ಗೋವಾದಲ್ಲಿ ಸದ್ದು ಮಾಡಿದ ರಾಜಕಾರಣಿಗಳ ಕೃಷಿ ಸವಾಲ್; ಜಮೀನಿಗಿಳಿದ ಜನನಾಯಕರು

ಕೃಷಿ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ದಕ್ಷಿಣ ಗೋವಾದ ಸರ್‌ಪಂಚ್ ಸಿದ್ದೇಶ್ ಭಗತ್ ಕೃಷಿ ಸವಾಲಿನ ಅಭಿಯಾನ ಆರಂಭಿಸಿದ್ದರು. ಈ ಸವಾಲನ್ನು ಸ್ವೀಕರಿಸಿರುವ ಕಾಂಗ್ರೆಸ್ ನಾಯಕ ಅಲೆಕ್ಸೋ ರೆಜಿನಾಲ್ಡೋ, ತಾವೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ

ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಆರಂಭಿಸಿದ ಫಿಟ್ನೆಸ್ ಚಾಲೆಂಜ್‌ಗೆ ಕ್ರಿಕೆಟ್ ತಾರೆಯರು, ಪ್ರಧಾನಿ ನರೇಂದ್ರ ಮೋದಿ, ರಾಜಕೀಯ ನಾಯಕರು, ಚಿತ್ರತಾರೆಯರು ಸೇರಿಕೊಂಡು ಸದ್ದು ಮಾಡಿದ್ದು ಹಳೇ ಸುದ್ದಿ. ಇದೀಗ ಗೋವಾದ ಸರ್‌ಪಂಚ್ ಒಬ್ಬರು ಕರೆನೀಡಿರುವ ಕೃಷಿ ಸವಾಲು ವೈರಲ್ ಆಗತೊಡಗಿದೆ.

ಕೃಷಿ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ದಕ್ಷಿಣ ಗೋವಾದ ಪಂಚಾಯತ್ ಸರ್‌ಪಂಚ್ ಸಿದ್ದೇಶ್ ಭಗತ್ ಕೃಷಿ ಸವಾಲಿನ ಅಭಿಯಾನ ಆರಂಭಿಸಿದ್ದಾರೆ. ಈ ಸವಾಲನ್ನು ಸ್ವೀಕರಿಸಿರುವ ಕಾಂಗ್ರೆಸ್ ನಾಯಕ ಅಲೆಕ್ಸೋ ರೆಜಿನಾಲ್ಡೋ ಲೌರೆಂಕಾ, ಕೃಷಿಕರೊಂದಿಗೆ ತಾವೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು, ಕೃಷಿ ಸವಾಲನ್ನು ಸ್ವೀಕರಿಸಿರುವ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಲೆಕ್ಸೋ, “ನಾನು ಕೃಷಿ ಸವಾಲನ್ನು ಸ್ವೀಕರಿಸಿದ್ದೇನೆ. ನನ್ನ ಹೃದಯ ಯಾವಾಗಲೂ ರೈತರಿಗಾಗಿ ಮಿಡಿಯುತ್ತದೆ. ರೈತರು ನನ್ನ ಕುಟುಂಬ ಸದಸ್ಯರು,” ಎಂದಿದ್ದಾರೆ. ಸವಾಲು ಸ್ವೀಕರಿಸಿ ಹೊಲದಲ್ಲಿ ಕೆಲಸ ಮಾಡಿರುವ ರೊಡ್ರಿಗೋ, ಇದೀಗ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಲುಯಿಝಿನ್ಹೊ ಫಲೀರೋ ಅವರಿಗೆ ಕೃಷಿ ಸವಾಲನ್ನು ವರ್ಗಾಯಿಸಿದ್ದಾರೆ.

ಈ ನಡುವೆ, ರೈತರ ಹೊಲದಲ್ಲಿ ಗಿಡ ನೆಡುವ ಕಾಯಕದಲ್ಲಿ ತೊಡಗಿದ್ದ ಗೋವಾದ ಕೃಷಿ ಸಚಿವ ವಿಜಯ್ ಸರ್ ದೇಸಾಯಿಯವರನ್ನು ಮಾತಿಗೆಳೆದ ಮಾಧ್ಯಮಗಳು, “ನೀವು ಕೂಡ ಕೃಷಿ ಸವಾಲು ಸ್ವೀಕರಿಸಿದ್ದೀರಾ?” ಎಂದು ಪ್ರಶ್ನಿಸಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಜಯ್ ಸರ್ದೇಸಾಯಿ, “ಸವಾಲಿಗೂ, ನಾನು ಮಾಡುತ್ತಿರುವ ನಾಟಿ ಕೆಲಸಕ್ಕೂ ಸಂಬಂಧವಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ. “ಬರಡು ಬಿದ್ದಿರುವ ಭೂಮಿಯಲ್ಲಿ ಕೃಷಿ ಮಾಡುವುದು ನಿಜವಾದ ಸವಾಲು. ಹದವಾಗಿರುವ ಭೂಮಿಯಲ್ಲಿ ಕೃಷಿ ಮಾಡುವುದನ್ನು ಸವಾಲು ಎನ್ನಲಾಗುವುದಿಲ್ಲ,” ಎಂದು ಪ್ರತಿಸವಾಲು ಹಾಕಿದ್ದಾರೆ.

ಈ ಸಂದರ್ಭವನ್ನು ಬಳಸಿಕೊಂಡು ಅವರು ರೈತರಿಗೆ ಗೋವಾ ಸರ್ಕಾರ ನೀಡುತ್ತಿರುವ ಪ್ರೋತ್ಸಾಹದ ಬಗ್ಗೆ ವಿವರ ನೀಡಿದ್ದಾರೆ. “ವ್ಯವಸಾಯದಲ್ಲಿ ಯಂತ್ರೋಪಕರಣಗಳ ಬಳಕೆಗೆ ಉತ್ತೇಜನ ನೀಡುವುದು ಮತ್ತು ಯುವಜನರನ್ನು ಕೃಷಿಯತ್ತ ಆಕರ್ಷಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಅಷ್ಟೇ ಅಲ್ಲದೆ, ಪ್ರತಿ ಎಕರೆಗೆ ಪ್ರೋತ್ಸಾಹ ಧನವಾಗಿ 19 ಸಾವಿರದ 500 ರುಪಾಯಿ ಆರ್ಥಿಕ ನೆರವು ನೀಡುತ್ತಿದೆ,” ಎಂದಿದ್ದಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More