರಾಠರು, ಕನ್ಹಾರರು ಮತ್ತು ಟಿಲಿಂಗರು' (ಅವರ ಪ್ರಕಾರ ಈ ಮೂರೂ ಸಮುದಾಯಗಳು ಪೌರಾಣಿಕ ನೋಹ್ ಅವರ ವಂಶಸ್ಥರಾಗಿದ್ದು ಅನುಕೂಲಕರವಾಗಿ ದಖನ್ ಎಂದು ಕರೆಯಲಾಗುವ ಅವರ ಮೊಮ್ಮಗನ ಮೂಲಕ ಈ ನಾಲ್ಕು ಸಮುದಾಯಗಳು ಬೆಳೆದವು). ಮರಾಠಿ ಪ್ರದೇಶಕ್ಕೆ ಯಾದವರೇ ಒಡೆಯರಾಗಿದ್ದರೆ ವಾರಂಗಲ್ಲಿನ ಕಾಕತೀಯರು ತೆಲುಗು ಪ್ರದೇಶಗಳನ್ನು ಆಳುತ್ತಿದ್ದರು. ಕರ್ನಾಟಕ ದ್ವಾರಸಮುದ್ರವನ್ನು ರಾಜಧಾನಿಯನ್ನಾಗಿಸಿಕೊಂಡಿದ್ದ ಹೊಯ್ಸಳರ ನಿಯಂತ್ರಣದಲ್ಲಿತ್ತು. ಈ ಮೂರೂ ರಾಜಮನೆತನಗಳ ನಡುವೆ ಒಂದಲ್ಲಾ ಒಂದು ವಿಷಯದ ಮೇಲೆ ತಲೆತಲಾಂತರಗಳಿಂದ ಬದ್ಧ ವೈರತ್ವವಿತ್ತು.

ದೂರದಲ್ಲಿ ಟರ್ಕರು ಬಲಿಷ್ಠರಾಗಿ ಬೆಳೆಯುತ್ತಿರುವುದರ ಬಗ್ಗೆ ಯಾದವರಿಗೆ ಒಂದಿಷ್ಟು ತಿಳಿವಳಿಕೆ ಇತ್ತಾದರೂ ತಮ್ಮ ಮೇಲೆ ಉತ್ತರ ಭಾರತದ ದಾಳಿಕೋರರು ಆಕ್ರಮಣ ಮಾಡಬಹುದೆಂಬ ನಿರೀಕ್ಷೆ ಇವರ್ಯಾರಿಗೂ ಇರಲಿಲ್ಲ. ಬಲ್ಬನ್ ಹೇಳಿಕೊಂಡ ಹಾಗೆ [ದೇವಗಿರಿಯ] ರಾಮಚಂದ್ರ ಯಾದವನನ್ನು ಕಲ್ಪಿಸಿಕೊಂಡೇ ಇಡೀ ದಕ್ಷಿಣ ಗಡಗಡ ನಡುಗುತ್ತಿತ್ತು; ರಾಮಚಂದ್ರ ಯಾದವ ಕೂಡ 1278ರಲ್ಲಿ ತನ್ನನ್ನು ಪುರಾಣದ ಮಹಾಹಂದಿಗೆ ಹೋಲಿಸಿಕೊಂಡು ತಾನು ಟರ್ಕರ ದಮನಗಳಿಂದ ಭೂಮಿಯನ್ನು ರಕ್ಷಣೆ ಮಾಡುವುದಕ್ಕಾಗಿ ಜನ್ಮವೆತ್ತಿದವನು ಎಂದು ಆತ ಒಬ್ಬನೇ ಒಬ್ಬ ಟರ್ಕನನ್ನು ಎದುರುಗೊಳ್ಳುವ ದಶಕಗಳ ಮುಂಚೆಯೇ ಹೇಳಿಕೊಂಡಿದ್ದ. ಮುಂದೊಂದು ದಿನ ಅಂತಿಮವಾಗಿ ಆತನ ಸಶಸ್ತ್ರ ಪಡೆಗಳು ಅಲ್ಲಾವುದ್ಧೀನ್ ಖಿಲ್ಜಿಯ ಸೈನ್ಯಕ್ಕೆ ಮುಖಾಮುಖಿಯಾದಾಗ ಸುಪ್ರಸಿದ್ಧ ರಾಜಮಹಾರಾಜರನ್ನು ಕಂಡ ಯಾದವ ಸಾಮ್ರಾಜ್ಯ ತನಗೆ ಕಾದಿರುವ ವಿಪತ್ತನ್ನು ಕಂಡು ಹಾಗೂ ದಕ್ಷಿಣದ ಭವಿಷ್ಯದ ದಿಕ್ಕನ್ನೇ ಬದಲಿಸಲಿದ್ದ ಭೂಕಂಪಕಾರಿ ಬದಲಾವಣೆಗಳನ್ನು ಕಲ್ಪಿಸಿಕೊಂಡು ಆತಂಕಕ್ಕೀಡಾಯಿತು.

ಒಂದು ಕಡೆ ಮಾತ್ರ (ಸಿಂಹಿಣಿಗಳಂತೆ ಹೋರಾಡಿದ) ಇಬ್ಬರು ಹೆಸರಿಲ್ಲದ ಮರಾಠಾ ಮಹಿಳೆಯರ ನೆರವಿನೊಂದಿಗೆ ದಳವಾಯಿಯೊಬ್ಬ ನಿಶ್ಪ್ರಯೋಜಕವಾಗಿ ತಮ್ಮೆದುರು ಹೋರಾಡಿದ್ದನ್ನು ಬಿಟ್ಟರೆ 1296ರಲ್ಲಿ ದೇವಗಿರಿಯತ್ತ ಮುನ್ನುಗ್ಗುತ್ತಿದ್ದ ಅಲ್ಲಾವುದ್ದೀನ್ ಮತ್ತು ಆತನ 8000 ಅಶ್ವಸೈನ್ಯಕ್ಕೆ ವಾಸ್ತವದಲ್ಲಿ ಯಾವುದೇ ಪ್ರಮುಖ ಪ್ರತಿರೋಧ ಎದುರಾಗಲಿಲ್ಲ. ದೇವಗಿರಿಯಲ್ಲೂ ಕೂಡ, ಯಾದವ ರಾಜ ತನ್ನ ಗಣನೀಯ ಸೈನ್ಯವನ್ನು ತನ್ನ ಮಗನ ನೇತೃತ್ವದಲ್ಲಿ ಹೊಯ್ಸಳ ರಾಜ್ಯದ ಗಡಿಯಲ್ಲಿ ನಿಯೋಜಿಸಿದ್ದರಿಂದ ದೇವಗಿರಿಯ ಕೋಟೆಯ ಬಾಗಿಲುಗಳನ್ನು ಭದ್ರವಾಗಿ ಹಾಕಿಕೊಂಡು ಒಳಗೆ ಕಾಯುವುದಕ್ಕೆ ನಿರ್ಧರಿಸಿದ. ಈ ವ್ಯೂಹತಂತ್ರ ಬಹಳ ಆಶಾದಾಯಕವಾಗಿತ್ತು. ನಂತರದ ದಾಖಲೆಗಾರರು ಗುರುತಿಸಿದಂತೆ, ಇದು ದೇಶದ 'ಅತ್ಯುತ್ತಮ ಕೋಟೆಗಳಲ್ಲಿ ಒಂದಾಗಿದ್ದು' 'ಅದರೊಳಗೆ ಹೋಗುವುದಕ್ಕಿದ್ದ ಏಕೈಕ ಮಾರ್ಗ ಎಷ್ಟೊಂದು ಕಿರಿದಾಗಿತ್ತೆಂದರೆ ಏಕಕಾಲದಲ್ಲಿ ಒಂದು ಕುದುರೆ ಅಥವಾ ಒಂದು ಒಂಟೆ ಮಾತ್ರ ಅದರ ಮೂಲಕ ಹಾದುಹೋಗಬಹುದಿತ್ತು. ಉತ್ತರದ ಕಡೆಯಿಂದ ಆಕ್ರಮಣವಾಗುವ ಸಾಧ್ಯತೆಯನ್ನು ರಾಮಚಂದ್ರ ಯಾದವ ಹೆಚ್ಚೂಕಡಿಮೆ ನಿರೀಕ್ಷಿಸದೇ ಇದ್ದುದರಿಂದ ಕೋಟೆಯೊಳಗೆ ಅಗತ್ಯ ದಿನಸಿ ಸಾಮಾನುಗಳನ್ನು ಸಂಗ್ರಹಿಸಿಟ್ಟುಕೊಂಡಿರಲಿಲ್ಲ. ಪರಿಣಾಮವಾಗಿ, ಇದ್ದ ಬದ್ದ ದಿನಸಿಯೆಲ್ಲಾ ಖಾಲಿಯಾಗಿ ಹಸಿವಿನಿಂದ ಬಳಲಿ ಶಾಂತಿ ಬಯಸುವುದಕ್ಕೆ ರಾಮಚಂದ್ರ ಯಾದವನಿಗೆ ಒಂದೇ ವಾರವಷ್ಟೇ ಸಾಕಾಯಿತು.

ಅಷ್ಟರಲ್ಲಾಗಲೇ ರಾಜಧಾನಿಯನ್ನು ರಕ್ಷಿಸುವುದಕ್ಕೋಸ್ಕರ ಆತನ ಉತ್ತರಾಧಿಕಾರಿ ದೇವಗಿರಿಯತ್ತ ವೇಗವಾಗಿ ಧಾವಿಸಿ ಬಂದು ಆಕ್ರಮಣಕಾರರನ್ನು ಬಹುತೇಕ ಹಿಮ್ಮೆಟ್ಟಿಸಿಬಿಟ್ಟ: ಅದೇ ಹೊತ್ತಿನಲ್ಲಿ, ಟರ್ಕರ ಸೈನ್ಯಕ್ಕೆ ಹೆಚ್ಚುವರಿ 20,000 ಅಶ್ವಯೋಧರು ಬಂದು ಸೇರಿಕೊಳ್ಳುತ್ತಿದ್ದಾರೆಂಬ ಹುಸಿಸುದ್ದಿಯನ್ನು ಅಲ್ಲಾವುದ್ದೀನ್ ಹರಿಬಿಟ್ಟುಬಿಟ್ಟ. ಆತನ 1000 ಅಶ್ವಸೈನಿಕರು ಅನತಿ ದೂರದಲ್ಲಿ ಕೇಕೆ ಹಾಕುತ್ತಾ ಅದೆಂತಾ ಧೂಳೆಬ್ಬಿಸಿಕೊಂಡು ಬಂದರೆಂದರೆ ಅಲ್ಲಾವುದ್ದೀನ್ ಹರಿಬಿಟ್ಟ ಹಸಿ ಸುಳ್ಳುಸುದ್ದಿಯನ್ನು ಯಾದವರು ನಿಜವೆಂದೇ ಭಾವಿಸಿದರು. ಧೂಳು, ಕೇಕೆಗಳ ಹಿಂದಿನ ಮಸುಕಿನಲ್ಲಿದ್ದ ಈ ಅವಾಸ್ತವಿಕ ಸೈನ್ಯವೇ ದೇವಗಿರಿ ಸೋತು ಶರಣಾಗುವಂತೆ ಮಾಡಿತು. ತದನಂತರದಲ್ಲಿ ಅಲ್ಲಾವುದ್ದೀನನ ಎದುರೇ ದೇವಗಿರಿಯ ಕೋಟೆಯಿಂದ ಎಷ್ಟೊಂದು ದೊಡ್ಡ ಪ್ರಮಾಣದ ಸಂಪತ್ತನ್ನು ಕೊಳ್ಳೆ ಹೊಡೆಯಲಾಯಿತೆಂದರೆ ಆರು ದಶಕಗಳ ನಂತರವೂ ಸಾಮ್ರಾಜ್ಯದ ಖಜಾನೆಯಲ್ಲಿ ಕೊಳ್ಳೆ ಹೊಡೆದ ಈ ಸಂಪತ್ತು ಹಾಗೆಯೇ ಇದೆ ಎಂದು ನಂಬಲಾಗಿತ್ತು. ಕವಿ ಅಮೀರ್ ಖುಸ್ರೋ ಬರೆದಂತೆ, "ಸೂರೆಗೊಂಡ ಆಭರಣ ಮತ್ತು ಚಿನ್ನವನ್ನು ನೆನಪಿಸಿಕೊಂಡರೆ ಅದರ ಪ್ರಮಾಣವನ್ನು ಅಳೆಯುವುದಕ್ಕೆ, ತೂಗುವುದಕ್ಕೆ ಯಾವುದೂ ಸಾಕಾಗುವುದಿಲ್ಲ... ಒಂಟೆಗಳ ಮೇಲೆ, ಹೇಸರಗತ್ತೆಗಳ ಮೇಲೆ ಮಾಣ ಕ್ಯ, ವಜ್ರಗಳ ಗಂಟುಗಳನ್ನು ಹೇರಲಾಗಿತ್ತು... ತುಂಬ ಅನುಭವಿ ಆಭರಣಕಾರರಿಗೂ ಅವುಗಳ ಮೌಲ್ಯವನ್ನು ಅಂದಾಜು ಮಾಡುವುದಕ್ಕೆ ಆಗಲಿಲ್ಲ".

ಇದನ್ನೂ ಓದಿ : ಬಾಹುಬಲಿ ಮಹಾಮಸ್ತಕಾಭಿಷೇಕ ಇತಿಹಾಸ | ರಾಜರತ್ನಂ ಕಂಡಂತೆ ಮಹಾಮಜ್ಜನ

ಅಂತಹ ಸಂದಿದ್ಧ ಪರಿಸ್ಥಿತಿಯಲ್ಲಿ ಸಂಪ್ರದಾಯದಂತಿದ್ದ ಹಾಗೂ ದಕ್ಷಿಣದಲ್ಲೂ ವಾಡಿಕೆಯಲ್ಲಿದ್ದ ಆಚರಣೆಗಳ ಪ್ರಕಾರ ಅಲ್ಲಾವುದ್ದೀನನಿಗೆ ಯಾದವರ ರಾಜಕುಮಾರಿಯನ್ನು ಉಡುಗೊರೆಯಾಗಿ ನೀಡಲಾಯಿತು. ಈ ರಾಜಕುಮಾರಿಯೊಂದಿಗೇ ದಾಳಿಕೋರರ ತೃಪ್ತಿಯೂ ಅಂತ್ಯಗೊಳ್ಳುತ್ತಿರಲಿಲ್ಲ ಎಂಬುದೂ ಆ ಕಾಲದ ಸಂಪ್ರದಾಯಿಕತೆಯಾಗಿತ್ತು: 1316ರಲ್ಲಿ ಅಲ್ಲಾವುದ್ದೀನನ ಮಲಸಹೋದರ ದೆಹಲಿಯ ಕಿರೀಟಕ್ಕಾಗಿನ ತನ್ನ ಹೋರಾಟದ ಸಮಯದಲ್ಲಿ ಆಕೆಯ ಮಗನನ್ನು ಕುರುಡನನ್ನಾಗಿಸಿ ಆಕೆಯನ್ನೂ ಸಾವಿಗೆ ದೂಡಿದ. ಅಲ್ಲಾವುದ್ದೀನ್ ಗುಜರಾತಿನ ರಾಣ ಯನ್ನೂ ವಶಪಡಿಸಿಕೊಂಡ; ಅಲ್ಲದೇ ಅಲ್ಲಿ ಗುಲಾಮನಾಗಿದ್ದ ಹಜಾರ್ದಿನಾರಿ ("1000 ನಾಣ್ಯಗಳು", ಆತನ ಆರಂಭದ ಬೆಲೆಯ ಮೂಲಕ ಬಂದ ಹೆಸರು) ಎಂಬ ನಪುಂಸಕನನ್ನೂ ಆತ ಸ್ವಾದೀನಪಡಿಸಿಕೊಂಡ. ಚರಿತ್ರೆಯಲ್ಲಿ ಮಲಿಕ್ ಕಫೂರ್ ಎಂಬ ಹೆಸರಿನಲ್ಲಿ ಪ್ರಸಿದ್ಧನಾಗುವ ಹಣೆಬರಹ ಹೊಂದಿದ್ದ ಈತ ಅಲ್ಲಾವುದ್ದೀನನ ಅತ್ಯಂತ ಭಯಾನಕ ಸೇನಾಧಿಪತಿಗಳಲ್ಲೊಬ್ಬನಾಗಿದ್ದಲ್ಲದೇ ಆತನ ವಿವಾದಾತ್ಮಕ ಪ್ರೇಯಸಿ ಕೂಡ ಆಗಿದ್ದ. ಇಸ್ಲಾಮಿಕ್ ತಾತ್ವಿಕ ಸಿದ್ಧಾಂತಿ ಬರಾನಿ ಗಹನ ಜ್ಞಾನದಿಂದ, ಆದರೆ ನಿರೀಕ್ಷಿತ ಅಸಮ್ಮತಿಯಿಂದ ಹೇಳಿದಂತೆ, ಕಫೂರನನ್ನು ಅಲ್ಲಾವುದ್ದೀನ್ "ಬಹಳ ಗಾಢವಾಗಿ ಹುಚ್ಚನಂತೆ ಪ್ರೇಮಿಸುತ್ತಿದ್ದ" ಹಾಗೂ "ಸರ್ಕಾರದ ಜವಾಬ್ದಾರಿಯನ್ನು ಮತ್ತು ತನ್ನ ಸೇವಕರ ನಿಯಂತ್ರಣವನ್ನು ಈ ನಿಷ್ಪ್ರಯೋಜಕ, ಕೃತಜ್ಞತೆಯಿಲ್ಲದ, ಕೃಪಾಪಾತ್ರ ನಪುಂಸಕನ ಕೈಗೆ ಕೊಟ್ಟುಬಿಟ್ಟಿದ್ದ". ಅಧಿಕಾರದ ‘ಮದವೇರಿಸಿಕೊಂಡಿದ್ದರಿಂದ' ಹಾಗೂ ಸುಲ್ತಾನನ ಪ್ರೀತಿಯಿಂದಾಗಿ ತಲೆಯೆತ್ತಿದ್ದ ಮತ್ಸದಿಂದ ಕಫೂರ್ ಕೂಡ ಕೊನೆಯಲ್ಲಿ ಯಾದವ ರಾಜಕುಮಾರಿ ಕೊಲೆಯಾದ ಸಮಯದಲ್ಲೇ ಕ್ರೂರ ಅಂತ್ಯ ಕಾಣಬೇಕಾಯಿತು. ಈತ ಅಲ್ಲಾವುದ್ದೀನನ ಸಾವಿನ ನಂತರ ರಾಜಪ್ರತಿಷ್ಠಾಪಕನಾಗುವುದಕ್ಕೆ ಪ್ರಯತ್ನಿಸಿದ್ದ. ಆದರೆ, ಈ ಅಪಾಯಕಾರಿ ಆಟಕ್ಕಾಗಿನ ಸಂವಾದದಲ್ಲಿ ಭಾಗಿಯಾಗಿದ್ದವರು ಈತನನ್ನು ತುಂಡುತುಂಡಾಗಿ ಕತ್ತರಿಸಿ ಬಿಸಾಡಿ ತಮ್ಮದೇ ಆದ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಕಡೆಗೆ ದಾಪುಗಾಲಿಟ್ಟರು.

ನಮ್ಮ ಈ ‘ನಪುಂಸಕ’ ದಕ್ಷಿಣವನ್ನು ವಶಪಡಿಸಿಕೊಂಡು ತನ್ನ ಪ್ರೀತಿಯ ದೊರೆಗೆ ಕೊಡುವುದನ್ನೇ ತನ್ನ ಜೀವನದ ಧ್ಯೇಯವನ್ನಾಗಿಸಿಕೊಂಡಿದ್ದ. 1296ರಲ್ಲಿ, ಯಾದವರಿಂದ ಕೊಳ್ಳೆಹೊಡೆದ ಸಂಪತ್ತನ್ನು ಎಣ ಸಿ ಯಾದವರು ಪ್ರತಿ ವರ್ಷ ಕೊಡಬೇಕಾದ ಕಪ್ಪಕಾಣ ಕೆಗಳನ್ನು ತೀರ್ಮಾನಿಸಿ ದೆಹಲಿಗೆ ಹಿಂತಿರುಗಿದ ಅಲ್ಲಾವುದ್ದೀನ್ ಕೂಡಲೇ ತನ್ನ ಮುಗ್ದ ಚಿಕ್ಕಪ್ಪನನ್ನು ಕೊಲೆಗೈದು ದೆಹಲಿ ಕಿರೀಟವನ್ನು ಕೈವಶಮಾಡಿಕೊಂಡ. ಮರುಗಳಿಗೆಯಲ್ಲೇ ವಾಯುವ್ಯ ಭಾರತದ ಮೇಲೆ ಆಗಾಗ ದಾಳಿ ಮಾಡುವ ಚಾಳಿ ಬೆಳೆಸಿಕೊಂಡಿದ್ದ ಮಂಗೋಲರನ್ನು ನಿರ್ಣಾಯಕವಾಗಿ ಸದೆಬಯುವ ಬಹುಮುಖ್ಯ ಸೈನಿಕ ಕೆಲಸಗಳಿಗೆ ತೆರಳಿದ. ಅಲ್ಲಾವುದ್ದೀನ್ ಭೀಕರ ಪ್ರತಿದಾಳಿಯೆದುರು ದಾಳಿಕೋರರು ಹೇಗೆ ಮಣ್ಣುಮುಕ್ಕಿ ದಿಕ್ಕಟ್ಟು ಓಡಿಹೋದರೆಂದರೆ "ಹಿಂದೂಸ್ತಾನದ ಮೇಲೆ ಆಕ್ರಮಣ ಮಾಡುವ ಭ್ರಮೆಯೂ ಅವರ ಮನಸ್ಸಿನಿಂದ ಹೇಳ ಹೆಸರಿಲ್ಲದಂತೆ ಹೊರಟುಹೋಯಿತು". ಅಷ್ಟರಲ್ಲಿ, ದೆಹಲಿ ಸುಲ್ತಾನರು ಉತ್ತರದ ಹೋರಾಟಗಳಲ್ಲಿ ಮಗ್ನರಾಗಿರುವುದನ್ನು ಅರಿತಿದ್ದ ರಾಮಚಂದ್ರನ ಮಗ ದೆಹಲಿ ಚಕ್ರಾಧಿಪತ್ಯಕ್ಕೆ ಕೊಡಬೇಕಿದ್ದ ಬಂಗಾರವನ್ನು ನಿಲ್ಲಿಸುವಂತೆ ತನ್ನ ತಂದೆಯ ಮನವೊಲಿಸಿದ. ಒಂದಿಷ್ಟು ಸಮಯವೂ ಕಳೆಯಿತು. ಆದರೆ, 1308ರಲ್ಲಿ, ದೇವಗಿರಿಯ ಮೇಲೆ ಅಪಾಯದ ಗಂಟೆಗಳು ಬಾರಿಸಲಾರಂಭಿಸಿದವು; ಸ್ಮøತಿಸ್ಥಳ ಯಾವುದನ್ನು "ಖಿಲ್ಜಿ ಭೂಕಂಪನ" ಎಂದು ಘೋಷಿಸಿತೋ ಅದರ ನೇತೃತ್ವ ವಹಿಸಿದ್ದ ಮಲಿಕ್ ಕಫೂರ್ ದೇವಗಿರಿಗೆ ಮುತ್ತಿಗೆ ಹಾಕಿದ. ಯಾದವರು ಸೋತರು. ಈ ಬಾರಿ ಸುಮ್ಮನೇ ಕುಳಿತುಕೊಂಡು ವಿಧೇಯತೆಯಿಂದ ಪಾಠ ಕಲಿಯುವುದಕ್ಕೆ ರಾಮಚಂದ್ರನನ್ನು ದೆಹಲಿಗೆ ರವಾನಿಸಲಾಯಿತು. ನಂತರ ವಾರಂಗಲ್ ಮೇಲೆ ದಾಳಿ ಮಾಡಿ ಕಾಕತೀಯರನ್ನು ಧ್ವಂಸ ಮಾಡುವುದಕ್ಕೆ ಕಫೂರ್ ಮುಂದಾದಾಗ ದಂಡನೆಯಿಂದ ಬುದ್ದಿ ಕಲಿತಿದ್ದ ಯಾದವರು ಸಹಾಯ ಮಾಡುವುದಾಗಿ ಮುಂದೆ ಬಂದು ತಮ್ಮ ಬಲಿಷ್ಠ ಮರಾಠ ಸೈನಿಕರ ಒಂದು ದೊಡ್ಡ ಸೇನಾ ತುಕಡಿಯನ್ನು ವಾರಂಗಲ್ ನಗರದ ಹಾದಿ ತೋರಿಸುವುದಕ್ಕೆ ಕಳಿಸಿಕೊಟ್ಟರು. 1313ರ ಹೊತ್ತಿಗೆ, ಯಾದವ ರಾಜ ಮರಣ ಹೊಂದಿ ಅವನ ಗಡುಸು ಮಗ ಸಿಂಹಾಸನದ ಮೇಲೆ ಕುಳಿತ. ಕೊಟ್ಟ ಕೊನೆಯ ಬಾರಿಗೆ ದೇವಗಿರಿ ದೆಹಲಿಗೆ ಸವಾಲೊಡ್ಡಿ ಸೆಟೆದು ನಿಂತಿತು. ಈ ಬಾರಿ ಅವರನ್ನು ಶಾಶ್ವತವಾಗಿ ಹೊಸಕಿಹಾಕಲಾಯಿತು. ಗುಲಾಮ 'ಮುಕಳಿಹಡುಕ'ನನ್ನೇ ದೇವಗಿರಿಯ ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಯಿತು. ನಾಣ್ಯಗಳನ್ನು ಅಲ್ಲಾವುದ್ದೀನ್ ಹೆಸರಿನಲ್ಲಿ ಟಂಕಿಸಲಾಯಿತು. ಅಲ್ಲಿಂದಾಚೆಗೆ ದಕ್ಷಿಣದ ಮೊಟ್ಟ ಮೊದಲ ಸಾಮ್ರಾಜ್ಯವೊಂದು ದೆಹಲಿ ಸುಲ್ತಾನರ ದಕ್ಷಿಣದ ಪ್ರಾಂತ್ಯವಷ್ಟೇ ಆಗಿ ಪರಿವರ್ತನೆಯಾಯಿತು.

(ಮನು ಎಸ್ ಪಿಳ್ಳೈ ಅವರ ರೆಬೆಲ್ ಸುಲ್ತಾನ್ಸ್ - ‘ದಿ ಡೆಕ್ಕನ್ ಫ್ರಮ್ ಖಿಲ್ಜಿ ಟು ಶಿವಾಜಿ’ ಕೃತಿಯಿಂದ ಈ ಭಾಗವನ್ನು ಪ್ರಕಟಿಸಲಾಗಿದೆ. ಪ್ರಕಟಣೆಗೆ ಪ್ರಕಾಶಕರಾದ ಜಾಗರ್ನಟ್‌ ಅವರ ಅನುಮತಿ ಪಡೆಯಲಾಗಿದೆ)

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More