ರೈತರ ಸಾಲ ಮನ್ನಾ ಎಂಬ ಕಣ್ಕಟ್ಟು ಮತ್ತು ಅದರ ಹಿಂಬದಿಯ ಕೆಲವು ರಹಸ್ಯಗಳು

ಕೃಷಿ ಸಾಲ ಮನ್ನಾ ಘೋಷಣೆ ಮಾಡುವಾಗ, “ಚಾಲ್ತಿ ಬೆಳೆ ಸಾಲ ಮತ್ತು ಮಧ್ಯಮಾವಧಿ, ದೀರ್ಘಾವಧಿ ಸಾಲ ಮನ್ನಾ,” ಎಂದು ಮುಖ್ಯಮಂತ್ರಿ ಎಲ್ಲಿಯೂ ಹೇಳಿಲ್ಲ! ಅಂದರೆ, ನನ್ನ ಒಂದು ಅಂದಾಜು ಲೆಕ್ಕದ ಪ್ರಕಾರ, ಈ ಮನ್ನಾ ಮೊತ್ತ 10ರಿಂದ 11 ಸಾವಿರ ಕೋಟಿ ರುಪಾಯಿಗೆ ನಿಲ್ಲಬಹುದಷ್ಟೆ!

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರಕಟಿಸಿದ 34 ಸಾವಿರ ಕೋಟಿ ಸಾಲಮನ್ನಾ ಘೋಷಣೆ ಅದ್ಭುತ ಪ್ರತಿಕ್ರಿಯೆಗಳನ್ನು ಹೊತ್ತುತಂದಿದೆ. ಇದರೊಂದಿಗೆ, ಬಾಲಂಗೋಚಿಯಾಗಿ ಅವರು ಸಕಾಲದಲ್ಲಿ ಮರುಪಾವತಿ ಮಾಡಿದವರಿಗೆ ತಲಾ 25 ಸಾವಿರ ರುಪಾಯಿ ಪ್ರೊತ್ಸಾಹ ಧನ ಘೋಷಿಸಿದ್ದಾರೆ. ಇದರಲ್ಲಿ ನಿಜವಾದ ಅಸಲಿಯತ್ತು ಅಡಗಿದೆ.

ಕುಮಾರಸ್ವಾಮಿಯವರು ಹೇಳಿದ್ದು, 'ಸುಸ್ತಿಯಾಗಿರುವ ಬೆಲೆ ಸಾಲ'ವೇ ಹೊರತು ‘ಚಾಲ್ತಿ ಬೆಳೆ ಸಾಲ’ ಅಲ್ಲ! ನನ್ನ ಸ್ವಾನುಭವದಲ್ಲಿ ಈ ಬೆಳೆ ಸಾಲದ ಗಿರಕಿ ಹೇಗಿರುತ್ತದೆ ಎನ್ನುವುದನ್ನು ವಿವರಿಸುತ್ತ ಈ ಸಾಲಮನ್ನಾ ಅಸಲಿಯತ್ತನ್ನು ವಿಶ್ಲೇಷಿಸಲು ಯತ್ನಿಸುತ್ತೇನೆ.

ಬೆಳೆ ಸಾಲವೆಂಬುದು 11 ತಿಂಗಳ ಅವಧಿಯದ್ದು. ಇದನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕವೇ ವಿತರಿಸಲಾಗುತ್ತದೆ ಹಾಗೂ ಪ್ರತಿವರ್ಷ ನವೀಕರಿಸಲಾಗುತ್ತದೆ. 48 ಗಂಟೆಯೊಳಗೆ ನವೀಕರಿಸಬೇಕು ಎಂದು ಸರ್ಕಾರದ ನಿರ್ದೇಶನ ಇದೆ. ಇದನ್ನು ಸಹಕಾರಿ ಸಂಘಗಳಲ್ಲಿ ಆಡಳಿತ ಮಂಡಳಿಯೇ ಮುತುವರ್ಜಿ ವಹಿಸಿ,  ಕಟ್ಟಿದ ಹಾಗೆ ದಾಖಲೆ ತೋರಿಸಿ ನವೀಕರಿಸಿಕೊಡುತ್ತಾರೆ. ಆದ್ದರಿಂದಲೇ ಅಪೆಕ್ಸ್ ಬ್ಯಾಂಕಿನ ದಾಖಲೆ ನೋಡಿದರೆ, ಕಳೆದ ಸಾಲಿನಲ್ಲೂ ಮರುಪಾವತಿ ಪ್ರಮಾಣ ಸುಮಾರು ಶೇಕಡ 95ರಷ್ಟಿದೆ!

ಇನ್ನು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬೆಳೆ ಸಾಲ ಮರುಪಾವತಿ ಆಗದೆ ಹೊಸ ಬೆಳೆ ಸಾಲ ಸಿಗುವುದಿಲ್ಲ.  ಅಷ್ಟೇ ಅಲ್ಲ, ಅದು ನವೀಕರಣವಾಗದಿದ್ದರೆ ರೀಜನಲ್ ಮ್ಯಾನೇಜರ್ ಈ ಬ್ಯಾಂಕ್ ಮ್ಯಾನೇಜರ್‌ನ ಚರ್ಮ ಸುಲಿಯುತ್ತಾನೆ. ಆದ್ದರಿಂದ ಮ್ಯಾನೇಜರ್ ಬೆಳೆ ಸಾಲದ ಸಾಲವನ್ನೂ ಸೇರಿಸಿ ಹೆಚ್ಚಿನ ಮೊತ್ತಕ್ಕೆ ನವೀಕರಿಸಿಕೊಡುತ್ತಾನೆ! ನೆನಪಿಡಿ, ಈ ಇಡೀ ವ್ಯವಹಾರದಲ್ಲಿ ಹಳೆಯ ಬೆಳೆ ಸಾಲದ ಯಾವ ದಾಖಲೆಗಳೂ ಇರುವುದಿಲ್ಲ (ಗೋಲ್ಡ್ ಲೋನ್ ಕೂಡ ಹೀಗೆಯೇ)!

ಆದರೆ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಮಾತ್ರ ಒಂದು ರುಪಾಯಿಯೂ ಮರುಪಾವತಿ ಆಗದೆ ಕೂತಿರುತ್ತದೆ. ಅದಕ್ಕೆ ಕಾಲಾವಧಿ ಇರುವ ಕಾರಣ ಅದು ಬಡ್ಡಿ ಸೇರುತ್ತ ಮುಂದಕ್ಕೆ ಹೋಗುತ್ತದೆ (ಇವಿಷ್ಟೂ ಸ್ವಾನುಭವದಲ್ಲಿ ಕಂಡಿದ್ದು).

ಈ ಬೆಳೆ ಸಾಲ 2 ಲಕ್ಷದವರೆಗೆ ಅಂದರೂ ಬೆಳೆ ಸಾಲ ನಿಗದಿಯಾಗುವುದು ಜಮೀನಿನ ಬೆಳೆಯ ಮಾರುಕಟ್ಟೆ ಮೌಲ್ಯದ ಮೇರೆಗೆ. ಆದ್ದರಿಂದ ಬಹುತೇಕ ಬಯಲುಸೀಮೆ ರೈತರ ಬೆಳೆ ಸಾಲ ಎಕರೆಗೆ 20 ಸಾವಿರ ರುಪಾಯಿ ಮೀರದು. ಅಂದರೆ, ಒಟ್ಟಾರೆ ಸಾಲ ಸರಾಸರಿ ಲೆಕ್ಕದಲ್ಲಿ ಪ್ರತಿ ರೈತನಿಗೆ 50 ಸಾವಿರ ರುಪಾಯಿ ಮೀರದು. ಎಕರೆಗೆ ಲಕ್ಷ ಮೀರಿದ ಅಸೆಸ್ಮೆಂಟ್ ಇರುವುದು ವಾಣಿಜ್ಯ ಬೆಳೆ ಬೆಳೆಯುವ ರೈತರಿಗೆ ಮಾತ್ರ.

ಅಂದರೆ, ಕುಮಾರಸ್ವಾಮಿಯವರ ಸಾಲ ಮನ್ನಾ 'ಸುಸ್ತಿ ಬೆಳೆ ಸಾಲ’ಕ್ಕೇ ಹೌದೆಂದಾದರೆ ಅದು ಅದ್ಭುತ ಆರ್ಥಿಕ ನುಡಿಗಟ್ಟಿನ ಮಾಯಾಜಾಲ. ನಿಜಕ್ಕೂ ಬೀಳುವ ಹೊರೆ ಅಲ್ಲ! ಆದರೆ, ರೈತರು “ಅರೆ! ಇದೇನು ಮೋಸ?” ಎಂದು ಗೊಣಗದ ಹಾಗೆ, "ಸಕಾಲದಲ್ಲಿ ಮರುಪಾವತಿ ಮಾಡಿರುವ ರೈತರಿಗೆ 25 ಸಾವಿರ ರುಪಾಯಿ ಪ್ರೋತ್ಸಾಹಧನ,” ಎನ್ನುವುದಿದೆಯಲ್ಲ, ಅದು ರಿಯಲ್! ಬಡ್ಡಿದರ ಶೂನ್ಯವಾಗಿರುವ ಕಾರಣ ಈ 25 ಸಾವಿರವೂ ಬೋನಸ್ ಎಂದು ರೈತ ತೃಪ್ತಿಗೊಳ್ಳುತ್ತಾನೆ.

“ಚಾಲ್ತಿ ಬೆಳೆ ಸಾಲ ಮತ್ತು ಮಧ್ಯಮಾವಧಿ, ದೀರ್ಘಾವಧಿ ಸಾಲ,”  ಮನ್ನಾ ಎಂದು ಕುಮಾರಸ್ವಾಮಿಯವರು ಎಲ್ಲಿಯೂ ಹೇಳಿಲ್ಲ! ಅಂದರೆ, ನನ್ನ ಒಂದು ಅಂದಾಜು ಲೆಕ್ಕ ಪ್ರಕಾರ, ಈ ಮನ್ನಾ ಮೊತ್ತ 10ರಿಂದ 11 ಸಾವಿರ ಕೋಟಿ ರುಪಾಯಿಗೆ ನಿಲ್ಲಬಹುದು!

ಇದನ್ನೂ ಓದಿ : ಸಂಕಲನ | ರಾಜ್ಯ ರೈತರ ಸಾಲಮನ್ನಾ ವಿವಿಧ ಆಯಾಮಗಳ ವಿಶ್ಲೇಷಣಾ ಲೇಖನಗಳು

ಈಗಾಗಲೇ ಸಾಲದ ಸುಳಿಯಲ್ಲಿರುವ ಸರ್ಕಾರಕ್ಕೆ ಈ ಮೊತ್ತವೂ ಹೊರೆಯೇ. ಆದರೆ, 34 ಸಾವಿರ ಕೋಟಿ  ಎಂಬುದು ಘೋಷಣೆ ಮಾತ್ರ! ಅದು ತೆಗೆದಿಟ್ಟ ಹುಂಡಿ ಮೊತ್ತವೇ ಹೊರತು, ಅಷ್ಟನ್ನೂ ಖರ್ಚು ಮಾಡಬೇಕಾದ ಕಡ್ಡಾಯ ಮೊತ್ತವಲ್ಲವೇ ಅಲ್ಲ!

ಅಂದರೆ, ಹೆಚ್ಚಿನ ರೈತರು ಅವಧಿಯೊಳಗೆ ಬೆಳೆ ಸಾಲ ಮರುಪಾವತಿ ಮಾಡಿರುವಂತೆ ದಾಖಲೆ ಸೃಷ್ಟಿಸಿರುವ ಕಾರಣ, ಈ 25 ಸಾವಿರ ರೈತರಿಗೆ ದಕ್ಕೀತು. ಉಳಿದಂತೆ ಚಾಲ್ತಿ ಬೆಳೆ ಸಾಲ, ಸುಸ್ತಿಯಾಗಿರುವ ಮಧ್ಯಮಾವಧಿ, ದೀರ್ಘಾವಧಿ ಸಾಲಗಳೆಂಬ ತ್ರಿಶೂಲದ ಮೂರು ಮೊನೆಗಳಿಂದ ರೈತನಿಗೆ ಮುಕ್ತಿ ದೊರಕುವುದು ಕಷ್ಟ!

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More