ಭಾರತೀಯರಿಗೆ ಈಗ ಮೊಬೈಲೇ ಟಿವಿ ಆಯ್ತು, ಡಿಜಿಟಲ್ ಜೀವನಶೈಲಿ ಚಟವಾಯ್ತು!

ಇತ್ತೀಚೆಗಿನ ವರ್ಷಗಳಲ್ಲಿ ಭಾರತೀಯರು ಡಿಜಿಟಲ್ ಜೀವನಶೈಲಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಟಿವಿ ಕಾರ್ಯಕ್ರಮಗಳನ್ನು ಆ್ಯಪ್‌ಗಳ ಮೂಲಕ ನೋಡುವುದು ಯುವಜನರಲ್ಲಿ ಸಾಮಾನ್ಯ ಬೆಳವಣಿಗೆಯಾಗಿದೆ. ಡಿಜಿಟಲ್ ಸಾಧನಗಳನ್ನು ಅತಿ ಹೆಚ್ಚು ಬಳಸುವುದೂ ಭಾರತೀಯರೇ!

ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ತೀವ್ರಗತಿಯಲ್ಲಿ ಡಿಜಿಟಲ್ ತಂತ್ರಜ್ಞಾನದ ಅಭಿವೃದ್ಧಿಯಾಗಿದೆ. ಹೀಗಾಗಿ, ಜನಸಾಮಾನ್ಯರ ಡಿಜಿಟಲ್ ಜೀವನಶೈಲಿಯಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಫೋನ್ ಇಲ್ಲದ ಬದುಕು ಯೋಚಿಸುವುದೇ ಸಾಧ್ಯವಿಲ್ಲವೇನೋ ಎಂಬ ಸ್ಥಿತಿ ಜನಸಾಮಾನ್ಯರದ್ದಾಗಿದೆ. ದೇಶದಲ್ಲಿ ಸುಮಾರು ೭೦೦ ದಶಲಕ್ಷಗಳಷ್ಟು ಮಂದಿ ಫೋನ್ ಬಳಸುತ್ತಾರೆ ಮತ್ತು ೩೫೦ ದಶಲಕ್ಷಕ್ಕೂ ಅಧಿಕ ಮಂದಿ ಸ್ಮಾರ್ಟ್‌ಫೋನ್ ಬಳಸುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಸ್ಮಾರ್ಟ್‌ಫೋನ್ ಬಳಕೆ ಮಾತ್ರವಲ್ಲ, ಟ್ರಾಕರ್‌ಗಳು, ಗೂಗಲ್‌ನಂತಹ ಸಾಧನಗಳು, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಸ್ಮಾರ್ಟ್ ಟಿವಿಗಳ ಮೂಲಕವೂ ಜನರ ಡಿಜಿಟಲ್ ಜೀವನಶೈಲಿ ನಿತ್ಯವೂ ಸುಧಾರಿಸುತ್ತಲೇ ಇವೆ ಅಥವಾ ಅಧೋಗತಿಗೆ ಇಳಿಯುತ್ತಲೇ ಇದೆ

ಡಿಜಿಟಲ್ ಜೀವನಶೈಲಿ ಕುರಿತು ಇತ್ತೀಚೆಗೆ ‘ಲೈಮ್‌ನೈಟ್ ನೆಟ್‌ವರ್ಕ್’ ಸಂಸ್ಥೆ ನಡೆಸಿರುವ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಡಿಜಿಟಲ್ ಸಾಧನಗಳನ್ನು ಬಳಸುವ ಮೂರನೇ ಎರಡರಷ್ಟು ಬಳಕೆದಾರರು ತಮ್ಮ ಮೊಬೈಲ್ ಫೋನ್‌ಗಳನ್ನು ಬಿಟ್ಟು ಒಂದು ದಿನವೂ ಕಳೆಯಲು ಇಷ್ಟಪಡುವುದಿಲ್ಲ. ಅತಿಯಾದ ಡಿಜಿಟಲ್ ಸಾಧನಗಳ ಚಟ ಅಳವಡಿಸಿಕೊಂಡಿರುವ ದೇಶಗಳಲ್ಲಿ ಭಾರತಕ್ಕೆ ದ್ವಿತೀಯ ಸ್ಥಾನವನ್ನು ಸಮೀಕ್ಷೆ ನೀಡಿದೆ. ಹತ್ತು ದೇಶಗಳಲ್ಲಿ ನಡೆದ ಈ ಸಮೀಕ್ಷೆಯಲ್ಲಿ ಮಲೇಷ್ಯಾ ನಂತರ ಭಾರತೀಯರೇ ಅತಿ ಹೆಚ್ಚು ಪ್ರಮಾಣದಲ್ಲಿ ಡಿಜಿಟಲ್ ಜೀವನಶೈಲಿಯ ಚಟಕ್ಕೆ ಅಂಟಿಕೊಂಡಿರುವುದಾಗಿ ತಿಳಿದುಬಂದಿದೆ.

ದೇಶದ ಡಿಜಿಟಲ್ ಜೀವನವು ಕೇವಲ ಫೋನ್‌ಗಳಿಗೆ ಸೀಮಿತವಾಗಿಲ್ಲ. ಬಹಳಷ್ಟು ಮಂದಿ ಟಿವಿಯಿಂದ ಹೊರಗೆ ಬಂದು ಮೊಬೈಲ್ ಒಳಗೆ ತೂರಿಕೊಂಡಿದ್ದಾರೆ. ಟಿವಿ ಕಾರ್ಯಕ್ರಮಗಳನ್ನು ಡಿಜಿಟಲ್ ಮೂಲಗಳಲ್ಲಿ ನೋಡಲು ಇಷ್ಟಪಡುತ್ತಾರೆ. ಇತ್ತೀಚೆಗೆ ಕನ್ನಡ ಧಾರಾವಾಹಿಗಳೂ ಆ್ಯಪ್‌ಗಳಲ್ಲಿ ಮತ್ತು ಜಿಯೋ ಟಿವಿ, ಏರ್‌ಟೆಲ್ ಟಿವಿಗಳಲ್ಲಿ ನೋಡಲು ಸಿಗುತ್ತವೆ. ಹೀಗಾಗಿ ಬಹಳಷ್ಟು ಮಂದಿ ಟಿವಿಯ ಬದಲಾಗಿ ಮೊಬೈಲ್ ವೀಕ್ಷಣೆಗೆ ಬದಲಾಗಿದ್ದಾರೆ. “ನಾನು ಬೆಂಗಳೂರಿನಲ್ಲಿ ಪಿಜಿಯಲ್ಲಿ (ಪೇಯಿಂಗ್ ಗೆಸ್ಟ್) ನೆಲೆಸಿದ್ದೇನೆ. ಹೀಗಾಗಿ ಟಿವಿ ನೋಡುವುದು ಅಪರೂಪ. ಆದರೆ, ನಿತ್ಯವೂ ಎಲ್ಲ ಧಾರಾವಾಹಿಗಳನ್ನು ಜಿಯೋ ಟಿವಿಯಲ್ಲಿ ನೋಡುತ್ತೇನೆ. ನನ್ನ ಬಳಿ ಟ್ಯಾಬ್ ಇದೆ. ಹೀಗಾಗಿ ದೊಡ್ಡ ಸ್ಕ್ರೀನ್ನಲ್ಲಿ ನೋಡಿದ ಖುಷಿಯೇ ಸಿಗುತ್ತದೆ,” ಎನ್ನುತ್ತಾರೆ ಬೆಂಗಳೂರು ನಿವಾಸಿಯಾಗಿರುವ ಅಕೌಂಟೆಂಟ್ ಜ್ಯೋತಿ.

ಭಾರತದಲ್ಲಿ ಮನೋರಂಜನೆ ಡಿಜಿಟಲ್ ಮಾಧ್ಯಮದ ಕಡೆಗೆ ತಿರುಗುತ್ತಿದೆ. ಇಂಟರ್ನೆಟ್ ದರಗಳು ಇತ್ತೀಚೆಗಿನ ವರ್ಷಗಳಲ್ಲಿ ಅತಿಯಾಗಿ ಇಳಿದಿರುವುದೂ ಭಾರತೀಯರ ಡಿಜಿಟಲ್ ಚಟಕ್ಕೆ ತನ್ನ ಕೊಡುಗೆಯನ್ನು ನೀಡಿದೆ. ಇದೇ ಕಾರಣದಿಂದ ಅಮೆಜಾನ್ ಮತ್ತು ನೆಟ್‌ಫ್ಲಿಕ್ಸ್‌ನಂತಹ ಆ್ಯಪ್‌ಗಳು ಬಹಳ ಜನಪ್ರಿಯವಾಗುತ್ತಿವೆ. ಹಾಟ್ ಸ್ಟಾರ್, ವೂಟ್, ಓಝೀ, ಆಲ್ಟ್ ಬಾಲಾಜಿ ಮೊದಲಾದ ಆ್ಯಪ್‌ಗಳು ಸಹ ಭಾರತೀಯರ ಮೊಬೈಲ್‌ಗಳಲ್ಲಿ ಅತೀ ಹೆಚ್ಚು ಡೌನ್ಲೋಡ್‌ಗಳಾಗಿವೆ. ಟಿವಿಗಳು ಸ್ಮಾರ್ಟ್ ಆಗಿ ಬದಲಾದ ನಂತರ ಚಾನಲ್‌ಗಳಲ್ಲಿ ನೋಡುವವರ ಸಂಖ್ಯೆ ಕಡಿಮೆಯಾಗುತ್ತಿವೆ. ಧಾರಾವಾಹಿಗಳನ್ನು ಒಂದೊಂದೇ ಅಧ್ಯಾಯವನ್ನು ನೋಡುವ ಬದಲಾಗಿ ಆ್ಯಪ್‌ಗಳ ಮೂಲಕ ಒಂದು ಸೀಸನ್ ಅನ್ನು ಒಟ್ಟಾಗಿ ನೋಡುವ ಅಭ್ಯಾಸ ಹೆಚ್ಚಾಗುತ್ತಿದೆ. ಮುಖ್ಯವಾಗಿ, ಯುವಜನತೆಯಲ್ಲಿ ಈ ಬದಲಾವಣೆ ಕಾಣಬಹುದು. ತಮ್ಮ ನಿತ್ಯದ ಕಾರ್ಯ ಚಟುವಟಿಕೆಯಿಂದಾಗಿ ಟಿವಿಯ ಸಮಯಕ್ಕೆ ಅನುಗುಣವಾಗಿ ಕಾರ್ಯಕ್ರಮಗಳನ್ನು ನೋಡಲು ಸಾಧ್ಯವಾಗದೆ, ತಮ್ಮ ವೀಕ್ಷಣೆಯನ್ನು ಆ್ಯಪ್‌ಗಳಿಗೆ ಬದಲಾಯಿಸಿಕೊಂಡಿದ್ದಾರೆ. “ನನಗೆ ಕೊರಿಯನ್ ಧಾರಾವಾಹಿಗಳು ಬಹಳ ಇಷ್ಟ. ನಾನು ಬಹಳಷ್ಟು ಸಲ ಇಂಟರ್ನೆಟ್‌ಗಳಿಂದ ಧಾರಾವಾಹಿ ಸೀಸನ್‌ಗಳನ್ನು ಡೌನ್ಲೋಡ್ ಮಾಡಿಕೊಂಡು ಮೊಬೈಲ್‌ಗೆ ಹಾಕಿಕೊಂಡು ನೋಡುತ್ತೇನೆ. ಇತ್ತೀಚೆಗೆ ಜಿಯೋ ನೆಟ್ವರ್ಕ್ ಸೇವೆ ಬಳಸಲಾರಂಭಿಸಿದ ನಂತರ ಧಾರಾವಾಹಿಗಳನ್ನು ಮೊಬೈಲ್‌ನಲ್ಲೇ ನೋಡುವುದು ಅಭ್ಯಾಸವಾಗಿದೆ. ಧಾರಾವಾಹಿ ಪ್ರಸಾರವಾಗುವ ಸಮಯದಲ್ಲಿ ನಾವು ಕಚೇರಿಯಲ್ಲಿರುತ್ತೇವೆ. ಹೀಗಾಗಿ, ಬಿಡುವಿನ ಸಮಯದಲ್ಲಿ ಮೊಬೈಲ್‌ನಲ್ಲಿ ವೀಕ್ಷಿಸುವುದು ಅಭ್ಯಾಸವಾಗಿದೆ,” ಎನ್ನುತ್ತಾರೆ ಚೆನ್ನೈ ನಿವಾಸಿ ಪ್ರೀತಿ.

ಎಲ್ಲ ರೀತಿಯ ಡಿಜಿಟಲ್ ವಿಷಯಗಳಲ್ಲೂ ಭಾರತದಲ್ಲಿ ಅತಿ ಹೆಚ್ಚಿನ ಎಂಗೇಜ್‌ಮೆಂಟ್ ಇದೆ ಎಂದು ಲೈಮ್‌ಲೈಟ್ ಸಮೀಕ್ಷೆ ಹೇಳಿದೆ. ವಾರವೊಂದಕ್ಕೆ ಶೇ.೭೮ರಷ್ಟು ಡೌನ್ಲೋಡಿಂಗ್ ಅಥವಾ ಸಂಗೀತ ಸ್ಟ್ರೀಮಿಂಗ್ ಭಾರತದಲ್ಲಿ ದಾಖಲಾಗಿದೆ. ಸಮೀಕ್ಷೆ ಮಾಡಿರುವ ದೇಶಗಳಲ್ಲೇ ಇದು ಅತ್ಯಧಿಕ ಪ್ರಮಾಣ ಎನ್ನಲಾಗಿದೆ. ಭಾರತೀಯರು ಸಿನಿಮಾಗಳನ್ನು ಡೌನ್ಲೋಡ್ ಮಾಡಿಕೊಂಡು ಆ್ಯಪ್‌ನಲ್ಲಿ ನೋಡುವ ಹವ್ಯಾಸವನ್ನೂ ಅತೀ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಿಕೊಂಡಿದ್ದಾರೆ ಎನ್ನಲಾಗಿದೆ. ಜಾಗತಿಕ ಸರಾಸರಿಗೆ ಹೋಲಿಸಿದಲ್ಲಿ ಭಾರತದಲ್ಲಿ ಈ ಪ್ರಮಾಣ ಶೇ.೧೨ರಷ್ಟು ಅಧಿಕ ಎನ್ನಲಾಗಿದೆ.

ಕೇವಲ ವೀಕ್ಷಣೆ ಅಥವಾ ಫೋನ್ ಬಳಕೆಯಲ್ಲಿ ಮಾತ್ರವಲ್ಲ, ಇತರ ಡಿಜಿಟಲ್ ಸಾಧನಗಳ ಬಳಕೆಯಲ್ಲೂ ಭಾರತ ಮುಂದಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಫಿಟ್‌ನೆಸ್ ಟ್ರಾಕರ್‌ಗಳಂತಹ ಡಿಜಿಟಲ್ ಸಾಧನಗಳನ್ನು ಬಳಸಿಕೊಳ್ಳುವುದರಲ್ಲೂ ಭಾರತೀಯರು ಮುಂದಿದ್ದಾರೆ. ಪ್ರತಿಕ್ರಿಯೆ ನೀಡಿದವರಲ್ಲಿ ಶೇ.೩೫ರಷ್ಟು ಮಂದಿ ಫಿಟ್ಬಿಟ್, ಗಾರ್ಮಿನ್ ಅಥವಾ ಆಪಲ್ ವಾಚ್ ಮೊದಲಾದ ಸಾಧನಗಳನ್ನು ಬಳಸುತ್ತಿರುವುದಾಗಿ ಹೇಳಿದ್ದಾರೆ. ಉಳಿದ ಶೇ. ೩೩ರಷ್ಟು ಮಂದಿ ಆರು ತಿಂಗಳೊಳಗೆ ಇಂತಹ ಸಾಧನಗಳನ್ನು ಖರೀದಿಸುವ ಗುರಿ ಹೊಂದಿರುವುದಾಗಿ ಹೇಳಿದ್ದರು.

ಆದರೆ, ಇಷ್ಟೊಂದು ಸಂಭ್ರಮದಿಂದ ಡಿಜಿಟಲ್ ಜೀವನವನ್ನು ನಡೆಸುವ ಭಾರತೀಯರಿಗೆ ತಮ್ಮ ಡಾಟಾಗಳನ್ನು ಕದಿಯಲಾಗುತ್ತದೆ ಎನ್ನುವ ವಿಚಾರದಲ್ಲಿ ಹೆಚ್ಚು ಚಿಂತೆಯಿಲ್ಲ! ಜಾಗತಿಕವಾಗಿ ಶೇ.೪೫ರಷ್ಟು ಮಂದಿ ಬಳಕೆದಾರರು ಖಾಸಗಿ ಹಕ್ಕು ಮತ್ತು ಡಾಟಾಗಳ ಭದ್ರತೆ ಬಗ್ಗೆ ಚಿಂತೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಜಾಗತಿಕವಾಗಿ ಶೇ. ೪೨ರಷ್ಟು ಮಂದಿ ಭದ್ರತೆ ಮತ್ತು ಹ್ಯಾಂಕಿಂಗ್ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಶೇ.೩೬ರಷ್ಟು ಭಾರತೀಯರು ಮಾತ್ರವೇ ಇಂತಹ ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟು ಸಮೀಕ್ಷೆಗೆ ಒಳಪಟ್ಟಿರುವ ದೇಶಗಳಲ್ಲಿ ಅತೀ ಕಡಿಮೆ ಪ್ರಮಾಣದ ಆತಂಕ ವ್ಯಕ್ತಪಡಿಸಿದ್ದೇ ಭಾರತೀಯರು!

ಲೈಮ್‌ಲೈಟ್ ಸಮೀಕ್ಷೆಯಲ್ಲಿ ಜಾಗತಿಕವಾಗಿ ಹೋಲಿಸಿದಲ್ಲಿ ಭಾರತೀಯರು ಅತೀ ಹೆಚ್ಚು ಮೊಬೈಲ್ ಪ್ರೀತಿ ಬೆಳೆಸಿಕೊಂಡಿರುವುದು ತಿಳಿದುಬಂದಿದೆ. ಜಾಗತಿಕವಾಗಿ ಶೇ.೪೮ರಷ್ಟು ಮಂದಿ ತಮ್ಮ ಮೊಬೈಲ್ ಸಾಧನಗಳಿಂದ ಒಂದು ದಿನವೂ ದೂರವಿರುವುದು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಅತೀ ಹೆಚ್ಚು ಅಂದರೆ, ಶೇ.೬೬ರಷ್ಟು ಭಾರತೀಯರು ತಾವು ಮೊಬೈಲ್‌ನಿಂದ ದೂರವಿರಲು ಸಾಧ್ಯವಿಲ್ಲದಷ್ಟು ಚಟ ಅಂಟಿಸಿಕೊಂಡಿರುವುದಾಗಿ ಹೇಳಿದ್ದಾರೆ. ಲ್ಯಾಪ್‌ಟಾಪ್ ಮತ್ತು ಡೆಸ್ಕ್‌ಟಾಪ್ ಕಂಪ್ಯೂಟರ್ ಬಳಕೆಯ ವಿಚಾರದಲ್ಲಿ ಬಂದರೆ, ಶೇ.೪೫ರಷ್ಟು ಭಾರತೀಯ ಬಳಕೆದಾರರು ಇವುಗಳ ಹೊರತಾಗಿ ಒಂದು ದಿನವೂ ಇರಲು ಸಾಧ್ಯವಿಲ್ಲ ಎಂದಿದ್ದಾರೆ. ಜಾಗತಿಕವಾಗಿ ಶೇ.೩೩ರಷ್ಟು ಮಂದಿ ಮಾತ್ರ ಇಂತಹ ಅಭಿಪ್ರಾಯ ಪ್ರಕಟಿಸಿದ್ದಾರೆ.

ಇದನ್ನೂ ಓದಿ : ಇಂಡಿಯಾ ಡಿಜಿಟಲ್ ಹಾದಿಯಲ್ಲಿ ಇರುವಾಗಲೇ ೨೨,೦೦೦ ವೆಬ್‌ಸೈಟ್‌ ಹ್ಯಾಕ್!

ಡಿಜಿಟಲ್ ತಂತ್ರಜ್ಞಾನಗಳು ತಮ್ಮ ಜೀವನದ ಮೇಲೆ ಶೇ. ೯೩ರಷ್ಟು ಪ್ರಮಾಣ ಬೀರಿದೆ ಎಂದು ಭಾರತೀಯರು ಹೇಳಿದ್ದಾರೆ. ಡಿಜಿಟಲ್ ಜೀವನಶೈಲಿ ತಮ್ಮಲ್ಲಿ ಸಕಾರಾತ್ಮಕ ಬದಲಾವಣೆ ತಂದಿದೆ ಎನ್ನುವುದು ಭಾರತೀಯರ ಅಭಿಪ್ರಾಯ. ಆದರೆ, ಜಪಾನ್ ಮತ್ತು ಜರ್ಮನಿಯ ಪ್ರತಿಸ್ಪಂದಿಗಳು ತಮ್ಮ ಜೀವನದ ಮೇಲೆ ಡಿಜಿಟಲ್ ವಸ್ತುಗಳು ಕ್ರಮವಾಗಿ ಶೇ. ೧೧ ಮತ್ತು ಶೇ. ೨೫ರಷ್ಟು ಮಾತ್ರ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಹೀಗಾಗಿ ಜಾಗತಿಕವಾಗಿ ಡಿಜಿಟಲ್ ಜೀವನಶೈಲಿಯ ಬಗ್ಗೆ ಅತೀ ಆಶಾವಾದಿಗಳಾಗಿರುವುದು ಭಾರತೀಯರೇ ಎಂದು ಸಮೀಕ್ಷೆ ಹೇಳಿದೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More