ಮುಂಗಾರು ವಿಶೇಷ | ಎಲ್ಲರನ್ನೂ ಮಳೆಯಲ್ಲಿ ತೋಯಿಸಿದ್ದ ಭಟ್ಟರೊಡನೆ ‘ಮುಗುಳುನಗೆ’

‘ಮುಂಗಾರು ಮಳೆ’ ನೋಡಿ ಪ್ರಭಾವಿತರಾಗಿದ್ದ ಚೈತ್ರಾ ಕೋಟೂರ್, ನಂತರದಲ್ಲಿ ನಿರ್ದೇಶಕ ಯೋಗರಾಜ್ ಭಟ್ಟರ ಜೊತೆ ‘ಮುಗುಳುನಗೆ’ಯಲ್ಲಿ ಸಹನಿರ್ದೇಶಕಿಯಾಗಿ ಕೆಲಸ ಮಾಡಿದವರು. ನಾಯಕ ಗಣೇಶ್-ಭಟ್ಟರ ‘ಮುಂಗಾರು ಮಳೆ’ ಮೆಲುಕು ಹಾಗೂ ಮಳೆ ಕುರಿತ ಲಹರಿ ಇಲ್ಲಿದೆ

ಮುಂಗಾರು ಎಂದೊಡನೆ 'ಮುಂಗಾರು ಮಳೆ' ಸಿನಿಮಾ ನೆನಪಾಗದೆ ಉಳಿಯಲಾರದು. ನಾನು ಹೈಸ್ಕೂಲಿನಲ್ಲಿದ್ದೆ. ಯಾರೋ ಸ್ನೇಹಿತರು ತುಂಬಾ ಚೆನ್ನಾಗಿದೆ ಅಂತೆ ಸಿನಿಮಾ ಎಂದು ನನ್ನನ್ನೂ ಕರೆದುಕೊಂಡು ಹೋದರು. ಆ ಮಂಜಿನ ನಡುವೆ ಗಣೇಶ್ ರೋಮಾಂಚನಗೊಳ್ಳುವ ರೀತಿ, ಲವಲವಿಕೆಯ ಮಾತು, ಅನಂತನಾಗ್ ಅವರ ಗಾಂಭೀರ್ಯ, ಹೇಳದೆ ಕೇಳದೆ, ಸಮಯ, ಚೌಕಟ್ಟು ಎಲ್ಲದರಾಚೆಗೂ ಚಿಲುಮೆಯಂತೆ ಚಿಮ್ಮುವ ಪ್ರೇಮ, ಹಸಿರು, ಚಿಗುರು, ಮಳೆ ಹನಿ, ಜಲಪಾತ... ತೀರಾ ಹೊಸದೆನಿಸಿತ್ತು. "ನಂದಿನಿ ನಮ್ಮಿಬ್ಬರ ಹಣೇಲೂ ಬರ್ದಿಲ್ಲ,” ಎಂದು ಗಣೇಶ್, ವಿಲನ್‌ಗೆ ಹೇಳುತ್ತ ಅಳುವ ದೃಶ್ಯ ನೋಡುತ್ತ, ನಾನು ಗೆಳತಿಯ ಭುಜಕ್ಕೆ ಒರಗಿ ಬಿಕ್ಕಿಬಿಕ್ಕಿ ಅತ್ತಿದ್ದೆ. ಅದೇನು ಅರ್ಥವಾಗಿತ್ತೋ ಏನೋ ಆಗ!

ನಂತರ ಅದೆಷ್ಟೋ ಜನರಿಗೆ ನನ್ನಿಂದ ಸಿನಿಮಾ ಪ್ರಚಾರವಾಗಿತ್ತು. ಅವರಿಗೆ ತೋರಿಸುವ ನೆವದಲ್ಲಿ ನಾನು ಮತ್ತೈದು ಬಾರಿ ನೋಡಿದ್ದೂ ಆಯ್ತು. ಅಂದಿನಿಂದ ‘ಮುಂಗಾರು ಮಳೆ’ ಎಂಬುದೇ ಒಂದು ವಿಶೇಷತೆ ಪಡೆದುಕೊಂಡಿತ್ತು. ಮುಂಗಾರಿಗಾಗಿಯೇ ಕಾಯುವುದು, ಆ ಸಮಯವನ್ನು ಇನ್ನಷ್ಟು ಆಹ್ಲಾದಕರವಾಗಿ ಅನುಭವಿಸುವುದು. ಬಹುಶಃ ಮುಂಗಾರು ಮಳೆ ಕುರಿತು ಒಂದು ಡಾಕ್ಯುಮೆಂಟರಿ ಮಾಡಿದ್ದರೂ ಅದು ಇಷ್ಟೊಳ್ಳೆ ಪ್ರಭಾವ ಬೀರುತ್ತಿರಲಿಲ್ಲವೆನಿಸುತ್ತದೆ. ಹರೆಯದ ಹುಡುಗರಲ್ಲಂತೂ ಎಲ್ಲಿಲ್ಲದ ಚೈತನ್ಯ ತುಂಬಿತ್ತು. ಶಾಲೆಯಿಂದ ಮನೆಗೆ ಬರುವ ಹಾದಿಯುದ್ದಕ್ಕೂ ಬೇರ್ಯಾವುದೋ ಶಾಲೆಯ ಹುಡುಗರು, ಪುಂಡು ಪೋಕರಿಗಳು ನನ್ನ ಹಿಂದೆ ದಿನ ತಪ್ಪದಂತೆ ಹಾಜರಾಗಿ ಬರುತ್ತಿದ್ದವರ ಬಾಯಲ್ಲಿ ಈ ‘ಮುಂಗಾರು ಮಳೆ’ಯ ಸಂಭಾಷಣೆಯೇ ತುಳುಕುತ್ತಿತ್ತು. ಅವನು ಅವನ ಸ್ನೇಹಿತನಿಗೆ ನನ್ನ ನೋಡುತ್ತ, “ಏಯ್ ಮಳೆಗಾಲ ಶುರು ಆಗುತ್ತೆ ಬೇಗ ಒಪ್ಕೊಳೋ,” ಎಂದು ಹೇಳುತ್ತಿದ್ದದ್ದು; ನನಗಂತೂ ಆಗ ಮೈಯೆಲ್ಲ ಉರಿಯುತ್ತಿತ್ತು. ಅವರನ್ನು ಹಾದಿ ತಪ್ಪಿಸಿ, ಕಣ್ತಪ್ಪಿಸಿ ಮನೆಗೆ ಹೋಗುವುದೇ ಸಾಹಸವಾಗುತ್ತಿತ್ತು. ಕೆಲವರಿಗಂತೂ ಸೈಕಲ್ ನಿಲ್ಲಿಸಿ ಬಾಯ್ತುಂಬಾ ಉಗಿದರೂ, ತಾನು 'ಪ್ರೀತಂ' ಎಂದು ಸ್ವತಃ ಭಾವಿಸಿಕೊಂಡು ನಗುತ್ತ ತಲೆಬಗ್ಗಿಸಿಕೊಂಡು, ಮತ್ತೆ ಹಾಗೇ ಹಿಂದೆ ಬರುತ್ತಿದ್ದರು.

ನನಗೆ ಇವರ ಮಾತು, ಪ್ರೇಮಪತ್ರಗಳು ಖುಷಿ ನೀಡುತ್ತಿದ್ದದ್ದು ಹೌದು. ಆದರೆ, ಅವರ ಮೇಲೆ ಪ್ರೇಮ ಹುಟ್ಟಿಸಿರಲ್ಲಿಲ್ಲ! ‘ಮುಂಗಾರು ಮಳೆ’ ಸಿನಿಮಾ ನೋಡಿದ ಒಂದಷ್ಟು ದಿನಗಳಂತೂ, ಗಣೇಶ್ ಅವರೇ ಕಣ್ಮುಂದೆ ಬರುತ್ತಿದ್ದರು. ಗಣೇಶ್ ಎನ್ನುವುದಕ್ಕಿಂತ 'ಪ್ರೀತಂ' ಎಂಬ ಪ್ರೇಮಿ. ಅವರ ಜೊತೆಗೆ ಒಂದಷ್ಟು ಕ್ಷಣ ಕಳಿಯಬೇಕು, ಮಾತಾಡಬೇಕು ಅನಿಸಿತ್ತು.

ಅಷ್ಟು ತೀವ್ರವಾಗಿ ಪ್ರೇಮಿಸುವವನು ನನಗೂ ಬೇಕು. ನಾನೇ ಅವನ ಲೋಕ ಎನ್ನುವಂತೆ ನನ್ನ ಪ್ರೇಮಿಸುವವನು, ಅಂತಹ ಮಳೆಯಲ್ಲಿ ನನ್ನನ್ನೆತ್ತಿ ಕುಣಿದಾಡುವವನು, ಕಣ್ಣಲ್ಲಿ ಕಣ್ಣಿಟ್ಟು ಅವನೆಲ್ಲ ಭಾವನೆಗಳ ನೇರ ಹೃದಯಕ್ಕೆ ದಾಟಿಸುವವನು...

ಆದರೆ, ಅಂತಹ ಪ್ರೇಮವೆಲ್ಲ ತೀರಾ ಕ್ಷಣಿಕ ಎಂದರಿಯುವುದಕ್ಕೂ ಹೆಚ್ಚು ಸಮಯ ಬೇಕಾಗಲಿಲ್ಲ. ಅಭಿನಯದ ಹುಚ್ಚು ಇನ್ನಿಲ್ಲದಂತೆ ಹೆಚ್ಚಿತ್ತು. ಉಸಿರಾಡುವ ಗಾಳಿಯಷ್ಟೇ ಅಭಿನಯ ನನಗೆ ಮುಖ್ಯ ಎಂದೆನಿಸುವಷ್ಟು ಆವರಿಸಿತ್ತು. ಓದುವ ನೆಪದಲ್ಲಿ ಬೆಂಗಳೂರಿಗೆ ಬಂದರೂ, ಜೊತೆಗೆ ನನ್ನ ಕಲಾ ಚಟುವಟಿಕೆಗಳನ್ನು ಬಿಟ್ಟಿರಲಿಲ್ಲ. ಅಭಿನಯವೇ ನನಗೆ ಎಲ್ಲವೂ ಕ್ಷಣಿಕ ಎಂಬುದನ್ನು ಅರಿವು ಮೂಡಿಸುತ್ತ ಹೋಯಿತು. ಆ ಕ್ಷಣದ ಭಾವ ಆ ಕ್ಷಣಕ್ಕೆ ಎಂಬುದನ್ನು ನಾನಾಗೇ ಕಂಡುಕೊಂಡೆ. ಈಗಲೂ ಪ್ರೇಮಭಾವಕ್ಕೆ ಹಾತೊರೆಯುತ್ತೇನೆ; ಒಂದು ಕ್ಷಣ ಆ ಭಾವದಲಿ ಲೀನವಾಗಲು! ಅದು ರಂಗದ ಮೇಲೋ ಅಥವಾ ಕ್ಯಾಮೆರಾ ಮುಂದೆಯೋ...

ಹತ್ತು ವರ್ಷಗಳ ಹಿಂದೆ ‘ಮುಂಗಾರು ಮಳೆ’, ‘ಗಾಳಿಪಟ’ ಸಿನಿಮಾ ನೋಡಿದ್ದ ನನಗೆ ಅದೇ ಸಿನಿಮಾದ ನಾಯಕ ಮತ್ತು ನಿರ್ದೇಶಕ ಯೋಗರಾಜ್ ಭಟ್ಟರ ಜೊತೆ ಅವರಿಬ್ಬರ ಜೋಡಿಯ ಮೂರನೇ ಸಿನಿಮಾ 'ಮುಗುಳುನಗೆ'ಯಲ್ಲಿ ಕೆಲಸ ಮಾಡುವ ಅವಕಾಶ ಬಂತು. ಅವರಿಬ್ಬರೂ ಶೂಟಿಂಗ್ ನಡುವೆ ಆಗಾಗ ‘ಮುಂಗಾರು ಮಳೆ’ಯ ಮೆಲುಕು ಹಾಕುವುದನ್ನು ಕೇಳಿದಾಗಲೆಲ್ಲ ಅವರ ಜೊತೆಗೂಡಿ ಮಳೆಯಲ್ಲಿ ನೆಂದಷ್ಟು ಸಂಭ್ರಮವಾಗುತ್ತಿತ್ತು! ‘ಮುಂಗಾರು ಮಳೆ’ಯಂಥ ಇತಿಹಾಸ ಸೃಷ್ಟಿಸಿದವರು ನಾವು ಎಂಬ ಯಾವುದೇ ಮೇಲ್ಮೆ ಇಲ್ಲದ ಅವರಿಬ್ಬರ ತೀರಾ ಸಹಜ ನಡುವಳಿಕೆ ಎಲ್ಲಿಲ್ಲದ ಖುಷಿ ಕೊಡುತ್ತಿತ್ತು.

ಅದುವರೆಗೂ ಶೂಟಿಂಗ್ ಸೆಟ್ಟನ್ನು ಆರ್ಟಿಸ್ಟ್ ಆಗಿಯೇ ಪ್ರವೇಶಿಸಿದ್ದವಳಿಗೆ, ‘ಮುಗುಳುನಗೆ’ಯ ಮೊದಲ ದಿನದ ಶೂಟಿಂಗ್ ಸೆಟ್ಟಿನಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದದ್ದು ಒಂದು ರೀತಿ ಹೊಸತು. ಆದರೆ, ನಾ ಕಂಡ 'ಪ್ರೀತಂ' ಗಣೇಶ್ ಅವರಲ್ಲಿ ಆಗ ಕಾಣುತ್ತಿರಲಿಲ್ಲ!

ಯೋಗರಾಜ್ ಸರ್ ಆಫೀಸಿನಲ್ಲಿ ಮೊದಲು ಗಣೇಶ್ ಅವರು ನನ್ನನ್ನು ನೋಡಿದಾಗ, "ಇದ್ಯಾರೋ ಹುಡುಗಿ... ಭಟ್ಟರ ಆಫೀಸಲ್ಲಿ! ಇಷ್ಟು ಡೀಸೆಂಟ್ ಹುಡುಗೀ...!” ಎಂದು ಉದ್ಗರಿಸಿದ್ದರಂತೆ. ಆ ದಿನ ನಡುವೆ ಅವರು ಸಿಕ್ಕಾಗ, "ನಮ್ ಕಾಲೇಜ್ ಫಂಕ್ಷನ್‌ಗೆ ಬಂದಾಗ ನೀವು ನಂಗೆ ಗೋಲ್ಡ್ ಮೆಡಲ್ ಪ್ರಧಾನ ಮಾಡಿದ್ರೀ ನೆನಪಿದೆಯಾ?" ಎಂದು ಕೇಳಿದ್ದೆ. ಅವರು ನೆನಪಿಸಿಕೊಂಡು ನಂತರ ಆಶ್ಚರ್ಯದಿಂದ, "ಓ ನೀವೇನಾ ಅದು... ಓದೋದು ಬಿಟ್ಟು ಇಲ್ಯಾಕ್ರೀ ಬಂದ್ರೀ...?" ನಗುತ್ತ ಕೇಳಿದರು. ನನ್ನ ಕುರಿತಾಗಿ ಚಿಕ್ಕದಾಗಿ ಪರಿಚಯ ಮಾಡಿಕೊಂಡಿದ್ದೆ.

ಪಾಂಡಿಚೇರಿಯ ಶೆಡ್ಯೂಲ್ನಲ್ಲಿ ಮತ್ತೆ ಮತ್ತೆ ಅದೇ ‘ಮುಂಗಾರು ಮಳೆ’ಯ ಗಣೇಶ್ ಮತ್ತು ಯೋಗರಾಜರನ್ನು ಕಾಣುತ್ತಿದ್ದೇನೆ ಎಂದೆನಿಸತೊಡಗಿತು. ಯೋಗರಾಜ್ ಸರ್ ಹೆಣ್ಣುಮಕ್ಕಳಿಗೆ ವಿಶೇಷ ಗೌರವ ಕೊಡುತ್ತಿದ್ದರು, ಅವರಂತೆಯೇ ಅಲ್ಲಿ ಎಲ್ಲರೂ ಪಾಲಿಸುತ್ತಿದ್ದರು. ಅಲ್ಲಿ ನನ್ನ ಮುಖ್ಯ ಕೆಲಸ ನಾಯಕಿಯನ್ನು ಪಾತ್ರ, ಸಂಭಾಷಣೆ, ಸನ್ನಿವೇಶಕ್ಕೆ ತಯಾರಿ ಮಾಡುವುದು. ಆ ಸಿನಿಮಾ ಪೂರಾ ಅದೆಷ್ಟೋ ಬಾರಿ ನಾಯಕಿಯ ಸಂಭಾಷಣೆಯನ್ನು ಗಣೇಶರೊಂದಿಗೆ ಸೇರಿ ರಿಹರ್ಸ್ ಮಾಡುವಾಗ ನಾನೇ ಅವರೊಂದಿಗೆ ಆ ಮಾತು ಹೇಳುತ್ತಿದ್ದೇನೆಂದನಿಸುತ್ತಿತ್ತು, ಅವರೂ ನನ್ನ ಉದ್ದೇಶಿಸಿ ನಾಯಕಿಗೆ, “ಶಿ ಈಸ್ ರೈಟ್, ಅದೇ ಥರ ಹೇಳಿ, ಟ್ರೈ ಟು ಫಾಲೋ ಹರ್,” ಎನ್ನುತ್ತಿದ್ದರು.

‘ಮುಂಗಾರು ಮಳೆ’ಯಲ್ಲಿ ಎಲ್ಲರನ್ನೂ ತೋಯಿಸಿದ್ದ ಜೋಡಿಗೆ ಮುಗುಳುನಗೆಯಲ್ಲಿ ಮಳೆ ಕಾಡಿಸದೆ ಇರಲಿಲ್ಲ. ಆಗಾಗ ಶೂಟಿಂಗ್ ಸಮಯದಲ್ಲಿ ಮಳೆ ಬಂದದ್ದುಂಟು. ಮಳೆ ನಿಲ್ಲುವವರೆಗೂ ಸಾಧ್ಯವಾದರೆ ಇನ್‌ಡೋರ್ ಶೂಟ್ ಮಾಡುತ್ತಿದ್ದರು. ಇಲ್ಲವೇ, ಹಾಗೆಯೇ ಒಂದಷ್ಟು ಸಮಯ ಮಳೆಯ ಜೊತೆ ಬ್ರೇಕ್! ಒಂದು ಗ್ಲಾಸ್ ಟೀ, ಕಾಫಿ... ಮಳೆಯ ವಾಸನೆಯೊಂದಿಗೆ ಹೀರುತ್ತ, ನಿರಾಳವಾಗುತ್ತ ಸುಧೀರ್ಘ ನಿಟ್ಟುಸಿರು! ಕೆಲವೊಮ್ಮೆ ಪೂರಾ ಔಟ್‌ಡೋರ್ ಶೂಟಿಂಗ್ ಹಾಕಿಕೊಂಡಾಗ ಮಳೆ ಇನ್ನಿಲ್ಲದಂತೆ ಕಾಡಿಸಿ ಪ್ಯಾಕ್ ಮಾಡಿಸುವುದೂ ಉಂಟು. ಯೋಗರಾಜ್ ಸರ್ ಆದಷ್ಟೂ ಮಳೆಯ ಸಮಯ ಸದುಪಯೋಗಪಡಿಸಿಕೊಳ್ಳಲು ನೋಡುತ್ತಿದ್ದರು. ಕಂಟಿನ್ಯುಟಿ ಸೀನ್ ಇಲ್ಲದಿದ್ದರೆ, ತುಂತುರು ಹನಿಗಳ ನಡುವೆಯೇ ಸೀನ್ ಮುಗಿಸುತ್ತಿದ್ದರು. ಜೊತೆಗೆ ಆ ವಾತಾವರಣ, ಅಲ್ಲಿನ ಭೂಮಿಕೆಗೆ ತಕ್ಕಂತೆ ಸಂಭಾಷಣೆಯನ್ನೂ ಬದಲಿಸಿಬಿಡುತ್ತಿದ್ದರು!

ಯಾವುದೇ ಶೂಟಿಂಗ್ ಸೆಟ್‌ನಲ್ಲೂ ಮಳೆ ಬಂತೆಂದರೆ ಕೊಡೆಯ ಮೊಟ್ಟಮೊದಲ ಪ್ರಾಶಸ್ತ್ಯ ಕ್ಯಾಮೆರಾಗಳಿಗೆ; ತದನಂತರ ಮುಖ್ಯ ನಟ-ನಟಿಯರಿಗೆ, ನಿರ್ದೇಶಕ, ನಿರ್ಮಾಪಕರಿಗೆ. ಇಷ್ಟಾಗಿ ಓಪನ್ ಗ್ರೌಂಡ್‌ನಲ್ಲಿ ಕೊಡೆ, ಥರ್ಮಾಕೋಲ್ ಉಳಿದ್ದಿದ್ದರೆ, ಇತರ ಡೈರೆಕ್ಟನ್ ಅಸಿಸ್ಟೆಂಟ್ಸ್, ಟೆಕ್ನೀಷನ್ಸ್, ಸೆಟ್ ಮಾಸ್ಟರ್ಸ್‌ಗೆ. ಆದರೆ, ಯೋಗರಾಜ್ ಸರ್ ಸಾಧ್ಯವಾದಷ್ಟು ಎಲ್ಲರ ಸುರಕ್ಷತೆಗೆ ಎಚ್ಚರ ವಹಿಸದೆ ಇರುತ್ತಿರಲಿಲ್ಲ. ‘ಮುಗುಳುನಗೆ’ಯ ನಿರ್ಮಾಪಕ ಸೈಯದ್ ಸಲಾಂ ಅಂತೂ, ತಮಗೂ ಮುನ್ನ ನಮ್ಮ ಅಗತ್ಯಗಳ ಕಡೆಗೆ ಗಮನ ಕೊಡುತ್ತಿದ್ದವರು. ಆದರೆ, ಎಲ್ಲ ಸೆಟ್‌ನಲ್ಲೂ ಹಾಗೇ ಇರುತ್ತದೆಂದು ಹೇಳಲಾಗುವುದಿಲ್ಲ.

ಮಳೆಯ ಕಾರಣದಿಂದ ಎಷ್ಟೋ ಲೈಟ್ಸ್ ಬ್ಲಾಸ್ಟ್ ಆಗುತ್ತವೆ. ಆಪರೇಟರ್ಸ್ ಅಂತೂ ದಿನಕೊಬ್ಬರಾದರೂ ಕರೆಂಟ್ ಶಾಕ್ ಹೊಡಿಸಿಕೊಳ್ಳುತ್ತಿರುತ್ತಾರೆ. ಇನ್ನು, ಮಳೆಯೇ ಸಮಯದಲ್ಲಿ ಹೇಳಬೇಕೇ? ಇವೆಲ್ಲದರ ನಡುವೆಯೂ ದಿನಗೂಲಿಗೆಂದು ಕೆಲಸ ಮಾಡುವ ಸೆಟ್, ಊಟದ ಪ್ರೊಡಕ್ಷನ್, ಆರ್ಟ್ ಇತ್ಯಾದಿ ಹುಡುಗರು ತಮ್ಮ ಮನೋ ಇಚ್ಛೆಯಂತೆ ಮಳೆಯಲ್ಲಿ ನೆಂದುಬಿಡುತ್ತಿದ್ದರು, ಬಿಡುವಿನ ಸಮಯದಲ್ಲಿ ಮೈಮರೆತು ಆಡುತ್ತಿದ್ದರು. ಹಾಗೆ ಸಮಯ ಸಿಕ್ಕರೆ ನಾನೂ ಬಿಡುತ್ತಿರಲಿಲ್ಲ; ನಮ್ಮ ನಿರ್ದೇಶನ ತಂಡದವರೊಂದಿಗೆ ಕುಣಿದು ಕುಪ್ಪಳಿಸುತ್ತಿದ್ದೆ. ತಂಡದವರೂ ಹಾಗೇ ಇದ್ದರು; ಪ್ರೀತಿ, ಸ್ನೇಹ, ಕಾಳಜಿ, ಗೌರವ, ಜವಾಬ್ದಾರಿ, ತರಲೆ, ಕೀಟಲೆ ಎಲ್ಲವೂ ಇರುತ್ತಿತ್ತು. ಮುಂದಿನ ಮುಖ್ಯಚಕ್ರವಿದ್ದಂತೆ ಇಡೀ ತಂಡವಲ್ಲವೇ!

ಆ ದಿನ ಪಾಂಡಿಚೇರಿ ಶೆಡ್ಯೂಲಿನ ಶೂಟಿಂಗಿನ ಕಡೆಯ ದಿನವಾಗಿತ್ತು. ಲೇ ಪಾಂಡಿ ರೆಸಾರ್ಟ್‌ನಲ್ಲಿ 'ರೂಪಸಿ' ಹಾಡಿನ ಚಿತ್ರೀಕರಣ ಮುಗಿದು, ಸಂಜೆ ಆರಕ್ಕೆ ಪ್ಯಾಕಪ್ ಆಗುವುದನ್ನೇ ಕಾದಿದ್ದವರಂತೆ ನಾವು ಒಂದಷ್ಟು ಮಂದಿ ಸಮುದ್ರಕ್ಕಿಳಿದೆವು. ನಮ್ಮ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲೆಂದೇ ಸೋನೆಯು ಸುಯ್ಯೆನ್ನುತ್ತ ನಿಧಾನಕ್ಕೆ ಜೊತೆಯಾಗುತ್ತಿತ್ತು. ರಭಸದ ಅಲೆಗಳ ನಡುವೆ ಬಿದ್ದು ಎದ್ದು ಕುಣಿದು ಕುಪ್ಪಳಿಸಿದೆವು. ಕೆಲವರು ನೀರಿಂದ ಹೊರಗೆ ಉಳಿದಿದ್ದವರು, “ಕತ್ತಲಾಯಿತು! ಗಾಡಿ ಹೋಗುತ್ತೆ! ಇನ್ನೂ ಎಲ್ಲಾರು ಲಗೇಜ್ ಪ್ಯಾಕ್ ಮಾಡ್ಕೋಬೇಕು, ಬೆಂಗಳೂರು ಹೊರಡಬೇಕು! ಮಳೆ ಜೊರಾಗುತ್ತೆ! ಸಾಕು ಬನ್ನಿ... ಬೇಗ ಬನ್ನಿ...” ಇತ್ಯಾದಿ ಕೂಗುತ್ತಲೇ ಇದ್ದರೂ ಹಾಗೇ ಆಡುತ್ತಿದ್ದೆವು. ಕೊನಗೆ ಯಾರೋ, "ಎಲ್ಲಾ ಹೊರಟರಂತೆ!" ಎಂದಾಗ ಬೆಚ್ಚಿ ಓಡತೊಡಗಿದೆವು, ಚಪ್ಪಲಿಗಳು ಎಲ್ಲೆಲ್ಲೋ. ಆ ಮರಳಿನಲ್ಲಂತೂ ಎಷ್ಟು ದಪದಪ ಹೆಜ್ಜೆ ಹಾಕಿ ಹುಡುಕಿದರೂ ನನ್ನ ಚಪ್ಪಲಿಗಳು ಸಿಗಲೇ ಇಲ್ಲ! ಯಾರೋ ಕಾಸ್ಟ್ಯೂಮ್‌ನವರು ಎತ್ತಿಕೊಂಡು ಹೋಗಿದ್ದಾರೆ ಎಂದರು, ಸುಮ್ಮನೆ ನಂಬಿ ಹೊರಟೆ. ಮಳೆಯು ಮೈಮೇಲಿನ ಉಪ್ಪನ್ನು ಕಡಿಮೆ ಮಾಡಬಹುದೇನೋ, ಆದ್ರೆ ನೆನೆಯೋಕು ಸಮಯ ಇಲ್ಲ!

“ಓಡು... ಓಡು!” ಹಿಂದಿನಿಂದ ಕೂಗುತ್ತಿದ್ದರು. ಈಗೇನು ಮಾಡುವುದು? ನನ್ನಂತೆಯೇ ಪೂರಾ ಉಪ್ಪುನೀರು, ಮರಳಿನಿಂದ ತುಳುಕುತ್ತಿದ್ದ ಅಮೋಲ್ ಎನ್ನುವ ಅಸೋಸಿಯೇಟ್ ಒಬ್ಬನನ್ನು ನಿಲ್ಲಿಸಿ, “ಈಗೇನು ಮಾಡುವುದು? ಹೀಗೆ ಗಾಡಿ ಹತ್ತೋದಾ?!” ಎಂದು ಕೇಳಿದಾಗ, ಅವನು, "ನಾನು ಗಣೇಶ್ ಸರ್‌ದು ಉಳಿದಿರೋ ಕಾಸ್ಟ್ಯೂಮ್ ಯಾವ್ದಾದ್ರೂ ಹಾಕೊತೀನಿ, ನೀನು ಹೀರೋಯಿನ್ ಬಟ್ಟೆ ಹಾಕೋಬಿಡು," ಎಂದ! ಅದೇ ಸಮಯಕ್ಕೆ ಕಾಸ್ಟ್ಯೂಮ್ ಹುಡುಗ ಅಲ್ಲಿದ್ದ ಕಾಸ್ಟ್ಯೂಮ್ಸ್ ಬಾಚಿಕೊಂಡು ಹೊರಟಿದ್ದ. ಅವನ್ನನ್ನು ನಿಲ್ಲಿಸಿ ಒಂದೊಂದು ಜೊತೆ ಇಬ್ಬರೂ ತೆಗೆದುಕೊಂಡೆವು, ಕಾಸ್ಟ್ಯೂಮ್ ಹುಡುಗನೇ, "ಇಲ್ಲೇ ಗಣೇಶ್ ಸರ್ ರೂಂ ಇದೆ ಅಲ್ವಾ, ಮೈಯೆಲ್ಲಾ ತೊಳ್ಕೊಂಡ್ ಅಲ್ಲೇ ಬದಲಾಯಿಸಿಕೊಂಡ್ ಬಂದ್ಬಿಡಿ, ಅವರು ಹೇಗಿದ್ರೂ ಬೆಂಗಳೂರು ಹೊರಟ್ರು," ಎಂದ! ಓಹೋ ನಮಗಾಗಿಯೇ ಈಗ ಈ ರೂಂ, ಬಿಸಿನೀರು ಇದೆ ಎನ್ನುವಂತೆ ಇಬ್ಬರೂ ಹೋಗಿ ಒಬ್ಬೊಬ್ಬರಾಗಿ ಬೇಗ ಬೇಗ ಸ್ನಾನ ಮುಗಿಸಿ, ಬಟ್ಟೆ ಬದಲಿಸಿ ಓಡುತ್ತ ಕಾರಿನ ಬಳಿ ಬರಲು ಶಾಕ್! ಗಣೇಶ್ ಸರ್ ಬೆಂಗಳೂರಿಗೆ ಮಳೆಯ ಕಾರಣದಿಂದ ಹೋಗ್ತಿಲ್ವಂತೆ! ಬೆಳಿಗ್ಗೆ ಜರ್ನಿ ಮಾಡ್ತಾರಂತೆ!

ಇದನ್ನೂ ಓದಿ : ಮುಂಗಾರು ವಿಶೇಷ | ಮಾನ್ಸೂನ್ ತವರು ಕೇರಳದಿಂದ ತುಂಗಾ ತೀರದ ತೀರ್ಥಹಳ್ಳಿವರೆಗೆ

ನನಗಿಂತಲೂ ಅಮೋಲ್ ಹೆಚ್ಚು ಭಯಭೀತನಾಗಿಬಿಟ್ಟ! ಕಾರಣ, ಇಡೀ ರೂಮು, ಬಾತ್ರೂಮಿನ ನೆಲವೆಲ್ಲ ನಮಗೆ ಅಂಟಿದ್ದ ಮರಳಿನಿಂದ ಆವರಿಸಿಬಿಟ್ಟಿತ್ತು! ಅವರು ರೂಮಿನೊಳಗೆ ಹೋಗಿ ಗಾಬರಿಯಾಗಿ, ಮ್ಯಾನೇಜರ್‌ಗೆ ಬೈದರಂತೆ! ಅಮೋಲ್ ತಡಮಾಡದೆ ಗಣೇಶ್ ಅವರಿಗೆ ಫೋನು ಮಾಡಿ ಕ್ಷಮೆ ಕೇಳಿಬಿಟ್ಟ! ನಾನು...? ಒಂದು ಮೆಸೇಜಿನಲ್ಲಿ ಪೂರಾ ಸನ್ನಿವೇಶ ವಿವರಿಸಿ ಕಳಿಸಿಬಿಟ್ಟೆ. ಅತ್ತಲಿಂದ 'ಇಟ್ಸ್ ಓಕೆ ಮಾ' ಎಂಬ ಸಂದೇಶವೂ ಬಂತು. ಚೂರು ನಿರಾಳ.

ನಾಯಕಿಯ ಬಟ್ಟೆಯಲ್ಲಿ ನನ್ನ ನೋಡಿದ ಒಂದಷ್ಟು ಜನ ರೇಗಿಸಿದರು, ರೂಪಸಿ ಎಂದೂ ಹಾಡಿದರು. ಮಳೆ ಜೊರಾಗುತ್ತಿತ್ತು. ಎಲ್ಲರಿಗೂ ಬಾಯ್ ಹೇಳುತ್ತ ಕಾರು ಹತ್ತಿದೆವು. ಕಾರು ಚಲಿಸುತ್ತಿದ್ದಂತೆ ಗಾಳಿ ಬೇಕೆನಿಸಿ ಚೂರು ಕಿಟಕಿಗಾಜು ಇಳಿಸಿದೊಡನೆ, ಸಣ್ಣ ಸಣ್ಣ ಹನಿಗಳು ಗಾಳಿಯೊಂದಿಗೆ ರಪ್ ಎಂದು ಮುಖಕ್ಕೆ ರಾಚಿತು. ಒಂದೆರಡು ದಿನಗಳ ಹಿಂದೆ ಅದೇ ಪಾಂಡಿಯ ಸಮುದ್ರ ತೀರದ ಬಂಡೆಯ ಮೇಲೆ, ಸಂಜೆ ಏಳರ ಸಮಯ, ದೊಡ್ಡ ದೊಡ್ಡ ಲೈಟ್‌ಗಳನ್ನು ಹಾಸಿ, ಒಂದು ಪ್ಯಾಥೊ ಬಿಟ್ ಶೂಟ್ ನಡೆಯುತ್ತಿದ್ದದ್ದು ಮತ್ತೆ ನೆನಪಾಯಿತು. ಸಮುದ್ರಕ್ಕೇ ಲೈಟ್ ಹಾಸಿರುವುದನ್ನು ನೋಡುತ್ತ ಚಕಿತಳಾಗಿ ನಾನು ನಿಂತುಬಿಟ್ಟಿದ್ದೆ. ಬಂಡೆಯ ತುದಿಯಲ್ಲಿ ಗಣೇಶ್ ಅವರು ಬೇಸರದಲ್ಲಿ ಮಲಗಿರುವ ಶಾಟ್ ತೆಗೆಯುತ್ತಿದ್ದರು. ಇನ್ನೇನು ಮಳೆ ಬರುವಂತೆ ಜೋರಾಗಿ ಗಾಳಿ ಬೀಸುತ್ತಿತ್ತು, ನಮ್ಮನ್ನೇ ಎತ್ತಿ ಸಮುದ್ರಕ್ಕೆ ತಳ್ಳಿಬಿಡುವಷ್ಟು ರಭಸ! ಗಾಳಿಯು ಅದರೊಂದಿಗೆ ಸಮುದ್ರದ ನೀರನ್ನೂ ಹನಿ ಹನಿಯಾಗಿ ತಂದು ರಾಚುತ್ತಿತ್ತು. ವಿಸ್ತಾರವಾದ ಮೋಡಗಳು ಸಾಗುತ್ತಿದ್ದ ಆಕಾಶ, ನಡುವಿದ್ದ ಚಂದಿರ, ನನಗೇ ಲೈಟನ್ನು ಹಾಸಿದ್ದಾರಲ್ವಾ? ಎಂದು ಆಶ್ಚರ್ಯಗೊಂಡ ಸಮುದ್ರದ ಅಲೆಗಳು ಸಂತಸದಿಂದ ಬೀಗುತ್ತಿದ್ದವು... "ನೀವಿಲ್ಲಿದ್ರೇ ಗಾಳಿಗೆ ಕೆಳಗೆ ಬೀಳ್ತೀರ! ಆ ಕಡೆ ಹೋಗಿ!" ಎಂದು ಹಲವರಿಂದ ಕೇಳಿದ ಮೇಲೂ, ಹೆಜ್ಜೆ ಕಿತ್ತಿಡಲು ಮನಸ್ಸಾಗದೆ ಅಲ್ಲೇ ಧೃಡವಾಗಿ ಆ ಕ್ಷಣವನ್ನು ಅನುಭವಿಸುತ್ತ ನಿಂತಿದ್ದೆ. ಶಾಟ್ ಮುಗಿಸಿದ ಗಣೇಶ್‌ರವರು ಗಾಳಿಯಲ್ಲಿ ಕಣ್ಣು ಉಜ್ಜುತ್ತ ನನ್ನತ್ತ ಬಂದರು, ಆ ಕಡೆ ಮುಂದಿನ ಶಾಟ್ ತಯಾರಿ ನಡೆಯುತ್ತಿತ್ತು. ಆ ಕ್ಷಣ ನನ್ನನ್ನೂ ಮೀರಿದಂತೆ ನನ್ನಿಂದ ಒಂದು ಮಾತು ಬಂದಿತು, "ಸರ್, ನಿಮ್ ಜೊತೆ ಆಕ್ಟ್ ಮಾಡ್ಬೇಕು ಅನ್ನಿಸ್ತಿದೆ." ಮರುಯೋಚಿಸದೆ ಅವರು, "ಹು! ಖಂಡಿತ ಮಾಡೋಣ," ಎಂದುಬಿಟ್ಟರು! ಏನೂ ಅರ್ಥವಾಗದೆ ಅವರ ಮುಖ ನೋಡಿದೆ. ಆಗ ಅವರು ನನ್ನ ಕಣ್ಣಲ್ಲಿ ಕಣ್ಣಿಟ್ಟು ಖಚಿತ ಎಂಬಂತೆ, "ಮಾಡೋಣ, ಗ್ಯಾರಂಟಿ ಮಾಡೋಣ,” ಎಂದರು. ಆ ಕ್ಷಣ ನನಗೆ ಆಶ್ಚರ್ಯ, ಖುಷಿ ಆಗುವ ಬದಲು ಏನೂ ಅರ್ಥವಾಗಲಿಲ್ಲ! ಸುಮ್ಮನೆ ನಿಂತೆ. ಮಳೆ ಹನಿಗರೆಲಾರಂಭಿಸಿತ್ತು. ಜೋರು ಗಾಳಿ ಹೊತ್ತು ತರುತ್ತಿದ್ದ ಸಮುದ್ರದ ಉಪ್ಪುನೀರಿಗೂ, ಮೇಲಿಂದ ಬೀಳುತ್ತಿದ್ದ ಮಳೆಯ ಹನಿಗೂ ವ್ಯತ್ಯಾಸ ತಿಳಿಯುತ್ತಿರಲಿಲ್ಲ!

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More