ವಿಜಯಪುರದ ಭೀಮು ಪಾಟೀಲ್‌ಗೆ ಅಂತಾರಾಷ್ಟ್ರೀಯ ತೋಟಗಾರಿಕಾ ಸಂಸ್ಥೆಯ ಮಹತ್ವದ ಹುದ್ದೆ

ವಿಜಯಪುರ ಜಿಲ್ಲೆಯವರಾದ, ಸದ್ಯ ಅಮೆರಿಕದಲ್ಲಿರುವ ಕೃಷಿ ವಿಜ್ಞಾನಿ ಭೀಮು ಪಾಟೀಲ್‌ ಬೆಲ್ಜಿಯಂನಲ್ಲಿರುವ ಐಎಸ್‌ಎಚ್‌ಎಸ್‌ನ ಅಂತಾರಾಷ್ಟ್ರೀಯ ತೋಟಗಾರಿಕೆ ವಿಭಾಗದ ಮುಖ್ಯಸ್ಥರಾಗಿ ಆಯ್ಕೆ ಆಗಿದ್ದಾರೆ. ಆ.೧೬ರಂದು ಅಧಿಕಾರ ಸ್ವೀಕರಿಸಲಿರುವ ಅವರು ೪ ವರ್ಷ ಮುಖ್ಯಸ್ಥರಾಗಿರಲಿದ್ದಾರೆ

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಡಂಬಳದ ಭೀಮು ಪಾಟೀಲ್ ಅವರು ಬೆಲ್ಜಿಯಂನಲ್ಲಿ ಪ್ರಧಾನ ಕಚೇರಿ ಹೊಂದಿರುವ ಅಂತಾರಾಷ್ಟ್ರೀಯ ತೋಟಗಾರಿಕಾ ವಿಜ್ಞಾನ ಸೊಸೈಟಿಯಲ್ಲಿನ (ಐಎಸ್‌ಎಚ್‌ಎಸ್‌) ‘ಮಾನವ ಆರೋಗ್ಯಕ್ಕಾಗಿ ತೋಟಗಾರಿಕೆ’ ಎಂಬ ವಿಭಾಗದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಆರೋಗ್ಯ ಮತ್ತು ಪೌಷ್ಟಿಕತೆಗೆ ಒತ್ತು ನೀಡುವ ಈ ಸಂಸ್ಥೆಯು ಹಲವು ರೀತಿಯ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ತೋಟಗಾರಿಕಾ ಕಾಂಗ್ರೆಸ್‌ ವೇಳೆ ಆಗಸ್ಟ್‌ ೧೬ರಂದು ಅವರು ಔಪಚಾರಿಕವಾಗಿ ಪದಗ್ರಹಣ ಮಾಡಲಿದ್ದಾರೆ. ಭೀಮು ಪಾಟೀಲ್‌ ಅವರು ನಾಲ್ಕು ವರ್ಷ ಐಎಸ್‌ಎಚ್‌ಎಸ್‌ ಮಾನವ ಆರೋಗ್ಯಕ್ಕೆ ತೋಟಗಾರಿಕೆ ವಿಭಾಗದ ಮುಖ್ಯಸ್ಥರಾಗಿರಲಿದ್ದಾರೆ.

ಅಮೆರಿಕದಲ್ಲಿ ನೆಲೆಸಿರುವ ಭೀಮು ಪಾಟೀಲ್‌ ಅವರು ಸದ್ಯ ಟೆಕ್ಸಾಸ್‌ನ ಎ ಅಂಡ್‌ ಎಂ ವಿಶ್ವವಿದ್ಯಾಲಯದಲ್ಲಿ ತರಕಾರಿ ಮತ್ತು ಹಣ್ಣು ಸುಧಾರಣಾ ಕೇಂದ್ರದ ಮುಖ್ಯಸ್ಥರಾಗಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಪದವಿ ಪೂರೈಸಿರುವ ಅವರು ಅಲ್ಲಿಯೇ ಕೆಲ ಕಾಲ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ೧೯೯೧ರಲ್ಲಿ ಅಮೆರಿಕಾಕ್ಕೆ ತಮ್ಮ ನೆಲೆ ಬದಲಿಸಿದ ಅವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭೀಮು ಪಾಟೀಲ್‌ ಅವರ ಸಾಧನೆ ಗುರುತಿಸಿ ಕರ್ನಾಟಕ ಸರ್ಕಾರವು ಧರ್ಮಸಿಂಗ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಐಎಸ್‌ಎಚ್‌ಎಸ್‌ನಲ್ಲಿ ಮಾನವ ಆರೋಗ್ಯಕ್ಕೆ ತೋಟಗಾರಿಕೆ ವಿಭಾಗವನ್ನು ಈಚೆಗೆ ಹುಟ್ಟುಹಾಕಲಾಗಿದೆ. ೧೩೫ ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಐಎಸ್‌ಎಚ್‌ಎಸ್‌ನಲ್ಲಿ ೬೮೬೨ ಸದಸ್ಯರಿದ್ದು, ಕಾರ್ಯಕಾರಿ ಮಂಡಳಿಯಲ್ಲಿ ೧,೪೪೮ ಮಂದಿಯಿದ್ದಾರೆ. ಸಂಸ್ಥೆಯ ಕಾರ್ಯಕಾರಿ ಸದಸ್ಯರಾದ ಭೀಮು ಪಾಟೀಲ್ ಅವರು ಆರೋಗ್ಯಕ್ಕೆ ತೋಟಗಾರಿಕೆ ವಿಭಾಗ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ವೈಜ್ಞಾನಿಕ ಬೆಳವಣಿಗೆಯ ಸಹಾಯದಿಂದ ಮನುಷ್ಯನ ಆರೋಗ್ಯ ಸುಧಾರಣೆಗೆ ನೆರವಾಗುವ ಗುರಿಯನ್ನು ಐಎಸ್‌ಎಚ್‌ಎಸ್‌ ಹೊಂದಿದೆ. ಐಎಸ್‌ಎಚ್‌ಎಸ್‌ಗೆ ಆಯ್ಕೆಗೆ ಸಂಬಂಧಿಸಿದಂತೆ ‘ದಿ ಸ್ಟೇಟ್‌’ಗೆ ಪ್ರತಿಕ್ರಿಯಿಸಿರುವ ಭೀಮು ಪಾಟೀಲ್‌ ಅವರು “ಆಹಾರ ವ್ಯರ್ಥ ಮಾಡುವುದನ್ನು ತಡೆಯಬೇಕು. ಇದರ ಜೊತೆಗೆ ಪೌಷ್ಟಿಕ ಅಂಶಗಳು ಇರುವ ತರಕಾರಿ ಮತ್ತು ಹಣ್ಣನ್ನು ತಿನ್ನಲು ಜನರನ್ನು ಪ್ರೇರೇಪಿಸಬೇಕು. ಆರೋಗ್ಯವಂತ ಮನುಷ್ಯನೊಬ್ಬ ದಿನಕ್ಕೆ ಕನಿಷ್ಠ ೬೦೦ ಗ್ರಾಂನಷ್ಟು ಹಣ್ಣು, ತರಕಾರಿ ತಿನ್ನಬೇಕು,” ಎನ್ನುತ್ತಾರೆ.

ಇದನ್ನೂ ಓದಿ : ಕರ್ನಾಟಕದಲ್ಲೂ ಜಾರಿಗೆ ಬರಲಿದೆಯೇ ಆಂಧ್ರದ ಶೂನ್ಯ ಬಂಡವಾಳ ಕೃಷಿ ಮಾದರಿ?

“ಹಣ್ಣು ಮತ್ತು ತರಕಾರಿಯನ್ನು ನಿಯಮಿತವಾಗಿ ತಿನ್ನುವುದರಿಂದ ಬಹುತೇಕ ರೋಗಗಳನ್ನು ದೂರವಿಡಬಹುದು. ಭಾರತದಲ್ಲಿ ಈ ಬಗ್ಗೆ ಗಂಭೀರ ಚಿಂತನೆ ನಡೆಯುವ ಅಗತ್ಯವಿದೆ. ಆಹಾರ ಭದ್ರತಾ ಕಾಯ್ದೆಗಿಂತ ಪೌಷ್ಟಿಕ ಆಹಾರ ಪೂರೈಸುವ ಭದ್ರತೆಯನ್ನು ಸರ್ಕಾರಗಳು ನೀಡಲು ಮುಂದಾಗಬೇಕು,” ಎಂದು ಹೇಳಿದ್ದಾರೆ.

“ಭಾರತದಲ್ಲಿ ರೈತರು ತಾವು ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ತಿನ್ನುವ ಸ್ಥಿತಿಯಿಲ್ಲ ಎಂಬುದನ್ನು ಗ್ರಾಮೀಣ ಪ್ರದೇಶದಿಂದ ಬೆಳೆದುಬಂದ ನಾನು ಕಣ್ಣಾರೆ ಕಂಡಿದ್ದೇನೆ. ಈಗಲೂ ಅಲ್ಲಿನ ಸ್ಥಿತಿ ಬದಲಾಗಿದೆ. ಇದೇ ಸ್ಥಿತಿ ಹಲವು ರಾಷ್ಟ್ರಗಳಲ್ಲಿದೆ. ಈ ಸ್ಥಿತಿ ಬದಲಾಗಬೇಕಾದರೆ ಕೃಷಿ ವಿಶ್ವವಿದ್ಯಾಲಯಗಳು ವೈದ್ಯಕೀಯ ವಿಶ್ವವಿದ್ಯಾಲಯಗಳ ಜೊತೆ ಸೇರಿ ಸಂಶೋಧನೆಗೆ ಆದ್ಯತೆ ನೀಡಬೇಕು. ಯಾವ ಪದಾರ್ಥ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಜನರಿಗೆ ತಿಳಿಸುವ ಕೆಲಸವಾಗಬೇಕು. ಹೀಗೆ ಮಾಡುವುದರಿಂದ ರೋಗ ತಡೆಯಬಹುದು. ಸರ್ಕಾರದಿಂದ ಆರೋಗ್ಯ ವಿಭಾಗಕ್ಕೆ ವೆಚ್ಚ ಮಾಡುವ ಹಣದಲ್ಲೂ ಕಡಿತವಾಗುತ್ತದೆ,” ಎನ್ನುತ್ತಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More