ಗ್ರಾಮ ವಾಸ್ತವ್ಯ | ವಿಮಾನಗಳ ನೆರಳಲ್ಲಿ ಉಸಿರಾಡುವ ಕೊಳಂಬೆ ಜನರ ಕನಸು, ಕನವರಿಕೆ

ಹಳ್ಳಿಗರು ‘ದಿ ಸ್ಟೇಟ್‌’ ಜತೆ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿರುವಂತೆ ಆಗಸದಲ್ಲಿ ಲೋಹದ ಹಕ್ಕಿಯೊಂದು ಹಾರಿ ಹೋದ ಸದ್ದು. “ವಿಮಾನಗಳನ್ನು ನೋಡಿದಾಗ ಏನನ್ನಿಸುತ್ತದೆ?” ಎಂಬ ಪ್ರಶ್ನೆಗೆ ಹಳ್ಳಿಗರ ಉತ್ತರದಲ್ಲಿ ಗ್ರಾಮಭಾರತದ ಮುಗ್ಧತೆ, ಅಸಹಾಯಕ ಸ್ಥಿತಿ ಎಲ್ಲವೂ ಕಂಡುಬಂತು

“ಏರ್‌ಪೋರ್ಟ್‌ನಲ್ಲಿ ಮತ್ತೊಂದು ಅವಘಡ ನಡೆದರೆ ನಾವು ಪುನಃ ಎತ್ತಂಗಡಿಯಾಗುವುದು ಗ್ಯಾರಂಟಿ...” ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪುನರ್ವಸತಿ ಕಾಲನಿಗಳಾದ ಕೊಳಂಬೆ ಗ್ರಾಮದ ಸೌಹಾರ್ದ ನಗರ, ಸಿದ್ಧಾರ್ಥ ನಗರಗಳ ಬಹುತೇಕ ಹಳ್ಳಿಗರ ಆತಂಕದ ಮಾತುಗಳಿವು.

2010ರ ಮೇ 22ರಂದು ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ 152 ಮಂದಿ ಮೃತಪಟ್ಟ ದುರಂತದ ಬಳಿಕ ರನ್‌ವೇ ಸ್ಥಳವನ್ನು ಬದಲಿಸಲು ಮತ್ತು ವಿಮಾನ ನಿಲ್ದಾಣದ ಪ್ರದೇಶವನ್ನು ವಿಸ್ತರಿಸಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಚಿಂತಿಸುತ್ತಿದೆ ಎಂಬ ಮಾತು ಹಳ್ಳಿಗರನ್ನು ಮತ್ತೆ ಚಿಂತೆಗೆ ದೂಡಿದೆ.

1989ರ ಸುಮಾರಿಗೆ ವಿಮಾನ ನಿಲ್ದಾಣ ನಿರ್ಮಿಸುವ ಉದ್ದೇಶದಿಂದ ಮೊದಲ ಬಾರಿಗೆ ಅದ್ಯಪ್ಪಾಡಿ, ಮರವೂರು ಹಾಗೂ ಕೊಳಂಬೆ ಗ್ರಾಮಗಳ ಜನರನ್ನು ಒಕ್ಕಲೆಬ್ಬಿಸುವ ಕಾರ್ಯ ಆರಂಭವಾಯಿತು. ಅವರನ್ನು ವಿಮಾನ ನಿಲ್ದಾಣದ ಮತ್ತೊಂದು ಬದಿಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ಇದರೊಂದಿಗೆ ಕೆಲವು ಗೊಂದಲಗಳೂ ಎದ್ದವು. ಭೂಮಿ ಸ್ವಾಧೀನಪಡಿಸಿಕೊಳ್ಳುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿತ್ತು. ಪುನರ್ವಸತಿ ಕಲ್ಪಿಸುವ ಹೊಣೆ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿತ್ತು. ಭೂಮಿ ಕಳೆದುಕೊಂಡ ಅನೇಕರಿಗೆ ಯಾರಲ್ಲಿ ಪರಿಹಾರ ಕೇಳಬೇಕೆಂಬ ಗೊಂದಲ. ಇದರ ಮಧ್ಯೆ, ಪ್ರಾಧಿಕಾರ ಸ್ಥಳ ತೊರೆಯುವಂತೆ ಮನೆಗಳಿಗೆ ನೋಟಿಸ್ ಹಚ್ಚುತ್ತಿತ್ತು. ಸಹಜವಾಗಿಯೇ ಗ್ರಾಮಸ್ಥರು ಮತ್ತು ಸರ್ಕಾರದ ನಡುವೆ ಸಂಘರ್ಷ ಏರ್ಪಟ್ಟಿತು. ಆ ಸುಮಾರಿಗೆ ಕೊಜೆಂಟ್ರಿಕ್ಸ್ ಹೋರಾಟದಲ್ಲಿ ಪಾಲ್ಗೊಂಡಿದ್ದ ಮೇಧಾ ಪಾಟ್ಕರ್ ರೀತಿಯ ಹೋರಾಟಗಾರರು, ಉಡುಪಿಯ ಪರಿಸರ ಒಕ್ಕೂಟದ ಅನೇಕರು, ಸ್ಥಳೀಯ ಸಂಘಟನೆಗಳು ನಿರಾಶ್ರಿತರ ಪರವಾಗಿ ಧ್ವನಿ ಎತ್ತಿದವು.

ಕೆಲವರು ಬೇರೆ ದಾರಿ ಕಾಣದೆ ಪುನರ್ವಸತಿ ಕಾಲನಿಗಳತ್ತ ಮುಖ ಮಾಡಿದರು. ಹೊಸ ಜಾಗದಲ್ಲಿ ಹೊಸ ಬದುಕು ಆರಂಭವಾಯಿತು. ಹಣ ಹಾಗೂ ನಿವೇಶನದ ರೂಪದಲ್ಲಿ ದೊರೆತ ಪರಿಹಾರ ಕೆಲವರಿಗೆ ಅನುಕೂಲ ಕಲ್ಪಿಸಿತು. ಆದರೆ, ಅರ್ಹ ವಿದ್ಯಾರ್ಹತೆ ಹೊಂದಿದ್ದವರಿಗೆ ಪ್ರಾಧಿಕಾರದಿಂದ ಸೂಕ್ತ ಉದ್ಯೋಗ ದೊರೆಯಲಿಲ್ಲ. ಕೃಷಿಭೂಮಿ ಕಳೆದುಕೊಂಡ ಅನೇಕರು ಹೊಸ ಜಾಗದಲ್ಲಿ ಬೇಸಾಯ ಮಾಡಲು ಮುಂದಾಗಲಿಲ್ಲ. ಕೆಲವರು ಹೊಸ ವೃತ್ತಿಗಳನ್ನು ಅರಸಿ ಹೋದರು. “ಸರ್ಕಾರಿ ಉದ್ಯೋಗ ದೊರಕಿಸಿಕೊಡಬೇಕೆಂಬ ಸಲಹೆ ಪ್ಯಾಕೇಜ್‌ನಲ್ಲಿದೆಯೇ ಹೊರತು ಅದು ಸರ್ಕಾರದ ಆದೇಶವೇನೂ ಆಗಿಲ್ಲ. ಇದು ಪುನರ್ವಸತಿಗರ ಪಾಲಿಗೆ ಬಹಳಷ್ಟು ಅನ್ಯಾಯ ಮಾಡಿತು,” ಎನ್ನುವವರಿದ್ದಾರೆ. ಭೂಮಿ ಸರ್ವೆ ಮಾಡುವಾಗಲೂ ನ್ಯಾಯ ದೊರಕಿಲ್ಲ. ಯಾರದೋ ಭೂಮಿಗೆ ಮತ್ತಾರೋ ಪರಿಹಾರ ಪಡೆದಿದ್ದಾರೆ. ಕಡಿಮೆ ಭೂಮಿ ಇದ್ದವರಿಗೆ ಹೆಚ್ಚು ಪರಿಹಾರ, ಹೆಚ್ಚು ಭೂಮಿ ಇದ್ದವರಿಗೆ ಕಡಿಮೆ ಪರಿಹಾರದಂತಹ ಎಡವಟ್ಟುಗಳೂ ಆಗಿವೆಯಂತೆ. ಕೆಲ ಪ್ರಕರಣಗಳಲ್ಲಿ ಇದು ಹಳ್ಳಿಗರ ನಡುವೆಯೇ ವೈಮನಸ್ಯಕ್ಕೂ ಕಾರಣವಾಗಿದೆ. ಸೌಹಾರ್ದ ನಗರದಲ್ಲಿ ರಸ್ತೆ, ಬಸ್ ವ್ಯವಸ್ಥೆ, ಶಾಲೆ, ಚರಂಡಿ ನೀರಿನ ವ್ಯವಸ್ಥೆ ಮುಂತಾದ ಮೂಲಸೌಕರ್ಯಗಳಿಲ್ಲ. ಒಂದೆಡೆ, ನಾಗರಿಕತೆಯ ಅತ್ಯುನ್ನತ ಸಂಚಾರ ವ್ಯವಸ್ಥೆಯಾದ ವಿಮಾನ ನಿಲ್ದಾಣ. ಮತ್ತೊಂದೆಡೆ, ಅದೇ ನಾಗರಿಕತೆಯ ಉಚ್ಛ್ರಾಯ ಸ್ಥಿತಿ ಈ ಹಳ್ಳಿಗರ ಪುಟ್ಟ ಪುಟ್ಟ ಕನಸುಗಳತ್ತ ತಿರುಗಿಯೂ ನೋಡದ ಸ್ಥಿತಿ!

ಈಗ ಹೊಸ ಕಾಲನಿಯಾಗಿರುವ ಪ್ರದೇಶದಲ್ಲಿಯೇ ನಿಜವಾಗಿಯೂ ರನ್‌ವೇ ಇರಬೇಕಿತ್ತಂತೆ. ಆದರೆ, ಸ್ಥಳೀಯ ರಾಜಕಾರಣಿಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಕಾರಣಕ್ಕಾಗಿ ಅದ್ಯಪ್ಪಾಡಿ ಸುತ್ತಮುತ್ತ ಇರುವ ಬಡವರನ್ನು, ಶೋಷಿತ ಸಮುದಾಯಗಳನ್ನು ಒಕ್ಕಲೆಬ್ಬಿಸಲಾಯಿತು ಎಂಬ ಮಾತುಗಳು ಗ್ರಾಮಸ್ಥರಿಂದ ಕೇಳಿಬಂದವು. “ಮತ್ತೆ ವಿಸ್ತರಣೆ ನಡೆದರೆ ಇಲ್ಲಿನವರು ಮುಚ್ಚೂರು ಸುತ್ತಮುತ್ತಲಿನ ಪ್ರದೇಶಗಳಿಗೆ ಸ್ಥಳಾಂತರವಾಗಬೇಕಾದ ಸ್ಥಿತಿ ಇದೆ. ಸರ್ಕಾರದವರು ಇನ್ನೂ ಅಧಿಕೃತವಾಗಿ ಹೇಳಿಲ್ಲ. ಈ ಬಗ್ಗೆ ಸೂಚನೆ ಸಿಕ್ಕಿದೆ,” ಎನ್ನುತ್ತಾರೆ ಜಯಂತ್ ಮಾಸ್ತರ್.

ಆದರೆ, ಹಳ್ಳಿಗರು ಆತಂಕಪಡುವ ಸ್ಥಿತಿಯೇನೂ ಇಲ್ಲ ಎನ್ನುತ್ತಾರೆ ಕೆಲವರು. ದಲಿತ ಸಂಘರ್ಷ ಸಮಿತಿಯ ಹೋರಾಟಗಾರರಾದ ಸಿದ್ಧಾರ್ಥ ನಗರದ ದೇವದಾಸ್, “ಒಮ್ಮೆ ಒಕ್ಕಲೆಬ್ಬಿಸಿದ ಜನರನ್ನು ಮತ್ತೆ ಸ್ಥಳಾಂತರ ಮಾಡುವುದು ಸುಲಭವಲ್ಲ. ಅದಕ್ಕೆ ಕಾನೂನು ಕೂಡ ಅವಕಾಶ ಮಾಡಿಕೊಡುವುದಿಲ್ಲ. ಹಾಗೊಂದು ವೇಳೆ ನಡೆದರೆ ಈ ಹಿಂದಿಗಿಂತಲೂ ತೀವ್ರವಾಗಿ ಹೋರಾಟ ಮಾಡುತ್ತೇವೆ,” ಎನ್ನುತ್ತಾರೆ.

ಮಳೆಗಾಲದಲ್ಲಿ ವಿಮಾನ ನಿಲ್ದಾಣ ಮತ್ತೊಂದು ಸಮಸ್ಯೆ ತಂದೊಡ್ಡುತ್ತಿದೆ. ಬಜ್ಪೆ ವಿಮಾನ ನಿಲ್ದಾಣ ಗುಡ್ಡದ ಸಮತಟ್ಟು ಪ್ರದೇಶದಲ್ಲಿದೆ. ಮೊದಲೆಲ್ಲ ಆ ಗುಡ್ಡದಿಂದ ಹರಿಯುವ ಮಳೆನೀರು ವಿವಿಧ ದಿಕ್ಕುಗಳಿಗೆ ಸಹಜವಾಗಿ ಹರಿದುಹೋಗುತ್ತಿತ್ತು. ಆದರೆ ವಿಮಾನ ನಿಲ್ದಾಣ ನಿರ್ಮಾಣವಾದ ಬಳಿಕ ಪ್ರಾಧಿಕಾರವು ಗುಡ್ಡದಿಂದ ಹರಿಯುವ ನೀರನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು. ಏರ್‌ಪೋರ್ಟ್ ಬುಡದಲ್ಲಿರುವ ತಳಕಳ- ಕೊಳಂಬೆ ಗ್ರಾಮದ ಸುತ್ತ ಓಡಾಡಿದಾಗ ಗದ್ದೆಗಳ ಮೇಲೆ ಅಡ್ಡಾದಿಡ್ಡಿಯಾಗಿ ಹರಿದಿದ್ದ ನೀರು, ಕುಸಿದ ಮಣ್ಣು ಅವರ ಮಾತುಗಳನ್ನು ಪುಷ್ಟೀಕರಿಸುವಂತಿತ್ತು.

ಇದನ್ನೂ ಓದಿ : ಗ್ರಾಮ ವಾಸ್ತವ್ಯ | ಪ್ರಧಾನಿ ಮೋದಿಗೆ ಪತ್ರ ಬರೆದರೂ ಬದಲಾಗದ ಮೇಘಾನೆ ಬದುಕು

ಸೌಹಾರ್ದ ನಗರ, ಸಿದ್ಧಾರ್ಥ ನಗರಗಳಿಗೆ ಹೋಲಿಸಿದರೆ ಕೊಳಂಬೆ ಗ್ರಾಮ ಹಳ್ಳಿತನವನ್ನು ಇನ್ನೂ ಬಿಟ್ಟುಕೊಟ್ಟಿಲ್ಲ. ಬ್ರಾಹ್ಮಣರು, ಬಿಲ್ಲವರ ಮನೆಗಳು, ಕೊರಗರ ಕೇರಿಗಳು ನಡುನಡುವೆ ಗದ್ದೆ ಬಯಲು, ತೋಟ- ತೋಡು ಎಲ್ಲ ಸಿಗುವ ಈ ಊರಿಗೆ ಹಳೆ ಏರ್‌ಪೋರ್ಟ್ ಎದುರಿನ ರಸ್ತೆಯೇ ಸಂಪರ್ಕ ಕೊಂಡಿ. ತಗ್ಗುದಿಣ್ಣೆಗಳಿಂದ ಕೂಡಿದ ಈ ರಸ್ತೆಯು ಸರ್ಕಾರಗಳ ನಡುವಿನ ಸಂವಹನ ಕೊರತೆಯ ಮೂರ್ತರೂಪದಂತೆ ಕಾಣುತ್ತದೆ. ರಾಜ್ಯ ಸರ್ಕಾರವೂ ರಸ್ತೆ ದುರಸ್ತಿಗೊಳಿಸದೆ, ಪ್ರಾಧಿಕಾರವೂ ಅತ್ತ ಗಮನ ಹರಿಸದೆ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಂತೂ ಸಂಚಾರ ಅಸಾಧ್ಯ.

ಇದರ ನಡುವೆ ಮತ್ತೊಂದು ಕೊರತೆಯೂ ಹಳ್ಳಿಯನ್ನು ಕಾಡುತ್ತಿದೆ. ಬಹುತೇಕ ಗ್ರಾಮಗಳಂತೆ ಇಲ್ಲಿಯೂ ಯುವಕರ ಗೈರು ಎದ್ದುಕಾಣುತ್ತದೆ. ಅನೇಕ ಕುಟುಂಬಗಳ ಯುವಕರು ಮಂಗಳೂರು, ಬೆಂಗಳೂರು, ದೂರದ ಮುಂಬೈ, ದುಬೈಗಳಲ್ಲಿ ಉದ್ಯೋಗ ಹಿಡಿದು ಬದುಕುತ್ತಿದ್ದಾರೆ. ಬೇರೆ ಉದ್ಯೋಗ ಮಾಡಲು ಗೊತ್ತಿಲ್ಲದವರು ಕೂಲಿ ಮಾಡಿ ಬದುಕುತ್ತಿದ್ದಾರೆ. ‘ನೇಜಿ’ ನೆಡುತ್ತಲೋ, ಬೀಡಿ ಕಟ್ಟುತ್ತಲೋ ದಿನ ಸವೆಸುತ್ತಿದ್ದಾರೆ.

“ಆ ವಿಮಾನಗಳನ್ನು ನೋಡಿದಾಗ ನಿಮಗೆ ಏನನ್ನಿಸುತ್ತದೆ?” ಈ ಪ್ರಶ್ನೆಗೆ ಹಳ್ಳಿಗರದು ಮುಗ್ಧ ಉತ್ತರ. ಕೆಲವರಿಗೆ ವಿಮಾನಗಳನ್ನು ದಿನವೂ ಕಣ್ತುಂಬಿಕೊಳ್ಳುವ ಖುಷಿ. ಮತ್ತೆ ಕೆಲವರಿಗೆ ಅದರಲ್ಲಿ ಕುಳಿತು ಹಾರಿಬಿಡುವ ಆಸೆ. ಇನ್ನೂ ಕೆಲವರಿಗೆ, "ನಮ್ಮನ್ನು ಹಳ್ಳಕ್ಕೆ ತಳ್ಳಿ ಅವರು ಮೇಲೆ ಹಾರುತ್ತಿದ್ದಾರೆ,” ಎಂಬ ಸಿಟ್ಟು. ಇದೆಲ್ಲದರ ನಡುವೆಯೇ ಮತ್ತೊಂದು ವಿಮಾನ ತನ್ನ ವಿಶಾಲ ರೆಕ್ಕೆಯನ್ನು ಚಾಚುತ್ತ, ಗುಡುಗುಡು ಸದ್ದು ಮಾಡುತ್ತ ಹಾರಿಹೋಯಿತು. ಅದರ ಬಾಲದಲ್ಲಿಯೂ ಮಿಣುಕುವ ಬೆಳಕಿತ್ತು.

ಛಾಯಾಗ್ರಹಣ: ಕೆ ವೆಂಕಟೇಶ್ ನಾಯಕ್

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More